ಶನಿವಾರ, ಜೂನ್ 26, 2010

ಮದುವೆಯ ಈ ಬಂಧ

ಇಂದು ನಮ್ಮ ಉತ್ತರ ಭಾರತದಲ್ಲಿ ನಡೆಯುತ್ತಿರುವ "ಮರ್ಯಾದಾ ಹತ್ಯೆ" ಒಂದು ಕ್ಷಣ ಎಂಥವರನ್ನು ಬೆಚ್ಚಿ ಬಿಳಿಸುತ್ತಿದೆ. ದಿನ ನಿತ್ಯ ವಿವಿಧ ಊರುಗಳಲ್ಲಿ ಜೋಡಿಗಳ ಮಾರಣ ಹೋಮ ನಡೆಸುತ್ತಿದ್ದಾರೆ. ಈ ವಿಷಯ ಇಂದು ಸಮೋಹ ಮಾಧ್ಯಮಗಳಲ್ಲಿ ಮತ್ತು ಸರ್ಕಾರದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.

ಇದರ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಹಲವಾರು ಪಂಡಿತರು ಬುದ್ಧಿಜೀವಿಗಳು ತಮ್ಮ ವಿಮರ್ಶೆ ಮತ್ತು ಅನಿಸಿಕೆಗಳನ್ನು ಜನರ ಮುಂದೆ ಇಡುತ್ತಿದ್ದಾರೆ. ಅದು ಸರಿ! ನಮ್ಮ ಜನಗಳು ಪ್ರೇಮಿಸಿ, ಅನ್ಯ ಜಾತಿ ಮತ್ತು ಅನ್ಯ ಗೋತ್ರದವರನ್ನು ಮದುವೆಯಾದರೆ ಅವರನ್ನು ಮುಗಿಸು ಮಟ್ಟಕ್ಕೆ ಹೋಗುತ್ತಿರುವುದು ಇಂದಿನ ಸಮಾಜದಲ್ಲಿ ನಮ್ಮ ಮನುಷ್ಯತ್ವವನ್ನೇ ಪ್ರಶ್ನೆ ಮಾಡುವಂತಾಗಿದೆ.
ಈ ಜಾತಿ ಪದ್ಧತಿ ಎಂದು ಶುರವಾಯಿತೋ, ಕಟ್ಟಳೆಗಳನ್ನು ಯಾರು ಜಾರಿ ಮಾಡಿದರೋ, ಇದು ಈ ಶತಮಾನದ ಅಂಟು ಜಾಡ್ಯವಾಗಿ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಮ್ಮ ಸಮಾಜವನ್ನು ಕಾಡುತ್ತಿದೆ. ಒಂದೇ ಸೂರು ಎಂಬ ಭಾರತಮಾತೆಯ ಮಡಿಲಲ್ಲಿ ಜೀವಿಸುತ್ತಿರುವ ನಾವುಗಳೆಲ್ಲಾ ತುಂಬ ವೈಕ್ತಿಕವಾಗಿ ಈ "ಜಾತಿ" ಮಾತು ಬಂದಾಗ ತುಂಬ ಚಿಕ್ಕದಾಗಿ ಯೋಚಿಸಲು ತೊಡಗುತ್ತೇವೆ.

ಈ ರೀತಿಯ ಜಾತಿ ವಿಂಗಡಣೆ ನಮ್ಮ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದಿಂದ ಅರ್ಜಿ ಪಾರಂಗಳಲ್ಲಿ ಭರ್ತಿ ಮಾಡುವ ಮೂಲಕ ಪ್ರಾರಂಭಗೂಂಡು ನಾವು ಬೆಳೆಯುತ್ತಾ ಅದನ್ನು ಬೆಳೆಸುತ್ತಾ ಪುನಃ ನಮ್ಮ ಮಕ್ಕಳಿಗೆ ವರ್ಗಾವಣೆ ಮಾಡುತ್ತೇವೆ. ಯಾವ ರೀತಿಯಲ್ಲಿ ಉಚ್ಚರು, ನೀಚರು ಎಂದು ಕೇವಲ ವಿವಿಧ ಜಾತಿಗಳಲ್ಲಿ ಹುಟ್ಟಿದ ಕಾರಣದಿಂದ ನಿರ್ಧರಿಸಿ ಕೇವಲವಾಗಿ ಕಾಣುವುದು ವಿಪರ್ಯಾಸ. ಹಾಗೆಯೇ ಈ ಒಂದು ವ್ಯವಸ್ಥೆಯನ್ನು ನಮ್ಮ ರಾಜಕೀಯವಾಗಿ ನಾಯಕರುಗಳು ತಮ್ಮ ಓಟ್ ಬ್ಯಾಂಕ್ ಮಾಡಿಕೊಂಡು ಅದರ ಮೇಲೆ ತಮ್ಮ ಸವಾರಿ ಮಾಡುತ್ತಿರುವುದು ಇನ್ನೂ ಶೋಚನೀಯ. ಬಾಯಲ್ಲಿ ಮಾತ್ರ ಜಾತ್ಯಾತೀತತೆ ಎಂಬ ಬೊಗಳೆ ಬಿಡುವ ಇವರುಗಳು ತಮ್ಮ ಗೆಲುವಿಗಾಗಿ ಪುನಃ ಆ ಜಾತಿ ಈ ಜಾತಿ ಎಂಬ ಆಚರಣೆಯನ್ನು ಜೀವಂತವಾಗಿಟ್ಟು ತಮ್ಮ ಸಾಧನೆಯನ್ನು ಮೆರೆಯುತ್ತಾರೆ. ವಿವಿಧ ಜಾತಿಗೆ ವಿವಿಧ ರೀತಿಯ ನಾಯಕರುಗಳು, ಮಠ ಮಾನ್ಯಗಳು, ಶಿಕ್ಷಣ ಸಂಸ್ಥೆಗಳು, ಉದ್ಯೋಗಗಳು ಇತ್ಯಾದಿ ನಾನಾ ರೀತಿಯ ಸ್ಥಾವರಗಳನ್ನು ನಿರ್ಮಿಸಿ ಇಡೀ ಸಮುದಾಯವನ್ನು ಅದರಲ್ಲಿ ನರಳುವಂತೆ ಮಾಡುವವರು.

ಆದರೆ ಈ ನಮ್ಮ ಪ್ರಕೃತಿ ಹತ್ತು ಹಲವು ಉನ್ನತವಾದ ಮೌಲ್ಯಯುತವಾದ ಕೊಡುಗೆಗಳನ್ನು ದಯಪಾಲಿಸಿದೆ. ಮನುಷ್ಯ ತನ್ನ ಯೌವನಕ್ಕೆ ಕಾಲು ಇಟ್ಟಾಗ ತನಗಾಗಿ ಸಂಗಾತಿಯನ್ನು ಹುಡುಕುವ ವೇಳೆ "ಪ್ರೇಮ ಕುರುಡು" ಎಂಬಂತೆ ಈ ಮೇಲಿನ ಎಲ್ಲಾ ಜಾತಿಯ ಎಲ್ಲೆಗಳನ್ನು ಮೀರಿ, ತನ್ನವರು ರೂಪಿಸಿದ ಈ ಎಲ್ಲಾ ಕಟ್ಟುಪಾಡುಗಳನ್ನು ಜಾಡಿಸಿ ತನ್ನ ಜೀವನದ ಸಾಥಿಯನ್ನು ಆರಿಸಿಕೊಳ್ಳುವನು. ಆ ಸಮಯಕ್ಕೆ ಅವನಿಗೆ ಅದು ಯಾವುದೂ ಅವನ ಮನಸ್ಸಿಗೆ ಬರುವುದಿಲ್ಲ. ತಾನು ಅವನೊಡನೆ/ಅವಳೊಡನೆ ಮುಂದೆ ಚೆನ್ನಾಗಿ ಬಾಳಬಹುದು ಎಂದು ಅನಿಸಿದರೆ ಅದರಲ್ಲಿ ಮುಂದುವರಿಯುತ್ತಾರೆ ಅದಕ್ಕೆ ಹೇಳುವುದು ಅದನ್ನು "ಪ್ರೀತಿ" ಎಂದು.

ಪ್ರೀತಿಸಲ್ಪಟ್ಟವರು ಮುಂದೆ ಮದುವೆಯಾಗಲು ಪಡುವ ಪಾಡು ದೇವರಿಗೆ ಪ್ರೀತಿ. ತನ್ನ ಹೆತ್ತವರಿಂದ ಪ್ರಾರಂಭಿಸಿ ತನ್ನ ಸುತ್ತಲಿನ ನೆರೆಹೊರೆಯ ಸಮಾಜದವರಿಂದೆಲ್ಲಾ ಅಡ್ಡಿ ಆತಂಕಗಳನ್ನು ಅನುಭವಿಸಬೇಕಾಗುತ್ತದೆ.

ಈ ರೀತಿಯ ಆಡಚಣೆಗಳ ಮಧ್ಯೆ ಹಾಗೋ ಹೀಗೋ ಎರಡು ಕುಟುಂಬಗಳಿಂದ ಒಪ್ಪಿಗೆಯನ್ನು ಪಡೆದು ಮದುವೆಯಾದರೂ ತನ್ನ ಸುತ್ತಲಿನ ಸಂಬಂಧಿಕರು ಮತ್ತು ಸಮಾಜ ಆ ಜೋಡಿಗಳನ್ನು ದೊಡ್ಡ ವಿಲನ್ ಗಳಾಗಿ ಬಿಂಬಿಸುತ್ತಾರೆ. ಸಮಾಜ ಅದು ಎಂದು ಇವರುಗಳು ಮಾಡಿದ ಸಂಬಂಧ ಸರಿ ಎಂದು ಹೇಳುವುದಿಲ್ಲ. ಯಾಕೆಂದರೇ ಇದು ತೀರ ವಿಭಿನ್ನವಾಗಿ ಅವರುಗಳಿಗೆ ಕಾಣಿಸುತ್ತದೆ. ಕಾರಣ ಕೇವಲ "ಜಾತೀಕಾರಣ". ಈ ರೀತಿಯ ಕಷ್ಟ ಕಾರ್ಪಣ್ಯಗಳು, ವಿರೋಧಭಾಸಗಳು ನಮ್ಮ ಹಿಂದಿನ ವಚನಕಾರರ ದಿನಗಳಿಂದಲೂ ನಮ್ಮಲ್ಲಿ ಜೀವಂತವಾಗಿವೆ. ಈ ರೀತಿಯ ಭಾವನೆಗಳಿಗೆ ಹಲವಾರು ಕಾರಣಗಳು ಇರಬಹುದು. ಆದರೂ ಈ ರೀತಿಯ ಭಾವನೆಗಳ ಅಳಿವಿಗೆ ಮತ್ತು ನಾವುಗಳು ಯೋಚಿಸುವ ದಾಟಿಯ ಬದಲಾವಣೆಗೆಗೆ ಹಲವು ದಿನಗಳು ಹಿಡಿಯಬಹುದು ಮತ್ತು ಅದಕ್ಕೆ ಕಾಲವೇ ಉತ್ತರವಾಗಬಹುದು.

ಹಾಗೆಯೇ ನಾವುಗಳು ಸೂಕ್ಷ್ಮವಾಗಿ ಈ ವಿವಿಧ ಜಾತಿಗಳಲ್ಲಿರುವ ಹಲವು ದಿನಗಳಿಂದ ರೂಡಿಸಿಕೊಂಡು ಬಂದಿರುವ ಕುಟುಂಬದ ವಿವಿಧ ರೀತಿಯ ಸಂಸ್ಕೃತಿ ಮತ್ತು ಆಚರಣೆಗಳು ಏಕರೂಪವಾಗಿಲ್ಲದಿರುವುದು ಈ ರೀತಿಯ ವಿರೋಧಕ್ಕೆ ಮುಖ್ಯ ಕಾರಣವಾಗಿರಬಹುದು. ಮತ್ತು ಹೆತ್ತವರಿಗೆ ನಮ್ಮ ಮಕ್ಕಳು ಒಂದೇ ಕ್ಷಣ ಬೇರೊಂದು ಸಂಸ್ಕೃತಿ ಆಚರಣೆಯ, ಪದ್ಧತಿಯವರನ್ನು ವರಿಸಿದಾಗ ಅವರಿಗೆ ಅಘಾತವಾಗುವುದು ಸಹಜ. ಅಲ್ಲಿ ಈ ಸಂಸ್ಕೃತಿಗಳ- ರೀತಿ - ನೀತಿಗಳ ಹೊಂದಾಣಿಕೆಯ ಸಮಸ್ಯೆ ದೊಡ್ಡದಾಗಿ ಕಾಣಿಸಿ ಕಸಿವಿಸಿಯಾಗಬಹುದೇನೋ. ಮುಂದೆ ಹೀಗೆ ಬೇರೆ ಬೇರೆಯ ಕುಟುಂಬಗಳ ಹಿನ್ನೆಲೆಯನ್ನು ಹೊಂದಿರುವ ಹೆಣ್ಣು ಗಂಡುಗಳು ಯಾರ ಆಚರಣೆಯನ್ನು ಮತ್ತು ಸಂಸ್ಕೃತಿಯನ್ನು ಪಾಲಿಸಬೇಕು ಅಥವಾ ಬೇಡವೆ, ಅನ್ನಿಸಬಹುದು. ಇಲ್ಲು ಮತ್ತೆ ಅವರುಗಳು ನಮ್ಮದು ಮುಖ್ಯ ನಿಮ್ಮದು ಮುಖ್ಯ ಎಂಬ ರೀತಿಯಲ್ಲಿ ಕುಟುಂಬಗಳ ಮಧ್ಯೆ ಬಿನ್ನಬಿಪ್ರಾಯ ಬರಬಹುದು, ಹಾಗೆಯೇ ಈ ನವ ಜೋಡಿ ಯಾವುದಾದರೂ ಒಂದಕ್ಕೆ ಜೈ ಅನ್ನಬಹುದು. ಇದು ತಮಗೆ ಹುಟ್ಟಿದ ಮಕ್ಕಳವರೆಗೂ ಹೀಗೆ ದಂದ್ವ ಮುಂದುವರಿಯಬಹುದು.

ಇದು ಎಷ್ಟಾದರೂ ತಾನು ಹುಟ್ಟಿ ಬೆಳೆದ ತನ್ನತನದ ಕುಟುಂಬದ ಪದ್ಧತಿ,ಆಚರಣೆಯ ಬೇರಿಗೆ ತೀಲಾಂಜಲಿಯನ್ನು ಇಡಬೇಕಾದ ಸಂದರ್ಭ. ಆದರೆ ಆ ರೀತಿ ತಮ್ಮ ಮೂಲತನ, ಆಚರಣೆ, ಪದ್ಧತಿ, ಸಂಸ್ಕೃತಿಗಳನ್ನು ಆಷ್ಟೊಂದು ಸುಲಭವಾಗಿ ಬಿಡಲು ಆ ನವ ಜೋಡಿಗೆ ಎಷ್ಟರ ಮಟ್ಟಿಗೆ ಸಾಧ್ಯ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ