ಬುಧವಾರ, ಮಾರ್ಚ್ 30, 2016

ಜೀವನದ ಅರ್ಧ ಮೈಲೇಜು

ಬದುಕಿನ ಸಾರ್ಥಕತೆಯ ಬಗ್ಗೆ ಪ್ರತಿಯೊಬ್ಬರೂ ತಮ್ಮಲ್ಲಿಯೆ ಒಮ್ಮೆಯಾದರು ಯೋಚಿಸಿರುತ್ತಾರೆ.

ಹುಟ್ಟಿನಂದಿನಿಂದ ಬಾಲ್ಯ, ಯೌವನ, ಮದ್ಯ ವಯಸ್ಸು, ಮುಪ್ಪು ಹೀಗೆ ವಿಭಿನ್ನ ಕಾಲಘಟ್ಟವನ್ನು ಕ್ರಮಿಸುವ ದಾರಿಯಲ್ಲಿ ಯಾವುದಾದರೂಂದು ಘಟ್ಟದಲ್ಲಿ ತನ್ನನ್ನು ತಾನು ಪರಮರ್ಶಿಸಿಕೊಂಡೆ ಕೊಂಡಿರುತ್ತಾನೆ.

ಯಾಕೆಂದರೇ ಬದುಕು ತನ್ನ ವಯಸ್ಸು ಪೂರ್ತಿ ಬರಾಬರಿ ಅನುಭವಗಳ ಮೊತ್ತವನ್ನೆ ಕೊಟ್ಟಿರುತ್ತದೆ. ಈ ಬದುಕು ಯಾವುದೇ ಪ್ರೀ ಪ್ಲ್ಯಾನ್ ಪ್ರೋಗ್ರಾಂ ಅಲ್ಲವಲ್ಲ. ಪ್ರತಿಯೊಂದು ಒಂದಲ್ಲ ಒಂದು ಹೊಸ ಅನುಭವವೇ ಆಗಿರುತ್ತದೆ.

ತಾನು ನೋಡಿ, ಕಲಿತ , ಕೇಳಿದ ಸತ್ವಗಳ ಪರೀಕ್ಷೆಯಾಗಿರುತ್ತದೆ.

ಜೀವನ ಒಮ್ಮೊಮ್ಮೆ ಸುಖ, ಸಂತೋಷಮಯವಾಗಿದ್ದರೆ, ಒಮ್ಮೊಮ್ಮೆ ಎಲ್ಲಾದರೂ ಓಡಿ ಹೋಗಿಬಿಡಲೇ ಅನ್ನಿಸುವಷ್ಟು ಕಷ್ಟ ಮತ್ತು ದುಃಖಮಯವಾಗಿರುತ್ತದೆ.

ಈ ರೀತಿ ಎಲ್ಲಾ ಹೋರಾಟಗಳನ್ನು ಜಯಿಸಲೇ ಬೇಕು. ಅದೇ ಜೀವನ! ನಾವು ನೆಚ್ಚಿಕೊಂಡು, ನಮ್ಮ ಮನದಲ್ಲಿ ಕಲ್ಪಿಸಿಕೊಂಡಷ್ಟು ಸುಲಭವಾದದ್ದು ಮಾತ್ರ ಅಲ್ಲ!

ಹೌದು! ಒಬ್ಬೊಬ್ಬರಿಗೆ ಅದು ಯಾವಾಗಲೂ ಸುಖಮಯವಾಗಿರಬಹುದು. ಅದು ಅವರು ಹುಟ್ಟಿದ ಜಾಗ, ಮನೆ, ಸುತ್ತಲಿನ ಪರಿಸರವನ್ನು ಅವಲಂಬಿಸಿರುತ್ತದೆ. ಅವರಿಗೆ ಮುಟ್ಟಿದ್ದೆಲ್ಲ ಚಿನ್ನ! ಅದು ಅದೃಷ್ಟದ ಮಾತಾಯಿತು.

ಹಾಗಂತಾ ಎಲ್ಲಾರೂ ಚಿನ್ನದ ಪುಟ್ಟಿಯಲ್ಲಿಯೇ ಹುಟ್ಟಲು ಸಾಧ್ಯವಿಲ್ಲವಲ್ಲ!

ಅಂಥವರಿಗೆ ಪ್ರತಿಯೊಂದು ನಿಮಿಷವು ಸವಾಲೇ ಸರಿ! ಹಾಗೆಯೇ ಬದುಕಿ ತಮ್ಮ ಬದುಕನ್ನು ಶಕ್ತಿಗೆ ಅನುಸಾರ ಜೋಪಾನ ಮಾಡಿಕೊಂಡು ಜೀವಿಸುತ್ತಿರುತ್ತಾರೆ.

ಜೀವನ ಚಕ್ರ ತಿರುಗುತ್ತಿರಲೇ ಬೇಕು. ಕತ್ತಲು ಕಳೆದ ಮೇಲೆ ಬೇಳಕು ಬರಲೇ ಬೇಕು. ಇಂದು ಇದ್ದ ದಿನಗಳು ನಾಳೆ ಹೀಗೆ ಇರಲಾರವು. ಬದಲಾವಣೆಯೇ ಜೀವನದ ನಿಯಮ. ಗಡಿಯಾರದ ಮುಳ್ಳು ಎಂದು ನಿಲ್ಲಲಾರದು. ಅದು ನಿರಂತರವಾಗಿ ತಿರುಗುತ್ತಿರುವಂತೆ ನಾವುಗಳು ನಮ್ಮ ಬದುಕಿನ ಎಲ್ಲಾ ಘಟ್ಟಗಳಲ್ಲು ಹೆಜ್ಜೆ ಇಡುತ್ತಾ ಸಾಗುತ್ತಿರಲೇ ಬೇಕು.

ಯಾಕೆಂದರೇ ಈ ಬದುಕು ಯಾರಿಗೂ ಎಂದು ಕಾಯುವುದಿಲ್ಲ. ಇರುವಷ್ಟು ದಿನ ಅದನ್ನು ಅನುಭವಿಸುವವನೇ ಶ್ರೀಮಂತ.

ಆದರೂ ಹೀಗೆ ಸಾಗುತ್ತಿರುವಾಗ ಎಷ್ಟು ವಿಷಯ, ವಸ್ತು, ಸ್ನೇಹ, ಸಂಪತ್ತು, ಗುಣ, ಅವಗುಣ, ಒಳ್ಳೆದು, ಕೆಟ್ಟದ್ದು ಹೀಗೆ ಪ್ರತಿಯೊಂದರ ಮೊಟೆಯನ್ನು ಹೊತ್ತು ಕೊಂಡೇ ನಾವುಗಳು ಮುಂದಿನ ಜೀವನದ ದಾರಿಯನ್ನು ಕ್ರಮಿಸುತ್ತಾ ಸಾಗುತ್ತಿರುತ್ತೇವೆ.

ಇಂಥ ಸಮಯದಲ್ಲಿಯೇ ಈ ಜೀವನ ಅಂದರೇ ಇಷ್ಟೇಯಾ ಎಂದು ಅನಿಸಲಾರಂಬಿಸುತ್ತದೆ. ಎಲ್ಲಾ ಗಳಿಸಿದರೂ ಯಾಕೋ ಏನೂ ಇಲ್ಲವಲ್ಲವೆನಿಸುತ್ತದೆ. ಎಲ್ಲಾ ಕಳೆದುಕೊಂಡರೂ ಸಹ ಹಾಗೆಯೇ ಯಾಕೋ ಏನೂ ಗಳಿಸಲಿಲ್ಲವಲ್ಲ.. ಎಂದುಕೊಳ್ಳುತ್ತೇವೆ.

ಇದು ಕೇವಲ ಓಡುವ ಬದುಕೇ? ಹೀಗೆಯೇ ಬದುಕಬೇಕಾ ಅನಿಸುತ್ತದೆ.

ಯಾಕೇ ಹೀಗೆ ಪ್ರತಿಯೊಬ್ಬರೂ ಬದುಕುವ ರೀತಿಯಲ್ಲಿಯೇ ನಾವುಗಳು ಬದುಕುತ್ತಿದ್ದೇವೆಲ್ಲವೆಂದುಕೊಳ್ಳುತ್ತೇವೆ. ಹೀಗೆ ಒಂದಲ್ಲ ಒಂದು ಪ್ರಶ್ನೆ ಮನದಲ್ಲಿ ಮೂಡಿಯೇ ಮೂಡುತ್ತದೆ.

ಆ ಕ್ಷಣ ಯಾಕೋ ಜೀವನವೇ ನಿರರ್ಥಕವೆನಿಸುತ್ತದೆ. ಹೇಗೆ ಬಾಳಿದರೇ ಉತ್ತಮವೆಂದು ಕ್ರಮಿಸಿದ ದಾರಿಯನ್ನು ಪುನಃ ತಿರುಗಿ ನೋಡಲಾರಂಬಿಸುತ್ತೇವೆ.

ಉಫ್ ಎಷ್ಟು ಬೇಗ ೪೦ಕ್ಕೆ ಕಾಲಿಟ್ಟೆ! ಮನ್ನೆ ಮದುವೆಯಾಗಿದ್ದು ಅನಿಸುತ್ತದೆ. ಮರೆತೆ ಇಲ್ಲ ಇದೀಗ ತಾನೆ ಕಾಲೇಜು ಮೆಟ್ಟಿಲು ಇಳಿದಿರುವುದು ಅನಿಸುತ್ತದೆ. ಆದರೇ ಎಷ್ಟು ಬೇಗ ಸುಸ್ತು ಅನಿಸುತ್ತದೆ. ಜೀವನದ ದುಡಿತದಲ್ಲಿ ಅಕ್ಕ ಪಕ್ಕ ಏನೂ ಜರುಗುತ್ತಿತ್ತು ಎಂಬುವುದನ್ನೇ ಗಮನಿಸಲಾರದಷ್ಟು ಅಸೂಕ್ಷ್ಮಮತಿಯಾಗಿದ್ದೆನಲ್ಲಾ ಎಂದು ಪರಿತಪಿಸುವೆವು.

ಯಾವುದೋ ಒಂದು ಹುದ್ದೆಗಾಗಿ, ಯಾವುದೋ ಒಂದು ಮೊತ್ತದ ಸಂಪತ್ತಿಗಾಗಿ ನನ್ನ ಈ ಒಂದು ಅಮೊಲ್ಯವಾದ ವಯಸ್ಸನ್ನೇ ಹೀಗೆ ಕಳೆದೆನಲ್ಲಾ? ನಾನು ಮಾಡಿದ ಈ ಸಾಧನೆಯೇ ಕೊನೆಯೇ? ನಾನು ಈಗ ಹಿಂದೆ ಇದ್ದೆ ಇದ್ದ ರೀತಿಯಲ್ಲಿಯೇ ಇದ್ದೀನಾ ಅಥವಾ ಏನಾದರೂ ಬದಲಾವಣೆಯ ಚರ್ಯೆ ಕಾಣಿಸುತ್ತಿದಿಯಾ ಎಂದು ಅದೇ ಬೆರಳಿನ ದಪ್ಪ ಗಾಜನ್ನು ಸರಿಸಿ ಕನ್ನಡಿ ನೋಡಿಕೊಂಡಂತಾಗುತ್ತದೆ.

ದೇಹವೇ ಬಸವಳಿದ ಮನಸ್ಸಿನ ಸ್ಥಿತಿಯಲ್ಲಿ ದಿಗ್ಬ್ರಮೆಯಾಗುವುದು ನಿಜ!

ಹೀಗೆ ಯಾವುದು ಮಾಡಿದರೂ ಇದೇ ಶ್ರೇಷ್ಠ ಅನಿಸುತ್ತಿಲ್ಲ. ನಾವೇನಾದರೂ ಬೇರೆಯವರಿಗೆ ಒಂದು ಸಣ್ಣ ಉಪಕಾರ ಮಾಡಿದ್ದಿವಾ ಅಂದರೇ ಅದು ಇಲ್ಲ. ನಾನು ದುಡಿದದ್ದು ಕೇವಲ ನನ್ನ ಈ ಒಂದು ಸಂಸಾರಕ್ಕೆ ಮಾತ್ರ. ನಾನು ಇವರಿಗಾಗಿ ದುಡಿಯಲೇ ಬೇಕಾಗಿತ್ತಾ? ಅವರಾದರೂ ನನ್ನ ಬಗ್ಗೆ ಏನೂ ಹೇಳುತ್ತಾರೋ ಎಂದು ಕೇಳುವಷ್ಟು ಸ್ವಾರ್ಥಮಯ ಈ ಬದುಕಾ ಎಂದು ಪೀಲ್ ಆಗುತ್ತದೆ.

ಏಕೆ ನಾವುಗಳು ಎಲ್ಲಾರಿಗಿಂತ ಬಿನ್ನವಾಗಿ ಜೀವಿಸಲಾರೆವು. ಪ್ರತಿಯೊಂದರಲ್ಲೂ ಪಾಲೊ ಪಾಲೊ ಅವರು ಇವರನ್ನು,ಇವರು ಅವರನ್ನಾ.. ಇದೇ ಮನುಷ್ಯ ಜೀವಿಯ ಜೀವಿತ ಪರಿಯಾ? ಯೋಚಿಸಿದರೇ ಉತ್ತರವೇ ಇಲ್ಲದಂತಾಗುತ್ತಾದೆ. ಯಾವುದೋ ಗೊತ್ತಿದ್ದು ಗೊತ್ತಿಲ್ಲದವರಂತೆ ಯಾಂತ್ರಿಕವಾಗಿ ಸಾಗುತ್ತಿದ್ದೆವೆಂದು ಅನಿಸುವುದಿಲ್ಲವಾ?

ಇಚ್ಚೆ ಇರಲಿ ಇಲ್ಲದಿರಲಿ, ನೆಮ್ಮದಿ ಇರಲಿ ಇಲ್ಲದೇ ಇರಲಿ ಯಾವುದಾದರೂ ಸರಿಯೆಂದು ಬಿಡಲಾರದೆ ಓದನ್ನು ಒದುತ್ತೇವೆ, ಕೆಲಸ ಮಾಡುತ್ತೇವೆ, ಒಟ್ಟಿಗೆ ಜೀವಿಸುತ್ತೇವೆ. ಯಾವುದರಲ್ಲೂ ಪ್ಯಾಶನ್ ಎನ್ನುವುದೆ ಇಲ್ಲ! ಬಿಡಲು ಸಾಧ್ಯವಿದ್ದರೂ ಬಿಡಲು ಆಗುತ್ತಿಲ್ಲವೆಂದು ಒದ್ದಾಡುವುದೇ ಬದುಕಾಗಿದೆ. ಎಲ್ಲದರಲ್ಲೂ ಗೊಣಗಾಟ. ಖುಷಿಯೆಂಬುದು ಪುಸ್ತಕದ ಬದನೆ ಕಾಯಿಯಾಗಿದೆ.

ಇಂಥ ಸಮಯದಲ್ಲಿ ಸಂಯಮವಾಗಿ ನಾವು ಸಾಗುತ್ತಿರುವ ದಾರಿ ಸರಿಯೇ? ಸ್ವಲ್ಪ ಬದಲಾವಣೆ ಬೇಕಾಗಿತ್ತು ಎಂದು ಬೆಳಕಿನ ಚಿಕ್ಕ ಕಿರಣ ಕಾಣಿಸುತ್ತದೆ. ಯಾವುದಾದರೂ ಮನಸ್ಸು ಮೆಚ್ಚುವ, ಪರರಿಗೆ ಉಪಕಾರಿಯಾಗುವ ಯೋಜನೆ/ಯೋಚನೆ ಯಾಕೇ ಮಾಡಬಾರದು?

ಈ ಐಡಿಯಾ ಜೀವನದ ಅರ್ಧ ಮೈಲೇಜು ಮುಗಿದ ಮೇಲೆ ಬರುತ್ತಿದಿಯಲ್ಲಾ ಅದೇ ವಿಪರ್ಯಾಸ! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ