ಮಂಗಳವಾರ, ಜೂನ್ 5, 2012

ನೀ ಎಂದರೇ..!


ಆ ದಿನ ನಿನ್ನ ಬಳಿ ಆ ರೀತಿಯಲ್ಲಿ ಮಾತನಾಡಬಾರದಿತ್ತು. ಅದು ಏಕೆ ಹಾಗೆ ಆ ಸಮಯಕ್ಕೆ ನನ್ನ ಮನಸ್ಸಿಗೆ ಆ ಕೇಳಲಾರದ ಮಾತು ಪದವಾಗಿ ನನ್ನ ಬಾಯಿಂದ ಜಾರಿತೋ ಆ ದೇವರೆ ಬಲ್ಲ!

ಮನುಷ್ಯ ತಾನು ಅಂದುಕೊಳ್ಳುವುದಕ್ಕಿಂತ ವಿಭಿನ್ನವಾಗಿ ಸಮಯದ ಗೊಂಬೆಯಾಗಿಬಿಡುತ್ತಾನೆ. ಆ ಪರಿಸ್ಥಿತಿಗೆ ತಕ್ಕಂತೆ ಯಾವುದೋ ಒಂದು ಬಲಿಷ್ಠವಾದ ಸೂತ್ರದಾರ ಆಡಿಸುವಂತೆ ವರ್ತಿಸಿಬಿಡುತ್ತಾನೆ ಅನಿಸುತ್ತದೆ.

ಆದರೇ ಅದನ್ನು ಯಾರೂ ಕೇಳಬೇಕು? ಆ ಸಮಯಕ್ಕೆ ನಿನಗೆ ನನ್ನ ಬಗ್ಗೆ ಎಷ್ಟರ ಮಟ್ಟಿಗೆ ತೀರಾಸ್ಕಾರ ಬಂದಿತೂ ಎಂಬುದು ಆ ನಿನ್ನ ಮುದ್ದು ಕಣ್ಣುಗಳನ್ನು ನೋಡಿದಾಗ ತಿಳಿಯಿತು.  ಆ ನಿನ್ನ ಕೆಂಪಾದ ಕೆನ್ನೆಯನ್ನೂ ನೋಡಿ ನಾನಂತೂ ಪೂರ್ತಿ ತಣ್ಣಗಾಗಿ ಬಿಟ್ಟೆ. ಎಲ್ಲಿ ಕೆಂಪನೆಯ ರಕ್ತ ನಿನ್ನ ಆ ಕೆನ್ನೆಯಿಂದ ಚಿಮ್ಮುವುದೋ ಎಂದು ಭಯವಾಗಿತ್ತು. ನಿಜವಾಗಿಯೂ ನಿನ್ನಲ್ಲೂ ಇಷ್ಟರ ಮಟ್ಟಿಗೆ ಸಿಟ್ಟನ್ನು ಕಾಣಬಹುದು ಎಂಬುದು ಆ ದಿನವೇ ಮನವರಿಕೆಯಾಯಿತು.


ಆದರೇ ಜಾರಿಬಿದ್ದ ಗಾಜನ್ನು ಹೇಗೆ ಪುನಃ ಒಂದುಗೊಡಿಸಲೂ ಸಾಧ್ಯವಿಲ್ಲವೋ ಆ ರೀತಿಯಲ್ಲಿ ನನ್ನ ಆ ಮಾತನ್ನೂ ವಾಪಾಸ್ಸು ತೆಗೆದುಕೊಳ್ಳಲು ಸಾಧ್ಯವಾಗದೇ ಅಸಹಾಯಕದ ಮೊರೆಯನ್ನು ನಿನ್ನ ಮುಂದೆ ಇಟ್ಟಿದ್ದೇ...

ಅದು ವರೆಗೂ ನೀನಂದರೇ ಪ್ರಫುಲತೆಯ ಲತೆಯಾಗಿದ್ದೆ ನನ್ನ ಮನಕ್ಕೆ. ಆದರೆ ಗೆಳತಿ ಇದೀಗ ನಿನ್ನದೇ ಆ ಮುಖ ಬೆಂಕಿಯ ಬಿರುಗಾಳಿಯಾಗಿ ಸುಯ್ಯುತ್ತಿದೆ. ಎಷ್ಟೋ ಬಾರಿ ಮರೆತರೂ ಆ ಸಮಯದ ನಿನ್ನ ಸ್ವಭಾವವೇ ನನ್ನನ್ನು ಕುಕ್ಕುತ್ತಿದೆ. ಆ ರೀತಿಯಲ್ಲಿ ನಿನ್ನನ್ನು ಕೇಳಬಾರದಾಗಿತ್ತು. ಕೇಳಿ ನಾನು ಮಹಾನ್ ತಪ್ಪು ಮಾಡಿದೆ ಅನಿಸುತ್ತಿದೆ.

ಒಮ್ಮೊಮ್ಮೆ ಯೋಚಿಸಿದರೇ ಅದರಲ್ಲೇನೂ ದೊಡ್ಡ ಲೋಪ ಕಾಣಿಸುತ್ತಿಲ್ಲ. ಆದರೇ ಅದು ಏಕೆ ನೀನು ಎರಡು ವರುಷದ ನನ್ನ ನಿನ್ನ ನಡುವಿನ ಪ್ರೀತಿಯ ಪ್ರೇಮವನ್ನು ಕನಸು ಎಂಬಂತೆ ಜಾಡಿಸಿ, ಆ ಪರಿಸ್ಥಿತಿಯ ಕೈಗೆ ಕೊಟ್ಟೆ ಎಂದು ತುಂಬ ದುಃಖವಾಗುತ್ತಿದೆ.

ನೀನು ನನ್ನನ್ನು ಅರ್ಥಮಾಡಿಕೊಂಡಷ್ಟು ಬೇರೆಯವರು ಯಾರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಭರವಸೆಯಿಂದಲೇ.. ಆ ದಿನ ನನ್ನ ಮೊದಲ ಪ್ರೇಮದ ಸುಳಿವನ್ನು ನಿನ್ನಲ್ಲಿ ಮನತೆರೆದು ಬಿಚ್ಚಿಕೊಂಡಿದ್ದು. ಆಗ ನೀನು ಗಮನಿಸಿದ್ದೀಯಾ ಪಶ್ಚಿಮದಲ್ಲಿ ಆ ಕೆಂಪು ಸೂರ್ಯ ಕೆಂಪು ಕಿರಣವನ್ನು ನಿನ್ನ ಮುಖಾರವಿಂದದ ಮೇಲೆ ಚೆಲ್ಲಲೂ ನೀನೂ ಸಹ ನಾಚಿ ನೀರಾಗಲೂ  ಎಷ್ಟೊಂದು ಕಾಕತಾಳಿಯವಾಗಿತ್ತು. ನೀನಗೂ ಅನಿಸಿತ್ತು ಎಂದು ನನ್ನ ಎದೆಯಲ್ಲಿ ನಿನ್ನ ಮೊಗವನ್ನು ಇಟ್ಟುಕೊಂಡು ಉಸಿರುಬಿಟ್ಟಿದ್ದು. ಇನ್ನೂ ಹಾಗೆಯೇ ಬಿಸಿಗಾಳಿ ನನ್ನ ಎದೆಯೊಳಗೆ ಸುಳಿಯುತ್ತಿದೆ.

ಅದೇ ಅನಿಸುತ್ತೇ ನನ್ನ ನಿನ್ನ ಮೊದಲ ಸ್ವರ್ಷ. ಅಮ್ಮ ನಂತರದ ಸ್ತ್ರೀಯ ಸ್ಪರ್ಷವೆಂದರೇ ಏನೂ ಎಂಬುದು ಗೊತ್ತಾಗಿದ್ದು. ಏನೋ ರೋಮಾಂಚನ! ಏನೋ ಸಮಧಾನ! ಏನಾದರೂ ಸಾಧಿಸುವ ಛಲ ಆ ಸಮಯಕ್ಕೆ ನನ್ನ ಎದೆಯಲ್ಲಿ ಪ್ರೀತಿಯ ಜೊತೆಗೆ ಸ್ಥಾಯಿಯಾಗಿ ನಿಂತುಬಿಟ್ಟಿತ್ತು.

ಆಮೇಲೆ ನಿತ್ಯ ನನ್ನ ನಿನ್ನ ಸಂಮಿಲನ, ಮಾತು ಮಾತು.. ಒಂದು ಅರಗಳಿಗೆ ನನ್ನಿಂದ ಬೇರೆಯಾಗಲಾರದಷ್ಟು ನೀನು ನನ್ನನ್ನು ಹಚ್ಚಿಕೊಂಡಿದ್ದು. ಜಗತ್ತೇ ಶೂನ್ಯ ನಾನು ನೀನು ಮಾತ್ರ ಈ ಪ್ರಪಂಚದಲ್ಲಿ ಎಂಬಂತೆ ಮೈ ಮರೆತಿದ್ದು.

ಆ ಎಲ್ಲಾ ಕ್ಷಣಗಳು ಸುಂದರ ಸ್ವಪ್ನಗಳಾಗಿ ನನ್ನನ್ನು ಇಂದು ಕೊರೆಯುತ್ತಿವೆ.

ಗೆಳತಿ ಅಂದು ನಿನ್ನ ನನ್ನ ಆ ಮೊದಲ ಸ್ಪರ್ಷದ ಮೊಲಕ ಬೆಸದ ಆ ಪ್ರೀತಿಯ ನಿವೇಧನೆಯ ಅಸಲಿ ಸತ್ಯ ಇಷ್ಟು ತೆಳುವಾಗಿತ್ತಾ? ಮಂಜಿನ ಪರದೆಯಾಗಿತ್ತಾ? ಯಾವುದೋ ಒಂದು ಪರಿಸ್ಥಿತಿಯ ಬಿಸಿಲ ಜಳಕ್ಕೆ ಆವಿಯಾಗುವಷ್ಟು?

ಇದಕ್ಕೆ ನೀನೇ ಉತ್ತರಿಸಬೇಕು...

ನಾನು ಏನಾದರೂ ಗಂಡಸು.. ಆತುರ.. ಕಾತುರ.. ಎಲ್ಲಾ ಬೆರೆತ ದೇಹ. ಆದರೇ.. ಸ್ತ್ರೀ ಅಂದರೇ ತಾಳ್ಮೆಯ ಖನಿ.. ಮಮತೆಯ ಮಡಿಲು.. ಸಮಾಧಾನದ ಸಂತೃಪ್ತಿಯ ಖಜಾನೆ ಎಂದು ಯಾರ್ಯಾರೋ ಹೇಳಿರುವುದೇಲ್ಲಾ ಶುದ್ಧ ಸುಳ್ಳು ಅನ್ನುವ ರೀತಿಯಲ್ಲಿ ನಿನ್ನ ಮನವನ್ನು ಅಂದು ಮಾಡಿಕೊಂಡು ನನ್ನ ನಿನ್ನ ಪ್ರೇಮಕ್ಕೆ ಒಂದು ಪುಲ್ ಸ್ಟಾಪ್ ನ್ನು ಎಷ್ಟು ಬೇಗ ಇಟ್ಟುಬಿಟ್ಟಿಯೆಲ್ಲಾ?

ಚಿಕ್ಕದಾದ ಒಂದು ಪ್ರೀತಿಯ ಸೆಲೆಯ ಒಂದು ಜೀವ ತಂತು ಸಹ ನಿನ್ನ ಬಳಿ ನನ್ನ ಬಗ್ಗೆ ಇಲ್ಲವಾಯಿತಾ?

ಅನುಮಾನವಿಲ್ಲದ ಪ್ರೇಮವಿಲ್ಲಾ ಎಂದು ಹೇಳಿದ ಕವಿವಾಣಿಯೇ ಸುಳ್ಳಾ?

ಅದು ಯಾಕೇ ನನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಈ ಪ್ರೇಮಿ ಹೀಗೆ ಕೇಳಿದ? ಎಂಬ ಚಿಕ್ಕ ಯೋಚನೆಯು ನಿನ್ನಲ್ಲಿ ಅಂದು ಮೂಡಲಿಲ್ಲವಾ? ಎಷ್ಟು ಸುಲಭವಾಗಿ ಒಂದೇ ಕ್ಷಣಕ್ಕೆ ಅಪರಿಚತರಂತೆ ವರ್ತಿಸಿದೆಯಲ್ಲ?

ನಿನಗೆ ನನ್ನ ಮನದ ವೇದನೆಯ ಅಳತೆ ಇನ್ನೂ ತಿಳಿದಿರಲಾರದು ಅನಿಸುತ್ತದೆ. ನಾನು ಆ ಕ್ಷಣಕ್ಕೆ ಏನೂ ಮಾಡಲಾರದವನಾಗಿದ್ದೆ. ಆತುರಪಟ್ಟು ವರ್ತಿಸಿದ ಗುಣಾವಗುಣದ ಬಗ್ಗೆ ನನಗೆ ಆದ ಪಶ್ಚಾತಾಪದ ಬಿಸಿಯನ್ನು ನೀನು ಅರಿಯಲಾರದೆ ಹೋದೆ. ಎಷ್ಟು ಬೇಡಿಕೊಂಡರೂ ನೀನು ಆ ನಿನ್ನ ಸ್ವಭಾವತವಾದ ಮೊಂಡಾಟವನ್ನು ಬಿಡಲೇ ಇಲ್ಲ.

ಶಾಶ್ವತವಾಗಿ ಈ ನಮ್ಮ ಸ್ನೇಹ, ಪ್ರೀತಿಯನ್ನು ಹರಿದುಕೊಳ್ಳಲು ನಿಂತು ಬಿಟ್ಟೆ?

ಅಲ್ಲಾ ಗೆಳತಿ ನಾನು ಅಷ್ಟೊಂದು ಕೆಟ್ಟವನಾ....?

ಪ್ರೀತಿ ಪ್ರೇಮದ ಬಗ್ಗೆ ನೀನು ಏನೇನೂ ಕಥೆಗಳನ್ನು, ಕಥಾನಾಯಕ/ನಾಯಕಿಯರ ಬಗ್ಗೆ ಹೇಳಿಕೊಂಡಿದ್ದೇನೂ.. ನಾವು ಆ ರೀತಿಯಲ್ಲಿ ಇರೋಣ.. ಈ ರೀತಿಯಲ್ಲಿ ಬಾಳೋಣ.. ಯಾರು, ಯಾವುದೇ ವಿಷ ಘಳಿಗೆ ಬಂದರೂ ಗಟ್ಟಿಯಾಗಿ ಎರಡು ಜೀವ ಒಂದೇ ಪ್ರಾಣವಾಗಿ ಬದುಕೋಣ.. ಎಂದು ಮಾತು ಮಾತಿಗೂ ನೀನು ಹೇಳಿದ್ದೆಲ್ಲಾ ನಿಜಾವಾಗಿಯೂ ಕಥೆ ಮಾತ್ರವಾ?


ಇಂದು ನನಗೆ ಇಂದಿನ ಈ ನಿನ್ನ ನನ್ನ ಬಾಳು-ಬದುಕು ಕಂಡು ನನ್ನ ಮನದಲ್ಲಿ ಕಿಂಚಿತ್ತೂ ಬೇಜಾರಿಲ್ಲಾ.

ಪ್ರೀತಿ ಯಾವತ್ತೂ ಶಾಶ್ವತವಾದದ್ದು. ಎಲ್ಲಿದ್ದರೂ ನೀನು ಸುಖವಾಗಿರಲಿ ಎಂದು ಪ್ರಾರ್ಥಿಸುವ ಮನಸ್ಸು ನನ್ನಲ್ಲಿ ಇದೆಯಲ್ಲಾ ಎಂದು ನನಗೆ ನಾನೇ ಸಮಧಾನಪಟ್ಟುಕೊಳ್ಳುತ್ತಿದ್ದೇನೆ.

ನಿನಗೆ ಇಂದು ಒಬ್ಬ ಗಂಡ ಸಿಕ್ಕಿರಬಹುದು. ಆದರೇ ನಿನ್ನ ಮೊದಲ ಮತ್ತು ಕೊನೆಯ ಪ್ರೇಮಿ ನಾನು  ಮಾತ್ರ ಎಂದು ಅಣೆ ಮಾಡುತ್ತೇನೆ. ಕೊನೆಯವರಿಗೂ ಪ್ರೀತಿಸುವವನು.. ನಿನ್ನ ಏಳ್ಗೆಯ ಬಗ್ಗೆ ಅಚ್ಚರಿಪಡುವ ಪ್ರೀತಿಯ ಹೃದಯ ಮಾತ್ರ ಎಂದೆಂದಿಗೂ ನನ್ನದು.

ಈ ನನ್ನ ಬದುಕೇ ನಿನ್ನದು. ಇದರ ಏಳ್ಗೆ ಬಾಳ್ವೆ ಎಲ್ಲಾ ನಿನಗೆ ಸೇರಿದ್ದು.

ಅದು ಹೇಗೆ ಅದನ್ನೇಲ್ಲಾ ನಿನ್ನ ಮನಸ್ಸಿನಿಂದ ಅಳಿಸಿದೇ ಗೆಳತಿ. ಹೊಸದಾದ ಆ ಮದುವೆ ಎಂಬ ಪ್ರಪಂಚಕ್ಕೆ ಎಷ್ಟು ಸುಲಭವಾಗಿ ಪಾದ ಇಟ್ಟುಬಿಟ್ಟೇ? ನನಗಂತೂ ಇನ್ನೂ ಹಸಿ ಹಸಿಯಾಗಿ ನಿತ್ಯ (ಕಾಣುತ್ತಿದೆ) ಕಾಡುತ್ತಿದೆ .

ಅದು ದೇವರ ಸೃಷ್ಟಿ ಅನಿಸುತ್ತದೆ. ಅಂಥ ದೈರ್ಯ ಸ್ಥೈರ್ಯವನ್ನು ದೇವರು ಸ್ತ್ರೀಯರಿಗೆ ಮಾತ್ರ ಕೊಟ್ಟಿರುವವನು. ಯಾವುದೇ ಸಂಬಂಧವನ್ನು ಶಾಶ್ವತವಾಗಿ ಅಳಿಸಿಕೊಳ್ಳುವ ಬೆಳೆಸಿಕೊಳ್ಳುವ ಶಕ್ತಿಯನ್ನು ನಿಮ್ಮಗಳಿಗೆ ಮಾತ್ರ ಕೊಟ್ಟಿರುವವನು.

ಈ ಪ್ರಪಂಚದಲ್ಲಿರುವ ಒಂದೊಂದು ಅಶಕ್ತ ವಿಫಲ ಪ್ರೀತಿಯ ಗೋಳನ್ನು ಗಂಡು ಜನ್ಮಕ್ಕೆ ಮಾತ್ರ ಮೀಸಲಿಟ್ಟಿರುವವನು ಅನಿಸುತ್ತದೆ. ಅದಕ್ಕೆ ಅಲ್ಲವಾ ಪ್ರೀತಿಯಿಂದ ಹುಚ್ಚರಾಗಿ ಅದರಲ್ಲಿಯೇ ಕೊರಗುತ್ತಾ.. ಹುಡುಗರು ತಮ್ಮ ಮುಂದಿನ ಜನ್ಮವನ್ನು ಕೇವಲ ಸಾರಾಯಿ ಸೀಶೆಯಲ್ಲಿ ತಮ್ಮ ತಮ್ಮ ದೇವಿಯರನ್ನು ಕಾಣುತ್ತಾ ಕಾಣುತ್ತಾ ಕೊನೆಯಾಗುತ್ತಿರುವುದು.

ಇರಲಿ ಬಿಡು ನಮ್ಮ ನಮ್ಮ ಅದೃಷ್ಟಕ್ಕೆ ಯಾರನ್ನೂ ಯಾಕಾದರೂ ಹೊಣೆ ಮಾಡಲಿ...!

ನಿನ್ನೆ ಮುಂಜಾನೆ ಆ ದೇವಸ್ಥಾನದಲ್ಲಿ ನಿನ್ನ ಮುದ್ದು ಮಗಳನ್ನು ಸೂಂಟದ ಮೇಲೆ ಇಟ್ಟುಕೊಂಡು ನೀನು ಬರುತ್ತಿರುವುದನ್ನು ನೋಡಿದೆ. ಮೂರು ವರುಷದ ಹಿಂದೆ ನನ್ನ ನಿನ್ನ ಮಧ್ಯೆ ಇದ್ದ ಪ್ರೀತಿಯ ಆ ಒಂದು ಝರಿ ಹಾಗೆಯೇ ಸುಳಿಯಿತು. ಅದು ಒಂದು ನೆನಪು ಮಾತ್ರ.

ಅದಕ್ಕಾಗಿ  ಈ ಪತ್ರವನ್ನು ಈ ಮೇಲ್ ಮಾಡುತ್ತಿದ್ದೇನೆ. ನೀನು ಇದನ್ನು ಓದಿದ್ದಿಯಾ ಅಂದುಕೊಳ್ಳುತ್ತೇನೆ. ಇದೆ ಮೊದಲ ಪತ್ರ, ಕೊನೆಯದು ಸಹ ಎಂದು ಅನಿಸುತ್ತದೆ...!

ಗೆಳೆಯರು ಪ್ರೇಮಿಗಳಾಗಬಹುದು, ಆದರೆ ಪ್ರೇಮಿಗಳು ಎಂದು ಗೆಳೆಯರಾಗಲಾರರು!

ಯಾವುತ್ತೂ ಒಳ್ಳೆಯದಾಗಲಿ ಎಂದು ಆರೈಸುವ ನಿನ್ನ ಗೆಳೆಯ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ