ಭಾನುವಾರ, ಸೆಪ್ಟೆಂಬರ್ 11, 2011

ಇದಕ್ಕೆ ಕೊನೆಯಾದರೂ ಹೇಗೆ? ಎಂದು?

ಹೆಸರು, ಹಣ ಮಾಡಬೇಕು ಎಂದು ನಮ್ಮ ಜನಗಳು ಯಾಕೆ ಪರಿತಪಿಸುವವರು ಎಂಬುದು ಕಳೆದ ದಿನಗಳಲ್ಲಿ ಘಟಿಸಿದ ಮತ್ತು ಓದಿದ ವರದಿಗಳಿಂದ ಪುಷ್ಟಿ ದೊರೆತಂತಾಯಿತು. ಯಾವುದೇ ದೊಡ್ಡ ಅಧಿಕಾರ, ಸ್ಥಾನವನ್ನ ಮತ್ತು ಸಮಾಜದಲ್ಲಿ ದೊಡ್ಡ ಗೌರವವನ್ನು ಹೊಂದಿರುವ ವ್ಯಕ್ತಿ ತನಗೆ ಗೊತ್ತಿರುವವಂತೆ ತನ್ನನ್ನು ಪಾಲೋ ಮಾಡುವ ಒಂದು ಸಮೊಹವನ್ನು ಹೊಂದಿರುತ್ತಾನೆ. ಸಮಾಜದ ಜನಗಳು ಸಹ ಅವನನ್ನು ತನ್ನ ಆರಾಧ್ಯ ದೈವ ಎಂಬ ರೀತಿಯಲ್ಲಿ ನೋಡಿ ಆನಂದಿಸುತ್ತಾರೆ.

ಅದು ಅವನ ಕಲೆ, ಮಾತು, ಹಣ, ಅಧಿಕಾರ, ಸಮಾಜದ ಕಡೆಗೆ ಇರುವ (ಪ್ರೀತಿ?) ಏನಾದರೂ ಇರಬಹುದು ತುಂಬ ಹಚ್ಚಿಕೊಂಡುಬಿಟ್ಟು ಬಿಡುತ್ತಾರೆ. ಅದು ಆ ವ್ಯಕ್ತಿಗಳ ಅಹಂ ನ್ನು ಒಂದು ಮಟ್ಟದಲ್ಲಿ ಮೇಲಕ್ಕೆ ಏರಿಸಿಬಿಡುತ್ತದೆ. ಅವರುಗಳಿಗೆ ಒಂದು ಸಂಘ, ಬೆಂಬಲ, ಅವರಿಗಾಗಿ ಕಾರ್ಯಕ್ರಮಗಳು ಇತ್ಯಾದಿ ಇತ್ಯಾದಿ.

ಅವರುಗಳು ಮಾಡುವುದೆಲ್ಲಾ ಸರಿ ಎಂಬ ನಂಬಿಕೆ ನಮ್ಮ ಜನಗಳದಾಗಿರುತ್ತದೆ. ಆ ವ್ಯಕ್ತಿಗಳು ಮಾತನಾಡುವ ಪ್ರಜಾ ಕಾಳಜಿ ಮಾತುಗಳು, ಅವರುಗಳ ಹೇಳಿಕೆಗಳು ಟಿ.ವಿ, ಪತ್ರಿಕೆಗಳಲ್ಲಿ, ಸಿನಿಮಾಗಳಲ್ಲಿ ತೋರಿಸುವ ಕಾಳಜಿಗಳೆಲ್ಲಾ ಆ ವ್ಯಕ್ತಿಯ ವ್ಯಕ್ತಿತ್ವದ ನಿಜ ಸ್ವರೂಪ ಎಂಬ ರೀತಿಯಲ್ಲಿ ಎಂದು ಕೊಂಡಿರುತ್ತಾರೆ.

ಅವನು ಸಹ ನಡೆದಾಡುವ ಸಾಮಾನ್ಯ ಮನುಷ್ಯ ಎಂಬುದನ್ನೇ ಮರೆತುಬಿಟ್ಟಿರುತ್ತಾರೆ. ಅದು ಯಾವ ಪರಕಾಷ್ಠೇಯೊ ದೇವರಿಗೆ ಪ್ರೀತಿ. ಇಷ್ಟೊಂದು ರೀತಿಯಲ್ಲಿ ವ್ಯಕ್ತಿಗಳನ್ನು ಆರಾಧಿಸುವ ಜನಗಳು ನಮ್ಮ ಭಾರತದಲ್ಲಿ ಸಿಗುವಂತೆ ಬೇರೆಲ್ಲೂ ಸಿಗಲಾರರು ಏನೋ.

ಯಾರೇ ಆಗಿರಲಿ ಅತಿ ಕಡಿಮೆ ದಿನಗಳಲ್ಲಿ ಹೀಗೆ ನಮ್ಮ ಜನಮಾನಸದಲ್ಲಿ ಸ್ಥಾಪಿತರಾಗಿಬಿಡುತ್ತಾರೆ. ಕೇವಲ ಒಂದು ಪಂದ್ಯದಲ್ಲಿ ಒಂದು ಸೆಂಚುರಿ, ಒಂದು ಮೋವಿಯ ೧೦೦ ದಿನಗಳು, ಒಂದು ಭಾರಿ ಚುನಾವಣೆಯಲ್ಲಿ ಗೆದ್ದು ಬಂದು ಒಂದು ಮಂತ್ರಿಗಿರಿ, ಒಂದು ಆಶ್ರಮದ/ಸಂಘ/ಸೇವಾ ಮುಖ್ಯಸ್ಥನಾಗಿ, ಒಂದೇರಡು ಮನ ಕರಗುವ ಪ್ರವಚನಗಳು ಇತ್ಯಾದಿ ಏನಾದರೂ ಒಂದನ್ನು ಸಾರ್ವಜನಿಕವಾಗಿ ಕೊಟ್ಟು ಬಿಟ್ಟರೇ ಸಾಕು... ನಂತರದ ದಿನಗಳಲ್ಲಿ ಅವನು ಏನೂ ಮಾಡಿದರೂ ದೇವರಾಣೆ ನಮ್ಮ ಜನ ಯಾಕಪ್ಪಾ ಅವನು ತಪ್ಪು ಮಾಡಿದಾ ಎಂದು ಕೇಳುವುದಿಲ್ಲ.

ಜನಗಳು ಕೊಡುವ ಸಮಜಾಯಿಷಿ ನೀವುಗಳು ನೋಡಬೇಕು. ಇಲ್ಲಾ ಬಿಡಿ ಅವರುಗಳು ಆ ರೀತಿಯಲ್ಲಿ ಮಾಡಿರುವುದಕ್ಕೆ ಸಾಧ್ಯವಿಲ್ಲ. ಅವರುನಮ್ಮ ಗುರು.. ಅವನು ನಮ್ಮ ಸ್ಟಾರ್, ಅವನು ನಮ್ಮ ನಾಯಕ, ಅವನು ನಮ್ಮ ಜಾತಿಯವನೇ ಕಣ್ರೀ.. ಅದೇಗೆ ಸಾಧ್ಯ? ಎಂಬ ಸಮರ್ಥನೆಯ ಸರಮಾಲೆಯನ್ನೇ ಕೊಡುತ್ತಾರೆ.

ಇದೇ ಅಲ್ಲವಾ ಮಹಿಮೆ!

ಅದೇ ನೀವು ನೋಡಿರಬೇಕು. ಅಪ್ಪಿ ತಪ್ಪಿ ಚಿಕ್ಕ ಜೇಬು ಕಳ್ಳ ನಮ್ಮ ಜನಗಳ ಕೈಗೆ ಸಿಕ್ಕಿ ಬಿದ್ದರೇ ದೇವರಿಗೆ ಪ್ರೀತಿಯಾಗಬೇಕು ಅಷ್ಟರ ಮಟ್ಟಿಗೆ ಧರ್ಮದೇಟು ಕೊಡಲು ನಾನು ಮುಂದು ತಾನು ಮುಂದು ಎಂದು ಎಲ್ಲಾ ಸೇರಿ ಹಾಕುತ್ತಾರೆ.

ಅದೇ ನಮ್ಮ ದೊಡ್ಡ ದೊಡ್ಡ ಸ್ಟಾರಗಳು, ನಾಯಕರುಗಳು, ದೇವ ಮಾನವರುಗಳು ಮಾಡುವ ದೊಡ್ಡ ತಪ್ಪುಗಳಿಗೆ ತೆಪ್ಪಗೆ ಇದ್ದು.. ಮರುಗುತ್ತಾ ಯಾಕೆ ಹೀಗೆ ಆಯ್ತಾಪ್ಪ? ದೇವರೇ ಅವರುಗಳು ಕ್ಷೇಮವಾಗಿ ಮನೆಗಳಿ ಹಿಂದಿರುಗಿ ಯಾವುದೇ ಕಳಂಕರಹಿತರಾಗಿ ತ(ನ)ಮ್ಮ ಸೇವೆ, ಸಹಾಯ, ರಂಜನೆಯನ್ನು ಜನರ ಮಾನಸಕ್ಕೆ ಕೊಡಲಿ ಎಂದು ನಾಡಿನ ಎಲ್ಲಾ ದೇವಸ್ಥಾನಗಳಲ್ಲಿ ಹೋಮ, ಹವನ, ಪೂಜೆಗಳನ್ನು, ಅನ್ನ ಸಂತಾರ್ಪಣೆಗಳನ್ನು ಅವರ ಭಕ್ತ ಸಮೊಹ ಹಮ್ಮಿಕೊಳ್ಳುತ್ತದೆ ಯಾಕೆ?

ನಮ್ಮ ಜನಗಳು ಯಾವುದಕ್ಕೆ ಬೆಲೆ ಕೊಡುತ್ತ ಇದ್ದಾರೆ ಎಂದು ನಮಗೆ ಒಂದು ಕ್ಷಣ ಗೊಂದಲ ಆಗುವುದಿಲ್ಲವೇ?

ದೊಡ್ಡವರು, ಉಳ್ಳವರು, ಪ್ರಸಿದ್ಧವರಿಗೆ ಮಾತ್ರ ಒಂದು ನ್ಯಾಯಾ. ಏನೂ ಇಲ್ಲದ ಸಾಮಾನ್ಯ ಪ್ರಜೆಗೆ ಒಂದು ನ್ಯಾಯವಾ? ನೀವೆ ಹೇಳಿ.

ಯಾಕೆ ನಾವುಗಳು ಅವರುಗಳನ್ನು ಒಬ್ಬ ಸಾಮಾನ್ಯ ಮನುಷ್ಯನಂತೆ ನೋಡಲಾಗುವುದಿಲ್ಲ. ಅವನು ಮಾಡುವ ಸಾವಿರ ತಪ್ಪುಗಳು, ತಪ್ಪು ಎಂದು ನಿರೂಪಿತವಾಗಿದ್ದರೂ ಒಂದು ಕೊದಲು ಎಳೆಯಷ್ಟು ಸಂಶಯಗಳು ಬರುವುದಿಲ್ಲ.

ಅವರುಗಳು ಜೈಲು, ಕಟೆಕಟೆಯಲ್ಲಿ ನಿಂತರು, ಪತ್ರಿಕೆಗಳು ಅಷ್ಟು ದುಡ್ಡು ಹೊಡೆದ ಇಷ್ಟು ಭ್ರಷ್ಟಾಚಾರ ಮಾಡಿದ ಎಂದು ಪುಟ ಪುಟಗಟ್ಟಲೇ ಓದಿದರೂ ನಾವುಗಳು ಯಾಕೆ ಅವರುಗಳನ್ನು ಅಷ್ಟೊಂದು ಸಾಪ್ಟ್ ಆಗಿ ಕಾಣುತ್ತೇವೆ? ಸಣ್ಣ ತಪ್ಪು, ದೊಡ್ಡ ತಪ್ಪು ಎಂಬ ರೀತಿಯ ತಪ್ಪುಗಳು ಇರುವುವೆ?

ಅದೇ ಸಾಮಾನ್ಯ ಮನುಷ್ಯ ಒಂದು ಸಣ್ಣದಾಗಿ ಎಡವಿದರು ಸಾಕು ಹೇಗೆಲ್ಲಾ ಆಡಿಕೊಂಡು ಅವನ ಮನಸ್ಸನ್ನು ನೋಯಿಸುವ ನಾವುಗಳು ಕೋಟಿಗಟ್ಟಲೆ ತಿಂದಿರುವ ಆ ಮುಖಗಳಲ್ಲಿರುವ ಝಲಕು, ಒಂದೀಷ್ಟು ಬತ್ತಿರದ ರೀತಿಯಲ್ಲಿ ಟಿ.ವಿ ಯಲ್ಲಿ ವಿನ್ನರ್ ಸೈನ್ ನ್ನು ತೋರಿಸಿಕೊಳ್ಳುತ್ತಾ ಕೋರ್ಟಿಗೆ ಹೋಗುತ್ತಿರುವ ನಾಯಕರ ದೃಶ್ಯ ಏನನ್ನು ನಿದರ್ಶಿಸುತ್ತದೆ?

ನಿಜವಾಗಿಯು ನೈತಿಕತೆ ಎಂದರೇ ಏನೂ ಎಂಬ ಹೊಸ ಪರಿಭಾಷೆಯನ್ನು ಹುಡುಕುವಂತಾಗಿದೆ.

ಹೆಚ್ಚಾಗಿ ದುಡ್ಡು ಮಾಡಿದರೇ ಸಾಕು ಮಗ ಎಲ್ಲವನ್ನು ಜಯಿಸಬಹುದು ಎನ್ನುವಂತಾಗಿದೆ. ಪಾಪ ಪುಣ್ಯವನ್ನು ಮೋಟೆ ಕಟ್ಟಿ ಮಾರಾಟಕ್ಕೆ ಇಟ್ಟು ಬಿಟ್ಟಿದ್ದಾರೇನೂ ಎನಿಸುತ್ತಿದೆ.

ಮೊನ್ನೆಯ ದಿನಪತ್ರಿಕೆಯಲ್ಲಿ ಓದಿದ ಒಂದು ವರದಿ ಮನಕರಗಿಸಿ ನಾವು ಯಾವ ಲೋಕದಲ್ಲಿ ಇದ್ದೇವೆ ಎನ್ನುವಂತಾಯಿತು.

ದೆಹಲಿಯಲ್ಲಿ ಭಯೋತ್ಪಾದಕರ ಬಾಂಬ್ ಗೆ ಬಲಿಯಾದವರ ಶವಗಳನ್ನು ಅವರ ಸಂಬಂಧಿಕರುಗಳು ತಮ್ಮ ಜಾಗಗಳಿಗೆ ಸಾಗಿಸುವಾಗ ಶವಗಳನ್ನು ಇಟ್ಟಿರುವ ಆಸ್ಪತ್ರೆಯಲ್ಲಿ ಶವಗಳನ್ನು ಮುಚ್ಚಿಕೊಂಡುಹೋಗಲು ಪ್ಲಾಸ್ಟಿಕ್ ಕವರಗಳನ್ನು ಬೇಡಿದ್ದಾರೆ. ಅವುಗಳ ನಿಜವಾದ ಬೆಲೆ ೩೦೦ ರೂಗಳು. ಆದರೇ ಅಲ್ಲಿನ ಸಿಬ್ಬಂಧಿ ದುಃಖತಪ್ತ ಮನೆಯವರುಗಳಿಂದ ಹೆಚ್ಚಿನ ಬೆಲೆಯನ್ನು ಕೇಳಿ ಮಾರಾಟ ಮಾಡಿರುವುದು ಯಾವುದರ ಸಂಕೇತ?

ನಿಜವಾಗಿಯು ನಾವುಗಳು ಏನೆಲ್ಲಾ ಆದರ್ಶ, ನೈತಿಕತೆ, ದೇಶ ಪ್ರೇಮ ಇತ್ಯಾದಿ ದೊಡ್ಡ ಮಾತುಗಳು ನಮ್ಮ ನಾಡಿನ ಯಾವ ಜನಗಳಿಗೋಸ್ಕರ. ನಿತ್ಯ ಭ್ರಷ್ಟಾಚಾರ ತೂಲಗಲಿ, ಸುರ‍ಕ್ಷತೆಯ ಸ್ವರಾಜ್ಯ ಸ್ಥಾಪಿತವಾಗಲಿ ಎಂದು ಕೆಲವೊಂದು ಮಂದಿ ತಮ್ಮ ಜೀವವನ್ನೆ ಪಣವಾಗಿಟ್ಟು ಹೋರಾಡುತ್ತಾರೆ. ಆದರೇ ಕೆಲವೊಂದು ಮಂದಿ ತಮ್ಮ ನೀಚತನವನ್ನು, ತಮ್ಮ ದುರಾಸೆಯನ್ನು ಸಮಯ ಸಂದರ್ಭ,ಸ್ಥಳ ಎನಿಸದೇ ಹೆಗ್ಗಿಲ್ಲದೇ ಕಿತ್ತು ತಿನ್ನಲು ಮಣೆ ಹಾಕಿಕೊಂಡು ಕುಳಿತಿರುವವರಲ್ಲ!

ಇದಕ್ಕೆ ಕೊನೆಯಾದರೂ ಹೇಗೆ ಮತ್ತು ಎಂದು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ