ಶನಿವಾರ, ಫೆಬ್ರವರಿ 25, 2012

ವಿದೇಶ ಪ್ರವಾಸವೆಂದರೇ....

ವಿದೇಶ ಪ್ರವಾಸ ಇಂದಿನ ದಿನಗಳಲ್ಲಿ ನಮ್ಮ ಯುವಕ ಯುವತಿಯರುಗಳಿಗೆ ಇಲ್ಲಿಯೇ ಹತ್ತಿರದ ಪಕ್ಕದ ಕೇರಿಗಳಿಗೆ ಹೋಗಿ ಒಂದು ಸುತ್ತು ಹಾಕಿಕೊಂಡು ಬಂದಂತಾಗಿದೆ. ಮುಂಚೆ ಇದ್ದಂತೆ ವಿದೇಶ ಪ್ರವಾಸವೆಂದರೇ ಸಾಕು ಸಾಲು ಸಾಲು ಹುಬ್ಬುಗಳು ಹುಬ್ಬೇರುತ್ತಿದ್ದವು. ಇದಕ್ಕೆಲ್ಲಾ ನಾವುಗಳು ಜೈ ಅನ್ನಬೇಕಾಗಿರುವುದು ಐ.ಟಿ, ಬಿ.ಟಿ ಮತ್ತು ಬಿ.ಪಿ.ಓ ಕಂಪನಿಗಳಿಗೆ.

ಸಾವಿರಾರು ಮೈಲಿ ದೂರದಲ್ಲಿರುವ ದೇಶಗಳಿಗೆ ನಮ್ಮ ಹುಡುಗ/ಹುಡಿಗಿಯರನ್ನು ಸಾವಿರಾರು ರೂಪಾಯಿಗಳು ವೆಚ್ಚವನ್ನು ಭರಿಸುತ್ತಾ ಕಳಿಸುತ್ತಿದ್ದಾರೆ. ಇಡೀ ಜಗತ್ತನ್ನೇ ತನ್ನ ಸರ್ವೀಸ್ ನಲ್ಲಿ ಒಂದು ಸುತ್ತು ಹಾಕಿಬಿಟ್ಟಿರುತ್ತಾನೆ/ಳೆ.

ಇದು ಒಂದು ರೀತಿಯಲ್ಲಿ ನಮ್ಮಗಳಿಗೆ ಅಪರೂಪದ ಸದಾವಕಾಶ.

ಯೋಚಿಸಿ ನಮ್ಮ ಅಪ್ಪ/ಅಮ್ಮ ಅವರುಗಳು ಜೀವಮಾನದಲ್ಲಿ ಕೇವಲ ಅಂದರೇ ಪಕ್ಕದ ಒಂದು ಹೊರ ರಾಜ್ಯಕ್ಕೆ ಹೋಗಿರಬಹುದು. ವಿಮಾನಯಾನ ಅಂದರೇ ಅಶ್ಚರ್ಯಕರವಾಗಿ ಕಣ್ ಕಣ್ ಬಿಟ್ಟು ಕೇಳುತ್ತಾರೆ. ಅವರುಗಳು ಕೆಲಸ ಮಾಡುವ ಜಾಗದಲ್ಲಿ ಈ ರೀತಿಯ ವ್ಯವಸ್ಥೆ ಏನಂದರೂ ಬರುವುದಕ್ಕೆ ಅವಕಾಶವಿಲ್ಲ ಬಿಡಿ. ಯಾಕೆಂದರೇ ಅವರುಗಳು ಕೆಲಸ ಮಾಡುವುದು ತಮ್ಮ ದೇಶಕ್ಕಾಗಿ. ನಾವುಗಳು ಮಾಡುವುದು.........? ಬೇಡ ಬಿಡಿ ಗೊತ್ತಿದೆಯೆಲ್ಲಾ.

ಮೂರು ಮೂರು ತಿಂಗಳಿಗೂ ಒಂದೊಂದು ದೇಶ ಸುತ್ತುವ ಜನಗಳು ನಮ್ಮ ಸುತ್ತ ಮುತ್ತ ಇದ್ದಾರೆ. ಪಾಸ್ ಪೋರ್ಟನ ಪುಟಗಳ ಯಾವುದೇ ಒಂದು ಚಿಕ್ಕ ಮೊಲೆಯು ಖಾಲಿ ಇರದ ರೀತಿಯಲ್ಲಿ ಸ್ಟಾಂಪಿಂಗ್ ಆಗಿಬಿಟ್ಟಿರುತ್ತದೆ. ಇದಕ್ಕೆಲ್ಲಾ ಅವರುಗಳು ಕೆಲಸ ಮಾಡುವ ಕಂಪನಿಗಳಿಗೆ ಹೇಳಿ ಜೈ ಜೈ!!

ಇಲ್ಲಿ ಮಾಡುವ ಕೆಲಸವನ್ನೇ ಅಲ್ಲಿ ಮಾಡಿ ಡಾಲರ್, ಯುರೋ ರೂಪಾಯಿಗಳಲ್ಲಿ ಸಂಬಳ ಎಂದು ಎಣಿಸಿಕೊಳ್ಳುತ್ತಾರೆ. ಬಂದಂತಹ ಸಂಬಳವನ್ನು ರೂಪಾಯಿಯಿಂದ ಗುಣಿಸಿಕೊಂಡು ಹೆಮ್ಮೆ ಪಡುತ್ತಾರೆ. ಹೀಗೆ ಹೊರ ದೇಶದಲ್ಲಿ ಮಾಡುವ ಕೆಲಸವನ್ನು ಇನ್ನೂ ಹತ್ತು ವರ್ಷ ಮಾಡಿದ್ದರೂ ಇಷ್ಟೊಂದು ದುಡ್ಡು ಶೇಕರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಆನಂದ ಪಡುತ್ತಾರೆ. ಗ್ರೇಟ್!




"ಅಮೇರಿಕಾದಲ್ಲಿ ಗೂರೂರು" ಪ್ರಸಿದ್ಧ ಕನ್ನಡ ಪ್ರವಾಸ ಕಥನವನ್ನು ತಿರುಗ ಮುರುಗ ಲೆಕ್ಕವಿಲ್ಲದಷ್ಟು ಭಾರಿ ಓದುವ ರುಚಿಯಿರುವವರು ಓದಿರಬಹುದು. ಅಷ್ಟೊಂದು ಕುತೂಹಲ ಹೊರದೇಶದ ಬಗ್ಗೆ? ಯಾವುದಾದರೂ ಸಿನಿಮಾದಲ್ಲಿ ಹೊರದೇಶದ ಸೀನರಿಗಳಿದ್ದರೇ ನಾವುಗಳು ಫುಲ್ ಚಿತ್ತ್! "ಏನಾಮ್ಮ ಹೀಗೂ ಉಂಟಾ.. ಏನ್ ರೋಡ್ ಗಳು, ಏನ್ ಜನಗಳು ಎಲ್ಲಾ ಕ್ಲೀನ್ ವೈಟ್.. ಸುಪರ್ ಕಣೋ.." ಎಂಬ ಉದ್ಗಾರ!

ಈ ರೀತಿಯ ಅಚ್ಚರಿಯ ಜಗತ್ತಿಗೆ ತಾನೇ ಕಾಲಿರಿಸಿಬಿಟ್ಟರೇ.. ಕೇಳಬೇಕೆ? ಸ್ವರ್ಗಕ್ಕೆ ಮೂರು ಗೇಣು.

ವಿಮಾನಯಾನವು ಸಹ ಸ್ವರ್ಗಕ್ಕೆ ತೀರ ಹತ್ತಿರವಿದೆ ಎಂಬ ಭಾವನೆಯನ್ನು ಪ್ರತಿಯೊಬ್ಬರೂ ವಿಮಾನದಲ್ಲಿ ಕುಳಿತು ಆಕಾಶದಲ್ಲಿ ಪ್ರಯಾಣಿಸುವಾಗ ಅನುಭವಿಸಿರುತ್ತಾರೆ.

ವಿದೇಶಕ್ಕೆ ಹೋಗುತ್ತಿದ್ದೀಯಾ ಎಲ್ಲಾ ಪ್ಯಾಕಿಂಗ್ ಅಯ್ತಾ? ವಿಸಾ, ಪಾಸ್ ಪೋರ್ಟ್ ಪೇಪರ್ಸ್ ಎಲ್ಲಾ ಸರಿಯಾಗಿ ಇಟ್ಟುಕೊಂಡಿದ್ದೀಯಾ. ಒಂದಷ್ಟು ಅಕ್ಕಿ ಜಾಸ್ತಿನೇ ತೆಗೆದುಕೊಂಡು ಹೋಗು. ಅಲ್ಲಿ ಯಾಕೆ ಡಾಲರ್ ನಲ್ಲಿ ಖರೀದಿಸ್ತಿಯಾ? ಏ ಬರುವಾಗ ಅಲ್ಲಿಂದ ನಮಗೆಲ್ಲಾ ಏನಾದರೂ ಗಿಫ್ಟ್ ತೆಗೆದುಕೊಂಡು ಬರಬೇಕು. ಇಲ್ಲಾ ಅಂದ್ರೇ ಸಾಯಿಸಿ ಬಿಡ್ತಿವಿ. ಎಂದು ಹೆದರಿಸುವ ಗೆಳೆಯರು/ಹೆತ್ತವರು/ಸಂಬಂಧಿಕರುಗಳು. ಪ್ರತಿಯೊಬ್ಬರಿಂದ ಶುಭಾಶಯಗಳ ಸುರುಮಳೆ.

ಹೆತ್ತವರಿಗೆ ಒಂದಷ್ಟು ಗೇಣು ಮೇಲಕ್ಕೆ ಹೋದ ಅನುಭವ.




ಹೌದು! ಸಾವಿರಾರು ರೂಪಾಯಿಗಳ ವೆಚ್ಚದಲ್ಲಿ, ಸಾವಿರಾರು ಮೈಲು ದೂರದ ಜಾಗಕ್ಕೆ, ಜೀವ ಮಾನದಲ್ಲಿ ಎಂದು ಕಾಣದ ಜಗತ್ತಿಗೆ ಕಾಲಿಡುತ್ತಿದ್ದಾನೇ ಎಂದರೇ ಎಂಥವರಿಗೂ ಅಭಿಮಾನ! ಕಾಣದ ಜಗತ್ತು ಹೇಗೋ ಏನೋ ಎಂಬ ಕುತೂಹಲ?

ಈ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡು ಬರುವ ವಿದೇಶ ಪ್ರಯಾಣಿಗನಿಗೆ ಮೊದಲು ದಿಕ್ಕು ತಪ್ಪುವ ಅನುಭವವೆಂದರೇ ಅಲ್ಲಿಯ ಟ್ರಾಪಿಕ್, ಕಾರ್ ನಲ್ಲಿ ಎಡಗಡೆಯಲ್ಲಿ ಡ್ರೈವರ್ ಸೀಟ್, ಬಲಗಡೆಯಲ್ಲಿ ಎಲ್ಲಾ ವಾಹನಗಳು ಚಲಿಸಬೇಕು. ರಸ್ತೆಯಲ್ಲಿ ನಮ್ಮ ದೇಶದಲ್ಲಿ ಇರುವಂತಹ ಯಾವೊಂದು ಗುಂಡಿ, ಗಲಿಜು, ಜನ ಜಂಗುಳಿಯಿಲ್ಲ, ರಸ್ತೆಗೆ ಅಡ್ಡ ಬರುವವರಿಲ್ಲ.ಪ್ರತಿಯೊಬ್ಬರೂ ಬಹು ಸ್ಟ್ರೀಕ್ಟಾಗಿ ಸಿಗ್ನಲ್ ಪಾಲೋ ಮಾಡೋ ಪರಿ.

ಇಲ್ಲಿಂದ ಪ್ರಾರಂಭವಾಗುತ್ತದೆ ನೋಡಿ. ಏನ್ ದೇಶಾ ರ್ರೀ! ಪ್ರತಿಯೊಂದು ಎಂಥ ನೀಟ್. ಎಂಥ ಜನರ್ರೀ.. ಎಷ್ಟೊಂದು ಅಚ್ಚುಕಟ್ಟು. ಎಲ್ಲಾದರೂ ಏನಾದರೂ ಕಸ ಗಿಸ ಕೇಳಬೇಡಿ. ಜನಗಳೆ ಕಮ್ಮೀ ಬಿಡಿ ಇಲ್ಲಿ. ಅಂದುಕೊಂಡು ಒಮ್ಮೆ ಒಂದು ಉಸಿರನ್ನು ತೆಗೆದುಕೊಂಡು ಹಾಗೆ ಕರಗಿಬಿಡುತ್ತಾನೆ/ಳೆ.

ಈ ಒಂದು ಕುತೂಹಲ ವಾರ ತಿಂಗಳವರೆಗೂ ಇರುತ್ತದೆ. ಯಾಕೆಂದರೇ ಎಲ್ಲಾದೂ ಹೊಸದು ತೀರಾ ಹೊಸದು. ಪ್ರತಿಯೊಂದು ನಮಗಿಂತಹ ಬಿನ್ನ ಮತ್ತು ವಿಭಿನ್ನ.

ತಾನು ಕಾಣುತ್ತಿರುವುದೇ ಹೊಸ ಸಂಸ್ಕೃತಿ. ಕೇವಲ ಇಂಗ್ಲೀಷ್ ಸಿನಿಮಾದಲ್ಲಿ ಕಾಣುತ್ತಿದ್ದ ನೋಟವನ್ನು ತಾನೇ ಕಣ್ಣಾರೆ (೩ ಡಿ) ಹತ್ತಿರದಿಂದ ನೋಡುತ್ತಾನೆ.

ಏನ್ ಬಿಲ್ಡಿಂಗ್ಸ್, ಏನ್ ಶಾಫಿಂಗ್ ಮಾಲ್ಸ್, ದೂಳೇ ಇಲ್ಲದ ಗಾಳಿ, ಜನರೇ ಇಲ್ಲದ ರಸ್ತೆಗಳು, ಗಲಾಟೆಯೇ ಇಲ್ಲದ ರೈಲ್ವೆ ನಿಲ್ದಾಣಗಳು ಮತ್ತು ಬಸ್ಸುಗಳು. ಇಷ್ಟೊಂದು ನಿಶಬ್ಧ ಕಲ್ಪನೆಗೂ ಸಹ ನಿಲುಕಲಾರದಾಗಿರುತ್ತದೆ.

ಎಲ್ಲಾ ರಂಗದಲ್ಲೂ ಹೈ ಕ್ಲಾಸ್ ಲೆವಲ್ಲಿಗೆ ಇರುವಂತಹ ವಸ್ತುಗಳು, ರೂಢಿಗಳು, ವ್ಯವಸ್ಥೆಗಳು. ತನ್ನ ಕನಸಿಗೆ ಒಂದು ಇಂಬು ಕೊಡುವಂತಹ ದರ್ಶನ.

ಇಲ್ಲಿಯೆ ಇದ್ದರೇ ನಿಜವಾಗಿಯೂ ಏನ್ ಬೇಕಾದರೂ ಸಾಧಿಸಬಹುದು ಎಂಬ ಭರವಸೆ.

ಕಣ್ಣ ಮುಂದೆ ಕಾಣುವ ಸುಂದರವಾದ ನೋಟದೊಡನೆ ತನ್ನ ಭಾರತದಲ್ಲಿ ಕಾಣುವ ದೂಳ್ ದೂಳ್ ಚಿತ್ರಣವನ್ನು ಕಂಪೇರ್ ಮಾಡಿ ಅತಿ ಹೆಚ್ಚು ಅಂಕಗಳನ್ನು ತಾನು ಕಾಲೂರಿರುವ ಪರದೇಶದ ನಗರ ವ್ಯವಸ್ಥೆಗೆ ಕೊಟ್ಟು ಬಿಡುತ್ತಾನೆ.

ಆಕರ್ಷಣೆ ಎಂದರೇ ಇದೆ. ಹೊಸದಾಗಿ ನಮ್ಮ ಹಳ್ಳಿಯಿಂದ ಬಂದಂತಹ ಹುಡುಗ ಬೆಂಗಳೂರು ಕಂಡು ಹೇಗೆ ಬೆಕ್ಕಸ ಬೆರಗಾಗಿ ಇಲ್ಲಿಯೇ ಒಂದು ಮನೆ ಕಟ್ಟಬೇಕು ಎಂಬ ಛಲವನ್ನು ಮಾಡುತ್ತಾನೋ ಅದೇ ರೀತಿಯಲ್ಲಿ ಪರದೇಶದಲ್ಲಿ ಒಮ್ಮೆ ಮಾಡಿಕೊಳ್ಳುತ್ತಾನೆ.

ಈ ರೀತಿಯಾಗಿ ನಮ್ಮ ಉದ್ಯೋಗಿಗಳು ಮಾರು ಹೋಗಿಬಿಟ್ಟು ಅಲ್ಲಿಯೇ ತಮ್ಮ ವಾಸ್ತವ್ಯವನ್ನು ಮಾಡಿಕೊಳ್ಳಲು ನಿರ್ಧರಿಸಿಬಿಡುತ್ತಾರೆ. ಯಾಕೆಂದರೇ ಅಲ್ಲಿ ಎಲ್ಲಾ ಸುಖವಾಗಿ ಕಾಣುತ್ತದೆ. ಡಾಲರ್, ಯುರೋ ಗಳು ಗರ್ರನೇ ತಿರುಗಿಸಿಬಿಡುತ್ತವೆ.

ಗುಣಕಾರವಾ? ಕಾರಣ ಗೊತ್ತಿಲ್ಲಾ!

ಒಂದು ರೀತಿಯಲ್ಲಿ ಎಲ್ಲಾವೂ ಮಾಯಾಬಜಾರಿನಂತೆ ಕಂಗೊಳಿಸುತ್ತವೆ.

ನಮ್ಮ ದೇಶ ಈ ಮಟ್ಟಕ್ಕೆ ಬರಬೇಕೆಂದರೇ ಇನ್ನೂ ಶತಮಾನ ಬೇಕು ಕಣ್ರೀ! ಅಂತಾ ಮಾತನಾಡುತ್ತಾನೆ. ನಮ್ಮಲ್ಲಿ ಕಾನೂನಿಗೆ ಬೆಲೆನೇ ಇಲ್ಲಾರ್ರೀ! ಬರೀ ರಾಜಕೀಯ! ಏನಂದ್ರೂ ಉದ್ಧಾರ ಆಗೊಲ್ಲ. ಎಂದು ಒಂದು ಶರಾ ಬರೆದುಬಿಡುತ್ತಾನೆ.

ನಾನೊಂತೂ ವಿದೇಶದಲ್ಲಿ ಓದಲಿಲ್ಲ. ನನ್ನ ಮಕ್ಕಳಾದರೂ ಸುಖವಾಗಿ ಇಲ್ಲಿ ವ್ಯಾಸಂಗ ಮಾಡಲಿ. ಎಷ್ಟು ದುಡಿದರೂ ಇಂಡಿಯಾದಲ್ಲಿ, ಕೆಲವೆ ವರುಷಗಳಲ್ಲಿ ಇಲ್ಲಿ ಸಂಪಾಧಿಸಿದ್ದನ್ನೂ ಅಲ್ಲಿ ಸಂಪಾಧಿಸಲೂ ಸಾಧ್ಯವಿರುತ್ತಿರಲ್ಲಿಲ್ಲ. ಎಂದು ಆನಂದಪಡುತ್ತಾನೆ.

ಈ ರೀತಿಯ (ಕ್ಷಣದ?) ಆಕರ್ಷಣೆ ಜೀವನವನ್ನು ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳುವಂತೆ, ಚಿಂತಿಸುವಂತೆ ಮಾಡಿ ಅದೇ ಉಸಿರಾಗುವಂತಾಗುತ್ತದೆ.

ಈ ಸೆಳೆತ ಸಾಮಾನ್ಯವಾದಂತಹ ಕಷ್ಟದಿಂದ ಸುಖದ ಕಡೆಗೆ ಪಯಣ ಎಂಬಂತೆ.. ಹಳತರಿಂದ ಹೊಸತನದೆಡೆಗೆ ಎಂಬಂತೆ.. ಒಂದು ಮಾಮೂಲು ಬದಲಾವಣೆ ಮಾತ್ರ. ಅಲ್ಲಿ ದೇಶ.. ಪರಂಪರೆ.. ಭಕ್ತಿ.. ಹಿರಿಮೆ ಯಾವುದೂ ಗಣನೆಗೆ ಬರುವುದಿಲ್ಲ ಅನಿಸುತ್ತದೆ.

ಏನಂತಿರೀ?





ಲೈಫ್ ಎನಜಾಯ್ ಮಾಡಬೇಕು.. ಲೈಫ್ ನಲ್ಲಿ ಸೇಟ್ಲ್ ಆಗಬೇಕು ಇದೇ ತುಡಿತ ಪ್ರತಿಯೊಬ್ಬರಿಗೂ ಆ ಸಮಯಕ್ಕೆ ಪ್ರಾಮುಖ್ಯವಾಗಿರುತ್ತದೆ.

ಹೌದು ಅಂತಾ ಅನಿಸುತ್ತಾ? ಅಲ್ಲಾ ಅಂತಾ ಅನಿಸುತ್ತಾ? ನೀವೇ ಹೇಳಬೇಕಪ್ಪಾ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ