ಶನಿವಾರ, ಮಾರ್ಚ್ 5, 2016

ಹೆತ್ತ ತಾಯಿಯು ಒಂದು ಹೆಣ್ಣಲ್ಲವಾ?

ಹೆಣ್ಣು ಕಣ್ಣು.

ಪ್ರತಿಯೊಬ್ಬರಿಗೂ ನಾರಿಯ ಓಡನಾಟ ಯಾವುದಾದರೂ ಒಂದು ರೀತಿಯಲ್ಲಿ ಸ್ವ ಅನುಭವವಾಗಿರುತ್ತದೆ.

ಹುಟ್ಟುತ್ತ ತಾಯಿಯಾಗಿಯೋ, ಬೆಳೆಯುತ್ತಾ ಅಕ್ಕ ತಂಗಿಯಾಗಿಯೋ, ಪ್ರವರ್ಧಮಾನಕ್ಕೆ ಬಂದ ನಂತರ ಜೊತೆಗಾತಿಯಾಗಿಯೋ... ಗೆಳತಿಯಾಗಿಯೋ ಹೆಣ್ಣಿನ ಬಗ್ಗೆ ನಮ್ಮ ಭಾವನೆಯ ಒಂದು ಜಾಗವನ್ನು ತನ್ನದಾಗಿಸಿಕೊಂಡಿರುತ್ತಾಳೆ.

ಮಹಿಳೆಯರು ಸಮಾಜದ ಒಂದು ಅಂಗ. ಅವರುಗಳ ಸಮರ್ಪಣೆ ಮತ್ತು ಕೊಡುಗೆ ಒಂದು ಕುಟುಂಬದಿಂದ ಶುರುವಾಗಿ ಸಮಾಜದ ಎಲ್ಲಾ ರಂಗದಲ್ಲೂ ತನ್ನದೆಯಾದ ಛಾಪನ್ನು ಕಾಪಾಡಿಕೊಂಡಿದ್ದಾರೆ.

ಇಂದಿನ ದಿನದಲ್ಲಿ ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಯಾರೂ ಹೆಣ್ಣೆಂದು ಕೇವಲವಾಗಿ ಕಾಣುವ ಮಾತಿಲ್ಲ.

ಮಹಿಳೆಯರು ಪುರುಷರು ಮಾಡುವ ಪ್ರತಿಯೊಂದು ಕೆಲಸ, ಕಲಿಕೆ, ಸಾಧನೆ, ಕಾಳಜಿ ಹೀಗೆ ಪ್ರತಿಯೊಂದರಲ್ಲೂ ತಾನು ಒಂದು ಕೈ ಮೇಲೆ ಎಂದು ನಿರೂಪಿಸಿದ್ದಾಳೆ.

ಮಹಿಳೆ ಕೇವಲ ಮನೆ ಅಥವಾ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಅವಳು ಬೇರೆಯವರಂತೆ ಮನೆಯಿಂದ ಹೊರಗೂ ಸಹ ದುಡಿಯಬಲ್ಲಳು.  ಅವಳು ಪುರುಷರ ಜೊತೆಗೂಡಿ ತನ್ನ ಜಾಣ್ಮೆ ಮತ್ತು ಶಕ್ತಿಯನ್ನು ತೋರಿಸಬಲ್ಲವಳಾಗಿದ್ದಾಳೆ.

ಮಹಿಳೆ ಅಬಲೆ ಎಂಬ ಮಾತು ಇಂದು ತುಂಬ ಸವಕಲಾಗಿದೆ.

ಎಲ್ಲಾ ಕ್ಷೇತ್ರಗಳಲ್ಲೂ ಅವಳು ತನ್ನ ಪಾಲನ್ನು ತೆಗೆದುಕೊಂಡು ತನ್ನನ್ನು ತಾನು ಏನೂ ಎಂಬುದನ್ನು ಜಗತ್ತಿಗೆ ಜಗಜ್ಜಾಹೀರು ಮಾಡಿದ್ದಾಳೆ.

ಹಿಂದೆ ಇದ್ದಂತೆ ಇಂದು ಕೇವಲ ಅಡಿಗೆ ಮನೆಯಲ್ಲಿ ಸೌಟು ಹಿಡಿದುಕೊಂಡು, ಮಕ್ಕಳು ಮರಿಗಳನ್ನು ಆಡಿಸಿಕೊಂಡು ದಿನಕಳೆಯುವ ದಿನಮಾನಗಳು ಯಾವಾಗಲೇ ಇತಿಹಾಸ ಸೇರಿದ್ದಾವೆ.

ಅವಳು ಹಗಲು ರಾತ್ರಿ ಪುರುಷರ ರೀತಿಯಲ್ಲಿ ಆಪೀಸ್ ನಲ್ಲಿ ದುಡಿಯ ಬಲ್ಲಳಾಗಿದ್ದಾಳೆ. ಇಂದು ಪುರುಷರಿಗೆ ಮಾತ್ರ ಈ ಕೆಲಸ ಎನ್ನುವುದೆಲ್ಲವನ್ನು ತಾನು ಮಾಡುತ್ತಿದ್ದಾಳೆ.

ಮಹಿಳೆಯರಿಗ್ಯಾಕೇ ಈ ಉಸಾಬರಿ ಎಂದು ಅಪ್ಪಿ ತಪ್ಪಿ ಮಾತನ್ನಾಡದಂತೆ ಮಾಡಿದ್ದಾಳೆ.

ಹುಡುಗರೇ ಸ್ವಲ್ಪ ಹುಷಾರು!

ಅವಳ ಜಾಣ್ಮೆ ಏನು? ತಾನೆಷ್ಟು ಬುದ್ಧಿವಂತಳು ಎಂಬುದನ್ನು ತಾನು ವಿದ್ಯಾಭ್ಯಾಸ ಮಾಡುವ ದಿನಗಳಲ್ಲೆ ನಿರೂಪಿಸಿದ್ದಾಳೆ.ಪುರುಷರ ಸರಿಸಮಾನ ಪ್ರತಿಯೊಂದು ಕಾರ್ಯಗಳನ್ನು ಹೆಚ್ಚು ಶ್ರದ್ಧೆ ಮತ್ತು ಅಸಕ್ತಿಯಿಂದ ಮಾಡಿ ಸಾಧನ ಶಿಖರವನ್ನೆ ಏರುತ್ತಿದ್ದಾಳೆ.

ತೊಟ್ಟಿಲು ತೂಗುವ ಕೈ ದೇಶ ಆಳುವುದು ಎಂಬುದನ್ನು ನಿಜ ಮಾಡುವಂತೆ, ನಮ್ಮ ದೇಶದಲ್ಲಿಯೇ ಹಿಂದೆ ಮತ್ತು ಪ್ರಸ್ತುತ ಸಾಕಷ್ಟು ಮಹಿಳಾ ಮಣಿಗಳು ಆಡಳಿತ ಚುಕ್ಕಾಣಿಯನ್ನು ತಮ್ಮ ಕೈಲ್ಲಿ ಹಿಡಿದುಕೊಂಡಿದ್ದಾರೆ.

ದೇಶದ ಆಡಳಿತವನ್ನೇ ತನ್ನ ಕೈಯಲ್ಲಿಡಿದುಕೊಂಡು ಹಲವು ವರುಷ ಸಲೀಸಾಗಿ ಸರ್ಕಾರವನ್ನು ನಿರ್ವಹಿಸಿದ ಕೀರ್ತಿ ಹಿಂದಿನ ಪ್ರಧಾನಿ ಇಂದಿರಾ ಗಾಂಧಿಗೆ ಸಲ್ಲಬೇಕಾಗಿದೆ.

ಅವರ ಹಾದಿಯಂತೆ ಅನೇಕ ರಾಜಾಕೀಯ ನಾಯಕಿಯರು ಇಂದಿಗೂ ಸರ್ಕಾರದ ಬಹುಮುಖ್ಯ ಸ್ಥಾನಗಳನ್ನು ಅಲಂಕರಿಸಿ ಪುರುಷಪುಂಗರಿಗಿಂತ ನಾವೇನು ಕಮ್ಮಿ ಇಲ್ಲ ಎಂಬುದನ್ನು ಮತ್ತೆ ಮತ್ತೆ ಸತ್ಯ ಮಾಡುತ್ತಿದ್ದಾರೆ.

ಹೀಗೆ ಪ್ರತಿಯೊಂದು ರಂಗದಲ್ಲೂ ಅಸಮಾನ್ಯ ಸಾಧನೆಗಳನ್ನು ಸ್ರ್ತೀಯರು ಮಾಡಿದ್ದಾರೆ.

ನಮ್ಮ ಭಾರತ ಹೆಣ್ಣಿಗೆ ಮಹತ್ವವಾದ ಸ್ಥಾನವನ್ನು ಕೊಟ್ಟಿರುವ ದೇಶ ಮತ್ತು ಸ್ರ್ತೀಯರನ್ನು ದೇವತೆಗಳಂತೆ ಕಂಡ ಭೂಮಿ.

ಇಂದು ಮಹಿಳೆಯರು ಮಾಡುವ ಕೆಲಸಗಳನ್ನು ಪುರುಷರು ಮಾಡಬಲ್ಲರು. ಯಾವುದೇ ಬೇದ ಭಾವವಿಲ್ಲದ ಪ್ರತಿಯೊಬ್ಬರೂ ಪ್ರತಿಯೊಂದು ಕೆಲಸವನ್ನು ಶೇರ್ ಮಾಡಿಕೊಂಡು ಮಾಡುವ ಕಲೆಯನ್ನು ಪ್ರತಿ ಕುಟುಂಬದಲ್ಲೂ ಕಾಣಬಹುದು.

ಕೇವಲ ಮಕ್ಕಳಿಗೆ ಜನ್ಮ ನೀಡುವ ಕಾಯಕ ಹೆಣ್ಣಿನದು ಎಂಬ ಹಣೆ ಪಟ್ಟಿ ಇಂದು ಕಳಚಿದೆ. ಮಕ್ಕಳ ಪಾಲನೆ ಪೋಷಣೆ ಗಂಡ ಹೆಂಡತಿ ಇಬ್ಬರದು ಎಂಬ ಪಾಠ ಪ್ರತಿಯೊಂದು ಕುಟುಂಬಕ್ಕೂ ಗೊತ್ತಾಗಿದೆ.

ಯಾಕೆಂದರೇ ಇಂದಿನ ಪಾಸ್ಟ್ ಲೈಫ್ ಯುಗದಲ್ಲಿ ಮತ್ತು ಚಿಕ್ಕ ಕುಟುಂಬದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ದುಡಿಯುತ್ತಿದ್ದಾರೆ. ಆದ್ದರಿಂದ ಸಂಸಾರದ ಚಕ್ರ ಸುಗಮವಾಗಿ ಚಲಿಸಬೇಕೆಂದರೇ ಇಬ್ಬರೂ ತಮ್ಮ ತಮ್ಮ ಕೆಲಸವನ್ನು ಸಮನಾಗಿ ಹಂಚಿಕೊಂದು ರ್ವಹಿಸುವ ಜರೂರತು ಇಂದು ಇದೆ.

ಇದು ನೀನೇ ಮಾಡಬೇಕು ಎಂಬ ರೂಲ್ಸ್ ಏನು ಇಲ್ಲ. ಅವಳು ಹೊರಗಡೆ ದುಡಿಯುತ್ತಾಳೆ. ಇವನು ಹೊರಗಡೆ ದುಡಿಯುತ್ತಾನೆ. ಆದ್ದರಿಂದ ಇವನು ಇವನು ಮನೆಯೊಳಗೆ ಕೈ ಅಸರೆಯಾಗಬೇಕು.

ನಮ್ಮ ಮಹಿಳೆಯರು ದೇಶ ವಿದೇಶದಲ್ಲೂ ತಮ್ಮ ಜಾಣ್ಮೆಯ ಮಹಿಮೆಯನ್ನು ತೋರಿಸಿದ್ದಾರೆ.

ಸಾಪ್ಟವೇರ್ ಕ್ಷೇತ್ರಗಳಲ್ಲಿರುವ ಮಹಿಳೆಯರು ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಅಲ್ಲಿ ನಮ್ಮದಲ್ಲದ ಜಾಗದಲ್ಲಿ ಅಷ್ಟೊಂದು ಧೈರ್ಯದಿಂದ ತಮ್ಮ ಕೆಲಸವನ್ನು ಮಾಡುತ್ತಿರುವುದು ನೋಡಿದರೇ ಎಷ್ಟೊಂದು ಹೆಮ್ಮೆ ಅನಿಸುತ್ತದೆ.

ಹಿಂದೆ ಮಹಿಳೆಯರು ಹೊರಗಡೆ ಹೆಜ್ಜೆ ಇಡುವುದೇ ಅಪರೂಪ ಅನಿಸಿತ್ತು. ಆದರೇ ಬದಲಾದ ಕಾಲಮಾನ ಮಹಿಳೆಯರ ಕೌಶಲವನ್ನು ನಾನ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಸಮಾಜದ ಬಂಧನವನ್ನು ಇನ್ನೂ ಗಟ್ಟಿ ಮಾಡಿದೆ ಅಂದರೇ ಅತಿಶಯೋಕ್ತಿಯಲ್ಲ.

ಆದರೂ ಪ್ರತಿ ಮಹಿಳಾ ದಿನಾಚಾರಣೆಯ ಸಮಯದಲ್ಲಿ ಮಹಿಳೆಯರ ಹಕ್ಕು, ಅವರ ಶ್ರೇಯೋಭಿವೃದ್ಧಿಯ ಬಗ್ಗೆ ಜಗತ್ತಿನಲ್ಲೆಡೆ ಪುನಃ ಮಾತು ಕತೆಗಳು ಚರ್ಚೆಗಳು ನಡೆಯುತ್ತವೆ.

ಯಾಕೆಂದರೇ ಇಷ್ಟೆಲ್ಲ ರೀತಿಯಲ್ಲಿ ಸ್ರ್ತೀಯರು ನಾವ್ಯಾರಿಗೂ ಸಾಠಿಯಿಲ್ಲ ಎಂದು ನಿರೂಪಿಸಿದರೂ, ಯಾಕೋ ಅಲ್ಲಿ ಇಲ್ಲಿ ನಿತ್ಯ ಸ್ತ್ರೀಯರ ಮೇಲೆ ತಿಳಿದೋ ತಿಳಿಯದೋ ದೌರ್ಜನ್ಯ ಮತ್ತು ಅವರನ್ನು ನೋಯಿಸುವಂತ ಘಟನೆಗಳು ಘಟಿಸುತ್ತಲೇ ಇರುತ್ತವೆ.

ಇದು ಹೊರಗಡೆ ಮಾತ್ರ ಎಂದಲ್ಲ. ನಮ್ಮ ನಮ್ಮ ಮನೆಯಂಗಳದಲ್ಲಿಯೇ ನಮ್ಮ ಹತ್ತಿವರಿಂದಲೇ ಅನ್ಯಾಯಕ್ಕೆ, ದಬ್ಬಾಳಿಕೆಗಳಿಗೆ ನಮ್ಮ ನಿಮ್ಮ ಸ್ತ್ರೀ ಜೀವಗಳು ಬಲಿಯಾಗುತ್ತಿರುವುದು ಅತ್ಯಂತ ಅವಮಾನಕರ ಸಂಗತಿ.

ನಮ್ಮದೇ ಮನೆಯಲ್ಲಿ ನಮ್ಮದೇ ತಾಯಿ, ಮಗಳು, ತಂಗಿ, ಅಕ್ಕ, ಅತ್ತಿಗೆ, ಅಜ್ಜಿ ಇತ್ಯಾದಿ ಹೆಣ್ಣು ಜೀವಗಳನ್ನು ಅದು ಯಾಕೋ ಒಂದು ರೀತಿಯಲ್ಲಿ ಗೊತ್ತೊ ಗೊತ್ತಿಲ್ಲದೋ ಹೆಣ್ಣು ಮನಸ್ಸಿಗೆ ದಕ್ಕೆ ಬರುವಂತೆ ನೋವುಂಟು ಮಾಡುತ್ತಿದ್ದೇವೆ.

ಇದು ನಿಲ್ಲಬೇಕು.

ಒಂದು ಮನೆಯೆಂದರೇ.. ಅದು ಸುಂದರ ಮನೆಯೆಂದರೇ.. ಅದು ಕೇವಲ ಬೌತಿಕ ವಸ್ತುಗಳು ತುಂಬಿರುವ ಮನೆಯಲ್ಲ! ಅಲ್ಲಿ ಸ್ತ್ರೀಯೊಬ್ಬಳಿದ್ದಾಳೆಂದರೇ ಅಲ್ಲಿಯ ಒಟ್ಟು ಭಾವಪರಿತ ವಾತವರಣವೇ ಆಹ್ಲಾದಕವಾಗಿರುತ್ತಾದೆ. ಪುನಃ ಅದು ಸ್ತ್ರೀ ಮೊಲವಾದ ತಾಯಿ, ತಂಗಿ, ಗೆಳತಿ, ಮಗಳು  ಮನದ ರಾಗ ರಂಜನೆಯಿಂದ ಕೊಡಿರುತ್ತದೆ.

ಇಂಥ ಒಂದು ಒಟ್ಟು ಭಾವ ಪ್ರಫುಲತೆ ಮತ್ತು ಕರುಣ ಬಂಧನ ರಸ ಹೆಣ್ಣು ಜೀವದಿಂದ ಮಾತ್ರ ಹರಿಯಬೇಕು.

ಅವಳು ಎಷ್ಟೇ ಓದಿದ್ದರೂ, ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಎಷ್ಟೇ ದೊಡ್ಡ ಸಾಧನೆಯ ಶಿಖರವೇರಿದ್ದರೂ ಕುಟುಂಬವೆನ್ನುವ ಮನೆಯೊಳಗೆ ಹೆಜ್ಜೆ ಇಟ್ಟಳೆಂದರೇ ಅವಳ ಭಾವನೆಗಳ ಓಡನಾಟ ಅವಳ ಸುತ್ತಲಿನವರೆಲ್ಲರಿಗೂ ಪಸರಿಸುತ್ತದೆ.  ಅದು ಹೇಗೂ ಒಂದು ರೀತಿಯಲ್ಲಿ ಶಬ್ಧದಲ್ಲಿ ವರ್ಣಿಸಲಾರದ ಅನುಬಂಧನವನ್ನು ಪ್ರತಿಯೊಬ್ಬರಿಗೂ ಕೊಟ್ಟಿರುತ್ತದೆ.

ಅದಕ್ಕೆ ಹೇಳುವುದು ಮನೆ ಎನ್ನುವುದು, ಅದೇ ನೆಮ್ಮದಿಯ ಗೂಡು.

ಹೀಗೆ ಇರುವ ಮಹಿಳೆಯ ಪ್ರಸ್ತುತತೆ ಎಂದು ಬಿಡಿಸಲಾಗದ ನಂಟು ಎಂದರೇ ತಪ್ಪಲ್ಲ.

ಪುರುಷ - ಮಹಿಳೆ ಜೀವನದ ಅತಿ ಮುಖ್ಯ ಎರಡು ಚಕ್ರಗಳು. ಹಲವು ರೂಪದಲ್ಲಿ ಅದು ಸದಾ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಪಾಡುವ ಪ್ರೀತಿಯ ಮನಸ್ಸು.

ಸ್ರ್ತೀ ಯೆಂದರೇ ತಾಳ್ಮೆ, ಸ್ರ್ತೀಯೆಂದರೇ ಕರುಣೆ, ಸ್ತ್ರೀಯೆಂದರೇ ಪ್ರೀತಿ ಇತ್ಯಾದಿ ನಾನಾ ರೂಪಕಗಳ ಒಟ್ಟು ಸಂಗಮವಾದ ಒಂದು ಜೀವಂತ ಪುತ್ಥಳಿಯನ್ನು ಗೌರವಯುತವಾಗಿ ಪ್ರತಿಯೊಬ್ಬರೂ ಪ್ರತಿ ಜಾಗದಲ್ಲೂ ಕಾಣಬೇಕೆಂಬಂತೆ.

ನಮ್ಮ ಹಿರಿಯರು ಹೇಳಿದ ಮಾತು ಎಂದೆಂದಿಗೂ ಅಜರಾಮರ ’ಎಲ್ಲಿ ಸ್ರ್ತೀಯರನ್ನು ಗೌರವಿಸುತ್ತಾರೊ ಅಲ್ಲಿ ದೇವತೆಗಳು ನೆಲಸಿರುತ್ತಾರೆ’.

ಈ ಮಾತು ಅವರು ಯಾಕೇ ಹೇಳಿದರೂ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಹಿಂದಿನಿಂದಲೂ ಎಷ್ಟೇ ಸುಧಾರಣೆಯ ಹೊಸ ಗಾಳಿ ಬೀಸಿದ್ದರೂ ನಮ್ಮ ಪುರುಷ ಸಮಾಜ ಸ್ರ್ತೀಯರನ್ನು ಅದೇ ಹಳೆಯ ಜಾಡಿನಂತೆ ಕೇವಲವಾಗಿ ಕಾಣುತ್ತಿರುವುದು ದೌರ್ಬಗ್ಯದ ಸಂಗತಿ.

ಪ್ರತಿಯೊಬ್ಬರೂ ಕಣ್ಣು ಮನವನ್ನು ತೆರೆದು ನೋಡುವಂತಾಗಬೇಕು. ಯಾಕೆಂದರೇ ಪ್ರತಿಯೊಬ್ಬರೂ ಆ ಹೆಣ್ಣೆಂಬ ಹೆತ್ತಮ್ಮನಿಂದ ಜನ್ಮ ತಾಳಿರಿರುವವರು. ನಮ್ಮ ಮೊಲ ಬೇರಿರುವುದು ತಾಯಿಯಲ್ಲಿ.

ಹೆತ್ತ ತಾಯಿಯು ಒಂದು ಹೆಣ್ಣಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ