ಮಂಗಳವಾರ, ಜುಲೈ 13, 2010

ಕೆಲವೇ ಸಜ್ಜನರುಗಳು




ನಮ್ಮ ಜನ ಯಾರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅವರುಗಳಿಗೆ ಮರೆವು ಜಾಸ್ತಿ. ಸಮಾಜ ಮುಖಿ ಚಿಂತನೆ ಇಲ್ಲವೇ ಇಲ್ಲ. ತಾವುಗಳು ಬರಿ ತಮ್ಮ ಬಗ್ಗೆ ಮಾತ್ರ ಯೋಚಿಸಿತ್ತಾರೆ.. ಇತ್ಯಾದಿ ಇತ್ಯಾದಿ ಅಭಿಪ್ರಾಯಗಳನ್ನು ನಮ್ಮ ಸಮಾಜದ ಬಗ್ಗೆ ನಮ್ಮ ದಿನ ನಿತ್ಯ ಮಾತನ್ನಾಡುತ್ತಾ ಇರುತ್ತೇವೆ.



ಈ ಮೇಲಿನ ನಮ್ಮೆಲ್ಲಾರ ನಂಬಿಕೆಗಳನ್ನು ಸುಳ್ಳು ಮಾಡುವ ರೀತಿ ಕಳೆದೆರಡು ವಾರಗಳಲ್ಲಿ ನಮ್ಮ ಜನ ತಮ್ಮ ಹಿತಾಸಕ್ತಿ ಏನೂ ಎಂಬುದನ್ನು ಪ್ರತಿಪಾದಿಸಿದ್ದಾರೆ. ಅದಕ್ಕೆ ಕಾರಣಕತೃಗಳು ನಮ್ಮ ನಿಮ್ಮೆಲ್ಲಾರ ಜನಪ್ರಿಯ ಅಧಿಕಾರಿಗಳಾದ ಲೋಕಾಯುಕ್ತ ಸಂತೋಷ ಹೆಗಡೆ. ಅವರುಗಳು ರಾಜೀನಾಮೆಯನ್ನು ಕೊಟ್ಟ ದಿನದಿಂದ ಪುನಃ ವಾಪಸ್ಸು ಪಡೆಯುವವರೆಗೆ ಪ್ರತಿಯೊಬ್ಬರು ಯಾವ ರೀತಿ ಕಳ ಕಳಿಯನ್ನುಂಟು ಮಾಡಿದರು ಎಂದರೆ. ಪುನಃ ನಮ್ಮ ಸಮಾಜದಲ್ಲಿ ಒಂದು ರೀತಿಯ ಆಶದಾಯಕವಾದ ವಾತವರಣದ ನಂಬಿಕೆಯನ್ನು ಬಲಿಷ್ಟ ಮಾಡಲು ಸಹಕಾರಿಯಾಯಿತು.



ನಮ್ಮ ಯೋಚನೆ ಮತ್ತು ನಾವುಗಳು ನಿರೀಕ್ಷಿಸುವುದು ಯಾವುದನ್ನು ಎಂಬುದನ್ನು ಪ್ರತಿಯೊಬ್ಬರಿಗೂ ಗೊತ್ತು ಮಾಡಿ ಕೊಟ್ಟಂತಾಯಿತು. ವ್ಯಕ್ತಿಯ ಒಳ್ಳೆಯತನವನ್ನು, ಒಳ್ಳೆಯ ಕೆಲಸವನ್ನು ಎಂದು ಮರೆಯಲಾಗುವುದಿಲ್ಲ. ಜನ ತಾವು ಅಂದುಕೊಂಡ ಆಸೆ ಆಕಾಂಕ್ಷೆಗಳನ್ನು ನಮಗೆ ಗೊತ್ತಿರುವವರು ನೆರವರಿಸುತ್ತಿದ್ದಾರೆ ಎಂದರೆ ಆ ಕ್ಷಣ ನಮಗೆ ಉಂಟಾಗುವ ಆನಂದ ನಿರಿಕ್ಷೆಗೂ ಮೀರಿದ್ದು. ಅದಕ್ಕೆ ಅಂದು ನಾವುಗಳು ಎಸ್. ಪಿ. ಸಾಂಗ್ಲಿಯಾನ ಎಂದರೆ ಸಾಕು ಒಂದು ರೀತಿಯ ಯಾವುದು ನೆಮ್ಮದಿ ಮತ್ತು ಹೆಮ್ಮೆ. ಅದಕ್ಕೆ ಆ ಹೆಸರಿನ ಚಲನಚಿತ್ರ ಕನ್ನಡ ನೆಲದಲ್ಲಿ ಸುಪ್ರಸಿದ್ಧಿಗೂಂಡಿದ್ದು. ಸಾಂಗ್ಲಿಯಾನ ಹಾಗೇ ಮಾಡುತ್ತಾರಂತೆ, ಹೀಗೆ ಬರುತ್ತಾರಂತೆ.. ಈ ರೀತಿಯ ಊಹಾ ಪೊಹಾವಾದ ಮಾತು ಕತೆಗಳು ಅವರನ್ನು ಆ ಮಟ್ಟಕ್ಕೆ ನಿಲ್ಲಿಸಿದ್ದವು.



ಹೀಗೆ ಸರ್ಕಾರಿ ಕೆಲಸದಲ್ಲಿ ಇದ್ದು ಕೊಂಡು ಆ ಮಟ್ಟಿಗೆ ಒಂದು ಸಿನಿಮಾದ ಕಥೆಯಾಗುವ ಮಟ್ಟಕ್ಕೆ ನಮ್ಮ ಜನ ಅವರ ಕೆಲಸಗಳನ್ನು ನೆನಪಿಸಿಕೊಳ್ಳುತ್ತಾ ಇದ್ದರು.



ಚುನಾವಣೆ ಆಯೋಗ ಎಂಬುದು ಒಂದು ಇದೆ ಎಂಬುದು ನಮಗೆಲ್ಲಾ ಗೊತ್ತಾಗಿದ್ದು, ಚುನಾವಣೆ ಆಯೋಗಕ್ಕೆ ಟಿ. ಎನ್. ಶೇಷನ್ ರವರು ಬಂದಾಗ. ಹೀಗೆ ಪ್ರತಿಯೊಂದು ಅಧಿಕಾರದ ಸ್ಥಳಗಳು ವ್ಯಕ್ತಿಗಳ ನಡಾವಳಿಗಳಿಂದ ಜನರುಗಳಿಗೆ ಹೆಚ್ಚು ಹೆಚ್ಚು ಹತ್ತಿರವಾಗಿವೆ. ಅದಕ್ಕೆ ಕಾರಣ ಅವರುಗಳು ತೆಗೆದುಕೊಳ್ಳುವ ಜನಪರ ನಿರ್ಧಾರಗಳು ಮತ್ತು ಯೋಜನೆಗಳು.



ಐ.ಪಿ.ಎಸ್ ಎಂಬುದು ಒಂದು ಇದೆ ಎಂಬುದು ಗೊತ್ತಾಗಿದ್ದು ಕಿರಣ್ ಬೇಡಿ ಎಂಬ ಕೆಚ್ಚದೆಯ ಮಹಿಳೆಯ ಪೋಲಿಸ್ ಕಾರ್ಯಚರಣೆಯಿಂದ. ರಾಷ್ಟ್ರಪತಿಗಳು ಹೀಗೆ ಇರುತ್ತಾರೆ ಎಂಬುದು ತಿಳಿದಿದ್ದು, ಸರ್ವಪಳ್ಳಿ ರಾಧಕೃಷ್ಣರವರು ಮತ್ತು ನಮ್ಮ ನೆಚ್ಚಿನ ಅಬ್ದುಲ್ ಕಲಾಂ ರವರಿಂದ. ಹೀಗೆ ಕೆಲವರುಗಳು ತಮ್ಮ ಇತಿ ಮಿತಿಯಲ್ಲಿ ಅಯಸ್ಕಾಂತದ ರೀತಿಯಲ್ಲಿ ಜನ ಮನದಲ್ಲಿ ಸ್ಥಿರಸ್ಥಾಯಿಯಾಗಿ ನೆಲಸುತ್ತಾರೆ. ಅವರುಗಳನ್ನು ಒಂದು ಇಡೀ ಜನಾಂಗ ದಿನ ನಿತ್ಯ ಅವರುಗಳು ಇದ್ದಾಗ ಹೀಗೆ ಇತ್ತು ಗೊತ್ತಾ ಎಂದು ತಮ್ಮ ತಮ್ಮಲ್ಲಿಯೇ ಮಾತನ್ನಾಡಿ ಕೊಳ್ಳುತ್ತಾರೆ.



ಸಾರ್ವಜನಿಕ ರಂಗದಲ್ಲಿ ಹೆಸರು ಮಾಡುವುದು ಸುಲಭ ಮತ್ತು ಕಷ್ಟ. ಅದರೆ ತಮ್ಮ ವಿಭಿನ್ನ ರೀತಿಯ ಬುದ್ಧಿವಂತಿಕೆ ಮತ್ತು ನೆರ ನಡೆ ನುಡಿಯಿಂದ ಅಪರೂಪವಾದ ಕೆಲಸಗಳಿಂದ ಒಂದು ರೀತಿಯ ಸಂಚಲನವನ್ನು ಕೆಲವೇ ವ್ಯಕ್ತಿಗಳು ಮಾಡುತ್ತಾರೆ ಅದು ಸದ್ದಿಲ್ಲದೆ. ಆ ರೀತಿಯ ಅವರ ಕಾರ್ಯಗಳು ಜನರುಗಳಿಗೆ ಪರಿಮಳೂಪಾದಿಯಲ್ಲಿ ಪಸರಿಸುತ್ತದೆ.



ಅದಕ್ಕೆ ಇರಬೇಕು ನಮ್ಮ ನಿತ್ಯ ಬದುಕಿನಲ್ಲಿ ಹಲವಾರು ಬದಲಾವಣೆಗಳನ್ನು ಕಂಡರು ಮತ್ತು ನಿರಾಸೆಯನ್ನು ಹೊಂದಿದರು ಅಪರೂಪಕ್ಕೆ ಇಂಥ ವ್ಯಕ್ತಿಗಳ ಆಗಮನ ಸರಿ ಸಮಯದಲ್ಲಿ ಸಮಾಜಕ್ಕೆ ಸಿಗುತ್ತಿರುತ್ತದೆ ಮತ್ತು ಬೇಕಾಗುತ್ತದೆ .



ಈ ರೀತಿಯ ದಕ್ಷ ಮತ್ತು ಉತ್ತಮ ಅಧಿಕಾರಿಗಳ ಸಂಖ್ಯೆ ಹೆಚ್ಚು ಹೆಚ್ಚು ಬೆಳೆಯಲಿ ಎಂಬುದು ನಮ್ಮೆಲ್ಲಾರ ಆರೈಕೆ.



ಇವರುಗಳ ಮಾರ್ಗದರ್ಶನ ಮತ್ತು ಅವರುಗಳು ತೋರಿಸಿದ ಹಾದಿ ಯುವ ಜನಾಂಗಕ್ಕೆ ದಾರಿ ದೀಪವಾಗಲಿ ಮತ್ತು ಅವರ ಆದರ್ಶ ನಮ್ಮೆಲ್ಲಾರ ಮಂತ್ರವಾಗಲಿ. ಇದಕ್ಕೆ ಉತ್ತೇಜನ ಎಂಬ ರೀತಿಯಲ್ಲಿ ನಮ್ಮ ಎಲ್ಲಾ ಯುವಕರುಗಳು, ವಿದ್ಯಾರ್ಥಿಗಳು ಇಂದು ನಮ್ಮ ರಾಜಕೀಯ, ಸಮಾಜಿಕ, ಆರ್ಥಿಕತೆ, ಭ್ರಷ್ಟತೆ, ದಬ್ಬಾಳಿಕೆ ಇತ್ಯಾದಿ ಯಾದ ವಿಚಾರಗಳ ಬಗ್ಗೆ ತಮ್ಮದೆಯಾದ ಚಿಂತನೆಯನ್ನು ಯೋಚನೆಯನ್ನು ಮತ್ತು ವಿಚಾರವನ್ನು ಹೊಂದಿರುವುದು ಆಶದಾಯಕ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎಂಬ ರೀತಿಯಲ್ಲಿ ಮುಂದಿನ ಉತ್ತಮ ಬಾಳ್ವೆಗೆ ಇವರುಗಳ ಇಂದಿನ ಚಿಂತನೆ ಬೆಳಕಾಗಲಿ.



ನಾವುಗಳು ಯಾವ ರೀತಿಯಲ್ಲಿ ಸಜ್ಜನರುಗಳ ಬಗ್ಗೆ ಇಂದು ಅಪಾರವಾದ ನಂಬಿಕೆ ಮತ್ತು ವಿಶ್ವಾಸವನ್ನು ಇಟ್ಟುಕೊಂಡಿದ್ದೆವೂ ಅದನ್ನು ಉಳಿಸುವ ಸಲುವಾಗಿ ಪ್ರತಿ ಕುಟುಂಬದಲ್ಲಿ ಸಾಮಾಜಿಕ ಕಳ ಕಳಿಯ ಬೆಳಕು ಪ್ರತಿಯೊಂದು ಮಗುವಿಗೂ ದೊರೆಯಲಿ. ಮಗು ಕೆವಲ ಪುಸ್ತಕದ ಹುಳುವಾಗದೆ ತನ್ನ ಸುತ್ತಲಿನ ಜನ ಮನ ಮತ್ತು ರಾಜ್ಯ, ದೇಶದ ಆಗೂ ಹೋಗುಗಳ ಬಗ್ಗೆ ತಿಳುವಳಿಕೆಯನ್ನು ಹೊಂದುವಂತೆ ಮಾಡಬೇಕಾದ್ದು ಹೆತ್ತವರ ಕರ್ತವ್ಯ.



ಚಿಕ್ಕಂದಿನಲ್ಲಿ ಕಂಡ ಒಳ್ಳೆಯತನ ಮತ್ತು ಕೆಟ್ಟದ್ದು ಇವುಗಳೆ ಮುಂದೆ ಆ ಮಗುವಿಗೆ ಹೇಗೆ ತಾನು ತನ್ನ ಸಮಾಜಕ್ಕೆ ನೆರವು ಆಗಲಿ ಮತ್ತು ಮುಂದೆ ತಾನು ಇರುವ ರಂಗದಲ್ಲಿಯೇ ಹೇಗೆ ಹೊಸತನವನ್ನು, ಕೆಲವರಿಗೆ ಉಪಯೋಗವನ್ನುಂಟು ಮಾಡಬಹುದು ಎಂಬುದರ ಕಲ್ಪನೆಯ ಬೀಜವನ್ನು ಬಿತ್ತಿದಂತಾಗುತ್ತದೆ. ಆಗ ಮಾತ್ರ ನಾವುಗಳು ಹೆಚ್ಚು ಹೆಚ್ಚು ಭರವಸೆಯ ಇಂಥ ವ್ಯಕ್ತಿಗಳನ್ನು ಮುಂದೆ ನಿರಂತರವಾಗಿ ಕಾಣುತ್ತಿರಬಹುದು. ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ