ಭಾನುವಾರ, ಏಪ್ರಿಲ್ 8, 2012

ಈ ಉರಿ ಬೇಸಿಗೆಯಲ್ಲಿ

ಬೇಸಿಗೆ ಕಾಲ ಬಂದಿದೆ ಅಂದರೇ ಮಕ್ಕಳಿಗೆ ಏನೋ ಖುಷಿ. ಈ ಎರಡು ತಿಂಗಳು ಓದು, ಬರೀ ಎಂಬ ಮಾತೇ ಮನೆಯಲ್ಲಿ ಇಲ್ಲ. ಯಾರು ಹೇಳುವವರು ಕೇಳುವವರು ಇಲ್ಲ ಎಂಬ ಸಂತೋಷ. ದಿನವೀಡಿ ಆಟ ಮತ್ತು ಆಟ ಅಷ್ಟೇ.

ಒಂದು ವರುಷದ ಕಷ್ಟಪಟ್ಟು ಓದಿದ ಪಾಠಗಳನ್ನು ವಾರ್ಷಿಕ ಪರೀಕ್ಷೆ ಎಂಬ ಮಾಪನದಲ್ಲಿ ಇಟ್ಟು ಪಾಸು ಪೇಲು ಎಂಬ ಪಲಿತಾಂಶವನ್ನು ಪಡೆಯುತ್ತಾರೆ. ಮನೆಯಲ್ಲಿ ಮಕ್ಕಳಿಗೆ ಓದು, ಪಾಠ, ಮನೆ ಪಾಠ ಎಂದು ಸಕತ್ತಾಗಿ ಹಿಂಸೆಪಡಿಸಿರುತ್ತಾರೆ. ಹೆತ್ತವರಿಗೆ ತಮ್ಮ ಮಕ್ಕಳು ಮುಂದೆ ನಮ್ಮ ರೀತಿಯಲ್ಲಿ ಕಷ್ಟಪಡಬಾರದು. ಚೆನ್ನಾಗಿ ಓದಿದರೆ ಒಳ್ಳೆಯ ಕಡೆ ಕೆಲಸ ಸಿಕ್ಕಿ ತಮ್ಮ ಜೀವನದಲ್ಲಿ ಸೆಟ್ಲ್ ಆಗುತ್ತಾರೆ ಎಂಬ ಮಹದಾಸೆಯಿಂದ ಸಾಕಷ್ಟು, ಶ್ರಮ, ದುಡಿಮೆಯನ್ನು ಖರ್ಚು ಮಾಡಿ ಉತ್ತಮವಾದ ಶಾಲೆಯಲ್ಲಿಟ್ಟು ಓದಿಸುತ್ತಾರೆ.

ಮಕ್ಕಳು ಸಹ ಒಂದು ವರುಷ ಪಾಠ ಬಿಟ್ಟು ಬೇರೆಯದನ್ನು ಚಿಂತಿಸಿದರೇ ಕೇಳಿ.. ಆಗಿರುತ್ತದೆ ನಗರದ ಶೈಕ್ಷಣಿಕ ಪರಿ.

ನಮ್ಮ ಕಾಲದಲ್ಲಿ ಬಿಡಿ ಆ ರೀತಿಯ ಸೀರಿಯಸ್ ನೇಸ್ಸೆ ಇರಲಿಲ್ಲ. ಶಾಲೆಯ ಘಂಟೆ ಹೊಡೆಯುವುದನ್ನೇ ಕಾಯುತ್ತಿದ್ದೆವು. ನಿತ್ಯ ಸಂಜೆ ಆಟ ಆಟ ಮಾತ್ರ. ಪುಸ್ತಕಗಳನ್ನು ಪುನಃ ಮುಟ್ಟುತ್ತಿದ್ದದ್ದು ಬೆಳೆಗ್ಗೆ ಶಾಲೆಗೆ ಹೋಗಬೇಕಲ್ಲಪ್ಪಾ ಎಂದು ದೂಳು ಕೊಡವಿ ಚೀಲವನ್ನು ಹೆಗಲಿಗೆ ಹಾಕಿಕೊಂಡು ಹೋಗುತ್ತಿದ್ದೇವು. ಶಾಲೆಯಲ್ಲಿ ಪುನಃ ಶಿಕ್ಷಕರು ನಿನ್ನೆ ಕೊಟ್ಟ ಹೊಂ ವರ್ಕ್ ಮಾಡದೆ ನಿಂತಿದ್ದೇ ಬಂತು. ಕೈ ಬಾಸುಂಡೆ ಬರುವ ಮಟ್ಟಿಗೆ ಏಟುಗಳನ್ನು ಅಳುತ್ತಾ ಸವಿಯುತ್ತಿದ್ದೇವು.

ಇದನ್ನೇಲ್ಲಾ ಕಂಡ ನಮ್ಮ ಕಣ್ಣುಗಳು ನಗರದ ಪ್ರಾಥಮಿಕ ಮಕ್ಕಳ ಬುದ್ಧಿವಂತಿಕೆ, ಜವಾಬ್ದಾರಿಯನ್ನು ಕಂಡು ನನಗೆ ಆಶ್ಚರ್ಯವಾಗಿದೆ. ಶಾಲೆಯನ್ನು ಬಿಟ್ಟ ಬಂದನಂತರ ಯುನಿಪಾರ್ಮ್ ನ್ನು ತೆಗೆದು. ಮುಖ ತೊಳೆದುಕೊಂಡು ಶಾಲೆಯ ಪಾಠಗಳನ್ನು ಓದಲು ಕುಳಿತುಕೊಳ್ಳುವುದನ್ನು ಕಂಡು ಅಲ್ಲಾ ಈ ಮಕ್ಕಳು ಈ ಚಿಕ್ಕ ವಯಸ್ಸಿಗೆ ಇಷ್ಟರ ಮಟ್ಟಿಗೆ ಬುದ್ಧಿವಂತರಾಗಿದ್ದರಲ್ಲಾ ಶಿವನೇ ಅನಿಸುತ್ತದೆ.

ನಾವುಗಳು ಯುನಿಪರ್ಮ್ ಅದು ವಾರಕ್ಕೆ ಒಮ್ಮೆ ಮೈಯಿಂದ್ ಇಳಿಯುತ್ತಿತ್ತು. ಎಷ್ಟರ ಮಟ್ಟಿಗೆ ಅಂದರೆ ಅದನ್ನು ಇನ್ನೂ ತೊಳೆಯಲೇಬೇಕು ಎಂಬ ಸಮಯಕ್ಕೆ ನಮ್ಮಿಂದ ಇಳಿಸುತ್ತಿದ್ದೇವು. ಆಟಕ್ಕೂ ಅದೇ ಯುನಿಪಾರ್ಮ್ ಪಾಠಕ್ಕೂ ಅದೇ ಆದರೇ ಅದರ ಸ್ಥಿತಿ ಉಹಿಸಲೂ ಅಸಾಧ್ಯ.

ಮಕ್ಕಳು ಅಂದರೇ ಆಟವಾಡುವುದೇ ಜನ್ಮ ಸಿದ್ಧ ಹಕ್ಕು ಎಂಬಂತೆ ವರ್ತಿಸುತ್ತಿದ್ದ ದಿನಗಳು ಅವು. ಶಾಲೆಯೆಂದರೇ ಪರಪ್ಪನ ಅಗ್ರಾಹರದ ರೀತಿಯ ಜೈಲು ಎಂಬಂತೆ ಏನೇನೂ ಸೋಗು ಹಾಕಿಕೊಂಡು ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದೇವು.

ಇಂದಿನ ಈ ನಗರದ ಮಕ್ಕಳೂ ಏನೂ ಹುಷಾರ್ ಆಗಿ, ಎಷ್ಟೊಂದು ಖುಷಿಯಾಗಿ ಶಾಲೆಗೆ ಹೋಗುತ್ತಾರಲ್ಲಾ ಎಂದು ನನಗೆ ನಾನೇ ಅಶ್ಚರ್ಯಪಡುತ್ತೇನೆ. ಈ ಮಕ್ಕಳಿಗೆ ಇರುವ ಬುದ್ಧಿ ನಮಗೆ ಬಂದಿದ್ದು, ಮುಖದ ಮೇಲೆ ಮೀಸೆ ಬಂದ ಹೊಸತರಲ್ಲಿ. ಎಸ್. ಎಸ್.ಎಲ್.ಸಿ ಯಲ್ಲಿ ಒಮ್ಮೆ ಡುಮಕ್ಕಿ ಹೊಡೆದು ಮನೆಯಲ್ಲಿ ಅಪ್ಪ ಅಮ್ಮ ಅಟ್ಟಾಡಿಸಿಕೊಂಡು ಹೊಡೆದ ಮೇಲೆ.




ಆದರೇ ಈ ಮಕ್ಕಳಿಗೆ ಏನೊಂದು ಹೇಳುವುದೇ ಬೇಡ. ಈ ಮಕ್ಕಳು ತಮಗೆ ತಾವೇ ಅರಿವನ್ನು ರೂಡಿಸಿಕೊಂಡು ಬಿಟ್ಟಿದ್ದಾವೆ. ಚೆನ್ನಾಗಿ ಓದಬೇಕು. ಹೆಚ್ಚು ಅಂಕಗಳನ್ನು ತೆಗೆದುಕೊಂಡು ಶಾಲೆಯಲ್ಲಿ ಯಾವಾಗಲೂ ಏ ಗ್ರೇಡ್ ನಲ್ಲಿ ಇರಬೇಕು. ಆ ಗ್ರೇಡ್ ನ್ನು ನಾನು ಯಾರಿಗೂ ಬಿಟ್ಟು ಕೊಡಬಾರದು. ಚೆನ್ನಾಗಿ ಓದಬೇಕು ಎಂಬ ಅಂಶವನ್ನು ಅದು ಹೇಗೆ ತಿಳಿದುಕೊಂಡಿದ್ದಾವಲ್ಲಾ ಎಂದು ನಿಜವಾಗಿಯು ಮೆಚ್ಚುಗೆಯಾಗುತ್ತದೆ.

ನಮಗಂತೂ ಪರೀಕ್ಷೆಯ ಅಂಕಗಳ ಉಸಾಬರಿಯೇ ಗೊತ್ತಿರಲಿಲ್ಲ. ಅಂಕಗಳು ಎಂಬುದು ಪರೀಕ್ಷೆಯಲ್ಲಿ ಕೊಡುತ್ತಾರೆ. ಇಷ್ಟು ಮಾರ್ಕ್ಸ್ ಬಂದರೆ ಪಾಸು ಎಂಬುದನ್ನು ಬಿಟ್ಟರೆ. ಅದಕ್ಕಿಂತ ಜಾಸ್ತಿ ತೆಗೆದರೇನಾಗುವುದು ಎಂಬುದು ಗೊತ್ತಿರಲಿಲ್ಲ. ಅದ್ದರಿಂದ ಪಸ್ಟ್ ಕ್ಲಾಸ್, ಮೇರಿಟ್ ಎಂಬ ಶಬ್ಧಗಳೆಲ್ಲಾ ಕೇಳಿದ್ದೇ ಹತ್ತನೇ ತರಗತಿಯನ್ನು ಪಾಸು ಮಾಡಿದ ಮೇಲೆ.

ಇದು ಅಂದಿನ ನಮ್ಮ ಹಳ್ಳಿಗಾಡಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಾವು ಇದ್ದ ಸ್ಥಿತಿ.

ಇಂದಿನ ಮಕ್ಕಳು ಒಂದು ಕ್ಷಣವನ್ನು ವೇಸ್ಟ್ ಮಾಡದೇ ಯಾವಾಗಲೂ ಓದಿನ ಬಗ್ಗೆಯೇ ತಪಸ್ಸು ಮಾಡುತ್ತಿರುವುದು, ನಮ್ಮ ಇಂದಿನ ಪೀಳಿಗೆಯ ಬಗ್ಗೆ ಭರವಸೆಯ? ನೋಟವನ್ನು ನೋಡುವಂತಾಗುತ್ತದೆ. ಹಾಗೆಯೇ ಈ ಚಿಕ್ಕ ಬಾಲ್ಯದಲ್ಲಿಯೇ ಓದು ಓದು ಎಂಬ ಅಂಕಗಳ ಕಾಂಪೀಟೆಶನ್ ನಿಂದ ಇವರುಗಳು ತಮ್ಮ ಬಾಲ್ಯಾವಸ್ಥೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ ಎಂಬ ಭಯವಾಗುತ್ತದೆ.

ಈ ಚಿಕ್ಕ ವಯಸ್ಸಿಗೆ ದೊಡ್ಡವರ ರೀತಿಯ ಅರಿವು ಮತ್ತು ಯೋಚನಾ ಲಹರಿ ಈ ಪೀಳಿಗೆಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತದೋ ಅನಿಸುತ್ತದೆ.

ಗಮನಿಸಿ ರಜಾ ದಿನಗಳನ್ನು ಅಂದು ನಾವುಗಳು ಊರೂರು ಸುತ್ತುತ್ತಾ ಅಜ್ಜ, ಅಜ್ಜಿ, ದೊಡ್ಡಮ್ಮ, ಚಿಕ್ಕಮ್ಮ ಗಳ ಮನೆಯನ್ನು ಎಡತಾಕುತ್ತಾ ಹೊಸ ಹೊಸ ಅನುಭವವನ್ನು ಪಡೆಯುತ್ತಾ ಖುಷಿಯಾಗಿರುತ್ತಿದ್ದೇವು.

ಸಂಬಂಧಿಕರ ಊರುಗಳಿಗೆ ಹೋಗುವುದು ಅಲ್ಲಿಯ ಜಾತ್ರೆ, ನಾಟಕ, ಜಾನಪದ ಗೀತೆಗಳು, ಚಿನ್ನಿ ದಂಡು, ಲಗೋರಿ, ಕುಂಟಾ ಬಿಲ್ಲೆ, ಮಣೆ ಆಟ, ಚೌಕ ಭಾರ ಇತ್ಯಾದಿ ಮುಳುಗೇಳುತ್ತಿದ್ದೇವು. ಹೊಲ, ಏರಿ, ನೀರು ಮುಂತಾದ ಹೊಸ ಜಾಗಗಳಿಗೆ ಗೆಳೆಯರ ಜೊತೆಯಲ್ಲಿ ಮನಸ್ಸೊಇಚ್ಛೆ ಅಡ್ಡಾಡುತ್ತಿದ್ದೇವು. ಪ್ರಕೃತಿಯಲ್ಲಿ ಪೂರ್ಣವಾಗಿ ಲೀನವಾಗಿ ಪುಸ್ತಕಗಳನ್ನೇ ಮರೆಯುತ್ತಿದ್ದೇವು.

ಬೇಸಿಗೆಯ ಎರಡು ತಿಂಗಳುಗಳು ಎಂಬುದು ಹೀಗೆ ಬಂದು ಹಾಗೆ ಹೋದವು ಎಂಬ ರೀತಿಯಲ್ಲಿ ಶಾಲೆಯ ಮೊದಲ ದಿನ ಹ್ಯಾಪು ಮೊರೆಯಾಕಿಕೊಂಡು ಕುಳಿತು ಕೊಳ್ಳುತ್ತಿದ್ದೇವು.

ಅದರೇ ಇಂದಿನ ಮಕ್ಕಳಿಗೆ ಬೇಸಿಗೆ ರಜೆ ಮತ್ತು ಶಾಲಾ ದಿನಗಳಿಗೆ ಏನೂ ವ್ಯತ್ಯಾಸವಿಲ್ಲ ಅನಿಸುತ್ತದೆ. ಶಾಲಾ ದಿನಗಳಲ್ಲೂ ನಾಲ್ಕು ಗೋಡೆಗಳ ಮಧ್ಯೆಯಲ್ಲಿ ಇರುತ್ತಿದ್ದರು. ರಜೆಯ ದಿನಗಳಲ್ಲಿ ಹೆತ್ತವರು ತಮ್ಮ ಮಕ್ಕಳು ಇನ್ನೂ ಮುಂದುವರಿಯಲಿ ಎಂಬ ಆಕಾಂಕ್ಷೆಯಿಂದ ದುಭಾರಿ ವೆಚ್ಚದ ಸಮ್ಮರ್ ಕ್ಯಾಂಪಗೆ ಹಾಕಿ ಬಿಡುತ್ತಾರೆ. ಶಾಲೆಗೆ ಹೇಗೆ ಮುಂಜಾನೆ ಎದ್ದು ಉಟದ ಡಬ್ಬಿ, ಬ್ಯಾಗ್ ಹೆಗಲಿಗೆ ಹಾಕಿಕೊಂಡು ಮನೆಯ ಮುಂದೆ ಬರುವ ಬಸ್ಸಲ್ಲಿ ಹೋಗುತ್ತಿದ್ದರು ಅದೇ ರೀತಿಯಲ್ಲಿ ಸಮ್ಮರ್ ಕ್ಯಾಂಪ ಬಸ್ಸುಗಳಲ್ಲಿ ಒಂದು ಜಾಗಕ್ಕೆ ತಲುಪಿ ಅಲ್ಲಿ ನಾಲ್ಕು ಗೋಡೆಗಳ ಮಧ್ಯೆದಲ್ಲಿ ಅದೇ ವ್ಯಕ್ತಿತ್ವ ವಿಕಾಸನ, ಪೈಂಟಿಂಗ್, ಹಾಡು ಹೇಳುವುದು, ನೃತ್ಯ ಇತ್ಯಾದಿ ಮುಂದೆ ತಮ್ಮ ಜೇವನಕ್ಕೆ ಅನುಕೂಲವಾಗುವ ಕೋರ್ಸ್ ಗಳನ್ನು ಕಲಿಯುತ್ತಾರಲ್ಲಾ.

ನೆನಸಿಕೊಂಡರೇ ನಮ್ಮ ಅಂದಿನ ಮತ್ತು ಇಂದಿನ ಹಳ್ಳಿ ಹೈದಗಳು ಎಷ್ಟು ಹಿಂದೆ ಇದ್ದಾರೆ ಅನಿಸುತ್ತದೆ?

ಇಂದಿನ ಶಿಕ್ಷಣ ಎಂದರೇ ವ್ಯಕ್ತಿಯನ್ನು ಪರಿಪೂರ್ಣವಾಗಿ ಉನ್ನತವಾದ, ಹೆಚ್ಚು ದುಡಿಮೆಯಿರುವ ಕೆಲಸವನ್ನು ಗಿಟ್ಟಿಸಿಕೊಳ್ಳಲು ಇರುವ ಒಂದು ಕಾರ್ಯಕ್ರಮವನ್ನಾಗಿ ಮಾಡುತ್ತಿರುವಂತಿದೆ. ಹೇಗೆ ನಿಮ್ಮ ಹಣ ಮತ್ತು ಟೈಂ ನ್ನು ಇನ್ವೇಸ್ಟ್ ಮಾಡುತ್ತೀರೋ ಹಾಗೆ ಮುಂದೆ ರೀಟರ್ನಸ್ ಪಡೆಯುವ ಒಂದು ವ್ಯವಸ್ಥಿತ ಯೋಜನೆಯೇ?

ಅಂದಿನ ಶಿಕ್ಷಣ ವ್ಯವಸ್ಥೆಗೂ ಇಂದಿಗೂ ಎಷ್ಟೊಂದು ವ್ಯತ್ಯಾಸ ಅನಿಸುತ್ತದೆ. ಇಂದು ಎಲ್ಲರೂ ಓಡುತ್ತಿದ್ದಾರೆ ಅನಿಸುತ್ತದೆ. ಅಂದು ಸ್ನೇಹ - ಬಂದುತ್ವ ಮಧುರವಾಗಿರುತ್ತಿದ್ದವು.

ಇಂದು ಎಲ್ಲರೂ ಕೂಡಿ ಓದುವ ಮಕ್ಕಳ ಮಧ್ಯೆ ಆ ರೀತಿಯ ವಾತ್ಸಲ್ಯವನ್ನು ಕಾಣಬಹುದೇ? ಯಾಕೆಂದರೆ ಮನೆಯಲ್ಲಿ ಹೆತ್ತವರು 'ಏ ನೀನು ಅವನಿಗಿಂತ ಹೆಚ್ಚು ಅಂಕಗಳನು ಪಡೆಯಲೇ ಬೇಕು. ಅವನಿಗಿಂತ ಯಾವಾಗಲೂ ನೀನು ಮುಂದಿರಬೇಕು. ನೋಡು ಅವನು ಆ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡನಂತೆ. ನೋಡು ನೀನು ಏನು ಗಳಿಸಲಿಲ್ಲ.'

ಇತ್ಯಾದಿಯ ಕೇವಲ ಓಡುವ ಮಾತುಗಳನ್ನಾಡುತ್ತಿದ್ದರೆ.. ಈ ಮಗುವಾದರೂ ಏನು ಮಾಡಲು ಸಾಧ್ಯ. ಅದಕ್ಕೆ ತನ್ನವರು, ಗೆಳೆಯರು, ಸಂಬಂಧಿಕರುಗಳು, ನನ್ನವರು, ನನ್ನೂರು, ನನ್ನ ದೇಶ ಇತ್ಯಾದಿಯ ಒಂದು ಸಹಬಾಳ್ವೆಯ ಪರಿಕಲ್ಪನೆ, ಸಹಾಯ ಹಸ್ತದ ಮನಸ್ಸು ಎಲ್ಲಿಂದ ಬರಬೇಕು?

ಈ ಉರಿ ಬೇಸಿಗೆಯಲ್ಲಿ ಪ್ಲೀಸ್ ಯೋಚಿಸಿ ಶಿಕ್ಷಣ ಎಂದರೇ ಕೇವಲ ಅಂಕಗಳನ್ನು ಹೆಚ್ಚು ಮಾಡಿಕೊಳ್ಳುವುದೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ