ಮಂಗಳವಾರ, ಫೆಬ್ರವರಿ 14, 2012

ಕಾಯಿಸುವುದು ಕಾಯುವುದು ಈ ಪ್ರೇಮಿಗಳ ಪಾಲಿಗೆ

ಬೆಚ್ಚನೆಯ ಭಾವವನ್ನು ಸೂಚಿಸುವ ಈ ದಿನಗಳಲ್ಲಿ ಈ ಪ್ರೀತಿಯ ದಿನವನ್ನು ಸ್ವಾಗತಿಸುವುದಕ್ಕೆ ಕಾತುರನಾಗಿರುವೆನು ಗೆಳತಿ.

ನೀ ಇಲ್ಲದೆ ಕಳೆದ ಈ ಒಂದು ವಾರವನ್ನು ನಾನು ಹೇಗೆ ಕಳೆದೆನೋ ನನಗೆ ತಿಳಿಯದು. ಪ್ರೇಮಿಗಳ ದಿನದಂದೂ ಮತ್ತೇ ಒಂದಾಗೋಣ ಎಂಬ ನಿರ್ಧಾರದೊಂದಿಗೆ ನೀನು ನಿನ್ನ ದಾರಿ ಹಿಡಿದೆ. ನಾನು ನಿನ್ನ ನೆನಪಿನ ಮಳೆಯಲ್ಲಿ ತೊಯುತ್ತಾ ನೆನಯುತ್ತಾ ನಡುಗಿಬಿಟ್ಟೇ.

ಪ್ರೀತಿಯ ಈ ಜಾದುವನ್ನು ಯಾವ ಮಹಾನ್ ಬಾವ ಕಂಡು ಹಿಡಿದನೋ ತಿಳಿಯದಾಗಿದೆ. ತಿಳಿಯುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತೇ. ಆದರೆ ಅದರಲ್ಲಿ ಸಿಲುಕಿಕೊಂಡು ಮಮ್ಮಲು ಸುಖವನ್ನು ಅನುಭವಿಸುವವರೆಗೂ ದೇವರಾಣೆಗೂ ಪ್ರೀತಿ ಅಂದರೇ ಏನೂ ಎಂಬುದು ಎಂಥ ವಿದ್ವಾಂಸನಿಗೂ ತಿಳಿಯದು.

ನಿನ್ನ ಜೊತೆಯಲ್ಲಿ ಇದ್ದಾಗ ನನ್ನನ್ನು ನಾನೇ ಮರೆತ ಕ್ಷಣಗಳು. ನಿನ್ನ ಆ ನುಣ್ಣನೆಯ ಕೂದಲಿನಲ್ಲಿ ನನ್ನ ಕೈ ಬೆರಳನ್ನು ಹಾಗೇ ಆಡಿಸಿದಾಗ ಆಗುವ ಆ ರೋಮಾಂಚನವನ್ನು ಮತ್ತೇ ಮತ್ತೇ ಸವಿಯಬೇಕು ಅನಿಸುತ್ತದೆ. ನಾನು ನಿನ್ನನ್ನು ಮೊದಲು ಇಷ್ಟಪಟ್ಟಿದ್ದು ಆ ನಿನ್ನ ಕಿರಲಾದ ಮುಗ್ಧ ದ್ವನಿಗೆ. ಒಂದು ದಿನ ಆ ದ್ವನಿ ನನ್ನ ಕಿವಿಗೆ ಬಿಳದಿದ್ದರೇ ಏನೋ ಕಳೆದುಕೊಂಡ ಅನುಭವ.

ನೂರಾರು ಹುಡುಗಿಯರ ದ್ವನಿಯನ್ನು ಈ ನನ್ನ ಕಿವಿ ಕೇಳಿದೆ.. ಆದರೇ ಆ ನಿನ್ನ ದ್ವನಿಯ ಜಾದು ನನಗಂತು ಮೋಡಿ ಮಾಡಿದೆ. ಆ ದ್ವನಿಯಲ್ಲಿಯ ನಿಷ್ಕಲ್ಮಶವಾದ ಭಾವ, ಪ್ರೀತಿ, ಅಕ್ಕರೆ, ಕಕ್ಕುಲಾತಿಯನ್ನು ಎಷ್ಟು ನೆನಸಿದರೂ ಕೊನೆಯಿಲ್ಲ.

ಗೆಳತಿ! ಗೊತ್ತಾ? ನೀ ಒಬ್ಬಳು ನನ್ನ ಜೊತೆಯಲ್ಲಿ ಇದ್ದರೇ ಸಾಕು ಇಡೀ ಜಗತ್ತೇ ಶೂನ್ಯವಾದರೂ ನನಗೇನೂ ನೋವಾಗುವುದಿಲ್ಲ. ಅಷ್ಟರಮಟ್ಟಿಗೆ ಆ ನಿನ್ನ ಭರವಸೆಯ ಮಾತು, ಅಸರೆ, ಕಾಳಜಿಯ ಆ ನಗು ನನ್ನನ್ನು ಮಂತ್ರ ಮುಗ್ಧನಾಗಿಸುತ್ತದೆ.

ಈ ಜಗತ್ತಿನಲ್ಲಿ ಪ್ರೀತಿಪಟ್ಟು ಜೊತೆಯಲ್ಲಿ ಸಾವಿರಾರು ವರುಷ ಜೀವಿಸಿದ ಕುರುಹುಗಳನ್ನು ಕಾಣದಾದರೂ, ಆ ಪ್ರೀತಿಯಲ್ಲಿ ಬಿದ್ದು ಎದ್ದು ಜಯಿಸಿದ ಸಾವಿರಾರು ಅಮರ ಪ್ರೇಮಿಗಳ ಕಥೆಗಳು ಈ ನಮ್ಮ ಪ್ರೀತಿಗೆ ಸ್ಪೂರ್ತಿಯೇ ಸರಿ. ಒಂದೊಂದು ಕಥೆಯು ನಮ್ಮದೇ ಅನಿಸುತ್ತದೆ.




ನೀನು ನನ್ನನ್ನು ಏನಕ್ಕಾಗಿ ಇಷ್ಟಪಟ್ಟಿಯು ಆ ದೇವನಿಗೆ ಗೊತ್ತು. ಅಂಥ ಸುಂದರಾಂಗನಂತೂ ನಾನು ಅಲ್ಲ. ನಾನೇ ನಿನಗೆ ಹೇಳಿದ್ದೀನಿ ಎಷ್ಟೋ ಭಾರಿ... ಹೇ ನಮ್ಮ ಜೊಡಿಯಲ್ಲಿ ಏನೋ ಕೂರತೆಯಿದೆ. ನಾನು ನೀನು ಹೀಗೆ ಜೊತೆಯಲ್ಲಿ ನಡೆದಾಡಿದಾಗ ಯಾರದರೂ ಅಂದುಕೊಳ್ಳುತ್ತಾರೆ. ಇಂಥ ಸುಂದರ ಹುಡುಗಿಗೆ ಇಂಥ ನಾಲಾಯ್ಕ್ ಕೊಡಂಗಿ ಜೊತೆಗಾರನೇ? ಎಂದು. ಆಗ ನೀನು ನನ್ನನ್ನು ಬಿಗಿಯಪ್ಪಿ ಕೆನ್ನೆಗೆ ಕೊಟ್ಟ ಆ ಬಿಸಿ ಮುತ್ತು ಇಂದು ಸಹ ಹಾಗೆಯೇ ಈ ನನ್ನ ಕೆನ್ನೆಯ ಮೇಲೆ ಕಾಣಿಸುತ್ತಿದೆ.

ಪ್ರತಿಯೊಬ್ಬರಿಗೂ ಆ ದೇವರು ಒಬ್ಬೊಬ್ಬ ಜೀವನ ಸಂಗಾತಿಯನ್ನು ಸೃಷ್ಟಿ ಮಾಡಿ ಈ ಭೂಮಿಗೆ ಕಳಿಸಿರುತ್ತಾನೆ ಅನಿಸುತ್ತದೆ.

ಎಲ್ಲೋ ಎಲ್ಲೋ ಇರುವ ಎರಡು ಜೀವಗಳು ಯಾವುದೋ ಮಾಯೆಯಲ್ಲಿ ಒಂದಾಗಿಬಿಡುತ್ತವೆ. ಬಿಟ್ಟಿರಲಾರದಷ್ಟು ಗಟ್ಟಿಯಾದಂತಹ ಬಂಧನವನ್ನು ತಮ್ಮ ತಮ್ಮಲ್ಲಿಯೇ ಏರ್ಪಡಿಸಿಕೊಳ್ಳುತ್ತವೆ. ಎರಡು ದೇಹಗಳಾದರೂ ಉಸಿರಾಟ ಒಂದಾಗಿರುತ್ತದೆ. ಇಬ್ಬರೂ ತಮ್ಮ ತಮ್ಮ ಹೃದಯವನ್ನು ಕೊಡುಕೊಳ್ಳುವಿಕೆಯಲ್ಲಿ ತಮ್ಮತಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳುತ್ತಾರೆ.

ಇವನು ಕಷ್ಟಪಟ್ಟರೆ ಅವಳು ಮರುಗುತ್ತಾಳೆ. ಇವಳು ನಿಟ್ಟುಸಿರುಬಿಟ್ಟರೆ ಇವನು ನೋಯುತ್ತಾನೆ. ಹೀಗೆ ಬಂಧಿಸುವ ಆ ಜೀವ ಸೆಲೆ ಯಾವುದು ಗೆಳತಿ?

ನೀನೂ ಏನೋ ಮಾಡಿದರೂ ಅದು ನನಗೆ ಒಂದು ಸುಂದರ ಬಣ್ಣದ ಚಿತ್ರದಂತೆ ಕಾಣುತ್ತದೆ.

ಆ ನಿನ್ನ ನಗು. ಆ ನಿನ್ನ ಸಿಟ್ಟು. ಆ ನಿನ್ನ ಮಾತು. ಆ ನಿನ್ನ ನೋಟ. ಒಂದೇರಡಲ್ಲಾ ನಿನ್ನ ಪ್ರತಿಯೊಂದು ಹೆಜ್ಜೆಯು ಸಹ ಸವಿಯಾದ ಹೆಜ್ಜೇನಿನಂಥೆ ಪ್ರೀತಿಯಾಗಿ ಪ್ರೀತಿಸಲ್ಪಡುತ್ತದೆ.

ಕಟ್ಟಿಕೊಂಡವನಿಗೆ ಕೊಂಡಗಿನೂ ಮುದ್ದು ಎಂದು ಹಿರಿಯರು ಗಾದೆ ಮಾತು ಏನೇ ಹೇಳಿದ್ದರೂ, ನೀನೇ ನನ್ನ ಜೀವವಾಗಿರುವಾಗ ನಿನ್ನ ಪ್ರತಿಯೊಂದು ಉಸಿರು ನನ್ನದಾಗಿರುವಾಗ ನನಗೆ ಎಲ್ಲವೂ ಇಷ್ಟವಾಗಲೇ ಬೇಕು ಅಲ್ಲವಾ?

ಗೊತ್ತಾ ನೀನಗಾಗಿ ಈ ಪ್ರೇಮಿಗಳ ದಿನದ ಪ್ರೀತಿಯ ಉಡುಗೊರೆಯನ್ನು ತರುವುದಕ್ಕಾಗಿ ಸುತ್ತಾಡಿದ ಜಾಗವಿಲ್ಲ.

ಎಲ್ಲರೂ ಮಾಮೊಲಿಯಾಗಿ ಕೊಡುವ ಗ್ರೀಟಿಂಗ್ಸ್, ಡ್ರೇಸ್, ಚಾಕೊಲೇಟ್, ಡಾಲ್ ಹೀಗೆ ಸಾಮಾನ್ಯವಾದ ಗಿಪ್ಟ್ ನ್ನು ಕೊಡುವುದಕ್ಕೆ ಮನಸ್ಸೇ ಬರುತ್ತಿಲ್ಲ. ಸುಂದರವಾದ ಅಪರೂಪವಾದ ಏನೊಂದು ವಸ್ತುಗಳು ಸಿಗಲಿಲ್ಲ ಈ ನಿನ್ನ ಗೆಳೆಯನಿಗೆ.

ಅದಕ್ಕಾಗಿಯೇ ನಾನೇ ನನ್ನ ಕೈಯಾರ ಚಿತ್ರಿಸಿದ ಆ ನನ್ನ ಕಲ್ಪನೆಯ ನಿನ್ನ ಮುಖಾರವಿಂದವಿರುವ ಒಂದು ನೆನಪಿನ ಪ್ರೀತಿಯ ಕೋಲಾಜ್ ನ್ನು ಬಣ್ಣಗಳ ಮೇಳದಲ್ಲಿ ಪ್ರೀತಿಯ ಕ್ಯಾನ್ ವಾಸ್ ಮೇಲೆ ಬರೆದಿದ್ದೇನೆ. ಇದನ್ನು ಸುಂದರವಾದ ಗೋಲ್ಡ್ ನ್ ಪ್ರೇಮ್ ನಲ್ಲಿ ಇಟ್ಟಿದ್ದೇನೆ. ಸತ್ಯವಾಗಿಯೂ ಈ ಒಂದು ಉಡುಗೂರೆ ನಿನ್ನ ಮನಸ್ಸನ್ನು ಇನ್ನೇಲ್ಲಿಗೂ ಕರೆದುಕೊಂಡು ಹೋಗದಿದ್ದರೇ ನನ್ನಾಣೆ.

ಇನ್ನೇನೂ ನಾಳೆ ಪುನಃ ನಿನ್ನನ್ನು ಹತ್ತಿರದಿಂದ ನೋಡುವ ದಿನ. ಕಾಯಿಸದೇ ಸರಿಯಾದ ಸಮಯಕ್ಕೆ ಬಂದುಬಿಡು.

ಕಾಯಿಸುವುದು ಕಾಯುವುದು ಈ ಪ್ರೇಮಿಗಳ ಪಾಲಿಗೆ ಬಂದಿರುವ ನಿಜವಾದ ಪಾಡು. ಗೆಳೆಯ ಗೆಳತಿಗಾಗಿ ಪರಿತಪಿಸುವುದು. ಒಂದು ಗಂಟೆಯನ್ನು ಒಂದು ವರ್ಷವಾಗಿ ನೋಡುವುದು. ಜೀವನವೇ ನಶ್ವರ ಎಂದುಕೊಳ್ಳುವುದು.

ಉಫ್! ಪ್ರೇಮಿಗಳ ಪಾಡನ್ನು ಕೇಳುವುವರು ಯಾರು ಗುರು?

ಪ್ರತಿ ವರುಷವು ಈ ಪೆಬ್ರವರಿ ೧೪ ಬರುತ್ತದೆ. ಪ್ರೀತಿಯ ಮಾತುಕತೆ ನಿವೇದನೆಗಳು ವಿನಿಮಯಗಳಾಗುತ್ತವೆ. ಒಂದು ಮೈಲುಗಲ್ಲಾಗಿ ಒಂದು ವರುಷದ ಪ್ರೇಮದ ನಲಿವು, ನಲ್ಮೆಯ ಸಂಕಲನ, ವ್ಯವಕಲನವನ್ನು ಜೀವನದಲ್ಲಿ ಮಾಡಿಕೊಂಡು ತಮ್ಮ ಪ್ರೇಮವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತಾ.. ಜೀವನದ ಈ ಪಯಣದಲ್ಲಿ ಕಾಣದ ತಿಳಿಯದ ಭವಿಷ್ಯತ್ ಕಡೆಗೆ ಭರವಸೆಯ ಮುಖವನ್ನು ಇಡೋಣ!

ಹ್ಯಾಪಿ ವ್ಯಾಲೇಂಟೈನ್ಸ್ ಡೇ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ