ಗುರುವಾರ, ಸೆಪ್ಟೆಂಬರ್ 20, 2012

ಇದು ಆಗೋ ಮಾತಲ್ಲಾ


ನಮ್ಮಿಂದ ಏನೂ  ಮಾಡಲು ಸಾಧ್ಯವಾಗದ ಅಸಹಾಯಕತೆಯ ಸಮಯದಲ್ಲಿಯೇ ಅನಿಸುತ್ತದೆ. ನಾವುಗಳು ನಮ್ಮ ಸುತ್ತಲಿನವರ ಜೊತೆಯಲ್ಲಿ ಆ ವಿಷಯದ ಬಗ್ಗೆ ತುಂಬಾನೆ ಹೆಚ್ಚು ಮಾತನ್ನಾಡುತ್ತೇವೆ. ಆ ಸಮಯಕ್ಕೆ ನಾವುಗಳು ಏನನ್ನೂ ಮಾಡದವರಾಗಿರುತ್ತೇವೆ. ಅದರ ನಿಜ ರೂಪವೇ ನಮ್ಮಿಂದ ಹೀಗೆ ಪುಂಕಾನು ಪುಂಕವಾಗಿ ಬರುವ ಮಾತುಗಳು.

ಏನಾದರೂ ಆಗಿರಬಹುದು. ನಮ್ಮಿಂದ ಆಗುವಂತಹ ನಮಗೆ ನಿಲುಕುವ ಕಾರ್ಯಗಳ ಬಗ್ಗೆ  ಹೆಚ್ಚಿಗೆ ಬೇರೊಬ್ಬರ ಜೊತೆಯಲ್ಲಿ ಯಾವತ್ತಿಗೂ ಹೇಳಿಕೊಂಡಿರುವುದೇ ಇಲ್ಲ. ಅಂಥ ಒಂದು ಕಾರ್ಯಗಳನ್ನು ಮೂಕವಾಗಿ ಮುಗಿಸಿರುತ್ತೇವೆ. ಯಾಕೆಂದರೇ ಅಲ್ಲಿ ಮಾತಿಗಿಂತ ಮಾಡುವ ಕೆಲಸ ಮುಖ್ಯವಾಗಿರುತ್ತದೆ.

ಆದಕ್ಕೆ ಇರಬೇಕು ನಮ್ಮಿಂದ ಬದಲಾಯಿಸಲಾರದಂತಹ ವ್ಯವಸ್ಥೆಯ ಬಗ್ಗೆ ನಾವುಗಳು ಕೊಡುವ ಲೆಕ್ಚರ್ ಗಳ ಬಗ್ಗೆ ಲೆಕ್ಕಾನೆ ಇರುವುದಿಲ್ಲ.

ಯಾರಾದರೂ ನಾವಾಡುವ ಮಾತುಗಳನ್ನು ಕೇಳಿಸಿಕೊಂಡುಬಿಟ್ಟರೆ ನಿಜವಾಗಿಯೂ ನಂಬಿಬಿಡುತ್ತಾರೆ. ಅದು ಕೇವಲ ಮಾತು ಎಂಬುದನ್ನು ದೇವರಾಣೆಗೂ ಯಾರೂ ನಂಬುವುದಿಲ್ಲ. ಆದರೇ ಅದೇ ಮಾತುಗಳು ಸುಮಾರು ದಿನಗಳಾದ ಮೇಲೆ ಪುನಾರವರ್ತನೆಗೊಂಡರೇ ಕೇಳುಗರು ಮೂಗು ಮುರಿಯುತ್ತಾರೆ!

ಇದಕ್ಕೆ ಪೂರಕವಾಗಿ ಯಾರದರೂ ನಮಗೆ ಸರಿ ಹೊಂದುವ ಮಿತ್ರಮಂಡಳಿ ಸಿಕ್ಕಿಬಿಟ್ಟರೆ ಮುಗಿಯೇ ಹೊಯ್ತು. ನಾವಾಡುವ ಪ್ರತಿ ಮಾತಿಗೆ ಒಂದು ಚೂರು ಪ್ರೋತ್ಸಾಹ ಸಿಕ್ಕಿದರೇ ಕೇಳುವುದೇ ಬೇಡ.

ಹಳ್ಳಿಯಿಂದ ದಿಲ್ಲಿಯವರೆಗೆ ಚಿಕ್ಕ ವಿಷಯದಿಂದ ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಎಲ್ಲ ಗೊತ್ತಿರುವ ಙ್ಞಾನವನ್ನು ಉಪಯೋಗಿಸಿಕೊಂಡು ಜಾಡಿಸಿಬಿಟ್ಟಿರುತ್ತೇವೆ.

ಏಯ್ ನಾನು ಆ ಜಾಗದಲ್ಲಿರಬೇಕಾಗಿತ್ತು. ನಾನು ಹೀಗೆ ಮಾಡುತ್ತಿದ್ದೆ. ಆ ಕೆಲಸ ಹೇಗೆ ಇರಬೇಕಾಗಿತ್ತು ಎಂಬುದನ್ನು ತೋರಿಸುತ್ತಿದ್ದೆ. ಈಗ ಇರುವ ಈ ಜನಗಳು ಬರಿ ವೇಸ್ಟ್ ಏನ್ ಮಾಡುವುದು ಹಲ್ಲು ಇದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲು ಇಲ್ಲ!

ನಮ್ಮ ದೇಶಕ್ಕೆ ಭವಿಷ್ಯವಿಲ್ಲ ಕಣ್ರೀ. ನಮ್ಮ ರಾಜಕೀಯ ಎಂದೆಂದಿಗೂ ಬದಲಾಗುವುದಿಲ್ಲ. ಈ ನನ್ನ ಮಕ್ಕಳು ನಮ್ಮ ದೇಶವನ್ನು ಕೊಳ್ಳೆ ಹೊಡೆಯಲೆಂದೇ ಅಧಿಕಾರ ಹಿಡಿದಿದ್ದಾರೆ... ಯಾವಾ ಅಣ್ಣಾ ಹಜಾರೆ ಬಂದರೂ ಇವರುಗಳು ಮಾಡುತ್ತಿರುವ ಭ್ರಷ್ಟಾಚಾರವನ್ನು ಎಂದಿಗೂ ನಿಲ್ಲಿಸಲು ಸಾಧ್ಯವಿಲ್ಲ.

ನಮ್ಮ ದೇಶದ ಅಧಿಕಾರ ನವ ಯುವಕರ ಕೈಗೆ ಸಿಗಬೇಕು. ಆಗ ನೋಡಿ ಏನೇನ್ ಮಾಡುತ್ತಾರೆ. ಆ ಸಮಯ ಬರಬೇಕು. ಕಟ್ಟ ಕಡೆಯ ಸಾಮಾನ್ಯ ಮನುಷ್ಯನ ಕಣ್ಣೀರನ್ನು ಒರೆಸುವ ಕೈ ಬರಬೇಕು. ಆಗ ಮಾತ್ರ ನಾವು ಮುಂದುವರೆಯಲು ಸಾಧ್ಯ ಇತ್ಯಾದಿ ಇತ್ಯಾದಿ ದೇಶಾಭಿಮಾನದ ಮಾತುಗಳು.

ಇದರಲ್ಲಿ ಒಂದೇರಡು ಸತ್ಯವಾದ ಮಾತುಗಳಾಗಿರಬಹುದು. ಯಾಕೆಂದರೇ ಅವನು ನಿತ್ಯ ನೋಡುವ ಸಮಾಜದಿಂದ ಅದನ್ನು ಹಸಿ ಹಸಿಯಾಗಿ ತೆಗೆದುಕೊಂಡಿರುತ್ತಾನೆ. ಅದನ್ನು ಆ ರೀತಿಯಲ್ಲಿ ತನ್ನ ಬಾಯಿಂದ ಕಾರಿಕೊಳ್ಳದೇ ಬೇರೆ ದಾರಿಯೇ ಇಲ್ಲ. ಯಾಕೆಂದರೇ ಈ ವ್ಯಕ್ತಿ ಅಷ್ಟರ ಮಟ್ಟಿಗೆ ಅಸಹಾಯಕ.

ತನ್ನಿಂದ ವ್ಯವಸ್ಥೆಯನ್ನು ಬದಲಾಯಿಸಲಾಗದು ಎಂಬ ಒಂದು ಚಿಕ್ಕ ನೆರಳು ಅವನ ಜೊತೆಯಲ್ಲಿ ಅಂಟಿಕೊಂಡುಬಿಟ್ಟಿರುತ್ತದೆ. ಆ ಒಂದು ಸತ್ಯವನ್ನು ಜೀರ್ಣಿಸಿಕೊಳ್ಳಲಾರದ ಮಟ್ಟಿಗೆ ಈ ರೀತಿಯ ಆದರ್ಶದ ಮತ್ತು ಧೈರ್ಯದ ಮಾತು ತನ್ನ ಜೊತೆಯವರ ಜೊತೆಯಲ್ಲಿ ಹೇಳಿಕೊಂಡಿರುತ್ತಾನೆ.

ಇವನಿಗಂತೂ ಮುಂಜಾನೆ ಎದ್ದರೇ ಯಾವೊಂದು ಚಿಕ್ಕ ಅಧಿಕಾರವು ಸಿಗಲಾರದು. ಅಷ್ಟರ ಮಟ್ಟಿಗೆ ಆ ಒಂದು ಸತ್ಯ ತನಗೆ ತಾನೆ ಕಾಣುತ್ತಿರುತ್ತದೆ.

ನನಗೆ ಎನಿಸುತ್ತದೆ ಮದ್ಯಮ ವರ್ಗದ ಜನರಲ್ಲಿ ಈ ರೀತಿಯಾಗಿ ಸಮಾಜದ ಬಗ್ಗೆ ಸಮಯ ಸಿಕ್ಕಾಗಲೆಲ್ಲ ತನ್ನ ಕನಸನ್ನು ಬಿತ್ತರಿಸುತ್ತಿರುತ್ತಾನೆ. ಇದೆ ಅವನಿಗೆ ಒಂದು ನೆಮ್ಮದಿ. ಅಷ್ಟರಮಟ್ಟಿಗೆ ಏನಾದರೂ ಮಾಡಲೇಬೇಕು ಎಂಬ ಕಾತುರತೆಯನ್ನು ತನ್ನ ತಲೆಯ ತುಂಬ ತುಂಬಿಕೊಂಡಿರುತ್ತಾನೆ.

ಇದಕ್ಕೆ ಪೂರಕವಾಗಿ ಅವನು ಓದುವ ಕಥೆಯ ಕಥಾ ವ್ಯಕ್ತಿಗಳು, ನೋಡುವ ಸಿನಿಮಾದ ನಾಯಕನ ನಡಾವಳಿ ಈ ಎಲ್ಲಾ ಕಲ್ಪನೆಯ ಪ್ಯಾಂಟಸಿ ತುಂಬ ಮೆಚ್ಚುಗೆಯಾಗುತ್ತಿರುತ್ತದೆ. ತನ್ನಿಂದ ಮಾಡಲಾರದ ಕೆಲಸಗಳು. ಆ ಧೈರ್ಯ, ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ಗಡಸುತನ ಪ್ರತಿಯೊಂದನ್ನು ತಾನೇ ಮಾಡುತ್ತಿದ್ದೇನೆ ಎಂಬ ರೀತಿಯಲ್ಲಿ ಖುಷಿಪಡುತ್ತಾನೆ.

ಈ ರೀತಿಯ ಭಾವನೆಯ ತಳಮಳವನ್ನು ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ತಮ್ಮ ತರುಣಾವಸ್ಥೆಯಲ್ಲಿ ಅನುಭವಿಸಿಯೇ ಇರುತ್ತಾರೆ.

ನನಗೆ ಅನಿಸುತ್ತದೆ ಅಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಒಂದು ರೀತಿಯಲ್ಲಿ ಅ ಸಂಸ್ಕಾರವಾಗಿರುತ್ತದೆ. ಒಳ್ಳೆಯತನ ಎಂಬುವುದು ನಮ್ಮ ಸಂಸ್ಕೃತಿಯಲ್ಲಿಯೇ ನಮಗೆ ಗೊತ್ತಾಗದ ರೀತಿಯಲ್ಲಿ ಎಲ್ಲರಲ್ಲೂ ನಿಂತಿರುತ್ತದೆ. ಅದರ ಪರಿಣಾಮವೇ ತನ್ನ ಬಗ್ಗೆ ಅಲ್ಲದೆ ಬೇರೆಯವರ ಬಗ್ಗೆ, ತನ್ನ ಸುತ್ತಲಿನವರ ಬಗ್ಗೆ, ವ್ಯವಸ್ಥೆಯ ಬಗ್ಗೆ, ತಾನಿರುವ ದೇಶ, ರಾಜಕೀಯ, ಸರ್ಕಾರ ಮತ್ತು ಅಧಿಕಾರದ ಬಗ್ಗೆ ತಾನು ಕಂಡೊಂಡ ಒಳ್ಳೆಯತನವನ್ನು ಆಶಿಸುತ್ತಾನೆ.

ಈ ಸಂವೇದನೆ ಪ್ರತಿಯೊಬ್ಬರಲ್ಲೂ ಉದ್ಬವಿಸಿಸುತ್ತಿರುತ್ತದೆ. ಆಗ ತನಗೆ ಅನಿಸಿದ್ದನ್ನು ಹೇಳಿಕೊಳ್ಳುತ್ತಾ ಹೇಳಿಕೊಳ್ಳುತ್ತಾ ಸಮಾಧಾನಪಟ್ಟುಕೊಳ್ಳುತ್ತಾನೆ. ಅಲ್ಲಿ ಇರುವುದು ಬರೀ ಒಳ್ಳೆಯದು ಮಾತ್ರ. ಯಾವೊಂದು ಲಾಭ, ಲೋಭವಿರುವುದಿಲ್ಲ.

ಇದು ಸ್ತ್ರೀ ಸಾಮಾನ್ಯನ ಹಗಲು ಕನಸು! ಇದೂ ಎಂದಿಗೂ ಜಾರಿಬರಲಾರದಂತಹದ್ದು.


ಎಂದೋ ಓದಿದ ಆದರ್ಶ, ಎಲೋ ನೋಡಿದ ವ್ಯವಸ್ಥೆಯ ಕಲ್ಪನೆಯ ಕೂಸೆ ಇದು. ಇದರ ಹಿಡೇರಿಕೆಗಾಗಿ ನಿತ್ಯ ತನ್ನಲ್ಲಿಯೇ ತಾನು ಕೊರಗುತ್ತಿರುತ್ತಾನೆ.

ಗಮನಿಸಿ ಎಲ್ಲಾ ಮುಗಿದ ಮುದುಕರ ಮಾತುಗಳನ್ನಾ.. ಅವರು ಎಂದಿಗೂ ಇಂದಿನ ಪ್ರಸ್ತುತ ವ್ಯವಸ್ಥೆಯನ್ನು ಹಾಡಿ ಹೊಗಳುವುದಿಲ್ಲ. ಅವರನ್ನು ಕೇಳಿ ಆದರ್ಶ, ಒಳ್ಳೆಯತನ,ಬದಲಾವಣೆ ಎಂದರೇ ಅವರ ಅನುಭವದಲ್ಲಿ ಕಂಡುಕೊಂಡ ಪುರಾಣವನ್ನೇ ಬೆಚ್ಚಿಬೀಳುವಂತೆ ತೆರೆದಿಡುತ್ತಾರೆ. ಹಾಗೆಯೇ ನಮ್ಮಂತಹ ಹಗಲು ಕನಸಿನ ಹೋರಾಟವನ್ನು ಕಂಡು ಬಚ್ಚು ಬಾಯಿಯಲ್ಲಿ ನಕ್ಕುಬಿಡುತ್ತಾರೆ.

ಇದು ಆಗದು ಹೋಗದು ಬಿಡಾಪ್ಪಾ ಅಂದುಬಿಡುತ್ತಾರೆ. ಆದರೇ ನಮ್ಮ ಯುವ ಬಿಸಿ ರಕ್ತ ಕೇಳಬೇಕಲ್ಲಾ.. ಕಲ್ಲನ್ನೇ ಕುಟ್ಟಿ ಪುಡಿ ಮಾಡುವಷ್ಟು ಉತ್ಸಾಹದ ಮೂಟೆ.

ಇಂಥ ಆಸೆಯ ಮಾತುಗಳು ಕಾರ್ಯ ರೂಪಕ್ಕೆ ತರುವ ಪ್ರಯತ್ನವಾಗಬೇಕು. ಕನಸು ಕೇವಲ ಕನಸಾಗಬಾರದು. ನಿತ್ಯ ಮಾತನಾಡುವ ಟಾಪಿಕ್ ಗಳು ಕೇವಲ ಒಂದು ವಾದವಾಗಬಾರದು.

ಬದಲಾವಣೆಗೆ ಹೊಂದಿಕೊಳ್ಳುವ ಮುನ್ಸೂಚನೆ ಇದೇ ಆಗಿರಬಹುದಲ್ಲಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ