ಸೋಮವಾರ, ಸೆಪ್ಟೆಂಬರ್ 3, 2012

ಗುರು ಬಲ!


ಅಕ್ಷರ ಕಲಿಸಿದಾತ ಗುರುವು! ಅವನಿಂದ ನಾವುಗಳೂ ಅರಿವು ಎಂಬುದರ ಬಾಗಿಲನ್ನು ತಟ್ಟುವುದು. ವಿದ್ಯೆಯನ್ನು ಕಲಿಸುವವನೇ ಗುರು. ಗುರುವೇ ಅಧಿಪತಿ. ಅವನಿಲ್ಲದೇ ಏನೊಂದು ಬೆಳೆಯದು. ಅವನೇ ನಮಗೆಲ್ಲಾರಿಗೂ ಮಾರ್ಗದರ್ಶಕ!

ಇಂದು ನಮ್ಮಲ್ಲಿರುವ ಲಕ್ಷೋಪಲಕ್ಷ ಶಿಕ್ಷಣ ಸಂಸ್ಥೆಗಳು ಅಲ್ಲಿರುವ ಶಿಕ್ಷಕರು, ಪ್ರೋಪೆಸರ್ ಳೆಲ್ಲಾ ಗುರುವಿನ ಸ್ಥಾನವನ್ನು ಅಲಂಕರಿಸಿ ಶಿಷ್ಯರ ಏಳ್ಗೆಯೊಂದೆ ತಮ್ಮ ಕಾಯಕವನ್ನಾಗಿ ಮಾಡಿಕೊಂಡು ನಮ್ಮ ಯುವ ಪೀಳಿಗೆಯನ್ನು ಸರಿಯಾದ ಅಕ್ಷರಸ್ಥರನ್ನಾಗಿ ಮಾಡುತ್ತಿದ್ದಾರೆ. ಅವರೆಲ್ಲರಿಗೂ ನಮ್ಮ ನಾಗರೀಕ ಸಮಾಜ ಎಂದೆಂದೂ ಚಿರಋಣಿಯಾಗಿರಬೇಕಾಗಿದೆ.

ನಮ್ಮ ಬದುಕಿನ ಈ ದಾರಿಯಲ್ಲಿ ನಮ್ಮ ನಮ್ಮ ಜೀವನದಲ್ಲಿ ಒಂದೊಂದು ಚಿಕ್ಕ ಪ್ರಶ್ನೆ ಮತ್ತು ಜಟಿಲವಾದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವಂತೆ ಮಾಡುವಲ್ಲಿ ನಮ್ಮೊಂದಿಗೆ ಹಲವಾರು ಗುರುಗಳ ಸ್ಥಾನದಲ್ಲಿ ನಿಂತು  ನಿತ್ಯ ಅಸರೆಯಾಗಿರುತ್ತಾರೆ.

ಅವರುಗಳು ನಮ್ಮ ಹೆತ್ತವರಾಗಿರಬಹುದು,ಸಂಬಂಧಿಕರು,ಸ್ನೇಹಿತರು, ನೆರೆಹೊರೆಯವರು, ಸಹ ಉದ್ಯೋಗಿಗಳು, ಓದುವ ಅಮೊಲ್ಯ ಪುಸ್ತಕಗಳು, ಪತ್ರಿಕೆಗಳು, ಇಂಟರ್ ನೇಟ್ ಇವರೆಲ್ಲಾ ಸಮಯಕ್ಕೆ ಸರಿಯಾಗಿ ನಮ್ಮನ್ನು ತಿದ್ದಿತೀಡಿ ನಮ್ಮ ಕಷ್ಟಗಳನ್ನು ಅವರ ಅನುಭವವೆಂಬ ಮೊಸೆಯಿಂದ ಬಗೆಹರಿಸಿರುತ್ತಾರೆ.

ಹೀಗೆ ಏನಾದರೂ ಒಂದು ಗೊತ್ತಿಲ್ಲದ ವಿಷಯ ಸಂಗತಿಗಳ ಅರಿವನ್ನುಂಟು ಮಾಡುವುದರಲ್ಲಿ ಈ ರೀತಿಯ ಎಲ್ಲರ ಸಹಾಯ ಹಸ್ತ ದೊಡ್ಡದಾಗಿರುತ್ತದೆ. ಅಂಥವರೆಲ್ಲಾ ನಮ್ಮೆಲ್ಲರಿಗೆ ಎಂದಿಗೂ ಗುರುಗಳೇ ಸರಿ. ನಮಗೆ ತಿಳಿಯದನ್ನು ತಿಳಿಸುವವರೆಲ್ಲಾ ನಮಗೆ ಗುರುಗಳೇ!

ಗುರುಗಳೆಂದರೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ತನ್ನ  ಶಿಷ್ಯನ ಉದ್ಧಾರ ಮಾತ್ರವಾಗಿರುತ್ತದೆ.

ನಮಗೆ ಗುರುಗಳು ಎಂದರೇ ಅವರು ನಮಗಿಂತಹ ದೊಡ್ಡವರಾಗಿರಬೇಕು ಎಂಬ ಕಲ್ಪನೆಯಿರುತ್ತದೆ. ಹಾಗೇನೂ ಇಲ್ಲಾ ಒಮ್ಮೊಮ್ಮೆ ನಮಗಿಂತ ಕಿರಿಯರಿಂದ ಜೀವನದ ಅತಿ ದೊಡ್ಡ ಪಾಠವನ್ನೇ ಕಲಿತುಕೊಂಡಿರುತ್ತೇವೆ. ಅಲ್ಲಿ ದೊಡ್ಡವರು, ಚಿಕ್ಕವರು ಹೀಗೆ ಯಾವುದೇ ವಯಸ್ಸಿನ ಬೇದ ಭಾವವಿಲ್ಲ. ಅಲ್ಲಿ ಅವರು ಎಷ್ಟು ಙ್ಞಾನವನ್ನು ತಿಳಿದುಕೊಂಡಿರುತ್ತಾರೆ ಮತ್ತು ನಾವು ಅವರಿಂದ ಕಲಿಯುವ ಪಾಠವೇ ಪ್ರಾಮುಖ್ಯವಾಗಿರುತ್ತದೆ.

ಶಾಲಾ ದಿನಗಳಲ್ಲಿ ನಾವುಗಳು ನಮ್ಮ ತರಗತಿಗಳಲ್ಲಿ ನಮಗೆ ಪಾಠವನ್ನು ಕಲಿಸುತ್ತಿದ್ದ ನಮ್ಮ ಗುರುಗಳ ಮಹತ್ವವನ್ನು ಅರಿಯದವಾರಗಿರುತ್ತೇವೆ. ಅವರನ್ನು ನಾವು ಏನೋ ಕಂಡು ಭಯಬೀಳುವಂತೆ ಅವರನ್ನು ನೋಡಿದರೇ ಮಾರು ದೂರದಿಂದಲೇ ಎಸ್ಕೇಪ್ ಆಗಿಬಿಡುತ್ತಿದ್ದೇವು. ಅವರ ಕಣ್ಣಿಗೆ ಬೀಳಲು ಎದುರುತ್ತಿದ್ದೇವು. ಅದು ಕಷ್ಟಪಟ್ಟು ತರಗತಿಗಳಲ್ಲಿ ಬೇರೆ ದಾರಿ ಇಲ್ಲದೇ ಗಟ್ಟಿ ಎದೆ ಮಾಡಿಕೊಂಡು ಕುಳಿತುಕೊಳ್ಳುತ್ತಿದ್ದೇವು. ಅವರುಗಳ ಪ್ರೀತಿಯ ಏಟುಗಳು, ಬೈಗುಳಗಳು ನಾವುಗಳು ಇಂದೂ ಸಹ ಮರೆಯಲು ಸಾಧ್ಯವೇ ಇಲ್ಲಾ.

ಅದೇ ರೀತಿಯಲ್ಲಿ ಯಾಕೋ ನಮ್ಮನ್ನು ಅತಿ ಮಧುರವಾಗಿ ಮಾತನಾಡಿಸುತ್ತಿದ್ದಾ ಒಬ್ಬರೂ ಇಬ್ಬರೂ ಮೇಡಂ ಗಳನ್ನು ನಮ್ಮ ನೆನಪಿನಿಂದ ಮರೆಯದವರಾಗಿರುತ್ತೇವೆ.

ಮೊಗಿನ ಮೇಲೆಯೇ ಸಿಟ್ಟನ್ನು ಇಟ್ಟುಕೊಂಡು ಕಪ್ಪನೇ ರೂಲರ್ ಹಿಡಿದುಕೊಂಡು ಬಂದು ಯಾವುದೋ ಪಾಠವನ್ನು ಬರೆದುಕೊಂಡು ಬಂದಿರದ ಕಾರಣಕ್ಕೆ ಕೆಂಪನೆ ಬಾಸುಂಡೆ ಬರುವಂತೆ ಭಾರಿಸಿದ್ದ ಆ ಹೆಡ್ ಮೇಸ್ಟರ್ ಮುಖವನ್ನು ನೆನಸಿಕೊಂಡರೆ ಈಗಲೂ ಬೆವರುತ್ತೇವೆ.

ಒಬ್ಬೊಬ್ಬರದೂ ಒಂದೊಂದು ಸ್ಟೈಲ್ ಆದ ಭೋಧನೆ ಇರುತ್ತದೆ.

ಗುರುಗಳೆಂದರೇ ಅವರು ಸಹ ನಮ್ಮಂತೆಯೇ ಮನುಷ್ಯರಲ್ಲವೇ ಎಂದು ನೆನಸಿಕೊಂಡರೇ ನಗು ಬರುತ್ತದೆ.

ಆದರೇ ಆ ಬಾಲ್ಯದ ದಿನಗಳಲ್ಲಿ ಅವರುಗಳು ನಮಗೆ ಯಾವುದೋ ಲೋಕದಿಂದ ನಮ್ಮನ್ನು ಶಿಕ್ಷಿಸಲೆಂದೇ ಆ ದೇವರು ಕಳಿಸಿದ ಶಾಲೆಯ ಪೊಲೀಸ್ ರು ಎಂಬಂತೆ ಭಯಬೀಳುತ್ತಿದ್ದೇವು. ಯಾಕೆಂದರೇ ನಮಗೆ ನಮ್ಮ ತುಂಟಾಟ ಆಟೋಪಾಠಗಳಿಗಿಂತ ಪಾಠಗಳೆಂದರೇ ಕಹಿ ಗುಳಿಗೆಯೇ ಸರಿ! ಅದನ್ನು ನುಂಗುವುದಕ್ಕೆ ನಮಗೆ ಸಾಧ್ಯವೇ ಆಗುತ್ತಿರಲಿಲ್ಲ.

ದಂಡಿಸುವವರೂ ಬದುಕಲು ಕಲಿಸುತ್ತಾರೆ ಎಂಬಂತೆ ಅಂದಿನ ಆ ಕಹಿ ಏಟುಗಳು ಇಂದು ನೆನಸಿಕೊಂಡರೇ ತುಂಬ ಸಿಹಿಯಾಗಿ ಈಗ ಮೀಸ್ ಮಾಡಿಕೊಂಡಂತಾಗಿದೆ.

ವಿದ್ಯಾರ್ಥಿ ಜೀವನ ಎಂದರೇ ಬಂಗಾರದ ಜೀವನ ಎಂದು ಇಂದು ಗೊತ್ತಾಗಿದೆ. ಆ ದಿನಗಳು ಮತ್ತೆ ನಮ್ಮ ಜೀವನದಲ್ಲಿ ಮರಳಿ ಬರಲಾರದಂತಹ ಚಿನ್ನದ ಸಿಹಿ ದಿನಗಳು ಅಷ್ಟೇ.


ನಮ್ಮಗಳಿಗೆ ಪಾಠ ಹೇಳಿಕೊಟ್ಟ ಎಲ್ಲಾ ಶಿಕ್ಷಕರು ಇಂದಿನ ಸಮಯಕ್ಕೆ ನಿವೃತ್ತಿಯನ್ನು ಹೊಂದಿರಬಹುದು. ಅವರುಗಳು ಇಂದು ಎಲ್ಲಿ ಇರಬಹುದೋ ಗೊತ್ತಿಲ್ಲ! ಶಾಲೆಯನ್ನು ಬಿಟ್ಟು ಬಂದ ಮೇಲೆ ಅತ್ತ ಕಡೆ ಪುನಃ ಹೋಗಿಲ್ಲ! ಆದರೇ ನಮ್ಮನ್ನು ನಿತ್ಯ ಕಾಡುವವ ಗುರುಗಳು ಅವರೇ ಅವರುಗಳು ಕಲಿಸಿದ ಒಂದೊಂದು ಪಾಠವೂ ಇಂದು ಅಲ್ಲಾಲ್ಲಿ ನೆನಪಾಗುತ್ತಿರುತ್ತದೆ.


ಎಲ್ಲಾ ಹಳೆಯ ಶಿಕ್ಷಕರುಗಳಿಗೂ ವರುಷ ವರುಷ ಹೊಸ ಹೊಸ ಹುಡುಗರ ದರ್ಶನವಾಗುತ್ತಿರುತ್ತದೆ. ಅವರಲ್ಲಿಯೇ ಅವರುಗಳು ದೇಶದ ಭವಿಷ್ಯವನ್ನು ಕಾಣುತ್ತಿರುತ್ತಾರೆ! ಶಿಕ್ಷಕ ವೃತ್ತಿ ಜಗತ್ತಿನಲ್ಲಿಯೇ ಅತಿ ಶ್ರೇಷ್ಠವಾದ ವೃತ್ತಿ! ಅದಕ್ಕೆ ಎಂದೂ ಯಾರು ಯಾವ ಬೆಲೆಯನ್ನು ಕಟ್ಟಲಾರರು.

ನಮ್ಮ ದೇಶದ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನದ ಪ್ರತಿಯೊಬ್ಬರಿಗೂ ತುಂಬಾ ಗೌರವವಿದೆ.

ಅಂದು ನಮ್ಮ ಹೆತ್ತವರು ನಮ್ಮ ಶಿಕ್ಷಕರು ನಮಗೆ ಶಿಕ್ಷಿಸಿದರೇ ತಲೆನೇ ಕೆಡಿಸಿಕೊಳ್ಳುತ್ತಿರಲಿಲ್ಲ. ನಾವೇನಾದರೂ ಮನೆಯಲ್ಲಿ ಗುರುಗಳ ಮೇಲೆ ಕಂಪ್ಲೇಂಟ್ ಕೊಟ್ಟರೆ ನಾಳೆ ಶಾಲೆಗೆ ಬಂದು ವಿಚಾರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ನಾಳೆ ಶಾಲೆಗೆ ಬಂದು ಎಲ್ಲಾ ಶಿಕ್ಷಕರ ಮುಂದೆ ಇವರು ಹೇಳುತ್ತಿದ್ದಾ ಡೈಲಾಗ್ ಕೇಳಿ ಯಾಕಾದರೂ ನಾವುಗಳು ಕಂಪ್ಲೇಂಟ್ ಮಾಡಿದೆವೆಂದು ಅನಿಸುತ್ತಿತ್ತು. ಅಷ್ಟರ ಮಟ್ಟಿಗೆ ನಮ್ಮ ಸಮಾಜ ಶಾಲಾ ಶಿಕ್ಷಕರೆಂದರೇ ಅಕ್ಷರಸಹ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಸಾಗಿಸುವ ಜವಾಬ್ದಾರಿಯುತ ನಾವಿಕರು ಎನ್ನುವಷ್ಟರ ಮಟ್ಟಿಗೆ ಅವರನ್ನು ಗೌರವಿಸುತ್ತಿದ್ದರು.

ಅವರುಗಳು ಏನೇ ದಂಡಿಸಿದರೂ ಅವರು ನಮ್ಮ ಎದುರಿಗೆ ಹೇಳುತ್ತಿದ್ದದೂ "ಇನ್ನೂ ಹೆಚ್ಚು ದಂಡಿಸಬೇಕು". ಸಾಣೆ ಹಿಡಿದಷ್ಟು ವಜ್ರ ಹೊಳಪು ಬರುತ್ತದೆ ಎಂದು ಗುರುಗಳಿಗೆ ಪ್ರೋತ್ಸಾಹಿಸುತ್ತಿದ್ದರು.

ಹಳ್ಳಿಗಳಲ್ಲಿ ಶಿಕ್ಷಕರೆಂದರೇ ಆ ಊರಿನ ಒಂದು ಆದರ್ಶ ಎಂಬಂತೆ ಅವರನ್ನು ನೋಡುತ್ತಿದ್ದರು. ಪ್ರತಿಯೊಬ್ಬರೂ ಅವರನ್ನು ನಮಗಿಂತ ಹೆಚ್ಚು ಅರಿವಿರುವ ವ್ಯಕ್ತಿಗಳು ಎಂಬಂತೆ ಕಾಣುತ್ತಿದ್ದರು. ಯಾವುದೇ ಸಮಸ್ಯೆಗೆ ಅವರಿಂದ ಪರಿಹಾರ ಸಿಗುವುದು ಎಂದುಕೊಂಡಿರುವರು.

ನಾವುಗಳು ಇಂದು ಯಾವುದಾದರೂ ಒಳ್ಳೆಯ ಸ್ಥಾನ ಮಾನದಲ್ಲಿದ್ದೇವೆ ಎಂದರೇ ಅದು ನಮ್ಮ ಗುರುಗಳ ಒಂದು ದೊಡ್ಡ ತರಬೇತಿಯ ಪ್ರತಿಫಲ.

ಆದ್ದರಿಂದ ನಮ್ಮ ಸಮಾಜ ಏನಾದರೂ ಹೊಸ ಭರವಸೆಯನ್ನು ಸಮಾಜದಲ್ಲಿ ಎಂದೆಂದೂ ಕಾಣಬೇಕೆಂದರೇ ಅದಕ್ಕೆ ಬೆಂಬಲವಾಗಿ ನಮ್ಮ ನಾಡಿನ ಅತಿ ದೊಡ್ಡ ಶಿಕ್ಷಕ ಸಮೊಹವೇ ಕಾರಣ.

ನಮ್ಮನ್ನು ಒಬ್ಬ ಚಿಂತನಶೀಲ,ಉತ್ತಮ ನಾಗರೀಕನಾಗಿ ಬಾಳುವಂತೆ ಮಾಡಿರುವುದರಲ್ಲಿ ಪ್ರತಿ ಶಿಕ್ಷಕರ ಕಾಣಿಕೆ ಅತಿ ದೊಡ್ಡದು.

ಪ್ರತಿಯೊಬ್ಬರೂ ತಾವುಗಳು ಬಾಲ್ಯದಲ್ಲಿ ಕಲಿತ ಶಾಲೆಯ ಶಿಕ್ಷಕರನ್ನು ಇಂದು ತುಂಬಾನೆ ಮೀಸ್ ಮಾಡಿಕೊಳ್ಳುತ್ತಿದ್ದಾರೆ ಎಂದರೇ ಅದು ಅತಿಶಯೋಕ್ತಿಯಲ್ಲ!

ನೀವುಗಳು ಏನಾಂತೀರಾ?

 ಹೇಳಿ "ಶಿಕ್ಷಕರ ಶುಭಾಶಯಗಳನ್ನು"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ