ಬುಧವಾರ, ಆಗಸ್ಟ್ 24, 2011

ಓಂ ಶಾಂತಿ! ಓಂ ಶಾಂತಿ!

ನಮ್ಮಗಳಿಗೆ ಒಂದು ರೀತಿಯಲ್ಲಿ ಭಯವನ್ನು, ನಾವುಗಳು ಹೀಗೆ ಇರಬೇಕು, ಹೀಗೆ ಮಾಡಬೇಕು, ಹೀಗೆ ಸರಿ ದಾರಿಯಲ್ಲಿ ನಡೆಯಬೇಕು ಎಂಬುದನ್ನು ಕಲಿಸುವುದು ಯಾರು ಎಂದರೇ ನಮ್ಮ ಹಿರಿಯರು ಎಂದು ಗಂಟಾಘೋಷವಾಗಿ ಹೇಳುತ್ತೇವೆ. ನಾವು ಆ ಹಿರಿಯರುಗಳ ಮಾತನ್ನು ಸುಖ ಸುಮ್ಮನೇ ಕೇಳಿ ಹಾಗೆಯೇ ನಡೆಯಲು ಶುರುಮಾಡುವುವೇ?

ಇಲ್ಲ ಅಲ್ಲವಾ?

ನಾವುಗಳು ಅವರ ಮಾತನ್ನು ಕೇಳಬೇಕೆಂದರೆ ನಮಗೆ ಅವರುಗಳು ಯಾವುದಾದರೂ ಒಂದು ಸಾಕ್ಷಿ ಪ್ರಙ್ಞೆಯನ್ನು ತೋರಿಸಬೇಕು.ಅದೇ ದೇವರುಗಳು. ಅಂದರೇ ಆ ಚಿಕ್ಕ ವಯಸ್ಸಿನಲ್ಲಿ ನಮಗೆ ಯಾವುದನ್ನೋ ಮೀರಿದ ಒಂದು ಸಾಕ್ಷಿ ಇರುತ್ತದೆ ಎಂದರೇ ಅದು ನಮ್ಮ ನಮ್ಮ ಮನೆಗಳಲ್ಲಿ ನಾವುಗಳು ಆರಾಧಿಸುವುದನ್ನು ನೋಡುತ್ತಿರುವ ಆ ಮನೆ ದೇವರು ಮಾತ್ರ.

ಚಿಕ್ಕಂದಿನ ದಿನಗಳಲ್ಲಿಯೇ ನಮ್ಮಗಳಿಗೆ ಅದನ್ನು ರೂಡಿ ಮಾಡಿ ಬಿಟ್ಟಿರುತ್ತಾರೆ. ಅವುಗಳನ್ನು ನೋಡುವ ಮೂಲಕ, ಅವುಗಳನ್ನು ಆಚರಿಸಲು ಕಲಿಯುವುದರ ಮೂಲಕ ಸ್ವಲ್ಪ ಸ್ವಲ್ಪ ನಾವುಗಳನ್ನು ನಮ್ಮ ಚಿಂತನೆ, ಯೋಚನೆ ಮತ್ತು ಬುದ್ಧಿಶಕ್ತಿಯಾನುಸಾರ ಅವುಗಳನ್ನು ನಮ್ಮ ಮನದಲ್ಲಿ ಸ್ಥಾಪಿಸಿಕೊಳ್ಳಲು ಪ್ರಾರಂಭಿಸುತ್ತೇವೆ.

ಕೆಲವು ದಿನಗಳವರೆಗೆ ಅದನ್ನು ಯಥಾಃ ಜಾರಿಯಲ್ಲಿ ಇಟ್ಟುಕೊಳ್ಳಲು ಪ್ರಾರಂಭಿಸುತ್ತೇವೆ. ನಮ್ಮ ಮನೆಗಳಲ್ಲಿ ಏನನ್ನು ಆಚರಿಸುತ್ತಾರೋ ಅದೇ ನಮ್ಮ ಸಂಸ್ಕೃತಿಯೆಂದು ಕಲಿಯುತ್ತೇವೆ. ಅವುಗಳನ್ನೇ ಭಯ ಭಕ್ತಿಯೊಂದಿಗೆ ಅಳವಡಿಸಿಕೊಳ್ಳಲು ಪ್ರಾರಂಭಿಸುತ್ತೇವೆ.



ಬುದ್ಧಿ ಬಲಿಯುವವರೆಗೂ ನಮ್ಮ ಮನೆಯಲ್ಲಿ ಅನುಸರಿಸುತ್ತಿರುವ, ಆಚರಿಸುತ್ತಿರುವ ಆಚರಣೆ, ಪೂಜೆ ಮಾಡುವ ದೇವರುಗಳನ್ನೇ ಪ್ರತಿಯೊಬ್ಬರೂ ಮಾಡುತ್ತಾರೆ ಎಂಬ ಭಾವನೆಯಲ್ಲಿರುತ್ತೇವೆ. ಇದು ಒಂದು ಸಾಮಾನ್ಯವಾದ ರೂಡಿ ಮತ್ತು ಎಲ್ಲಾರೂ ಮಾಡುವವರೇನೋ ಎಂಬ ರೀತಿಯಲ್ಲಿ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡದ ಕಾರಣ ನಿರಾಳವಾಗಿ ಅದು ನಮ್ಮದೇ ನನ್ನದೇ ಒಂದು ಆಚರಣೆ. ಅದನ್ನು ನಾವುಗಳು ಕಡ್ಡಾಯವಾಗಿ ಮಾಡಲೇಬೇಕು. ಯಾಕೆಂದರೇ ನನ್ನ ಮನೆಯಲ್ಲಿ,ನನಗೆ ಗೊತ್ತಿರುವವರೆಲ್ಲಾ, ನನ್ನ ಸಂಬಂಧಿಕರೆಲ್ಲಾ ಮಾಡುತ್ತಿದ್ದಾರೆ. ಅಂದು ಕೊಂಡು ಯಾವುದೇ ಒಂದು ಸಣ್ಣ ಅನುಮಾನವಿಲ್ಲದೇ ನಾವುಗಳು ಬಹುದಿನಗಳವರೆಗೆ ನಡೆಸುತ್ತಾ ಸಾಗುತ್ತೇವೆ.

ಇದೇ ನಮ್ಮ ಧರ್ಮವಾಗುತ್ತದೆ, ಇದೆ ನಮ್ಮ ಜಾತಿಯಾಗುತ್ತದೆ, ಇದೆ ನಮ್ಮ ಸಂಸ್ಕೃತಿಯಾಗುತ್ತದೆ ಅದು ನಮಗೆ ಗೊತ್ತಿರದ ರೀತಿಯಲ್ಲಿ. ಬಾಲ್ಯದಲ್ಲಿ ಯಾವುದನ್ನು ನಾವುಗಳು ಪ್ರಶ್ನೆ ಮಾಡದೆ ಒಪ್ಪಿಕೊಂಡಿರುತ್ತೇವೋ ಅದೇ ನಮಗೆ ಮಾಮೊಲಾದ ಗೊತ್ತಿರುವ ನಿರಾಳ ದಾರಿಯಾಗುತ್ತದೆ. ಅದರ ಬಗ್ಗೆ ಎಂದೂ ನಾವು ಚಿಕ್ಕ ಜಿಙ್ಞಾಸೆಯನ್ನು ಒಂದಷ್ಟು ದಿನಗಳವರೆಗೆ ಇಟ್ಟುಕೊಂಡಿರುವುದಿಲ್ಲ.

ಯಾವಾಗ ನಮ್ಮ ಓದು, ನಮ್ಮ ಸ್ನೇಹ, ಹೊರ ಜಗತ್ತು, ಸುತ್ತ ಮುತ್ತಲಿನ ಪರಿಸರ, ಸಮಾಜ ಹೀಗೆ ಹಲವು ರೀತಿಯ ಜಗತ್ತಿನ ಮರ್ಮಗಳನ್ನು ತನ್ನ ಕಣ್ಣು, ಮನಸ್ಸಿನಿಂದ ವ್ಯಕ್ತಿ ನೋಡಲು ಪ್ರಾರಂಭಿಸುವನೋ.. ಆಗ ನೋಡಿ ಶುರುವಾಗುತ್ತದೆ ತರಾವೇರಿ ಗೊಂದಲಗಳು ಮನದ ಮೂಲೆಯಲ್ಲಿ.

ಯಾಕೇ ಆ ನನ್ನ ಗೆಳೆಯ/ತಿ ನನ್ನ ರೀತಿಯಲ್ಲಿ ಆಚರಣೆಗಳನ್ನು ಮಾಡುವುದಿಲ್ಲ. ಅವನು/ಳು ಆರಾಧಿಸುವ ಹಬ್ಬ, ದೇವರುಗಳು, ಊಟ ಉಪಚಾರಗಳು ಪೂರ್ಣವಾಗಿ ನನಗಿಂತ ವಿಭಿನ್ನವಾಗಿವೆ. ಅವರುಗಳ ನಡಾವಳಿಗಳೇ ವಿಪರೀತವಾಗಿವೆ ಯಾಕೇ? ಹೀಗೆ ಪ್ರಶ್ನೆಗಳ ಸುರಿಮಳೆಯೇ ಮನಸ್ಸಿಗೆ ಬರಲು ಪ್ರಾರಂಭವಾಗುತ್ತವೆ. ಅವುಗಳಿಗೆ ನಮ್ಮ ತಂದೆ-ತಾಯಿ, ಹಿರಿಯರುಗಳಿಂದ, ಸ್ನೇಹಿತರುಗಳಿಂದ, ಸುತ್ತಲಿನ ಪರಿಸರದಿಂದ ಸರಿಯಾಗಿಯೇ ಉತ್ತರಗಳು ಸಮಯ ಮತ್ತು ಸಂದರ್ಭಕ್ಕೆ ತಕ್ಕ ಹಾಗೆಯೇ ಕೇಳುತ್ತೇವೆ ಮತ್ತು ಅವುಗಳ ಮೂಲಕ ವ್ಯಕ್ತಿ ಜಗತ್ತಿನ ವಿರಾಟ ರೂಪವಾದ ಪದ್ಧತಿಗಳನ್ನು ಅರಿಯುತ್ತಾ ಸಾಗುತ್ತನೆ.


ಹಾಗೆಯೇ ತಾನು ಓದುವ ಶಿಕ್ಷಣದ ಮೂಲಕ ಅವನು ತನ್ನ ವಯಸ್ಸಿಗೆ ಅನುಗುಣವಾಗಿ ತಾನು ಆಚರಿಸುವ ಸಂಸ್ಕೃತಿ, ದೇವರುಗಳು, ಧರ್ಮ, ಆಚರಣೆಗಳು, ಇವುಗಳ ಇತಿಹಾಸ. ಇವುಗಳನ್ನು ಯಾರು ಹುಟ್ಟು ಹಾಕಿದರು? ಯಾಕೆ ಹೀಗೆ ಮಾಡಬೇಕು ಎಂಬುದನ್ನು ತನ್ನ ಅರ್ಥವಂತಿಕೆಗೆ ಅನುಗುಣವಾಗಿ ಅರಿಯಲು ಪ್ರಾರಂಭಿಸುವನು. ನಾವುಗಳು ಮಾತ್ರ ಯಾಕೆ ಹೀಗೆ ಅನುಸರಿಸುತ್ತಿದ್ದೇವೆ. ಮತ್ತು ಇದಕ್ಕೆ ಏನಾದರೂ ಕಾರಣಗಳು ಇರುವುವೇ? ಈ ಆಚರಣೆಗಳನ್ನು ಮಾಡದಿದ್ದರೆ ಏನಾಗುವುದು? ನಮ್ಮ ದೇವರನ್ನು ನಾನು ಆರಾಧಿಸದಿದ್ದರೆ ಏನಾಗುವುದು? ನಾನು ಅದನ್ನು ಪಠಿಸದಿದ್ದರೇ ಏನಾಗುವುದು? ಹೀಗೆ ಒಂದೊಂದಾಗಿ ಪ್ರಶ್ನೆಗಳನ್ನು ತನ್ನ ಮನದಲ್ಲಿ ಮೂಡಿಸಿಕೊಂಡು ಅವುಗಳಿಗೆ ಉತ್ತರವನ್ನು ಪಡೆಯಲು ಪ್ರಾರಂಭಿಸುವನು.

ಮನುಷ್ಯನ ಮನಸ್ಸೆ ಒಂದು ಸುಖಕ್ಕಾಗಿ ಯಾವಾಗಲೂ ಹಾತೊರೆಯುತ್ತಿರುತ್ತದೆ. ತಾನು ಮಾಡುವ ಆಚರಣೆಗಳಿಂದ ತನಗೆ ಅನುಕೂಲವನ್ನು ಪಡೆಯಲು ಹಂಬಲಿಸುವನು. ಅದು ತನಗಾಗಿ ಅಥವಾ ತನ್ನನ್ನು ನೆಚ್ಚಿದವರಿಗಾಗಿ. ಹೀಗೆ ತನ್ನ ಅಭಿವೃದ್ಧಿಯ ದಾರಿಯಲ್ಲಿ ತಾನು ಮಾಡುವ ಯಾವುದೇ ಒಂದು ಕೆಲಸಕ್ಕೂ ಅವನಿಗೆ ಪ್ರತಿಫಲ ಸಿಗಲೇಬೇಕು. ಮುಂದೆ ಆಗುವ ಮಾಡುವ ಏನೇ ಕರ್ಮ ಕಾರ್ಯಕ್ಕೂ ಒಂದು ನಿರ್ಧಿಷ್ಟವಾದ ಫಲಕ್ಕೆ ಕಾಯುತ್ತಾನೆ. ಹೀಗೆ ಭವಿಷ್ಯತ್ ನಲ್ಲಿ ಸಿಗಲಿರುವ ಒಂದು ವಸ್ತುವನ್ನು ಪಡೆಯಲು ತನ್ನ ಸಾಮರ್ಥ್ಯವಲ್ಲದೇ ಬೇರೆನಾದರೂ ಒಂದು ಶಕ್ತಿಯ ನೆರವನ್ನು ಅವನು ಅಪೇಕ್ಷಿಸುತ್ತಾನೆ. ಅದೇ ತಾನು ನಂಬಿರುವ ದೇವರು. ದೇವರು ಅವನು ಪ್ರಶ್ನಾತೀತ. ಅವನಿಗೆ ತನ್ನ ಬಾಲ್ಯದಿಂದಲೂ ಎಲ್ಲರೂ ಅತಿಯಾದ ಗೌರವವನ್ನು ಪೂಜ್ಯಭಾವನೆಯನ್ನು ತನ್ನ ಮನೆಯಿಂದ ಹಿಡಿದು ತನ್ನಂತಿರುವ ಒಂದು ದೊಡ್ಡ ಸಮೊಹವೇ ನಂಬುವ ದೇವರೇ ಆಶದಾಯಕವಾಗಿ ಕಾಣುತ್ತದೆ. ಅದೇ ಅವನಿಗೆ ಹೊಸ ಆಶಾಕಿರಣ. ಎಲ್ಲಾ ರೀತಿಯ ನೆಮ್ಮದಿಯನ್ನು ದಯಪಾಲಿಸುವ ಕಾಮದೇನಾಗಿ ಕಾಣುತ್ತಾನೆ. ಅವನ ಶಕ್ತಿವಂತಿಕೆಯನ್ನು ತನ್ನಲ್ಲಿ ಕಾಣಲು ತವಕಿಸುತ್ತಾನೆ. ಆಗ ಅವನ ಭಕ್ತಿಯ ಪರಕಾಷ್ಠೆಯನ್ನು ನಾವುಗಳು ಕಾಣಬಹುದು. ಅದು ಅವನ ಆರಾಧನೆಯ ಸಮಯವಾಗಿರುತ್ತದೆ.

ಏನಾದರೂ ತಾನು ಅಂದುಕೊಂಡಿದ್ದು ವಿಪಲವಾದರೂ ಅವನಿಗೇನೂ ಬೇಜಾರಾಗುವುದಿಲ್ಲ. ಯಾಕೆಂದರೇ ಇದರ ಜಯ ಅಪಜಯಗಳನ್ನು ಒಂದು ದೊಡ್ಡ ಶಕ್ತಿಗೆ ಸಮರ್ಪಿಸಿರುತ್ತಾನೆ. ತನ್ನ ಸಾಮರ್ಥ್ಯದಲ್ಲಿ ಸ್ವಲ್ಪ ಏನೋ ಊನವಾಗಿದೆ. ದೇವರು ಮುಂದೆ ಎಂದಾದರೂ ನನಗೆ ನೆರವು ನೀಡೇ ನೀಡುತ್ತಾನೆ ಎಂಬ ಒಂದು ಸಮಾಧಾನ ಅವನದಾಗಿರುತ್ತದೆ. ಈ ಒಂದು ಸಮಾಧಾನವನ್ನು ನಾವುಗಳು ಎಂದೂ ಸಾಮಾನ್ಯ ಮನುಷ್ಯರಿಂದ ಪಡೆಯಲಾಗುವುದಿಲ್ಲ.

ಹೀಗೆ ಪ್ರತಿಯೊಬ್ಬರೂ ತಾನು ನಂಬಿರುವ ಧರ್ಮ, ದೇವರುಗಳನ್ನು ತಮ್ಮ ಸರ್ವಸ್ವವಾಗಿ ಇಟ್ಟುಕೊಂಡಿರುತ್ತಾರೆ. ಅದೇ ಒಂದು ಬದುಕನ್ನು ಕಟ್ಟಿ ಕೊಟ್ಟಿರುತ್ತದೆ. ಎಲ್ಲದಕ್ಕೂ ಅದೇ ಪ್ರಥಮತಃ. ಅವರ ಅವರುಗಳಿಗೆ ಅವರವರದೇ ಧರ್ಮ ಅಚ್ಚು ಮೆಚ್ಚು. ಯಾಕೆಂದರೇ ಅದು ಅವರ ಅಚಲ ನಂಬಿಕೆ.

ಈ ನಮ್ಮ ಪ್ರಪಂಚದಲ್ಲಿ ಸಾವಿರಾರು ವಿಭಿನ್ನವಾದ ಧರ್ಮ ಆಚರಣೆಗಳನ್ನು ಕಾಣುತ್ತೇವೆ. ಎಲ್ಲಾ ಧರ್ಮ ಆಚರಣೆಗಳ ಏಕ ಮಾತ್ರ ಸಂದೇಶವೆಂದರೇ "ಮಾನವನ ಪರಸ್ಪರರ ಪ್ರೀತಿ ಮತ್ತು ಸಹ ಬಾಳ್ವೇ".

ಇದು ತೀರ ಅತಿ ಸರಳ ಸಂದೇಶವಾಗುತ್ತದೆ. ಹೌದು! ಹಿಂದೆ ನಮ್ಮ ನಮ್ಮ ಒಂದಷ್ಟು ಗುಂಪುಗಳು ತಮ್ಮ ಒಳ್ಳೆಯತನದ ಜೀವನಕ್ಕಾಗಿ ಮಾಡಿಕೊಂಡ ಒಂದು ಪದ್ಧತಿ ಆಚರಣೆಗಳೇ ಇಂದು ನಾವುಗಳು ಕಾಣುತ್ತಿರುವ ಹತ್ತು ಹಲವು ಆಚರಣೆಗಳಾಗಿವೆ.

ಆ ಆ ವರ್ಗಗಳಲ್ಲಿ ಉದಯಿಸಿದ ಮೇದಾವಿ ಮಹನೀಯರುಗಳ ಸಂದೇಶಗಳು, ಉಪದೇಶಗಳೂ, ಅವರ ಜೀವನ ಚಿತ್ರಗಳು, ಸುಧಾರಣೆಗಳೆ.. ನೀತಿ ಸಂಹಿತೆಗಳು, ಕಥೆ, ಪುರಾಣ, ನಂಬಿಕೆಗಳಾಗಿವೆ. ಅವೇ ನಮಗೆಲ್ಲಾರಿಗೂ ಮೌಲ್ಯಯುತವಾದ ಆದರ್ಶಮಯವಾದ ಪವಿತ್ರ ಗ್ರಂಥಗಳಾಗಿವೆ.

ನಾವುಗಳು ಎಲ್ಲಾ ಧರ್ಮಿಯರ ಧರ್ಮ ಗ್ರಂಥಗಳನ್ನು ತೀರ ಅಳವಾಗಿ ನೋಡಿದಾಗ ತಿಳಿಯುವ ಒಂದು ಸಾಮಾನ್ಯವಾದ ನೀತಿಯೇನೆಂದರೆ ಅದು ಮಾನವ ಧರ್ಮದ ಮೇಲು ಗೈ. ಮತ್ತು ಪ್ರತಿಯೊಂದು ಒಂದರೊಳಗೊಂದು ತಮ್ಮ ರೆಂಬೆಯನ್ನು ಚಾಚಿಕೊಂಡಿರುವುವು. ಎಲ್ಲಾ ಒಂದೇ ಎಂಬುದು ಯಾರೊಬ್ಬರೂ ಮರೆಯಲಾರದಂತಹ ಮುಖ್ಯ ಸಂದೇಶ.

ಕೆಲವೊಂದು ಆಚರಣೆಗಳು ಜನಗಳ ತಿದ್ದುಪಡಿ, ಆಚರಣೆಗಳ ವೈಪರಿತ್ಯದಿಂದ ಒಮ್ಮೊಮ್ಮೆ ಇಂದಿನ ಜನಗಳಿಗೆ ಬೆಸರವನ್ನು ತಂದಿರುವುವು. ಅದು ಸಹಜ! ಯಾಕೆಂದರೇ ಇಂದು ನಾವುಗಳು ಯೋಚಿಸಿರುವಂತೆಯೇ ಶತ ಶತಮಾನಗಳ ಹಿಂದಿನಿಂದಲೂ ಸಾವಿರಾರು ಜನರುಗಳು ಯೋಚಿಸಿರುತ್ತಾರೆ. ಕೆಲವೊಂದು ನ್ಯೂನತೆಗಳು ಮತ್ತು ಒಳ್ಳೆಯ ನೀತಿಗಳು ಸೇರಿವೆ. ಆದರೇ ಮೂಲತನ ಮಾತ್ರ ಯಾವಾಗಲೂ ಒಂದೇ, ಅದನ್ನು ಗಮನಿಸಬೇಕು.

ಪ್ರತಿಯೊಬ್ಬನಿಗೂ ತಾನು ಏನೇನೋ ಮಾಡಿದರೂ ತನಗೆ ಒಂದು ಕ್ಷಣ ನೆಮ್ಮದಿಯೆಂಬುದು ಸಿಗುವುದು ತಾನು ತನ್ನ ಮನಸ್ಸನ್ನು ಯಾವುದರಲ್ಲಾದರೂ ಕೇಂದ್ರಿಕರಿಸಿ ಅನುಭವಿಸಿದಾಗ ಮಾತ್ರ. ತನ್ನನ್ನು ತಾನು ಮರೆತು ಸುತ್ತಲಿನ ಈ ಪ್ರಪಂಚವನ್ನು ಒಂದು ಕ್ಷಣ ಶೂನ್ಯವಾಗಿ ಕಂಡಾಗ ಮಾತ್ರ. ಇದು ತಾನು ನಂಬಿರುವ ಧರ್ಮದಲ್ಲಿ ಇರುವಂತಹ ಪ್ರಾರ್ಥನೆ, ಭಜನೆ, ಗೀತೆ, ಗಾಯನ, ಆರಾಧನೆ ಇತ್ಯಾದಿ ಮಾಡುವುದರಿಂದ ಸಿಗುವುದು.

ನೀವುಗಳು ಗಮನಿಸಿರಬಹುದು. ಕೆಲವೊಂದು ಮಂದಿಗಳು ತಾವು ಬೆಳೆದಂತೆ ತಮ್ಮ ಮನೆಗಳಲ್ಲಿ ಅಥವಾ ತಮ್ಮ ಸಮುದಾಯದಲ್ಲಿ ಆಚರಿಸುವ ಈ ಎಲ್ಲಾ ಆಚರಣೆಗಳನ್ನು ಬಿಟ್ಟು ತಾವುಗಳು ಅದನ್ನು ನಂಬುವುದಿಲ್ಲ ಎಂಬ ರೀತಿಯಲ್ಲಿ ಅವರದೇಯಾದ ಒಂದು ಮನೋಧರ್ಮದಲ್ಲಿ ಬದುಕುತ್ತಾರೆ. ಅವರುಗಳು ಸಹ ತಮ್ಮ ಕೆಲಸ ಕಾರ್ಯದಲ್ಲಿ ತುಂಬ ಸುಂದರವಾಗಿ ಸುಖ ಸಂತೋಷವಾಗಿ ಬದುಕುತ್ತಾರೆ. ಇದು ಏನನ್ನು ಸೂಚಿಸುತ್ತದೆ ಅಂದರೇ ಇವುಗಳೆಲ್ಲಾ ನಮ್ಮ ನಮ್ಮಗಳ ಅನುಕೂಲಕ್ಕಾಗಿ ನಮ್ಮ ಹಿರಿಯರುಗಳು ಕಟ್ಟಿ ಕೊಟ್ಟಿರುವ ಒಳ್ಳೆಯತನಗಳು ಮಾತ್ರ. ನಿಮಗೆ ಅನುಕೂಲವಾದರೆ ನೀವುಗಳು ಅನುಸರಿಸಿ. ಅಥವಾ ನೀವೇ ಏನಾದರೂ ಹೊಸ ಮಾರ್ಗವನ್ನು ಕಂಡುಹಿಡಿದರೆ ಅದರಲ್ಲಿಯೇ ಮುಂದುವರಿಯರಿ. ಆದರೆ ನೀವು ಸಾಗುವ ಮಾರ್ಗ ಯಾರೊಬ್ಬರಿಗೂ ತೊಂದರೆಯನ್ನು ಕೊಡಲಾರದು, ನೀವು ನೆಮ್ಮದಿಯಾಗಿ ಬದುಕಬಹುದು, ಅಂದರೇ ಅದೇ ಒಂದು ಉತ್ಕೃಷ್ಟವಾದ ಮಾನವ ಧರ್ಮ. ನೀನು ಬದುಕು ಪರರನ್ನು ಬದುಕಲು ಬಿಡು!

ಹೀಗೆ ಮನುಷ್ಯ ತನ್ನ ಮೀತಿಯನ್ನು ಒಂದು ಚೌಕಟ್ಟಿನಲ್ಲಿ ಇಟ್ಟುಕೊಳ್ಳಲು ಕಂಡುಕೊಂಡ, ತಾನೇ ನಿರ್ಮಿಸಿಕೊಂಡ ಒಂದು ವ್ಯವಸ್ಥಿತ ಮಾನವ ಏಳ್ಗೆಯ ನಡಾವಳಿಗಳೇ ಈ ಎಲ್ಲಾ ಆಚಾರ-ವಿಚಾರಗಳು. ಇದು ಹೀಗೆ ಎನ್ನುವ, ಇವನ್ನು ನೀನು ಚಾಚು ತಪ್ಪದೇ ಆಚರಣೆಯಲ್ಲಿ ಇಟ್ಟುಕೊಳ್ಳಲೇ ಬೇಕೆಂಬ ಕಟ್ಟು ನಿಟ್ಟಿನ ಕಾನೂನುಗಳು ಇವುಗಳಲ್ಲಾ. ಹೀಗೂ ಇರಬಹುದು.. ಹಾಗೂ ಇರಬಹುದು.. ಹೇಗೂ ಇದ್ದರೂ.. ನೀನು ಬದುಕು.. ಪರರನ್ನು ಬದುಕಲು ಬಿಡು..

ಓಂ ಶಾಂತಿ! ಓಂ ಶಾಂತಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ