ಶನಿವಾರ, ಏಪ್ರಿಲ್ 9, 2011

ವ್ಯವಸ್ಥೆಗೊಂದು ಹಜಾರೆಯವರಿಂದ ಚಿಕಿತ್ಸೆ

ನಮ್ಮ ವಯೋಮಾನದ ಯುವಕರಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಒಂದು ಮಾತು ಅಂದರೇ "ನಮ್ಮ ವ್ಯವಸ್ಥೆ ಕೆಟ್ಟು ಕೆರ ಹಿಡಿದಿದೆ ಇದನ್ನು ಬದಲಾಯಿಸಲು ಆ ದೇವರಿಗೂ ಸಾಧ್ಯವಿಲ್ಲ. ಎಲ್ಲಿ ಎಲ್ಲಿ ನೋಡಿದರೂ ದುಡ್ಡು ಮಾಡುವುದು, ಲಂಚ ರುಶುವಾತ್ ಹೀಗೆ ಇದು ಎಂದು ಉದ್ಧಾರವಾಗುವುದಿಲ್ಲ."

ನಮ್ಮ ಸರ್ಕಾರದಲ್ಲಿ ಯಾವುದೇ ಒಂದು ಚಿಕ್ಕ ಕೆಲವಸವಾಗಬೇಕಾದರೂ ಕೈ ಬೆಚ್ಚಗೆ ಮಾಡಲೇ ಬೇಕು. ಇದೊಂದು ಅಲಿಖಿತ ಶಾಸನ ಎಂಬಂತೆ ಎಲ್ಲರೂ ಎಲ್ಲ ಸಮಯದಲ್ಲೂ ಮಾತನಾಡುತ್ತಿರುತ್ತಾರೆ.

ಈ ಸಿಸ್ಟಮ್ ನ್ನೇ ಪೂರ್ಣವಾಗಿ ಖಾಸಗೀಕರಣ ಮಾಡಿಬಿಡಬೇಕು ಸಾರ್! ಆಗ ನೋಡಿ ಹೇಗೆ ಅಭಿವೃದ್ಧಿಯಾಗುತ್ತದೆ. ಎಂಬ ದೂರದ ಅಲೋಚನೆಯನ್ನು ಪ್ರತಿಯೊಬ್ಬರೂ ಮಾಡುತ್ತಿರುತ್ತಾರೆ. ಯಾರೊಬ್ಬರು ಅದನ್ನು ಹೇಗೆ ನಮ್ಮಿಂದಲೇ ಇದನ್ನು ನಿಲ್ಲಿಸುವಂತೆ ಮಾಡುವ ಉಪಾಯ ಇಲ್ಲವೇ ಇಲ್ಲ ಎಂಬಂತೆ ಕುಳಿತುಬಿಟ್ಟಿದ್ದೇವೆ.

ಯಾರಾದರೂ ಯಾವುದಾದರೊಂದು ಸರ್ಕಾರಿ ಕಛೇರಿಯ ಬಗ್ಗೆ ಹೇಳಿದರೆ.. ಅಲ್ಲಿ ಹೀಗೆ ಹೀಗೆ ಈ ರೀತಿಯಲ್ಲಿ ಕೈ ಬೆಚ್ಚಗೆ ಮಾಡದಿದ್ದರೇ ಅಪ್ಪನ ಆಣೆಗೂ ನಿಮ್ಮ ಕೆಲಸ ಆಗುವುದಿಲ್ಲ. ಎಂದು ಸಾಲು ಸಾಲು ನಿದರ್ಶನಗಳನ್ನು ಗೆಳೆಯರುಗಳು ತಮ್ಮ ಅನುಭವದ ಮೊಲಕ ಚಿತ್ರಿಸುವುದನ್ನು ಕಂಡರೇ.... ಇರುವ ಚೂರು ಭರವಸೆಯನ್ನು ಎಲ್ಲಿಗಾದರೂ ತೂರಬೇಕು ಅನಿಸುತ್ತದೆ.

ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತು ಹಾಕಲು ಇರುವವರು ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಅಂದರೇ ಅತಿಶಯೋಕ್ತಿಯಲ್ಲ.

ಇಂದಿನ ಯುವಕರುಗಳಿಗೆ ನಮ್ಮ ದೇಶ, ನಮ್ಮ ಜನ, ನಮ್ಮ ಅಭಿವೃದ್ಧಿಯ ಬಗ್ಗೆ ಹೆಚ್ಚು ಹೆಚ್ಚು ಕನಸುಗಳು ಇಂದು ಮೈಮೆಳಸುತ್ತಿವೆ. ಯಾಕೆಂದರೇ ಇಂದಿನ ಮಾದ್ಯಮದ ಕ್ರಾಂತಿಯಿಂದ ಇಡಿ ಜಗತ್ತೆ ಅಂಗೈಯಲ್ಲಿ ಕಾಣುವಂತಾಗಿದೆ. ಇಲ್ಲಿನ ನಮ್ಮ ಯುವಕರುಗಳು ಬೇರೆ ಬೇರೆ ಅಭಿವೃದ್ಧಿಯನ್ನು ಹೊಂದಿರುವ ದೇಶಗಳನ್ನು ಗಮನಿಸುತ್ತಾರೆ. ಅಲ್ಲಿ ಹೇಗೆ ಅವರುಗಳು ಆ ರೀತಿಯ ವೇಗವಾಗಿ ಮುಂದುವರಿಯುತ್ತ ಇದ್ದಾರೆ ಮತ್ತು ಯಾವ ಯಾವ ರೀತಿಯಲ್ಲಿ ಅವರ ವ್ಯವಸ್ಥೆ ಉತ್ತಮವಾಗಿದೆ ಎಂಬುದನ್ನು ಕಾಣುತ್ತಾರೆ.

ಅದನ್ನೇ ಅವನು ನಮ್ಮ ಈ ಭವ್ಯ ಭಾರತದಲ್ಲೂ ಸಹ ಕಾಣಲು ಇಷ್ಟಪಡುತ್ತಾನೆ. ನಮ್ಮಲ್ಲಿ ಅಪಾರವಾದ ಸಂಪತ್ತು ಇದೆ. ಅಸಂಖ್ವವಾದ ಮಾನವ ಸಂಪನ್ಮೂಲವಿದೆ. ಅದರೇ ಅವಕಾಶಗಳದೇ ಕೂರತೆ. ಇರುವ ನಿಜವಾದ ಬುದ್ಧಿವಂತಿಕೆಗೆ ನಿಜವಾದ ಮನ್ನಣೆ ಸಿಗುತ್ತಿಲ್ಲ ಎಂಬುದು ಪ್ರತಿಯೊಬ್ಬ ವಿದ್ಯಾವಂತ ಪ್ರಜೆಯ ಕೂರಗು. ಸಿಗಬೇಕೆಂದರೇ ಹಣ ಕೊಡಬೇಕು ಸ್ವಾಮಿ! ಎಂಬ ಉತ್ತರ.

ಸ್ವಾತಂತ್ರ್ಯಕ್ಕಾಗಿ ಅಂದು ನಮ್ಮ ಎಲ್ಲಾ ಭಾರತೀಯರ ಹೋರಾಟ ಎಷ್ಟೊಂದು ಉಚ್ಚಮಟ್ಟದಲ್ಲಿ ನಡೆಯಿತು. ಸ್ವಾತಂತ್ರ್ಯ ಒಂದು ಸಿಕ್ಕಿದರೇ ನಮ್ಮ ಎಲ್ಲ ಕೋಟಿ ಕೋಟಿ ಸಮಸ್ಯೆಗಳಿಗೆಲ್ಲಾ ಒಂದು ಪುಲ್ ಸ್ಟಾಪ್ ಇಡಬಹುದು. ನಮ್ಮ ಆಸೆ, ಕನಸುಗಳನ್ನು ಸುಲಭವಾಗಿ ನಮ್ಮದೇಯಾದ ಸರ್ಕಾರದ ಮೂಲಕ ಹಿಡೇರಿಸಿಕೊಳ್ಳಬಹುದು. ಪತಿಭೆಗೆ ತಕ್ಕ ಪುರಾಸ್ಕಾರ ಸಿಗುತ್ತದೆ. ಯಾವುದಕ್ಕೂ ಅಂಜುವ ಅಳುಕುವ ಅವಶ್ಯಕತೆಯಿಲ್ಲ. ನಮ್ಮ ಎಲ್ಲ ಬಡತನ ಮೌಡ್ಯವೆಲ್ಲ ಅಳಿಯುತ್ತದೆ ಎಂಬ ದೂರದ ಕನಸನ್ನು ಪ್ರತಿಯೊಬ್ಬರೂ ಗಾಂಧಿ ತೋರಿಸಿದ ದಾರಿಯಲ್ಲಿ ಕಂಡಿದ್ದರು.

ಅದರೇ ಆಮೇಲೆ ಇಡೀ ಚಿತ್ರಣವೇ ಪೂರ್ಣ ಬದಲಾಯಿತು. ಸರ್ಕಾರ, ರಾಜಕೀಯ ರಂಗ ಎಂದರೇ ಅಸಹ್ಯ ಪಟ್ಟುಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ನಾವು ಆರಿಸಿ ಕಳಿಸಿದ ನಮ್ಮ ಪ್ರತಿನಿದಿಗಳು ಯಾವ ಮಟ್ಟಕ್ಕೆ ಇಳಿದು ಬಿಟ್ಟಿದ್ದಾರೆಂದರೇ "ಆರಿಸುವವರಿಗೆ ಇಲಿ ಆರಿಸಿದ ಮೇಲೆ ವೀರಭದ್ರ" ಎನ್ನುವಂತೆ. ತಾವಾಯಿತು ತಮ್ಮ ವ್ಯವಸ್ಥೆಯನ್ನು ಹಲವು ಆಯಾಮಗಳಲ್ಲಿ ಅಭಿವೃದ್ಧಿಯನ್ನು ಮಾಡಿಕೊಳ್ಳುವುದು ಬಿಟ್ಟರೆ ಬೇರೆ ಯಾವ ಕಾರ್ಯವಿಲ್ಲ ಎನ್ನುವರ ಮಟ್ಟಿಗೆ.

ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಯೋಜನೆಗಳು ಜಾರಿಯಾದವು ಅಂದರೇ ಅದು ಅವರುಗಳು ಮೇಯುವ ಸಮಯಕ್ಕೆ ಸರಿಯಾಗಿ ಸರ್ಕಾರದಿಂದ ಬರುತ್ತಿರುವ ಹಣದ ಹೊಳೆ ಎಂಬುವುದರ ಮಟ್ಟಿಗೆ ಜನಜನಿತವಾಗಿದೆ. ಸರ್ಕಾರದಿಂದ ಬರುವುದು ಆನೆಯ ಗಾತ್ರ ಜನರಿಗೆ ಸಿಗುವುದು ಗುಲಗಂಜಿ ಗಾತ್ರ ಎಂಬಂತಾಗಿದೆ.

ಸಾಮಾನ್ಯ ಜನಗಳಿಗೆ ಯಾವುದೇ ಉಪಯೋಗ ಸಿಗಬೇಕು ಅಂದರೇ ಅದು ಗಗನ ಕುಸುಮವೇ ಸರಿ. ಯಾರಿಗೂ ಸರಿಯಾದ ಸಮಯಕ್ಕೆ ಸರಿಯಾಗಿ ಸಮಾನವಾಗಿ ನ್ಯಾಯ ಸಿಗುವುದು ಕನಸಾಗಿದೆ. ಅದಿಕಾರಿಗಳ ದಬ್ಬಾಳಿಕೆ, ನಾಯಕರ ಅಸಡ್ಡೆ ಇವುಗಳೆಲ್ಲ ಸೇರಿಕೊಂಡು ಅಲ್ಲಿಗೆ ಪುನಃ ಹೋಗಲೇ ಬಾರದು ಎಂಬ ಮಟ್ಟಕ್ಕೆ ಜನಸಾಮಾನ್ಯರುಗಳು ಖಾಸಗೀ ಆಸ್ಪತ್ರೆಗಳು, ಶಾಲೆಗಳು ಮತ್ತು ವ್ಯಕ್ತಿಗಳ ಕಡೆಗೆ ಮುಖ ಮಾಡಿರುವುದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬುದು ಎಲ್ಲರನ್ನು ಕಾಡುತ್ತಿದ್ದಂತಹ ಪ್ರಶ್ನೆ. ಅದಕ್ಕೆ ನಮಗೆಲ್ಲಾ ಉತ್ತರ ಸಿಗುವ ಸಮಯ ಬಂದಾಯಿತು.



ಅದು ಕಳೆದ ನಾಲ್ಕು ದಿನಗಳಲ್ಲಿ ಇಡೀ ವಿಶ್ವದಲ್ಲಿ, ಭಾರತದಲ್ಲಿ ಒಂದೇ ಒಂದು ಮಾತು ಅಣ್ಣ ಹಜಾರೆ! ಲೋಕಪಾಲ ಮಸೂದೆಯನ್ನು ಜಾರಿಗೆ ತರಬೇಕು ಎಂದು ಅವರು ಪ್ರಾರಂಭಿಸಿದ ಉಪವಾಸ ಸತ್ಯಾಗ್ರಹ. ಅದು ಯಾವ ಮಟ್ಟಕ್ಕೆ ಬಂದು ಬಿಟ್ಟಿತು ಅಂದರೇ ಪುನಃ ನಮ್ಮ ಸ್ವಾತಂತ್ರ್ಯ ದಿನದ ಹೋರಾಟವನ್ನು ಕಣ್ಣು ಮುಂದೆ ತಂದಂತಾಯಿತು. ಹಿರಿಯರು ಕಿರಿಯರು ಎನ್ನದೇ ಪ್ರತಿಯೊಬ್ಬ ಭಾರತೀಯ ಪ್ರಜೆಗಳು ಸಹ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದರೂ. ಮತ್ತು ಇದನ್ನು ನೋಡಿ ಘನ ಸರ್ಕಾರವೇ ಸ್ವಲ್ಪ ವಿಚಿಲತವಾಗಿ ಹಜಾರೆಯವರ ಬೇಡಿಕೆಗಳನ್ನು ಮಾನ್ಯ ಮಾಡಲು ಓ.ಕೆ ಎಂದಿತು.

ಯಾರು ಉಹಿಸದ ರೀತಿಯಲ್ಲಿ ಜನಗಳ ಪ್ರತಿಕ್ರಿಯೆಯನ್ನು ನೋಡಿದರೆ ನಮ್ಮ ಜನರಲ್ಲೂ ದೇಶಪ್ರೇಮ, ದೇಶದ ಬಗ್ಗೆ ಅಪಾರವಾದ ಕಾಳಜೀ ಇದೆ ಎಂಬುದು ಎದ್ದು ಕಾಣುತ್ತಿದೆ. ಸಮಯ ಸಿಕ್ಕರೇ ಎಲ್ಲದಕ್ಕೂ ಸಿದ್ಧ ಎಂಬುದನ್ನು ಪೂರ್ಣವಾಗಿ ನಿರೂಪಿಸಿ ಆಡಳಿತ ರಂಗಕ್ಕೆ ಚಿಕ್ಕ ಶಾಕ್ ಮತ್ತು ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಎಂದರೇ ತಪ್ಪಲ್ಲಾ.

ಇದು ಪ್ರಾರಂಭ ಎನ್ನೋಣ. ಇದು ನಿಲ್ಲಬಾರದು ನಿರಂತರವಾಗಿ ಸಾಗಬೇಕು. ನಾವುಗಳು ನಾವೇ ಎಂದು ಮುಂದೆಜ್ಜೆಯನ್ನು ಇಡುವುದಿಲ್ಲ. ಬೇರೆಯವರಿಗಾಗಿ ಮೊದಲು ಯಾರದರೊಬ್ಬರು ಪ್ರಾರಂಭಿಸಲಿ ಎಂದು ಕಾಯುತ್ತಾ ಇದ್ದೇವೋ ಎಂಬಂತೆ ಈ ಕಳೆದ ನಾಲ್ಕು ದಿನಗಳಲ್ಲಿ ನಮಗೆ ಒಬ್ಬ ಸರಿಯಾದ ನಾಯಕ ಸಿಕ್ಕೇ ಬಿಟ್ಟ ಎಂಬಂತೆ ಹಜಾರೆಯವರೊಂದಿಗೆ ಹಜಾರೋ ಹಜಾರೋ ದೇಶವಾಸಿಗಳು ಸಾಥ್ ನೀಡಿದ್ದು ಒಂದು ಆಶದಾಯಕ ಬೆಳವಣಿಗೆ.

ಹಾಗೆಯೇ ನಮ್ಮ ನಮ್ಮಲ್ಲಿಯೇ ಇದ್ದಂತಹ ಒಂದು ಜಿಗುಪ್ಸೆಯನ್ನು- ಸಿಟ್ಟನ್ನು ವ್ಯಕ್ತಪಡಿಸಲು ಸರಿಯಾದ ಒಂದು ಮಾರ್ಗ ಇದಾಗಿತ್ತು ಎಂದರೆ ಸುಳ್ಳಲ್ಲ. ಯಾರೊಬ್ಬರೂ ಒಂದೇ ಒಂದು ಅಪಸ್ವರವನ್ನು ಈ ಒಂದು ಹೋರಾಟಕ್ಕೆ ನೀಡಿಲ್ಲ ಎಂದರೇ ಇದರ ಜರೂರತು ಎಷ್ಟು ಇತ್ತು ಎಂಬುವುದು ತಿಳಿಯುತ್ತದೆ.

ಬೆಳಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ನಮ್ಮ ಈ ವಿದ್ಯಾರ್ಥಿಗಳು, ಯುವಕರುಗಳು ಹೆಚ್ಚು ಹೆಚ್ಚು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಮುಂದೊಂದು ದಿನ ಭವ್ಯವಾದ ಭ್ರಷ್ಟಾಚಾರ ರಹಿತ ಸಮಾಜವನ್ನು ಭಾರತದ ನೆಲದಲ್ಲಿ ಬೆಳೆಸುತ್ತಾರೆ ಎಂಬುದಕ್ಕೆ ಸಾಕ್ಷಿಭೂತವಾಯಿತು. ಇದರ ಬೆಳಕು ಹೀಗೆ ಸಾಗಲಿ ಎಂಬುದೇ ಎಲ್ಲಾ ಭಾರತೀಯರ ದೊಡ್ಡ ಆಸೆ.

ಈ ಲಂಚ, ಹಣ ಹೊಡೆಯುವುದು ನಿಂತರೇ ಎಲ್ಲ ಕೆಲಸಗಳು ತಮ್ಮಷ್ಟಕ್ಕೆ ತಾವೇ ರಿಪೇರಿಯಾಗುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದು ಎಷ್ಟು ಆಳವಾಗಿ ಬೇರು ಬಿಟ್ಟುಕೊಂಡಿದೆಯೆಂದರೇ ಯಾರಿಗೂ ಏನೂ ತಿಳಿಯದ ರೀತಿಯಲ್ಲಿ ಸಮಾಜದ ಎಲ್ಲಾ ರಂಗದಲ್ಲೂ ಎಲ್ಲ ಸಮಯದಲ್ಲೂ ಆಕ್ರಮಿಸಿಕೊಂಡು ಎಲ್ಲರನ್ನು ವ್ಯಥೆಗೆ ದೂಡುವಂತಹ ಒಂದು ಕರಾಳ ಸ್ವರೂಪ ಇದಾಗಿದೆ.

ಪ್ರತಿಯೊಬ್ಬರೂ ತಮ್ಮ ಜವಬ್ದಾರಿಯನ್ನು ಅರಿತು ನಡೆಯಬೇಕು. ನಾವುಗಳು ಇರುವುದು ಎಲ್ಲಿ. ನಮ್ಮ ಕರ್ತವ್ಯ ಏನು ಎಂದು ತಿಳಿದು ವರ್ತಿಸಬೇಕು. ಇರುವ ಅನುಕೂಲ ಪ್ರತಿಯೊಬ್ಬರಿಗೂ ಸೇರಿದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯೆಂದರೇ ಸರ್ವಾಧಿಕಾರಿಯ ರೀತಿಯಲ್ಲಿ ತಾನು ಮಾತ್ರ ಚೆನ್ನಾಗಿರಬೇಕು ಇನ್ನೆಲ್ಲಾರೂ ಏನಾದರೂ ಆಗಲಿ ಎಂಬ ದೂರಣೆಯನ್ನು ಬಿಡಬೇಕು.

ನಮ್ಮ ಹಿರಿಯರಾದ ಗಾಂಧಿಜೀಯವರಾದಿಯಾಗಿ ಹಲವಾರು ಹೋರಾಟಗಾರರ ಹಂಬಲ, ಕನಸಿನ ಭಾರತ ಇದು ಮಾತ್ರವಲ್ಲವೇ ಅಲ್ಲ. ಅದು ರಾಮರಾಜ್ಯವಾಗಿತ್ತು. ಅದರ ನಿರ್ಮಾಣಕ್ಕೆ ಕಿಂಚಿತ್ತಾದರೂ ಪ್ರಯತ್ನಿಸಬೇಕಾದದ್ದು ಎಲ್ಲಾ ಹಿರಿ ಕಿರಿ ನಾಯಕರುಗಳಿಗೆ ಸೇರಿದ್ದು. ಯಾಕೆಂದರೇ ನಾವುಗಳು ಹೀಗಾಗಲೇ ಈ ರೀತಿಯ ವ್ಯವಸ್ಥೆಯನ್ನೇ ಅನುಭವಿಸುತ್ತಾ ಅನುಭವಿಸುತ್ತಾ ದಶಕಗಳನ್ನೇ ಕಳೆದು ಬಿಟ್ಟು ಇದೇ ನಿಜವಾದ ವ್ಯವಸ್ಥೆಯೆಂಬ ಭ್ರಮ ಲೋಕದಲ್ಲಿ ಬದುಕುತ್ತಾ ಬದುಕುತ್ತಾ ಸಹಿಸುತ್ತ ಕುಳಿತು ಬಿಟ್ಟಿದ್ದೇವೆ.

ಮಾದರಿ ಸಮಾಜವನ್ನು ನಿರ್ಮಾಣ ಮಾಡುವ ಹೊಣೆ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಜವಬ್ದಾರಿ. ಅದರ ಅಚ್ಚುಕಟ್ಟಾದ ನಡೆಯನ್ನು ಅಲ್ಲಿನ ಸ್ಥಾನವನ್ನು ಅಲಂಕರಿಸಿದವರು ನಡೆಸಬೇಕು/ ನಡೆಸಲೇ ಬೇಕಾದ ಜರೂರತು ಇಂದು ಅತ್ಯಂತ ಅವಶ್ಯಕವಾಗಿದೆ.

ಪರಕೀಯರನ್ನು ಅಂದು ಹೊಡೆದು ಹೋಡಿಸಲು ನಮ್ಮವರು ಅಂದು ನಿರಾಶನ ಸತ್ಯಾಗ್ರಹವನ್ನು ಆಚರಿಸಿದರೂ. ಅದರೆ ಇದು ನೋಡಿ ನಮ್ಮ ದೌರ್ಭಾಗ್ಯ ನಮ್ಮಿಂದ ಆರಿಸಿಕೊಂಡು ನಮಗಾಗಿ ಆಡಳಿತವನ್ನು ಅನುಷ್ಟಾನ ಮಾಡುವ ನಮ್ಮ ಜನಗಳಿಗೆ ಪಾಠ ಕಲಿಸಲೂ ನಾವುಗಳು ಉಪವಾಸ ಕೂರುವಂತಾಗಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರೂ ತಮ್ಮ ತಮ್ಮಲ್ಲಿಯೇ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳುವುದು ಗಾಂಧಿ ಜನಿಸಿದ ನಾಡಿನ ಘನ ಮಹೋದಯರ ತುರ್ತು ಕೆಲಸವಾಗಬೇಕು.

ಅದರೂ ಈ ಲೋಕಪಾಲ ಮಸೂದೆಯನ್ನು ಜಾರಿಮಾಡಲು ದಶಕಗಳನ್ನು ತೆಗೆದುಕೊಂಡು ಮೀನಾಮೇಷ ಎಣಿಸುತ್ತಿದ್ದರು ಎಂದರೇ ಏನು ಅರ್ಥ ಯೋಚಿಸಲು ಸಾಧ್ಯವಿಲ್ಲ. ಬುದ್ಧಿವಂತರು ಇಲ್ಲಿ ಯಾರು ಸ್ವಾಮಿ?

ಈ ರೀತಿ ಒಂದು ಜಾಗೃತಿಯ ಹೋರಾಟಕ್ಕೆ ನೂರು ಜನ ಅಣ್ಣ ಹಜಾರೆಗಳ ಮಾರ್ಗದರ್ಶನ ನಮ್ಮ ಯುವಕರುಗಳಿಗೆ ಮತ್ತು ಜನ ಸಾಮಾನ್ಯರಿಗೆ ಅವಶ್ಯಕತೆಯಿದೆ. ಇದರ ಸಂತತಿ ಬೆಳೆಯಲಿ ಭ್ರಷ್ಟರ ಸಂತತಿ ಅಳಿಯಲಿ ಎಂದು ಹಾರೈಸುವುದೊಂದೇ ನಾವು ಮಾಡುವ ನಮ್ಮ ಕೆಲಸ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ