ಬುಧವಾರ, ಅಕ್ಟೋಬರ್ 3, 2012

ಎಲ್ಲಾ ಇದ್ದೂ ಏನನ್ನೋ

ಮೆಟ್ರೋಪಾಲಿಟನ್ ನಗರಗಳ ಒಂದು ಜಾಯಮನವೆಂದರೇ ತಮ್ಮತನವನ್ನು ಮರೆತು ಕೇವಲ ಕೃತಕವಾದ ಬದುಕನ್ನು ಬದುಕುವುದು.




ನೀವು ಗಮನಿಸಿ ನೀವು ಯಾವುದೇ ಮೆಟ್ರೋ ನಗರಗಳಿಗೆ ಬೇಟಿ ಕೊಟ್ಟರು ಅವುಗಳ ಮೊದಲ ನೋಟ ಒಂದೇ ರೀತಿ ಇರುತ್ತದೆ. ಅದರಲ್ಲಿ ಅಕ್ಷರಶಃ ವ್ಯತ್ಯಾಸವಿರುವುದಿಲ್ಲ.



ಅದೇ ಯಾವುದಾದರೂ ಒಂದು ಚಿಕ್ಕ ನಮ್ಮ ಪಟ್ಟಣಗಳಿಗೆ ಮೊದಲ ಕಾಲೂರಿದರೇ ನಿಮಗೆ ಒಂದು ವ್ಯತ್ಯಾಸ ಸಿಕ್ಕೇ ಸಿಕ್ಕಿರುತ್ತದೆ. ಅದೇ ಅಲ್ಲಿನ ನೈಸರ್ಗಿಕ ಗುಣ.



ದೊಡ್ಡ ದೊಡ್ಡ ನಗರಗಳ ಹಣೆಬರಹವೇ ಹೀಗೆ. ಜನರಿಂದ ಹಿಡಿದು ಪ್ರತಿಯೊಂದು ಯಾವುದೋ ಒಂದು ಯಂತ್ರಕ್ಕೆ ಕೀಲಿ ಕೊಟ್ಟಂತೆ ತಮ್ಮ ಪಾಡಿಗೆ ತಾವುಗಳು ಜೀವಂತ ಚಲಿಸುತ್ತಿರುವಂತೆ ಭಾಸವಾಗುತ್ತಿರುತ್ತದೆ. ಪ್ರತಿಯೊಂದು ಮತ್ತೊಂದರ ಪೊಟೋ ಕಾಪಿಯಂತೆ ಕಾಣಿಸುತ್ತದೆ.



ಆ ನಗರದ ನೈಜತೆಯನ್ನು ಗಮನಿಸಬೇಕೆಂದರೇ ಪುನಃ ಯಾವುದಾದರೂ ಹಳೆಯ ಸಿಟಿ ಮಧ್ಯದ ಗಲ್ಲಿಗಳಿಗೆ ಬೇಟಿ ಕೊಟ್ಟುಕೊಂಡು, ಹೌದು ನಾನು ಇರುವುದು ಚೆನೈ,ಬೆಂಗಳೂರು ಎಂದು ಮನನ ಮಾಡಿಕೊಳ್ಳಬೇಕಾಗುತ್ತದೆ.



ಇಲ್ಲವಾದರೇ ನಾವಿರುವುದು ಹೆಸರೇ ಇಲ್ಲದ ಒಂದು ಕೆಲಸ ಮಾಡುವ ನಗರ ಅನಿಸಿಬಿಡುತ್ತದೆ.



ಎಲ್ಲಿ ನೋಡಿದರೂ ವಾಹನಗಳು, ಸೂಟೂಬೂಟು ಹಾಕಿಕೊಂಡ ತರುಣರ ಮೆರವಣಿಗೆ,ಜನವೋ ಜನ ಯಾವುದೋ ಅಧಮ್ಯವಾದದ್ದನ್ನು ತಮ್ಮದಾಗಿಸಿಕೊಳ್ಳಲು ಎಲ್ಲಿಗೂ ಹೋಗುತ್ತಿದ್ದಾರೆಂಬ ಭಾವನೆಯನ್ನು ಭರಿಸುತ್ತಾರೆ. ಮಾತು ಕತೆಯೆಲ್ಲಾ ಬೇರೆ ಅದೇ ಹಿಂದಿ ಅಥವಾ ಇಂಗ್ಲೀಷ್. ದೊಡ್ಡ ದೊಡ್ಡ ಮಿಂಚುವ ಗಗನಚುಂಬಿ ಕಟ್ಟಡಗಳು ಅದರ ಮಹಾದ್ವಾರದ ಮುಂದೆ ಅದೇ ಸೆಕ್ಯೂರಿಟಿ ಜನಗಳು ಮತ್ತು ಅವರ ಪರೀಕ್ಷೆ. ವೇಗವಾಗಿ ನುಗ್ಗುವ ಎರಡು ಚಕ್ರದ ಬೈಕುಗಳು, ಕಪ್ಪು ಗ್ಲಾಸ್ ಏರಿಸಿಕೊಂಡು ಸೂಯ್ ಎಂದು ದುಳೆಬ್ಬಿಸುವ ಕಾರುಗಳು. ಇದೆಲ್ಲಾ ಐ.ಟಿ ಬಿ.ಟಿ ಪರಿಣಾಮ ಮಾರಾಯ್ರೆ ಎಂದು ಮೂಗು ಎಳೆಯಬೇಡಿ.



ಜಗತ್ತು ಬದಲಾಗುತ್ತಿರುವ ಪರಿ ಇದು. ಸಾಕಾಷ್ಟು ಉದ್ಯೋಗಾವಾಕಾಶಗಳನ್ನು ಈ ಒಂದು ರಂಗ ನಮ್ಮ ತರುಣರಿಗೆ ಕೊಟ್ಟಿದೆ. ಅಷ್ಟರ ಮಟ್ಟಿಗೆ ನಮ್ಮ ನೆಲದ ನಿಜವಾದ ಜೀವಂತ ಜೀವನ ಸೆಲೆಯನ್ನು ಅದು ತನ್ನಲ್ಲಿ ಸೇರಿಸಿಕೊಂಡಿದೆ.



ನೀ ಬದುಕಬೇಕೆಂದರೇ ಅದರಂತೆಯೇ ನೀನು ಕೋಲು ಹಾಕಬೇಕು.



ಆದ್ದರಿಂದ ಹೊಸ ಜಾಗ, ಹೊಸ ಊರುಗಳಿಗೆ, ಹೊಸ ನಗರಗಳಿಗೆ ಬಂದಾಗ ಆಗುವ ಪುಳಕ ನನ್ನಾಣೆ ನಮ್ಮಲ್ಲಿ ಏನೂ ಮಾಡಿದರೂ ಆಗುವುದಿಲ್ಲ.



ಏ ಇದು ಮತ್ತೊಂದು ಬೆಂಗಳೂರು ಅನಿಸುತ್ತದೆ. ಇದೆ ಭಾವನೇ ನೂಯಾರ್ಕ್ ನೋಡಿದಾಗಲೂ ಅನಿಸುತ್ತದೆಯೆಂದರೇ ನಾವು ನೋಡುತ್ತಿರುವುದೆಲ್ಲಾ ಕೇವಲ ಜೆರಾಕ್ಸ್ ಮಾತ್ರ.



ಹೌದು! ಮನುಷ್ಯ ಏನೇ ಮಾಡಿದರೂ ಪ್ರಕೃತಿಯ ಮುಂದೆ ಅದು ಹೇಗೆ ವಿಭಿನ್ನವಾಗಿ ಮತ್ತು ಅಷ್ಟೇ ಅದ್ಬುತವಾಗಿರಲು ಸಾಧ್ಯ? ಅದು ಮತ್ತೊಂದರ ಕನಸು.. ಮತ್ತೊಂದರ ಯೋಚನೆಯೇ ಆಗಿರಲೇ ಬೇಕು.



ನೀವು ಗಮನಿಸಿರಬಹುದು ಇದು ನಗರ, ಪಟ್ಟಣಗಳು, ಕಟ್ಟಡಗಳು, ಕಪ್ಪು ರಸ್ತೆಗಳನ್ನು ಬಿಡಿ ವ್ಯಕ್ತಿ ವ್ಯಕ್ತಿಗಳಿಗೂ ಒಂದೇ ಹೊಲಿಕೆ ಅನಿಸುತ್ತದೆ. ಎಲ್ಲಿಯೇ ನೋಡಿ ಪ್ರತಿಯೊಬ್ಬರೂ ಅದು ಏನೋ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ಕಿವಿಯಲ್ಲಿ ಕೈಯಲ್ಲಿ ಸಿಗಿಸಿಕೊಂಡು ಅವರದೇಯಾದ ಲೋಕದಲ್ಲಿ ಮುಳುಗಿರುತ್ತಾರೆ. ಅವರ ಪ್ರತಿ ವರ್ತನೆ ಒಂದೇ ರೀತಿಯಿರುತ್ತದೆ. ಇಲ್ಲಿಯು ಸೇಮ್ ಟೂ ಸೇಮ್ ಹೊಲಿಕೆ.. ಕಣ್ಣಬಿಟ್ಟ ಕಡೆ ಅದೇ ಪುನಾರವರ್ತಿತ ನೋಟಗಳು. ವ್ಯಕ್ತಿಯ ಗುಣಗಳು ಮಾತ್ರ ಬದಲಾಗದಿದ್ದರೇ ಸಾಕು ಅಲ್ಲವಾ?



ಇನ್ನೂ ಯಾವುದೇ ನಗರಗಳಿಗೆ ಹೊಸದಾಗಿ ಹೆಜ್ಜೆ ಇಟ್ಟಾಗ ಪ್ರತಿಯೊಬ್ಬರಿಗೂ ಮೊದಲು ಬರುವ ಯೋಚನೆ ಇಲ್ಲಿಯ ಆಟೋ, ಟ್ಯಾಕ್ಸಿಗಳು ನಮ್ಮನ್ನು ಹೊಸಬರು ಎಂದುಕೊಂಡು ಸುಲಿಯುತ್ತಾರೆ..! ಹೌದು ಇದು ಇದ್ದುದ್ದೇ ಆ ಮೊಲಕ ನಾವುಗಳು ಮುಂದೆ ಆ ಊರಿನಲ್ಲಿ ಹೇಗೆಲ್ಲಾ ಸರಿಯಾಗಿ ಬದುಕಬೇಕು ಎಂಬ ಪಾಠವನ್ನು ಅವರು ಕಲಿಸುತ್ತಾರೆ. ಅದಕ್ಕಾಗಿ ಹೇಳಿ ಮತ್ತೆ ಆ ಎಲ್ಲಾ ಬಾಯಿಗೆ ಬಂದಂತೆ ಕೇಳುವ ಮಂದಿಗೆ ಒಂದು ಜೈ!!



ಗಮನಿಸಿ ನಮಗೆ ನಮ್ಮ ಸ್ವಂತ ಊರು ಕೊಟ್ಟಷ್ಟು ಅಚ್ಚರಿಗಳನ್ನು ಯಾವಾ ಸ್ವರ್ಗಸಮನಾದ ನಾಡು ಕೊಟ್ಟಿರುವುದಿಲ್ಲ.



ನೀವು ಅನ್ನಬಹುದು ಏಯ್ ನೀ ನಿನ್ನ ಊರಿನಲ್ಲಿಯೇ ಹುಟ್ಟಿ ಬೆಳದಿದ್ದೀಯ ಇನ್ನೂ ಏನೂ ಇದೆ ಅಲ್ಲಿ ಮಣ್ಣಂಗಟ್ಟಿ?



ಆದರೇ ಆ ಜನ್ಮ ಭೂಮಿ ಕೊಡುವ ನೆಮ್ಮದಿಯನ್ನು ಯಾವ ಲಕ್ಷದ ನಗರವು ನಮ್ಮಗಳಿಗೆ ಎಂದು ಕೊಡುವುದಿಲ್ಲ. ಅ ನಿನ್ನ ಚಿಕ್ಕ ಮೊಲೆಯ ಪುಟ್ಟ ಊರು ನಿತ್ಯ ಹೊಸ ಹೊಸ ಆಶ್ಚರ್ಯಗಳಿಗೆ ತೆರೆದುಕೊಳ್ಳುತ್ತಿರುತ್ತದೆ. ಎತ್ತಾ ನೋಡಿದರೂ ಏನೋ ಆಹ್ಲಾದ. ಎತ್ತಾ ತಿರುಗಿದರು ಏನೋ ಒಂದು ಸಂತೋಷ. ಊರೇ ನಾವಾಗಿರುತ್ತೇವೆ ನಾವೇ ಊರಾಗಿರುತ್ತದೆ.



ಅದರ ಪ್ರತಿಯೊಂದು ಚಿಕ್ಕ ಗಲ್ಲಿಯು, ಅಲ್ಲಿರುವ ವಾಸನೆ ಭರಿತ ಹರಿಯುವ ಚರಂಡಿಗಳು, ತಿಪ್ಪೆಗುಂಡಿಗಳು, ಊರ ಹೊರಬಾಗದಲ್ಲಿರುವ ಹಸಿರು ಮರಗಳು, ಅಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿ ಪಕ್ಷಿಗಳು, ಹಣ್ಣು ಹಣ್ಣು ಮುದುಕರು, ನಿತ್ಯ ಅಚ್ಚರಿಯನ್ನುಂಟು ಮಾಡುವ ಹೊಸ ಹೊಸ ಹುಡುಗಿಯರ ಮುಖಗಳು, ಅದೇ ಗಲ್ಲಿಯಲ್ಲಿ ಎಂದೋ ಮುಖತೊಳೆದಂತೆ ಕಾಣುವ ಚಿಟಿಪಿಟಿಯೆಂದು ಆಟವಾಡುವ ಆ ಮಕ್ಕಳು ಪ್ರತಿಯೊಬ್ಬರೂ ನಮ್ಮವರೇ ಎಂಬ ಭಾವನೆಯೇ ನಮ್ಮನ್ನು ತುಂಬ ನೆಮ್ಮದಿಯಾಗಿ ಸಂತೋಷವಾಗಿ ಇಟ್ಟಿರುತ್ತದೆ.



ಈ ಯಾವುದೇ ಒಂದು ಚಿಕ್ಕ ಭಾವನೇ ನಾವು ಕಾಣುವ ನಮ್ಮ ಹೈಟೆಕ್ ಸಿಟಿಗಳಲ್ಲಿ ಲಕ್ಷ ಕೊಟ್ಟರೂ ಸಿಗಲಾರದು. ಎಲ್ಲಾ ಇದ್ದೂ ಏನನ್ನೋ ಕಳೆದುಕೊಂಡ ಭಾವನೆ ನಿತ್ಯ ಕಾಡುತ್ತಿರುತ್ತದೆ. ಅದಕ್ಕೆ ಅನಿಸುತ್ತದೆ ಸ್ವಲ್ಪ ದಿನಗಳಲ್ಲಿಯೇ ಈ ಎಲ್ಲಾ
ಐಷಾರಮ್ಯ ಜೀವನ ಮಹಾ ಬೋರ್ ಅನಿಸುತ್ತದೆ..!!



ನಿಮಗೋ?

1 ಕಾಮೆಂಟ್‌:

  1. Hmmm… good comparison!! As we all know and stick to today’s generation and the living style, that’s expedite. Good narration. Somewhere I was feeling like I am going through Pancharangi Movie script… “GALU-GALU..sss” but it was nice indeed.

    Regarsa.
    Guru

    ಪ್ರತ್ಯುತ್ತರಅಳಿಸಿ