ಗುರುವಾರ, ಫೆಬ್ರವರಿ 23, 2012

ನೀತಿ ನಿಯತ್ತುಗಳು ಪುಸ್ತಕದ ಬದನೇಕಾಯಿ!

ನಾವುಗಳು ನಮ್ಮ ಶಾಲೆಯ ದಿನಗಳಲ್ಲಿ ತುಂಬುತ್ತಿದ್ದ ಅರ್ಜಿಗಳನ್ನು ಗಮನಿಸಿ ಅಲ್ಲಿ ಜಾತಿ, ಉಪಪಂಗಡ ಇತ್ಯಾದಿ ಜಾಗಗಳು ಇರುತ್ತಿದ್ದವು. ಅವುಗಳನ್ನು ಭರ್ತಿ ಮಾಡುವಾಗ ನಮಗೆಲ್ಲಾ ಒಂದು ರೀತಿಯ ಏನೋ ಅಪರಾಧಿ ಅನುಭವ. ಇದು ಏಕೆ ಅಂದರೇ ಒಂದೊಂದು ಜಾತಿಗೂ ಒಂದೊಂದು ರೀತಿಯ ಅನುಕೂಲಗಳು ಮತ್ತು ಸವಲತ್ತುಗಳು. ಹಿಂದುಳಿದವರಿಗಾಗಿ ಸಂವಿಧಾನದಲ್ಲಿ ಏನೂ ರೀಯಾಯಿತಿಗಳನ್ನು ಕೊಟ್ಟಿದ್ದರು. ಅವುಗಳ ಸದುಪಯೋಗವನ್ನು ಪಡೆಯಲು ಶಾಲಾ ದಿನಗಳಲ್ಲಿ ನಾವುಗಳು ಮತ್ತು ನಮ್ಮ ಸ್ನೇಹಿತರುಗಳು ಈ ರೀತಿಯ ವಿವರಗಳನ್ನು ಭರ್ತಿ ಮಾಡುತ್ತ ಇದ್ದೇವು.

ಚಿಕ್ಕ ಚಿಕ್ಕ ವಯಸ್ಸಿನಲ್ಲಿ ಇದು ಯಾವುದು ಗಣನೆಗೆ ಮತ್ತು ಯೋಚನೆಗೂ ಸಹ ಬರುತ್ತಿರಲಿಲ್ಲ. ಆದರೂ ಎಲ್ಲೋ ಒಂದು ಮನದ ಮೂಲೆಯಲ್ಲಿ ಅವನು ಆ ಜಾತಿಯವನು ಎಂಬ ಒಂದು ಕಾರಣಕ್ಕಾಗಿ ಎಲ್ಲಾ ಸವಲತ್ತುಗಳು ಪಡೆಯುತ್ತಿದ್ದಾನೆ ಎಂಬ ಮಾತು ನಮ್ಮ ನಮ್ಮಲ್ಲಿಯೆ ಹಾಗೆ ಸುಮ್ಮನೇ ಹಾದು ಹೋಗಿರುತ್ತದೆ.

ಹಾಗೆಯೇ ಈ ರೀತಿಯ ಸರ್ಕಾರದ ನೀಲುವು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ರೀತಿಯದು ಅನಿಸುತ್ತಿತ್ತು. ನಿಜವಾಗಿಯೂ ಹಿಂದುಳಿದವರಿಗೆ ಸರಿಯಾದ ಉಪಯೋಗಗಳು ಸಿಗುತ್ತಿಲ್ಲವೆಂಬುದು ನಮ್ಮ ಚಿಕ್ಕ ಚಿಕ್ಕ ಮನಸ್ಸುಗಳಿಗೆ ಕಾಣುತ್ತಿರುತ್ತದೆ. ಎಷ್ಟೇ ಉತ್ತಮವಾಗಿ ಜೀವನ, ಹಣ ಸಂಪಾಧಿಸಿದ್ದರು ಅವನು ಆ ಜಾತಿಯವನು ಎಂಬುದುವರಿಂದ ಈ ಎಲ್ಲಾ ಅನುಕೂಲಗಳನ್ನು ಪಡೆಯುತ್ತಿದ್ದನು. ಹಾಗೆಯೇ ನಿಕೃಷ್ಟ ಬದುಕನ್ನು ನಿತ್ಯ ಕಾಣುತ್ತಿದ್ದರೂ ನೀನು ಈ ಜಾತಿಯಲ್ಲಿ ಹುಟ್ಟಿರುವ ಕಾರಣದಿಂದ ಈ ಎಲ್ಲಾ ಸೌಕರ್ಯಗಳು ನಿನಗೆ ಸಿಗುವುದಿಲ್ಲ ಎಂಬ ಹಿರಿಯರ ಬುದ್ಧಿ ಮಾತು!

ಹೀಗೆ ನಮ್ಮ ನಮ್ಮಲ್ಲಿಯೇ ಕಂದರವನ್ನು ಸೃಷ್ಟಿ ಮಾಡುವ ಒಂದು ಪದ್ಧತಿ ಚಿಕ್ಕ ವಯಸ್ಸಿನಿಂದಲೇ ಅದೂ ಅ,ಆ,ಇ.. ಕಲಿಯುವ ವಿದ್ಯಾ ಮಂದಿರದಿಂದ ಪ್ರಾರಂಭವಾಗಿ ನಾವುಗಳು ಬೆಳೆದು ದೊಡ್ಡವರಾಗಿ ಅಲ್ಲಿ ಇಲ್ಲಿ ಬದುಕು ಜಟಕಾ ಬಂಡಿಯನ್ನು ಸಾಗಿಸುವ ತನಕ ನಿತ್ಯ ನೂತನವಾಗಿ ಇಂದು ಜೊತೆಯಲ್ಲಿದೆ.

ಆದರೇ ಸಂವಿಧಾನದಲ್ಲಿ ಸರ್ವರು ಸಮಾನರು ಎಂಬ ನೀತಿ ಒಂದು ಕಡೆ. ಜಾತ್ಯಾತೀತ ರಾಷ್ಟ್ರ ನಾವೆಲ್ಲಾ ಒಂದೇ ಎಂಬ ಘೋಷಣೆ ಮತ್ತೊಂದು ಕಡೆ. ಪ್ರತಿಯೊಂದು ರಾಜಕೀಯ ಪಕ್ಷಗಳ ಮೊಲ ಸೆಲೆ ಜಾತಿ ಮಾತ್ರ. ಇಂದು ನಾವುಗಳು ಇವರುಗಳು ಸ್ಪರ್ಧಿಸುವ ಚುನಾವಣೆಯನ್ನು ನೋಡಿದಾಗ, ಅದರ ವಿವರಗಳನ್ನು ಓದಿದಾಗ ತಿಳಿಯುತ್ತಿದೆ.

ಇದು ಇನ್ನಾದರೂ ತೊಲಗಲಿ ಎಂದರೇ ಅದು ಎಷ್ಟರ ಮಟ್ಟಿಗೆ ನಮ್ಮೆಲ್ಲಾರಲ್ಲಿ ಸದ್ದಿಲ್ಲದೆ ಹುದುಗಿದೆ ಅಂದರೇ, ಅದು ಇಲ್ಲದೇ ಏನೂ ಇಲ್ಲಾ ಎನ್ನುವಷ್ಟರ ಮಟ್ಟಿಗೆ.




ಇದಕ್ಕಾಗಿ ಪ್ರತಿಯೊಂದು ಜಾತಿಯ ಮುಖಂಡರ ಹೋರಾಟ. ನಮ್ಮ ಜಾತಿ ಹೀಗೆ ಹೀಗೆ ಹಿಂದುಳಿದಿದೆ. ಹೀಗೆ ಹೀಗೆ ಸರ್ಕಾರಿ ಅನುಕೂಲಗಳು ಸಿಗಲೇ ಬೇಕು. ಆ ವರ್ಗಕ್ಕೆ ಈ ವರ್ಗಕ್ಕೆ ನಮ್ಮನ್ನು ಸೇರಿಸಿ ಎಂಬ ಸಿಪಾರಸುಗಳ ಸರಮಾಲೆ ನಿತ್ಯ ಅರ್ಪಣೆ.

ಗಾಂಧಿ ಕಂಡ ರಾಮರಾಜ್ಯದ ಕನಸು ಎಂದೆಂದಿಗೂ ಕನಸಾಗಿಯೇ ಇರುವಂತಾಗಿದೆ.

ಎಲ್ಲೇಲ್ಲಿ ನೋಡಿದರು ಜಾತಿವಾರು ಪಕ್ಷಗಳು, ಮುಖಂಡರುಗಳು, ಮಠ ಮಾನ್ಯಗಳು, ಅವರದೇಯಾದ ಸಮಾರಂಭಗಳು, ಅಲ್ಲಿ ಅವರದೆಯಾದ ಜನರುಗಳು. ಎಷ್ಟರ ಮಟ್ಟಿಗೆ ಸಮಾಜದಲ್ಲಿ ಅಂತರವನ್ನು ನಾವುಗಳು ನಿತ್ಯ ಸೃಷ್ಟಿ ಮಾಡುತ್ತಿದ್ದೇವೆ ಅಂದರೇ ಅದನ್ನು ಮುಂದೆ ಯಾರಿಂದಲೂ ಮುಚ್ಚಲು ಮತ್ತು ಸರಿಪಡಿಸಲಾರದಷ್ಟು.

ಒಂದು ರಾಜಕೀಯ ಪಕ್ಷ ಅಂದರೇ ಅಲ್ಲಿ ಹತ್ತು ಹಲವು ಮಂದಿಗಳು ಇರುತ್ತಾರೆ. ಹಾಗೆ ಇದ್ದರೂ ಅವರ ಧ್ಯೇಯ ಒಂದೆ ಆಗಿರಬೇಕು. ಒಟ್ಟಾಗಿ ದೇಶದ ಏಳ್ಗೆಯ ಬಗ್ಗೆ ಚಿಂತನೆ ಮಾಡಬೇಕು. ಅದು ಬಿಟ್ಟು ಅವರುಗಳ ಲೆಕ್ಕಾಚಾರ ಕೇವಲ ಮತಗಳನ್ನು ಹೇಗೆ ಹೆಚ್ಚಿಗೆ ಗಳಿಸುವುದು, ಎಷ್ಟು ಬೇಗ ಸರ್ಕಾರದ ಅತಿ ಉನ್ನತ ಹುದ್ದೆಗಳನ್ನು ಅಲಂಕರಿವುದು ಎಂಬುದಾಗಿದೆ.

ಅದಕ್ಕಾಗಿ ಅವರುಗಳು ಮಾಡುವ ಚಿಲ್ಲರೆ ರಾಜಕೀಯವನ್ನು ದೇವರಾಣೆ ಇಡೀ ಪ್ರಪಂಚದಲ್ಲಿ ನಮ್ಮ ಭಾರತವನ್ನು ಬಿಟ್ಟರೆ ಬೇರೆಲ್ಲೂ ಮಾಡುವುದಿಲ್ಲ. ಒಂದೇ ಪಕ್ಷದಲ್ಲಿ ಇದ್ದರೂ ಇವನನ್ನು ಕಂಡರೇ ಅವನಿಗೆ ಆಗುವುದಿಲ್ಲ. ಅವನನ್ನು ಕಂಡರೇ ಇವನಿಗೆ ಆಗುವುದಿಲ್ಲ. ಅವರುಗಳಿಗೆ ಅವರದೇಯಾದ ಮನಸ್ಸಿನ ಕುರಿಯಂತಹ ಹಿಂಬಾಲಕರುಗಳು. ಒಂದೇ ಪಕ್ಷ ಒಂದೇ ಅಜೀಂಡಾದಲ್ಲಿ ಗೆದ್ದು ಬಂದಿದ್ದರು ಅವರುಗಳ ಒಳ ಅಜೀಂಡಾವೇ ಬೇರೆಯದಾಗಿರುತ್ತದೆ. ಒಂದೇ ಒಂದು ಅಂಶದ ಯೋಜನೆಯೆಂದರೇ ಅದಷ್ಟು ಸುಲಭವಾಗಿ ಮಂತ್ರಿಯೂ, ಮುಖ್ಯಮಂತ್ರಿಯೊ ಆಗಬೇಕು. ಅದಕ್ಕಾಗಿ ಜಾತಿಯ ಸಿಂಬಲ್ ನ್ನು ಧಾರಾಳವಾಗಿ ಬಳಸುತ್ತಾರೆ.

ಆದರೇ ಅವರುಗಳು ಸಿಡಿಸುವ ಭಾಷಣ,ಘೋಷಣೆ ಎಂಬ ಕಿಲುಬುಕಾಸಿನ ಮಾತುಗಳಲ್ಲಿ ನಮ್ಮದು ಜಾತ್ಯಾತೀತ ಪಕ್ಷ, ಕೋಮುವಾದವಲ್ಲದ ಪಕ್ಷ, ಸಮಾನತೆಗಾಗಿ ಹೋರಾಡುವ ಪಕ್ಷ ಇತ್ಯಾದಿ ಅಂಗೈಯಲ್ಲಿ ಆರಮನೆಯನ್ನೇ ತೋರಿಸುತ್ತಾರೆ. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯವೇ ಅದರೂ ಅವರುಗಳನ್ನು ಆಯ್ಕೆ ಮಾಡಲೇಬೇಕಾದ ಅನಿವರ್ಯತೆ ನಮ್ಮಗಳಿಗೆ.

ಎಲ್ಲದಕ್ಕೂ ರಾಜಕಾರಣವೇ ಮೊಲ ಎನ್ನುವಂತಾಗಿದೆ. ಪ್ರತಿಯೊಂದು ಜಾತಿಯವರು ದಾರಾಳವಾಗಿ (ಹೆಮ್ಮೆಯಿಂದ?) ಹೇಳಿಕೊಳ್ಳುತ್ತಾರೆ.. ಇವನು ನಮ್ಮ ಜಾತಿಯವನೇ ಕಣ್ರೀ! ನಮ್ಮನೇ ಆ ಜಾಗದಲ್ಲಿ ಇರುವುದು! ನಮ್ಮ ಜಾತಿಯದೇ ಗೌರ್ನಮೆಂಟ್! ಏನೂ ಬೇಕು ಹೇಳಿ?

ಇದೇ ಏನೂ ಸ್ವಾಮಿ ಪ್ರಜಾಪ್ರಭುತ್ವವೆಂದರೇ?

ಇದು ಎಷ್ಟರಮಟ್ಟಿಗೆ ನಮ್ಮನಮ್ಮಲ್ಲಿ ಬೇರು ಇಳಿದುಬಿಟ್ಟಿದೆ ಎಂದರೇ ಈ ಐ.ಟಿ, ಬಿಟಿ ಎಂದು ಮಾತನ್ನಾಡುತ್ತಾ ಮಾತನ್ನಾಡುತ್ತಾ ನಾವುಗಳು ಹದಿನೆಂಟನೇಯ ಶತಮಾನಕ್ಕೂ ಹಿಂದಕ್ಕೆ ಹೋಗಿ ಜೀವಿಸುತ್ತಿದ್ದೇವೆ.

ಇದಕ್ಕೆ ಕೊನೆಗಾಲವೇ ಇಲ್ಲಾ ಎನಿಸುತ್ತದೆ. ಸ್ವಜನ ಪಕ್ಷಪಾತವೇ ಮನೆಯಾಗಿದೆ. ಅವನಿಗೆ ಹತ್ತಿರ ಇರುವವರೆಗೆ ಮಾತ್ರ ಎಲ್ಲಾ ಸವಲತ್ತು. ಮುಂದುವರಿದವನು ನಿತ್ಯ ಮುಂದುವರಿಯುತ್ತಲೇ ಇರುತ್ತಾನೆ. ಬಡವರು ಹಿಂದುಳಿದವರು ಇನ್ನೂ ಹಿಂದಕ್ಕೆ ಹೋಗುತ್ತಲೇ ಇದ್ದಾರೆ. ಇದು ಮತ್ತೊಂದು ವಂಶಪಾರಂಪರ್ಯವಾದ ಆಡಳಿತವೆನ್ನುವಂತಾಗಿದೆ. ಅಪ್ಪನಂತರ ಮಗ, ಮೊಮ್ಮಗ, ಮರಿಮಗ.. ನಿತ್ಯ ಅವರುಗಳ ಸಂಸಾರದ ಮುಖಗಳನ್ನೇ ಬಡ ಮತದಾರ ಕಾಣಬೇಕು!

ಇದು ನಮ್ಮಲ್ಲಿರುವ ದೊಡ್ಡ ಸಾಮಾಜಿಕ ನ್ಯಾಯ. ಒಂದೊಂದು ಪಂಗಡಕ್ಕೂ ಒಬ್ಬೊಬ್ಬ ನಾಯಕ, ಉಪನಾಯಕ ಮತ್ತು ಹಿಂಬಾಲಕರೂ.

ಇದು ಮತ್ತೇ ಅದೇ ಹಿಂದೆ ಇದ್ದಂತಹ ಸಣ್ಣ ಸಣ್ಣ ರಾಜ್ಯಗಳಾಗಿ ಹೊಡೆದು ಆಳುತ್ತಿದ್ದ ನೀತಿಯಂತೆ. ಹೀಗೆಯೆ ಆದರೇ ಒಗ್ಗಟ್ಟು, ದೇಶದ ಸಮಗ್ರತೆ ಎಲ್ಲಿ ಸ್ವಾಮಿ?

ಹೇಳುವುದು ಒಂದು ಮಾಡುವುದು ಇನ್ನೊಂದು. ಮಾತಿಗೂ ಕ್ರೀಯೆಗೂ ಯಾವ ರೀತಿಯಲ್ಲೂ ಸಂಬಂಧವಿಲ್ಲ. ನೀತಿ ನಿಯತ್ತುಗಳು ಪುಸ್ತಕದ ಬದನೇಕಾಯಿಗಳಾಗಿವೆ!

ಈ ರೀತಿ ಮಾಡುತ್ತಿರುವವರೆಲ್ಲಾ ನಮ್ಮ ನಾಯಕರು, ದೇಶ ಕಟ್ಟುವ ಜನಗಳು, ಅಭಿವೃದ್ಧಿ ಪ್ರಾಯೋಜಕರು...




ಇದನ್ನೇಲ್ಲಾ ನಮ್ಮ ಮಹಾ ತಾಯಿ ಭಾರತಾಂಭೆ ಮತ್ತು ಮಗಳು ಕನ್ನಡಾಂಭೆ ಎಷ್ಟು ದಿನಗಳವರೆಗೆ ನೋಡುತ್ತಿರಬೇಕೋ....!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ