ಶುಕ್ರವಾರ, ಜೂನ್ 11, 2010

ಹೀಗೊಂದು ಅಳಿಲು ಸೇವೆಯಲ್ಲಿ

ಹಲವು ವರ್ಷಗಳ ನಂತರ ಪುನಃ ನನ್ನ ಬಾಲ್ಯದ ೧ ರಿಂದ ೭ ನೇ ತರಗತಿಯ ಪಾಠ ಶಾಲಾ ದಿನಗಳ ನೆನಪುಗಳ ಸರಮಾಲೆ ಮನದಲ್ಲಿ ಮೂಡುವಂತಾಗಿದ್ದು ಕಳೆದ ಎರಡು ದಿನಗಳಲ್ಲಿ. ಅದೇ ಮುಗ್ಧ ಪ್ರಪುಲ ಮುಖವನ್ನು ಮಾಡಿಕೊಂಡು ಮೇಸ್ಟರ್ ಗಳಿಗೆ ಹೆದುರುತ್ತಾ, ಅದು ಇದು ಓದುತ್ತಾ- ಬರಿಯುತ್ತಾ, ತುಂಟಾಟವಾಡುತ್ತಾ, ಅವರಿಂದ ಇವರಿಂದ ಚೇಡಿಸಿಕೊಳ್ಳುತ್ತಾ, ಬೇರೆಯವರಿಗೆ ಗೋಳು ಹೊಯ್ಯುಕೊಳ್ಳೂತ್ತಾ, ಮಾತು ಮಾತು ಬರೀ ಮಾತಾಡುತ್ತಾ, ಯಾವಾಗ ಶಾಲೆಯ ಘಂಟೆ ಬಾರಿಸುವುದೋ, ಯಾವಾಗ ಆಟವಾಡಲು ಫಿ.ಟಿ ಪೀರಿಯಡ ಬರುವುದೋ ಎಂದು ಕಾತರದಿಂದ ಕಾಯುತ್ತಿರುವ ದಿನಗಳ ಮೆಲುಕು ಹಾಗೆಯೇ ಸುಮ್ಮನೇ ಹಾದು ಹೋಯಿತು.


ಈ ರೀತಿಯ ಜೀವನದ ಚಿನ್ನದ ದಿನಗಳ ಪುನರ್ ಮಿಲನಕ್ಕೆ ಕಾರಣವಾಗಿದ್ದು, ನಮ್ಮ ಸಂಸ್ಥೆಯಾದ ಐ ಗೇಟ್ ನ - ಐ ಕೇರ್ ವಿಭಾಗದ "ಅಕ್ಷರಾ" ಬಡ ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಬೃಹತ್ ಕಾರ್ಯಕ್ರಮದಿಂದ. ಇದು ಒಂದು ಬಹು ಉಪಯೋಗದ ಸಾಮಾಜಿಕ ಕಾರ್ಯಕ್ರಮ. ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳು ಓದುತ್ತಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ತಾವೇ ಕೈಯಾರೇ ಪ್ರತಿಯೊಂದು ಮಗುವಿಗೂ ಬರವಣಿಕೆಗೆ ಬೇಕಾಗುವಂತ ಪುಸ್ತಕ ಸಲಕರಣೆಗಳನ್ನು ವಿತರಿಸುವ ಯೋಜನೆಯಾಗಿದೆ.


ಈ ಕಾರ್ಯಕ್ರಮ ಐ ಗೇಟ್ ವತಿಯಿಂದ ಸತತ ಮೂರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಹಿಂದಿನ ವರ್ಷ ೧೮ ಸಾವಿರ ಬಡ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವು ತಲುಪಿತು. ಈ ವರ್ಷ ಸಂಸ್ಥೆಯ ತನ್ನ ಸುತ್ತ ಮುತ್ತಲಿನ ವೈಟ್ ಪೀಲ್ಡ್ ಹಾಸು ಪಾಸಿನಲ್ಲಿರುವ ಹೂರ ವಲಯದಲ್ಲಿ ಬರುವ ವಿವಿಧ ಹಳ್ಳಿಗಾಡಿನ ೧೦೭ ಸರ್ಕಾರಿ ಶಾಲೆಗಳಿಗೆ ಮತ್ತು ಒಟ್ಟು ಸುಮಾರು ೪೨ ಸಾವಿರ ವಿದ್ಯಾರ್ಥಿಗಳಿಗೆ ಬರವಣಿಗೆ ಸಲಕರಣೆಗಳನ್ನು ಈ ಕಾರ್ಯಕ್ರಮದ ಮೂಲಕ ತಲುಪಿಸಲು ನಿರ್ಧರಿಸಲಾಗಿದೆ.


ಈ ಕಾರ್ಯಕ್ರಮ ಕಳೆದ ಜೂನ್ ೯ ರಿಂದ ಪ್ರಾರಂಭಗೂಂಡು ಜುಲೈ ೯ ರವರೆಗೆ ಸುಮಾರು ಒಂದು ತಿಂಗಳ ಕಾಲ ಬೆಳಿಗ್ಗೆ ೯.೩೦ ರಿಂದ ಅಪರಾಹ್ನ ೧.೩೦ರವರೆಗೆ ವಿವಿಧ ಪ್ರದೇಶಗಳಲ್ಲಿ ನಿತ್ಯ ಜರುಗುತ್ತದೆ.


ಈ ಕಾರ್ಯಕ್ರಮದ ಯಶಸ್ಸಿಗೆ ಸ್ವಯಂ ಪ್ರೇರಿತರಾಗಿ ಕಂಪನಿಯಲ್ಲಿ ಕೆಲಸ ಮಾಡುವ ಯಾರಾದರೂ ತಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡಬಹುದಾಗಿದೆ. ತಮ್ಮ ಬಾಲ್ಯದ ದಿನಗಳನ್ನು ಆ ಮೂಲಕ ನೆನಪು ಮಾಡಿಕೊಳ್ಳಲು ಮತ್ತು ಮುಗ್ಧ ಹೃದಯಗಳ ನೈಜ ಮುಖದ ನಗುವನ್ನು ಕಂಡು ಧನ್ಯರಾಗುವ ಸದಾವಕಾಶ ನಮ್ಮದಾಗುತ್ತಿದೆ. ಈ ಒಂದು ಚಿಕ್ಕ ಸಮಯದಲ್ಲಿ ಮಕ್ಕಳೂಡನೆ ಬೆರತು ತಮ್ಮ ಹೃದಯ ತನು ಮನವನ್ನು ಹಗುರಾಗಿ ಮಾಡಿಕೊಂಡು ಬೆರಗುಗೊಂಡಂತಾಗುತ್ತದೆ.


ಇದೊಂದು ಸುವರ್ಣಾವಕಾಶ, ಮತ್ತೋಮ್ಮೆ ತಮ್ಮ ಬಾಲ್ಯದ ದಿನಗಳನ್ನು ಚಿಕ್ಕ ಮಕ್ಕಳ ಮೂಲಕ ನೋಡಬಹುದು. ಹಾಗೆಯೇ ಸರ್ಕಾರಿ ಶಾಲೆಗಳೆಂದರೇ ಹೇಗೆ ಇರುತ್ತವೆ, ಯಾವ ರೀತಿಯ ಮೂಲಬೌತ ಸೌಕರ್ಯಗಳನ್ನು ಅವುಗಳು ಹೊಂದಿರುತ್ತವೆ ಮತ್ತು ಅವುಗಳನ್ನು ಹೇಗೆ ಯಾವ ರೀತಿಯಲ್ಲಿ ಉತ್ತಮಪಡಿಸಲು ತಮ್ಮ ಕೈಯಿಂದ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಚಿಂತಿಸಲು ಸದವಕಾಶವಾಗುತ್ತದೆ. ಹಾಗೆಯೇ ಇರುವ ಆ ಅತಿ ಕಡಿಮೆ ಸೌಲಭ್ಯದಲ್ಲಿ ತಮ್ಮ ನೈಜವಾದ ಪ್ರಚಂಡ ಬುದ್ಧಿವಂತಿಕೆ ಮತ್ತು ಜಾಣ್ಮೆಯಿಂದ ಆ ಮಕ್ಕಳು ತಮ್ಮ ಬಡತನವನ್ನು ಮತ್ತು ತಮ್ಮ ಕಷ್ಟದ ದಿನಗಳನ್ನು ಮರೆಯುವಂತೆ ಓದುತ್ತಿರುವ ಗಳಿಗೆಗಳನ್ನು ಕಂಡು ಅಶ್ಚರ್ಯಪಡಲುಬಹುದು. ಹೀಗೆ ತನ್ನ ಚಿತ್ತದಂತೆ ಹತ್ತು ಹಲವಾರು ವಿಚಾರ ತರಂಗಗಳನ್ನು ತಾನು ಪಡೆದುಕೊಳ್ಳಬಹುದು.






ಹಲವಾರು ಐ.ಟಿ ಸಂಸ್ಥೆಗಳು ಸಮಾಜ ಮುಖಿಯಾಗಿ ಈ ರೀತಿಯಾಗಿ ಸಮಾಜದ ಏಳ್ಗೆಗಾಗಿ ತನ್ನ ಸಂಪತ್ತಿನ ಸ್ವಲ್ಪ ಭಾಗವನ್ನು ಈ ರೀತಿ ವಿನಿಯೋಗಿಸುತ್ತಿರುವುದು ಎಲ್ಲಾರಿಗೂ ಆದರ್ಶಪ್ರಾಯವಾದ ನಡವಾಳಿಯಾಗಿದೆ.


ದಿನ ನಿತ್ಯ ತಮ್ಮದೇಯಾದ ದುಡಿಮೆಯ ಯಾಂತ್ರಿಕ ಬದುಕಿಗೆ ಚಿಕ್ಕದಾದ ಬ್ರೇಕ್ ಹಾಕಿ ಇಂಥ ಬದಲಾವಣೆಯ ಚಟುವಟಿಕೆಗಳಿಗೆ ಸಾಪ್ಟವೇರ್ ತರುಣ/ತರುಣಿಯರು ಭಾಗಿಯಾಗುತ್ತಿರುವುದು ಆಶಾದಾಯಾಕ ಸಂಗತಿಯೇ ಸರಿ.


ನಾವುಗಳು ಕೇವಲ ಹೈ ಪೈ, ಮಲ್ಟಿಪ್ಲೇಕ್ಸ್ ಜಗತ್ತಿನ ಕೂಸುಗಳಲ್ಲಾ ಎಂಬುದನ್ನು ನಿರೂಪಿಸುವ ಸುಸಮಯ ಇದಾಗಿದೆ. ಮತ್ತು ಹಳ್ಳಿಯವರಿಂದ ಬಾಯ್ ತುಂಬ ಹೋಗಳಿಕೆಯ ಮಾತುಗಳನ್ನು ಕೇಳುವಂತೆ ಮಾಡಿ, ನಮ್ಮ ಜೀವನದಲ್ಲಿ ಚಿರಸ್ಥಾಯಿಯಾಗಿ ನೆನಪಿನಲ್ಲಿ ಉಳಿಯುವಂತೆ ರೂಪಿಸಿ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕ್ಕೂಳ್ಳುವ ನನ್ನ ಕಂಪನಿಯು ಸೇರಿದಂತೆ ಎಲ್ಲಾ ಸೇವ ಮನೋಭಾವ ಹೊಂದಿರುವ ಕಟ್ಟ ಕಡೆಯ ಸಂಸ್ಥೆಗಳಿಗೆಲ್ಲಾ ನನ್ನ ವಂದನೆಗಳು.


ನಮ್ಮ ಬಾಲ್ಯದ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒಂದು ಕನಸು ಇದ್ದೇ ಇರುತ್ತಾದೆ. ಅದು ಯಾವುದೇಂದರೇ ನಾನು ನನ್ನ ಕೈಲಾದ ಸಹಾಯವನ್ನು ಬಡ ಜನರಿಗೆ, ಬಡ ಮಕ್ಕಳಿಗೆ ಅವರು ನಲಿಯುವಂತೆ ಏನಾದರೂ ಸಹಾಯವನ್ನು ನಾನು ದೊಡ್ಡವನಾದ ಮೇಲೆ, ನಾನೇ ಸ್ವಂತ ಕಾಲ ಮೇಲೆ ನಿಂತಾಗ, ನನ್ನ ಬಳಿ ಸಂಪತ್ತು ಬಂದಾಗ ಹೀಗೆ ಹೀಗೆ ನಾನು ಸಮಾಜಕ್ಕೆ ಕೊಡುಗೆಗಳನ್ನು ನೀಡಬೇಕು ಎಂದು. ಇದು ಸಹಜವಾದ ಮುಗ್ಧ ಕನಸು ಅದಕ್ಕೆ ತಾನೇ ನಾವುಗಳೆಲ್ಲಾ ಮನುಷ್ಯರು. ಪ್ರತಿಯೊಬ್ಬ ಮನುಷ್ಯನಿಗೂ ಈ ರೀತಿಯ ಮಾನವೀಯತೆಯ ಒಂದು ಕನಸಿನ ಸುಳಿ ಹೇಗಾದರೂ ಬಂದಿರಲೇಬೇಕು ಅಲ್ಲವಾ? ನೆನಪಿಸಿಕೊಳ್ಳಿ.


ಆದರೆ ಮನುಷ್ಯ ತಾನು ಬೆಳೆದಂತೆ ತನ್ನ ಯೋಚನೆಗಳು ಲೆಕ್ಕಚಾರಗಳು ಹೆಚ್ಚಾದಂತೆ, ಈ ರೀತಿಯ ತುಡಿತವನ್ನು ಮರೆತು ಬಿಟ್ಟು ಬಿಡುತ್ತಾನೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು, ಸಮಯದ ಅಭಾವ, ಹಣದ ಅಡಚಣೆ, ಸಮಾಜ ಏನು ಅನ್ನಬಹುದು ಇತ್ಯಾದಿ ಹತ್ತು ಹಲವಾರು ಕಾರಣಗಳು. ಮತ್ತು ತಾನು ಒಬ್ಬ ಸಹಾಯ ಮಾಡಿದರೇ ಜಗತ್ತು ಎಲ್ಲಾ ಸರಿಯಾಗಿಬಿಡುತ್ತದಾ... ಹೀಗೆ ತನ್ನಲ್ಲಿ ತಾನು ತನ್ನ ಚಿಕ್ಕ ವಯಸ್ಸಿನಲ್ಲಿ ಹುಟ್ಟಿದ ಆ ದೊಡ್ಡ ಕನಸು ಹಾಗೆಯೇ ಉಳಿದು ಬಿಡುತ್ತದೆ. ಕೆಲವರು ಅದನ್ನು ಹೇಗೂ ಹಿಡೇರಿಸಿಕೊಳ್ಳುತ್ತಾರೆ ಮತ್ತೆ ಕೆಲವರು ಈ ಮೇಲೆ ಹೇಳಿದಂತಹ ಸಂಸ್ಥೆಗಳ ವತಿಯಿಂದ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.


ಅದರೇ ಒಂದು ಮಾತು ಮಾತ್ರ ಸತ್ಯ, ಮನುಷ್ಯ ಎಂದ ಮೇಲೆ ಪರಸ್ಪರ ಒಬ್ಬೂಬ್ಬರಿಗೆ ಸಹಾಯಕನಾಗಿರಬೇಕು. ಅದೇ ಮನುಷ್ಯತ್ವ. ಯಾರು ಎಲ್ಲಾವನ್ನು ಪಡೆದಿರುವುದಿಲ್ಲ. ನಮ್ಮಲ್ಲಿ ಇಲ್ಲದ್ದು ಇನ್ನೂಬ್ಬರಲ್ಲಿರುತ್ತದೆ. ಇನ್ನೊಬ್ಬರಲ್ಲಿ ಇಲ್ಲದ್ದು ನಮ್ಮಲ್ಲಿರುತ್ತದೆ. ಇದರ ಸಮತೋಲನವನ್ನು ಪರಿಸರದೊಡಗೊಡಿ ನಾವುಗಳು ಮಾಡಿದರೇ ಅದೇ ಸುಖಿ ಸಮಾಜವಾಗುವುದು.
ಹೌದು! ಇಂದು ನಾವುಗಳು ಕೇವಲ ನಮಗಾಗಿ ನಮ್ಮವರಿಗಾಗಿ ದುಡಿಯುವುದು ಮಾಮೂಲು. ಅದು ನಿಜವು ಹೌದು. ಆದರೆ ನಾವು ಹುಟ್ಟಿ ಬೆಳದು ಬಂದಂತಹ ನಮ್ಮ ದೂರದ ಹಳ್ಳಿಗಾಡಿನ ಜೀವನವನ್ನು ನೆನಪಿಸಿಕೊಳ್ಳಬೇಕು. ನಮ್ಮಲ್ಲಿರುವ ಚಿಕ್ಕ ಮೂತ್ತವನ್ನು ಹಳ್ಳಿಗಳಲ್ಲಿ ಓದುತ್ತಿರುವ ಮಕ್ಕಳುಗಳಿಗೆ ಸಹಾಯಕವಾಗುವಂತೆ ಏನಾದರೂ ಮಾಡಬಹುದಲ್ಲಾ. ಈ ರೀತಿಯ ಯೋಚನೆಯನ್ನು ಇಂಥ ಕಾರ್ಯಕ್ರಮಗಳು ಮೂಡಿಸುವವು.

ಈ ರೀತಿ ಪ್ರತಿಯೊಬ್ಬರೂ ಯೋಚಿಸಿದರೆ ಪ್ರತಿಯೊಂದು ಕುಗ್ರಾಮವು ಶೈಕ್ಷಣಿಕವಾಗಿ ಮುಂದುವರಿಯಲು ಆರ್ಥಿಕ ನೆರವು ನೀಡಿದಂತಾಗುತ್ತದೆ. ಸರ್ಕಾರದ ಯೋಜನೆಗಳಿಗೆ ಮಾತ್ರ ಕಾಯುವುದು ನಿಲ್ಲಿಸಬಹುದು.ಆ ಮೂಲಕ ಭದ್ರ ಸಮಾಜವನ್ನು ಕಟ್ಟಿದಂತಾಗುತ್ತದೆ.


ನಾನು ಈ ಹಿಂದಿನ ಲೇಖನದಲ್ಲಿ ಹೇಳಿದಂತಹ ಶಿಕ್ಷಣ ಸಂಸ್ಥೆಗಳೇ ಎಲ್ಲೂ ಇರುವುದಿಲ್ಲ. ಏನು ಅರಿಯದ ಮಕ್ಕಳ ವಿದ್ಯಭ್ಯಾಸಕ್ಕೆ ಈ ರೀತಿಯ ಅಳಿಲು ಸೇವೆಯನ್ನು ಪ್ರತಿಯೊಬ್ಬ ದುಡಿಯುವ ವ್ಯಕ್ತಿಯು ತನ್ನ ದುಡಿಮೆಯ ಒಂದೀಷ್ಟು ಪಾಲನ್ನು ತಾನು ಹುಟ್ಟಿ ಬೆಳೆದ ತನ್ನ ಊರಿನ ಒಂದು ಶಾಲೆಯ ಒಂದೀಷ್ಟು ಬಡ ಮಕ್ಕಳಿಗೆ ಓದುವ ಸಲಕರಣೆಗಳನ್ನು ಪಡೆಯಲು ಸಹಕಾರಿಯಾಗಬಹುದು ಅಲ್ಲವಾ? ಇದಕ್ಕೆ ಯಾವುದೇ ರೀತಿಯ ಸಂಘ ಸಂಸ್ಥೆಗಳನ್ನು ಸ್ಥಾಪಿಸುವ ಸ್ಥಾವರಗಳ ಕನಸು ಬೇಡ.


ಈ ರೀತಿಯ ಕೊಟ್ಟು ಕೊಳ್ಳುವ ಸಂತೋಷದ ಮನೋಭಾವ ಕಿರು ಝರಿಯಾಗಿ ಒಂದು ಪೀಳಿಗೆಯಿಂದ ಮತ್ತೋಂದು ಪೀಳಿಗೆಗೆ ನಿರಂತರವಾಗಿ ಹರಿಯುವಂತಾದರೇ ಗ್ರಾಮೀಣ ಸ್ವರಾಜ್ಯದ ಕನಸು ನನಸಾದಂತೆ ಅಲ್ಲಾವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ