ಮಂಗಳವಾರ, ಜೂನ್ 19, 2012

ಕಾಲೇಜು ಕುಮಾರೂ..ಡಿಚ್ಚಿಗೇ...!


ಕಾಲೇಜು ದಿನಗಳೆಂದರೇ ನಮ್ಮನ್ನು ಯಾರೂ ಕೇಳುವ ದಿನಗಳಲ್ಲಾ. ಅಲ್ಲಿ ನಮಗೆ ನಾವೇ ಜವಾಬ್ದಾರರು. ನಾವು ಮಾಡುವುದೇ ನಮಗೆ ನಮ್ಮ ದಾರಿ. ಅಲ್ಲಿ ದಿನ ಪೂರ್ತಿಯಾಗಿ ನಾಲ್ಕು ಗೋಡೆ ಎಂಬ ಕ್ಲಾಸ್ ಗಳಲ್ಲಿ ಕುಳಿತುಕೊಳ್ಳುವ ಯೋಚನೆಯಿಲ್ಲ.  ದಿನಕ್ಕೆ ಇಂತಿಷ್ಟು ಎಂಬ ಕ್ಲಾಸ್ ಗಳು ಇರುತ್ತವೆ. ಅವುಗಳನ್ನು ಹಾಜರಿ ಮಾಡಿ ಬಿಟ್ಟರೆ ಸಾಕು.

ಶಾಲಾ ದಿನಗಳಲ್ಲಿ ಇರುವಂತೆ ಮಾಸ್ತರ್ ಗಳ ಕಣ್ಣುಗಳು ನಮ್ಮನ್ನು ನೋಡುವುದಿಲ್ಲ,ಕಾಯುವುದಿಲ್ಲ. ಅಲ್ಲಿರುವವರೆಲ್ಲಾ ಲೆಕ್ಚರ್ ಗಳು ಅವರುಗಳು ಶಾಲೆಯ ಮಾಸ್ತರ್ ಗಳ ರೀತಿಯಲ್ಲಿ ಗದರುವುದಿಲ್ಲ, ಹೊಡೆಯುವುದಿಲ್ಲ.  ನಮಗೆ ನಾವೇ ಯಜಮಾನರುಗಳು ಎಂಬ ಕನಸನ್ನು ಬೇಸಿಗೆಯ ರಜೆಯ ದಿನಗಳಲ್ಲಿ ನಿತ್ಯ ಕಾಣುತ್ತಿದ್ದೆವು.

ಕಾಲೇಜು ಅಂಗಳಕ್ಕೆ ಹೆಜ್ಜೆ ಇಡಲು ಏನೋ ಸಂತೋಷ ಮತ್ತು ಸಡಗರ!

ಒಂದೇ ಶಾಲೆಯಲ್ಲಿ ಒಂದನೇ ಕ್ಲಾಸ್ ನಿಂದ ಹತ್ತನೇ ತರಗತಿಯವರಿಗೆ ಓದಿದ್ದೂ. ಚಡ್ಡಿ ದೋಸ್ತಗಳು ಗಳಸ್ಯ ಕಂಠಸ್ಯ ಎನ್ನುವಷ್ಟರ ಮಟ್ಟಿಗೆ ನಮ್ಮ ಸ್ನೇಹ ಸಂಬಂಧವಿತ್ತು. ಶಾಲೆಯ ಪ್ರತಿಯೊಬ್ಬನೂ ಪ್ರತಿಯೊಬ್ಬಳೂ ಗೊತ್ತು. ಇಲ್ಲಿ ಅತಿ ಆತ್ಮೀಯ ಎನ್ನುವವರು ಉಂಟು. ಹಾಗೆಯೇ ಶಾಲೆಯ ಶಿಕ್ಷಕ ವೃಂದವೊ ನಮ್ಮ ಕುಟುಂಬದವರಂತೆ. ಸುಮಾರು ಹತ್ತು ವರುಷ ಒಂದೇ ಶಾಲೆಯಲ್ಲಿ ಓದುವ ಒಂದು ಲಾಭ ಎಂದರೇ ಇದೇ. ಪ್ರತಿಯೊಬ್ಬರೂ ತುಂಬ ವಿಶ್ವಾಸದಿಂದ ತಮ್ಮ ತಮ್ಮ ಮನೆಯ ಮಕ್ಕಳು ಎಂಬ ರೀತಿಯಲ್ಲಿ ನೋಡಿಕೊಳ್ಳುತ್ತಾರೆ ಮತ್ತು ನಮ್ಮ ಏಳ್ಗೆಯನ್ನು ನಿರೀಕ್ಷಿಸುತ್ತಾರೆ.

ಏನಾದರೂ ಒಂದು ಘಟನೆ ಜರುಗಿದರೂ ಅದು ನಮ್ಮ ಮನೆಗೂ ಸಹ ತಲುಪಿಬಿಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತುಂಬ ಕಟ್ಟೆಚ್ಚರಿದಂದ ತಮ್ಮ ತಮ್ಮ ಓದನ್ನು ಸಾಗಿಸಬೇಕು. ತರಗತಿಯ ಮಾಸ್ತರ್ ಗಳ ಬೆತ್ತದ ರುಚಿ ಹಾಗೊಮ್ಮೆ ಇಗೊಮ್ಮೆ ನಮ್ಮಗಳಿಗೆ ಸಿಗತ್ತಲೇ ಇರುತ್ತಿತ್ತು. ನಮ್ಮ ನಮ್ಮ ತುಂಟಾಟವನ್ನು ಯಾರೂ ಸಹ ಯಾಕೆ ಸಹಿಸಿಕೊಂಡರು. ಹೊಡೆದು ಹೇಳುವವರು ಬದುಕುವುದಕ್ಕೆ ಹೇಳುತ್ತಾರೆ ಎಂದು ನಮ್ಮ ಹೆತ್ತರವರ ಹಿತವಚನ!

ಆದರೂ ನಾವುಗಳು ಬಿಡಬೇಕಲ್ಲಾ. ಪಿ.ಟಿ ಕ್ಲಾಸ್ ನಲ್ಲಿ ಅವರ ಮೇಲೆ ಇವರುಗಳು ಕುಸ್ತಿ, ಜಗಳ, ಕಾಲೇಳೆಯುವುದು ಇದ್ದುದ್ದೇ ಇದ್ದದ್ದು. ಅದು ಕೇವಲ ಆ ವಯಸ್ಸಿನ ಹುಡುಗಾಟ ಮಾತ್ರ. ಇಂದು ಜಗಳವಾಡಿದವರು ನಾಳೆ ಒಂದಾಗಿ ಸಾಗುತ್ತಿರುತ್ತಿದ್ದೆವು. ಏಕೆಂದರೇ ಅಲ್ಲಿರುವವರೆಲ್ಲಾ ಒಂದೇ ಶಾಲೆ ಎಂಬ ಸೂರಿನ ಕೆಳಗಡೆ ಅಭ್ಯಾಸ ಮಾಡುತ್ತಿರುವವರು ಮುಗ್ಧ ಮಕ್ಕಳು. ಆ ಸಮಯಕ್ಕೆ ನಮ್ಮಗಳ ಮನಸ್ಸಿಗೆ ಯಾವೊಂದು ಕಲ್ಮಶವು ಇರಲಿಲ್ಲ.

ಪ್ರಾಥಮಿಕ, ಪ್ರೌಢ ಶಿಕ್ಷಣವೆಂದರೇ ಹಾಗೆಯೇ ಪ್ರತಿಯೊಂದಕ್ಕೂ ಅಚ್ಚರಿ ಬೆರತ ಮನಸ್ಸುಗಳನ್ನು ಹೊಂದಿರುವವರು. ಹೊಸ ಹೊಸ ಸಾಹಸಗಳನ್ನು ಆಟಗಳನ್ನು ತುಂಬಾನೆ ಎಂಜಾಯ್ ಮಾಡುತ್ತಾ ಮಾಡುತ್ತಾ ನಮ್ಮ ನಮ್ಮ ಗುರಿಯ ಕಡೆಗೆ ಸಾಗುವ ದಿನಗಳು ಅವುಗಳು.

ಇಂಥ ದಿನಗಳಿಂದ ಬೇರ್ಪಟ್ಟು ಕಾಲೇಜು ಅಂಗಳಕ್ಕೆ ಬಂದ ಮೊದಲ ದಿನವೆಂದರೇ ಅಳುವೆ ಬಾಯಿಗೆ ಬಂದಂತೆ, ಎನ್ನುವ ಅನುಭವ. ಹಾಗೆಯೇ ಚಿಕ್ಕದಾಗಿ ಹಳೆಯ ದಿನಗಳು ಪ್ಲಾಶ್ ಬ್ಯಾಕ್ ನಲ್ಲಿ ಹಾದು ಹೋಗಿಬಿಡುತ್ತವೆ. ಅದರೇ ಪುನಃ ಆ ದಿನಗಳಿಗೆ ಮರಳಲಾರದಂತಹ ಕಟು ಸತ್ಯ ನಮ್ಮ ಮುಂದೆ ಇರುತ್ತದೆ. ಮುಖದ ಮೇಲೆ ಚಿಗುರು ಮೀಸೆ! ಏನೋ ಒಂದು ಹೊಸತನದ ಕುರುಹು ಎಂಬಂತೆ ನಮ್ಮಲ್ಲಿ ಹೊಸ ಹೊಸ ಬದಲಾವಣೆ.

ಶಾಲಾ ದಿನಗಳಲ್ಲಿರುವಂತೆ ನಿತ್ಯ ಯೂನಿಪಾರ್ಮ್ ಗಳ ಜಂಜಾಟವಿಲ್ಲಾ. ನಮಗೆ ತಿಳಿದ ಬಣ್ಣ ಬಣ್ಣದ ಅಂಗಿ ಪ್ಯಾಂಟ್ ಗಳನ್ನು ಹಾಕಿಕೊಂಡು ಹೋಗಬಹುದು. ಅದು ನಿತ್ಯ ಹೊಸ ಹೊಸ ಅವತಾರದಲ್ಲಿ.

ಬರೀ ಗಂಡು ಹುಡುಗರು, ಬರೀ ಹೆಣ್ಣು ಹುಡುಗಿಯರು ಇರುವ  ಶಾಲೆಗಳಿಂದ ಬಂದಂತಹ ಹುಡುಗ-ಹುಡುಗಿಯರಿಗೆ ಮಾತ್ರ ವಿಪರೀತವಾದ ಪುಳಕ. ಯಾಕೆಂದರೇ ಈ ಕಾಲೇಜುಗಳಲ್ಲಿ ಕೋ ಎಜುಕೇಶನ್ ಹುಡುಗ ಹುಡುಗಿಯರು ಜೊತೆಯಲ್ಲಿಯೇ ಅಭ್ಯಾಸ ಮಾಡುವುದು.

ಹಾಗೆಯೇ ಒಂದು ಸುತ್ತು ಕಣ್ಣು ಹಾಯಿಸಿದಾಗ ಬಗೆ ಬಗೆಯ ಉಡುಪಿನಲ್ಲಿ ಹೊಸ ಹೊಸ ಮುಖಗಳು.

ನಮ್ಮ ನಮ್ಮ ಶಾಲೆಗಳಿಂದ ಒಬ್ಬರೋ ಇಬ್ಬರೋ ಮಾತ್ರ ಈ ಕಾಲೇಜಿಗೆ ಬಂದಿದ್ದಾರೆ. ಅದರಲ್ಲೂ ಆ ಇಬ್ಬರೂ, ಒಬ್ಬರೂ ಬೇರೆ ವಿಭಾಗದಲ್ಲಿ ಸೇರಿಕೊಂಡಿದ್ದಾರೆ. ನನ್ನ ಸ್ನೇಹಿತ/ತೆ ಅನ್ನುವವರೇ ಇಲ್ಲಾ. ಹೊಸಬರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ. ನಡೆಯಲ್ಲಿಯೇ ಸಂಕೋಚ. ಇದು ಹುಡುಗ ಹುಡುಗಿ ಇಬ್ಬರಿಗೂ ಆಗುವ ಕಾಲೇಜಿನ ಮೊದಲ ದಿನದ ಅನುಭವ.

ಲೆಕ್ಚರ್ ಗಳು ಹೇಗೆ ಇರುತ್ತಾರೋ ಅವರ ನಡೆ ನುಡಿ ಹೇಗೋ? ಇತ್ಯಾದಿ ಯೋಚನೆಗಳು. ಏಕೆಂದರೇ ನಮ್ಮ ನಮ್ಮ ಹಳೆಯ ಶಾಲೆಗಳಲ್ಲಿ ನಾವು ಕಂಡಿರುವಂತೆ ಒಂದಷ್ಟು ಶಿಕ್ಷಕ ಶಿಕ್ಷಕಿಯರು ಬೇಜಾನ್ ಕಿರಿಕ್ ಪಾರ್ಟಿಗಳಾಗಿದ್ದಾರಲ್ಲಾ! ಆ ರೀತಿಯಲ್ಲಿ ಇಲ್ಲಿಯು ಸಹ ಎಂಬ ಒಂದು ಚಿಕ್ಕ ಬೆವರು ಹನಿ ಕತ್ತಿನಲ್ಲಿ ಸಣ್ಣಗೆ ಹಾಗೆಯೇ ಇಳಿಯುತ್ತದೆ.

ಏನೂ ಮಾಡುವುದಕ್ಕೂ ಬರುವುದಿಲ್ಲ. ಒಂದೇರಡು ದಿನ ಸಾಗಲೇಬೇಕು. ಹೊಸ ಸ್ನೇಹಿತರ ಬಳಗ ಕಟ್ಟಬೇಕು. ಬಿಗು ವಾತಾವರಣವನ್ನು ತಿಳಿ ಮಾಡಬೇಕು. ಆಗ ಮಾತ್ರ ಕಾಲೇಜು ಲೈಫ್ ಎಂಜಾಯ್ ಮಾಡಲು ಸಾಧ್ಯ. ಎಂದುಕೊಂಡು ಮನಸ್ಸಿನಲ್ಲಿ ಚಿಕ್ಕ ಭರವಸೆಯನ್ನು ಕೊಂಡುಕೊಳ್ಳಬೇಕು. ಯಾಕೆಂದರೇ ನಮ್ಮನ್ನು ನಾವೇ ಸಂತಯಿಸಿಕೊಳ್ಳಬೇಕು. ಯಾಕೆಂದರೇ ನಾವು ಕಾಲೇಜು ಎಂಬ ದೊಡ್ಡ ಮೆಟ್ಟಿಲನ್ನು ಏರಿದ್ದೇವೆ! ಇದಕ್ಕೆಲ್ಲಾ ನಮ್ಮ ತಂದೆ ತಾಯಿಯರನ್ನು ಕೇಳಬಾರದು.

ನನ್ನ ಚಡ್ಡಿ ದೋಸ್ತಗಳೆಲ್ಲಾ ಬೇರೆ ಬೇರೆ ಕಾಲೇಜುಗಳಿಗೆ ಸೇರಿದ್ದಾರೆ. "ನನ್ ಮಕ್ಕಳು ಇಲ್ಲಿಯೇ ಸೇರ್ರೋ ಎಂದು ಬಡೆದುಕೊಂಡರೂ ಸೇರಲಿಲ್ಲ. ಅವಳನ್ನು ಇಲ್ಲಿಯೆ ಸೇರೇ ಅಂದ್ರೇ ನನ್ನ ಮಾತು ಎಲ್ಲಿ ಕೇಳುತ್ತಾಳೆ, ಆ ಅಳು ಮುಂಜಿ ನನ್ನ ಪ್ರಾಣ ಸ್ನೇಹಿತೆ?" ಎಂದು ಈ ಹುಡುಗ ಹುಡುಗಿಯರ ವ್ಯರ್ಥ ಆಲಾಪ!

ಏನೂ ದೊಡ್ಡ ಕಾಲೇಜು! ಎಷ್ಟೊಂದು ಅಂತಸ್ತುಗಳ ಕಟ್ಟಡ. ಇದೆ ಮೊದಲು ನೋಡಿದ ಅನುಭವ! ಇನ್ನೂ ಎರಡು ವರುಷ ಅದು ಹೇಗೆ ನನ್ನ ಜೀವ ಇಲ್ಲಿ ಬೇಯುವುದೋ!  ಏನೋ ಧಾವಂತ!

ಅಂತೂ ಮೊದಲನೇ ತರಗತಿ ಎಂದು ಕೊಂಡು ನನ್ನ ತರಗತಿಯನ್ನು ಯಾವ ಕೊಠಡಿಯಲ್ಲಿ ಎಂದು ಹುಡುಕಿಕೊಂಡು ಎರಡು ಮೂರು ಬೆಂಚನ್ನು ಬಿಟ್ಟು ನಾಲ್ಕರಲ್ಲಿ ಮೊಲೆಯಲ್ಲಿ ಕುಳಿತೇ. ಅಬ್ಬಾ ಏನೂ ಹುಡುಗರು ಹುಡುಗಿಯರುಗಳು. ಸಖತ್ ಪಾಸ್ಟ್ ಇದ್ದಾರೆ? ಅನಿಸಿತು. ಅವರ ಉಡುಪು ಮತ್ತು ನಡಾವಳಿಯನ್ನು ಕಂಡು.

ಪಕ್ಕದಲ್ಲಿ ಕುಳಿತುಕೊಂಡವಳು/ನು ಸುಮ್ಮನೇ ನೋಡಿ ನಕ್ಕನು/ಳು ಯಾವ ಸ್ಕೋಲ್ ನಿಂದ ಎಂದು ಕೇಳಿದಳು/ನು ನಾನು ಹೀಗೆ ಹೀಗೆ ಎಂದು ಉತ್ತರಿಸಿ ಉಗುಳನ್ನು ಹಾಗೆಯೇ ನುಂಗಿದೆ.

ಯಾಕೋ ಅಷ್ಟೊಂದು ಭಯವಾಗಿತ್ತು.

ಅಷ್ಟೊತ್ತಿಗೆ ಲೆಕ್ಚರ್ ಬಂದರು ನಮ್ಮ ಹೆಸರುಗಳನ್ನು ಹಾಜರಾತಿ ಪುಸ್ತಕದಲ್ಲಿ ಓದಿದಾಗ ಎಸ್ ಸಾರ್ ಎಂದು ಹೇಳಿ ಕುಳಿತುಕೊಂಡೆ. ಹಾಗೆಯೇ ಹೆಸರನ್ನು ಹೇಳಿದಾಗ ತಲೆ ಎತ್ತಿ ಯಾರ್ಯಾರ ಹೆಸರು ಏನೂ ಎಂದು ಗುರುತಿಸಿಕೊಂಡೆ. ಯಾರದಾದರೂ ಆತ್ಮೀಯ ಎಂಬ ಮುಖ ಕಾಣುವುದೋ ಎಂಬ ಚಿಕ್ಕ ಆಸೆಯಿಂದ. ಲೆಕ್ಚರ್ ತಮ್ಮ ಸಬ್ಜೆಕ್ಟ್ ಬಗ್ಗೆ ಪೀಠಿಕೆಯನ್ನು ಕೊಟ್ಟರು. ಹಾಗೆಯೇ ಒಂದು, ಎರಡು, ಮೂರು ಕ್ಲಾಸ್ ಗಳು ಒಂದರ ನಂತರ ಒಂದು ನಡೆದು ಹೋಗಿ ಸ್ವಲ್ಪ ವಾರ್ಮ್ ಅಪ್ ಆದೇವು!


ಉಫ್!

ನಮ್ಮ ನಮ್ಮ ಪಕ್ಕದಲ್ಲಿ ಕುಳಿತ ಮೊದಲ ಹುಡುಗ ಹುಡುಗಿಯರೆ ನಮ್ಮ ಸ್ನೇಹಿತರಾದರೂ. ಅದು ಇದು ವಿಷಯಗಳನ್ನು ವಿನಿಮಯ ಮಾಡಿಕೊಂಡು ಸ್ವಲ್ಪ ಧೈರ್ಯವನ್ನು ತೆಗೆದುಕೊಂಡೆವು. ಅವರವರ ಅಂತಸ್ತು ಮತ್ತು ಮನೆ ಕಡೆ ಹೇಗೆ ಎಂಬುದನ್ನು ನಮ್ಮ ನಮ್ಮ ಬುದ್ಧಿಯಿಂದ ಚಿಕ್ಕದಾಗಿ ಮನಸ್ಸಿನಲ್ಲಿಯೇ ಅಳೆದೆವು.

ಆದರೂ ಆ ದಿನ ಮಾತ್ರ ನಮ್ಮ ಶಾಲೆಯ ದಿನಗಳು ಮತ್ತು ನಮ್ಮ ಶಿಕ್ಷಕರ ನೆನಪು ತುಂಬಾನೇ ಬಾಧಿಸಿತು!

ಇದಕ್ಕೂ ಮುನ್ನಾ ಸಿನಿಮಾಗಳಲ್ಲಿ ನೋಡಿದಂತಹ ಕಾಲೇಜು ದಿನಗಳು ಹೀರೋ ಮತ್ತು ಹೀರೋ ಇನ್ ಗಳ ಮಿಲನ. ಎಲ್ಲಾ ಕೇವಲ ಸಿನಿಮಾ ಎಂದು ಅರಿವಾಯಿತು. ಆ ರೀತಿಯ ಯಾವ ದೃಶ್ಯಗಳು ನನ್ನಾಣೆ ನನ್ನ ಕಣ್ಣಿಗೆ ಬೀಳಲಿಲ್ಲ. ಇದುವೇ ಅಲ್ಲವಾ ನಿಜವಾದ ಲೈಫ್.

ಅಂತೂ ಎಷ್ಟು ಹೊತ್ತಿಗೆ ಈ ಮೊದಲ ದಿನ ಮುಗಿದು ಹೋಗುತ್ತದೋ ಅನ್ನಿಸಿತ್ತು.

ಬೇಸಿಗೆ ರಜೆಯಲ್ಲಿ ನಾವು ಕಂಡ ಕಾಲೇಜು ದಿನಗಳ ಭವಿಷ್ಯತ್ ನೋಟವೆಲ್ಲಾ ಜರ್ರನೇ ಇಳಿದು ಹೋಗಿ ತುಂಬ ನಿರಸವಾಗಿ ಸಂಜೆಯಾಯಿತು.

ನೋಡೋಣ ಮುಂದಿನ ದಿನಗಳಲ್ಲಾದರೂ ಆ ಚಲನಚಿತ್ರಗಳಲ್ಲಿನ ಕಾಲೇಜು ನೋಟಗಳು ನಮ್ಮ ನಮ್ಮ ಕಣ್ಣಿಗೆ ಬೀಳುವವೋ? ಯಾರು ಯಾರೂ ಹೀರೋ ಹೀರೋ ಇನ್ ಗಳ ರೀತಿಯಲ್ಲಿ ಪರಿಚಯವಾಗುವವರೋ?

ಈ ರೀತಿಯ ಭರವಸೆಯಿಂದ ಮನೆಯ ಕಡೆಗೆ ಹೆಜ್ಜೆ ಹಾಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ