ಬುಧವಾರ, ಮೇ 4, 2011

ಸುಂದರ ಸುಷ್ಮ ಪರಿಚಯತೆ

ಹೊಸ ದಿನಗಳಲ್ಲಿ ಯಾವುದೇ ಜಾಗ, ರಾಗ, ಸ್ನೇಹ, ಸಂಬಂಧ, ಮಾತು, ನೆನಪು ಎಲ್ಲವೂ ತುಂಬ ಸುಂದರವಾಗಿರುತ್ತವೆ.

ಯಾಕೆಂದರೇ ಅಲ್ಲಿ ಯಾವೊಂದರ ಬಗ್ಗೆಯು ಪರಿಪೂರ್ಣವಾಗಿ ನಮಗೆ ತಿಳಿದಿರುವುದಿಲ್ಲ. ಮುಂದೆ ಏನೋ ಇನ್ನೂ ಏನೂ ಇದೇಯೋ ಅದನ್ನು ಕಾಣಬೇಕು ಎಂಬ ಆಶ್ಚರ್ಯ ಮನದಲ್ಲಿ ಮೂಡುವ ಕುತೂಹಲ ನಮ್ಮಗಳಿಗೆ ಕೆಲವೊಂದು ದಿನಗಳ ಮಟ್ಟಿಗೆ ತುಂಬ ಅಕ್ಕರೆಯನ್ನು ಪ್ರೀತಿಯನ್ನು ಹೆಚ್ಚಾಗಿ ತೋರಿಸುವಂತೆ ಎಲ್ಲಾ ವಿಷಯಗಳಿಗೆ ನಮ್ಮ ಮನಸ್ಸನ್ನು ಆ ರೀತಿಯಲ್ಲಿ ಏರ್ಪಾಡು ಮಾಡಿರುತ್ತದೆ.

ಗೊತ್ತಿರದ ವಿಷಯಗಳ ಬಗ್ಗೆ ಮಾನವ ಕುಲಕ್ಕೆ ಯಾವಾಗಲೂ ಕುತೂಹಲ. ಗೊತ್ತಿರದ ವಿಷಯಗಳನ್ನು ಅರಿಯಲು ಅವನು ಯಾವಾಗಲೂ ಪ್ರಯತ್ನಿಸುತ್ತಲೇ ಇರುತ್ತಾನೆ. "ಕಲಿಯುವವರೆಗೂ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೊತಿ ವಿದ್ಯೆ" ಎಂಬಂತೆ. ಹೊಸದು ಯಾವುದಾದರೂ ಅದರ ಬಗ್ಗೆ ಹೆಚ್ಚು ಕಾಳಜಿಯನ್ನು ನಾವುಗಳು ವಹಿಸಹುದನ್ನು ಕಾಣಬಹುದು.

ಯಾವುದಾದರೂ ಹೊಸ ವಸ್ತುಗಳನ್ನು ಮನೆಗಳಿಗೆ ತಂದರೇ ಏನೂ ಅಕ್ಕರೆ ಸ್ವಾಮಿ! ನಿತ್ಯ ಅದನ್ನು ಒಂದು ಸುತ್ತು ಸ್ಪರ್ಷಿಸುವುದು. ಅದನ್ನು ಪುನಃ ಪುನಃ ನೋಡುವುದು. ಅದನ್ನು ಬೇರೆಯವರಿಗೆ ತೋರಿಸುವುದು. ಅದಕ್ಕೆ ಯಾರಿಂದಲಾದರೂ ದಕ್ಕೆ ಬಂದರೇ ಜರ್ರನೇ ಸಿಟ್ಟನ್ನು ತಂದುಕೊಂಡು ಜಮಾಯಿಸುವುದು. ನಾಜುಕಾಗಿ ಅದನ್ನು ಉಪಯೋಗಿಸುವುದು. ಈ ಒಂದು ಅಭ್ಯಾಸವನ್ನು ನಮ್ಮ ನಮ್ಮ ಚಿಕ್ಕ ಬಾಲ್ಯದ ದಿನಗಳಿಂದ ಕಲಿತು ಅದನ್ನು ಎಂದಿಗೂ ನಮ್ಮ ಮುಂದಿನ ದಿನಗಳಲ್ಲಿ ಮುದುಕರಾದರೂ ಮರೆಯಲಾರೆವು.

ಈ ಒಂದು ಮನಸ್ಸಿನ ನಡಾವಳಿಯನ್ನು ನಾವುಗಳು ಪ್ರತಿಯೊಂದು ಸಣ್ಣ ದೊಡ್ಡ ವಿಷಯ, ವಿಚಾರ, ವ್ಯಕ್ತಿಗಳು, ಸ್ನೇಹಿತರು, ವಸ್ತು ಎಲ್ಲದರಲ್ಲೂ ದಾರಾಳವಾಗಿ ಉಪಯೋಗಿಸುತ್ತೇವೆ. "ಹೊಸದರಲ್ಲಿ ಯಾರೋ ಎತ್ತಿ ಎತ್ತಿ ಹೊಗೆದರು" ಎಂಬಂತೆ ಅಲ್ಲಿ ಕಾಣುವ ಜೋಶ್ ಕೆಲವು ದಿನಗಳಾದ ಮೇಲೆ ಮರೆಯಾಗಿರುತ್ತದೆ. ಯಾಕೆ?

ಹೊಸ ಜಾಗಗಳಿಗೆ ಹೋದಾಗ ಏನು ನಮ್ಮ ಮನಸ್ಸೇ ಪೂರ್ತಿ ಅಲ್ಲಿಯದಾಗಿರುತ್ತದೆ. ಇಲ್ಲಿಯೇ ಇದ್ದು ಬಿಡಬೇಕು ಎಂಬ ನಿರ್ಧಾರವನ್ನೇ ಒಂದು ದಿನ ರಾತ್ರಿಗೆ ತಂದುಕೊಂಡುಬಿಟ್ಟಿರುತ್ತೇವೆ. ಇದೇ ನಮಗೆ ಸರಿಯಾದ ಸುಖದ ತಾಣ ಎಂಬ ಮನದಾಸೆಯಾಗಿರುತ್ತದೆ. ಅದೇ ಒಂದೇರಡು ದಿನಗಳಾದ ಮೇಲೆ ಎಷ್ಟೊತ್ತಿಗೆ ಇಲ್ಲಿಂದ ಪಾರಾದೇವೋ ಎಂಬಷ್ಟರ ಮಟ್ಟಿಗೆ ನಮಗೆ ಬೋರ್ ಅನಿಸಿಬಿಟ್ಟಿರುತ್ತದೆ.

ನಾವುಗಳು ನಮ್ಮ ನಿತ್ಯ ಜೀವನದಲ್ಲಿ ಹಲವಾರು ವ್ಯಕ್ತಿಗಳನ್ನು ಅಪರಿಚಿತರಿಂದ ಪರಿಚಿತರಾಗಿ ಮಾಡಿಕೊಂಡು ಬಿಟ್ಟಿರುತ್ತೇವೆ. ಆ ವ್ಯಕ್ತಿಯ ಯಾವುದೋ ಒಂದು ಗುಣ ವಿಶೇಷ, ಪ್ರೀತಿ, ಅಕ್ಕರೆ, ಕಾರುಣ್ಯ, ಅವರ ಒಟ್ಟು ಒಂದು ವ್ಯಕ್ತಿತ್ವ ನಮ್ಮ ಮನಸ್ಸನ್ನು ಗೆದ್ದು ನಾವುಗಳು ಅವರನ್ನು ನಮ್ಮ ಗೆಳೆಯರನ್ನಾಗಿ ಸ್ವಿಕರಿಸಿ ಅವರೊಡನೆ ನಮ್ಮ ಕಷ್ಟ ಸುಖ, ನಮ್ಮ ಅಭಿಪ್ರಾಯಗಳನ್ನು ಪರಸ್ಪರ ವಿನಿಮಯಮಾಡಿಕೊಳ್ಳುತ್ತೇವೆ.

ಕೆಲವು ದಿನಗಳವರೆಗೆ ಎಷ್ಟೊಂದು ಕಾತುರತೆಯಿರುತ್ತದೆ ಎಂದರೇ ಅವರನ್ನು ಪುನಃ ನೋಡಬೇಕು ಮಾತನ್ನಾಡಿಸಬೇಕು.. ಪುನಃ ಬೇಟಿ ಮಾಡಬೇಕು ಎಂಬ ಆಸೆಯಿರುತ್ತದೆ. ಇದಂತೋ ಹುಡುಗ -ಹುಡುಗಿಯಾರದರೇ ಕೇಳುವುದೇ ಬೇಡ! ಸಾವಿರ ಕಾರಣಗಳು ನಮ್ಮ ಮುಂದೆ ಬಂದು ನಿಂತು ಅಲ್ಲಿ ಹೊಸದರಲ್ಲಿ ನಮ್ಮ ಪ್ರೀತಿಯ ವಸ್ತುಗಳನ್ನು ಹೇಗೆ ಜಾಗರುಕತೆಯಿಂದ ಪುನಃ ಪುನಃ ನೋಡಿಕೊಳ್ಳುತ್ತೇವೋ ಹಾಗೆಯೇ ತುಂಬ ನಾಜುಕಾಗಿ, ಯಾರಿಗೂ ನೋವಾಗದ ರೀತಿಯಲ್ಲಿ ಗೌರವದಿಂದ ನಮ್ಮ ಮನದಾಳದ ನೋವು, ನಲಿವುಗಳನ್ನು ತಿಳಿಯಪಡಿಸುತ್ತಿರುತ್ತೇವೆ.



ಹೀಗೆ ದಿನಕಳೆದಂತೆ ನಮ್ಮ ಅವರ ಗೆಳೆತನದ ಬೇರು ತುಂಬ ಆಳಕ್ಕೆ ಇಳಿದು ಪ್ರತಿ ವ್ಯಕ್ತಿಯ ವೈಕ್ತಿಕ ಗುಪ್ತ ಗುಪ್ತ ವಿಷಯಗಳ ಕಡೆಗೆ ನಮಗೆ ಗೊತ್ತಿರದ ರೀತಿಯಲ್ಲಿ ನಮ್ಮ ಕಣ್ಣನ್ನು ಹರಿಸಿ ಇನ್ನೂ ಹೆಚ್ಚು ಹೆಚ್ಚು ಗೊತ್ತು ಮಾಡಿಕೊಳ್ಳಲು ಪ್ರಾರಂಭಿಸಿ.. ನಾವುಗಳು ಅವರ ಬಗ್ಗೆ ಅವರುಗಳು ನಮ್ಮ ಬಗ್ಗೆ ಸುಲಭವಾಗಿ ಹೀಗೆ ಹೀಗೆ ಎಂದು ಷರಾ ಬರೆಯುವ ಮಟ್ಟಕ್ಕೆ ಬಂದು ನಿಂತಿರುತ್ತದೆ.

ಹಾಗೆಯೇ ಈ ಒಂದು ಹೊಸತನದ ಹಾದಿ ತುಂಬ ದೂರ ಸಾಗಿ ಹಳತಾಗುವ ಆ ಸಮಯಕ್ಕೆ ನಮ್ಮ ಬಳಸುವ ಮಾತಿನ ದಾಟಿಯೇ ಬದಲಾಗಿರುತ್ತದೆ. ಅವರುಗಳನ್ನು ಉಪಚರಿಸುವ ರೀತಿಯೇ ವ್ಯತ್ಯಾಸವಾಗಿರುತ್ತದೆ.

ತುಂಬ ಅಕ್ಕರೆಯೋ, ಪ್ರೀತಿಯೋ ಯಾವುದಾದರೂ ಒಂದು ಕಾರಣದಿಂದ.. ಅವರು ನಮ್ಮವರೇ ಎಂಬ ಮಟ್ಟಕ್ಕೆ ಬಂದಿದ್ದರೇ ಒಂದು ರೀತಿಯಲ್ಲಿ ಒಳ್ಳೆಯದು. ಅವರುಗಳು ಇವರುಗಳು ಹೇಳುವ, ಕೊಡುವ ಒಂದು ಆರೋಗ್ಯಕರ ಸಲಹೆ ಸಾಂತ್ವನವಿದ್ದರೇ ಅದು ಒಂದು ಉತ್ತಮ ಸಂಬಂಧದ ಬೆಳವಣಿಗೆಗೆ ನಾಂದಿ.

ಅದೇ ಒಂದು ಸ್ವಲ್ಪ ಉಲ್ಟಾ ಹೊಡೆದರೆ ಪ್ರತಿ ವ್ಯಕ್ತಿಯ ಬಗ್ಗೆ ಇವನು/ಳು ಅವನು/ಳು ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದಂತೆ ನಮ್ಮ ನಮ್ಮಲ್ಲಿಯೇ ನಿರಾಧರಣೆ ಬೆಳೆಸಿಕೊಳ್ಳುವುದು. ಆ ವ್ಯಕ್ತಿಯ ದೌರ್ಬಲ್ಯವನ್ನೇ ನಮ್ಮ ಮೊಗಿನ ನೇರದಲ್ಲಿ ಹೀಗೆ ಹೀಗೆ ಎಂದು ನಿರ್ಧರಿಸಿ ಆ ವ್ಯಕ್ತಿಯ ಬಗ್ಗೆ ಮೊಟ್ಟ ಮೊದಲು ಇದ್ದ ಮತ್ತು ಇಟ್ಟುಕೊಂಡಿದ್ದ ಗೌರವವನ್ನೇ, ಹೊಸತನದ ಹಾದಿಯನ್ನೇ ಮರೆಯುವ ಮಟ್ಟಿಗೆ ಕೇವಲವಾಗಿ ಕಾಣುವುದು. ದಿನ ಕಳೆದಂತೆ ಯಾಕೋ ಈ ವ್ಯಕ್ತಿ ಬೋರ್ ಸಾರ್! ಮತ್ತೇ ಹೊಸಬರ ಕಡೆ ಕಣ್ಣಾಯಿಸುವುದು.. ಮತ್ತೇ ಅದೇ ಮೊದಲಿನಿಂದ ಆ ದಿನಚರಿಯನ್ನು ಪ್ರಾರಂಭಿಸುವುದು.. ಹೀಗೆ ಈ ಮನೋಭಾವ ಯಾಕಾದರೂ ನಮ್ಮಲ್ಲಿ ಬರುತ್ತದೆ?

ಯಾವುದೇ ವ್ಯಕ್ತಿಯ ಬಗ್ಗೆ ಕೂಂಚ ಗೊತ್ತಿದ್ದರೇ ಎಷ್ಟೊಂದು ಅಚ್ಚರಿಗಳನ್ನು ನಾವುಗಳು ನಿತ್ಯ ಅನುಭವಿಸುತ್ತಿರುತ್ತೇವೆ.

ಅದೇ ನಮಗೆ ತೀರ ಹತ್ತಿರವಿರುವವರು ಎಂಬ ಒಂದು ಸಲಿಗೆಯಿಂದ ಇರಲಿ ನಮ್ಮ ವಿಚಾರಗಳನ್ನು ನಮ್ಮ ಇಷ್ಟ ಕಷ್ಟಗಳನ್ನು ಹೇಳಿಕೊಂಡರೇ ಅವುಗಳೊಂದಿಗೆ ಹೀಗೆಯೇ ನಾವುಗಳು ಆಟವಾಡುವುದು? ಅವುಗಳನ್ನೇ ಪ್ರಾಮುಖ್ಯ ಮಾಡಿಕೊಂಡು ಬೇಸರಪಡುವುದು ಎಷ್ಟು ಸರಿ?

ಇದನ್ನು ನಮಗೆ ತೀರ ಹತ್ತಿರದಲ್ಲಿರುವ ನಮ್ಮ ಸಂಬಧಿಗಳು, ಸ್ನೇಹಿತರು, ನಮ್ಮ ಹಿರಿಯರುಗಳ ಬಗ್ಗೆಯೇ ನಮಗೆ ಹಿಂದೆ ಇದ್ದ ದೋರಣೆಯಲ್ಲಿ ಇಂದು ನಿಜವಾಗಿಯೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು.
ಒಂದು ಕ್ಷಣ ಯೋಚಿಸಿ ನೋಡಿ!

ನಾವುಗಳು ಬೆಳೆದಂತೆ ನಮ್ಮ ಮನದ ಮೊಲೆಯಲ್ಲಿ ನಾವುಗಳು ಯಾರನ್ನು ನಮ್ಮ ಆದರ್ಶ ಎಂಬಷ್ಟರ ಮಟ್ಟಿಗೆ ಆರಾಧಿಸಿರುತ್ತೇವೋ ಅವರುಗಳೇ ಇಂದು ನಮ್ಮ ಖಳನಾಯಕರುಗಳಾಗಿರುತ್ತಾರೆ.

ಇದೇ ಬದುಕು ಇರಬೇಕಲ್ಲವಾ?

ಯಾಕೆಂದರೇ ನಾವುಗಳೆಲ್ಲಾ ಕೇವಲ ಮನುಷ್ಯರಲ್ಲವಾ? ಎಲ್ಲವನ್ನೂ ಮೀರಿ ನಾವುಗಳು ಬೆಳೆಯಲು ಸಾಧ್ಯವಿಲ್ಲ. ನಾವುಗಳು ನಮ್ಮ ರೀತಿಯಲ್ಲಿ ಇರುವುದು. ಬೇರೆಯವರಿಗೆ ಅದೇ ಸರಿಯಾಗಿ ಕಾಣದಿರಬಹುದು. ಅವರುಗಳು ಇರುವ ರೀತಿ ನಮಗೆ ಆ ಕ್ಷಣಕ್ಕೆ ಸರಿಯಾಗಿ ಕಾಣದಿರಬಹುದು. ಇಷ್ಟು ಮಾತ್ರಕ್ಕೆ ಅವರೆಲ್ಲಾ ಹಾಗೇ ಇವರುಗಳೆಲ್ಲಾ ಹೀಗೆ ಎಂದು ಹಣೆಪಟ್ಟಿ ಕಟ್ಟುವುದು ಯಾಕೇ?

"ಜೇನು ಹಳತಾದಷ್ಟು ಹೆಚ್ಚು ಬೆಲೆ ಮತ್ತು ರುಚಿ" ಎಂಬ ರೀತಿಯಲ್ಲಿ ನಮ್ಮ ಸಂಬಂಧಗಳು ಸಹ ಹಚ್ಚ ಹಸಿರಾಗಿ ಯಾಕೇ ಇರುವುದಿಲ್ಲ. ಅದು ನಮ್ಮಗಳ ಕಾಳಜಿಯನ್ನು ಹೊಂದಿರುವಂತಾಗಿರಬೇಕು. ನಾವುಗಳು ಯಾವ ಕಾರಣಕ್ಕೆ ನಮ್ಮ ಗೆಳೆಯರನ್ನಾಗಿಯೋ, ಗುರುವನ್ನಾಗಿಯೋ, ನಮ್ಮ ಹತ್ತಿರದವರನ್ನಾಗಿಯೋ ಮಾಡಿಕೊಂಡಿರುತ್ತೇವೋ ಅದೇ ಮೊದಲ ದಿನದ ನಿರೀಕ್ಷೆ ಮತ್ತು ಅಚ್ಚರಿಯನ್ನು ಕಡೆತನದವರೆಗೂ ಎಲ್ಲರ ಬಗ್ಗೆ ಇಟ್ಟುಕೊಂಡಿರಬೇಕು. ಆ ಒಂದು ಅಂತರ ಮನುಷ್ಯ ಮನುಷ್ಯರ ನಡುವೆ ಇರಬೇಕಾಗುತ್ತದೇಯೇನೋ?

ಹೆಚ್ಚು ಹೆಚ್ಚು ನಮಗೆ ಅವನ/ಅವಳ ಬಗ್ಗೆ ನನಗೆ ಗೊತ್ತಿದೆ. ಅವನು/ಅವಳು ಹೀಗೆ ಎಂಬ ರೀತಿಯಲ್ಲಿ ಬೇರೆಯವರ ಬಗ್ಗೆ ಬೇರೆಯವರ ಹತ್ತಿರ ಮಾತನ್ನಾಡಬಾರದು. ಮನುಷ್ಯನಿಗೆ ಯಾವಾಗ ಬೇಜಾರಾಗುವುದು ಎಂದರೇ ನಮ್ಮಗಳ ಬಗ್ಗೆ ಬೇರೆಯವರ ಹತ್ತಿರ ಕೇವಲವಾಗಿ ಮಾತನ್ನಾಡಿದಾಗ ಅಲ್ಲವಾ? ಆ ರೀತಿಯ ಮಾತೆಂಬ ಗಾಜಿನ ಗೊಂಬೆಯನ್ನು ಸುಖ ಸುಮ್ಮನೇ ನಮ್ಮ ಟೈಮ್ ಪಾಸ್ ಗಾಗಿ ಕೆಡುವುದು ಸಲ್ಲದು.

ಯಾವುದೇ ನಿರೀಕ್ಷೆಯೇ ಇಲ್ಲದ ಒಂದು ನವಿರಾದ ಸುಂದರ ಸುಷ್ಮ ಪರಿಚಯತೆಯನ್ನು ನಮ್ಮ ನಮ್ಮಲ್ಲಿಯೇ ನಿತ್ಯ ನಿರಂತರವಾಗಿ ಜಾರಿಯಲ್ಲಿಟ್ಟುಕೊಳ್ಳೋಣವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ