ಶುಕ್ರವಾರ, ಮಾರ್ಚ್ 18, 2016

ಮನುಷ್ಯರೊಂದಿಗಿಲ್ಲ ಗೊಗಲ್ ಉತ್ತರವೇನು?

ಡಾ ಡಾ ಬಾ ಆಟ ಆಡೋಣ.

ಅಮ್ಮಾ ನನ್ನ ಎತ್ತಿಕೋ.

ಅಕ್ಕ ಬಾ ಮುದ್ದು ಮಾಡು. ಆ ಎದ್ದು ನಿಲ್ಲು. ಆಂ ನನ್ನ ಮೇಲೆ ತೂರು.

ಮಗು ದ ದಾ ಎಂದು ಏನು ಏನೋ ಮಾಡುತ್ತದೆ.

ಅದೆ ಅಪ್ಪ / ಅಮ್ಮನ ಮುಖ ನೋಡಿ ಚಪ್ಪಾಳೆ ತಟ್ಟಿ ಮುಖ ಅರಳಿಸಿ ನಗುತ್ತದೆ. ಜೋರಾಗಿ ಕೇಕೆ ಹಾಕುತ್ತದೆ.

ಅದಕ್ಕೆ ತನ್ನನ್ನು ಪ್ರೀತಿಸುವವರ ಮೆಚ್ಚುಗೆಯ ನೋಟ ಬೇಕು. ಇಷ್ಟೇ ಮಗು ತನ್ನವರಿಂದ ಅಪೇಕ್ಷಿಸುವುದು.

ಆದರೇ ನಿತ್ಯ ಪ್ರಜ್ವಲವಾಗಿರುವ ಮಗುವಿನ ಮನಸ್ಸಿನಂತೆ ನಮ್ಮ ವಯಸ್ಸಾದವರ ಮನಸ್ಸು ಇರಬೇಕಲ್ಲ? ಮಗು ಘಳಿಗೆ ಘಳಿಗೆಗೂ ಹೊಸತನದ ಎನರ್ಜಿಯಿಂದ ಏಕ್ ದಮ್ ಸುಂದರ ಹಚ್ಚ ಹಸುರಿನ ನಗುವಿನಿಂದ ಕಂಗೊಳಿಸುತ್ತದೆ. ಆದರೆ ನಮ್ಮ ದಣಿವಿನ ಜಂಜಾಟದ ಬದುಕಿನಿಂದ ಆ ಮುಗ್ಧ ಮಗುವಿನ ಜೊತೆ ಒಂದು ನಿಮಿಷವು ಎಲ್ಲ ಮರೆತು ಅದು ಆಡುವ ಒಂದು ಚಿಕ್ಕ ಆಟವನ್ನು ಖುಷಿಯಿಂದ ನಾವು ಅನುಭವಿಸಲು ಸಾಧ್ಯವಾಗುತ್ತಿಲ್ಲ.

ಅದೇ ನಿತ್ಯ ನೂರು ತೊಂದರೆ ತಾಪತ್ರಾಯಗಳ ಯೋಚನೆಯಲ್ಲಿ ಅಪ್ಪ ಅಮ್ಮ ಕ್ಷಣ ಕ್ಷಣವು ಮುಳುಗೇಳುತ್ತಿರುತ್ತಾರೆ.

ಇವರುಗಳಿಗೆ ಮುಂಜಾನೆ ರಾತ್ರಿ ಎನ್ನುವ ವ್ಯತ್ಯಾಸವಿಲ್ಲ.

ಮಗು ಮುಂಜಾನೆ ಮುಂಜಾನೆ ಹಾಸುಗೆಯಲ್ಲಿಯೇ ಹೊಸ ದಿನದೊಟ್ಟಿಗೆ ಪುಟಿಯುತ್ತಿರುತ್ತದೆ. ಅದಕ್ಕೆ ತಕ್ಷಣ ತಾನು ನಿನ್ನೆ ಎಲ್ಲಿಗೆ ನಿಲ್ಲಿಸಿದ ಆ ಆಟವನ್ನು ಪ್ರಾರಂಭ ಮಾಡುವ ಸಂಭ್ರಮ!

ಅದು ಏನೆಂದರೂ ಕಾಯುವುದಿಲ್ಲ. ಹಾಸಿಗೆಯಲ್ಲಿ ಆಗತಾನೆ ನಿದ್ರೆಯ ಸವಿಯನ್ನು ಸವಿಯುತ್ತಿರುವ ಅಪ್ಪ ಅಮ್ಮನನ್ನು ಒದ್ದೂ ಎದ್ದೇಳಿಸುತ್ತದೆ. ಮುಚ್ಚಿಕೊಂಡಿರುವ ಮುಸುಕನ್ನು ಸರಿಸಿ ಹಾಯ್ ಎನ್ನುತ್ತದೆ.

ಇವರುಗಳಿಗೆ ಆದರ ಮುಖ ನೋಡಿದರೇ.. ಆದರ ತೂದಲು ನುಡಿಯನ್ನು ಕೇಳಿಸಿಕೊಂಡರೇ.. ಮುಂಜಾನೆಯ ದೇವರ ಸುಪ್ರಭಾತವೇ ಸರಿ.. ಆದರೇ ನಿನ್ನೇ ಸರಿ ರಾತ್ರಿ ಎಷ್ಟೋ ಹೊತ್ತಿಗೆ ಇವರುಗಳಿಗೆ ನಿದ್ರೆ ಬಂದಿರುತ್ತದೆ. ಆಗಲೇ ಈ ಮಗು ಎಚ್ಚರವಾಗಿಬಿಟ್ಟಿದಿಯಲ್ಲಪ್ಪಾ ಎಂದು ಮನದಲ್ಲಿಯೇ ನುಡಿದು ಇಷ್ಟವಿಲ್ಲದಿದ್ದರೂ ಮಗುವಿಗೆ ಸಾಥ್ ಕೊಡಬೇಕಾಗುತ್ತದೆ.

ಇದುವೇ ನಮ್ಮಗಳ ಭಾರದ ಸುಸ್ತು ಜೀವನ!

ಒಂದು ದಿನವು ಹೊಸತನವಿಲ್ಲದ ಅದೇ ಗಡಿಯಾರದ ಮುಳ್ಳು ಮುಂದೋಡುವಂತೆ ಓಡುತ್ತಿರುವ ಧಾವಂತದ ಓಟವಾಗಿದೆ.

ನಮ್ಮ ಕೊಸುಗಳಿಗೂ ಪ್ರೀತಿಯ ಒಂದು ಕ್ಷಣವನ್ನು ಮೀಸಲಿಡಲಾರದಷ್ಟು ಕೆಲಸ ಕೆಲಸ ಬರೀ ಕೆಲಸ!

ಈ ಮಗುವಿನ ಜೋಶ್ ನಮ್ಮಗಳಿಗೆ ಇಲ್ಲವಲ್ಲ ಎಂದು ಮನಸ್ಸು ಮುಲಾಜಿಗೆ ಜಾರುತ್ತದೆ.

ಯಾಕೋ ಇದ್ದು ಇಲ್ಲದ ಅನುಭಾವದ ಅಂತರ್ ತಳಮಳ.

ಯಾಕಾದರೂ ದೊಡ್ಡವರಾದೇವೋ ಎಂದು ನಮ್ಮ ಮನಸ್ಸೆ ಒಮ್ಮೆ ಪ್ರಶ್ನೆ ಮಾಡುತ್ತದೆ.

ಯಾವುದನ್ನು ತೃಪ್ತಿಯಾಗಿ ಸಂತೋಷಿಸಲಾರೆವು.

ಯೋಚಿಸಿದರೇ ಹತ್ತು ಹಲವು ಯೋಚನೆಗಳು. ಬೆಳೆಯುತ್ತ ಬೆಳೆಯುತ್ತಾ ಯೋಚನೆಯ ಮೊಟೆಯನ್ನೇ ಹೊತ್ತು ಹೊರುತ್ತಾ ಭಾರವದ ಹೆಜ್ಜೆಗಳನ್ನು ಇಡುತ್ತಿರುವೆವೆಂದು ಅನಿಸುತ್ತದೆ.

ಯಾರೊಂದಿಗೂ ನಾಲ್ಕು ಜೀವಂತ ಮಾತುಗಳನ್ನು ಆಡಿರಲಾರೆವು. ಪ್ರತಿಯೊಂದು ಚಿಕ್ಕ ವಿಷಯಕ್ಕೂ ರೇಗುವಂತಾಗುತ್ತದೆ. ಮುಖದ ಮೇಲೆ ನಗುವಿನ ಗೆರೆ ಮಾಯವಾಗಿ ಎಷ್ಟೋ ದಿನಗಳಾಗಿರುತ್ತವೆ.

ಇಷ್ಟೊಂದು ಒತ್ತಡದ ಬದುಕು ಇದುವೇ ಅನಿಸುತ್ತದೆ.

ಯಾರದೋ ಸಿಟ್ಟನ್ನು ಇನ್ಯಾರದೋ ಮೇಲೆ ಧಾರಕಾರವಾಗಿ ಚೆಲ್ಲಿರುತ್ತೇವೆ.

ಹೆಚ್ಚು ಸಿಟ್ಟನ್ನು ಪ್ರೀತಿ ಪಾತ್ರರರ ಮೇಲೆಯೆ ಎರಚಿರುತ್ತೇವೆ.

ಜೀವನದ ಹೆಚ್ಚು ಸಮಯವನ್ನು ಕಳೆಯುವ ಆಫೀಸ್ ಎಂಬುವುದು ಯಾವುದೇ ರೀತಿಯಲ್ಲೂ ನಲ್ಮೆಯ ಜಾಗ ಎಂದು ಕೊನೆಯವರೆಗೂ ಅನಿಸುವುದಿಲ್ಲ. ಇಲ್ಲಿ ಎಲ್ಲಾ ಬರೀ ಕೃತಕತೆ ಎಂದು ಅನಿಸುತ್ತದೆ.

ಇಷ್ಟ ಇರಲಿ ಇಲ್ಲದೇ ಇರಲಿ ಇರಲೇಬೇಕಲ್ಲ ಎಂಬಂತೆ ಇರುತ್ತೇವೆ.

ವರುಷದ ಪ್ರತಿ ಕ್ಷಣವನ್ನು ಅದೇ ಕುರ್ಚಿ, ಟೇಬಲ್, ಕಂಪ್ಯೂಟರ್ ಎಂದು ಭಾವನೆಯೇ ಇಲ್ಲದ ಸ್ಪರ್ಶದಲ್ಲಿ ಕಳೆದಿರುತ್ತೇವೆ. ಇಷ್ಟವಿಲ್ಲದಿದ್ದರೂ ಇಷ್ಟವಿರುವ ರೀತಿಯಲ್ಲಿ, ಸಿಟ್ಟು ಬಂದರೂ ಸಿಟ್ಟೇ ಇಲ್ಲದವರಂತೆ ಮಾತನ್ನಾಡುತ್ತಿರುತ್ತೇವೆ.

ಯಾಕೆಂದರೇ ಇದು ಪ್ರೊಪೇಶನಲ್ ಲೈಫ್. ಇಲ್ಲಿ ಎಲ್ಲದಕ್ಕೂ ಒಂದು ಚೌಕಟ್ಟು ಇದೆ. ಚೌಕಟ್ಟು ಮೀರದ ಕಾರ್ಯ ಕೌಶಲ ನೈಪುಣ್ಯತೆಗೆ ಇಲ್ಲಿ ಅರ್ಹತೆ.

ಮನೆಯಲ್ಲಿ ಎದ್ದೇಳುವುದು ಆಪೀಸ್ ಗೆ ಹೋಗಲು ತಯಾರಿ. ತಿನ್ನುವ ತಿನಿಸು ಕೇವಲ ತಿನಿಸು ಮಾತ್ರ. ರುಚಿಯೇ ಇಲ್ಲದ ಊಟ! ತಿನ್ನುವುದಕ್ಕೂ ಟೈಂ ಇಲ್ಲವೇನೋ ಎಂಬಂತ ಬಾಳ್ವೆ.  ರಾತ್ರಿ ಬೇಗ ಹಾಸಿಗೆಗೆ ಹೋದರೇ ನಿದ್ದೆ ಎಂಬುದು ಪೂರ್ಣವಾಗಿ ನಮ್ಮ ಕಟ್ಟ ವಿರೋಧಿ ಎಂಬಂತೆ ಅದರ ಸುಳಿವೇ ಇಲ್ಲ. ಅದು ಬಿಟ್ಟು ಬೇರೆ ಎಲ್ಲಾ ಇಂದಿನ, ಪುರಾತನ, ಭವಿಷ್ಯತ್ ನದೇ ಚಿಂತೆಯ ಪಿಕ್ಚರ್!

ಕೆಲಸ ಮಾಡುವ ಸಹ ಉದ್ಯೋಗಿಗಳ ಜೊತೆಯಲ್ಲಿ ಎಷ್ಟು ಚೆನ್ನಾಗಿ ಅದೇ ಸವೆದ ಪದಗಳ ಬಳಕೆಯಲ್ಲಿ ರೈಸ್ ಕುಕರ್ ನಲ್ಲಿಯ ಕುದಿಯುತ್ತಿರುವ ಅನ್ನದೊಪಾದಿಯಲ್ಲಿ ವಿಶಲ್ಲೇ ಇಲ್ಲದೇ ಅನ್ನವಾಗುವಂತ ಮಾತು-ಕತೆ.

ಅದೇ ಸಮಯದಲ್ಲಿ ನಮ್ಮ ಪ್ರೀತಿ ಪಾತ್ರರಾದ ಮಕ್ಕಳು, ಮಡದಿಯರು, ಹೆತ್ತವರು ಯಾರದರೂ ಏನದರೂ ಕೇಳಿದರೇ ಎಷ್ಟು ಬೇಗ ಸರ್ರ್ ಎಂದು ರೇಗುವೆವು. ಇದೆ ಎರಡು ನಿಮಿಷಕ್ಕೂ ಮುಂಚೆ ಇವರೇನ  ಯಾವುದೋ ಆಪೀಸ್ ಕಾಲ್ ನಲ್ಲಿ ಹೇಗೆಲ್ಲಾ ನಕ್ಕು ನಗುತ್ತಾ ಮಾತನ್ನಾಡಿದ್ದೂ? ಎಂದು ಆ ಚಿಕ್ಕ ಮಗುವು ಅಪ್ಪನ ಮುಖವನ್ನು ಎರಡು ಬಾರಿ ಪ್ರಶ್ನಾತ್ಮಕವಾಗಿ ನೋಡುತ್ತದೆ.

ಯೋಚಿಸಿದರೇ ನಿಜವಾಗಿಯೂ ಭಯವಾಗುತ್ತದೆ. ಇದುವೆನಾ ನಮ್ಮ ಇಂದಿನ ಜೀವನ ಶೈಲಿ ಅನಿಸುತ್ತದೆ.

ಯಾಕೆ ಹೀಗೆ? ಯಾವುದಕ್ಕೂ ವ್ಯವಧಾನವಿಲ್ಲ. ಯಾವುದಕ್ಕೂ ಸಮಧಾನವಿಲ್ಲ. ಯಾವುದಕ್ಕೂ ತೃಪ್ತಿ ಇಲ್ಲ!

ವೇಗ ವೇಗ!

ಅತಿ ಬೇಗ ಬಳಲಿಕೆಯಲ್ಲಿ ಬೇಯುತ್ತಿದ್ದೇವೆ. ಎಲ್ಲಾ ಇದೆ. ಬದುಕಿದರೇ ಹೀಗೆ ಬದುಕಬೇಕು ಅಂದುಕೊಂಡಿದ್ದೇಲ್ಲಾ ಇದೆ. ಆದರೇ ನೆಮ್ಮದಿ ಎಂಬುದು ಪುಸ್ತಕಗಳಲ್ಲಿ ಹುಡುಕುವಂತಾಗಿದೆ.

ನಮ್ಮ ಮುಂದಿರುವ ಚಿಕ್ಕ ಕುಡಿಗಳನ್ನು ನೋಡಿದಾಗ ಅವರ ಮುಂದೆ ನಾವುಗಳು ಅತಿ ವೇಗವಾಗಿ ಮುದುಕರಾಗಿಬಿಟ್ಟಿದ್ದೇವೆನೋ ಎಂದೆನಿಸುತ್ತದೆ. ಜೀವವೇ ಇಲ್ಲದಂತಾಗಿದೆ. ಬದುಕುತ್ತಿರುವುದು ಕೇವಲ ಕೆಲಸ ಮಾಡಲು ಮಾತ್ರವೇ?

ಕೆಲಸ ಏನಕ್ಕೆ?

ದುಡಿಯುವುದು ಚೆನ್ನಾಗಿ ಮತ್ತು ಸಂತೋಷವಾಗಿ ಬದುಕಲು ಅಲ್ಲವಾ? ಆದರೇ ದುಡಿಯುವುದು ಒಂದು ಬಿಟ್ಟು ಬೇರೆಲ್ಲಾ ನಗಣ್ಯವನ್ನಾಗಿ ಮಾಡಿಕೊಂಡಿದ್ದೇವೆ.

ಮಗುವಿನ ಒಂದು ಮಾತನ್ನು ಆಲಿಸದಾರದಷ್ಟು ಪೇಶನ್ಸ್ ಇಲ್ಲವಾಗಿದೆ. ಯಾವುದಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದೇವೆ? ನಮ್ಮ ಜೀವನದ ಅತಿ ಅಮುಲ್ಯ ಕ್ಷಣಗಳನ್ನು ಗೊತ್ತಿಲ್ಲದ ರೀತಿಯಲ್ಲಿ ಯಾವುದಕ್ಕೇ ಮುಡಿಪಿಟ್ಟಿದ್ದೇವೆ?

ಗೊತ್ತಾಗುತ್ತಿಲ್ಲ!

ನಾವು ನೆಮ್ಮದಿಯ ಜೀವನವನ್ನು ಸಾಗಿಸುತ್ತಿಲ್ಲ. ನಮ್ಮನ್ನು ಅವಲಂಬಿಸಿರುವ ನಮ್ಮವವರಿಗೂ ಶಾಂತಿಯನ್ನು ಕೊಡುತ್ತಿಲ್ಲ. ಇದು ಯಾಕೋ ಭ್ರಮೆಯ ಲೋಕದ ಒಂದು ಭ್ರಮಣೆಯಲ್ಲಿ ಸುತ್ತುತ್ತಿದ್ದೇವೆಂದು ಅನಿಸುತ್ತದೆ.

ಎಲ್ಲೇಲ್ಲೂ ಹೋಗಬೇಕು. ಮುಂದಿನ ವಾರದ ವಿಕೇಂಡ್ ನಲ್ಲಿ ಹೊಸ ಜಾಗಕ್ಕೆ ಹೋಗಬೇಕು. ವಿಕ್ ಡೇಸ್ ನೆನಪಿಗೆ ಗೋಲಿ ಮಾರೋ! ಎಂದೇಳಿ ಹೊಸ ಸ್ಥಳಗಳಿಗೆ ಹೋದರೂ ಬಿಡದೇ ಕಾಡುವ ಪೀಡೆಯಂತೆ ಮತ್ಯಾವೂದೋ ವಿಷಯಗಳು ಕಾಡುತ್ತವೆ. ಅಲ್ಲಿಯು ನಲಿಯುವುದಿಲ್ಲ, ಉಲಿಯುವುದಿಲ್ಲ.. ಥೋತ್ ತೇರಿಕೆ.........?

ಜನರೊಡನೆ ಬಾಯಿಬಿಟ್ಟು ಹೆಚ್ಚು ಮಾತನಾಡುವುದಕ್ಕಿಂತ ಪುಟ್ಟ ಮೊಬೈಲ್ ನಲ್ಲಿರುವ ಪೇಸಬುಕ್, ವಾಟ್ಸಾಪ್, ಎಸ್.ಎಂ.ಎಸ್ ಗಳು ತುಂಬ ಅಪ್ಯಾಯಮಾನವಾಗಿವೆ. ಅದರಲ್ಲಿಯೇ ತಮ್ಮನ್ನು ಬ್ಯುಸಿಯಾಗಿ ಇಟ್ಟುಕೊಳ್ಳೊಣವೆಂದೆನಿಸುತ್ತದೆ.

ಇಂಟರ್ ನೆಟ್ ಇರುವ ಮೊಬೈಲ್ ಇದ್ದರೇ ಜಗತ್ತೇ ಬೇಡವೆಂದೆನಿಸುತ್ತದೆ. ಎಲ್ಲರಿಂದ ದೂರ ಇರೋಣ ಎಂಬಂತೆ ಇಂದಿನ ಜನರೇಶನ್ ಮುಂದಡಿಯಿಡುತ್ತಿರುವುದು ವ್ಯವಸ್ಥೆಯ ದುರ್ಬಲತೆಯನ್ನು ಎತ್ತಿ ತೋರಿಸುತ್ತಿದೆ.

ಮನುಷ್ಯನ ಸಂಬಂಧಗಳು ಅತಿ ವಿರಳತೆ-ಜಾಳತೆಯಾಗಿ ಕಾಣುತ್ತಿದೆ. ಹೆಚ್ಚು ಹೆಚ್ಚು ಮಾನವ ಸಂಬಳ್ವೆ ಸಮಯ ಹಾಳು ಎಂಬಂತಾಗಿದೆ. ಏನಾದರೂ ನೀ ಒಬ್ಬನೇ ನಿರ್ವಹಿಸು ಎನ್ನುವಂತಾಗಿದೆ. ಹೆಚ್ಚು ಸಾಧಕನಾಗಬೇಕೆಂದರೇ ಯಾರ ಕೈಗೂ ನೀ ಸಿಗದ ರೀತಿಯ ನಿನ್ನ ಬದುಕು ಕಟ್ಟಿಕೊಳ್ಳುವಂತನಾಗು ಎನ್ನುವಂತಾಗಿದೆ.

ಹೋಗಲಿ ಮನೆಯಲ್ಲಿರುವವರೊಂದಿಗಾದರೂ ದಿನದ ಒಂದು ಗಂಟೆ ಯಾವುದೇ ಪೇಸ್ ಬುಕ್, ಕಾಲ್, ವಾಟ್ಸ್ ಆಪ್, ಟಿ.ವಿ ಇವುಗಳ ಒಡನಾಟವಿಲ್ಲದೇ ಕೇವಲ ಮನುಷ್ಯರೊಂದಿಗೆ ಕಳೆಯುವುದೇ ದುರ್ಲಬ ಮತ್ತು ಕಷ್ಟಕರ ವಿಷಯವೆಂದರೇ ಅತಿಶಯೋಕ್ತಿಯಲ್ಲ.

ನೆನಸಿಕೊಂಡರೇ ಮೈ ಜುಂ ಅನಿಸುತ್ತದೆ.

ನಾವೇಕೆ ಇಷ್ಟೊಂದು ಯಾಂತ್ರಿಕರಾಗಿದ್ದೇವೆ...? ಹೀಗೆ ಮುಂದುವರಿದರೇ ಇದು ಎಲ್ಲಿಗೆ ಹೋಗಿ ನಿಲ್ಲುವುದೋ?

ಸ್ವಲ್ಪ ಗೂಗಲ್ ಮಾಡಿ ಉತ್ತರ ಕಂಡುಕೊಳ್ಳಬಹುದೇನೋ?

ಯೋಚಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ