ಮಂಗಳವಾರ, ಫೆಬ್ರವರಿ 28, 2012

ಸ್ತ್ರೀ ಅಂದರೇ......!

ಸ್ತ್ರೀ ಅಂದರೇ ತತ್ ಕ್ಷಣ ಕಣ್ಣ ಮುಂದೆ ಬರುವ ಪಾತ್ರ ಅಂದರೇ ಅದು ಅಮ್ಮ ಮಾತ್ರ. ಹೆಣ್ಣು ಅಂದರೇ ಕರುಣಾಮಹಿ, ಮಮತೆಯ ಮಡಿಲು, ಅಸರೆಯ ಅಂಗೈ ಎಂಬೆಲ್ಲಾ ನಂಬಿಕೆಗಳು ತಮ್ಮ ತಮ್ಮ ತಾಯಂದಿರನ್ನು ನೋಡಿದ ಮೇಲೆ ಮನಸ್ಸಿನಲ್ಲಿ ಸ್ಥಾಯಿಯಾಗಿ ನಿಂತಿರುತ್ತದೆ.

ಯಾರನ್ನಾದರೂ ಕೇಳಿ "ನಿಮ್ಮ ಮೇಲೆ ಪರಿಣಾಮ ಬೀರಿದ ಒಂದೇ ಒಂದು ಹೆಣ್ಣನ್ನು ಹೆಸರಿಸಿ" ಅಂದರೇ. ಹಿಂದೆ ಮುಂದೆ ನೋಡದೆ ತನ್ನ ತಾಯಿಯ ಹೆಸರನ್ನು ಹೇಳೇ ಹೇಳಿರುತ್ತೇವೆ. ಅಷ್ಟರ ಮಟ್ಟಿಗೆ ನಮ್ಮ ಜೀವವಿರುವವರೆಗೂ ಅಮ್ಮನನ್ನು ಬಿಟ್ಟರೆ ಯಾರೂ ಅಲ್ಟಿ ಮೆಟ್ ಆದ ಮತ್ತೊಬ್ಬ ಹೆಣ್ಣು ಪಾತ್ರ ಪ್ರಪಂಚ ಪೂರ್ತಿ ಹುಡುಕಿದರೂ ಸಿಗಲಾರದೇನೋ?

ಇಂದಿನ ನಮ್ಮ ಈ ಮುಂದುವರೆದ ಯುಗದಲ್ಲಿ ಹೆಣ್ಣು ಕೆಲಸ ಮಾಡದ ರಂಗವಿಲ್ಲ. ಅಡಿಗೆ ಮನೆಯಿಂದ ಹಿಡಿದು ಆಕಾಶದಲ್ಲಿ ವಿಮಾನವನ್ನು ಚಾಲನೆ ಮಾಡುವವರೆಗೂ ಅಗಾಧವಾಗಿ ಗಂಡಸರಿಗಿಂತ ಒಂದು ಕೈ ಮೇಲಾಗಿ ದಾಪುಗಾಲನ್ನಿಟ್ಟು ನಡೆಯುತ್ತಿದ್ದಾಳೆ. ಅಪಾರ ಬುದ್ಧಿಮತ್ತೆ ಮತ್ತು ಜಾಣತನದಿಂದ ಪ್ರತಿಯೊಂದನ್ನು ಸೂಕ್ಷ್ಮವಾಗಿ ತನ್ನದನ್ನಾಗಿ ಮಾಡಿಕೊಳ್ಳುತ್ತಿದ್ದಾಳೆ.

ಪ್ರತಿಯೊಬ್ಬರಿಗೂ ತಾಯಿಯೇ ಮೊದಲ ಗುರು. ಅವಳು ಹಾಕಿಕೊಟ್ಟ ದಾರಿಯಲ್ಲಿಯೇ ಪ್ರತಿಯೊಬ್ಬರ ಜೀವನದ ಚಕ್ರ ಚಲಿಸುವುದು.

ಗಮನಿಸಿ ಮನೆಯಲ್ಲಿ ಅಮ್ಮ ಅಂದರೇ ಒಂದು ನಿರ್ಧಿಷ್ಟ ವ್ಯಾಖ್ಯಾನವನ್ನು ಪದಗಳಲ್ಲಿ ಕಟ್ಟಿಕೊಡುವುದಂತೂ ದುರ್ಲಬ.

ಅವಳೇ ಎಲ್ಲಾ ಮುಂಜಾನೆಯಿಂದ ಎಲ್ಲಾರೂ ತಮ್ಮ ತಮ್ಮ ಹಾಸಿಗೆಗೆ ಹೋಗುವವರೆಗೂ ಅವಳ ಶಕ್ತಿವಂತಹ ದುಡಿಮೆಯನ್ನು ಯಾವ ರೀತಿಯಲ್ಲೂ ಅಳೆಯಲು ಸಾಧ್ಯವಿಲ್ಲ.

ನನಗೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಆ ದೇವರು ಈ ಅಮ್ಮ ಎಂಬ ಜೀವಕ್ಕೆ ಇಷ್ಟೊಂದು ಶಕ್ತಿಯನ್ನು ಜೀವಂತಿಕೆಯನ್ನು ಇಟ್ಟಿರುವುದಾದರೂ ಎಲ್ಲಿ? ಅಂತಾ. ಗೊತ್ತಿಲ್ಲ ಬಿಡಿ ಅವಳ ಒಲುಮೆ, ನಲಿಮೆ,ಪ್ರೀತಿ,ಸಹಕಾರ,ಅಕ್ಕರೆ ಈ ಎಲ್ಲಾ ಮೊಲಗಳನ್ನು ತನ್ನ ಮಡಿಲಲ್ಲಿ ಅಗಾಧವಾಗಿ ಇಟ್ಟುಕೊಂಡಿರುವುದರಿಂದಲೇ ಬೇಸರವಿಲ್ಲದ ಮನೆಯಲ್ಲಿನ ದುಡಿತ, ಹೊರಗಡೆಯ ಕೆಲಸ ಒಂದೇ ಎರಡೇ ಪ್ರತಿಯೊಂದನ್ನೂ ಅಷ್ಟೇ ಅಕ್ಕರೆಯಿಂದ ಮಾಡುವಳು.




ಅಮ್ಮ ಮಾಡುವ ಒಂದು ಕೆಲಸವನ್ನು ಪ್ರೀತಿಯಿಂದ ಅಚ್ಚುಕಟ್ಟಾಗಿ ಗಂಡು ಎಂದು ಎದೆ ತಟ್ಟುವ ಯಾವ ಪ್ರಾಣಿಯು ಮಾಡಲಾರದೂ. ಅದೇ ಗೊಣಗಾಟ ಮತ್ತು ಅದೇ ಸಿಟ್ಟು ಸೇಡವು ಕೆಲಸ ಮುಗಿಯುವಷ್ಟೊತ್ತಿಗೆ. ಅಲ್ಲವಾ?

ಪ್ರತಿಯೊಬ್ಬ ಸಾಧಕನ ಹಿಂದೆ ಒಂದು ಹೆಣ್ಣು ಜೀವ ಇರಲೇಬೇಕು ಎಂಬ ನಾಣ್ಣುಡಿಯಂತೆ. ಹೆಣ್ಣು ಇಲ್ಲದ ಗೆಲುವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅನ್ನಿಸುತ್ತೇ!

ಗಮನಿಸಿ ನಮ್ಮ ಮನೆಯ ಮುಂದೆ ಮಾಡುವ ನಮ್ಮ ಸ್ತ್ರೀಯರ ಸೂಪ್ಪು, ತರಕಾರಿ, ಹಣ್ಣು ಹಂಪಲುಗಳ ಖರೀದಿಯನ್ನು ಯಾವ ಬ್ಯುಸಿನೇಸ್ ಸ್ಕೋಲಲ್ಲೂ ಹೇಳಿಕೊಡಲಾಗದಂತಹ ವ್ಯಾಪಾರದ ಮಹಿಮೆಯನ್ನು ಪ್ರದರ್ಶಿಸುತ್ತಾರೆ. ಇದಕ್ಕಾಗಿ ಅವರುಗಳು ಎಲ್ಲಿಯು ಓದಿರಲಾರರು ಮತ್ತು ತಿಳಿದಿರಲಾರರು. ಅಂದರೇ ಇದು ಅವರಲ್ಲಿ ಸ್ವಾಭಾವಿಕವಾಗಿ ಬಂದಿರುತ್ತದೇನೂ?

ಹೆಣ್ಣಾಸರೆಯಿಲ್ಲದ ಮನೆ ಮನೆಯಲ್ಲಾ! ಇದು ನಾವುಗಳು ಇಲ್ಲಿ ಬ್ಯಾಚಲರ್ ಆಗಿ ಜೀವಿಸುತ್ತಿರುವ ರೋಮ್ ಗಳನ್ನು ಗಮನಿಸಿದರೇ ತಿಳಿದೇ ತಿಳಿಯುತ್ತದೆ. ಎಷ್ಟೊಂದು ಕೆಟ್ಟದಾಗಿ ಇಟ್ಟುಕೊಂಡಿರುತ್ತೇವೆ ಅಂದರೇ ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲಾ ಬಿಡಿ. ಇದು ಸ್ತ್ರೀ ಇಲ್ಲದ ಮನೆಯೆಂಬುದನ್ನು ಸಾವಿರ ಸಾವಿರ ಬಾರಿ ನಿರೂಪಿಸಿರುತ್ತದೆ.

ಇನ್ನೂ ಬೆಂಗಳೂರಿನಂತಹ ನಗರಗಳಲ್ಲಿ ಮನೆಯ ವಾರಸುದಾರರು ಮನೆ ಬಾಡಿಗೆಗೆ ಕೊಡುವಾಗ ಕೇಳುವ ಸಾಮಾನ್ಯ ಪ್ರಶ್ನೆ ಬ್ಯಾಚುಲರಾ..? ಮನೆ ಸಿಗಲ್ಲ ಬಿಡಿ! ಎನ್ನುತ್ತಾರೆ. ಅಂದರೇ ಅವರುಗಳಿಗೆ ಗೊತ್ತು. ನಮ್ಮ ಮನೆಯನ್ನು ಅಬ್ಬೇಪಾರಿಗಳಾದ ಈ ಹುಡುಗರಿಗೆ ಕೊಟ್ಟರೆ ಯಾವ ಸ್ಥಿತಿಗೆ ತರುವವರು ಎಂಬುದು. ಅಷ್ಟರ ಮಟ್ಟಿಗೆ ಹೆಣ್ಣಿನ ಹಿರಿಮೆ ಸ್ಥಾಪಿತವಾಗಿದೆ.

ಇದು ನಮ್ಮ ಪುರಾತನದಿಂದ ಚಾಲ್ತಿಯಲ್ಲಿರುವ ನಡಾವಳಿ ಅಥಾವ ಕಲಿಕೆಯೋ ಗೊತ್ತಿಲ್ಲಾ. ಮನೆಯಲ್ಲಿ ಅಕ್ಕ-ತಂಗಿ-ತಮ್ಮಂದಿರು-ಅಣ್ಣಂದಿರು ಇದ್ದರೇ ಅಂದರೇ ಅಲ್ಲಿ ಹೆಚ್ಚಾಗಿ ಚಿಕ್ಕ ವಯಸ್ಸಿನಿಂದ ಮನೆಗೆಲಸವನ್ನು ಮಾಡಲು ಹೆತ್ತವರು ಹಚ್ಚುವುದು ಹೆಣ್ಣು ಮಕ್ಕಳಿಗೆ ಮಾತ್ರ. ಇದು ಅವರನ್ನು ಯಾವ ಯಾವ ಪರಿಯಲ್ಲಿ ನಿಪುಣತೆಯನ್ನು ಕಲಿಸುತ್ತದೆ ಅಂದರೇ ಒಂದಷ್ಟು ವಯಸ್ಸಿಗೆ ಇಡೀ ಸಂಸಾರವನ್ನೇ ತೂಗಿಕೊಂಡು ಹೋಗುವಷ್ಟರ ಮಟ್ಟಿಗೆ. ಅದೇ ಈ ಗಂಡು ಜೀವಗಳನ್ನು ಕೇಳಿ ಉಂಡಾಡಿ ಗುಂಡರಾಗಿರುತ್ತಾರೆ.ಜವಬ್ದಾರಿಯಿಲ್ಲದವರುಗಳು!!

ಶಿಕ್ಷಣ ರಂಗದಲ್ಲಿ ಸ್ತ್ರೀಯರ ಮೇಲುಗೈಯನ್ನು ಪ್ರತಿ ವರುಷ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪಲಿತಾಂಶಗಳು ಧೃಡಪಡಿಸುತ್ತಿದೆ. ಹೆಣ್ಣು ಮುಂದೆ ಅವರ ಹಿಂದೆ ಈ ಗಂಡು ಹುಡುಗರು!

ನಗಬೇಡಿ ಮಾರಾಯ್ರೇ! ಇದೇ ನಿಜಾವದ ಪ್ಯಾಕ್ಟ್!

ನೀವು ನಿಮ್ಮ ಬಾಲ್ಯದಲ್ಲಿ ಓದಿರಬಹುದು. ದಾನಕ್ಕೆ ಹೆಸರಾದ ದಾನಚಿಂತಾಮಣಿ ಅತ್ತಿಮಬ್ಬೆ ಯಾವ ರೀತಿಯಲ್ಲಿ ತನ್ನ ಸಂಸ್ಥಾನದಲ್ಲಿ ಕವಿಪುಂಗರುಗಳಿಗೆ ಅಸರೆಯಾಗಿ ಉತ್ತಮೋತ್ತಮ ಕೃತಿ ರತ್ನಗಳ ಜನನಕ್ಕೆ ಕಾರಣಿಭೂತಳಾಗಿದ್ದಳು. ೧೨ ನೇ ಶತಮಾನದ ಅಕ್ಕಮಹಾದೇವಿಯ ವಚನಗಳು ಮತ್ತು ಅಲ್ಲಿನ ಭಕ್ತಿ ರಸವನ್ನು ಯಾರೂ ಮೀರಿಸಲಾರರೂ. ಕಿತ್ತೂರು ಚೆನ್ನಮ್ಮನಂತಹ ವೀರ ಮಹಿಳೆಯನ್ನು ಈ ನಾಡು ಕಂಡಿದೆ. ಸಾಮಾನ್ಯ ಮಹಿಳೆಯಾದ ಓಬವ್ವ ದೇಶ ರಕ್ಷಣೆಗಾಗಿ ಒನಕೆಯನ್ನು ಆಯುಧವಾಗಿ ಉಪಯೋಗಿಸಿ ಕನ್ನಡ ನಾಡಿನಲ್ಲಿ ಹೆಸರಾದದ್ದೂ. ಕರುಣೆಗೆ ಮತ್ತೊಂದು ಹೆಸರಾದ ಮದರ್ ಥೇರೆಸಾ. ಗಂಡಸರು ಹುಬ್ಬೇರಿಸುವಂತೇ ದೇಶವನ್ನೂ ಆಳಿದ ಇಂದಿರಾಗಾಂಧಿ. ಕ್ರೀಡಾ ರಂಗದಲ್ಲಿ ಎಲ್ಲಾರ ಬಾಯಿಯಲ್ಲೂ ಇಂದಿಗೂ ಯಾರಾದರೂ ಜೋರಾಗಿ ಓಡಿದರೆ ಏ ಯಾಕೆ ಪಿ.ಟಿ ಊಷಾ ರೀತಿಯಲ್ಲಿ ಓಡುತ್ತಿಯಾ ಎಂದು ನಿತ್ಯ ನೆನೆಯುವಂತೆ ಮಾಡಿರುವ ಊಷಾ.

ಹೀಗೆ ಇತಿಹಾಸದೊದ್ದಕ್ಕೂ ಇಂದಿಗೂ ಎಲ್ಲಾ ರಂಗದಲ್ಲೂ ಮಹಿಳೆಯರು ನಾವುಗಳು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನೂ ನಿತ್ಯ ನಿರೂಪಿಸುತ್ತಿದ್ದಾರೆ.

ಆದರೂ ಈ ಭಾರತದಲ್ಲಿ ಹೆಣ್ಣು ಎಂದರೇ ಅದೂ ಯಾಕೋ ಒಂದು ಕೀಳರಿಮೆಯನ್ನು ನಮ್ಮ ಸಮಾಜ ಹಿಂದಿನಿಂದಲೂ ಮೌಢ್ಯಯುತವಾಗಿ (ಗುಟ್ಟಾಗಿ?) ಇಟ್ಟುಕೊಂಡು ನಿತ್ಯ ಮಹಿಳೆಯರನ್ನು ಕಷ್ಟಕ್ಕೆ ದೂಡುತ್ತಿದ್ದಾರೆ. ಪುರುಷರ ದಬ್ಬಾಳಿಕೆಯನ್ನು ಸ್ತ್ರೀ ನಿತ್ಯ ಅನುಭವಿಸುತ್ತಿದ್ದಾಳೆ. ನಮ್ಮ ನಿಮ್ಮ ಅಮ್ಮನಂತಹ, ಅಕ್ಕನಂತಹ, ತಂಗಿಯಂತಹ, ಗೆಳತಿಯಂತಹ ಸಾವಿರಾರು ಮಹಿಳೆಯರು ಪುರುಷರ ಪೌರುಷಕ್ಕೆ ಬಲಿಯಾಗಿ ತಮ್ಮ ಜೀವವನ್ನು ಅರ್ಪಿಸುತ್ತಿದ್ದಾಳೆ. ಇದು ಯಾಕೇ?

ನಾವುಗಳು ಹೆಮ್ಮೆಪಡುವ ರೀತಿಯಲ್ಲಿ ಅವಳು ಎಲ್ಲಾದರಲ್ಲೂ ಮುಂದಿರುವವಂತೆ ಕಂಡರೂ ಅವಳನ್ನು ಇನ್ನೂ ಹಿಂದಕ್ಕೆ ದೂಡುವ ಅಸಹ್ಯ ಬೆಳವಣಿಗೆಗಳನ್ನು ಕಾಣದ ಕೈಗಳು ಮಾಡುತ್ತಲೇ ಇದ್ದಾವೆ. ಈ ರೀತಿಯ ದೋರಣೆಯನ್ನು ಪುರುಷ ಸಮಾಜ ನಿಲ್ಲಿಸುವಂತಾಗಬೇಕು.

ಗಮನಿಸಿ ವರ್ತಮಾನ ಪತ್ರಿಕೆಗಳ ಎರಡು ಮತ್ತು ಮೂರನೇಯ ಪುಟದಲ್ಲಿ ನಿತ್ಯ ಒಂದು ವರದಕ್ಷೀಣೆ ಸಾವಿನ ಸುದ್ಧಿ ಓದುತ್ತಲೇ ಇರುತ್ತೇವೆ..!

ನಮ್ಮ ನಮ್ಮ ಮನೆಯಲ್ಲಿಯೇ ಹೆಣ್ಣಿಗೆ ರಕ್ಷಣೆ ಇಲ್ಲದಿದ್ದರೇ ಇನ್ನೂ ಎಲ್ಲಿ ಸಿಗುವುದು ಯೋಚಿಸಿ.




ಗಾಂಧಿ ಹೇಳುತ್ತಿದ್ದರು "ಎಂದು ಒಬ್ಬ ಮಹಿಳೆ ನಿರ್ಭಯವಾಗಿ ಮದ್ಯರಾತ್ರಿ ಒಂಟಿಯಾಗಿ ನಮ್ಮ ರಸ್ತೆಯಲ್ಲಿ ಓಡಾಡುವಂತಾದರೇ ಮಾತ್ರ ನಿಜವಾಗಿಯು ಭಾರತ ಸ್ವಾತಂತ್ರ್ಯ ಗಳಿಸಿದಂತೇ ಎಂದು". ಇದು ಇಂದಿಗೂ ನಮ್ಮಲ್ಲಿ ಯಾಕೆ ಸಾಧ್ಯವಾಗಿಲ್ಲಾ?

"ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ" ಎಂದು ಬೋಧಿಸಿದ ನಾಡಿನಲ್ಲಿ ಇನ್ನೂ ಹೆಣ್ಣಿಗೆ ಸರಿಯಾದ ರಕ್ಷಣೆ ಗೌರವ ಸಿಕ್ಕಿಲ್ಲಾ ಅಂದ್ರೇ ನಾವುಗಳು ನಾಚಿಕೆಪಡುವಂತಹ ವಿಷಯ ಎಂದು ಯಾಕೆ ನಾವುಗಳೆಲ್ಲಾ ಚಿಂತಿಸುತ್ತಿಲ್ಲಾ.

ಹಿಂದೆ ಇದ್ದಂತಹ ನಂಬಿಕೆಗಳೇ ಇಂದಿಗೂ ವಿದ್ಯಾವಂತರು, ನಾಯಕರುಗಳು, ಯೋಜನೆಗಳನ್ನು ರೂಪಿಸುವವರ ಮನದಲ್ಲಿ ಮಹಿಳೆಯೆಂದರೇ ಅವಳು ನಾಲ್ಕು ಗೋಡೆಯಲ್ಲಿ ಮಾತ್ರ ಇರಬೇಕಾದವಳು. ಗಂಡಸರು ಹೇಳಿದಂತೆ ಕೇಳುತ್ತಾ ಅವರುಗಳಿಗೆ ದಾಸಿಯಾಗಿ ಸೇವೆ ಮಾಡತಕ್ಕವಳು ಎಂಬ ಮನೋಭಾವದಲ್ಲಿಯೇ ಪುರುಷರುಗಳು ನೋಡುತ್ತಿದ್ದಾರಲ್ಲಾ ಏಕೆ?

ಅವಕಾಶ ಸಿಕ್ಕಿದ ಕಡೆಯೆಲ್ಲಾ ಹೆಣ್ಣಿನ ಮೇಲೆ ವಿವಿಧ ರೀತಿಯಲ್ಲಿ ನೋವನ್ನುಂಟು ಮಾಡುವುದಕ್ಕೇ ಹೆಣ್ಣು ಮತ್ತು ಗಂಡಸರು ಒಟ್ಟಿಗೆ ಸೇರಿ ನಿಲ್ಲುವವರಲ್ಲಾ ಏಕೆ?

ಹೆಣ್ಣಿಗೆ ಹೆಣ್ಣು ಶತ್ರು ಎಂಬ ರೀತಿಯಲ್ಲಿ ಮನೆಗೆ ಬಂದಂತಹ ಸೂಸೆಯಂದಿರನ್ನು ಅತ್ತೆಯಂದಿರು ಕಾಣುವ ರೀತಿ. ಸೂಸೆಯಂದಿರು ಅತ್ತೆಯನ್ನು ಕಾಣುವ ರೀತಿ ಏನನ್ನೂ ನಿದರ್ಶಿಸುತ್ತದೆ?

ಆದರೂ ಗಂಡು ಹೆಣ್ಣನ್ನೂ ಯಾವ್ಯಾವ ರೀತಿಯಲ್ಲಿ ದುರುಪಯೋಗಪಡಿಸಿಕೊಂಡರೂ, ಅವಳು ಮಾತ್ರ ಅವನ ಏಳ್ಗೆಗೆ, ಬಾಳ್ವೆಗೆ, ತನ್ನ ಜೀವನ ಮುಂದುವರಿಕೆಗೆ ಇತ್ಯಾದಿ ಅಗತ್ಯತೆಗಳಿಗೆ ಬೇಕೇ ಬೇಕು.

ಒಂದು ಕಡೆ ಅವಳನ್ನು ಪಡೆಯಲು ಮಾಡುವ ಪರಿ ಪರಿ ಸಾಧನೆಗಳು. ಹಾಗೆಯೇ ಅವಳನ್ನು ನೋಯಿಸುವ ಸರಮಾಲೆ ಇನ್ನೊಂದು ಕಡೆ.

ಇದು ಕೊಂಚ ಬದಲಾವಣೆಗೊಳ್ಳಬೇಕು. ಚಿಂತಿಸುವ ಪರಿಯಲ್ಲಿ ಪ್ರತಿಯೊಬ್ಬರೂ ನವೀನತೆಯನ್ನು ತಂದುಕೊಳ್ಳಬೇಕು. ಪ್ರತಿಯೊಬ್ಬರೂ ಆ ಸ್ತ್ರೀ ಎಂಬ ಅಮ್ಮನೊಡಲಿನಿಂದಲೇ ಈ ಜಗತ್ತಿಗೆ ಕಾಲು ಇಟ್ಟಿರುವುದು. ಪ್ರತಿ ಹೆಣ್ಣಿನಲ್ಲೂ ಆ ಅಮ್ಮನಂತಹ ಸೆಲೆ ಇದ್ದೇ ಇರುತ್ತದೆ. ಗಂಡಿನಲ್ಲೂ ಸಹ! ಅವಳಿಗೆ ನೋಯಿಸುವವಂತಹ ನಡಾವಳಿ ಇನ್ನಾದರೂ ನಿಲ್ಲಲೇ ಬೇಕು.

ವಿಶ್ವ ಮಹಿಳಾ ದಿನಾಚಾರಣೆಯ ಶುಭಾಶಯಗಳು!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ