ಗುರುವಾರ, ಅಕ್ಟೋಬರ್ 20, 2016

ಪೇಪರ್ ಲೆಸ್ ಯುಗ

ಪೇಪರ್ ಲೆಸ್ ಯುಗ ಅಂದರೇ ಇದೆ ಇರಬೇಕು. ಪೆನ್ನು ಪೇಪರ್ ಗಳ ಬಳಕೆಯೇ ಗೌಣವಾಗಿದೆ. ಕಂಪ್ಯೂಟರ್ ಮೊಬೈಲ್ ಗಳು  ಶೇ ೯೯ರಷ್ಟು ಮಾನವನ ಕೈಯಾರೆ ಬರೆಯುವ ಬರವಣಿಗೆಯನ್ನು ನಿಲ್ಲಿಸಿದೆ.

ಹಿಂದೆ ಬಾಲ್ಯದಿಂದಲೇ ಬಳಪ, ಸ್ಲೇಟ್ ಅಕ್ಷರಾಭ್ಯಾಸಕ್ಕೆ ಬಳಸುತ್ತಿದ್ದರು. ಬಳಪಗಳೋ ವಿಧ ವಿಧವಾದವುಗಳಿದ್ದವು. ಸ್ಲೇಟ್ ಗಳಲ್ಲೂ ಎಷ್ಟೊಂದು ಬಗೆ ಕಲ್ಲಿನ ಸ್ಲೇಟ್, ತಗಡಿನ ಸ್ಲೇಟ್, ತೀರಾ ಇತ್ತೀಚೆಗೆ ಪ್ಲಾಸ್ಟಿಕ್ ಸ್ಲೇಟ್ ಬಳಕೆ ಪ್ರಾರಂಭವಾಯಿತು.

ಸ್ವಲ್ಪ ದೊಡ್ಡವರಾದಂತೆ ಸೀಸದ ಕಡ್ಡಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದೆವು ಮತ್ತು ಕಲಿಯುತ್ತಿದ್ದೇವು.

ಮುಂದೆ ಮುಂದೆ ದೊಡ್ಡ ದೊಡ್ಡ ತರಗತಿಗಳಿಗೆ ಹೋದಂತೆ ಎಕ್ಸಸೈಜ್, ಪೇಪರ್ ಮತ್ತು ಪೆನ್ನುಗಳ ಬಳಕೆ ಮಾಡುವುದು ಮಾಮೂಲುಯಿತು.

ಪೆನ್ನಲ್ಲಿ ಬರೆಯುವುದಕ್ಕೂ ಮೊದಲು ಸೀಸದ ಕಡ್ಡಿಯಲ್ಲಿ ಬರೆದು ಅಭ್ಯಾಸ ಮಾಡಿದರೇ ಅಕ್ಷರಗಳ ಬರವಣಿಗೆ ಉತ್ತಮವಾಗುವುದು ಎಂದು ಹೇಳುತ್ತಿದ್ದುದು ಪ್ರತೀತಿ.

ಪೆನ್ನುಗಳಲ್ಲೂ ಸಹ ಹಲವು ವಿಧ. ಒಂದೊಂದು ಪೆನ್ನು ಒಂದೊಂದು ಥರ. ಆದರೇ ಎಲ್ಲಾ ಪೆನ್ನುಗಳು ಬರೆಯುವುದು ಒಂದೇ ಬಗೆ. ವಿವಿಧತೆಯಲ್ಲಿ ಏಕತೆ!

ಇಂಕ್ ಪೆನ್ನಲ್ಲಿ ಬರೆದರೇ ವಜಾನ್ ಜಾಸ್ತಿ, ಅದು ಬರವಣಿಗೆಗೆ ಅತ್ಯುತ್ತಮ ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಅದರ ಬಳಕೆ ವಿದ್ಯಾರ್ಥಿಗಳಿಗೆ ಬಲು ಕಷ್ಟ. ಸ್ವಲ್ಪ ಅಜಾಗರೂಕತೆಯಲ್ಲಿ ಬಳಸಿದರೇ ಮೈಕೈಯೆಲ್ಲಾ ಮಸಿ. ಮಸಿ ಕಾಲಿಯಾಗುವುದು. ಅದನ್ನು ನಿತ್ಯ ತುಂಬುವುದು. ಗಾಳಿಗೆ ಅದು ಒಣಗಿ ಬರೆಯದೆ ಇರುವುದು. ಅದಕ್ಕಾಗಿ ಕೈಯಲ್ಲಿ ಒಮ್ಮೆ ಗಾಳಿಯಲ್ಲಿ ಹೊಡೆಯುವುದು.ಮಸಿ ಬೇರೆಯವರಿಗೆ ಸಿಡಿಯುವುದು. ಇತ್ಯಾದಿ ಚಟುವಟಿಗೆಗಳ ನಂಟು ಪೆನ್ನುಗಳದ್ದು.

ಕಡ್ಡಿ ಪೆನ್ನುಗಳದ್ದು ಇನ್ನೊಂದು ಕಥೆ. ರಿಫಿಲ್ ತುಂಬುದು, ಇಂಕ್ ಕಾಲಿಯಾಗಿದೆಯೋ ಇಲ್ಲವೋ ಎಂದು ನೋಡಲು ಪೆನ್ನು ಬಿಚ್ಚುವುದು. ಸ್ಪ್ರಿಂಗ್ ಹಾಕುವುದು. ಬಿಚ್ಚಿದಾಗ ಸ್ಪ್ರಿಂಗ್ ಕೈ ತಪ್ಪಿ ನೆಗೆಯುವುದು. ಬಟನ್ ಪೆನ್ನುಗಳನ್ನು ಹಾಗೆ ಹೀಗೆ ಒತ್ತುವುದು. ಟಕ್ ಟಕ್ ಶಬ್ಧ ಮಾಡುವುದು. ವೇಗವಾಗಿ ಬರೆಯಲು ರಿಪಿಲ್ ಪೆನ್ನುಗಳೇ ಬೇಸ್ಟ್ ಎಂದು ಮಾತನಾಡಿಕೊಳ್ಳುವುದು. ಕ್ಯಾಪ್ ಪೆನ್ನುಗಳ ರಾಜಾ ರೇನಾಲ್ಡ್ಸ್. ಎಕ್ಸಾಮ್ ಮೊದಲು ಹೊಸ ಪೆನ್ನು ಖರೀದಿ ಮಾಡುವುದು. ಅಷ್ಟರ ಮಟ್ಟಿಗೆ ಶಿಕ್ಷಣ ಪಡೆದವರೆಲ್ಲಾ ಇದರ ಓಡನಾಟದಲ್ಲಿ ಮಿಂದು ಎದ್ದಿರುವವರೆ.

ಓದು ಅಂದರೇ, ಬರವಣಿಗೆ ಎನ್ನುವುದು ಬಿಡಿಸಲಾರದ ಭಾಂದವ್ಯ. ಬರೆದುದು ಕೊನೆತನಕ. ಹೆಚ್ಚು ಓದುವುದು ಎಂದರೇ, ಹೆಚ್ಚು ಬರೆಯುವುದು. ಇದು ಅಂದಿನ ನಮ್ಮ ಗುರುಗಳ ಹೇಳಿಕೆ.

ನೋಟ್ಸ್ ಬರೆಯದೇ ಯಾರು ತಮ್ಮ ಶಿಕ್ಷಣ ಪೊರೈಸಿಲ್ಲಾ ಎಂದರೇ ತಪ್ಪಿಲ್ಲ.

ನಮ್ಮ ಬರವಣಿಗೆಯೇ ಕೊನೆ ಎಂದರೇ ನಮ್ಮ ಬಿ.ಎ, ಬಿ.ಈ ಅನಿಸುತ್ತದೆ. ಮತ್ತೆ ನಮ್ಮ ಜೇಬುಗಳು ಈ ಪೆನ್ನುಗಳನ್ನು ಕಂಡೇ ಇಲ್ಲ. ಪೆನ್ನಿನ ಅವಶ್ಯಕತೆಯೇ ಇಲ್ಲ ಎನ್ನುವ ಮಟ್ಟಿಗೆ ಅವುಗಳ ಬಳಕೆಯನ್ನು ಕಮ್ಮಿ ಮಾಡಿಕೊಂಡಿದ್ದೇವೆ. ಬರೆಯುವುದೇ ಮರೆತು ಹೋಗಿದೆ ಎನ್ನುವ ಮಟ್ಟಿಗೆ ಪೂರ್ತಿ ನಿಲ್ಲಿಸಿದ್ದೇವೆ.

ನಾವೆಲ್ಲಾ ಅಲ್ಲಿ ಇಲ್ಲಿ ಕೆಲಸ ದುಡಿತ ಎಂದು ತೊಡಗಿಕೊಂಡಿದ್ದೇವೆ. ಆದರೆ ಬರೆಯುವ ಜರೂರತು ಎಲ್ಲೂ ಇಲ್ಲ. ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್, ಟ್ಯಾಬ್ ಎಂಬ ಹತ್ತು ಹಲವು ಡಿಜಿಟಲ್ ಕೊಡುಗೆಗಳಲ್ಲಿ ನಮ್ಮ ಬರೆಯುವ ಕಲೆಯನ್ನು ನಿಲ್ಲಿಸಿಕೊಂಡುಬಿಟ್ಟಿದ್ದೇವೆ.

ಪೆನ್ನು ಪೇಪರ್ ಯಾವುದಕ್ಕೂ ಬೇಕಿಲ್ಲ. ಡಿಜಿಟಲ್ ಸ್ಕ್ರೀನ್ ಮೇಲೆ ಡಿಜಿಟಲ್ ಪೆನ್ನಿನಲ್ಲಿ ಸಹಿ ಮಾಡುವುದರ ಮಟ್ಟಿಗೆ ಬಂದು ನಿಂತಿದೆ.

ಹಿಂದೆ ಬ್ಯಾಂಕ್ ನಲ್ಲಿ ವ್ಯವಹಾರ ಮಾಡಬೇಕು ಎಂದರೇ ಪೆನ್ನು ಇಟ್ಟುಕೊಂಡು ಬ್ಯಾಂಕ್ ನೊಳಗೆ ಕಾಲು ಇಡಬೇಕಾಗಿತ್ತು. ಇಲ್ಲ ಅಂದರೇ ಹಣ ಪಡೆಯುವ ಮಾರ್ಗವೇ ಬಂದ್! ಇಂದು ನೋಡಿ ಎಲ್ಲಿ ಬೇಕಂದರೇ ಅಲ್ಲಿ ಹಣ ಪಡೆಯಬಹುದು ಅಥವಾ ಹಣವನ್ನು ಬ್ಯಾಂಕಿಗೆ ಜಮಾ ಮಾಡಬಹುದು. ಅದು ಯಾವುದೇ ಚಲನ್, ರಸೀದಿ ಸಹಿ ಏನೊಂದು ಭರ್ತಿ ಮಾಡದೇ.

ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಂದು ಡಿಜಿಟಲ್ ಮಯವಾಗಿದೆ. ಇಂದು ಯಾವುದೇ ದಪ್ಪ ದಪ್ಪ ಪುಸ್ತಕಗಳನ್ನು ಯಾವುದೇ ಕಛೇರಿಯಲ್ಲಿ ಪೋಷಿಸಿಕೊಳ್ಳಬೇಕಿಲ್ಲ. ಒಂದು ಚಿಕ್ಕ ಕಂಪ್ಯೂಟರ್ ಪರದೆಯೊಳಗೆ ಅಗಾಧವಾದ ಅಂಶಗಳನ್ನು ರಹಸ್ಯಗಳನ್ನು ಕಾಪಾಡಿಕೊಳ್ಳಬಹುದಾಗಿದೆ.

ಅಂಚೆ. ಅಂಚೆ ಕಾಗದಗಳ ಬಳಕೆ ನಿಂತು ಯಾವುದೋ ಕಾಲವಾಯಿತು.ನಾನು ನನ್ನ ಹತ್ತನೇಯ ತರಗತಿಯ ಪರೀಕ್ಷೆಯಲ್ಲಿ ಪತ್ರ ಬರೆದ ನೆನಪು. ಅನಂತರ ಅದರ ಬಳಕೆಯ ಜರೂರತೆಯೇ ಬಂದಿಲ್ಲ. ದೂರದ ಮಾಮನ ಕಾಗದಕ್ಕೆ ಕಾಯಬೇಕಿಲ್ಲ. ಇಂದು ಒಂದೇ ಕ್ಷಣದಲ್ಲಿ ಒಂದೇ ಕಾಲಿನಲ್ಲಿ ಎಲ್ಲಾ ವಿಚಾರಿಸಿಕೊಳ್ಳಬಹುದಾಗಿದೆ. ಅದು ವಿಡಿಯೋ ಮೊಲಕ ಡೈರಕ್ಟ್ ವಾಕಿ ಟಾಕಿ.

ಇಲ್ಲಿಗೆ ಬಂದು ನಿಂತಿದೆ ನಮ್ಮ ಸಂಹವನ.

ನಾನು ಬರೆದಿರುವ ಮೇಲಿನ ಪ್ರತಿಯೊಂದು ಅಕ್ಷರಗಳು ಲ್ಯಾಪ್ ಟಾಪ್ ಕೀಲಿ ಮಣಿಗಳಲ್ಲಿ ಕುಟ್ಟಿರುವುದು. ಪೆನ್ನು ಪೇಪರ್ ಯಾವುದೊಂದು ಇಲ್ಲದೇ ಬರೆದು ವೇಬ್ ಪೇಜ್ ಗೆ ಅಪಲೋಡ್ ಮಾಡಿದ ಲೇಖನ ಇದು.

ನಂಬಲು ತುಂಬ ಕಷ್ಟ ಆದರೇ ಇದೆ ನಿಜ.

ಅಷ್ಟರ ಮಟ್ಟಿಗೆ ಕಾಗದ ಕಾಗದವೆಂದು ಮರಗಿಡಗಳನ್ನು ಉಳಿಯಿಸಿದ್ದೀವಿ.

ಆದರೇ ಕೈಯಾರೇ ಪೆನ್ನಿನಲ್ಲಿ ಬಿಳಿ ಕಾಗದದ ಹಾಳೆಯ ಮೇಲೆ ಬರೆಯುವ ಸುಖ ಈ ಮೊಬೈಲ್, ಟ್ಯಾಬ್ ಗಳಲ್ಲಿ ಬರೆಯುವುದರಲ್ಲಿ ಸಿಗುವುದಿಲ್ಲ ಬಿಡಿ.

ಆದರೇ ಕಾಲ ಬದಲಾಗಿದೆ. ಅದಕ್ಕೆ ತಕ್ಕ ರೀತಿಯಲ್ಲಿ ತಾಂತ್ರಿಕತೆಯನ್ನು ಬಳಸಬೇಕಾಗಿದೆ. ವೇಗ ಅಂದರೇ ಇದೆ ಅನಿಸುತ್ತದೆ.

ಇಂದು ಹುಟ್ಟಿದ ಮಕ್ಕಳಿಗೂ ಅಕ್ಷರಗಳ ಓ ನಾಮವನ್ನು ಬಳಪಗಳಿಲ್ಲದೇ ಹೇಳಿಕೊಡಬಹುದಾಗಿದೆ. ಮಗ್ಗಿ ಪುಸ್ತಕಗಳಲ್ಲಿ ಕಲಿಯುತ್ತಿದ್ದ ಎಷ್ಟೊಂದು ಪ್ರಥಮ ಪಾಠಗಳನ್ನು ಯುಟೂಬ್ ನ ರೈಮ್ಸ್ ವಿಡೀಯೋಗಳಲ್ಲಿ ಹಿರಿಯರ ಸಹಾಯವಿಲ್ಲದೇ ಇಂದಿನ ಮಕ್ಕಳು ತಾವೇ ಕಲಿಯಯುತ್ತಿದ್ದಾವೆ.

ಹೀಗೆ ಮುಂದುವರಿದರೇ ಬರೆಯುವ ಕಲೆಯೇ ಇಲ್ಲದಂತಾಗಿ ಕೇವಲ ಸ್ಪರ್ಶ, ಟಚ್ , ಟೈಫ್ ಮಾಡುವುದರಲ್ಲಿ ನಿಪುಣರಾಗುವವರು ನಮ್ಮ ಮುಂದಿನ ಪೀಳಿಗೆ.  ಬರವಣಿಗೆ ಎಂದರೇ ಮೆಸೇಜ್ ಬರೆಯುವುದು. ಪ್ರಬಂಧವೆಂದರೇ ಪೇಸ್ ಬುಕ್ ವಾಲ್ ನಲ್ಲಿ ಕಾಮೆಂಟ್ ಹಾಕುವುದು ಎನ್ನುವಾಂತಾಗದಿರಲಿ ಎಂಬುದೇ ಎಲ್ಲಾರ ಹಂಬಲ.

ಏನೇ ವೇಗವಾದ ಡಿಜಿಟಲ್ ಯುಗವಿದ್ದರು, ಅದೇ ಹಳೆಯ ಕಾಲದಲ್ಲಿದ್ದ ಪೇಪರ್, ಪುಸ್ತಕಗಳು, ಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ಹತ್ತಿರದಿಂದ ಓದುವ ಸುಖವನ್ನು ಯಾವ ಕಾಲಕ್ಕೂ ಯಾರು ನೀಡಲಾರರು. ಇಂದಿಗೂ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಪ್ರತಿಯೊಬ್ಬರೂ ಇಷ್ಟಪಡುವುದು ಪ್ರಿಂಟೆಡ್ ಪುಸ್ತಕ ಮತ್ತು ಪತ್ರಿಕೆಗಳನ್ನೇ. ಇವುಗಳೇ ಜನಸಾಮಾನ್ಯರಿಗೆ ಎಲ್ಲಾ ಕಾಲಕ್ಕೂ ತೀರಾ ಹತ್ತಿರ ಮತ್ತು ಶಾಶ್ವತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ