ಶನಿವಾರ, ಏಪ್ರಿಲ್ 21, 2012

ಮನುಷ್ಯ ಜನ್ಮಕ್ಕೆ ತೃಪ್ತಿ..



ಏನೇನೋ ಆಸೆಯಿರುತ್ತದೆ. ಸಣ್ಣವಯಸ್ಸಿನಲ್ಲಿ ಮುಂದೆ ದೊಡ್ಡವರಾದ ಮೇಲೆ ಹೀಗೆ ಮಾಡಬೇಕು, ಹಾಗೆ ಮಾಡಬೇಕು. ಈ ರೀತಿಯ ಕನಸುಗಳನ್ನು ಕಂಡಿರುತ್ತೇವೆ. ಆದರೆ ಅವುಗಳನ್ನು ನನಸು ಮಾಡಿಕೊಳ್ಳಲು ಮುಂದುವರೆದಾಗ ಸಿಗುವ ಅಡಚಣೆಗಳು, ಕಷ್ಟಗಳು, ಅವಕಾಶಗಳು, ಸಮಯ ಇವುಗಳೆನ್ನೆಲ್ಲಾ ಆ ಸಮಯಕ್ಕೆ ಕಂಡಿರುವುದಿಲ್ಲ.

ಬರೀ ಕನಸು ಕಾಣುತ್ತೇವೆ. ಯಾರನ್ನಾದರೂ ನೋಡಿದರೆ ಅವನ ರೀತಿಯಲ್ಲಿ ಮತ್ತು ಅವನಿಗಿಂತ ಇನ್ನೂ ಚೆನ್ನಾದ ಜೀವನವನ್ನು ನಡೆಸಬೇಕು. ಅವನು ಸುತ್ತಿದ ದೇಶಕ್ಕಿಂತ ಜಾಸ್ತಿ ನಾನು ಸುತ್ತಬೇಕು. ಅವನು ಓದಿದ್ದಕ್ಕಿಂತ ಹೆಚ್ಚು ನಾನು ಓದಬೇಕು. ಅವನು ಸಂಪಾಧಿಸಿದಕ್ಕಿಂತ ಹೆಚ್ಚು ಗಳಿಸಬೇಕು ಹೀಗೆ ಬೇರೆಯವರನ್ನು ಅನುಸರಿಸುತ್ತಲೇ ನಮ್ಮ ಕನಸುಗಳ ಆಸೆ ಚಿಗುರು ಹೊಡೆಯುತ್ತದೆ.

ಏನನ್ನೂ ನೋಡದಿದ್ದರೆ ಏನೂ ಆಗುವುದಿಲ್ಲ ಅನಿಸುತ್ತದೆ. ಬೇರೆಯದರಿಂದ ಪ್ರೇರಣೆಯ ಮೊಸೆಯೆ ಈ ಕನಸು. ತನ್ನಲ್ಲಿ ಆ ಕ್ಷಣಕ್ಕೆ ಇಲ್ಲದ್ದನ್ನು ಮುಂದೆ ಪಡೆಯುಲು ಮನಸ್ಸು ಮಾಡುವುದಾಗಿದೆ.

ಕನಸು ಅಂದರೇ ಅದು ಯಾವಾಗಲೂ ತನಗೆ ಮಾತ್ರ ಸಂಬಂಧಿಸಿದ ಅತಿ ಶ್ರೇಷ್ಠವಾದ ಏನೇ ವಸ್ತು, ಸಂಗತಿ, ದಾರಿಯಾಗಿರುತ್ತದೆ.

ಅದೇ ನಿತ್ಯ ಜೀವನಕ್ಕೆ ಒಂದಷ್ಟು ಉತ್ಸಾಹವನ್ನು ಕೊಡುವುದು. ಯಂತ್ರಕ್ಕೆ ಹೇಗೆ ಇಂಧನವೋ ಆ ರೀತಿ ನಮ್ಮ ದೇಹ ಚಟುವಟಿಕೆಗೆ ಚಟಪಟಿಕೆಯ ಟಾನಿಕ್.

ಏನನ್ನಾದರೂ ಪಡೆಯಬೇಕು ಎಂದರೇ ಏನನ್ನಾದರೂ ಮಾಡಲೇ ಬೇಕು. ಇಲ್ಲವಾದರೇ ಏನೊಂದು ಕೈಗೆ ಸಿಗಲಾರದು. ಅದು ಸರಿಯಿರಲಿ ತಪ್ಪಿರಲಿ ಆ ಗುರಿಯನ್ನು ತಲುಪಬೇಕಾದರೇ ಮುಂದಡಿ ಹೆಜ್ಜೆಯನ್ನು ಇಡಲೇ ಬೇಕು.

ಕನಸು ಸವಿಯಾಗಿರುತ್ತದೆ. ಬೇರೆಯವರನ್ನು ನೋಡಿದಾಗ ಅವನಾಗೆಯೇ ಆಗಬೇಕು ಎಂಬುದನ್ನು ಅರಿತ ಮೇಲೆ ಅದಕ್ಕಾಗಿ ಹೋರಾಡುತ್ತಲೆ ಇರುತ್ತೇವೆ. ಆಸೆ ಪಟ್ಟು ಅದಕ್ಕಾಗಿ ಎಲ್ಲಾ ರೀತಿಯಿಂದ ಸರ್ವ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ.

ಯಾರೊಬ್ಬರೂ ತಮ್ಮ ಬದುಕಿನಲ್ಲಿ ಎಂದು ಡೌನ್ ಥಿಂಕ್ ಮಾಡುವುದಿಲ್ಲ. ತನ್ನ ಸಾಮರ್ಥ್ಯಕ್ಕೆ ಸಮನಾಗಿ ತನಗೆ ಎಟಕುವ ಎಲ್ಲಾ ಪಲಭರಿತ ಮಾವಿನ ಹಣ್ಣುಗಳನ್ನು  ಪಡೆದೆಪಡೆಯುತ್ತಾನೆ.


ಇದೇ ಮಾನವನ ಶ್ರೇಷ್ಠತೆಯನ್ನು ಸಾರುತ್ತದೆ. ತನಗೇ ಯಾವುದು ಬೇಕು ಎಂಬುದನ್ನು ಪ್ರತಿಯೊಂದು ಜೇವಿಯು ಕಂಡುಕೊಳ್ಳುವುದೋ.. ಅದೇ ರೀತಿಯಲ್ಲಿ ತನಗೆ ತನ್ನ ಏಳ್ಗೆಗೆ ಏನೇನೂ ಬೇಕು ಎಂಬುದನ್ನು ಮನುಷ್ಯ ಜೀವಿ ಜೀವನ ಪರ್ಯಾಂತ ನೋಡುತ್ತಲೆ ಇರುತ್ತಾನೆ.

ತನ್ನ ಪ್ರಯತ್ನದಲ್ಲಿ ಆ ಸಮಕ್ಕೆ ಸಿಕ್ಕ ಅವಕಾಶದಲ್ಲಿ ಗೆಲುವು ಕಂಡರೆ ಸಂತಸಪಟ್ಟು ಮುಂದಿನ ಹೆಚ್ಚಿನ ಶ್ರೇಷ್ಠವಾದ ನೆಲೆಯನ್ನು ದಿಟ್ಟಿಸುತ್ತಾನೆ. ವಿಫಲವಾದರೇ ಅದೇ ಅವನಿಗೆ ಅನುಭವ ಪಾಠವಾಗುತ್ತದೆ. ಮತ್ತೇ ಅದನ್ನೇ ಬೇರೊಂದು ಜಾಣ್ಮೆಯಿಂದ ಪ್ರಯತ್ನಿಸಿ ಅದರಲ್ಲಿ ಗೆಲುವನ್ನು ಪಡೆಯುತ್ತಾನೆ.

ಒಂದೇ ಭಾರಿಗೆ ತಾನು ಎಂದು ಸೋಲುವ ಮನಸ್ಸು ಮಾಡುವುದಿಲ್ಲ. ಅದಕ್ಕೆ ಕಾರಣ ಎಲ್ಲಾ ಜೀವಿಗಳಿಗಿಂತ ವಿಭಿನ್ನವಾದ ಬುದ್ಧಿವಂತಿಕೆಯನ್ನು ನೈಸರ್ಗಿಕವಾಗಿ ಪಡೆದಿರುವುದು.

ತನ್ನ ಜೀವಿತ ಅವಧಿಯಲ್ಲಿ ಉನ್ನತವಾದ ದರ್ಶನವನ್ನು ಕಂಡೂಂಡು ಮುಂದಿನ ಪೀಳಿಗೆಗೆ ಕೊಡುವ ಕೊಂಡಿಯನ್ನು ತನ್ನಲಿ ಹುದುಗಿಸಿಟ್ಟುಕೊಂಡಿದ್ದಾನೆ.

ರಾಗ, ದ್ವೇಷ, ಪ್ರೀತಿಯ ಭಾವನೆಗಳ ತೊಳಲಾಟದಲ್ಲಿ ತನ್ನ ಆಸೆಯ ಅಂಕುರವನ್ನು ಸಾಧಿಸಿಕೊಳ್ಳಲು ನಿತ್ಯ ಓಡುತ್ತಲೆ ಇರುತ್ತಾನೆ.

ಗಮನಿಸಿ ಎಂದಿಗೂ ಈ ನಮ್ಮ ಮನುಷ್ಯ ಜನ್ಮಕ್ಕೆ ತೃಪ್ತಿ ಅನ್ನುವುದೇ ಇಲ್ಲ. ಇಂದು ಈ ಎತ್ತರದ ಜಾಗಕ್ಕೆ ಬಂದಿದ್ದರೂ. ಮತ್ತೆ ಅವನಿಗೆ ಚಿಂತೆ ಇದಕ್ಕಿಂತ ಎತ್ತರದಲ್ಲಿರುವ ಆ ತುದಿಗೆ ಯಾವಾಗ ನಡೆಯುವೆನೂ ಎಂದು. ಅದೇ ಅವನನ್ನು ಅಲ್ಲಿ ನಿಲ್ಲಲಾರದನಾಗಿ ಮಾಡುತ್ತದೆ.

ಇಷ್ಟು ಸಾಕು ಎಂಬ ಮನಸ್ಸು ಆಸೆ ಬಂದ ದಿನವೆ ಅವನ ಅಂತ್ಯ ಅನಿಸುತ್ತದೆ. ಇದೇ ಜೀವಿಯ ಪ್ರಾಣ ಅನಿಸುತ್ತದೆ. ಅದು ತನ್ನ ಉಸಿರಾಗಿ ಯಾವಾಗಲೂ ಕಾಡುತ್ತದೆ. ಮತ್ತು ಕಾಡುತ್ತಲೆ ಇರುತ್ತದೆ. ಇರಲೇಬೇಕು. ಆಗಲೇ ನೆಲೆ ಮತ್ತು ಬೆಲೆ!

ಅದಕ್ಕಾಗಿಯೇ ಯಾವ ರೀತಿಯ ಕಷ್ಟ ನಷ್ಟ, ನೋವು ನಲಿವು ಬಂದರೂ ಅವನ ಮನಸ್ಸಿನಲ್ಲಿರುವ ಆ ಒಂದು ಗುರಿಯನ್ನು ಸೇರುವವರೆಗೂ ನೆಮ್ಮದಿಯೇ ಇಲ್ಲವದನಂತೆ ಬದುಕಬೇಕಾಗುತ್ತದೆ.

ಗೆಲಿವಿನ ನಲಿವು ಕ್ಷಣಿಕ ಅಂತೆ! ಹೌದು ಅಲ್ಲಿ ಬಹುಕಾಲ ನಿಲ್ಲುವುದಕ್ಕೆ ಸಾಧ್ಯವಿಲ್ಲ. ಮತ್ತೆ ಮುಂದಿನ ಗುರಿ ಮುಂದಿನ ಯೋಜನೆಯ ಹಿಂದೆ ನಡೆಯಬೇಕು. ಆಗಲೇ ಒಂದು ಸಾರ್ಥಕತೆ. ಸಕ್ಸ್ ಸ್ ಫುಲ್ ವ್ಯಕ್ತಿ ಇಂದಿನ ಸಕ್ಸ್ ಸ್ ಇಂದೇ ಮರೆಯಬೇಕು. ಹಳೆಯದನ್ನೇ ಪುನಃ ಪುನಃ ಮೆಲುಕು ಹಾಕುತ್ತಾ ಕುರಲಾರನು. ಹೊಸ ಹೊಸ ಆಸೆಯ ಹಿಡೆರಿಕೆಗೆ ಅಣಿ ಇಡಬೇಕು.

ಇದೇ ಒಂದು ನಿತ್ಯ ಕಾಯಕವಾಗಿರುತ್ತದೆ. ತಿನ್ನುವುದು ಬದುಕುವುದು ಎಲ್ಲಾ ಜೀವಿಗಳ ಕಥೆಯಾದರೇ ಈ ಮಾನವನ ಬದುಕೇ ವಿಭಿನ್ನ! ನೋಡಿ ಹೇಗೆಲ್ಲಾ ಇದ್ದ ನಮ್ಮ ಪೂರ್ವಿಕರು ಇಂದು ಈ ಮಟ್ಟಕ್ಕೆ ಇದ್ದೇವೆ ಎಂದರೇ ಆ ತುಡಿತದ ಕನಸಿನ ತಂತು ಹೇಗೆಲ್ಲಾ ಹರಿದುಕೊಂಡು ಇಂದಿನವರೆಗೂ ಬಂದಿದೆ.

ಇದು ಹೀಗೆ ಸಾಗುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುತ್ತಲೆ ಇರುತ್ತದೆ. ಇರಲೇ ಬೇಕು!

ಕನಸನ್ನು ಕಾಣಿ. ಕಸುವನ್ನು ತೆಗೆದುಕೊಂಡು ಹಿಡೇರಿಸಿಕೊಳ್ಳಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ