ಗುರುವಾರ, ಮೇ 26, 2011

ಬದುಕಿನ ಅಸ್ತವ್ಯಸ್ಥ ಕೋಲಾಜ್



ಪ್ರಕೃತಿಯನ್ನು ನೋಡಿ ಮನುಷ್ಯ ಕಲಿಯಬೇಕೆನೋ.. ಅದು ಕಾಲಕ್ಕೆ ತಕ್ಕ ಹಾಗೇ ಏನೂ ಏನೂ ಯಾವ ಕಾಲಕ್ಕೆ ನಡೆಯಬೇಕೋ.. ಏನೂ ಏನೂ ಬದಲಾವಣೆಯನ್ನು ತನ್ನಲ್ಲಿ ತರಬೇಕು ಅದು ತರುತ್ತದೆ. ಋತು ಚಕ್ರದ ಹಾದಿಯಲ್ಲಿ ತನ್ನ ಪಯಣವನ್ನು ಚಾಚೂ ತಪ್ಪದೇ ತನ್ನ ಕಾಯಕವನ್ನು ಹೊಸತನಕ್ಕೆ ಒಡ್ಡಿಕೊಂಡು ತನ್ನಲ್ಲಿ ತಾನೇ ಸಂಭ್ರಮವನ್ನು ಪಡುತ್ತಾ ಮುಕ್ಕೋಟಿ ಜೀವಿಗಳಿಗೂ ಅದರ ಸವಿಯನ್ನು ಉಣಬಡಿಸುತ್ತದೆ.

ಕಳೆದ ಎರಡು ತಿಂಗಳ ಮದ್ಯಾನದ ಬೀರು ಬಿಸಿಲನ್ನು ಕಂಡ ಬೆಂಗಳೂರು ಮೇಟ್ರೂ ಮಂದಿ ನಿಡುಸುಯ್ದುಬಿಟ್ಟಿದ್ದರೂ.. ಅಬ್ಬಾ ಯಾವಾಗ ಮಳೆಗಾಲವನ್ನು ಕಂಡೆವೋ ಎಂದು ಮುಗಿಲನ್ನು ನೋಡುತ್ತಿದ್ದರೂ.

ಏನೇ ನಮ್ಮ ತಂತ್ರಙ್ಞಾನದ ಕೊಡುಗೆಯಾದ ಎ.ಸಿ, ಕೂಲರ್ ಇದ್ದರೂ ಪ್ರಕೃತಿ ಸಹಜವಾದ ಹಿತವಾದ ತಣ್ಣನೆಯ ಸಿಹಿಗಾಳಿಯ ಮುಂದೆ ಸರಿ ಸಮಕ್ಕೆ ಬರಲಾರವು. ಅಲ್ಲಿರುವ ನೆಮ್ಮದಿ ಇವುಗಳಿಂದ ನಮಗೆ ಸುಖವಿಲ್ಲ ಎಂಬಂತೆ ಉಸ್! ಎಂದು ಪರಿತಪಿಸಿದ್ದೇ ಪರಿತಪಸಿದ್ದು.

ಇದನ್ನು ನೋಡಿ ಪ್ರಕೃತಿ ಮಾತೆಯ ಮನ ಕರಗಿತೋ! ಎಂಬಂತೆ ಕಳೆದ ಮೂರು ವಾರಗಳಿಂದ ಬೆಂಗಳೂರಿನಲ್ಲಿ ಹಗಲೂ ಸುಡು ಬಿಸಿಲು ಇದ್ದರೂ ಸಂಜೆಯಾಗುತ್ತಿದ್ದಂತೆ ಮೊಡ ಕವಿದು ದೋ ಎಂಬಂತೆ ನಿತ್ಯ ಮಳೆ, ಗುಡುಗು ಸಿಡಿಲುಗಳ ನರ್ತನ ಚಿಕ್ಕದಾಗಿ ಜಳ ಪ್ರಳಯವೇನೋ ಎಂಬಂತೆ ಎಲ್ಲಿ ಎಲ್ಲಿ ನೀರು ಹರಿಯಬೇಕು ಆ ಜಾಗ ಬಿಟ್ಟು ರಸ್ತೆಗಳೇ ದೊಡ್ಡ ಚರಂಡಿಗಳಾಗಿ ಮಾರ್ಪಾಡಾಗಿ ಒಂದು ಎರಡು ಮಾನವ ಜೀವಗಳ ಬಲಿ!

ಇದು ನಮ್ಮ ನಗರದಲ್ಲಿ ಮಳೆ ಬಂದರೇ ಸಾಮಾನ್ಯವಾಗಿ ಕಾಣುವ ಕಣ್ಣೀರ ಕಥೆ.. ಕೇಳುವವರು ಯಾರು?

ನಿಸರ್ಗ ಮನುಷ್ಯನಿಗೆ ಯಾವ ಸಮಯಕ್ಕೆ ಯಾವುದನ್ನು ಕೊಡಬೇಕು ಅದನ್ನು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗಳು ತಾವು ಕೇಳದಿದ್ದರೂ ತನ್ನಿಷ್ಟಕ್ಕೆ ತಾನೇ ಯಾವುದೇ ಬೇದಭಾವವಿಲ್ಲದೆ ದಯಪಾಲಿಸುತ್ತದೆ. ಅಷ್ಟರ ಮಟ್ಟಿಗೆ ನಾವುಗಳು ನಿಸರ್ಗ ಮಾತೆಗೆ ಋಣಿಯಾಗಿರಲೇಬೇಕು.

ನಿಸರ್ಗವೇ ಬದಲಾವಣೆಯ ಹರಿಕಾರನಾದ ಮೇಲೆ ನಮ್ಮಂತಹ ಹುಲು ಮಾನವನ ಪಾಡು ಯಾರು ಕೇಳಬೇಕು. ತಾನು ಸಹ ಹೊಸತನಕ್ಕೆ ನಿತ್ಯ ಒಡ್ಡಿಕೊಳ್ಳಬೇಕು. ಆಗಲೇ ಬದುಕಿಗೊಂದು ಅರ್ಥವಂತಿಕೆ ಬರುವುದು. ತಾನು ಎಷ್ಟರ ಮಟ್ಟಿಗೆ ಯಾವಾವುದರಲ್ಲಿ ಹೇಗೆ ಮುಂದುವರಿದಿದ್ದೇನೆ ಮತ್ತು ಬೆಳೆದಿದ್ದೇನೆ ಎಂಬುದರ ಲೆಕ್ಕ ಸಿಗುವುದು.

ಇಲ್ಲವಾದರೇ ನಮ್ಮ ಜೀವಿತದ ಪ್ರತಿಯೊಂದು ನಿಮಿಷವು ಪೂರಾ ಬೋರ್ ಮತ್ತು ನೀರಸವಾದ ನಿರ್ಜೀವಂತಿಕೆಯಾಗುತ್ತದೆ.

ತನ್ನ ಸುತ್ತಲಿನ ತನ್ನಲ್ಲಿನ ತನ್ನ ಕೈಗೆ ಎಟುಕುವಷ್ಟರ ಮಟ್ಟಿಗೆ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಪ್ರತಿಯೊಂದು ಜೀವಿಯು ತನ್ನನ್ನು ಹೊಸ ತುಡಿತಕ್ಕೆ ಅರ್ಪಿಸಿಕೊಂಡು ಜೀವನದ ಸಾರ್ಥಕತೆಯನ್ನು ಕಾಣುತ್ತದೆ. ಕಾಣಲೇಬೇಕು ಅಲ್ಲವಾ?

ಈ ಯುಗದ ಹಾದಿಯ ಕಾಲನ ಚಕ್ರದಲ್ಲಿ ೧೨ ತಿಂಗಳುಗಳು ವಿವಿಧ ರೀತಿಯಲ್ಲಿ ನಮಗೆಲ್ಲಾ ಸಿಗುತ್ತಿರುತ್ತವೆ. ಒಟ್ಟು ವರುಷದ ಒಂದು ಸಾಧನೆಯ ಪಟ ನಾವುಗಳು ವರುಷದ ಪ್ರತಿಯೊಂದು ದಿನವನ್ನು ಹೇಗೆ ಉಪಯೋಗಿಸಿಕೊಂಡು ನಮ್ಮವನ್ನಾಗಿ ಮಾಡಿಕೊಂಡೇವೋ ಎಂಬುವುದರ ಮೇಲೆ ನಿಂತಿರುತ್ತದೆ.

ನಮ್ಮ ಈ ಯಾಂತ್ರಿಕತೆಯ ಬದುಕಿನಲ್ಲಿ ನಾವುಗಳು ನಮ್ಮ ಕಳೆದ ದಿನಗಳನ್ನು ನೋಡಿಕೊಂಡರೇ ಮುಂದೆ ಬರುತ್ತಿರುವ ದಿನಗಳನ್ನು ಹೇಗೆ ಕಳೆಯಬೇಕಾಪ್ಪ ಎಂಬ ಭಯವಂತೂ ಬಂದೇ ಬರುತ್ತದೆ. ಯಾಕೆಂದರೇ ಅದೇ ಬೆಳಗು ಅದೇ ರಾತ್ರಿ.. ಅದೇ ಕೆಲಸ.. ಅದೇ ರಸ್ತೆ.. ಅದೇ ಮಾತು.. ಅದೇ ಗೆಳೆಯರು.. ಅದೇ ನಡಾವಳಿ.. ಅದೇ ಬೇಸರ..

ಎಲ್ಲಾ ಬೇಸರ!

ಒಂದೀಷ್ಟು ಹೆಚ್ಚು ಕಡಿಮೆ ಇಲ್ಲದ ನಮ್ಮ ಬದುಕು. ಕೆಲಸವೇ ಬದುಕು. ಅದು ಒಪ್ಪುವ ಮಾತೇ. ಮನುಷ್ಯ ಎಂದರೇ ತಾನು ದುಡಿಯಬೇಕು. ತನ್ನವರನ್ನು ಸಾಕಬೇಕು. ಅದಕ್ಕಾಗಿ ಅದೇ ಅವನ ಬದುಕಾಗಬಾರದು ಅಲ್ಲವಾ? ದುಡಿತದ ಜೊತೆಗೆ ತನ್ನವರ ಜೊತೆ ತಾನು ಸಂಭ್ರಮದಿಂದ ಜೀವಿಸುವುದು ಯಾವಾಗ?

ದಿನದ ಮುಕ್ಕಾಲುಪಾಲು ಸಮಯವನ್ನು ತನ್ನ ಕಾಯಕದಲ್ಲಿ ಕಳೆದು ಬಸವಳಿದು ಯಾವೊಂದು ಮಾತೇ ಇಲ್ಲದೆ ಮೌನಕ್ಕೆ ಶರುಣು ಎನ್ನುವಂತ ಸ್ಥಿತಿ!

ಯೋಚಿಸಿ ನಾವುಗಳು ಎಷ್ಟರ ಮಟ್ಟಿಗೆ ನಿತ್ಯ ಏನಾದರೂ ಹೊಸ ವಿಚಾರ, ಮಾತು,ಪದಗಳು, ನೋಟ, ಗೆಳೆತನ, ಯೋಚನೆ, ದಾರಿ, ಸ್ಥಳ ಇತ್ಯಾದಿಗಳನ್ನು ಏನಾದರೂ ಮಾಡುತ್ತೇವೆಯೇ?

ಸಾಮಾನ್ಯವಾದ ಉತ್ತರ "ಇಲ್ಲ!"

ನಾವುಗಳು ನಮ್ಮ ಸುತ್ತಲಿನ ಪ್ರಪಂಚದಲ್ಲಿ ನಿತ್ಯ ಉಪಯೋಗಿಸುವ ಪದಗಳನ್ನು ಪಟ್ಟಿ ಮಾಡಿದರೇ ಅವೇ ಅವೇ ಬೋರ್ ಹೊಡೆಸುವ ಅತಿ ಚಿಕ್ಕದಾದ ಒಂದು ಪಟ್ಟಿಯನ್ನು ಯಾವಾಗಲೂ ಕಳೆದ ಹಲವು ವರ್ಷಗಳಿಂದ ಬಳಸುತ್ತಾ ಬಳಸುತ್ತಾ ಬಂದಿದ್ದೇವೆ. ಯಾಕೆಂದರೇ ನಮ್ಮ ಕೆಲಸಕ್ಕೆ ನಮ್ಮವರ ಜೊತೆಯಲ್ಲಿ ಹಗುರವಾಗಿ ಯಾವುದೇ ತೊಂದರೆಯಿಲ್ಲದ ನಮ್ಮ ಕಾಯಕವನ್ನು ನಿರ್ವಹಿಸಲು ಅದು ಹೆಚ್ಚಾದಂತೆಯೇ ಸರಿ.

"ಎಷ್ಟೊಂದು ಹೊಸತನದ ಕಿರಣಗಳನ್ನು ನಾವುಗಳು ಈಗಾಗಲೇ ಮಿಸ್ ಮಾಡಿಕೊಂಡಿದ್ದೇವೆ!"

ಇದು ತಿಳಿಯುವುದು ಯಾವಾಗಲಾದರೂ ಯಾವುದಾದರೂ ಹೊಸ, ಹಳೆಯ ಪುಸ್ತಕವನ್ನು ಓದಿದಾಗ, ಮೋವಿಯನ್ನು ನೋಡಿದಾಗ, ಅಪರಿಚಿತ ಸ್ಥಳಕ್ಕೆ ಬೇಟಿ ಕೊಟ್ಟಾಗ.. ಹೀಗೆ ನಮ್ಮ ಮನಸನ್ನು ಪ್ರಫುಲತೆಯಿಂದ ಇಡುವ ಜೀವನದ ಬಹುಮುಖ್ಯ ಅಂಶಗಳನ್ನು ನಾವುಗಳು ಪೂರ್ಣವಾಗಿ ಮರೆತೆ ಬಿಟ್ಟಿದ್ದೇವೆ ಎನ್ನಬಹುದು.

ಯೋಚಿಸಿ ನಮ್ಮ ಹಳ್ಳಿಗಳಲ್ಲಿ ಉಪಯೋಗಿಸುತ್ತಿದ್ದ ವಿವಿಧವಾದ ಕನ್ನಡ ಪದಗಳು ಇಲ್ಲಿನ ನಮ್ಮ ನಗರ ಜೀವನದಲ್ಲಿ ಮರೆತೆ ಬಿಟ್ಟಿದ್ದೇವೆ.

ಯಾವಗಲಾದರೊಮ್ಮೆ ಹಳ್ಳಿಯ ಪ್ರಕೃತಿ ಜೀವಿಯ ಮಾತುಗಳನ್ನು ಕೇಳಿದರೇ ನಾವುಗಳು ಆಶ್ಚರ್ಯಪಡುವುದನ್ನು ಬಿಟ್ಟು ಏನೊಂದು ಮಾಡಲಾರೆವು. ಅಲ್ಲಿ ಉಪಯೋಗಿಸುತ್ತಿದ್ದ ಕನ್ನಡ ಪದಗಳು.. ಹೊಸ ಹೊಸ ಗಾದೆಗಳು, ಒಗಟುಗಳು, ಅಸಾಂಖ್ಯಾತವಾದ ಗಿಡ, ಮರ, ಹೊ, ಹಣ್ಣುಗಳ ಹೆಸರು.. ಪಶು ಪಕ್ಷಿಗಳ ಹೆಸರು.. ಹೊಲ, ಗದ್ದೆಗಳ ಹೆಸರು.. ವ್ಯಕ್ತಿಗಳ ಅಡ್ಡ ಹೆಸರು.. ಯಾವುದೇ ಖರ್ಚು ಇಲ್ಲದೇ ಆಡುತ್ತಿದ್ದ ಎಷ್ಟೋ ಆಟಗಳ ಹೆಸರು.. ಪ್ರತಿಯೊಂದು ಮನೆಯ ಮನೆತನದ ಹೆಸರು.. ಹೀಗೆ ನೂರಾರು ಸೂಕ್ಷ್ಮವಾದ ಶಬ್ಧ ಭಂಡಾರವನ್ನು ಮತ್ತು ಅಪರೂಪವಾದ ವಿಷಯಗಳನ್ನು ನಿಜವಾಗಿಯೋ ನಾವುಗಳು ಕಳೆದುಕೊಂಡುಬಿಟ್ಟಿದ್ದೇವೆ ಎಂದು ಅನಿಸುತ್ತಿದೆ.



ಇದು ಒಂದು ಉದಾಹರಣೆ ಹೀಗೆ ನಾವುಗಳು ನಮಗೆ ಗೊತ್ತಿಲ್ಲದ ರೀತಿಯಲ್ಲಿ ನೂರಾರು ಸುಂದರ ನವನವೀನತೆಗೆ ಸಂಬಂಧಿಸಿದ ಅಂಶಗಳನ್ನು ಗಾಳಿಗೆ ತೂರಿಬಿಟ್ಟಿದ್ದೇವೆ ಅನಿಸುತ್ತದೆ. ನಿಜಾ! ಅವುಗಳ ಜರೂರತು ಇಲ್ಲಿ ಇಂದಿನ ಸಮಯದಲ್ಲಿ ಬೇಕಾಗಿಲ್ಲ. ಅದರೇ ನಮ್ಮಲ್ಲಿ ಇಂದಿನ ಬದುಕು ಯಾಕೆ ಎಷ್ಟೊಂದು ನೀರಾಸ ಜಡತೆ ಇದೆ ಎಂದು ಒಮ್ಮೆಯಾದರೂ ಅನಿಸಿರುವುದಿಲ್ಲವೇ? ನೀವೇ ಹೇಳಬೇಕು.

ನಾವುಗಳು ಅಭಿವೃದ್ಧಿ ಅಭಿವೃದ್ಧಿ ಎನ್ನುತ್ತಾ.. ಹತ್ತು ಹಲವು ಜನಮಿಡಿತದ ಸೂಕ್ಷ್ಮಗಳನ್ನು ಕಡೆಗಾಣಿಸುತ್ತಿದ್ದೇವೋ ಎನಿಸುತ್ತಿದೆ. ಯಾವುದನ್ನು ನಾವುಗಳು ನಮ್ಮ ಮನೆಯಲ್ಲಿ ಕೇಳುತ್ತಿದ್ದೇವೋ ನಾವುಗಳು ಅವುಗಳನ್ನು ಬಳಸುತ್ತಿದ್ದೇವೋ ಅವುಗಳನ್ನು ಮುಂದೆ ನಮ್ಮ ಡಿಜಿಟೆಲ್ ವಸ್ತುಗಳ ಮೊಲಕ ಕೇಳಿ ಹೌದಾ! ಹೀಗೋ ಇತ್ತಾ ಎಂದು ಹುಬ್ಬೇರಿಸುವುದೊಂದೆ ಬಾಕಿ ಇರುವುದು.

ಇಲ್ಲಿನ ನಮ್ಮಗಳ ತುಡಿತ ಪೂರ್ಣವಾಗಿ ನಾವುಗಳು ನಮ್ಮ ಸ್ಥಿತಿಯನ್ನು ಹಣಕಾಸುಗಳಲ್ಲಿ, ನಮ್ಮ ವೃತ್ತಿಪರತೆಯಲ್ಲಿ ಕಾಣುವಂತಾಗುತ್ತಿದೆ. ಆದರೋ ಇದು ನಿಜವಲ್ಲವಾ ಎನ್ನಬಹುದು. ಮನುಷ್ಯ ಸುಖವಾಗಿ ಜೀವಿಸಲೂ ಇದು ಮುಖ್ಯವಲ್ಲವಾ ಎನ್ನಬಹುದು. ಅದು ಸತ್ಯ! ಇದು ಬೇಕು. ಅದರೋ ಇದು ಮತ್ತು ಆ ರೀತಿಯ ಮಾನವ ಸಂಬಂಧಗಳ ಜೊತೆಯಲ್ಲಿ ಇರುವ ಒಂದು ನಲಿವಿನ ಮಾತುಗಳ ತೆಳು ಪರದೆ ಎಲ್ಲರ ಬದುಕಿನಲ್ಲಿ ಇರಲೇಬೇಕು ಎಂಬ ಆಸೆ ಎಲ್ಲಾರದಾಗಬೇಕು.



ಇಂದು ಪ್ರತಿಯೊಬ್ಬ ಯುವಕ ಯುವತಿಯರ ಗುರಿ ತಾನು ಓದಬೇಕು.. ದೊಡ್ಡ ಮೊತ್ತದ ಕೆಲಸವನ್ನು ಗಳಿಸಬೇಕು. ಇದಕ್ಕಾಗಿ ಇರುವ ದಾರಿಯಲ್ಲಿ ಬರುವ ಯಾವುದಾದರನ್ನು ಪೂರಕವಾಗಿ ಏನೇ ತೊಂದರೆಯಾದರೂ ತನ್ನದನ್ನಾಗಿ ಮಾಡಿಕೊಂಡು ಅತಿ ಎತ್ತರಕ್ಕೆ ಏರಬೇಕು. ಇದೇ ದೊಡ್ಡ ಕನಸು.

ಅಲ್ಲಿಯು ಸಹ ಹೆಚ್ಚು ದಿನಗಳನ್ನು ಕಳೆಯಲಾರನು.. ಪುನಃ ಮತ್ತೇ ದೊಡ್ಡ ಮೊತ್ತದ ದೊಡ್ಡ ಜವಾಬ್ದಾರಿಯ ಕೆಲಸವನ್ನು ಗಳಿಸಬೇಕು ಎಂಬ ಮನದ ಹಂಬಲ. ಇದೆ ಹೊಸತನಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುವ ದಾರಿಯೆಂಬ ನೀತಿ. ಇದೆಲ್ಲಾ ಬೆಂಗಳೂರಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಬಹುಮುಖ್ಯ ಕನಸು.

ಆದರೋ ತಮ್ಮ ತಮ್ಮಲ್ಲಿಯೇ ಇದರ ಹೊರತಾಗಿ ಮನದಲ್ಲಿ ಪ್ರೀತಿ, ಪ್ರೇಮ, ಮದುವೆ, ಸ್ನೇಹ ಬಂಧನಗಳು ನಿತ್ಯ ಹೊಸತನದ ಹಾದಿಯಲ್ಲಿ ಬರುತ್ತ ಇರುತ್ತವೆ. ಬರಲೇಬೇಕು. ಜೀವಿಗಳು ಇವುಗಳಿಗೂ ತಮ್ಮ ಸಮಯವನ್ನು ಎತ್ತಿ ಇಟ್ಟು ಅದನ್ನು ನಡೆಸಿಕೊಂಡು ಹೋಗಲೇಬೇಕು.

ಹುಡುಗನಿಗೆ ಹೊಸ ಹುಡುಗಿಯನ್ನು ಗಳಿಸಬೇಕೆಂಬ ಆಸೆ. ಹುಡುಗಿಗೆ ತಾನು ಮೆಚ್ಚಿದ ಹುಡುಗನು ಸಿಗಲಿ ಎಂಬ ಕನಸು. ಹೆತ್ತವರಿಗೆ ತಮ್ಮ ಮಕ್ಕಳಿಗೆ ಸರಿಯಾದ ಸಮಯಕ್ಕೆ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡರೆ ಸಾಕಾಪ್ಪಾ ಎಂಬ ಕನಸು. ಮದುವೆಯಾದ ಜೋಡಿಗಳಿಗೆ ತಮ್ಮ ಮಕ್ಕಳು ಮರಿಯನ್ನು ಹೆತ್ತು ಅವುಗಳನ್ನು ಯಾವ ಯಾವ ಸ್ಕೋಲುಗಳಿಗೆ ಕಳಿಸಬೇಕು ಎಂಬ ಕನಸು. ಹೊಸ ಸಂಬಳ ಬಂತು.. ಹೊಸ ಬೋನಸ್ ಬಂತು.. ಹಳೆ ಬಾಡಿಗೆ ಮನೆಯನ್ನು ಬಿಟ್ಟು .. ಚೆನ್ನಾಗಿರುವ ಹೊಸ ಬಾಡಿಗೆ ಮನೆಯನ್ನು ಯಾಕೆ ತೆಗೆದುಕೊಳ್ಳಬಾರದು ಎಂಬ ಕನಸು.. ಅದೇ ಹಳೆಯ ಮೋಟರ್ ಸೈಕಲ್ ನಲ್ಲಿ ಓಡಾಡಿ ಓಡಾಡಿ ಈಗಲಾದರೂ ಪೂರ್ಣ ಸಂಸಾರ ಒಟ್ಟಿಗೆ ಕುಳಿತು ಓಡಾಡುವಂತಹ ಹೊಸ ಕಾರು ಕೊಳ್ಳುವ ಕನಸು.. ಹೀಗೆ ತರಾವೇರಿ ಕನಸುಗಳು ಈ ಪ್ರಕೃತಿಯ ಋತು ಚಕ್ರದ ಜೊತೆ ನಮ್ಮ ನಿಮ್ಮೆಲ್ಲರಲ್ಲಿ ಚೆಲುವಿನ ಚಿತ್ತಾರವನ್ನು ಸೃಷ್ಟಿಸುತ್ತದೆ.

ಈ ನಮ್ಮ ನಿಮ್ಮೇಲ್ಲಾರ ಚಿಕ್ಕ ಚಿಕ್ಕ ಆಸೆ, ಕನಸುಗಳ ಹಿಡೇರಿಕೆಗಳೆ ನಮ್ಮ ಜೀವನದ ಹೊಸತನಕ್ಕೆ ಹೊಸ ಸಾಧನೆ(ನ)ಗಳು ಎನ್ನೋಣವೇ?

ತಿಳಿಯದು ನೀವೇ ತಿಳಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ