ಭಾನುವಾರ, ಮಾರ್ಚ್ 18, 2012

ಹೊಸ ಹೊಸ ಮನ್ವಂತರಕ್ಕೆ

ಕಾಲಾಯಾ ತಸ್ಮಯಾ ನಮ:!

ಈ ರೀತಿಯಲ್ಲಿ ದಿನಗಳು ಎಷ್ಟು ಬೇಗ ಬೇಗ ಕಳೆದು ಹೋಗುತ್ತವು ನಮಗಂತೂ ಗೊತ್ತಾಗುವುದಿಲ್ಲ. ನೆನ್ನೆ ಮೊನ್ನೆ ಎಂದದ್ದು ಆಗಲೇ ತಿಂಗಳು, ವರುಷಗಳಾಗಿರುತ್ತವೆ.

ಪ್ರತಿಯೊಬ್ಬರಿಗೆ ಪತಿಭಾರಿ ತಪ್ಪದ ರೀತಿಯಲ್ಲಿ ತಾನು ಜನಿಸಿದ ದಿನ ಬರುತ್ತದೆ. ಒಂದು ವರುಷ ಹೆಚ್ಚಾಗಿ ತನ್ನ ವಯಸ್ಸಿಗೆ ಸೇರಿಕೊಳ್ಳುತ್ತದೆ. ಜೀವಕ್ಕೆ ಒಂದು ವರುಷ ಹೆಚ್ಚಾಗಿ ವಯಸ್ಸಾಗುತ್ತದೆ. ಒಂದು ಕಡೆ ಅಪ್ತರು ಜನ್ಮ ದಿನದ ಶುಭಾಶಯಗಳನ್ನು ಹೇಳುತ್ತಾರೆ. ಇದನ್ನು ಖುಷಿಯಿಂದ ಆಚರಿಸಬೇಕೋ? ಏನೋ? ಗೊತ್ತಿಲ್ಲಾ?ಇದೇ ಜೀವನ.

ಕಳೆದ ದಿನಗಳ ರೀತಿಯಲ್ಲಿ ಇಂದು ಮತ್ತು ಮುಂದೆ ಬರುವ ದಿನಗಳು ಇರುವುದಿಲ್ಲ. ದೇಹಕ್ಕೆ ವಯಸ್ಸೆಂಬುದು ಬಿಡದೇ ಕಾಡುವ ನಿತ್ಯ ಸಂಗಾತಿ. ಹದಿಹರೆಯದ ಶಕ್ತಿ, ಸಡಗರ, ಬೆರಗು ದಿನಗಳದಂತೆ ಎಲ್ಲಿ ಹೋಗುತ್ತದೋ ಗೊತ್ತಾಗುವುದಿಲ್ಲ. ದೇಹದ ನೋಟದಲ್ಲಿ ಅದನ್ನು ಧಾರಾಳವಾಗಿ ಕಾಣಬಹುದು. ಅದನ್ನು ಯಾವ ರೀತಿಯಲ್ಲಿ ಬಚ್ಚಿಡಲು ಆಗುವುದಿಲ್ಲ. ಅದರೇ ಮನಸ್ಸನ್ನು ಮನಸ್ಸು ಮಾಡಿದರೇ ಇನ್ನೂ ಹದಿನೆಂಟರ ಯುವಕನಂತೆ/ಯುವತಿಯಂತೆ ಇಟ್ಟುಕೊಳ್ಳಬಹುದು. ಅದು ನಾವುಗಳು ಯೋಚಿಸುವ ರೀತಿಯ ಮೇಲೆ ನಿಂತಿರುತ್ತದೆ.

ನಿತ್ಯ ಜೀವನದ ಚಕ್ರದಲ್ಲಿ ಎಷ್ಟೊಂದು ಮಂದಿಗಳು ಹತ್ತಿರ ಬರುತ್ತಿರುತ್ತಾರೆ. ಅಷ್ಟೆ ಮಂದಿಗಳು ದೂರ ಸರಿಯುತ್ತಿರುತ್ತಾರೆ.

ಒಂದು ವರುಷದ ಹಾದಿಯಲ್ಲಿ/ಕೊನೆಯಲ್ಲಿ ಬಂದು ನಿಂತು ಗಮನಿಸಿದಾಗ ನಮಗೆ ಗೊತ್ತಾಗುತ್ತದೆ, ಎಷ್ಟು ಮಂದಿಗಳನ್ನು ಅಪ್ತರನ್ನಾಗಿ ಮಾಡಿಕೊಂಡಿರುತ್ತೇವೆ. ಎಷ್ಟು ಮಂದಿಗಳನ್ನು ನಮ್ಮ ನಡಾವಳಿ, ನಮ್ಮ ಚಿಕ್ಕತನ, ನಮ್ಮ ದುಷ್ಟತನ, ನಮ್ಮ ಸ್ವಭಾವದಿಂದ ದೂರ ಮಾಡಿಕೊಂಡಿರುತ್ತೇವೆ. ನಮ್ಮದೇಯಾದ ಯಾವುದೋ ಒಂದು ಕೊಂಕು ಮಾತು ಜೀವಕ್ಕೆ ಜೀವವಾದವರನ್ನೂ ಶಾಶ್ವತವಾಗಿ ಬೇರೆ ಮಾಡಿಕೊಂಡಿರುತ್ತೇವೆ.

ಮೊನ್ನೆ ಕಳೆದ ಸಿಹಿ ಕ್ಷಣಗಳು ಇಂದು ವಿಷದ ನೆನಪಾಗಿ ಕಾಡುತ್ತವೆಯಲ್ಲಾ.. ಅನ್ನಿಸುತ್ತದೆ...

ಅಂದು ನಾನೇ ಒಂದು ಹೆಚ್ಚಿಗೆ ಮಾತನ್ನಾಡದೇ ನಾನೇ ಮೌನವಹಿಸಿ ಇರಬೇಕಾಗಿತ್ತು. ನಿತ್ಯ ಸಂಗಾತಿಯಾಗಿದ್ದಾ ಆ ನನ್ನ ಗೆಳೆಯ/ಗೆಳತಿಯನ್ನು ಇಂದು ಹೇಗೆ ಮುಖಾತಾಃ ನೋಡುವುದು ದೇವನೇ!! ಎಂಬ ನಿಟ್ಟುಸಿರು. ಆದರೇ ಮಿಂಚಿ ಹೋದ ಆ ಕ್ಷಣವನ್ನು ಪುನಃ ಹೇಗೆ ವಾಪಸ್ಸು ತರುವುದು ಗುರು?

ಹೀಗೆ ಗೊತ್ತಾಗದ ಸಮಯದಲ್ಲಿ ನಮ್ಮ ಬಳಿ ಸುಳಿದ ಎಂಥೆಂತಹ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ದಿಕ್ಕೆಟ್ಟು ಪರಿತಪಿಸಿರುತ್ತೇವೆ. ಅಂಥ ಸುವರ್ಣವಕಾಶಕ್ಕಾಗಿ ಜೀವನಪರ್ಯಂತಾ ಪುನಃ ಕಾಯಬೇಕಾಗುತ್ತದೆ.




ನಮ್ಮ ಬದುಕಿಗೆ ಒಂದು ಚಿಕ್ಕದಾದ ಸಹಾಯ ಮಾಡುವ ಚೈತನ್ಯವಿದ್ದರೂ.. ಯಾವುದೋ ದುರಾಸೆಯಿಂದ, ಯಾವುದೋ ಬಿಗುಮಾನದಿಂದ ಹತ್ತಿರದವಾರದ ನಮ್ಮವರಿಗೆ ಏನೂ ಮಾಡದವರಾಗಿರುತ್ತೇವೆ. ಆ ಸಮಯಕ್ಕೆ ಅವನೇನೂ ನಿತ್ಯ ನಮ್ಮ ಸಹಾಯ ಕೇಳಲಾರ. ನಿತ್ಯ ನಮ್ಮ ಮನೆಗೆ ಬರಲಾರರು. ಯಾವುದೋ ಒಂದು ಕೆಟ್ಟ ಘಳಿಗೆಯ ಕಾರಣದಿಂದ ನಮ್ಮ ಕಡೆಗೆ ಸಹಾಯ ಹಸ್ತವನ್ನು ಚಾಚಿರುತ್ತಾನೆ ಎಂಬ ಸಮಾನ್ಯ ಙ್ಞಾನವನ್ನು ಉಪಯೋಗಿಸಿ ಯೋಚಿಸಿರುವುದಿಲ್ಲ.

ಜೀವನವೆಂಬ ಪಾಠಶಾಲೆಯಲ್ಲಿ ಪ್ರತಿ ಕ್ಷಣವು ಹೊಸ ಹೊಸ ಪರೀಕ್ಷೆಯನ್ನು ನಮ್ಮ ನಮ್ಮಲ್ಲಿಯೇ ಎದುರಿಸಬೇಕಾಗಿರುತ್ತದೆ. ಆ ಪರೀಕ್ಷೆಯಲ್ಲಿ ಹೇಗೆ ಹೇಗೆ ಹಿಂದಿನ ಅನುಭವದ ಸಾರವನ್ನು ಅನುಸರಿಸಿ ಹೇಗೆ ಪಾಸು ಮಾಡುತ್ತೇವೆ ಎಂಬುದು ನಮ್ಮ ಯಶಸ್ಸು, ಸಾಧನೆಗಳೇ ಪ್ರಮಾಣ ಪತ್ರಗಳಾಗಿರುತ್ತವೆ.

ಯಾರ್ಯಾರೊದೋ ಅಸರೆಯಿಂದ ಯಾವ್ಯಾವೋ ಆಸೆಗಳನ್ನು ಕನಸುಗಳನ್ನು ಹಿಡೆರಿಸಿಕೊಳ್ಳಲು ನಿತ್ಯ ಹಾದಿಯನ್ನು ಸವೆಸುತ್ತಿರುತ್ತೇವೆ.

ನಮ್ಮ ನಮ್ಮ ಇತಿಮಿತಿಗೆ ಸಿಗುವಷ್ಟು ಯಶಸ್ಸುಗಳನ್ನು ಗಳಿಸುತ್ತೇವೆ.

ಅದು ಅವನಿಗೆ ಆ ಘಟ್ಟಕ್ಕೆ ಅದೇ ಒಂದು ಮಹಾನ್ ಸಾಧನೆ. ಯಶಸ್ಸು ಎಂಬುದು ವ್ಯಕ್ತಿ ವ್ಯಕ್ತಿಗೂ ಬಿನ್ನವಾಗಿರುತ್ತದೆ. ನಮಗೆ ಬಹುಮುಖ್ಯ ಎಂಬುದು ಮತ್ತೊಬ್ಬನಿಗೆ ಏನೂ ಅಲ್ಲವೆನಿಸುತ್ತದೆ.

ನಾವು ನಮ್ಮ ಮಟ್ಟಿಗೆ ಎಲ್ಲಾರಿಗಿಂತ ತುಂಬಾ ಒಳ್ಳೆಯವನು ಅದಕ್ಕೆ ಈ ರೀತಿಯಲ್ಲಿ ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದೇನೆ ಎಂಬ ಭಾವನೆ ಪ್ರತಿಯೊಬ್ಭರಲ್ಲಿ ಇರುತ್ತದೆ. ಅದರೇ ಗಮನಿಸಿ ನಾವು ಅಂದುಕೊಂಡಂತೆಯೇ ಎಲ್ಲಾರೂ ಅಂದುಕೊಳ್ಳುತ್ತಿರುತ್ತಾರೆ. ಹಾಗೆಯೇ ನಾನೊಬ್ಬನಲ್ಲದೇ ಜಗತ್ತಿನಲ್ಲಿ ಇರುವ ಬಹುಪಾಲು ಮಂದಿ ಅದೇ ರೀತಿಯಲ್ಲಿ ಒಳ್ಳೆಯವರಾಗಿರುತ್ತಾರೆ. ಹಾಗೆಯೇ ಪ್ರತಿಯೊಬ್ಬರಿಗೂ ತಾನು ಇರುವ ಜೀವನದಲ್ಲಿ ತನ್ನ ಬದುಕನ್ನು ಹೆಚ್ಚು ಉನ್ನತವಾಗಿ ಒಳ್ಳೆಯತನದಲ್ಲಿ ಕಾಣಬೇಕು ಮತ್ತು ದಕ್ಕಿಸಿಕೊಳ್ಳಬೇಕು ಎಂಬ ಅಕಾಂಕ್ಷೆ ಇದ್ದೇ ಇರುತ್ತದೆ.

ಪ್ರತಿ ಜೀವಿಗೂ ಆ ಚೈತನ್ಯ ಎಂಬುದು ಕೊನೆ ಉಸಿರು ಇರುವವರೆಗೂ ಇರುತ್ತದೆ ಅನಿಸುತ್ತದೆ. ನೂರಾರು ದಿನಗಳನ್ನು ತಾನು ಅನುಭವಿಸಿದರೂ ಇನ್ನೂ ಹಲವಾರು ವರುಷ ಬದುಕ ಬೇಕು ಎಂಬ ಆಸೆ ಪ್ರತಿಯೊಂದು ಜೀವಿಗೂ ಇರುತ್ತದೆ. ಯಾರೂ ಸಹ ನಿಕೃಷ್ಟವಾಗಿ ತಮ್ಮ ಬದುಕು ಇಂದಿಗೆ ಕೊನೆಯಾಗಲಿ ಎಂದು ಅಂದುಕೊಳ್ಳಲಾರರು.

ಪ್ರಾಣ ಉಸಿರು ಎಂಬುದೇ ಪ್ರತಿ ಜೀವಿಗೂ ಚೈತನ್ಯ. ಅದೇ ಪವರ್ ಅನಿಸುತ್ತದೆ. ಉಸಿರನ್ನು ಒಳಗೆ ತೆದುಕೊಳ್ಳುವುದು ಹೊರಗೆ ಬಿಡುವುದು. ಜೀವಿಯ ಉನ್ನತಿಯನ್ನು ಆ ಮೂಲಕ ಹೆಚ್ಚಿಸಿಕೊಳ್ಳುವವನು ಎಂದು ಅನಿಸುತ್ತದೆ.. ಹಾಗೆಯೇ ತನ್ನಲ್ಲಿರುವ ನೇಗೆಟಿವ್ ಅಂಶವನ್ನು ಪ್ರಕೃತಿಯ ಮಡಿಲಿಗೆ ಹಾಕುತ್ತಾ ಪಾಸೀಟಿವ್ ಮಾಡಿಕೊಳ್ಳುವನು ಮತ್ತೇ ಅದನ್ನು ವಾಪಸ್ಸು ಸೇವಿಸುತ್ತಾ ತನ್ನ ಬೆಳವಣಿಗೆಯನ್ನು ಕಾಣುವನು.ಅದೇ ಜೀವ!

ಇದು ಎಂದಿಗೂ ಒಂದು ಕ್ಷಣವು ನಿಲ್ಲಲಾರದಂತಹ ಪ್ರಕ್ರಿಯೆ ಅದು ನಿಂತ ಕ್ಷಣವೇ ನಾವುಗಳು ಇರುವುದಿಲ್ಲ. ಈ ರೀತಿಯ ಪ್ರಕೃತಿಯ ಪಾಠ ನಮ್ಮ ಎಲ್ಲಾ ಏಳ್ಗೆ ಮತ್ತು ಬಾಳ್ವೆಗೆ ಅನ್ವಹಿಸಿಕೊಂಡು ಬದುಕುವುದೇ ನಮ್ಮ ಬದುಕಾಗಬೇಕು.

ಯುಗದ ಹಾದಿಯಲ್ಲಿ ಯುಗ ಯುಗಗಳೇ ಸಾಗಿದರೂ ಈ ಬದುಕು ಹೀಗೆ ಇನ್ನೂ ಹೆಚ್ಚಿಗೆ ಹಚ್ಚ ಹಸಿರಾಗಿ ಹೊಸ ಹೊಸ ಹೊವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಜೀವನ ಚೈತ್ರವಾಗಿ ವಸಂತ ಋತುವಿನೋಪಾದಿಯಲ್ಲಿ ಹೊಸ ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಲೇ ಇರುತ್ತದೆ. ಅಲ್ಲವಾ?

ಹೊಸ ವರುಷದ ಹೊಸ ಯುಗಾದಿಯ ಹೊಸ ಶುಭಾಶಯಗಳು!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ