ಶನಿವಾರ, ಸೆಪ್ಟೆಂಬರ್ 17, 2011

ಅನಾವರಣ ಒಂದು ಮೆಲುಕು............

ನಮ್ಮ ಮದ್ಯಮ ವರ್ಗದ ಒಂದು ಇಡೀ ಸಮೋಹ ತಮ್ಮ ಬಿಡುವಿನ ವೇಳೆಯನ್ನು ಮನೆಯಲ್ಲಿ ಹೇಗಾಪ್ಪ ಕಳೆಯುವುದು ಅಂದರೇ.. "ಅದೇ ಟಿ.ವಿ ಮೂರ್ಖರ ಪೆಟ್ಟಿಗೆ ಮುಂದೆ.." ಎಂದು ಏನಂದರೂ ಅದು ಇಂದು ಅತಿ ಅವಶ್ಯಕವಾದ ಒಂದು ವಸ್ತುವಾಗಿದೆ. ಅದು ಇಲ್ಲದ ಮನೆಯೇ ಮನೆಯಲ್ಲಾ.. ಅದೇ ಎಲ್ಲಾ ಎನ್ನುವಷ್ಟರ ಮಟ್ಟಿಗೆ.

ಮನೆಯಲ್ಲಿ ಕಾಲ ಕಳೆಯುವ ವಯಸ್ಸಾದ ಮುದುಕ ಮುದುಕಿಯರಿಗೆ, ಮನೆಕೆಲಸ ಮಾಡುವ ಗೃಹಿಣಿಯರಿಗೆ ಹೀಗೆ ಅದು ಒಂದು ಮನರಂಜನೆಯನ್ನು ಒದಗಿಸುವ ಒಂದು ಸೃಜನ ಶೀಲ ವಸ್ತುವಾಗಿದೆ.

ಚಿಕ್ಕ ಪರದೆಯ ಮೇಲೆ ಇಡೀ ಜಗತ್ತನ್ನೇ ಕಾಣಬಹುದಾಗಿದೆ. ಚಿಕ್ಕ ಪರದೆಯ ಮೇಲೆ ಬೇಕು ಬೇಡವಾದ ಎಲ್ಲದನ್ನೂ ನೋಡಬಹುದಾಗಿದೆ.

ಇದು ಎಲ್ಲಾ ವಯೋಮಾನದ ಮನುಷ್ಯರನ್ನು ಒಂದು ರೀತಿಯಾದ ಬದಲಾವಣೆಗೆ ಈಡೂ ಮಾಡಿರುವ ಮೋಡಿಗಾರ.

ಅಲ್ಲಿ ಒಳ್ಳೆಯದು ಇದೆ. ಕೆಟ್ಟದು ಇದೆ. ಅದರ ಆಯ್ಕೇ ಪುನಃ ನಮ್ಮ ನಿಮ್ಮಗಳ ಕೈಯಲ್ಲಿ ಮಾತ್ರ.

ಗಮನಿಸದರೆ ಇಲ್ಲೂ ಅತ್ಯುತ್ತಮವಾದ ಕಾರ್ಯಕ್ರಮಗಳು ಪ್ರಸಾರವಾಗುತ್ತ ಇರುತ್ತವೆ.

ಇಲ್ಲೂ ಸಹ ಒಂದು ಪುಸ್ತಕವನ್ನು ಓದಿದಾಗ ಸಿಗುವಂತಹ ಚಿಂತನೆ, ನೀತಿ, ಬದುಕಿನ ನೋಟವನ್ನು ಪ್ರಸಾರವಾಗುವ ದಾರವಾಹಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ. ಕೆಲವೊಂದು ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಜನಮನ ಗೆದ್ದಿದ್ದಾವೆ ಎಂದರೇ ಪ್ರತಿಯೊಂದು ಮನೆಯಲ್ಲಿ ಆ ಸಮಯಕ್ಕೆ ಸರಿಯಾಗಿ ಪ್ರತಿಯೊಬ್ಬರೂ ಕಾದು ಕುಳಿತು ಕಾರ್ಯಕ್ರಮಗಳನ್ನು ವೀಕ್ಷಿಸುವಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿವೆ.

ಹೀಗೆ ಬಹಳ ದಿನಗಳಾದ ಮೇಲೆ ಕನ್ನಡದಲ್ಲಿ ವಿಭಿನ್ನವಾಗಿ ದಾರವಾಹಿಯನ್ನು ನಿರ್ದೇಶಿಸುವುದರಲ್ಲಿ ಎತ್ತಿದ ಕೈಯಾಗಿರುವ ಹಿರಿಯರಾದ ಎಸ್. ಎನ್. ಸೇತೂರಾಮ್ ರವರ "ಅನಾವರಣ" ನಿಜವಾಗಿಯೂ ನಮ್ಮ ದಿನ ನಿತ್ಯದ ಬದುಕು, ಪ್ರಸ್ತುತತವಾದ ಜನ ಮನಗಳ ನಗ್ನ ಸತ್ಯದ ಅನಾವರಣವಾಗಿದೆ.

ವಯಸ್ಸಾದ ತಂದೆ-ತಾಯಿ ಮತ್ತು ಅವರ ನಾಲ್ಕು ಜನ ಮಕ್ಕಳುಗಳ ಸಂಸಾರವನ್ನು ಇಟ್ಟುಕೊಂಡು ಹೆಣೆದಿರುವ ಕಥೆ ಸಹಜವಾಗಿ ತೀರ ಮಾಮೊಲಾದ ಕಥೆ ಮತ್ತು ವೇರಿ ಸಿಂಪಲ್ ಅನಿಸುತ್ತದೆ.

ಆದರೆ! ವ್ಯಕ್ತಿ ವ್ಯಕ್ತಿಗಳ ಸಂಬಂಧ, ಮಾನವನ ಜೀವ/ಜೀವನಗಳ ತಂತು, ವ್ಯಕ್ತಿಗಳ ಅಸ್ವಾಭಾವಿಕ ನಡಾವಳಿ, ಇಂದಿನ ಮುಂದುವರೆದ ದಿನಮಾನಗಳಲ್ಲಿ ದುಡ್ಡೇ ಎಲ್ಲಾ ಎನ್ನುವ ಯಾಂತ್ರಿಕವಾದ ನಗರ ಜೀವನದಲ್ಲಿನ ತಲ್ಲಣಗಳು, ಬದಲಾದ ಜೀವನ ಶೈಲಿಯ ಒಂದು ವಿಮರ್ಶೆಯೇ ಈ ಅನಾವರಣವಾಗಿದೆ.

ಸೇತೂರಾಮ್ ಕಣ್ಣಲ್ಲಿ ಬದುಕಿನ ನಿಜವಾದ ಅರ್ಥವಂತಿಕೆಯ ಒಂದು ಜೀವಂತ ದರ್ಶನವಾಗಿದೆ.

ಅವರು ರಚಿಸಿರುವ ಪಾತ್ರ ಪೋಷಣೆಯಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬ ನಟ-ನಟಿಯರ ಮಾತು, ಅಭಿನಯಕ್ಕೆ ಪ್ರತಿಯೊಬ್ಬ ಕನ್ನಡಿಗನ ಸಲ್ಯೂಟ್! ಇಟ್ಸ್ ಸಿಂಪ್ಲಿ ಕ್ಲಾಸ್ ಅನ್ನಬಹುದು.

ಪಾತ್ರಗಳ ಮಾತುಗಳು, ಅವರ ಕನ್ನಡ ಉಚ್ಛಾರಣೆ, ಪೋಟೂಗ್ರಫಿ ತುಂಬ ಉನ್ನತವಾಗಿದೆ.

ಪ್ರತಿಯೊಂದು ಎಪಿಸೋಡ್ ನ್ನು ಹಾಗೆಯೇ ಯಾವುದೇ ಕಂಟ್ಯೂನಿಟಿ ಇಲ್ಲದೇ ನೋಡಬಹುದಾಗಿದೆ. ಹಾಗೆ ಕಥೆಯನ್ನು ಎಣಿದಿದ್ದಾರೆ.

ಇಲ್ಲಿ ನನಗೆ ಇಷ್ಟವಾಗಿದ್ದು, ಎಲ್ಲಾ ಪಾತ್ರಗಳ ಮಾತುಗಳು. ಸಾಮಾನ್ಯವಾಗಿ ಎಲ್ಲರೂ ಮಾತನ್ನಾಡುವವರು ಅದರೇ ಜೀವನದ ಸತ್ಯವಾದಂತ ಮಾತುಗಳು ಮತ್ತು ಅದು ಇಂದಿನ ಜೀವನದ ದುಡಿಮೆಯಲ್ಲಿ ಎಷ್ಟು ಅರ್ಥಗರ್ಭಿತ ಎನ್ನುವಂತಾಗುತ್ತದೆ.

ನಾವುಗಳು ಯಾವುದಾದರೂ ಒಂದು ಉತ್ತಮವಾದ ಕನ್ನಡ ಕಾದಂಬರಿಯನ್ನು ಓದಿದಾಗ ಹೇಗೆ ಒಂದು ಸುಂದರ ಅನುಭವವನ್ನು ಅನುಭವಿಸುವೆವೋ ಆ ರೀತಿಯ ಅನುಭವವನ್ನು ಪ್ರತಿಯೊಬ್ಬ ವೀಕ್ಷಕನು ಕಾಣುವವನು. ಮತ್ತು ಈ ದಾರವಾಹಿ ನಮ್ಮನ್ನು ಆ ದಿಕ್ಕಿನಲ್ಲಿ ಚಿಂತನೆಗೆ ಹಚ್ಚುವ ಕೆಲಸವನ್ನು ಮಾಡುತ್ತಿದೆ.

ನೈತಿಕತೆ, ಕೆಟ್ಟತನ, ಬದುಕಿನ ಜಂಜಾಟ, ದುಡಿಮೆ, ಗುರಿ, ಸಂಬಂಧಗಳ,(ಅ)ಸ್ವಾಭಾವಿಕತೆ ಪುನರನವೀಕರಣದ ಹಾದಿಯ ಹುಡುಕಾಟವಾಗಿದೆ ಎಂದರೇ ಅತಿಶಯೋಕ್ತಿಯಲ್ಲ.

ಇಂಥ ಒಂದು ಸುಂದರ ದೃಶ್ಯ ಕಾವ್ಯವನ್ನು ಕನ್ನಡದಲ್ಲಿ ಟಿ.ವಿ ದಾರವಾಹಿಯಾಗಿ ಮನೆ ಮನೆ ತಲುಪಿಸುವಲ್ಲಿ ನಿಂತಿರುವ ಸೇತೂರಾಮ್ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ....

ಅದರ ಝಲಕುಗಳ ಅನಾವರಣ ಇಲ್ಲಿ............






೧. ಗಂಡಸರು ಸುಖಕ್ಕಾಗಿ ಸಂಬಂಧಗಳನ್ನು ಹುಡುಕುತ್ತಾರೆ. ಆದರೆ ಹೆಂಗಸರು ಸಂಬಂಧದಲ್ಲಿಯೇ ಸುಖವನ್ನು ಹುಡುಕುತ್ತಾರೆ.

೨. ಮಗ ಎಂಬುದು ಭಾವ, ಅಂಕೆ ಸಂಖ್ಯೆ ಆಗಬಾರದು ಅಲ್ಲವಾ?

೩. ಹೆಂಗಸರು ಅವಶ್ಯಕತೆಗಳಿಗೆ ಸಂಬಂಧ ಹುಡುಕುತ್ತಾರೆ. ಇಲ್ಲ ಅಂದರೆ ಬಿಟ್ಟುಬಿಡುತ್ತಾರೆ.

೪. ಹೆತ್ತವರು ಮಕ್ಕಳ ಸಂಬಂಧ ಭಾವನ್ಮಾತಕವಾದದ್ದು, ವ್ಯವಹಾರವಲ್ಲ.

೫.ಮಕ್ಕಳಿಗೆ ತಂದೆ ತಾಯಿ ಮನೆ ಯಾವತ್ತೂ ಸ್ವಂತ, ಹೆತ್ತವರಿಗೆ ಮಕ್ಕಳ ಮನೆಯಲ್ಲ.

೬. ಭಾಷೆ ಕಲಿತಿದ್ದಾನೆ. ಭಾವ ಸತ್ತಿದೆ.

೭. ಬದುಕಿಗೋಸ್ಕರ ಕೆಲಸ. ಕೆಲಸಕ್ಕೊಸ್ಕರ ಬದುಕಾದಾ?

೮. ಬದುಕಿಗೆ ಹಣ. ಹಣಕ್ಕಾಗಿ ಬದುಕಾ?

೯.ಮಕ್ಕಳ ತರಾ ಉಳಿಯಬೇಕು ಎಂದರೇ, ದೊಡ್ಡವರು ದೊಡ್ಡವರ ತರಾ ಇರಬೇಕು.

೧೦. ಪಾಪಿಗಳ ಪ್ರಪಂಚದಲ್ಲಿ ಸತ್ತವರೇ ಪುಣ್ಯವಂತರು.

೧೧. ಕೆಟ್ಟ ಮಕ್ಕಳು ಹೃದಯಕ್ಕೆ ಹತ್ತಿರ.

೧೨. ಗಂಡಸರು ಕೆಟ್ಟವರು ಅಂತಹ ಗೊತ್ತಿದ್ದು ಸಂಪರ್ಕ ಬೆಳೆಸಿದರೆ ಹಾದರ ಅನಿಸುತ್ತದೆ. ಯಾವ ಹೆಣ್ಣು ಗೊತ್ತಿದ್ದು ಹಾದರಕ್ಕೆ ಇಳಿಯಲ್ಲಾ ಗಂಡಸರು ಇಳಿಸುತ್ತಾರೆ.

೧೩. ಹೆತ್ತರೆ, ಹೊತ್ತರೆ ವ್ಯಾಮೋಹ ಬರಲ್ಲ. ಸಾಕಬೇಕು.

೧೪. ಹಗಲು ಮರೆತು ಕಾಡುತ್ತೀರಿ. ರಾತ್ರಿ ನೆನಪಿಸಿ ಕಾಡುತ್ತೀರಿ.

೧೫. ಮದುವೆಗೆ ಮೊದಲು ಇದ್ದಲನ್ನು ವಜ್ರ ಅನ್ನುತ್ತೇವೆ, ಹೊಳೆಯುತ್ತದೆ ಅನ್ನುತ್ತೇವೆ. ಮದುವೆ ಆದಮೇಲೆ ವಜ್ರವನ್ನು ಇದ್ದಲು ಅನ್ನುತ್ತೇವೆ.

೧೬. ಮೆದುಳನ್ನು ಸರಿಯಾಗಿ ಇಟ್ಟುಕೊಂಡು ಹೆಣ್ಣನ್ನು ಆರಿಸಬೇಕು. ಹೃದಯದ ಮೀಡಿತ ಇಟ್ಟುಕೊಂಡು ಸಂಸಾರವನ್ನು ನಡೆಸಬೇಕು. ಹೃದಯ ಬಡಿತು ಅಂತಹ ಆರಿಸಿಕೊಳ್ಳುತ್ತಾರೆ. ಜೀವನಪರ್ಯಾಂತ ಮೆದುಳನ್ನು ಉಪಯೋಗಿಸಿ ಕಷ್ಟಪಡುತ್ತಾರೆ.

೧೭. ಬಾಲ್ಯಕ್ಕೆ ಯೌವನ, ಬಯಕೆ ಅರ್ಥವಾಗುತ್ತದೆ. ಆದರೆ ವೃದ್ಧಾಪ್ಯಕ್ಕೆ ಇದು ಅರ್ಥವಾಗುವುದಿಲ್ಲ.

೧೮. ಕೆಟ್ಟ ಗಂಡನನ್ನು ಬಿಡಬಹುದು. ಕೆಟ್ಟ ಮಕ್ಕಳನ್ನು ಓಡಿಸಬಹುದು. ಆದರೆ ಕೆಟ್ಟ ಅಪ್ಪನನ್ನು ಬಿಡಕ್ಕೆ ಆಗಲ್ಲ.

೧೯. ಹಕ್ಕು ಇರಕಡೆ ಸ್ವಾತಂತ್ರ್ಯ ಬದುಕಲ್ಲಾ.

೨೦. ನೋವು ಮಿತಿಮೀರಿದಾಗ ಕೀಚಕ ಕೊಡಾ ಅಮ್ಮ ಅನ್ನುತ್ತಾನೆ. ಆಗಲೇ ಹೆಣ್ಣನ್ನು ಗುರುತಿಸಬಲ್ಲ.

೨೧.ಎಲ್ಲೇ ಇಲ್ಲದ ಸ್ವಾತಂತ್ರ್ಯ ಸ್ವೇಚ್ಛೆ.

೨೨. ಸ್ನೇಹಿತರು ಒಳ್ಳೆ ಸುದ್ಧಿ ಹುಡುಕುತ್ತಾರೆ. ನೆಂಟರು ಕೆಟ್ಟ ಸುದ್ಧಿ ಹುಡುಕುತ್ತಾರೆ.

೨೩. ಹತ್ತಿರದವರು ಮುಚ್ಚಿಡುತ್ತಾರೆ; ಹಿತೈಷಿಗಳು ಬಿಚ್ಚಿಡುತ್ತಾರೆ.

೨೪. ಚಟ ಇರುತ್ತೇ ಹೋಗುತ್ತೆ.ಆದರೆ ರೂಡಿಸಿಕೊಂಡ ಭಾವ ಸ್ಥಿರ ಅಲ್ಲವಾ?

೨೫. ಆಳೋ ಚೈತನ್ಯ ಇರುವ ಗಂಡಸು ಶೀಲದ ಬಗ್ಗೆ ಮಾತನ್ನಾಡಲ್ಲ. ಷಂಡರೇ ಶೀಲದ ಬಗ್ಗೆ ಮಾತನಾಡುವುದು.

೨೬. ಸ್ವಾತಂತ್ರ್ಯ ಭಾವದಲ್ಲಿ ತಿಳಿಯಬೇಕು.

೨೭. ತಾಯಿಗೆ ಮಗಳು ಕರಳು. ಮಗಳಿಗಲ್ಲಾ ಅಲ್ಲವಾ?

೨೮. ಮರೆತಿದ್ದರೆ ಅಲ್ಲವಾ ನೆನಪು ಆಗುವುದು.

೨೯. ಅವಶ್ಯಕ ಅನಿಸದ ಸಂಬಂಧಗಳು ಉಳಿಯುವುದಿಲ್ಲ.

೩೦. ಕಣ್ಣುಗಳಿಗೆ ಬಿಳದಿದ್ದರೆ ದೇವರನ್ನೇ ಮರೆಯುತ್ತಾನೆ ಅಂತೆ ಮನುಷ್ಯ. ಇನ್ನೂ ಮನುಷ್ಯರನ್ನ ಬಿಡುತ್ತಾನಾ..

೩೧. ಸುಖಕ್ಕೆ ಗಂಡು ಸಾಕು. ಆದರೆ ಸಂಸಾರಕ್ಕೆ ಗಂಡ ಬೇಕು.

೩೨. ಗಂಡಸು ಎಂಬ ಅಹಂಕಾರ ಇರಬೇಕಾದರೆ ಗುಲಾಮಗಿರಿ ಇರಬಾರದು.

೩೩. ಜಗತ್ತಿನಲ್ಲಿ ಗಂಡು ಹೆಣ್ಣು ಅಂತ ಆಗಿದ್ದು ಸೃಷ್ಟಿಗಾಗಿ. ಸುಖಕ್ಕಾಗಿ ಅಲ್ಲಾ.

೩೪. ಪ್ರಕೃತಿ ಸೃಷ್ಟಿಸುವುದರಲ್ಲಿ ಸುಖ ಕಾಣುತ್ತದೆ. ಮನುಷ್ಯ ಸ್ವಂತ ಸ್ವಾರ್ಥಕ್ಕಾಗಿ ಸೃಷ್ಟಿಸುವುದರಲ್ಲಿ ಸುಖ ಕಾಣುತ್ತಾನೆ.

೩೫. ಹರಿದು ಹಂಚಿಕೊಳ್ಳುವರನ್ನೇ ಅಲ್ಲವಾ ಮಕ್ಕಳು ಅನ್ನುವುದು.

೩೬. ವಿಷಯ ಚರ್ಚೆಗೆ ಬರದಿದ್ದರೆ ಅರ್ಥವಾಗುವುದಾದರೂ ಹೇಗೆ.

೩೭. ಮಕ್ಕಳ ನೆನಪಲ್ಲಿ ಇಲ್ಲದ ಹೆತ್ತವರು ಇದ್ದು ಇಲ್ಲದ ಹಾಗೆ. ಇದ್ದು ಸತ್ತಾ ಹಾಗೆಯೇ.

೩೮. ಮಕ್ಕಳು ಕೆಡಕ್ಕೂ ಮೊದಲು ಯಮ ಬಂದರೇ ಧರ್ಮ!

೩೯. ಮುಂದೆ ಬದುಕು ಚೆನ್ನಾಗಿರಲಿ ಎಂದು ಹೆಂಗಸರು ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಗಂಡಸರು ಹಿಂದೆ ಮಾಡಿದ ಪಾಪಗಳನ್ನು ಕ್ಷಮೀಸು ಅಂತಾ ದೇವಸ್ಥಾನಕ್ಕೆ ಹೋಗುತ್ತಾರೆ.

೪೦. ಬದುಕಿಗೆ ಮನುಷ್ಯರನ್ನು ನೆಚ್ಚಿಕೊಂಡರೇ ದಾಸ್ಯ. ಭಗವಂತನನ್ನು ನೆಚ್ಚಿಕೊಂಡರೇ ಸ್ವಾತಂತ್ರ್ಯ.

೪೧. ಗಂಡಸರಿಗೆ ಕನಸು ಗ್ರಾಸ. ಹೆಂಗಸರಿಗೆ ಕನಸು ಗ್ರಾಸ.

೪೨. ಪಾಪದ್ದು ಭಿಕ್ಷೆ. ಪುಣ್ಯದ್ದು ಪ್ರಸಾದ.

೪೩. ಬದುಕು ಕಲೆ ಅಲ್ಲ, ಸ್ವಾಭಾವಿಕ. ಬದುಕದನೇ ಬದುಕುತ್ತಾ ಇರುವೇವು ಎಂಬುದು ಕಲೆ.

೪೪. ಕಳ್ಳ ಲೋಕದಲ್ಲಿ ಕಾನೂನಿಗೆ ಜಾಗವಿಲ್ಲ.

೪೫. ಸುಖವಿಲ್ಲದಿದ್ದರೇ ಮಕ್ಕಳು ಹೆತ್ತವರನ್ನು ಸಾಕುವುದಿಲ್ಲ.

೪೬. ಬದುಕಿನಲ್ಲಿ ಸ್ನೇಹಿತರನ್ನು ಮರೆಯಬಹುದಂತೆ, ಶತ್ರುಗಳನಲ್ಲಾ. ಸ್ನೇಹಿತರನ್ನ ದೂರ ಇಟ್ಟರು ತೊಂದರೆಯಿಲ್ಲ. ಅವರು ಹಿತಕಾಂಕ್ಷಿಗಳು.

೪೭. ಸ್ವಂತಹ ಸಮಸ್ಯೆಗಳು ಗಟ್ಟಿ ಮಾಡುತ್ತವೆ. ಆದರೆ ಮಕ್ಕಳಗಳದು ಮೆತ್ತಗೆ ಮಾಡುತ್ತವೆ.

೪೮. ಪ್ರೀತಿಯಲ್ಲಿ ಸುಖವಿರುತ್ತದೆ. ಉಪೇಕ್ಷೆಯಲ್ಲಿ ನೋವು.ದ್ವೇಷ ಶಕ್ತಿ ಕೊಡುತ್ತದೆ.

೪೯. ಹಣ ಯಾವತ್ತೂ ತೃಪ್ತಿಕೊಟ್ಟಿಲ್ಲ. ಅದು ಯಾವತ್ತೂ ಅತೃಪ್ತಿ.

೫೦. ಗಾಳಿಯಲ್ಲಿ ತೇಲುವ ಕಸಕ್ಕೆ ಗುರಿ ಏನೂ ಇರುತ್ತೇ?

೫೧. ಬದುಕಿಗೆ ಭೂತದ ನೆನಪು ಇರಬೇಕು. ವರ್ತಮಾನದಲ್ಲಿ ಸುಖವಿರುಬೇಕು. ಭವಿಷ್ಯತನಲ್ಲಿ ಕನಸು ಇರಬೇಕು.

೫೨. ಮನುಷ್ಯ ಅಂದರೇ ಅಷ್ಟೇ, ಅಪರಾಧಗಳ ಮೂಟೆ.

೫೩. ಇಷ್ಟ ಬಂದಾಗ ಸಾಯಬಹುದು. ಆದರೆ ಇಷ್ಟ ಬಂದಂಗೇ ಬದುಕಕಾಗಲ್ಲ.

೫೪. ಗಂಡಸರು ಬದುಕದು ಹಕ್ಕಿನ ಮೇಲೆ. ಹೆಂಗಸರು ಬದುಕದು ಜವಬ್ದಾರಿಯ ಮೇಲೆ.

೫೫. ವಯಸ್ಸಿನಲ್ಲಿ ಬದುಕಿಗೆ ಹೆದರಬಾರದು. ವಯಸ್ಸಾದ ಮೇಲೆ ಸಾವಿಗೆ ಹೆದರಬಾರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ