ಮಂಗಳವಾರ, ಜುಲೈ 27, 2010

ನಾವೇಲ್ಲಿ ಇದ್ದೀವಿ!!

ಮೂನ್ನೆ ನಾನು ಕಳೆದ ವಾರದ ಪ್ರಜಾವಾಣಿ ಪತ್ರಿಕೆಗಳನ್ನು ತಿರುವಿ ಹಾಕುವ ಸಮಯದಲ್ಲಿ ಸವಣೂರಿನಲ್ಲಿ ನಡೆದ ಮಲವನ್ನು ಮೈ ಮೇಲೆ ಸುರಿದು ಕೊಂಡ ಘಟನೆಯ ಚಿತ್ರ-ವರದಿಯನ್ನು ಓದಿದಾಗ ನಿಜವಾಗಿಯೂ ನಾವು ಯಾವ ಜಗತ್ತಿನಲ್ಲಿ ಇದ್ದೀವಿ ಎಂದು ನನ್ನ ಮನಸ್ಸು ಕಸಿವಿಸಿಯಾಯಿತು. ಯಾರೇ ಆಗಲಿ ಮನುಷ್ಯತ್ವವಿರುವವರು ಬೇಸರ ಪಡುವ ಮತ್ತು ಮರುಗುವ ಘಟನೆ ಇದಾಗಿದೆ.

ನಾವುಗಳು ನಮ್ಮ ನಮ್ಮಲ್ಲಿಯೇ ನಾವು ಹಾಗೇ ಮುಂದುವರಿದ್ದೀವಿ. ಹೀಗೆ ಪ್ರಪಂಚದಲ್ಲಿಯೇ ನಮ್ಮ ಭಾರತ ಮತ್ತು ಕರ್ನಾಟಕ ಮಿಂಚಿನಂತೆ ಸೆಳೆಯುವ ಚಮತ್ಕಾರಗಳನ್ನು ಮಾಡಿಬಿಟ್ಟಿವಿ ಅಂದು ಕೊಳ್ಳುವ ಸಮದಲ್ಲಿಯೇ ಈ ರೀತಿಯ ಅನಾಗರೀಕತೆಯ ಮುಂದುವರಿಕೆಯೇನೋ ಎಂಬಂತೆ ಎಲ್ಲರೂ ತಲೆ ತಗ್ಗಿಸುವಂತೆ ಇರುವ ಸಮಾಜಿಕ ಅನಿಷ್ಟ ಪದ್ಧತಿಗಳು ಜೊತೆ ಜೊತೆಯಲ್ಲಿಯೇ ಸಾಗುತ್ತಿರುವುದು ವಿಪರ್ಯಾಸ.

ಹಾಯ್ ಬೆಂಗಳೂರಿನಲ್ಲಿ ಬಂದಿರುವ ರವಿಬೆಳೆಗೆರೆಯವರ ಲೇಖನವನ್ನು ಸಮಾಜದ ಎಲ್ಲಾ ಬುದ್ಧಿವಂತರು, ರಾಜಕರಣಿಗಳು, ಅಧಿಕಾರಿಗಳು, ಚಿಂತನ ಜೀವಿಗಳು ಓದುವುದು ಒಳಿತು."ರಾಮ ಭಕ್ತ ರಾಜ್ಯ ಕಂಡ ಮಲ ಸ್ನಾನ" ಅಗ್ರ ಲೇಖನ ಮತ್ತು "ರಾಜಕೀಯ ನಾಯಕರ ತಟ್ಟೆಗಳಲ್ಲಿ ಕಾಣಿಸಿದ್ದು ಸವಣೂರಿನ ಭಂಗಿಗಳ ಮಲ" ಸಂಪಾದಕೀಯದಲ್ಲಿ ಅವರು ತೋಡಿಕೊಂಡಿರುವ ನೋವು ಮತ್ತು ಕಳಕಳಿ ಎಲ್ಲಾ ನಾಗರಿಕರುಗಳಿಗೂ ಉಂಟಾಗಬೇಕು.

ನಾವು ನಮ್ಮ ಜೀವನದ ಉನ್ನತ ಮಟ್ಟವನ್ನು ಕೇವಲ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಕೆಲವೇ ಕೆಲವು ಪಟ್ಟಣಗಳನ್ನು ನೋಡಿ ನಿರ್ಧರಿಸಬಾರದು. ಇನ್ನೂ ಅದೇಷ್ಟೋ ಕುಗ್ಗ್ರಾಮಗಳು ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಅದು ನಮ್ಮ ಸರ್ಕಾರದ ಕಣ್ಣಿಗೆ ಬಿಳದ ರೀತಿಯಲ್ಲಿ ಅದೇ ಕಷ್ಟ ನಷ್ಟಗಳಲ್ಲಿ ಹಳ್ಳಿಯ ಜೀವನದಲ್ಲಿ ನರಳುತ್ತಿರುವುವೇನೋ ಬಲ್ಲವರಿಲ್ಲ. ಈ ರೀತಿಯ ಘಟನೆಗಳ ಮೂಲಕ ಅವುಗಳು ನಮ್ಮ ಕಣ್ಣಿಗೆ ಬಿಳುತ್ತವೆ.

ನಮ್ಮ ಸಮಾಜದಲ್ಲಿ ನಾವುಗಳು ಎಲ್ಲರೂ ಸುಖವಾಗಿರಬೇಕು ಎಂದು ಸರ್ಕಾರ ವಿವಿಧ ಯೋಜನೆಗಳ ಮಹಾಪೂರವನ್ನೇ ಹರಿಸಿದರೂ ಅವುಗಳ ಪ್ರಯೋಜನ ಯೋಗ್ಯರಿಗೆ ಸಮಯಕ್ಕೆ ಸರಿಯಾಗಿ ಸಿಗದೇ ಇರುವುದು, ಈ ರೀತಿಯ ಪದ್ಧತಿಗಳು ಇನ್ನೂ ಜೀವಂತವಾಗಿ ಜಾರಿಯಾಗಿ ಇರಲು ಸಾಧ್ಯ.

ನಾವುಗಳು ನಮ್ಮ ಸಾಕ್ಷರತೆಯನ್ನು ನೂರಕ್ಕೆ ನೂರು ಹಿಡೇರಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡರೇ ಹಳ್ಳಿಗಳಲ್ಲಿ ಇನ್ನೂ ಅದೇಷ್ಟೋ ಮಕ್ಕಳು ವಿವಿಧ ಕಾರಣದಿಂದ ಶಾಲೆಯ ಮುಖವನ್ನೇ ಕಾಣದ ಸ್ಥಿತಿಯಲ್ಲಿ ಇರುವುದು ಬಹುಮುಖ್ಯ ಸಮಸ್ಯೆ.

ಹೌದು, ಈ ರೀತಿಯ ಅನಿಷ್ಟ ಪದ್ಧತಿಗಳ ಜೀವಂತಿಕೆಗೆ ನಮ್ಮ ಜನಗಳಲ್ಲಿ ಸಮಯಕ್ಕೆ ಸರಿಯಾಗಿ ಅರಿವು ಮೂಡದಿರುವುದು ಒಂದು ಕಾರಣ. ಅವರಲ್ಲಿ ಅರಿವು ಬರಬೇಕು ಅಂದರೆ ಅವರಲ್ಲಿ ಶಿಕ್ಷಣದ ಕ್ರಾಂತಿಯನ್ನು ಮೂಡಿಸಬೇಕಾದದ್ದು, ನಮ್ಮ ಸರ್ಕಾರ ಮತ್ತು ನಮ್ಮ ಬುದ್ಧಿವಂತ ಜನಗಳ ಕರ್ತವ್ಯ. ಇಲ್ಲವಾದರೇ ಅವರುಗಳಿಗೆ ತಾವು ಜೀವಿಸುತ್ತಿರುವುದೇ ಅಮೂಲ್ಯ ಬದುಕು ಎಂಬ ರೀತಿಯಲ್ಲಿ ಯಾವುದೇ ರೀತಿಯ ದಬ್ಬಾಳಿಕೆಯನ್ನು ಮತ್ತು ಅನಿಷ್ಟಕಾರಿ ಕೆಲಸಗಳನ್ನು ವಂಶಪಾರಂಪರ್ಯವಾಗಿ ಸಾಗಿಸಿಕೊಂಡು ಬದುಕುತ್ತಾರೆ. ಮತ್ತು ಅವರ ಮುಂದಿನ ಸಂತತಿಯು ಸಹ ಇಂದಿನ ಈ ಮುಂದುವರೆದ ಯುಗದಲ್ಲಿ ಬದುಕಲು ಅರ್ಹರಲ್ಲವೇನೋ ಎಂಬಂತೆ ಸಾವಿರ ವರ್ಷದ ಹಿಂದಿನ ಬದಕನ್ನು ಸಹನೀಯವಾಗಿ ಜೀವಿಸುವಂತಾಗುತ್ತದೆ.

ಮನುಷ್ಯನ ತಿಳುವಳಿಕೆ ಮತ್ತು ತನ್ನ ಸುತ್ತಲಿನ ಸಮಾಜದಲ್ಲಿನ ಈ ರೀತಿಯ ನೋವು ನಲಿವುಗಳನ್ನು ತಿಳುವಳಿಕೆ ಇರುವ ಮಂದಿಗಳು ಸರಿಪಡಿಸಲು ಕೈಲಾದ ಸಹಾಯ ಮಾಡಬೇಕಾದದ್ದು ಕರ್ತವ್ಯ. ಅಲ್ಲಿನ ಊರಲ್ಲಿ ಅಲ್ಲಿನ ಜನಗಳು ತಮ್ಮ ಜೊತೆಯಲ್ಲಿರುವ ತಮ್ಮ ಜನಗಳಿಂದಲೇ ತಮ್ಮ ಮಲವನ್ನು ಹೊರುವಂತೆ ಮಾಡಿಕೊಂಡಿರುವ ಪದ್ಧತಿಯನ್ನು ಕಂಡರೇ ನಿಜವಾಗಿಯೂ ನಾವುಗಳು ಯಾವ ರೀತಿಯಲ್ಲಿ ಬದುಕುತ್ತಿದ್ದೇವೆ ಎಂದಾಂತಾಗುತ್ತದೆ ಅಲ್ಲವಾ?

ನಮ್ಮಲ್ಲಿರುವ ಚಿಕ್ಕ ಚಿಕ್ಕ ಸಮಸ್ಯೆಗಳನ್ನೇ ದೊಡ್ಡದು ಮಾಡಿಕೊಂಡು ಬಡಿದಾಡುತ್ತಿರುವ ನಮ್ಮ ಜನಗಳು ಇಂಥ ರೀತಿಯ ನೋವುಗಳಿಗೆ ಸ್ಪಂದಿಸುವ ಮನಸ್ಸನ್ನು ಮಾಡಬೇಕು. ಮನುಷ್ಯರನ್ನು ಮನುಷ್ಯರಾಗಿ ನೋಡುವಂತಾಗಬೇಕು. ಆಗ ಮಾತ್ರ ಸುಖಿ ಸಮಾಜದ ಕನಸು ನನಸಾಗಲು ಸಾಧ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ