ಬುಧವಾರ, ಜುಲೈ 21, 2010

ಆಷಾಢದ ಮನ


ಒಂದು ತಿಂಗಳೂ ಆಷಾಢ ಹೊಸದಾಗಿ ಮದುವೆಯಾದ ಜೋಡಿಗಳಿಗೆ ಬೇರೆಯಾಗಿರಬೇಕಾದ ವಿರಹ. ಸಡಗರದಿಂದ ಮದುವೆಯಾಗಿ ಹೊಸ ಕ್ಷಣಗಳಿಗಾಗಿ ಕಾತುರತೆಯಿಂದ ಕಾದದ್ದು ಈ ಮಾಸಕ್ಕಾಗಿಯೇ ಎಂಬಂತೆ ತನ್ನ ಮನದನ್ನೆಯನ್ನು ತವರು ಮನೆಗೆ ಬಿಟ್ಟು ಬಂದು, ಪುನಃ ಹಳೆಯ ಬ್ಯಾಚಲರ್ ಲೈಪ್ ಎಂಬ ಜೀವನವನ್ನು ಕಳೆಯಬೇಕಾದ ಬೇಜಾರು. ಇದಕ್ಕೆ ಕೂಳ್ಳಿ ಇಡುವಂತೆ ಮೈ ಮನವನ್ನು ತಣ್ಣಾಗಿಸುವ ಚಳಿ. ಮನೆಯಲ್ಲಿ ಯಾವುದೇ ಸಡಗರವಿಲ್ಲದೆ ಮುಂಜಾನೆ ಎಷ್ಟು ಸಮಯದವರೆಗಾದರೂ ಮಲಗೋಣ ಎಂಬ ಸೋಮಾರಿತನ. ಯಾಕಾದರೂ ಈ ತಿಂಗಳು ಬರುತ್ತದೋ ಎಂಬ ಹುಸಿ ಮುನಿಸು. ಹಿರಿಯರ ಕಟ್ಟಾಪ್ಪಣೆ "ಏನಿದ್ದರೂ ಒಂದು ತಿಂಗಳು ಆದ ಮೇಲೆ" ಎಂಬ ಮಾತು. ಅವರುಗಳಿಗೆ ಖುಷಿ ಇಲ್ಲಿ ಇವನ/ಇವಳ ಮನದಲ್ಲಿ ಸುಮ್ಮನೆಯ ಸಣ್ಣ ನೋವು.






ಆಫೀಸ್ ಗೆ ಹೋದರೆ ಎಲ್ಲರ ಆಶ್ಚರ್ಯಕರ ನೋಟ. "ಇಷ್ಟು ಬೇಗ ಹೇಗೆ ನಿನ್ನ ಮದುವೆಯ ಎಲ್ಲಾ ಸಡಗರ ಮುಗಿದು ಹೋಯ್ತಾ?" ಎಂಬ ಮಾತು. "ಹನಿಮೊನ್ ಇಲ್ವ? ಇಷ್ಟು ಬೇಗ ವಾಪಸ್ಸ ಬಂದು ಬಿಟ್ಯಾ?" "ಇಷ್ಟು ಬೇಗ ಹೆಂಡ್ತಿ ಬೋರ್ ಆದಳಾ" ಎಂಬ ಪ್ರಶ್ನೇ. ಅವರಿಗೇನೂ ಗೊತ್ತು ಇವಳ/ಇವನ ತಳಮಳ, ಮನದಲ್ಲಿಯೇ ಕನಸು. ಹೀಗೆ ಹೊಸದಾಗಿ ಮದುವೆಯಾದ ಯುವತಿ/ಯುವಕರು ಈ ಒಂದು ತಿಂಗಳು ಅನುಭವಿಸುವ ಕಷ್ಟ ನಷ್ಟಗಳು ಯಾರಿಗೂ ಬೇಡಾ ಅನಿಸುವುದಿಲ್ಲವಾ? ನನಗೆ ಗೊತ್ತಿಲ್ಲಾ. ನಿಮಗೇ?


ಅದರೂ ಈ ಒಂದು ತಿಂಗಳು ಪ್ರಕೃತಿ ಒಂದು ಕ್ಷಣ ಬಿರು ಬೇಸಿಗೆಯ ಬೆವರು ಹನಿಗಳಿಗೆ ತಂಪು ತರುವಂತೆ ಎಲ್ಲೇ ಮೀರಿ ಕಾವುಗೊಂಡ ಮನಸುಗಳಿಗೆ ಪನ್ನೀರನ್ನು ಚೆಲ್ಲುವಂತೆ ಮಾಡಿ ಹಾಯ್ ಎನಿಸುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಈ ಒಂದು ತಿಂಗಳು ಹೊಸ ಅನುಭವವನ್ನು ಕೊಡುತ್ತದೆ.


ಪ್ರಕೃತಿ ತನ್ನ ಋತು ಚಕ್ರದಲ್ಲಿ ಯಾವುದನ್ನು ಚಾಚೂ ತಪ್ಪದೇ ಸಮಯಕ್ಕೆ ತಕ್ಕ ಹಾಗೇ ತನ್ನ ತನವನ್ನು ತನ್ನ ಜೀವನ ಮರ್ಮವನ್ನು ತೋರಿಸುತ್ತಾ ಸಾಗುತ್ತದೆ. ಅದಕ್ಕೆ ತಕ್ಕ ಹಾಗೇ ನಾವುಗಳು ಹೆಜ್ಜೆ ಹಾಕಬೇಕಾದದ್ದು ನಮ್ಮ ಕರ್ತವ್ಯ ಅಷ್ಟೇ.
ಬೆಚ್ಚಗೆ ಹಾಸಿಗೆಯ ಮೇಲೆ ಮಲಗಲು ಮುಂಜಾನೆಯನ್ನು ಕಳೆದು ಮದ್ಯಾನದವರೆಗೂ ನಿದ್ದೆಯ ಸವಿಯನ್ನು ಸವಿಯಲು ಸೊರ್ಯದೇವನ ಯಾವುದೇ ಅಡ್ಡಿ ಆಡಚಣೆಗಳು ಇರುವುದಿಲ್ಲ. ಯಾಕೆಂದರೆ ಅವನು ಸಹ ತನ್ನ ಸವಿ ನಿದ್ದೆಯ ಮಂಪರಿನಲ್ಲಿ ಜಗತ್ತನ್ನು ನೋಡುತ್ತಾ, ತನ್ನ ಕಾರ್ಯವನ್ನು ಮಾಡಬೇಕಲ್ಲಾ ಎಂಬಂತೆ ಕಪ್ಪು ಮೊಡಗಳ ಮರೆಯಲ್ಲಿ ಕಣ್ಣ ಮುಚ್ಚಾಲೆಯಾಡುತ್ತಾ ನಮಗೆಲ್ಲಾ ಸಹಕರಿಸುತ್ತಾನೆ.


ಈ ವಾತವರಣಕ್ಕೆ ಸ್ವಲ್ಪ ಮೆರಗನ್ನು ನೀಡೋಣವೇನೋ ಎಂಬಂತೆ ಅಲ್ಲಿ ಇಲ್ಲಿ ಇರುವ ಚಿಕ್ಕ ಚಿಕ್ಕ ಮೊಡಗಳು ಕರಗಿ ತುಂತುರು ಮಳೆಯ ಆಟವನ್ನಾಡುತ್ತಾವೆ. ನಿಜವಾಗಿಯೊ ಎನ್-ಜಾಯ್ ಮಾಡಲು ಇದಿಷ್ಟು ಸಾಕು ಎನಿಸುತ್ತದೆ. ಎನಾದರೂ ಸರಿ ಸ್ಪಲ್ಪ ಹಾಟ್ , ಬಿಸಿ ಬಿಸಿ ಇದ್ದರೆ ಸಾಕು ಅನ್ನುತ್ತಾ ಯಾವಗಲೂ ಬಾಯಿಯನ್ನು ಆಡಿಸುತ್ತಿರೋಣ ಎಂದು ಚುರುಕು ಮುರುಕು ತಿನ್ನುವುದು.
ಈ ಒಂದು ತಿಂಗಳು ಯಾವುದೇ ರೀತಿಯ ಹಬ್ಬ ಹರಿ ದಿನಗಳು ಇಲ್ಲದೇ ಯಾವುದೇ ಒಂದು ಕಾರ್ಯ ಕೆಲಸಗಳಿಗೂ ಒಂದು ತಿಂಗಳ ಚಿಕ್ಕದಾದ ಬ್ರೇಕ್.

ಆದರೂ ನಮ್ಮ ಹಳ್ಳಿಗಳ ಜನ ಬಹಳ ಬುದ್ಧಿವಂತರು ಕಣ್ರೀ! ಅವರು ಎಲ್ಲಾ ತಿಂಗಳಲ್ಲೂ ಒಂದು ಒಂದು ರೀತಿಯಲ್ಲಿ ಒಂದು ಹಬ್ಬ ಆಚರಣೆಗಳನ್ನು ಪ್ರತಿ ಮಾಸದಲ್ಲೂ ಜಾರಿಯಲ್ಲಿ ಇಟ್ಟು ಕೊಂಡಿರುತ್ತಾರೆ. ಹಾಗೆಯೇ ಈ ಆಷಾಡದ ಮಾಸದಲ್ಲೂ ಒಂದು ಹಬ್ಬವನ್ನು ಆಚರಿಸುತ್ತಾರೆ ಅದೆಂದರೇ "ಏಕಾದಸಿ". ಇಲ್ಲಿ ನಮ್ಮ ಪೇಟೆಯ ಜನಗಳಿಗೆ ಏಕಾದಸಿ ಅಂದರೇ ಉಪವಾಸ. ಆದರೆ ಅಲ್ಲಿ ಈ ತಿಂಗಳಲ್ಲಿ ಏಕಾದಸಿಯ ಹಬ್ಬದಲ್ಲಿ ಹುರಿ ಹಿಟ್ಟಿನಿಂದ ಮಾಡಿದ ಉಂಡೆಗಳ ಭಾರಿ ಬೋಜನ. ಆ ಉಂಡೆಗಳನ್ನು ಹೊಡೆಯಲು ಈ ತಿಂಗಳು ಹೇಳಿ ಮಾಡಿಸಿದ ತಿಂಗಳು. ಈ ಚಳಿಯಲ್ಲಿ ಅವುಗಳನ್ನು ತಿನ್ನುವುದೇ ಒಂದು ಖುಷಿಯ ವಿಚಾರ. ಏಕೆಂದರೆ ಅವುಗಳನ್ನು ಅಷ್ಟೊಂದು ಗಟ್ಟಿಯಾಗಿ ಬಾಯಿಂದ ಮುರಿಯಲು ಸಾಧ್ಯವಾಗುವುದಿಲ್ಲವೇನೋ ಎಂಬ ರೀತಿಯಲ್ಲಿ ಬೆಲ್ಲದ ಪಾಕದಿಂದ ಹದವರಿತು ತಯಾರಿಸುತ್ತಾರೆ. ಈ ವಿವರಣೆಯನ್ನು ಕೇಳಿ ಬಾಯಲ್ಲಿ ನೀರು ಬಂದಿತೇ? ಹಾಗದರೆ ಮರಳಿ ಹಳ್ಳಿಯ ಕಡೆ ಒಮ್ಮೆ ಬನ್ನಿ.


ಈ ರೀತಿಯ ವಿವಿಧ ಮಹತ್ವವನ್ನು ಹೊಂದಿರುವ ಈ ಮಾಸದಲ್ಲಿ, ಪ್ರಚಲಿತವಾಗಿ ಈಗಿನ ರಾಜಕೀಯ ದಿನ ಮಾನಗಳಲ್ಲಿ ಬೆಂಗಳೂರಲ್ಲಿ ಸಣ್ಣದಾಗಿ ನಮ್ಮ ಜನಪ್ರತಿನಿಧಿಗಳು ತಮ್ಮ ತಮ್ಮಲ್ಲಿಯೇ ತಲ್ಲಣಗೊಂಡಿದ್ದಾರೆ. ಗಣಿ ದಣಿಗಳು, ಗಣಿ ಹಗರಣಗಳು, ಅವುಗಳನ್ನು ಧೂಳು ಧೊಳ್ ಮಾಡೋಣ ಎಂಬಂತೆ ಪ್ರತಿಪಕ್ಷದವರು ಬೆಂಗಳೂರ್ ಟು ಬಳ್ಳಾರಿ ಪಾದಯಾತ್ರೆಯನ್ನು ಈ ಚುಮು ಚುಮು ಚಳಿಯಲ್ಲಿ ಹಾಕಿಕೊಂಡಿರುವುದು ಆರೋಗ್ಯಕರ. ಪ್ರಕೃತಿಯೇ (?) ಅವರ ಮನಸ್ಸಿಗೆ ಪ್ರೇರಣೆಯನ್ನು ಕೊಟ್ಟಿರುವಂತೆ ಇದೆ. ಅವರುಗಳು ಸಹ ಸಕತ್ತಾಗಿ ಸಂಭ್ರಮಿಸಿಕೊಳ್ಳಬಹುದು.


ಈ ರೀತಿಯ ಚಿಕ್ಕ ಚಿಕ್ಕ ಸಂತೋಷಗಳೇ ಜನ ಸಾಮಾನ್ಯರಿಗೆ ಪ್ರಕೃತಿಯಿಂದ ದೊರೆಯುವ ಚಿನ್ನದ ದಿನಗಳು. ಅದನ್ನು ನೋಡುವ ಮತ್ತು ಅದರ ಜೊತೆ ಸೇರಿ ಅನುಭವಿಸುವ ಮನಸ್ಸು ಮಾತ್ರ ನಮಗೆ ಬೇಕಾದಾದ್ದು. ಋತುಮಾನಗಳು ಯಾವ ರೀತಿಯಲ್ಲೂ ಬದಲಾವಣೆಯಾಗುವುದಿಲ್ಲ. ನಾವುಗಳು ಮಾತ್ರ ಬದಲಾಗಬಹುದು ಅಷ್ಟೇ. ಆದರೂ ಮನುಷ್ಯನ ಅತಿಯಾದ ದುರಾಸೆಯ ಫಲದಿಂದ ಈ ರೀತಿಯ ಉನ್ನತವಾದ ಪ್ರಕೃತಿಯ ಕೊಡುಗೆಗಳಿಗೆ ಧಕ್ಕೆ ತರುತ್ತಿರುವುದು ನಿಲ್ಲಬೇಕು. ಪರಿಸರ ಪ್ರೀತಿ ಇರಬೇಕು. ಅವುಗಳು ಯಾವ ಯಾವ ರೀತಿಯಲ್ಲಿ ಇರುವುದೂ ಆ ರೀತಿಯಲ್ಲಿಯೇ ನಾವುಗಳು ಅರ್ಪಿಸಿಕೊಳ್ಳಬೇಕು. ಆಗ ಮಾತ್ರ ನಾವುಗಳು ನಮ್ಮ ಸುತ್ತಲೂ ಇರುವ ಎಲ್ಲಾರೂ ಒಂದಾಗಿ ನಮ್ಮ ಪರಿಸರದಲ್ಲಿ ಒಂದಾಗಬಹುದು. ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ