ಶನಿವಾರ, ಅಕ್ಟೋಬರ್ 13, 2012

ಅತಿಥಿ ದೇವೋಭವ

ಅತಿಥಿ ದೇವೋಭವ ಎಂಬುದು ನಮ್ಮ ಸಂಸ್ಕೃತಿ. ನಾವುಗಳು ಯಾರಾದರೂ ಹೊಸಬರು/ಪರಿಚಿತರು ನಮ್ಮ ನಮ್ಮ ಮನೆಗಳಿಗೆ ಬೇಟಿ ಕೊಟ್ಟರೆ ಎಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದರೇ ನಮ್ಮ ಮನೆ ದೇವರನ್ನು ಎಷ್ಟು ಭಯ ಭಕ್ತಿ ಮತ್ತು ಪ್ರೀತಿಯಿಂದ ಉಪಚರಿಸುತ್ತೇವೋ ಅದೇ ರೀತಿಯಲ್ಲಿ ಅತಿಥಿಗಳನ್ನು ಕಾಣುತ್ತೇವೆ.




ತಕ್ಷಣ ಮನೆಯ ಬಾಗಿಲಿಗೆ ಬಂದಾಗ ಮೊದಲು ಮಾಡುವ ಕೆಲಸ ಎಂದರೇ ನಗು ನಗುತ ಒಳಗಡೆಗೆ ಕರೆಯುತ್ತೇವೆ. ಮನೆಯಲ್ಲಿ ಯಾರದಾರೂ ಕುಳಿತುಕೊಂಡಿದ್ದರೆ ಪ್ರತಿಯೊಬ್ಬರೂ ಎದ್ದು ಒಳಗಡೆ ಬರುತ್ತಿರುವ ವ್ಯಕ್ತಿಯನ್ನು ಸ್ವಾಗತಿಸುತ್ತೇವೆ. ಅದು ಅವರಿಗೆ ಕೊಡುವ ಮನೆಯ ಮೊದಲ ಗೌರವ. ಇದನ್ನು ಯಾರು ಸಹ ಹೇಳಿಕೊಟ್ಟ ಪಾಠವೆನಲ್ಲಾ. ನಮ್ಮ ಸಂಸ್ಕೃತಿಯೇ ಹಾಗೆ ಮಾಡಬೇಕು ಎಂಬುದನ್ನು ಮನನ ಮಾಡಿರುತ್ತದೆ.



ಬಂದವರನ್ನು ಉನ್ನತವಾದ ಆಸನದಲ್ಲಿ ಕೂರಿಸುತ್ತೇವೆ. ನಾವುಗಳು ಅವರು ಕೂರುವವರೆಗೂ ನಿಂತೆ ಇರುತ್ತೇವೆ. ಅವರು ಕೂತ ಅನಂತರ ಕೂರುತ್ತೇವೆ. ಮನೆಯಲ್ಲಿರುವವರ ಪರಿಚಯವನ್ನು ನಗು ನಗು ಮುಖದೊಡನೆ ಮಾಡಿಕೊಡುತ್ತೇವೆ. ಇದರಿಂದ ಹೊಸಬರಿಗೆ/ಪರಿಚಯದವರಿಗೆ ಮನೆಯವರ ಬಗ್ಗೆ ಪರಸ್ಪರ ವಿಶ್ವಾಸ ಬರುತ್ತದೆ. ಅದು ಇದು ಮಾತನ್ನಾಡಲು ಪ್ರಾರಂಭ ಮಾಡುವ ಮೊದಲು ನೀರನ್ನು ಕುಡಿಯಲು ಕೊಡುತ್ತೇವೆ. ಇದಂತು ಒಂದು ಮಾದರಿಯ ಉಪಚಾರ.



ಉತ್ತರ ಕರ್ನಾಟಕದ ಕಡೇ ನೀರಿನ ಜೊತೆಯಲ್ಲಿ ಬೆಲ್ಲವನ್ನು ಕೊಡುವುದು ವಾಡಿಕೆ.



ಅನಂತರ ಅಡಿಗೆಯ ಮನೆಯಿಂದ ಕಾಫಿ, ಟೀ ಇತ್ಯಾದಿ ಸಿಹಿ ಪಾನಿಯಗಳು ಅತಿಥಿಗೆ ಬರುತ್ತವೆ. ಅವನ್ನು ಅವರು ಸೇವಿಸುತ್ತಾರೆ. ಆನಂತರ ದಿನದ ಸಮಯಕ್ಕೆ ಅನ್ವಯಿಸಿ ತಿಂಡಿ,ಊಟ ಇತ್ಯಾದಿ.



ಮಕ್ಕಳಿದ್ದರೇ ಅವರುಗಳು ಇಂಥ ಅತಿಥಿ ಬರುವುದನ್ನೇ ಕಾಯುತ್ತಿರುತ್ತಾರೆ. ಯಾಕೆಂದರೇ ಆಗ ಯಾವ ರೀತಿಯಲ್ಲೂ ಮನೆಯವರು ಇವರ ಮೇಲೆ ಮುನಿಸು ಮಾಡುವುದಿಲ್ಲ. ಅತಿಥಿಗಳಿಗೆ ಸಿಗುವ ಎಲ್ಲಾ ಉಪಚಾರ ಇವರಿಗೂ ಅನಾಯಸವಾಗಿ ಬರುತ್ತದೆ. ಆದ್ದರಿಂದ ತುಂಬ ಖುಷಿ.



ಗೊತ್ತಾ..ನಾವು ಹಳ್ಳಿಯಲ್ಲಿರುವಾಗ ಅದು ನಿಜವಾ ಇಂದಿಗೂ ಗೊತ್ತಿಲ್ಲಾ. ಸಾಂಬರ್ ಕಾಗೆ ಎಂಬ ಕಾಗೆಯಂತಿರುವ ಒಂದು ಪಕ್ಷಿ. ಸ್ವಲ್ಪ ಕಾಫಿ ಬಣ್ಣವನ್ನು ಹೊಂದಿರುವ ಸೇಮ್ ಕಾಗೆಯಂತಿರುವ ಪಕ್ಷಿ ದರ್ಶನವಾದರೇ ಯಾರಾದರೂ ನೆಂಟರು ಮನೆಗೆ ಬೇಟಿಕೊಡುತ್ತಾರೆ. ಎಂದು ನಮ್ಮ ನಮ್ಮಲ್ಲಿಯೇ ಶಕುನವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೇವು.



ಇದೆ ರೀತಿಯಲ್ಲಿ ಮತ್ತೊಂದು ಶಕುನವೆಂದರೇ. ಅಡಿಗೆ ಮಾಡುವ ಒಲೆ ಹರಿಸಿದರೆ ನೆಂಟರು ಮನೆಗೆ ಬರುತ್ತಾರೆ. ಹಳ್ಳಿಯಲ್ಲಿ ಇಂದಿಗೂ ಬಹುತೆಕ ಮಂದಿ ಸೌದೆ ಒಲೆಯನ್ನೆ ಬಳಸುವುದು. ಈ ಸೌದೆ ಒಲೆ ಗಾಳಿ ಅಥವಾ ಸೌದೆಯಲ್ಲಿನ ಟೊಳ್ಳು ಇತ್ಯಾದಿಗಳಿಂದ ಒಂದು ರೀತಿಯಲ್ಲಿ ಶಬ್ಧ ಮಾಡಿಕೊಂಡು ಒಲೆ ಉರಿಯುತ್ತದೆ. ಇದನ್ನು ಒಲೆ ಹರಿಸುತ್ತಿದೆ ಎಂದು ಹಳ್ಳಿಯವರು ಕರೆಯುವುದು. ಒಲೆ ಏನಾದರೂ ಹರಿಸಿದರೇ ಖಂಡಿತವಾಗಿ ಮನೆಗೆ ಯಾರಾದರೂ ಅತಿಥಿಗಳು ಆಗಮಿಸುತ್ತಾರೆ ಎನ್ನುತ್ತಿದ್ದರು.



ಒಮ್ಮೊಮ್ಮೆ ನಿಜವಾಗುತ್ತಿತ್ತು. ಆದ್ದರಿಂದ ಈ ಎರಡು ಶಕುನಗಳನ್ನು ನಾವುಗಳೂ ಬಾಲ್ಯದಲ್ಲಿ ಗಟ್ಟಿ ಮಾಡಿಕೊಂಡು ಖುಷಿಪಡುತ್ತಿದ್ದೇವು.



ಇಂದು ನಗರ ಜೀವನದಲ್ಲಿ ಈ ಎಲ್ಲಾ ಕೇವಲ ಕತೆ ಸಿನಿಮಾಗಳಲ್ಲಿ ನೋಡುವಂತಾಗಿದೆ. ಗ್ಯಾಸ್ ಒಲೆಗಳು ಅವುಗಳನ್ನು ಮೊಲೆಗುಂಪು ಮಾಡಿಬಿಟ್ಟಿದೆ.



ಅತಿಥಿಗಳೆಂದರೆ ಪರಸ್ಥಳದಿಂದ ಬರುತ್ತಿದ್ದರು. ಅವರು ಬಂದರೇ ಸುಖಸುಮ್ಮನೇ ಬರೀ ಕೈಯಲ್ಲಿ ಎಂದು ಬರುತ್ತಿರಲಿಲ್ಲ. ಅವರು ಮಕ್ಕಳಿಗಾಗಿಯೇ ಎಂಬಂತೆ ಏನಾದರೂ ತಿಂಡಿ ತಿನಿಸುಗಳನ್ನು ತರುತ್ತಿದ್ದರು. ಆದ್ದರಿಂದ ನಮಗೋ ಅವರ ಬಗ್ಗೆ ಎಲ್ಲಿಲ್ಲದ ಕಾಳಜಿ. ಅವರು ಇರುವಷ್ಟು ದಿನ ನಮಗೇ ನಾವೇ ರಾಜರು.



ನನಗೆನಿಸುತ್ತದೆ ಅಂದಿನಿಂದ ನಮ್ಮಗಳಿಗೆ ಗೊತ್ತಾಗದ ರೀತಿಯಲ್ಲಿ ನಮ್ಮ ನಮ್ಮ ಮನೆಯವರುಗಳು ಅತಿಥಿಗಳ ಉಪಚಾರವನ್ನು ತಿಳಿಸಿಕೊಟ್ಟಿರುತ್ತಾರೆ. ಹಿರಿಯರನ್ನು ನಾವುಗಳು ಗಮನಿಸಿರುತ್ತಿರುತ್ತೇವೆ. ಅವರು ಮಾಡುವ ಉಪಚಾರವನ್ನು ನಾವುಗಳೂ ಸಹ ಮುಂದುವರಿಸಿಕೊಂಡು ಮುಂದಿನ ಪೀಳಿಗೆಗೆ ಅಸ್ತಂತರಿಸುತ್ತಿದ್ದೇವೆ.



ನಾವುಗಳೂ ಸಹ ಬೇರೆ ಯಾರಾದರೂ ಮನೆಗೆ ಪರ ಊರಿಗೆ ಹೋದಾಗ ಇದೆ ರೀತಿಯಲ್ಲಿ ನಮಗೂ ಅತಿಥ್ಯ ಸತ್ಕಾರ ಸಿಕ್ಕಿರುತ್ತದೆ. ಆದರ ಋಣವನ್ನು ಅವರುಗಳು ನಮ್ಮ ಮನೆಗಳಿಗೆ ಬಂದಾಗ ತೀರಿಸಿಕೊಳ್ಳುತ್ತಿದ್ದೇವು.



ನಾವುಗಳು ಮಾಡುವ ಅತಿಥಿ ಸತ್ಕಾರದ ಮೇಲೆ ನಮ್ಮ ನಡಾವಳಿಯನ್ನು ನಿರ್ಧರಿಸುವಂತಿರುತ್ತದೆ ಅಲ್ಲವಾ?



ಇದಕ್ಕೆ ಇರಬೇಕು. ಇದಕ್ಕೆ ಹೊಂದಿಕೊಂಡಂತೆ ಹತ್ತು ಹಲವಾರು ಗಾದೆಗಳನ್ನು ನಮ್ಮ ಜನಪದ ರಚಿಸಿಬಿಟ್ಟಿದ್ದಾರೆ.



"ಬಡವರ ಮನೆ ಊಟ ಚೆನ್ನ. ಶಾನಭೋಗರ ಮನೆ ಬಡಿವರ ಚೆನ್ನ."



"ಅನ್ನ ಇಟ್ಟ ಮನೆ ಎಂದು ಕೆಡುವುದಿಲ್ಲ"



ಮತ್ತೂ ನಮ್ಮ ಕತೆ,ಪುರಾಣಗಳಲ್ಲಿ ದೇವರು ಒಮ್ಮೊಮ್ಮೆ ಅತಿಥಿಗಳ ರೂಪದಲ್ಲಿ ಜನ ಸಾಮಾನ್ಯರ ಮನೆಗಳಿಗೆ ಬೇಟಿಕೊಡುವುದು. ಅರಿಯದ ಮನುಷ್ಯ ಅವನನ್ನು ಬೇರೆಯಾಗಿ ಅಸಡ್ಡೆಯಾಗಿ ಕಾಣುವುದು. ಅದಕ್ಕಾಗಿ ಕಷ್ಟಪಡುವುದು. ದೇವರು ಮುನಿಸಿಕೊಳ್ಳುವುದು.. ಹೀಗೆ ನಾನ ರೀತಿಯ ನಿದರ್ಶನಗಳಿಂದ ನಮ್ಮಗಳಿಗೆ ಅತಿಥಿ ಎಂದರೇ ಸಾಕ್ಷತ್ ದೇವರು ಎಂಬಂತಾಗಿದೆ.



ಆದರೇ ಗೊತ್ತಿರುವವರು ಬಂದರೇ ಮಾತ್ರ ನಾವು ಒಂದು ಸ್ವಲ್ಪ ಹೆಚ್ಚಾಗಿ ಆಧಾರಿಸುತ್ತೇವೆ. ಗೊತ್ತಿಲ್ಲದವರು ಯಾರಾದರೂ ಬಂದರೇ ಇಂದಿನ ಜಮಾನದಲ್ಲಿ ಯಾರನ್ನು ನಂಬುವುದು? ಯಾರನ್ನು ಬಿಡುವುದು ಎಂಬಂತಾಗಿದೆ ಇದು ಸಿಟಿ ಲೈಫ್!



ಅದು ಸರಿ ಎಲ್ಲರನ್ನೂ ಅತಿಥಿ ಎಂದುಕೊಂಡು ಆಧರಿಸುತ್ತಾ ಕೂರುವ ಸಮಯಾವಕಾಶ ನಮ್ಮಗಳ ಬಳಿ ಇರಲಾರದು... ಇದು ವಾಸ್ತವ.



ಆದರೂ ಈ ರೀತಿಯ ಒಂದು ನಡಾವಳಿ ನಮ್ಮ ಭಾರತದಲ್ಲಿ ಮಾತ್ರ ಯಾರೊಬ್ಬರೂ ಭಾರ ಎಂದು ಎಂದಿಗೂ ಅಂದುಕೊಳ್ಳುವುದಿಲ್ಲ.



ಇದು ಒಂದು ನಮ್ಮ ನಮ್ಮ ಬಂದುಗಳು,ಹತ್ತಿರದವರ ನಡುವೆ ಸ್ನೇಹ ಸಂಬಂಧವನ್ನು ಇನ್ನು ಗಟ್ಟಿಯಾಗಿ ಬೆಸೆಯುವ ಒಂದು ಸದಾವಕಾಶ. ಪರಸ್ಪರ ಒಬ್ಬರನ್ನೊಬ್ಬರೂ ಅರಿಯಲು, ನಾವುಗಳೆಲ್ಲಾ ಒಂದೇ ಎಂಬುದನ್ನು ನಮ್ಮಲ್ಲಿ ಮತ್ತು ನಮ್ಮ ಮುಂದಿನ ಪೀಳಿಗೆಗೆ ಮುನ್ನಡಿಸಿಕೊಂಡು ಹೋಗಲು ಸರಿಯಾದ ದಾರಿ ಮಾಡಿಕೊಟ್ಟಂತೆ.



ನನಗಂತೂ ಈ ರೀತಿಯ ಅತಿಥಿ ಸತ್ಕಾರವನ್ನು ಕೆಲವರಿಂದ ಪಡೆದು ತುಂಬ ಸಂತೋಷಗೊಂಡಿದ್ದೇನೆ. ನನಗೆ ನಾನೇ ವಿಸ್ಮಯಗೊಂಡಿದ್ದೇನೆ. ನನ್ನ ಸ್ನೇಹಿತನ ಮನೆಗೆ ಬೇಟಿಕೊಟ್ಟಾಗ ಸ್ನೇಹಿತನ ತಂದೆ ತಾಯಿ,ಅವರ ಮಡದಿಯವರ ಅತಿಥ್ಯವನ್ನು ಕಂಡು ಬೆಂಗಳೂರಿನಲ್ಲೂ ಇಂಥವರು ಈಗಲೂ ಇದ್ದಾರೆಯೇ ಎಂದು ಮೂಕನಾಗಿದ್ದೇನೆ. ಒಂದಿಷ್ಟು ಬೇಸರವಿಲ್ಲದೆ ನಮಗೋಸ್ಕರ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ನಮ್ಮ ಬಾಯಿಯನ್ನು ಸಕ್ಕರೆ ಮಾಡುವ ಅವರ ಬದುಕು ಎಂದು ಹಾಲು ಸಕ್ಕರೆಯಾಗಿರಲಿ ಎಂಬುದೇ ನನ್ನ ಆಸೆ.



ಇತ್ತೀಚೆಗೆ ನಾನು ಬೇರೊಂದು ರಾಜ್ಯಕ್ಕೆ ಬೇಟಿಕೊಟ್ಟಾಗ ನನ್ನ ಸ್ನೇಹಿತರ ಮನೆಯವರು ನನ್ನನ್ನು ಸತ್ಕರಿಸಿದ್ದನ್ನು ನೆನಸಿಕೊಂಡರೇ.... ಅಲ್ಲಾ ಈ ರೀತಿಯ ಒಂದು ನಡಾವಳಿ ಭಾಷೆ/ರಾಜ್ಯ/ಸಂಸ್ಕೃತಿಯ ಗಡಿಯನ್ನು ಮೀರಿ ನಿಂತಿದೆಯೆಲ್ಲಾ ಎಂದು ಅಚ್ಚರಿಗೊಂಡಿದ್ದೇನೆ. ಯಾರಾದರೂ ಬಂದರೇ ಯಾಕಾದರೂ ಬರುವರೋ ಎಂಬ ದುಬಾರಿ ಯುಗದಲ್ಲಿ ಯಾವ ಯಾವ ರೀತಿಯಲ್ಲಿ ಅತಿಥಿಯನ್ನು ಅವನ ಮನೆಯೇ ಎಂಬ ಫೀಲ್ ಬರುವ ಮಟ್ಟಿಗೆ ಸಂಬಳಿಸುವವರು ಇರುವುದರಿಂದಲೇ ನಮ್ಮ ಭಾರತೀಯ ಸಂಸ್ಕೃತಿಯನ್ನು ಐರೋಪ್ಯ ದೇಶಗಳು ನೋಡಿ/ಅನುಭವಿಸಿ ಅಳವಡಿಸಿಕೊಳ್ಳಲು ಇಂದು ತವಕಗೊಂಡಿರುವುದು.



ನಮ್ಮ ನಮ್ಮ ಮನೆಯ ಈ ಸಂಸ್ಕೃತಿಗೆ ನಾವುಗಳು ಹೆಮ್ಮೆಪಡಬೇಕು!!

1 ಕಾಮೆಂಟ್‌:

  1. Hmmmm…. Yet another nice article!!!

    Picturisation of Rural was nice, that too differentiation between Gas stove and the wooden one was good. I liked it. And any Indian goes through it will feel proud of it, cause in foreign countries to visit relatives we need to take an appointment, as they value time more than relations.

    Good one… keep it up Rudrappa Aware.

    Regards,
    Guru.

    ಪ್ರತ್ಯುತ್ತರಅಳಿಸಿ