ಸೋಮವಾರ, ಸೆಪ್ಟೆಂಬರ್ 5, 2011

ಗುರುವೇ ನಮಃ..



ಗುರು ಬ್ರಹ್ಮ, ಗುರು ವಿಷ್ಣು ಗುರುದೇವಾ ಮಹೇಶ್ವರ.. ಈ ಶ್ಲೋಕವನ್ನು ಅಕ್ಷರ ಕಲಿತ ಪ್ರತಿಯೊಬ್ಬರೂ ಒಮ್ಮೆ ತಮ್ಮ ಮನದಲ್ಲಿ ಹೇಳಿಕೊಂಡಿರಲೇ ಬೇಕು. ಇದರ ಹೇಳಿಕೆ ಹೀಗೆ ಗುರುವೆ ಎಲ್ಲಾ. ಗುರು ಮುಟ್ಟಿದ್ದು ಗುಡ್ಡ ಎಂಬ ನಮ್ಮ ಹಳ್ಳಿಯ ಗಾದೆಯಂತೆ ಗುರು ದೊಡ್ಡವನು. ಅದು ನಿಜವೂ ಹೌದು.

ನಾವುಗಳು ಏನಾದರೂ ಒಂದಿಷ್ಟು ಕಲಿತಿರುವೆವು ಅಂದರೇ ಅದು ನಮ್ಮ ಟೀಚರ್, ಮೇಸ್ಟರ್ ಗಳ ಬೋಧನೆಯಿಂದ ಮಾತ್ರ. ನಮ್ಮ ಬಾಲ್ಯದಲ್ಲಿ ಅವರೇ ಎಲ್ಲಾ. ಅವರು ಹೇಳಿದ ಪ್ರತಿಯೊಂದು ಮಾತು ನಮಗೆಲ್ಲಾ ವೇದ ವಾಕ್ಯ. ಅವರು ಏನೂ ಹೇಳಿದರೂ ಪ್ರಶ್ನೇ ಮಾಡದೆ ಒಪ್ಪಿಕೊಂಡು ಸಾಗುವ ಹಂಬಲ. ಅಷ್ಟೊಂದು ಭರವಸೆ ನಮ್ಮ ಮೇಡಮ್, ಮಾಸ್ತರ್ ಗಳ ಮೇಲೆ.

ಅಂದಿನ ದಿನಗಳಲ್ಲಿ ನಮ್ಮಗಳಿಗೆ ಅವರುಗಳೇ ರೋಲ್ ಮಾಡಲ್, ಆದರ್ಶ ವ್ಯಕ್ತಿಗಳು.

ಯಾರಾದರೂ ಮುಂದೆ ನೀನು ಏನಾಗಲು ಬಯಸುವೆ? ಎಂದು ಕೇಳಿದರೇ ಹಿಂದೆ ಮುಂದೆ ನೋಡದೆ ನಾನು ಮಾಸ್ತರ್/ಟೀಚರ್ ಆಗುವೆ ಎಂದು ಜಂಬದಿಂದ ಹೇಳಿಕೊಂಡಿರುತ್ತೇವೆ.

ಮನೆಯೇ ಮೊದಲ ಪಾಠಶಾಲೆ ತಾಯಿಯೆ ಮೊದಲ ಗುರುವಾದರು.. ನಮಗೆ ಗುರುಗಳು ಎಂದರೇ ನಮ್ಮ ಶಾಲೆಗಳಲ್ಲಿ ನಮ್ಮನ್ನು ಒಂದು ಅದ್ದು ಬಸ್ತಿನಲ್ಲಿ ಇಟ್ಟು ಅ, ಆ, ಇ, ಈ.. ಕಲಿಸಿದ ಮೊದಲ ಮೇಷ್ಟ್ರು. ಅಲ್ಲಿ ನಮ್ಮ ತಪ್ಪುಗಳಿಗೆ ಶಿಕ್ಷೆ ಇರುತ್ತದೆ, ನಮ್ಮ ಗೆಲುವಿಗೆ ಒಳ್ಳೆಯತನಕ್ಕೆ ಮೆಚ್ಚುಗೆಯಿರುತ್ತದೆ, ದಾರಿ ತಪ್ಪಿದಾಗ ಮಾರ್ಗದರ್ಶನ ಮಾಡುವವರಾಗಿರುತ್ತಾರೆ.

ಗುರುವೇ ಎಲ್ಲಾ ಎಂಬ ಭಾವನೆಯನ್ನು ನಾವುಗಳು ಹೊಂದಿರುತ್ತೇವೆ. ಅಂದಿನ ದಿನಗಳಲ್ಲಿ ನಾವುಗಳು ಏನೂ ಅಂದುಕೊಂಡಿರುತ್ತೇವೆ ಅಂದರೇ ನಮ್ಮ ಟೀಚರ್ ದೊಡ್ಡ ಙ್ಞಾನಿಗಳು ಅವರಿಗೆ ತಿಳಿಯದ ವಿಷಯಗಳೇ ಇಲ್ಲಾ.. ಅವರು ಹೇಳಿದರೇ ಮುಗಿಯಿತು.. ನಮ್ಮ ಹೆತ್ತವರಿಗಿಂತ ಹೆಚ್ಚಿಗೆ ಅವರುಗಳಿಗೆ ಗೊತ್ತು ಎಂಬ ಒಂದು ಗೌರವಾಯುತವಾದ ಅಭಿಪ್ರಾಯ ನಮ್ಮ ಮುಗ್ಧ ಮನಸ್ಸುಗಳಲ್ಲಿ ಸ್ಥಾಪಿತವಾಗಿರುತ್ತದೆ.

ನಾವುಗಳು ಇಂದು ಹೀಗೆ ಇರುವೆವು ಎಂದರೇ ಅದು ನಮ್ಮ ಗುರುಗಳು ನಮ್ಮನ್ನು ರೂಪಿಸಿದ್ದರಿಂದ. ಅವರುಗಳು ನಮ್ಮ ಚಿಕ್ಕ ಚಿಕ್ಕ ಮನಸ್ಸಿನಲ್ಲಿ ಬಿತ್ತಿದ ಕನಸಿನ ಬೀಜಗಳಿಂದ.

ಯಾರೊಬ್ಬರಾದರೂ ಗುರುವಿಲ್ಲದೆ ಯಾವುದೇ ಒಂದು ಸಾಧನೆಯನ್ನು ಮಾಡಿದ ಉದಾಹರಣೆ ತೀರಾ ಕಡಿಮೆ. ನಮ್ಮ ಬಾಲ್ಯದ ಶಾಲಾ ದಿನಗಳಿಂದ ಹಿಡಿದು.. ಇಂದು ನಾವುಗಳು ನಮ್ಮ ಕಾಲ ಮೇಲೆ ಇಂದು ನಿಂತುಕೊಂಡು ಎಲ್ಲಾದರೂ ಒಂದು ಕಾರ್ಯವನ್ನು ನಡೆಸುತ್ತಿದ್ದೇವೆ ಎಂದರೇ ಅಲ್ಲಲ್ಲಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಯಾರಾದರೊಬ್ಬ ಗುರುವಿನ ಮಾರ್ಗದರ್ಶನ ದೊರಕಿದೆ ಅಂತ ಅರ್ಥ.

ಯೋಚಿಸಿ ನಮ್ಮಗಳ ಕಗ್ಗಲ್ಲಿನ ರೀತಿಯ ವ್ಯಕ್ತಿತ್ವಕ್ಕೆ ಒಂದು ಮೆರಗು ಯಾವಾಗ ಸಿಕ್ಕಿತು?. ಏನೊಂದು ಗೊತ್ತಿಲ್ಲದ ದಿನಗಳಿಂದ ಇಂದು ಸ್ವಲ್ಪ ಏನಾದರೂ ತಿಳಿದಿದೆ ಎಂದು ಬೀಗುವಂತಾಗಿರುವುದರ ಪ್ರೇರಣೆ ಯಾರು? ಅದು ಸರಿ ಇದು ತಪ್ಪು ಎಂಬ ನಿಷ್ಕರ್ಷವನ್ನು ಮಾಡುವಂತೆ ಮಾಡಿದವರು ಯಾರು? ಹೀಗೆ ನಮ್ಮ ಬದುಕಿಗೆ ಒಂದು ಅರ್ಥವನ್ನು ಕೊಟ್ಟವರು ಅವರುಗಳೇ ಅಲ್ಲವಾ?

ಯಾವುದೇ ಕ್ಷೇತ್ರದಲ್ಲಿ ಇಂದು ಒಂದು ದೊಡ್ಡ ಸಾಧನೆಗಳನ್ನು ಮಾಡಿರುವ ವ್ಯಕ್ತಿಗಳನ್ನು ಕೇಳಿ ನೋಡಿ ಅವರುಗಳ ಇಂದಿನ ಸ್ಥಿತಿಗೆ ಅವರುಗಳು ನೆನಪು ಮಾಡಿಕೊಳ್ಳಲು ತವಕಿಸುವ ಹೆಸರುಗಳೆಂದರೇ ಅವೇ ಅವರ ಸಾಮಾನ್ಯ ಗುರುಗಳು ಮಾತ್ರ. ಗುರುವಿನ ಗುರಿ ಅಷ್ಟು ಮಾತ್ರ ಅವರುಗಳು ಏನೊಂದು ಅಪೇಕ್ಷೆ ಪಡದೆ ತನ್ನ ಶಿಷ್ಯ ಕೋಟಿಯ ಒಂದು ಸಜ್ಜನಿಕೆಯ ಉದ್ಧಾರವೇ ಮೊಲ ಮಂತ್ರವಾಗಿರುತ್ತದೆ. ತನ್ನ ಶಿಷ್ಯ ತನ್ನನ್ನು ಮೀರಿಸಿದಾಗ ಗುರುವಿಗೆ ಸಿಗುವ ಆನಂದ ವರ್ಣಿಸಲು ಅಸಾಧ್ಯ.

ಒಳ್ಳೆಯ ತನಕ್ಕೆ ಮತ್ತೊಂದು ಹೆಸರು ಗುರು ಮಾತ್ರ. ನೀವು ನೋಡಬೇಕು ಹಳ್ಳಿಗಳಲ್ಲಿ ಶಿಕ್ಷಕರನ್ನು ಅಲ್ಲಿನ ಜನಗಳು ಗೌರವಿಸುವ ರೀತಿ. ಬಾಯಿ ತುಂಬ ಮಾಸ್ತರ್ ಎಂದು ಅವರನ್ನು ತುಂಬ ಗೌರವದಿಂದ ಕಾಣುತ್ತಾರೆ. ಯಾಕೆಂದರೇ ತಮ್ಮ ಮಕ್ಕಳಿಗೆ ಸರಿಯಾದ ದಾರಿಯನ್ನು, ನಾಲ್ಕು ಅಕ್ಷರವನ್ನು ಕಲಿಸಿ ಅವರ ಬಾಳನ್ನು ಬಂಗಾರ ಮಾಡುತ್ತಿರುವ ಮೊಲ ಕತೃವೇ ಅವನಾಗಿರುತ್ತಾನೆ ಎಂದುಕೊಂಡು.

ಪ್ರತಿಯೊಂದು ಹೊಸ ಕಲಿಕೆಗೂ ಗುರು ಬೇಕೆ ಬೇಕು ಎಂಬುದನ್ನು ನಾವು ನಮ್ಮ ಹಿಂದಿನ ಪುರಾಣ ಕಥೆಗಳಲ್ಲಿಯೇ ಕೇಳಿದ್ದೇವೆ. ನೋಡಿ ಏಕಲವ್ಯನ ಸಾಧನೆ. ಗುರುಗಳು ತನಗೆ ಕಲಿಸಲಾಗದು ಎಂಬ ಕ್ಷಣದಲ್ಲಿಯು.. ತನಗೆ ಒಬ್ಬ ಗುರುವು ಬೇಕು ಎಂದು ನಿರ್ಧರಿಸಿ ದ್ರೋಣಾಚಾರ್ಯರ ಮಣ್ಣಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಆ ಮೊರ್ತಿಯ ಮುಂದೆ ತನ್ನ ಕಲಿಕೆಯನ್ನು ಮಾಡುತ್ತಾ ಎಲ್ಲಾ ವಿದ್ಯೆಗಳನ್ನು ಕಲಿಯುತ್ತಾ.. ಶಬ್ದವೇದಿ ವಿದ್ಯೆಯಲ್ಲಿ ಅರ್ಜುನನ್ನೇ ಮೀರಿಸಿಬಿಡುತ್ತಾನೆ. ಹಾಗೆಯೇ ದ್ರೋಣಾಚಾರ್ಯರು ತಮ್ಮ ಗುರುದಕ್ಷಿಣೆಯಾಗಿ ಅವನ ಬಲಗೈ ಹೆಬ್ಬೆರಳನ್ನು ಕೇಳಿದಾಕ್ಷಣ ಹಿಂದೆ ಮುಂದೆ ನೋಡದೇ ಬೆರಳನ್ನು ಕತ್ತರಿಸಿ ಗುರು ಕಾಣಿಕೆಯಾಗಿ ಅರ್ಪಿಸಿಬಿಡುತ್ತಾನೆ.

ಗುರು - ಶಿಷ್ಯ ರ ಸಂಬಂಧಕ್ಕೆ ಒಂದು ನಿದರ್ಶನವಾಗಿ ಏಕಲವ್ಯ ನಮ್ಮ ಮುಂದೆ ಇಂದಿಗೂ ಪ್ರಸ್ತುತವಾಗಿದ್ದಾನೆ.

ಅಂದು ನಮ್ಮಗಳಿಗೆ ಅವರಿಂದ ಏಟು ತಿಂದ ಕ್ಷಣಗಳು ಇಂದು ನೆನಸಿಕೊಂಡರೇ ಅದೇ ಒಂದು ಸವಿನೆನಪು.

ನಿನ್ನೇ ಕೊಟ್ಟ ಹೊಡೆತದಂತೆ ಸವಿಯಾದ ನವೆಯನ್ನು ಇಂದು ಕಾಣುವಂತಾಗುತ್ತದೆ. ಆ ದಂಡನೆ ಪ್ರೀತಿಯ ಕಕ್ಕುಲಾತಿಯು ಒಂದು ಎಚ್ಚರಿಕೆಯ ಭಯವನ್ನು...ಸರಿಯಾಗಿ ಕಲಿಯಲಿ.. ಎಂಬುದಾಗಿತ್ತು ಎಂದು ಈಗ ಅನಿಸುತ್ತದೆ. ಆದರೆ ಅಂದು ನಾವುಗಳು ನಮ್ಮ ಗುರುಗಳ ಮೇಲೆ ಮುನಿಸಿಕೊಂಡಿದ್ದೇನೂ.. ಅವರನ್ನು ಮನದಲ್ಲಿಯೇ ಬೈದುಕೊಂಡಿದ್ದೇನೂ.. ಅವರು ಮಾತು ಎತ್ತಿದರೇ ಹೊಡೆಯುತ್ತಾರೆ ಕಣಾಮ್ಮ ಎಂದು ಅಮ್ಮನ ಮುಂದೆ ದೂರು ಕೊಟ್ಟಿದ್ದೇನೂ.. ಒಂದು ದಿನವವು ಕೋಲನ್ನೇ ಮುಟ್ಟದೆ ಮುದ್ದಿನಿಂದ ಪಾಠ ಕಲಿಸಿದ ಮಿಸ್ ಗಳನ್ನು ಕೊಂಡಾಡಿದ ದಿನಗಳೇನೂ.. ಅಬ್ಬಾ ಎಷ್ಟೊಂದು ರೋಮಾಂಚನವನ್ನುಂಟು ಮಾಡುವ ಆ ದಿನಗಳು ಗತಕಾಲಕ್ಕೆ ಸರಿದಿವೆ.

ಇಂದು ಕೇವಲ ನೆನಪುಗಳು ಮಾತ್ರ.

ಅದರೇ ಇಂದು ಎಷ್ಟು ಮಂದಿ ಅಂಥ ಒಂದು ಉನ್ನತವಾದ ಉದ್ಯೋಗವನ್ನು ಆರಿಸಿಕೊಳ್ಳುವವರು? ಅಂದಿನ ನಮ್ಮ ಬಾಲ್ಯದಲ್ಲಿ ನಮ್ಮ ಕನಸು ಮತ್ತೊಬ್ಬ ಒಳ್ಳೆಯ ಮೆಸ್ಟರ್ ಆಗುವುದಾಗಿತ್ತು. ಆದರೆ ಬದಲಾದ ಕಾಲಮಾನ ನಮ್ಮ ಸಮಾಜ, ನಮ್ಮ ಹೆತ್ತವರ ಹಂಬಲದೊಂದಿಗೆ ನಾವುಗಳು ನಮ್ಮ ಉದ್ಯೋಗವನ್ನು ಬೇರೊಂದು ರಂಗದಲ್ಲಿ ಸ್ಥಾಪಿಸಿಕೊಂಡುಬಿಟ್ಟಿದ್ದೇವೆ. ಯಾಕೆ?

ನನಗಂತೋ ಆ ಭಯವಿದೆ. ಉಪನ್ಯಾಸಕನಾಗುವುದಕ್ಕೆ ನನಗೆ ಆ ಅರ್ಹತೆಯಿದೆಯೇ ಎಂಬ ಅನುಮಾನ. ಅಲ್ಲವಾ? ನನಗೆ ಅಷ್ಟು ಗೊತ್ತಿದೆಯೇ? ಮಕ್ಕಳು, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಸಮಾಂಜಸವಾದ ಉತ್ತರವನ್ನು ನೀಡಲು ಶಕ್ತನೇ?

ಹೌದಲ್ಲವಾ ಆ ಒಂದು ಜವಾಬ್ದಾರಿಯುತವಾದ ಶಿಕ್ಷಕನ ಸ್ಥಾನವನ್ನು ಅಲಂಕರಿಸಲು ಮನಸ್ಸಿನಲ್ಲಿ ಪ್ರೀತಿಯಿರಬೇಕು. ನಿತ್ಯ ಹೊಸದನ್ನು ಕಲಿಯುವ ಮನೋಭಾವವಿರಬೇಕು. ನಿತ್ಯ ತನ್ನ ವಿದ್ಯಾರ್ಥಿಗಳಿಗೆ ಅಧಿಕಾರಿಯುತವಾಗಿ ಯಾವುದೇ ಒಂದು ವಿಷಯದಲ್ಲಿ ಪರಿಪೂರ್ಣವಾಗಿ ತಿಳಿಹೇಳುವ ಙ್ಞಾನವನ್ನು ಹೊಂದಿರಬೇಕು. ವಿದ್ಯಾರ್ಥಿಯನ್ನು ಹೊಸ ಚಿಂತನೆಗೆ ಹಚ್ಚಿಸುವಂತಹ ಶಿಕ್ಷಣವನ್ನು ನೀಡುವಂತನಾಗಿರಬೇಕು.

ಈ ರೀತಿಯಲ್ಲಿ ನಮ್ಮನ್ನೇಲ್ಲಾ ಪರಿವರ್ತಿಸಿದ ನಮ್ಮ ಎಲ್ಲಾ ಸಮಸ್ತ ಶಿಕ್ಷಕ ಕುಲಕ್ಕೆ ನಮೋ ನಮಃ ಅಂತ ಮಾತ್ರ ನಾನು ಹೇಳುತ್ತೇನೆ. ನೆನಸಿಕೊಂಡರೇ ಇಂದಿಗೂ ನನ್ನ ಮೈನವಿರೇಳಿಸುತ್ತದೆ. ನಾವೇನು ಅಲ್ಲಾ ಎಂಬುದರಿಂದ ಹಿಡಿದು ನೀನು ಹೀಗೆ ಎಂಬುದನ್ನು ತಿಳಿಸಿಕೊಡುವಂತಹ ಶಿಕ್ಷಕ ಸಮೋಹವೇ ಎಂದೆಂದಿಗೂ ಗ್ರೇಟ್.

ಉತ್ತಮ ಶಿಕ್ಷಕರಿಗೆ ಶಿಷ್ಯರಾಗಿರುವುದು ಒಂದು ಪುಣ್ಯವೇ ಸರಿ. ಅವರುಗಳ ಓಡನಾಟವೇ ಒಂದು ದೊಡ್ಡ ವಿಚಾರ. ಅವರನ್ನು ಹತ್ತಿರದಿಂದ ಕಂಡವರಾ ಬದುಕೇ ಪಾವನ ಗಂಗೆ..

ಇಂದಿನ ಈ ಮುಂದುವರಿದ ಜಮಾನದಲ್ಲಿ ಒಂದು ಕ್ಷಣ ನಾವುಗಳು ನಮ್ಮನ್ನು ತಿದ್ದಿತೀಡಿದ ನಮ್ಮ ಎಲ್ಲಾ ಗುರುಗಳನ್ನು ನೆನಪಿಸಿಕೊಂಡು ಅವರಿಗೆ ಒಂದು ಹೃದಯಪೂರ್ವಕ ನಮನವನ್ನು ಸಲ್ಲಿಸೋಣ. ಗುರುವೇ ನಮಃ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ