ಭಾನುವಾರ, ಅಕ್ಟೋಬರ್ 21, 2012

ಎಲ್ಲಿಂದ ಬಂದೆ?

ಕನಸು ಮನಸ್ಸಿನಲ್ಲೂ ನೆನಸಿರಲಿಲ್ಲ. ಹೊಸ ಜಾಗ ಹೊಸ ನೋಟದಲ್ಲಿ ಬರೀ ಅಚ್ಚರಿಗಳ ಸಂತೆಯಲ್ಲಿ ಅಂದು ನಿಂತಿದ್ದೆ. ಪ್ರತಿಯೊಂದು ನೋಟವು ನವತರುಣಿಯನ್ನು ಕಂಡು ನನ್ನನ್ನು ನಾನು ಮರೆತಂತ ಅನುಭವ. ಕೊಂಚ ಭಯ ಕೊಂಚ ಸಂಕೋಚಬರಿತ ವಾತವರಣವೇ ಆಗಿತ್ತು.


ಇದಕ್ಕೆ ಮೊದಲು ಇಲ್ಲಿಯ ಜಾಗವನ್ನು ಎಂದು ನೋಡಿರಲಿಲ್ಲ. ಯಾರ ಜೊತೆಯಲ್ಲೂ ಮಾತನಾಡುವುದು ಇರಲಿ. ಪ್ರತಿಯೊಂದು ಮೊಕ ಸಂಭಾಷಣೆ. ಯಾಕೆಂದರೇ ನಾನು ಮಾತನಾಡುವ ಭಾಷೆಗೆ ನನ್ನಾಣೆ ಯಾರೊಬ್ಬರೂ ಪ್ರತಿಕ್ರಿಯಿಸುವುದಿಲ್ಲ.


ಇಂಥ ನಗರದಲ್ಲಿ ಅದು ಎಲ್ಲಿಂದ ನೀ ಅವತರಿಸಿ ನನ್ನ ಬಳಿ ಬಂದೆ?


ನನ್ನ ಕಸಿವಿಸಿಯಲ್ಲಿ ಆ ಕಪ್ಪು ರೋಡಿನಲ್ಲಿನ ಸಿ.ಟಿ ಬಸ್ ನಲ್ಲಿ ನಾನು ಸುಲ್ತಾನ್ ಪೇಟೆ ಎಂದು ಕಂಡಕ್ಟರನ್ನು ಕೇಳುತ್ತಾ ಕೇಳುತ್ತಿದ್ದರೇ.. ಆ ಕಂಡಕ್ಟರ್ ನನ್ನನ್ನು ನನಗೆ ಅರ್ಥವಾಗದ ಭಾಷೆಯಲ್ಲಿ ಎಲ್ಲಿಗೆ ಎಲ್ಲಿಗೆ ಟಿಕೇಟ್ ಬೇಕು ಎಂದು ಎರಡೇರಡು ಬಾರಿ ಕೇಳುತ್ತಿರುವಾಗ.. ನನಗೆ ಸಹಾಯ ಮಾಡಲು ಬಂದಂತೆ ತುಮ್ ಕಿದರ್ ಜಾನಾ ಚಾ ಥೀ?


ಎಂದಾಗ ಅಯ್ಯೋ ನಾನು ನನ್ನನ್ನು ಮರೆತುಬಿಟ್ಟೆ!


ನಾನು ಏನೊಂದು ಉತ್ತರವನ್ನು ಕೊಡುವ ಮೋಡಿನಲ್ಲಿಯೇ ಆಗ ಇರಲಿಲ್ಲ.


ಯಾಕೆಂದರೇ ಈ ಕಂಡಕ್ಟರ್ ಏನೇನು ಹೇಳುತ್ತಿದ್ದಾನೆ.. ಈ ಸುಂದರ ಪುತ್ಥಳಿಯ ಬಾಯಿಯಲ್ಲಿ ಹಿಂದಿ ಭಾಷೆ. ನನಗೆ ನಾನೇ ಕನಸೋ ನನಸೋ ಅನಿಸಿಬಿಟ್ಟಿತು.


ಪಕ್ಕದಲ್ಲಿ ನಿಂತಿರುವವನು ಕಂಡಕ್ಟರ್ ಬಾಷೆಯಲ್ಲಿ ನನ್ನನ್ನು ಮೈ ಮುಟ್ಟಿ ಎಚ್ಚರಿಸಿದಾಗ ತಡವರಿಸಿ ಸುಲ್ತಾನ್ ಪೇ..ಟೆ ಎಂದಾಗ.. "ನೀನು ಅಂಥ ಏರಿಯಾ ನೇ ಇಲ್ಲಿ ಇಲ್ಲ. ಸೈದಾಪೇಟೆ ಗೆ ತಾನೆ ಹೋಗಬೇಕಾಗಿರುವುದು?" ಎಂದಾಗ ಹುಂ ಎನ್ನದೇ ಬೇರೆ ದಾರಿಯೇ ಇರಲಿಲ್ಲ.


ನನ್ನ ಬಾಯಿಯಲ್ಲಿ ಇಲ್ಲದ ಊರು ಬಂದಿತ್ತು. ನಾನು ಅದು ಹೇಗೋ ಅಂದು ದಾರಿಯಲ್ಲಿ ಹೋಗುತ್ತಿರುವ ಬಸ್ ಬೋರ್ಡನಲ್ಲಿ ಹಾಗೆ ಓದಿಕೊಂಡಿದ್ದು ಹಾಗೆಯೇ ತಪ್ಪಾಗಿ ಉತ್ತರಿಸಿದ್ದೆ.


ಕಂಡಕ್ಟರ್ ನಗುತ್ತಾ ಒಂಬತ್ತು ರೂಪಾಯಿಯ ಚೀಟಿ ಹರಿದು ಒಂದು ರೂಪಾಯಿಯ ಜೊತೆ ಹಿಂದುರುಗಿಸಿದ. ಆ ಎರಡನ್ನು ಜೇಬಲ್ಲಿ ಸೇರಿಸುವಾಗ ನಾನು ನೋಡುತ್ತಿದ್ದದ್ದು ನಿನ್ನನ್ನೇ..


ಅಲ್ಲಾ ಇಲ್ಲಿ ಇಂಥ ಸಾದ ಸೀದಾ ಸರಳ ಸುಂದರಿಯರು ಇರುವರಲ್ಲಾ ಅನಿಸಿತು.


ನಾನು ಅಂತೂ ಗೊತ್ತಿರುವ ಒಂದು ಭಾಷೆಯಲ್ಲಿ ಮಾತನಾಡುವವರು ಸಿಕ್ಕಿದರಲ್ಲ ಎಂದು.. ಹುಡುಗಿ ಚೆನ್ನಾಗಿದ್ದಾಳೆ.. ನೋಡಿದರೇ ನನ್ನ ರೀತಿಯಲ್ಲಿಯೇ ಬೇರೆ ಊರಿಂದ ಬಂದು ಇಲ್ಲಿರಬೇಕು.. ಎಂದುಕೊಂಡು ಹಾಗೆಯೇ ಅವಳ ಚಿಕ್ಕ ಪರಿಚಯ ಮಾಡಿಕೊಂಡಿದ್ದೂ..


ಈ ಹುಡುಗಿಯು ಸಹ ನಾನು ಕೇಳಿದ ಜಾಗಕ್ಕೆ ಹೋಗುತ್ತಿದ್ದಾಳೆ. ನಾನು ನನ್ನ ಭಾಷೆಯ ಕಷ್ಟವನ್ನು ಇಲ್ಲಿ ಜೀವಿಸಬೇಕಾದ ಅನಿವಾರ್ಯತೆಯನ್ನು ಹೇಳಿಕೊಂಡು ಹಗುರಾದೇ.


ನಿಂತುಕೊಂಡೇ ಇದ್ದಾಗ ನಾನು ಇಳಿಯುವ ಜಾಗ ಬಂದಿತು. ಅವಳು ಸಹ ಅಲ್ಲಿಯೆ ಇಳಿದಳು. ನಾನು ಇಳಿದೆ. ನಾನು ಅಲ್ಲಿಂದ ಮುಂದೆ ಕಿಲಪಾಕ್ ಗಾರ್ಡನ್ ಕಡೆ ಹೋಗುವ ೪೭ ಎ ಮತ್ತೊಂದು ಬಸ್ ಗಾಗಿ ಕಾಯುವೆ ಎಂದಾಗ.


ಅವಳು ನಾನು ಬೆಂಗಳೂರಿನಲ್ಲಿ ಇರುವುದು. ಇಲ್ಲಿ ನನಗೆ ಎಂ. ಎನ್. ಸಿ ಯಲ್ಲಿ ಕೆಲಸ ಸಿಕ್ಕಿರುವುದರಿಂದ ಇಲ್ಲಿ ವಾಸ ಮಾಡುತ್ತಿದ್ದೇನೆ. ಎಂದು ಹುಡುಗಿ ಹೇಳಿಕೊಂಡಿತು. ಪರವಾಗಿಲ್ಲ. ಎಷ್ಟೊಂದು ಭಾಷೆಯನ್ನು ಕಲಿತಿರುವಿರಲ್ಲಾ? ಎಂದಾಗ.. ಅವಳು ನಕ್ಕ ನೋಟ ನಿಜವಾಗಿಯೂ ಇವಳು ತುಂಬ ಮುಗ್ಧವಾದ ಹುಡುಗಿ. ರೂಪಕ್ಕೆ ತಕ್ಕಂತ ಮಾತು. ಮಾತಿಗೆ ತಕ್ಕಂತ ಗಂಭೀರತೆ. ಗಂಭೀರತೆಗೆ ತಕ್ಕಂತಹ ಧೀರಿಸು. ನೋಡಿದ ತಕ್ಷಣ ಗೌರವವನ್ನು ಕೊಡುವಂತ ವ್ಯಕ್ತಿತ್ವ. ಈ ರೀತಿಯ ಹುಡುಗಿಯರು ಅಪರೂಪಕ್ಕೆ ಸಿಗುತ್ತಿರುತ್ತಾರೆ. ಕೈ ಎತ್ತಿ ಮುಗಿಯಬೇಕು.


ನನಗೆ ಮೊದಲು ಮೋಡಿ ಮಾಡಿದ್ದು. ಆ ಹಸಿರು ಚೋಡಿದಾರದಲ್ಲಿದ್ದದ್ದು. ಹಾಗೆಯೇ ಹಣೆಗೆ ಇದೇಯೋ ಇಲ್ಲವೊ ಎಂಬಂತೆ ಚಿಕ್ಕ ಬಿಂದಿ. ತಲೆಗೆ ಚಿಕ್ಕ ಎರಳು ಬಿಳಿ ಹೂ. ಕೈಯಲ್ಲಿ ಮೂರೇ ಮೂರು ಹಸಿರು ಬಳೆಗಳು. ಬೆರಳಲ್ಲಿ ಒಂದು ಚಿಕ್ಕ ವಜ್ರದ ಉಂಗುರ. ಅಲ್ಲಾ? ಈ ಕಾಲದಲ್ಲೂ ಈ ಮೆಟ್ರೋ ನಗರದಲ್ಲಿ ಎಮ್. ಎನ್. ಸಿ ಯಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಭಾರತೀಯ ಸಂಸ್ಕೃತಿಯನ್ನು ಪ್ರತಿಪಾಧಿಸುವ ನಾರಿಮಣಿಯಾಗಿ ನಿದರ್ಶನವಾಗಿದ್ದಾಳಲ್ಲ ಅನಿಸಿತು.


ಹುಡುಗಿ ಆ ಸುಮಧುರ ಕಂಠದಿಂದ "ಬೆಂಗಳೂರಿನಲ್ಲಿ ನಾನು ಹುಟ್ಟಿದ್ದು, ಬೆಳದದ್ದು. ನನ್ನ ಓಣಿಯಲ್ಲಿನ ಮನೆಯವರಲ್ಲಿ ತಮಿಳು ಬ್ರಾಹ್ಮಣರ ಮನೆಯು ಇತ್ತು. ಅಲ್ಲಿಯೇ ನನಗೆ ತಮಿಳಿನ ಓ ನಾಮ ಸಿಕ್ಕಿದ್ದು. ಹಿಂದಿ,ಇಂಗ್ಲಿಷ್ ಶಾಲೆಯಲ್ಲಿ ದೊರೆಯಿತು. ಆದ್ದರಿಂದ ಸುಮಾರಾಗಿ ಮ್ಯಾನೇಜ್ ಮಾಡುವಷ್ಟು, ತೆಲಗು,ತಮಿಳು,ಹಿಂದಿ ಭಾಷೆಗಳು ಕನ್ನಡ ಮತ್ತು ಇಂಗ್ಲೀಷ್ ಜೊತೆಯಲ್ಲಿ ಸಿಕ್ಕಿದೆ.


ನನಗೆ ತುಂಬ ಖುಷಿಯಾಯಿತು. ಆದರೂ ನೀವು ನಿಮ್ಮ ಮನೆಯವರನ್ನೇಲ್ಲಾ ಬಿಟ್ಟು ಇಲ್ಲಿದ್ದೀರಲ್ಲಾ? ಬೆಂಗಳೂರಿನಲ್ಲಿ ಟ್ರೈ ಮಾಡಿದ್ದರೇ ಅಲ್ಲಿಯೇ ಕೆಲಸ ಮಾಡಬಹುದಾಗಿತ್ತು ಅಂದೇ? ಹೌದು. ಆದರೂ ನನಗೆ ಒಂದು ಕನಸಿದೆ ಭಾರತದ ಎಲ್ಲಾ ಮುಖ್ಯ ರಾಜ್ಯಗಳಲ್ಲೂ ಕೆಲಸ ಮಾಡಬೇಕು. ಒಂದೆರಡು ವರುಷ ಕೆಲಸ ಮಾಡುತ್ತಾ ಅಲ್ಲಿನ ಜನ, ಆಚಾರ, ವಿಚಾರ, ಸಂಸ್ಕೃತಿಯನ್ನು ಅರಿಯಬೇಕು ಎಂಬುದು. ಎಂದು ಉತ್ತರಿಸಿದಾಗ ನನಗೆ ನಾನೇ ಅಚ್ಚರಿಗೊಂಡೆ.



ಈಗ ಎಲ್ಲಿಗೆ ಹೋಗುತ್ತಿದ್ದೀರಾ ಎಂದಾಗ ಹುಡುಗಿ ನಾನು ಇಲ್ಲಿಯೇ ಅಣ್ಣ ಸ್ಕೋಯರ್ ಬಳಿ ಇಂದು ಒಂದು ತಮಿಳು ಸಂಸ್ಕೃತಿ ಸಾಹಿತ್ಯ ಪ್ರತಿಕ್ಷ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ. ಎಂದಾಗ ಅಲ್ಲಾ ಎಲ್ಲಿಯಾ ಐ.ಟಿ? ಎಲ್ಲಿಯ ಸಾಹಿತ್ಯ? ಇಂದು ಇನ್ನೂ ಈ ರೀತಿಯ ಯೋಚಿಸುವ ಹುಡುಗಿಯರು ಇದ್ದಾರಲ್ಲಾ ಅನಿಸಿತು.


ವಿಕೇಂಡ್ ಸಿಕ್ಕಿದರೇ ಸಾಕು ಯಾವುದಾದರೂ ಶಾಪಿಂಗ್ ಮಾಲ್ ಗೆ ದಾಳಿ ಇಟ್ಟು. ಪೋರಂ ಮಾಲ್ ನಲ್ಲಿ ಸುತ್ತಾಡಿ. ಪಿ.ವಿ.ಆರ್ ನಲ್ಲಿ ಇಂಗ್ಲೀಷ್ ಮೋವಿ ನೋಡುವ ತರುಣ ತರುಣಿಯರ ಯುಗದಲ್ಲೂ ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಇಷ್ಟಪಟ್ಟು ಸವಿಯುವರು ಇದ್ದಾರಲ್ಲಾ. ಬೇಷ್ ಅನಿಸಿತು.


ನಾನು ನನ್ನ ಬಗ್ಗೆ ಅದು ಇದು ಹೇಳಿಕೊಂಡೆ. ಹುಡುಗಿಯು ಸಹ ತುಂಬ ಕುತೂಹಲದಿಂದ ನನ್ನನ್ನೇ ದಿಟ್ಟಿಸುತ್ತಾ ನಾನು ಹೇಳುವುದನ್ನು ಕಿವಿಯಾಗಿ ಕೇಳಿತು. ನನಗೋ ಇವಳ ಜೊತೆಯಲ್ಲಿಯೇ ಇದ್ದರೇ ಸಾಕು ಅನಿಸುತ್ತಿತ್ತು. ಕಿಲಾಪಾಕ್ ಗೇ ಗೋಲಿ ಮಾರೋ ಅನ್ನಿಸಿತು. ಆದರೇ ಮೊದಲ ಬೇಟಿಯಲ್ಲಿಯೇ ಆ ರೀತಿಯ ಸಲುಗೆಯನ್ನು ತೆಗೆದುಕೊಳ್ಳುವುದು ಬೇಡ ಅನಿಸಿತು.


ಅವಳು ಕೇಳಿದಳು "ನೋಡಿ ನಿಮಗೆ ಇಂಟರಸ್ಟ್ ಇದ್ದರೇ ಈ ಸಮ್ಮೇಳನ್ನಕ್ಕೆ ಜೊತೆಯಲ್ಲಿಯೇ ಹೋಗಿಬರೋಣ" ಅಂದಳು. ನಾನೇ ಇಲ್ಲಾರೀ ನನ್ನ ಸ್ನೇಹಿತರ ಮನೆಗೆ ಬರುತ್ತೇನೆ ಎಂದು ಹೇಳಿದ್ದೇನೆ. ಆದ್ದರಿಂದ ಅಲ್ಲಿಗೆ ಹೋಗಲೆ ಬೇಕು. ಅವರುಗಳು ಕಾಯುತ್ತಿರುತ್ತಾರೆ ಅಂದೇ. ಓ ಹಾಗದರೇ ಯು ಕ್ಯಾನ್ ಕ್ಯಾರಿ ಆನ್. ಮುಂದಿನ ವಿಕೇಂಡ್ ನೀವು ಪ್ರೀ ಇದ್ದರೇ ಮತ್ತೇ ಸಿಗೋಣ. ನಾನು ಇರುವುದು ಅಲ್ಲಿಯೇ ರಾಮಪುರಂ ಬಸ್ ಸ್ಟಾಪ್ ಹಿಂದಿನ ರೋಡ್ ನಲ್ಲಿರುವ ಲೇಡಿಸ್ ಪಿ.ಜಿ ಯಲ್ಲಿ. ಅಂದಳು.


ಅಲ್ಲಾ ಇವಳನ್ನು ಪುನಃ ಹೇಗೆ ಹಿಡಿಯಲಿ. ಪೋನ್ ನಂಬರನ್ನು ನಾನೇ ಬಾಯಿ ಬಿಟ್ಟು ಕೇಳುವುದು ಅಸಭ್ಯತೆ ಅನಿಸಿತು. ಹೋಗಲಿ ಅವಳಾದರು ಕೊಡಬಾರದ ಅಂತಾ ಯೋಚಿಸುವಾಗ.. "ನಿಮ್ಮ ಪೋನ್ ನಂಬರ್ ಹೇಳಿ" ಎಂದಾಗ. ನಾನು ತಡವರಿಸುತ್ತಾ ನನ್ನ ಇಲ್ಲಿನ ನಂಬರನ್ನು ಮೋಬೈಲ್ ತೆಗೆದುಕೊಂಡು ನೋಡಿಕೊಂಡು ಕೊಟ್ಟೆನು. ಅವಳು ಮೀಸ್ ಕಾಲ್ ಕೊಟ್ಟಳು.

ನಾನು ನನ್ನ ಬಸ್ ಗಾಗಿ ಕಾಯುತ್ತಿದ್ದಂತೆಯೇ ಅವಳು ಹೋಗುವ ಬಸ್ ಬಂದಿತು. ಅವಳು ಅದರಲ್ಲಿ ಹತ್ತಿಕೊಂಡು ಬಾಯ್ ಎಂದು ಟಾಟ ಮಾಡುತ್ತಾ.. ಹಿಂದಿನ ಡೋರ್ ನಲ್ಲಿ ಹತ್ತಿ ಹೋರಟು ಹೋದಳು.

ಬೀರು ಬಿಸಿಲಿನ ಬೇಗೆ ಈಗ ಪ್ರಾರಂಭವಾಯಿತು. ಅವಳು ಇದ್ದಷ್ಟು ಹೊತ್ತೂ ಏನೊಂದು ಅನಿಸಿದ್ದಿಲ್ಲ. ಅವಳನ್ನು ನೋಡುತ್ತಾ. ಅವಳು ಮಾತನ್ನಾಡುತ್ತಿದ್ದ ಮಾತನ್ನು ಕೇಳುತ್ತಾ. ನನ್ನನ್ನೇ ನಾನು ಮರೆತುಬಿಟ್ಟಿದ್ದೇ. ಮರಳುಗಾಡಿನಲ್ಲಿ ಓಯಾಸಿಸ್ ಕಂಡುಷ್ಟು ಖುಷಿಯಲ್ಲಿದ್ದೇ.


ಪುನಃ ಈ ಹುಡುಗಿಯನ್ನು ಕಾಣಬೇಕೆಂದರೇ ಒಂದು ವಾರ ಕಾಯಬೇಕಲ್ಲ? ಅನಿಸಿತು.


ಹುಡುಗಿಯನ್ನು ನೋಡಿದರೇ ಎಂಗೇಜ್ ಆಗಿರುವಂತೆ ಇಲ್ಲ ಅನಿಸುತ್ತದೆ. ಇದ್ದಿದ್ದರೇ ಅವಳ ಬಾಯ್ ಪ್ರೇಂಡೂ ಸಹ ಜತೆಯಲ್ಲಿಯೇ ಬರಬೇಕಾಗಿತ್ತು.


ಅವಳ ಸರಳ ನಡೆನುಡಿಯನ್ನು ಗಮನಿಸದರೇ ಒಳ್ಳೆಯವಳು ನಂಬುವಂತವಳು ಅನಿಸುತ್ತಿದೆ. ಹೀಗೆ ಹೀಗೆ ಏನೇನೋ ಹಗಲು ಕನಸನ್ನು ಕಾಣುತ್ತಾ ನಿಂತಿದ್ದಾಗ. ೪೭ ಎ ಬಸ್ ದೂಳೆಬ್ಬಿಸುತ್ತಾ ನಾನು ನಿಂತಲ್ಲಿಗೆ ಬಂದಿತು.

ಅವಳ ಗುಂಗಿನಲ್ಲಿಯೇ ನಾನು ಬಸ್ ಹತ್ತಿ ಕಂಡಕ್ಟರ್ ಗೆ ೧೦ರ ನೋಟನ್ನು ಕೊಟ್ಟು ನಾನು ಹೋಗಬೇಕಾಗಿರುವ ಸ್ಥಳಕ್ಕೆ ಚೀಟಿಯನ್ನು ತೆಗೆದುಕೊಂಡು ಹಿಂದಿನ ಮೊಲೆಯ ಸೀಟಿನಲ್ಲಿ ಕುಳಿತುಕೊಂಡೆ. ಮನವೆಲ್ಲಾ ಅವಳ ಬಗ್ಗೆಯೇ ಯೋಚಿಸುತ್ತಿತ್ತು....?
 

1 ಕಾಮೆಂಟ್‌:

  1. Hmmm Rudrappa aware,

    Finally the cat got caught!!!
    This time you cannot get away by saying that whatever you said in the article has not happened with you.

    It seems you had a fantastic experience past weekend. That was really nice, each and every man wants to have such kind of movement in their life, whether they fall or not in Love with them.

    Anyways you have to wait for another 5 days to meet her. Don’t forget to write about it in your next article k.

    Really I liked it, the way you explained about the thoughts that went in your mind while you were with her.

    Thanks for sharing and will be waiting for your upcoming article.

    Regards.
    Guru.

    ಪ್ರತ್ಯುತ್ತರಅಳಿಸಿ