ಬುಧವಾರ, ಮಾರ್ಚ್ 7, 2012

ರಂಗು ರಂಗಿನ ಹೋಳಿ!!

ಹೋಳಿ ಹಬ್ಬ ರಂಗು ರಂಗಿನ ವೈವಿಧ್ಯಮಯವಾದ ಹಬ್ಬವಾಗಿದೆ. ಭಾರತದಲ್ಲಿ ಬಹುಭಾಗ ಹೆಚ್ಚಾಗಿ ಉತ್ತರ ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಒಂದು ಹಬ್ಬವಾಗಿದೆ.

ಕಾಮನ ಹುಣ್ಣಿಮೆಯ ನಂತರ ಬರುವ ಬಣ್ಣದ ಹಬ್ಬ. ಕಾಮನ ಹುಣ್ಣಿಮೆಯ ರಾತ್ರಿ ಕಾಮನ ಪ್ರತಿಕೃತಿಯನ್ನು ಬೆಂಕಿಯಲ್ಲಿ ಸುಡುವ ಮೊಲಕ ಈ ಹಬ್ಬಕ್ಕೆ ಮುನ್ನುಡಿಯನ್ನು ಬರೆಯುತ್ತಾರೆ. ಮುಂಜಾನೆ ತಂದಿರುವ ತರವೇರಿ ಬಗೆಯ ಎಲ್ಲ ಬಣ್ಣಗಳ ಹೋಕಳಿಯನ್ನು ಪರಸ್ಪರ ಎರಚುವ ಮೊಲಕ ವಿವಿಧತೆಯಲ್ಲಿ ಏಕತೆಯನ್ನು, ಸಾಮರಸ್ಯವನ್ನು, ಪರಸ್ಪರರ ನಗೆಯಲ್ಲಿ, ಸಂತಸವನ್ನು ಅನುಭವಿಸುತ್ತಾರೆ.

ಮಕ್ಕಳಿಗಂತೂ ಕೇಳುವುದೇ ಬೇಡ! ವಿವಿಧ ಬಗೆಯಲ್ಲಿ ಒಂದು ವಾರದಿಂದ ಈ ಹಬ್ಬಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ನಾನ ಬಗೆಯ ಬಣ್ಣಗಳ ಪುಡಿಯನ್ನು ಖರೀದಿಸುವುದು. ಯಾರ್ಯಾರಿಗೆ ಈ ಬಣ್ಣವನ್ನು ಅಂದು ಎರಚಬೇಕು ಎಂದು ಲೆಕ್ಕಾಚಾರವನ್ನು ಮಾಡುತ್ತಾರೆ.

ನಮ್ಮ ಎಲ್ಲಾ ಸೀನಿಮಾಗಳಲ್ಲಿ ಹೋಳಿಯ ಬಣ್ಣವನ್ನು ಎರಚುವ ಸೀನ್ ಗಳಂತೂ ಹೇರಳವಾಗಿ ನಮಗೆ ತೋರಿಸಿದ್ದಾರೆ. ಈ ಹಬ್ಬ ಪ್ರಿಯಕರನಿಗೆ ತನ್ನ ಪ್ರೇಯಸಿಯನ್ನು ಕಾಣುವ ದಿನವಾಗಿರುತ್ತದೆ. ಪ್ರೇಯಸಿಗೆ ಗೊತ್ತಿಲ್ಲದ ರೀತಿಯಲ್ಲಿ ಬಣ್ಣದ ಸ್ನಾನ ಮಾಡಿಸುವ ದೃಶ್ಯ. ಬಣ್ಣವನ್ನು ಹಚ್ಚುವ ಮೊಲಕ ಪ್ರೇಯಸಿಯ ಮುಖವನ್ನು ಸ್ಪರ್ಷಿಸುವ ಸದಾವಕಾಶ ಇದಾಗಿರುತ್ತದೆ. ಪ್ರೇಯಸಿಯ ಜೊತೆಯಲ್ಲಿ ಬಣ್ಣದಲ್ಲಿ ಮಿಂದು ಒಂದು ಹೋಳಿಯ ಡ್ಯುಯಟ್ ಸಾಂಗ್ ನಲ್ಲಿ ನರ್ತಿಸುವುದು.. ಇತ್ಯಾದಿಯಾಗಿ ಎಲ್ಲಾ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲಿ ಈ ಹಬ್ಬವನ್ನು ಧಾರಳವಾಗಿ ಬಳಸಿಕೊಂಡು ಚಿತ್ರದ ಜಯವನ್ನು ಕಂಡಿದ್ದಾರೆ.

ಅಷ್ಟರ ಮಟ್ಟಿಗೆ ಈ ಹಬ್ಬಕ್ಕೆ ರಂಗು ಮೆತ್ತಿಕೊಂಡಿದೆ.

ಬಣ್ಣಗಳನ್ನು ಇಷ್ಟಪಡದವರು ಯಾರು ಇದ್ದಾರೆ ಹೇಳಿ?

ಪ್ರತಿಯೊಬ್ಬರೂ ತಮ್ಮ ಜೀವನವನ್ನು ಕಲರ್ ಫುಲ್ ಆಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ.




ಈ ಕಾಮನಬಿಲ್ಲಿನ ಏಳು ಬಣ್ಣಗಳಲ್ಲಿಯೇ ಒಂದು ಮರ್ಮವಿದೆ. ಒಂದೊಂದು ಬಣ್ಣವನ್ನು ಸಮಪ್ರಮಾಣದಲ್ಲಿ ಸೇರಿಸಿದರೇ ಮತ್ತೊಂದು ಬಣ್ಣದ ಹುಟ್ಟು. ಎಲ್ಲಾ ಬಣ್ಣಗಳ್ಳು ಸೌಮ್ಯವಾಗಿ ಸೇರಿದರೇ ಹಚ್ಚ ಹಾಲು ಬಿಳುಪು ಬಣ್ಣ. ಬಿಳಿ ಬೆಳಕನ್ನು ಒಂದು ಕೋನದಲ್ಲಿ ಗಾಜಿನಲ್ಲಿ ತೋರಿಸಿದರೇ ಎಲ್ಲಾ ಏಳು ಬಣ್ಣಗಳನ್ನು ಕಾಣಬಹುದು. ಗೊತ್ತಿಲ್ಲದ ರೀತಿಯಲ್ಲಿ ಬಿಳುಪು ಬಣ್ಣ ತನ್ನಲ್ಲಿಯೇ ಇಂಥ ಚಿತ್ತಾರವನ್ನು ಬಚ್ಚಿಟ್ಟುಕೊಂಡಿರುತ್ತದೆ. ಒಂದೊಂದು ಬಣ್ಣವು ಒಂದೊಂದು ರೀತಿಯಲ್ಲಿ ಮನಸ್ಸಿಗೆ ಮುದ ನೀಡುವಂತದ್ದು.

ಪ್ರಕೃತಿಯಲ್ಲಿ ನಾವುಗಳು ಕಾಣುವ ಪ್ರತಿಯೊಂದು ದೃಶ್ಯಗಳು ಸುಂದರ ಹೋಳಿಯ ಹಬ್ಬವನ್ನು ನೆನಪಿಸುವುದು. ಇದನ್ನು ಸೃಷ್ಟಿಸಿದ ಆ ಕತೃಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು! ನೋಡಿ ನಾವು ಕಾಣುವ ಆ ಸೊರ್ಯನನ್ನು ಮುಂಜಾನೆಯಲ್ಲಿ ಅವನು ಹೊಳೆಯುವ ಬಂಗಾರದ ಬಣ್ಣ, ಸಂಜೆಯ ಕೆಂದೂಳು. ಈ ಬಗೆಯಲ್ಲಿ ತನ್ನ ಬಣ್ಣವನ್ನು ಕ್ಷಣ ಕ್ಷಣ್ಕೊ ಬದಲಾಯಿಸುತ್ತಾ ಜಗತ್ತಿಗೆ ಬೆಳಕನ್ನು ನೀಡುತ್ತಾನೆ.

ಸಸ್ಯ ಪ್ರಬೇಧದಲ್ಲಿರುವ ವಿಭಿನ್ನವಾದ ಸಸ್ಯ ಸಂಕೋಲ ಮತ್ತು ಅವುಗಳ ಹೊವುಗಳನ್ನು ಯಾರೂ ಪುನರೊಪಿಸಲೂ ಸಾಧ್ಯವಿಲ್ಲ. ಆ ಚಿತ್ತಾರದ ಹೊವುಗಳನ್ನು ನೋಡುವುದೇ ನಮ್ಮ ಕಣ್ಣುಗಳಿಗೆ ದಿವ್ಯ ಭಾಗ್ಯ! ಅವುಗಳ ಅಲಂಕಾರವೇ ಪ್ರಕೃತಿ ಮಾತೆಯ ಕಣ್ಣಾಗಿ ಕಾಣಿಸುತ್ತದೆ.

ಆ ಹೊವುಗಳು ನಮಗೇ ಮಾತ್ರ ಎಂಬ ರೀತಿಯಲ್ಲಿ ಅವುಗಳ ಮಕರಂಧವನ್ನು ಹೀರಲು ಬರುವ ದುಂಬಿ ಸಂಕುಲಗಳ ಪರಿ ಪರಿ ರಂಗು ರಂಗಿನ ರೆಕ್ಕೆಗಳ ಚಿತ್ತಾರದ ಜಾದು ಯಾವ ಮಹಿಮನ ಕಾರ್ಯವೋ ಬಲ್ಲವನೇ ಬಲ್ಲ ಕಣ್ರೀ!

ಇದು ಒಂದು ರೀತಿಯಲ್ಲಿ ಪ್ರಕೃತಿಯ ಹಬ್ಬವೇ ಸರಿ. ಅತ್ಯಂತಹ ಸನೀಹದಿಂದ ಪ್ರತಿಯೊಂದು ಬಣ್ಣವನ್ನು ನಮ್ಮಗಳ ಮೇಲೆ ಎರಚಿಕೊಂಡು ನಾವುಗಳು ಪಡುವ ಸಂಭ್ರಮವೇ ನಾವೆಲ್ಲಾ ಪ್ರಕೃತಿಯ ಮಕ್ಕಳು. ಎಂದು ನಮ್ಮನ್ನು ನಾವುಗಳು ಪುನರ ಮನನ ಮಾಡಿಕೊಂಡಂತೆ ಅಲ್ಲವಾ?

ಕಾಮನ ಬಲಿ ಎಂದರೇ ನಮ್ಮಗಳ ಎಲ್ಲಾ ದುರಾಸೆ, ದುಃಖ ದುಮ್ಮಾನಗಳು, ಕೆಟ್ಟತನಗಳನ್ನು ಕಳಚಿಕೊಂಡು ಏಳು ಬಣ್ಣಗಳ ರೀತಿಯಲ್ಲಿ ಏಳು ಗುಣಗಳ ಏಕೀಕರಣವೇ ಈ ಹಬ್ಬದ ಆಚರಣೆ. ಇಲ್ಲಿ ಎಲ್ಲಾ ವಯೋಮಾನದ ಎಲ್ಲಾ ವರ್ಗದವರು ಈ ಬಣ್ಣಗಳ ಜೊತೆಯಲ್ಲಿ ಒಂದೇ ಎಂದು ಭಾವಿಸುವಂತಾಗಿದೆ.

ಕಲೆಗಾರನಿಗೆ ಬಣ್ಣಗಳೇ ಜೀವಾಳ ಅವುಗಳಲ್ಲಿಯೇ ಮೈದುಂಬಿಬರುವಂತಹ ಚಿತ್ರಗಳನ್ನು ರಚಿಸುವವನು. ಒಂದೊಂದು ಬಣ್ಣವನ್ನು ಒಂದೊಂದು ಭಾವನೆಯನ್ನು ತೋರಿಸಲು ಜಾಣ್ಮೆಯಿಂದ ಉಪಯೋಗಿಸುವವನು. ಬಣ್ಣಗಳ ಮಹತ್ವ ಅವನಿಗೆ ಮಾತ್ರ ಸರಿಯಾಗಿ ಗೊತ್ತು ಅನಿಸುತ್ತದೆ.

ಪ್ರತಿಯೊಬ್ಬರು ಒಂದೊಂದು ಬಣ್ಣವನ್ನು ಮೆಚ್ಚುವರು. ಆ ಮೆಚ್ಚುಗೆ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತೆ,ಇದರ ಮೊಲಕ ಆ ವ್ಯಕ್ತಿಯ ಅಭಿರುಚಿಯನ್ನು ಮನೋವಿಙ್ಞಾನಿಗಳು ಕಂಡುಕೊಳ್ಳುವವರು.

ಹೀಗೆ ನಮ್ಮ ಜೀವನದಲ್ಲಿ ಬಣ್ಣಗಳೇ ತುಂಬಿಕೊಂಡಿದೆ. ಹೊಸತನದ ಹೋಳಿ ಯಾವಾಗಲೂ ನಿತ್ಯ ಚಾಲ್ತಿಯಲ್ಲಿರುತ್ತದೆ. ಬದಲಾವಣೆ ಎಂದರೇ ಬೇರೊಂದು ಬಣ್ಣದ ವಸ್ತು, ಜಾಗ, ನೋಟವಾಗಿದೆ ಅಲ್ಲವಾ? ಇದೆ ನಮಗೆ ನಮ್ಮ ಮನಸ್ಸಿಗೆ ಒಂದು ನೆಮ್ಮದಿಯನ್ನು ಕೊಡುವಂತಾಗಿದೆ. ಹಚ್ಚ ಹಸಿರು ಎಲೆಗಳನ್ನು ತುಂಬಿರುವ ದೃಶ್ಯವನ್ನು ಕಲ್ಪಿಸಿಕೊಳ್ಳಿ ಎಷ್ಟರ ಮಟ್ಟಿಗೆ ನೆಮ್ಮದಿಯನ್ನು ನಾವುಗಳು ಪಡೆಯುತ್ತೇವೆ ಅಲ್ಲವಾ?

ಹಾಗೆಯೇ ಬಿಳುಪು ಕೊಡುವ ಶಾಂತಿಯನ್ನು ಯಾವುದಾದರೂ ಕೊಡಲು ಸಾಧ್ಯವೇ ಕಲ್ಪಿಸಿಕೊಳ್ಳಿ.. ಸಾಧ್ಯವಿಲ್ಲ!

ಕೆಂಪು ಎಂದರೇ ಹೆದರಿಕೆ, ಭಯದ ಸಂಕೇತವೇನೋ ಸರಿ. ರಕ್ತವನ್ನು ಕಂಡರೇ ಸ್ವಲ್ಪ ಮಂದಿ ಹಾಗೆಯೇ ಮೂರ್ಚೆ ಹೋಗುವಷ್ಟರ ಮಟ್ಟಿಗೆ ಒಂದೊಂದು ಬಣ್ಣಗಳ ಅಲರ್ಜಿಯು ನಮ್ಮಲ್ಲಿ ಉಂಟು!

ನಮ್ಮ ತರುಣರಿಗೆ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳಲು ಒಂದೊಂದು ಕಲರ್ ಗುಲಾಬಿ ಹೊವುಗಳೇ ಬೇಕು. ಅದೂ ಪ್ರೇಮಿಗಳ ದಿನದಂದು, ಈ ಹೊವುಗಳಿಗೆ ಫುಲ್ ಡಿಮ್ಯಾಂಡ್!

ಮ್ಯಾಚಿಂಗ್ ಕಲರ್, ಮ್ಯಾಚಿಂಗ್ ಸೀರೆ, ಮ್ಯಾಚಿಂಗ್ ಲಿಫಸ್ಟಿಕ್, ಐಶೇಡ್ಸ್, ಬ್ಯಾಗ್ಸ್,ಚಪ್ಪಲಿ ಇತ್ಯಾದಿಯಾಗಿ ನಮ್ಮ ಮಹಿಳೆಯರಿಗೆ ವಿವಿಧ ಬಣ್ಣದ ವಿವಿಧ ರೀತಿಯ ತಾವು ಧರಿಸುವ ಪ್ರತಿಯೊಂದು ವಸ್ತುವನ್ನು ಎಣಿಸಿ ತಮ್ಮದಾಗಿಸಿಕೊಳ್ಳುತ್ತಾರೆ. ಆ ರೀತಿಯಲ್ಲಿ ಹೆಚ್ಚು ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಲು ನಿತ್ಯ ತವಕಿಸುತ್ತಾರೆ.




ಒಂದೊಂದು ಬಣ್ಣದ ಒಂದೊಂದು ಹರಳನ್ನು ಧರಿಸಿದರೇ ಒಂದೊಂದು ರೀತಿಯಲ್ಲಿ ನಮ್ಮ ಜಾತಕ, ಜ್ಯೋತಿಷ್ಯವೇ ಬದಲಾಗುತ್ತದಂತೇ? ಇದೇ ಒಂದು ವ್ಯಾಪಾರವಾಗಿದೆ ಇಂದಿನ ದಿನಗಳಲ್ಲಿ.

ಗಮನಿಸಿ ನಮ್ಮ ನಿತ್ಯ ಬದುಕು ಪರಿಪೂರ್ಣವಾಗಿ ಕೇವಲ ಈ ಬಣ್ಣಗಳಲ್ಲಿಯೇ ಹುದುಗಿದೆ.

ಆದ್ದರಿಂದ ಸಡಗರದಿಂದ ರಂಗು ರಂಗಿನ ಹೋಳಿಯನ್ನು ಆಚರಿಸಿ, ಯಾರ್ಯಾರಿಗೆ ಯಾವ ಯಾವ ಬಣ್ಣವನ್ನು ಯಾವ್ಯಾವ ರೀತಿಯಲ್ಲಿ ಹಾಕುವಿರಿ?

ಹ್ಯಾಪಿ ಹೋಳಿ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ