ಬುಧವಾರ, ಮಾರ್ಚ್ 28, 2012

ಜಗವೇ ಒಂದು ನಾಟಕ ಮಂದಿರ!

ಯಾವತ್ತಿಗೂ ಒಂದು ಬೆರಗನ್ನು ಸದಾ ಇಟ್ಟುಕೊಂಡಿರುವ ಕಾರ್ಯ ಕ್ಷೇತ್ರ ಎಂದರೇ ಅದು ನಾಟಕ ಮತ್ತು ಸಿನಿಮಾ ರಂಗ. ಅದು ಪ್ರತಿಯೊಬ್ಬರನ್ನು ಸೂಜಿಯಂತೆ ಆಕರ್ಷಿಸುತ್ತದೆ. ಅದಕ್ಕೆ ಮರುಳಾಗದವರು ಇಲ್ಲವೇ ಇಲ್ಲ ಎನಿಸುತ್ತದೆ. ನಟ/ನಟಿಯರುಗಳು ಅಂದ್ರೇ ಕೇಳುವುದೇ ಬೇಡ ಅವರ ಜೋತೆಯಲ್ಲಿ ಒಂದು ಫೋಟೋ ತೆಗೆಸಿಕೊಳ್ಳಲೇ ಬೇಕು ಅನ್ನಿಸುತ್ತದೆ.

ನಾಟಕ ಎನ್ನುವ ಶಬ್ಧವನ್ನು ನಾವುಗಳು ನಿತ್ಯ ನಮ್ಮ ಮಾತಿನಲ್ಲಿ ಬಳಸಿಯೇ ಬಳಸಿರುತ್ತೇವೆ. ಏನಾದರೂ ಸ್ವಲ್ಪ ಜಾಸ್ತಿ ಮಾತನಾಡಿದರೇ.. ಯಾಮಾರಿಸಿದರೇ.. "ಜಾಸ್ತಿ ನಾಟಕ ಮಾಡಬ್ಯಾಡ!" ಎನ್ನುತ್ತೇವೆ.

ಅಂದರೇ ನಾವುಗಳು ಸ್ವಭಾವತಃ ನಟನೆಯನ್ನು ನಮ್ಮ ನಮ್ಮಲ್ಲಿಯೇ ಇಟ್ಟುಕೊಂಡಿರುತ್ತೇವೆ. ಯೋಚಿಸಿ ಹತ್ತು ಹಲವು ಬಾರಿ ನಾವು ತುಂಬ ಚೆನ್ನಾಗಿ ನಂಬುವ ರೀತಿಯಲ್ಲಿ ನಟಿಸಿರುತ್ತೇವೆ.ಯಾಕೆಂದರೇ ಆ ಸಮಯದಲ್ಲಿ ಏನಾದರೂ ಮಾಡಿ ನಾವುಗಳು ಬಚಾವ್ ಆಗಬೇಕಿರುತ್ತದೆ.

ನಾಟಕ/ಸಿನಿಮಾ ಅಂದರೇ ಸುಳ್ಳು ಮಾತ್ರ! ಆದರೇ ಅದನ್ನು ಕಲಾತ್ಮಕವಾಗಿ ಅಭಿನಯಿಸುತ್ತಾರಲ್ಲಾ! ಅದಕ್ಕೆ ಮೆಚ್ಚಬೇಕು.




ಸುಳ್ಳಿನ ಮಾಯ ಬಜಾರ್ ಎಂಥವರಿಗೂ ಆ ಕ್ಷಣಕ್ಕೆ ಇಷ್ಟವಾಗುತ್ತದೆ. ನಾವುಗಳು ನಮ್ಮ ನಿತ್ಯ ನಿಜ ಜೀವನದ ಜಂಜಾಟದಿಂದ ಒಂದೇರಡು ಘಂಟೆಗಳನ್ನು ಕಳೆಯುತ್ತೇವೆ ಅಂದರೇ.. ಅದು ನಾಟಕ ನೋಡುವಾಗ ಅಥಾವ ಸಿನಿಮಾ ನೋಡುವಾಗ. ನಿಜ ಜೀವನ ಯಾವತ್ತಿಗೂ ಬೋರು!

ಅದಕ್ಕೇ ಇರಬೇಕು ಇಂದಿಗೂ ಏನೇ ತಂತ್ರಙ್ಞಾನ ಬಂದಿದ್ದರೂ, ಟಿ.ವಿ, ವಿಡಿಯೋ ಇತ್ಯಾದಿ ನಮ್ಮ ಮುಂದೆ ಇದ್ದರೂ. ಅದು ಸುಳ್ಳು. ಅದು ನಿಜವಲ್ಲಾ ಎಂದು ಗೊತ್ತಿದ್ದರೂ ಸಹ ಪ್ರತಿಯೊಬ್ಬರೂ ಯಾವುದೇ ಸಿನಿಮಾ ಶೋಟಿಂಗ್, ನಾಟಕ ಅಭಿನಯ ನಡೆಯುತ್ತಿರುವುದನ್ನು ಬೆರಗುಗಣ್ಣಿನಿಂದ ವೀಕ್ಷಿಸುತ್ತಾರೆ.

ಚಾನ್ಸ್ ಸಿಕ್ಕಿದರೇ ಸಾಕು, ನಾನು ಒಂದು ಕೈ ನೋಡಿಯೇ ಬಿಡೋಣ ಎನ್ನುತ್ತಿರುತ್ತೇವೆ ಯಾಕೆ?

ಪ್ರತಿಯೊಬ್ಬರೂ ಕ್ಯಾಮರಾ ತಮ್ಮ ಮುಂದೆ ಬಂದರೇ ಸಾಕು ತಮ್ಮ ನೈಜತೆಯಿಂದ ಅಭಿನಯದ ಕಡೆ ಮುಖ ಮಾಡುವವರಲ್ಲಾ ಯಾಕೆ?

ಅದಕ್ಕೆ ಇರಬೇಕು ಹಿರಿಯರು ಹೇಳಿದ್ದಾರೆ. ಜಗವೇ ಒಂದು ನಾಟಕ ಮಂದಿರ! ನಾವುಗಳೆಲ್ಲಾ ಪಾತ್ರಧಾರಿಗಳು! ಆ ದೇವರೇ ಸೂತ್ರಧಾರಿ ನಿರ್ದೇಶಕ!! ಅವನಾಡಿಸಿದಂತೆ ನಾವುಗಳು ವರ್ತಿಸುತ್ತಿದ್ದೇವೆ ಅಂತೆ?

ಇಸ್ ಇಟ್?

ನಾನಾಗ ಐದು ಆರನೇ ತರಗತಿಯಲ್ಲಿ ಓದುತ್ತಿದ್ದೆ ಅನಿಸುತ್ತದೆ. ನೆನಪಿನಲ್ಲಿ ಇರುವುದು ಆ ವಯಸ್ಸಿನದೇ ಚಿತ್ರ. ಬಯಲಾಟ ಎಂದು ಹಳ್ಳಿಯಲ್ಲಿ ವರುಷಕ್ಕೆ ಒಮ್ಮೆ ಊರ ದೇವರ ಕೆಂಡಾರ್ಚನೆ ಉತ್ಸವದ ಪ್ರಯುಕ್ತ ಶ್ರೀ ದೇವಿ ಮಹಾತ್ಮೆ ನಾಟಕವನ್ನು ಪ್ರದರ್ಶಿಸುವವರು. ಎರಡು ತಿಂಗಳಿಗೆ ಮುಂಚೆನೇ ನಿತ್ಯ ರಾತ್ರಿ ಒಂಬತ್ತರ ನಂತರ ಊರಿನವರು ಪ್ರಾಕಟಿಸ್ ಮಾಡುತ್ತಿದ್ದರು. ಅವರುಗಳು ಮಾಡುತ್ತಿದ್ದಾ ಅಲಾಪನವನ್ನು, ತಾಳ,ತಬಲ, ಹಾರ್ಮೊನಿಯಮ್ ಸಂಗೀತದ ಅಲೆಯನ್ನುನಿದ್ದೆಗೆ ಜಾರುವ ಮೊದಲು ಕಿವಿಯ ಮೇಲೆ ಹಾಕಿಕೊಳ್ಳುತ್ತಿದ್ದೇವು. ನಾವುಗಳು ಆ ಪ್ರಾಕಟಿಸ್ ನೋಡಲು ಹೋಗುತ್ತೇವೆ ಅಂದರೇ ದೊಡ್ಡವರು "ಏ ಸುಮ್ಮನಿರ್ರಿ ಈಗ ನೋಡಿದರೇ ಪೂರ್ಣ ನಾಟಕವನ್ನು ಹಬ್ಬದ ದಿನ ನೋಡಲು ಇಷ್ಟ ಆಗುವುದಿಲ್ಲ" ಎಂದು ನಮ್ಮ ಬಾಯಿ ಮುಚ್ಚುತ್ತಿದ್ದರು.

ನಾಟಕವನ್ನು ಮಾಡುತ್ತಿದ್ದ ಎಲ್ಲಾ ಪಾತ್ರಧಾರಿಗಳು ಗಂಡಸರೇ. ಹೆಣ್ಣು ಪಾತ್ರವನ್ನು ಗಂಡಸರೇ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಸಾಮಾಜಿಕ ನಾಟಕಗಳಿಗೆ ಹೆಣ್ಣು ಪಾತ್ರಧಾರಿಗಳನ್ನು ಸಿಟಿಗಳಿಂದ ಕರೆಯಿಸುತ್ತಿದ್ದರು. ಹಾಗೆ ಒಂದೇರಡು ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿದ್ದು ನೆನಪು.

ನಾಟಕವನ್ನು ಪ್ರದರ್ಶಿಸುವ ದಿನವನ್ನು ನೋಡಬೇಕು. ಏನೂ ರಂಗು ರಂಗಿನ ಸೀನರಿಗಳು, ಜಗಮಗಿಸುವ ವಿಧ್ಯುತ್ ದ್ವೀಪಗಳ ಅಲಂಕಾರ, ಬಣ್ಣ ಬಣ್ಣದ ವೇಷಭೂಷಣ, ಮೇಕಪ್, ಬಂಗಾರ ಬಣ್ಣದ ಕೀರಿಟ, ಗದೆ, ಬಿಲ್ಲು, ಭಾಣ,ಸಿಂಹಾಸನ.. ಉಫ್ ನಮಗಂತೂ ಅಂದು ಸಂಜೆ ಐದು ಗಂಟೆಯಿಂದ ಮುಂಜಾನೆ ನಾಟಕ ಮುಗಿಯುವವರೆಗೂ ಕುತೂಹಲ ಬರಿತರಾಗಿ ಅಲ್ಲಿಯೇ ಠೀಕಾಣಿಯುರುತ್ತಿದ್ದೇವು. ನಾಟಕದ ಮುಂದೆ ಇರುವುದಕ್ಕಿಂತ ಸ್ಟೇಜ್ ಹಿಂದೆ ಅವರುಗಳು ಧರಿಸುತ್ತಿದ್ದ ವೇಷಭೊಷಣಗಳನ್ನು ನೋಡುವುದಕ್ಕೆ ತುಂಬ ಇಷ್ಟವಾಗುತ್ತಿತ್ತು.

ಕಪ್ಪು ಮುಖದ ನಮ್ಮ ಅಣ್ಣಂದಿರುಗಳು ಪುಲ್ ಬಿಳಿಯರಾಗಿ ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಸ್ವರ್ಗದಿಂದ ಧರೆಗೆ ಇಳಿದ ದೇವತೆಗಳ ರೀತಿಯಲ್ಲಿ ಶಿವ,ವಿಷ್ಣು, ಬ್ರಹ್ಮ, ಮಹಿಷಸುರ, ದೇವಿ, ಋಷಿ ಮುನಿಗಳ ಪಾತ್ರಗಳು ಭಾಸವಾಗುತ್ತಿದ್ದರು.

ನಾವುಗಳು ನಿದ್ದೆಗೆಟ್ಟು ಪೂರ್ಣ ನಾಟಕವನ್ನು ನೋಡುತ್ತಿದ್ದೇವು. ಹೇಗೆ ಅವರುಗಳಿಗೆ ಮೇಕಪ್ ಮಾಡುತ್ತಾರೆ. ಅವರುಗಳ ಡ್ರೇಸ್ ಹೇಗೆ ಹಾಕುತ್ತಾರೆ ಇತ್ಯಾದಿ ಇತ್ಯಾದಿ ಅಪರೂಪದ ನೋಟಗಳನ್ನು ಕಣ್ಣುತುಂಬಿಕೊಳ್ಳಲು ಕಾತರಿಸುತ್ತಿದ್ದೇವು.

ದೊಡ್ಡವರಾದ ಮೇಲೆ ನಾವುಗಳು ಈ ರೀತಿಯ ಒಂದು ನಾಟಕದ ಪಾತ್ರವನ್ನು ಮಾಡಿಯೇ ತಿರಬೇಕು ಎಂದು ಅಂದು ನಿರ್ಧರಿಸಿಕೊಳ್ಳುತ್ತಿದ್ದೇವು.




ಪೌರಾಣಿಕ ನಾಟಕವಾಗಿದ್ದ ಇದನ್ನು ನಮ್ಮ ಊರಿನವರು ಭಯ ಭಕ್ತಿಯಿಂದ ಅಭಿನಯಿಸುತ್ತಿದ್ದರು. ನಾಟಕ ಮಾಡುತ್ತಿದ್ದ ಪಾತ್ರಧಾರಿಗಳು ಸಹ ಹಾಗೆಯೇ ಉಪವಾಸವಿದ್ದು ಬಣ್ಣ ಹಚ್ಚಿಕೊಂಡು ಅಭಿನಯಿಸುತ್ತಿದ್ದರು.

ಊರಿನವರಿಗೂ ಏನೋ ನಂಬಿಕೆ. ಈ ನಾಟಕ ಆಡುವುದರಿಂದ ಮಳೆ ಬೆಳೆ ಈ ವರ್ಷ ಚೆನ್ನಾಗಿ ಆಗುತ್ತದೆ ಎನ್ನುತ್ತಿದ್ದರು. ಸುತ್ತಲಿನ ಹತ್ತು ಹಲವು ಊರಿನವರುಗಳು ಈ ನಾಟಕ ನೋಡುವುದಕ್ಕೆ ಹಿಂಡು ಹಿಂಡಾಗಿ ಬರುತ್ತಿದ್ದರು.

ಈ ನಾಟಕದ ಮುಖ್ಯ ಹೈಲೈಟ್ ಅಂದರೇ ಸಾರಥಿ! ಅವನು ಮಾತಾನಾಡುತ್ತಿದ್ದ ತಮಾಷೆಯ ಮಾತುಗಳು ಚಿಕ್ಕವರನ್ನೆಲ್ಲಾ ಹೊಟ್ಟೆ ತುಂಬ ನಗಿಸುತ್ತಿತ್ತು. ಇದು ನಮ್ಮ ಮನದಲ್ಲಿ ಶಾಶ್ವತವಾಗಿರುತ್ತಿತ್ತು. ಈ ಪಾತ್ರಕ್ಕೆ ತುಂಬ ತಯಾರಿಯೇನೂ ಬೇಕಿರಲಿಲ್ಲ.

ಆ ದಿನಗಳಲ್ಲಿ ಇಂದು ಇದ್ದಂತೆ ಟಿ.ವಿ ಗಳಿರಲಿಲ್ಲವಲ್ಲಾ!

ನಾಟಕ ಮುಂಜಾನೆ ಮುಗಿಯುತ್ತಿತ್ತು. ನಾಟಕದ ಪರದೆ, ಸೀನರಿಗಳನ್ನು ಆ ಜಾಗದಿಂದ ತೆಗೆದುಕೊಂಡು ಹೋಗುತ್ತಿದ್ದರು.ಆಮೇಲೆ ನಾವುಗಳು ಆ ಜಾಗಕ್ಕೆ ದಾಳಿ ಇಡುತ್ತಿದ್ದೇವು. ಅಲ್ಲಿ ನಮಗೆ ಬಣ್ಣ ಬಣ್ಣದ ಬಟ್ಟೆ, ಕಾಗಜ, ಗ್ಲಾಸ್, ಮಿಂಚು ಕಾಗದ ಇನ್ನೂ ಏನೂ ಏನೂ ಸಿಕ್ಕರೂ ಆಯ್ದುಕೊಳ್ಳುತ್ತಿದ್ದೇವು. ಅವುಗಳನ್ನೆಲ್ಲಾ ತಂದು ನಾವುಗಳು ಸಹ ಅದೇ ರೀತಿಯಲ್ಲಿ ಪಾತ್ರ ಅಭಿನಯವನ್ನು ಮಾಡಲು ತಯಾರಾಗುತ್ತಿದ್ದೇವು. ಬೇಸಿಗೆ ರಜೆ ಪೂರ್ತಿ. ನೆನಪು ಇರುವವರೆಗೂ ಅದೇ ನಾಟಕದ ಗುಂಗು ಮನದ ತುಂಬ. ಮನೆಯಲ್ಲಿನ ಟವಲ್, ಪಂಚೆ, ಸೀರೆಗಳೆ ನಾಟಕದ ಪರದೆಗಳು, ತೆಂಗಿನ ಕಾಯಿ ಮತ್ತು ಕೋಲೇ ಗಧೆ, ಬಿಲ್ಲುಗಳನ್ನು ಭಾಣಗಳನ್ನು ನಾವೇ ಮಾಡಿಕೊಂಡು, ರಟ್ಟಿನಲ್ಲಿ ಕೀರಿಟಗಳನ್ನು ಧರಿಸಿಕೊಳ್ಳುತ್ತಾ ಸಿದ್ಧರಾಗುತ್ತಿದ್ದೇವು. ಮನೆಯಲ್ಲಿನ ಅಮ್ಮಂದಿರ ಮುಖದ ಪವಡರ್ರೇ ಮೇಕಪ್ಪಿಗೆ ಬಳಸುತ್ತಿದ್ದೇವು. ನೆನಪಿನಲ್ಲಿ ಉಳಿದ ಯಾವುದೋ ಒಂದು ದೃಶ್ಯವನ್ನು ಅಭಿನಯಿಸುತಿದ್ದೇವು.ಪ್ರೇಕ್ಷಕರುಗಳು ನಾವೇ ಪಾತ್ರಧಾರಿಗಳು ನಾವೇ!!

ನೆನಪಿಸಿಕೊಂಡರೇ ಆ ವಯಸ್ಸಿನಲ್ಲೂ ಅಷ್ಟೊಂದು ಆಕರ್ಷಿತರಾಗಿದ್ದೇವೆ ಈ ನಾಟಕಕ್ಕೆ ಅನ್ನಿಸುತ್ತದೆ?

ಆ ವಯಸ್ಸೇ ಹಾಗೆ ಅನಿಸುತ್ತದೆ... ಮನಸ್ಸಿನಲ್ಲಿ ಬಂದಿದ್ದನ್ನೂ ಕಾರ್ಯರೂಪಕ್ಕೆ ಯಾವ ರೀತಿಯಲ್ಲೋ ತಂದು ಬಿಡುತ್ತಿದ್ದೇವು. ಮುಂದೇನಾಗುತ್ತದೋ ಎಂಬುದನ್ನು ಏನಂದರೂ ಯೋಚಿಸುತ್ತಿರಲಿಲ್ಲ. ಪ್ರತಿಯೊಂದನ್ನೂ ಅನುಕರಿಸುತ್ತಿದ್ದೇವು. ಮನಸ್ಸಿಗೆ ಇಷ್ಟಪಟ್ಟಿದ್ದನ್ನು ಮಾಡುತ್ತಿದ್ದೇವು.

ನಾನು ಮತ್ತು ನನ್ನ ಗೆಳೆಯರುಗಳು ಸೇರಿ ಕುವೆಂಪು ರಚಿತ "ಬೆರಳ್ಗೆ ಕೊರಳ್" ನಾಟಕ ಪುಸ್ತಕವನ್ನು ತೆಗೆದುಕೊಂಡು, ಈ ನಾಟಕವನ್ನು ಅಭಿನಯಿಸೋಣ ಎಂದುಕೊಂಡು ಒಂದೇರಡು ದಿನ ನಮ್ಮ ಕಣದಲ್ಲಿ ಪ್ರಾಕ್ಟಿಸ್ ಮಾಡಿದ್ದ ನೆನಪು!

ಒಡೆದ ಕನ್ನಡಿಯ ಗಾಜನ್ನು ತೆಗೆದುಕೊಂಡು ನೆರಳು ಬೆಳಕಿನ ಆಟದಲ್ಲಿ ಏನೇನೂ ಚಿತ್ರಗಳನ್ನು ಬೆರಳುಗಳ ಮೊಲಕ ಕತ್ತಲಿನ ಕೋಣೆಯಲ್ಲಿ ಸಿನಿಮಾ ಅಂದುಕೊಂಡು ಬಿಡುತ್ತಿದ್ದದ್ದು.

ಉಫ್! ಇದೆಲ್ಲವನ್ನು ದೊಡ್ಡವರಾಗುತ್ತಾ ದೊಡ್ಡವರಾಗುತ್ತಾ ನಿಜ ಮರ್ಮ ಗೊತ್ತಾಗುತ್ತಾಲೂ ಏನೋ ಮಾಡುವುದನ್ನು ಬಿಟ್ಟು ಬಿಟ್ಟೇವೆನೋ ತಿಳಿಯದು. ಇಂದು ನೆನಸಿಕೊಂಡರೇ ಅಚ್ಚರಿಯಾಗುತ್ತದೆ.

ಇದ್ಯಾಲ್ಲಾ ಯಾಕೆ ನೆನಪಾಯಿತು ಅಂದರೇ..... ನನ್ನ ಗೆಳೆಯರಾದ (ಯೋ) ಅವರು ನೀವು ಒಂದು ಕಥೆ ಬರಯಬೇಕು ಸಾರ್! ಅದು ತುಂಬ ಇಂಟರ್ ಸ್ಟಿಂಗ್ ಆಗಿರಬೇಕು. ಅದು ಥ್ರೀಲ್, ಮಿಸ್ಟರಿಯಾಗಿರಬೇಕು. ಕೆಲವೇ ಕೆಲವು ಗೆಳೆಯರನ್ನು ಒಂದಿರುವ ಪಾತ್ರಗಳಿರುವ ಚಿಕ್ಕ ಕಥೆಯನ್ನು ಬರಿಯಿರಿ. ಅದನ್ನ ಕಿರುಚಿತ್ರದ ರೀತಿಯಲ್ಲಿ ನಾವೇ ಶೋಟ್ ಮಾಡೋಣ.. ನಾವುಗಳೇ ಅಭಿನಯಿಸೋಣ.. ಎಂದು ನನ್ನಲ್ಲಿ ತಮ್ಮ ಹೊಸ ಸೃಜಶೀಲತೆಯ ಯೋಚನೆಯನ್ನು ಹಂಚಿಕೊಂಡರೂ. [ಹೇಳಿದ್ದು ೨೭ ಮಾರ್ಚ್. *ಕೊನೆಯಲ್ಲಿ ಓದಿ ಆ ದಿನದ ಮಹತ್ವ]

ಹೌದಲ್ಲವಾ! ಯಾಕೆ ಮಾಡಬಾರದು ಅನಿಸಿತು. ಅವರುಗಳು ಸಹ ಆ ರಂಗದಲ್ಲಿ ತಮ್ಮದೇ ಛಾಪನ್ನು ತೋರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸಮಯ ಮತ್ತು ಅವಕಾಶ ಬೇಕು ಅಷ್ಟೇ.

ಎಲ್ಲರೂ ತಮ್ಮ ಕೈಯಲ್ಲಿ ಆಗುವುದಿಲ್ಲ! ಅದು ನಮ್ಮಂತವರಿಗಲ್ಲಾ! ಎಂದುಕೊಳ್ಳುತ್ತಾ ತಮ್ಮಲ್ಲಿರುವ ನಿಜವಾದ ಸಾಮರ್ಥ್ಯವನ್ನು ಅದುಮಿಟ್ಟುಕೊಂಡಿರುತ್ತಾರೆ.

ಆದರೇ ಈ ರೀತಿಯಲ್ಲಿ ನಾವುಗಳು ಮಾಡುವ ನಮ್ಮ ನಿತ್ಯ ಕೆಲಸದಿಂದ ಬೇರೆಯದ್ದೇ ಏನಾದರೂ ಒಂದನ್ನೂ ಮಾಡುವುದು ನಮ್ಮ ನೀರಸ ಜೀವನಕ್ಕೆ ಸಂಜೀವಿನಿ ಇದ್ದ ಹಾಗೆ.

ನೋಡಬೇಕು ಅವರುಗಳು ಕೇಳಿದಂತಹ ಕಥೆಯನ್ನು ರಚಿಸಲು ನನ್ನಿಂದ ಸಾಧ್ಯವಾ? ಗೊತ್ತಿಲ್ಲಾ! ನಾನೇನೂ ಕಥೆಗಾರನಲ್ಲ.

ಏನೋ ತಿಳಿದ, ಅನಿಸಿದ, ಭಾವಿಸಿದ ಯೋಚನೆಗಳಿಗೆ ಅಕ್ಷರ ರೂಪವನ್ನು ಈ ಬ್ಲಾಗಿನಲ್ಲಿ ಕೊಡುತ್ತಿದ್ದೀನಿ. ಎಷ್ಟು ಜನಕ್ಕೆ ಈ ನನ್ನ ಪದಗಳ ರಂಗೋಲಿ ಇಷ್ಟವಾಗಿದಿಯೋ, ಇಷ್ಟವಾಗಿಲ್ಲವೋ? ಗೊತ್ತಿಲ್ಲಾ!




[* ಮಾರ್ಚ ೨೭, ವಿಶ್ವ ನಾಟಕ ದಿನ. ರಂಗಶಂಕರ ಬೆಂಗಳೂರಿನಲ್ಲಿ ವೈವಿಧ್ಯಮಯವಾದ ಕಾರ್ಯಕ್ರಮಗಳು ಜರುಗಿದ್ದಾವೆ. ಎಲ್ಲಾ ಹವ್ಯಾಸಿ ನಾಟಕ/ಸಿನಿಮಾ ಕಲಾವಿದರುಗಳು, ನಾಟಕ/ಸಿನಿಮಾ ನಿರ್ದೇಶಕರುಗಳು ಮತ್ತು ನಾಟಕ/ಸಿನಿಮಾ ರಚನಕಾರರುಗಳು ಸೇರಿ ಹತ್ತು ನಾಟಕಗಳನ್ನು ಅಂದೇ ರಚಿಸಿ. ಅಂದೇ ಪ್ರಾಕ್ಟೀಸ್ ಮಾಡಿ. ಅಂದೇ ಪ್ರದರ್ಶಿಸಿದ್ದಾರೆ. ಇದು ಒಂದು ಹೊಸ ಪ್ರಯೋಗ ಮತ್ತು ದಾಖಲೆಯೇ ಸರಿ. ಅಂದು ರಂಗ ಶಂಕರ ನಾಟಕ ಮಂದಿರದ ಮುಂಭಾಗದಲ್ಲಿ ಹೌಸ್ ಫುಲ್ ಬೋರ್ಡ ಇತ್ತಂತೇ!

ನಾಟಕ ಎಂದರೇ ಸಿನಿಮಾ ಮಂದಿಗೆ ಗರಡಿ ಮನೆಯಿದ್ದಂತೆ. ಇಂದಿನ ಎಲ್ಲಾ ಪ್ರತಿಭಾವಂತ ನಟ/ನಟಿಯರುಗಳ ಮೊಲ ಬೇರು ನಾಟಕ ರಂಗವಾಗಿದೆ. ಇದು ಬೆಳೆದರೇ ಅದು ಬೆಳೆಯುವುದು. ಆದ್ದರಿಂದ ನಾಟಕವೇ ಅತ್ಯಂತಹ ಹೆಚ್ಚಿನ ಜವಾಬ್ದಾರಿಯುತವಾದ ಕಲೆಯಾಗಿದೆ.]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ