ಶುಕ್ರವಾರ, ಜುಲೈ 2, 2010

ಯಾವ ಮೋಹನ ಮುರಳಿ ಕರೆಯಿತು

"ಮನವು ಮಲಗಿತ್ತು ಚಿತೆಯ ಮೇಲೆ "- ಹಿಮಗಿರಿ ಕಂದರ. ಪುಟ ೩

"ಸುಖ ದುಃಖ ಸಂಗಮವಾಟದ ಹೃದ್ ರಂಗವು ಪಾವನೆವೆಂಬೆನು ಎಂದೆಂದಿಗೂ" - ಸಖಿಗೀತ - ಬೇಂದ್ರೆ. ಪುಟ ೩

"ನಾನು ತಲೆ ತಗ್ಗಿಸುವುದು ಎರಡೇ ಸ್ಥಾನಗಳಲ್ಲಿ - ಒಂದು ನನ್ನ ಸಂಕಲ್ಪಕ್ಕೆ ಮತ್ತು ಸಾಧನೆ ಇವುಗಳ ನಡುವಿನ ಅಂತರಕ್ಕೆ ಮತ್ತು ಇನ್ನೊಂದು ಬೇಂದ್ರೆಯವರ ಪಾದಕ್ಕೆ". ಪುಟ ೪

"ಕಟ್ಟುವೆವು ನಾವು ಹೊಸ ನಾಡೊಂದನ್ನು, ರಸದ ಬೀಡೊಂದನ್ನು". ಪುಟ ೬

"ನಿನಗೆ ನೀನೇ ಗೆಳೆಯ, ನಿನಗೆ ನೀನೇ". ಪುಟ ೮

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ". ಪುಟ ೯

"ಜಗತ್ತಿನಲ್ಲಿ ಧರ್ಮವೂ ಅಧರ್ಮವನ್ನಲಂಬಿಸದೇ ಗೆಲ್ಲಲಾರದು". ಪುಟ ೨೨

"ನೆನಪಿಗೆ ಭಾವನೆಯ ಬಲವಿದ್ದಾಗ ವಿವರಗಳ ಹಂಗೇಕೆ "- ಯಶವಂತ ಚಿತ್ತಾಲ. ಪುಟ ೩೮

"ಅಹಂಕಾರಕ್ಕೆಲ್ಲಿ ನಿಜದ ಪರಿವೆ" - ಯಶವಂತ ಚಿತ್ತಾಲ. ಪುಟ ೩೯

"ನನಗೆ ಒಳ್ಳೆಯದ್ದು ಕೆಟ್ಟದ್ದು ಇವುಗಳ ಬಗ್ಗೆ ವಿವೇಕ ಜ್ಞಾನ ಇಲ್ಲವೆಂದಲ್ಲ ಒಳ್ಳೆಯದರಲ್ಲಿ ನನಗೆ ರುಚಿಯಿಲ್ಲ "- ದುರ್ಯೊಧನ. ಪುಟ ೪೨

"ಚಟಕ್ಕಿರುವ ರುಚಿ ತಿಳುವಳಿಕೆಗೆ ಇಲ್ಲ". ಪುಟ


ಯಾವಾಗ ಅಂಥ ಗೊತ್ತಿಲ್ಲ ನಾನು ಗೋಪಾಲ ಕೃಷ್ಣ ಅಡಿಗರ ಬಗ್ಗೆ ತಿಳಿದಿದ್ದು. ಅವರ "ಯಾವ ಮೋಹನ ಮುರಲಿ ಕರೆಯಿತು, ದೂರ ತೀರಕೆ ನಿನ್ನನು" ಕವನವನ್ನು ರತ್ನಮಾಲ ಪ್ರಕಾಶರವರ ಕಂಠದಿಂದ ಹೊಮ್ಮಿದ ದ್ವನಿ ಸುರಳಿಯನ್ನು ಕೇಳಿದಾಗ ಬಹಳ ಇಷ್ಟವಾಯಿತು. ನಾಗತಿಹಳ್ಳಿ ಚಂದ್ರಶೇಖರವರ "ಅಮೆರಿಕಾ ಅಮೆರಿಕಾ " ಚಲನ ಚಿತ್ರದಲ್ಲಿ ಈ ಹಾಡಿಗೆ ದೃಶ್ಯ ಕಾವ್ಯವನ್ನು ಎಣೆದಾಗ ಇನ್ನೂ ತುಂಬ ಪ್ರೀತಿಯಾಯಿತು. ಇದೀಷ್ಟು ಅಡಿಗರ ಹೆಸರು ನನ್ನ ಮನದಲ್ಲಿ ನೆಲೆಸಲೂ ಕಾರಣವಾಯಿತು. ಅವಾಗ ಅವಾಗ ಈ ಒಂದು ಹಾಡನ್ನು ಸಮಯ ಸಿಕ್ಕಾಗೆಲ್ಲಾ ತಲ್ಲಿನನಾಗಿ ಕಿವಿ ತುಂಬಿಸಿಕೊಂಡು ಕವಿಯ ಕಾವ್ಯ ಚಮತ್ಕಾರವನ್ನು ಕಂಡು ಹರ್ಷಿಸಿಸುತ್ತಿದ್ದೆ.


ಇಷ್ಟು ಮಾತ್ರ ತಿಳಿದಿದ್ದು ಅವರು ದೊಡ್ಡ ಕವಿಯೆಂದು. ಅವರ ಬಗ್ಗೆ ಅಲ್ಲಿ ಇಲ್ಲಿ ಬಿಡಿ ಬಿಡಿ ಲೇಖನಗಳಲ್ಲಿ ಮಾತ್ರ ಓದಿದ್ದು ನೆನಪು. ಪುನಃ ಇತ್ತೀಚೆಗೆ ಟಿ. ಎನ್. ಸೀತರಾಮ್ ರವರ "ಮುಕ್ತ ಮುಕ್ತ" ಮೆಗಾ ದಾರವಾಹಿಯಲ್ಲಿ ಅವರ ಕವಿತೆಗಳನ್ನು ಕೇಳುವಂತಾಯಿತು.


ಸಾಹಿತ್ಯ ಲೋಕದ ನವ್ಯದ ಹರಿಕಾರರು ಇವರು ಎಂಬುದು ಸ್ವಲ್ಪ ಗೊತ್ತಾಯಿತು. ಇವರ ಪದ್ಯಗಳನ್ನು ನನ್ನ ಶಿಕ್ಷಣ ಸಮಯದಲ್ಲಿ ಕನ್ನಡ ಪಠ್ಯದಲ್ಲಿ ಓದಿರಬಹುದು, ಅದರೆ ಆಗ ಅದರ ಬಗ್ಗೆ ನನಗೆ ಮನನ ಮತ್ತು ಮಹತ್ವ ಆಗಿರಲಿಕ್ಕಿಲ್ಲ. ಆದರೆ "ಯಾವ ಮೋಹನ ಮುರಲಿ" ಹಾಡು ಅವರ ಪಕ್ಕ ಪ್ಯಾನ್ ಆಗುವಂತೆ ಮತ್ತು ಅವರ ಬಗ್ಗೆ ಕುತೂಹಲದಿಂದ ಸಾಹಿತ್ಯದಲ್ಲಿ ಹುಡುಕುವಂತೆ ಮಾಡಿತು.
ಆದರೆ ಅವರ ಬಗ್ಗೆ ಸಮಗ್ರವಾಗಿ ಅರಿವು ಉಂಟು ಮಾಡಿದ ಪುಸ್ತಕ ಎಂದರೆ, ಇತ್ತೀಚೆಗೆ ಎನ್. ವಿದ್ಯಾಶಂಕರ್, ಎಂ. ಜಯರಾಮ ಅಡಿಗ ರವರ ಸಂಪಾದಕತ್ವದಲ್ಲಿ ನುಡಿ ಪ್ರಕಾಶನದಿಂದ ಪ್ರಕಟಿತ "ಮೋಹನ ಮುರಲಿ" ಪುಸ್ತಕ.


ಇಷ್ಟೊಂದು ದೊಡ್ಡ ದೈತ್ಯ ಪ್ರತಿಭೆಯಾಗಿ ಕನ್ನಡ ಸಾಹಿತ್ಯ ರಂಗದಲ್ಲಿ ಹೊಸ ಅಲೆಯನ್ನು ಉಂಟು ಮಾಡಿದರು ಎಂಬುದನ್ನು ನಮ್ಮ ನಾಡಿನ ವಿವಿಧ ಸಾಹಿತಿಗಳು, ಗಣ್ಯರು ತಮ್ಮ ಆ ದಿನಗಳ ಅವರ ಜೊತೆ ಕಳೆದ ನೆನಪಿನ ಬುತ್ತಿಯನ್ನು ಈ ಪುಸ್ತಕದಲ್ಲಿ ಬಿಚ್ಚಿದಾಗ.
ಅವರ ಆತ್ಮೀಯ ಸುವರ್ಣ ಘಳಿಗೆಗಳನ್ನು ದ.ಬಾ. ಕುಲಕರ್ಣಿ, ಗೌರಿಶ್ ಕಾಯ್ಕಣಿ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಯಶವಂತ ಚಿತ್ತಾಲ ಇತ್ಯಾದಿಯವರಿಂದೊಡಗೂಡಿ ಶ್ರೀಶ್ರೀ ರವಿಶಂಕರವರಗಳು ಅವರ ಬಗ್ಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.


ಅವರ ಮತ್ತು ಅವರ ಒಡನಾಟದಲ್ಲಿ ಬಂದ, ಮೈಸೂರು, ಸಾಗರ, ಬೆಂಗಳೂರು, ಕಾಫಿ ಹೌಸ್, ಸೆಂಟ್ರಲ್ ಕಾಲೇಜು ಇತ್ಯಾದಿ ಸ್ಥಳಗಳು ಅವರಿಂದ ಇಂದು ಐತಿಹಾಸಿಕ ಜಾಗಗಳೇನೂ ಎಂಬಂತೆ ಒಬ್ಬ ಮಹಾನ್ ಕವಿಯೂಡನೆ ಹೇಗೆಲ್ಲಾ ಗುರುತಿಸಿಕೊಂಡು ಬಿಂಬಿತವಾಗುತ್ತವೆ ಎಂಬುದನ್ನು ತುಂಬ ಖುಷಿಯಾಗಿ ಓದಿಸಿಕೊಂಡು ಸ್ವಲ್ಪ ಅಡಿಗರ ಬಗ್ಗೆ ನನ್ನ ಮನದಲ್ಲಿ "ಅಡಿಗೆರೆ" ಎಳೆಯುವಂತಾಯಿತು.


ಆ ದಿನಮಾನದಲ್ಲಿ ಅಂಥವರ ಒಡನಾಟವನ್ನು ಅನುಭವಿಸಿದ ಈ ಎಲ್ಲಾ ಶಿಷ್ಯೊತ್ತಮರು ಅವರ ಸಕಾಲೀಕ ಮಾರ್ಗದರ್ಶನದಿಂದ ಇಂದು ಪ್ರಸಿದ್ಧ ಉತ್ತಮ ಕನ್ನಡ ಸಾಹಿತಿಗಳಾಗಿದ್ದಾರೆ ಎಂದರೇ ಅವರ ಪ್ರಭಾವ ಎಷ್ಟು ಇತ್ತು ಎಂಬುದು ನಮ್ಮ ಅರಿವಿಗೆ ಬರುವುದು. ಅಂದು ಈ ರೀತಿಯ ಗುರುಗಳು ಕಾಲೇಜುಗಳಲ್ಲಿ ಇದ್ದರು ಎಂದರೆ ನನಗೆ ಈಗ ಹೊಟ್ಟೆ ಕಿಚ್ಚು ಬರುತ್ತದೆ. ಏನೇ ಹೇಳಲಿ ಆ ದಿನಗಳಲ್ಲಿ ಅವರ ಸಂಪರ್ಕವನ್ನು ಹೊಂದಿದ ಎಲ್ಲಾ ಕನ್ನಡಪ್ರಿಯರು ಧನ್ಯರು.


ಈ ಪುಸ್ತಕ ಅಡಿಗರನ್ನು, ಅವರ ಜೀವನ ಪ್ರೀತಿಯನ್ನು, ಮಾನವೀಯತೆಯನ್ನು, ಸಾಮಾಜಿಕ ಕಳಕಳಿ, ದೇಶ ಪ್ರೇಮ, ಕನ್ನಡದ ಬಗ್ಗೆ ಇರುವ ದೋರಣೆಯನ್ನು, ಅವರಲ್ಲಿರುವ ತಿಳಿ ಹಾಸ್ಯ ಪ್ರಜ್ಞೆ ಮತ್ತು ಕಿರಿಯರ ಬಗ್ಗೆ ಇರುವ ಕಾಳಜಿಯನ್ನು ಹಲವಾರು ನಿದರ್ಶನಗಳ ಮೂಲಕ ತಿಳಿಯುವಂತಾಗುತ್ತದೆ. ಅವರ ಒಂದೊಂದು ಕಾವ್ಯಗಳು ಕನ್ನಡದಲ್ಲಿನ ಒಂದೊಂದು ರತ್ನಗಳೇ ಸರಿ. ಕನ್ನಡ ಸಾಹಿತ್ಯ ಲೋಕ ಇರುವವರೆಗೂ ಅವರ ಕೊಡುಗೆ ಇರುತ್ತದೆ ಮತ್ತು ಅವರ ಹೆಸರನ್ನು ಕನ್ನಡ ಪ್ರೇಮಿಗಳು ನೆನಪಿಸಿಕೊಳ್ಳುವವರು.
ನಮಗೆ ಯಾವಾಗಲೂ ನೆನಪಿಗೆ ಬರುವುದು ದೊಡ್ಡ ದೊಡ್ಡ ಪ್ರಶಸ್ತಿ, ಬಿರುದಾವಳಿಗಳನ್ನು ಪಡೆದವರು ಮಾತ್ರ. ಪ್ರಶಸ್ತಿ ಪ್ರಸಿದ್ಧಿಯ ಅಬ್ಬರವಿಲ್ಲದೆ ತಮ್ಮ ನೇರವಂತಿಕೆಯಿಂದ ಸುತ್ತಲಿನ ಇಡೀ ಒಂದು ಸಮೂಹವನ್ನು ಮಂತ್ರ ಮುಗ್ಧರನ್ನಾಗಿ ಮಾಡಿ ತಮ್ಮತ್ತಾ ಸೆಳೆದ ಅಡಿಗರ ಶಕ್ತಿಯನ್ನು ವರ್ಣಿಸಲು ಅಸಾಧ್ಯ.


ಈ ಹೊತ್ತಿಗೆ ನನಗೆ ಪುನಃ ಅವರ ಕವನ ಸಂಕಲನಗಳಾದ ಚಂಡೆ ಮದ್ದಾಳೆ, ಭಾವತರಂಗ, ಕಟ್ಟುವೆವು ನಾವು, ಭೂಮಿಗೀತ ಇತ್ಯಾದಿ ಓದುವಂತೆ ಪ್ರೇರಪಿಸಿತು ಎಂದರೇ ಅತಿಶಯೋಕ್ತಿಯಲ್ಲ.


ನಾವುಗಳು ನಾವು ಮೆಚ್ಚಿ ಓದುವ ಕೃತಿ ಕತೃವಿನ ಬಗ್ಗೆ ಅವರ ದಿನ ನಿತ್ಯದ ಖಾಸಗಿ ಜೀವನದ ಬಗ್ಗೆ ತುಂಬ ಕುತೂಹಲವನ್ನು ಹೊಂದಿರುತ್ತೇವೆ. ಅವರ ನಡಾವಳಿ, ಅವರು ಮನೆಯಲ್ಲಿ ತಮ್ಮ ಮಡದಿ ಮತ್ತು ಮಕ್ಕಳೊಂದಿಗೆ ಹೇಗೆ ಇರುವವರು ಎಂದು ತಿಳಿಯುವ ಆಸೆ ಬಲವಾಗಿರುವುದು. ಇದಕ್ಕೆ ಪೂರಕವಾಗಿದೆಯೇನೂ ಎಂಬಂತೆ, ಅಡಿಗರ ಮಕ್ಕಳಾದ ವಿದ್ಯಾಕೃಷ್ಣರಾಜ, ಅಂಜನಾರವರ ಲೇಖನಗಳು ಅಡಿಗರ ಇನ್ನೊಂದು ಅರ್ದ್ರ ಮುಖವನ್ನು ದರ್ಪಣ ಮಾಡಿರುವುದು ತುಂಬ ಮೆಚ್ಚುವಂತದ್ದು.


ನವ್ಯಕ್ಕೆ ಅಡಿಗಲ್ಲು ಇಟ್ಟ ಈ ಮಹಾನ್ ವ್ಯಕ್ತಿಯ ಬಗ್ಗೆ ಎಷ್ಟು ಓದಿದರೂ ಇನ್ನೂ ಓದಬೇಕು ಎನಿಸದೇ ಇರಲಾರದು. ಇಂದು ಈ ರೀತಿಯ ವ್ಯಕ್ತಿಗಳು ಕನ್ನಡ ನೆಲದ ಮೇಲೆ ಓಡಾದಿದ್ದಾರೆ ಎಂದರೇ ನಂಬಲಾರದಂತ ಸ್ಥಿತಿ ಇಂದು ನಿರ್ಮಿತವಾಗಿದೆ. ಅಂಥ ಒಳ್ಳೆಯ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಸ್ನೇಹ ಕೂಟ ಇಂದಿನ ದಿನಮಾನದಲ್ಲಿ ಕಲ್ಪನೆಗೂ ನಿಲುಕಲಾರದು ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ