ಮಂಗಳವಾರ, ಮೇ 22, 2012

ಸೌಂದರ್ಯ ವಿಮಾಂಸೆ!

ಅಲಂಕಾರದ ಬಗ್ಗೆ ಪ್ರತಿಯೊಬ್ಬ ಮನುಷ್ಯನಿಗೂ ಅವನದೇಯಾದ ಕಲ್ಪನೆ ಮತ್ತು ನಂಬಿಕೆಯಿರುತ್ತದೆ. ಅವನು ಅವನಿಗೆ ತಾನು ಅತಿ ಸುಂದರ ಮತ್ತು ಲಕ್ಷಣವಂತ/ತೆ ಎಂದು ಭಾವಿಸಿಕೊಳ್ಳುತ್ತಾರೆ.



ಕನ್ನಡಿಯ ಮುಂದೆ ನಿಂತರೇ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ. ಎಷ್ಟೆ ತಿದ್ದಿ ತೀಡಿದರೂ ಕೊನೆಗೂ ತೃಪ್ತಿಯಿರದೇ ಕನ್ನಡಿಯಿಂದ ನಿರ್ಗಮಿಸಬೇಕಾಗುತ್ತದೆ. ಅದರಲ್ಲೂ ಸ್ತ್ರೀಯರಿಗೆ ಕನ್ನಡಿಯೇ ನಿತ್ಯ ಸಂಗಾತಿ. ಅತ್ಯಂತ ಹೆಚ್ಚಾಗಿ ಬೇರೆಯವರನ್ನೂ ನಂಬುವುದಕ್ಕಿಂತ ಅದರಲ್ಲಿ ಹೇಳಲಾರದಂತಹ ನಂಬಿಕೆ!


ಈ ಅಲಂಕಾರ, ಸೌಂದರ್ಯ ನಮ್ಮ ನಮ್ಮ ಬಾಲ್ಯದಿಂದಲೇ ಪ್ರಾರಂಭವಾಗಿಬಿಡುತ್ತದೆ. ನಮ್ಮ ಮನೆಯಲ್ಲಿ, ಸುತ್ತಲಿನವರಿಂದ ಆಹಾ! ಏನೂ ಸುಂದರವಾಗಿ ಕಾಣುತ್ತಿದೆಯಲ್ಲಾ ಈ ಮಗು, ಎಷ್ಟೊಂದು ಕ್ಯೂಟ್, ಸಕತ್ ಮುಗ್ಧವಾಗಿದ್ದಾಳೆ/ನೆ ಎಂದು ಶುರುವಾಗಿಬಿಡುತ್ತದೆ.


ಇನ್ನೂ ಹರೆಯಕ್ಕೆ ಕಾಲಿಟ್ಟರೆ ಮುಗಿಯಿತು. ತಾನುಂಟು ಮತ್ತು ಜಗತ್ತು ಉಂಟು ಎಂಬಂತೆ.


ತಾನೂ ಹೆಚ್ಚು ಸುಂದರಾಗಿ ಕಾಣುತ್ತಾನೆ ಮತ್ತು ತಾನು ಕಾಣುವ ಪ್ರತಿಯೊಬ್ಬರೂ ಸುಂದರವಾಗಿ ತನಗೆ ಕಾಣುತ್ತಾರೆ.


ಪ್ರತಿಯೊಬ್ಬರೂ ತನ್ನ ಮುಖವನ್ನೂ ದಿನಕ್ಕೆ ಇಪ್ಪತೈದಕ್ಕೂ ಹೆಚ್ಚು ಭಾರಿ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಕೊಳ್ಳುತ್ತಾ ತನ್ನಲ್ಲಿಯೇ ಪ್ರಶಂಸಿಕೊಳ್ಳೂತ್ತಾನೆ/ಳೆ. ಏನೂ ಚೆಂದ ಇದ್ದೇನೆ. ಬಣ್ಣನೂ ಅಷ್ಟೆ. ಕೂದಲು ಸಹ ನೆರಳೆ ಬಣ್ಣದಷ್ಟು ಕಪ್ಪು. ಕೆನ್ನೆಯೇನೂ ಕೆಂದಾವರೆಯಾಗಿದೆ.ಹಲ್ಲುಗಳು ದಾಳಿಂಬೆಯಾಗಿದೆ ಎಂದುಕೊಳ್ಳುತ್ತಾ ಮೆರೆದುಬಿಡುತ್ತಾರೆ.


ಅದು ನಿಜವೇ ಹರೆಯದಲ್ಲಿ ವ್ಯಕ್ತಿ ಎಂದು ಕಾಣದಷ್ಟು ಸುಂದರವಾಗಿ ಒಂದಾರು ವರುಷ ನೋಡುವವರಿಗೆ ಕಾಣುತ್ತಾರೆ. ಅದು ಪ್ರಕೃತಿಯ ಮಹಿಮೆ. ನೀವು ಗಮನಿಸರಬಹುದು. ಪ್ರತಿಯೊಂದು ಪ್ರಾಣಿಯು ತನ್ನ ಚಿಕ್ಕ ಹರೆಯದಲ್ಲಿ ಅತಿ ಸುಂದರವಾಗಿ ಕಾಣುತ್ತದೆ! ನಿಜವೇ?


ಇಲ್ಲಿಂದ ಶುರು ನೋಡಿ. ಪ್ರತಿಯೊಬ್ಬರಿಗೂ ಈ ದಿನಗಳಲ್ಲಿ ಕಾಣುವ ಸೌಂದರ್ಯವನ್ನು ದೀರ್ಘಕಾಲ ಹಾಗೆಯೇ ಪ್ರೀಜ್ ನಲ್ಲಿ ಇಡುವಂತೆ ಇಟ್ಟುಕೊಳ್ಳಬೇಕು.ಒಂದು ಚೂರು ಅದಕ್ಕೆ ಮುಕ್ಕಾಗಬಾರದು. ಯಾವುದೇ ವಯಸ್ಸಿನ ಮೀತಿಯಿಲ್ಲದೇ. ಎಂಬ ಹಂಬಲದ ಹುಳು ಮನಸ್ಸಿನಲ್ಲಿ ಬಿಟ್ಟುಕೊಂಡುಬಿಡುತ್ತಾರೆ.


ಆಗಿನಿಂದಲೇ ಪ್ರಾರಂಭ. ನಮ್ಮಲ್ಲೋ ನಿತ್ಯ ಹತ್ತು ಹಲವು ಕಾಸ್ಮಟಿಕ್, ಯೋಗ, ಜಿಮ್, ಔಷದಿಗಳ ಭರ್ಜರಿ ವ್ಯಾಪಾರ. ಇವುಗಳ ಗುಣಗಾನ ನಿತ್ಯ ನಾವು ನೋಡುವ ನಮ್ಮ ಮನೆಯಲ್ಲಿರುವ ಮಾಯಾ ಪೆಟ್ಟಿಗೆಯಲ್ಲಿ ಬರುತ್ತದೆ. ಅಲ್ಲಿಯೋ ಸುರಸುಂದರಾಂಗನೆಯರ ಮಾತು, ನಗು ಈ ಎಲ್ಲಾ ವ್ಯಾಪಾರಿ ವಸ್ತುಗಳ ಜೊತೆಯಲ್ಲಿ. ನಮಗೋ ಅದು ಹೇಗೆ ಈ ನಟಿ ಮಣಿಗಳೆಲ್ಲಾ ಎಷ್ಟು ವರುಷದಿಂದ ಇದ್ದ ಹಾಗೆಯೇ ಇದ್ದಾರಲ್ಲಾ, ಏನಿದು ಮರ್ಮ ಎಂದು ಮಂಡಿಗೆ ತಿನ್ನಲಾರಂಬಿಸುತ್ತದೆ.


ನಮಗೋ ಇವರು ತೋರಿಸುತ್ತಿರುವ ಈ ವಸ್ತುಗಳೇ ಇದಕ್ಕೆ ಸಹಕಾರಿಯಾಗಿರಬೇಕು. ನೋಡಿ ನೋ ಮಾರ್ಕ್ಸ್ ಮುಖದಲ್ಲಿನ ಕಪ್ಪು ಕಲೆಗಳನ್ನೂ ಹೇಳ ಹೆಸರಿಲ್ಲದಂತೆ ಮಾಯಾ ಮಾಡಿಬಿಡುತ್ತದಂತೆ. ಈ ಎಣ್ಣೆ ಕಣ್ಣಿಗೆ ತಂಪು ನೀಡಿ ಧೀರ್ಘಕಾಲದವರೆಗೆ ಕಪ್ಪು ಕೂದಲು ವಿಫುಲವಾಗಿ ಬೆಳೆಯುವಂತೆ ಮಾಡುತ್ತದಂತೆ. ಆ ಶಾಂಪು, ಈ ಸೋಪು, ಈ ಫೆಸಿಯಲ್ ಕ್ರೀಂ ಮುಖದಲ್ಲಿನ/ದೇಹದಲ್ಲಿನ ಚರ್ಮದ ಸುಕ್ಕುಗಳನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಿ ಹದಿಹರೆಯದವರನ್ನಾಗಿ ಇಡುತ್ತದಂತೆ. ಇತ್ಯಾದಿ ಇತ್ಯಾದಿ ವಸ್ತುಗಳು ನಮ್ಮ ಬಯಕೆಗಾಗಿಯೇ ಬಂದಿರುವುವೇನೋ ಎಂದು ಉಪಯೋಗಿಸಲೂ ಪ್ರಾರಂಭಿಸುತ್ತೇವೆ ಮತ್ತು ಉಪಯೋಗಿಸುತ್ತಲೇ ಇರುತ್ತೇವೆ.


ನಿತ್ಯ ಅವುಗಳನ್ನು ಧಾರಾಳವಾಗಿ ಎಲ್ಲೆಲ್ಲಿಗೆ ಹಚ್ಚಬೇಕು ಹಚ್ಚಿಕೊಳ್ಳುತ್ತಾ ಕೊಳ್ಳುತ್ತಾ ಕನ್ನಡಿಯ ಮೇಲೆ ನಮ್ಮಲ್ಲಿ ಆಗುವಂತ ಬದಲಾವಣೆಯನ್ನು ಪೂರ್ಣವಾಗಿ ನಂಬಿ ಖುಷಿಪಡುತ್ತೇವೆ.


ಅವಳಿಗಿಂತಹ ನಾನೇನೂ ಕಮ್ಮಿಯಿಲ್ಲ. ನಾನೇ ಸುರಸುಂದರಾಂಗಿ ಎಂದು ಹೆಮ್ಮೆಪಟ್ಟುಕೊಳ್ಳುತ್ತಾ ಏರುತ್ತಿರುವ ವಯಸ್ಸಿಗೆ ಸೆಡ್ಡು ಹೊಡೆದು ಮನದಲ್ಲಿಯೇ ನಗುವುವೆವು.


"ದೇಹವೆಂಬುದು ಮೂಳೆ ಮಾಂಸದ ತಡಿಕೆ" ಎಂದು ದಾಸರು ಹೇಳಿದ ಮಾತನ್ನೂ ತಪ್ಪಿದರೂ ನೆನಪು ಮಾಡಿಕೊಳ್ಳುವುದಿಲ್ಲ.
ವಯಸ್ಸಾದಂತೆ ದೇಹದ ಪ್ರತಿಯೊಂದು ಅಂಗಾಂಗಳು ಸವೆಯುತ್ತವೆ. ತನ್ನ ಹೊಳಪು, ಮಿಂಚನ್ನು ಕಡಿಮೆ ಮಾಡಿಕೊಳ್ಳುತ್ತವೆ.


ಅದರೂ ನಾವು ಬಿಡಬೇಕಲ್ಲಾ! ಏನೇನೂ ತರಾವೇರಿ ಡಯಟ್, ಯೋಗ, ಜೀಮ್, ವಾಕ್ ಇತ್ಯಾದಿಗಳನ್ನು ರೂಡಿಸಿಕೊಳ್ಳುತ್ತಾ... ಕಟ್ಟು ನಿಟ್ಟಿನ ಪಥ್ಯವನ್ನು ಮಾಡುತ್ತೇವೆ.


ನಮಗೆಲ್ಲಾ ಅಶ್ಚರ್ಯ ಮತ್ತು ಭರವಸೆಯ ಕಿರಣವೆಂದರೇ.. ಅದು ನಮ್ಮ ಬಾಲಿವುಡ್, ಸ್ಯಾಂಡಲ್ ವುಡ್ ನಟಿ ಮಣಿಗಳು. ಇಂದಿಗೂ ಹರೆಯದವರಾಗಿ ಸ್ವೀಟ್ ಸಿಕ್ಸ್ ಟಿನ್ ಆಗಿ ಕಾಣಲು ಅವರಿಗೆ ಸಾಧ್ಯವಾಗಿದೆ ಎಂದರೇ....! ನಮಗ್ಯಾಕೇ ಸಾಧ್ಯವಾಗದು ಎಂಬುದು?


ಅದಕ್ಕಾಗಿ ಭಾರಿ ಪರಿಶ್ರಮಪಡುತ್ತೇವೆ.


ಇತ್ತೀಚೆಗೆ ನನ್ನ ಗೆಳೆಯ/ಗೆಳತಿಯರು ತುಂಬ ಸುಂದರವಾಗಿ ಒಂದಷ್ಟು ತಿಂಗಳು ಕಂಡುಬಂದರೂ ನನಗೋ ಅತಿ ಆಶ್ಚರ್ಯ ಅದು ಹೇಗೆ ಇಷ್ಟೊಂದು ಹೊಳೆಯುವಂಥ ಕಾಂತಿಯನ್ನು ಮುಖದಲ್ಲಿ ಹೊಂದಿದ್ದಾರೆ ಎಂದು..!



ನನ್ನ ಸ್ನೇಹಿತರ ಬಳಿ ಹೀಗೆ ಚರ್ಚಿಸಿದಾಗ ಅವರು ಹೇಳಿದರೂ. ನೀನಗೆ ಇನ್ನೂ ಗೊತ್ತಿಲ್ಲಾ! ಏನೇನೂ ಟ್ರಿಟ್ ಮೆಂಟ್ ಗಳು ಬೆಂಗಳೂರಿಗೆ ಬಂದಿವೆ. ಕಪ್ಪಾಗಿದ್ದವರನ್ನೂ ಬಿಳಿಯರನ್ನಾಗಿ ಮಾಡುತ್ತಾರೆ. ದಪ್ಪ ಇರುವವರನ್ನೂ ಸಣಕಲರನ್ನಾಗಿ ಮಾಡುತ್ತಾರೆ. ಮೂಗು ಸರಿಯಿಲ್ಲದಿದ್ದರೆ ಸುಂದರ ಮೂಗನ್ನು ಸರ್ಜರಿ ಮಾಡುತ್ತಾರೆ. ಕೂದಲು ಇಲ್ಲದಿದ್ದರೇ ಸುಕೋಮಲವಾದ ಕೂದಲನ್ನು ಬೆಳೆಸುತ್ತಾರೆ. ನಂಬಲು ಸಾಧ್ಯವಿಲ್ಲ? ಅದರೇ ನಂಬಲೇ ಬೇಕು.


ಮನುಷ್ಯ ಪ್ರತಿಯೊಂದನ್ನೂ ತನ್ನ ನಿಯಂತ್ರಣದಲ್ಲಿಟ್ಟುಕೊಂಡು.. ದೇಹಕ್ಕೆ ಆಗುವ ವಯಸ್ಸನ್ನು ಅದಷ್ಟು ಕಷ್ಟಪಟ್ಟು ದೂರ ಮಾಡುತ್ತಿದ್ದಾನೆ.


ಕೆಲವು ವಾರಗಳಲ್ಲಿ ನೀವು ಗಮನಿಸಿರಬಹುದು. ಬಹು ಚರ್ಚಿತ ಸುದ್ಧಿ ನಮ್ಮ ದೇಶದ ಅತ್ಯಂತ ಸುಂದರಿಯಾದ ಐಶ್ವರ್ಯಾ ರೈ ತಾನು ಮಗು ಹೆತ್ತ ಮೇಲೆ ಮುಖದ ಮೇಲಿನ ಮತ್ತು ದೇಹದಲ್ಲಿನ ಬೊಜ್ಜು ವಿಫರೀತ ಹೆಚ್ಚಾಗಿರುವುದು. ಅದಕ್ಕಾಗಿ ನಮ್ಮ ಸೌಂದರ್ಯಪ್ರಿಯ ಮಾಧ್ಯಮ ಮತ್ತು ಅಭಿಮಾನಿಗಳು ಯಾವ ಪರಿ ಪರಿತಪಿಸುತ್ತಿದ್ದಾರೆ ಎಂಬುದು.


ಈ ಒಂದು ನಿದರ್ಶನವನ್ನು ಯಾಕೆ ನಮ್ಮ ಜನಗಳು ಧನಾತ್ಮಕವಾಗಿ ನೋಡುವುದಿಲ್ಲ?



ಸೌಂದರ್ಯ ಎಂಬುದು ಶಾಶ್ವತವಾದದ್ದಲ್ಲ. ಅದಕ್ಕೆ ಒಂದು ಎಕ್ಸ್ ಪೈರಿ ಇದ್ದೇ ಇರುತ್ತದೆ. ನಾವುಗಳು ಏನೇನೂ ಮುಖಕ್ಕೆ ಮಜ್ಜನ ಮಾಡಿದರೂ ಅದು ಒಂದು ದಿನ ನಿಜವಾದ ರೂಪವನ್ನು ತೋರಿಸುತ್ತದೆ.


ಹಾಗೆಯೇ ಸೌಂದರ್ಯ ಎಂಬುದು ದೇಹದಲ್ಲಿ ಅಥಾವ ಮುಖದಲ್ಲಿ ಇಲ್ಲ. ಅದು ನೋಡುವ ನಮ್ಮ ನಿಮ್ಮಗಳ ಕಣ್ಣಿನಲ್ಲಿ ಇದೆ.


ನಮ್ಮ ಮನಸ್ಸು ಸುಂದರವಾಗಿದ್ದರೇ ನಾವುಗಳು ಸುಂದರವಾಗಿ ಕಾಣುತ್ತೇವೆ. ನಾವು ಹೇಗೆ ಯೋಚಿಸಿತ್ತೇವೋ ಹಾಗೆಯೇ ನಮ್ಮ ದೇಹ ಪ್ರತಿಪಲಿಸುತ್ತದೆ.


ಒಮ್ಮೆ ಅದು ಇದು ಮುಖಕ್ಕೆ ಹಚ್ಚುವುದನ್ನಾ ಶುರು ಮಾಡಿದರೇ... ಅದನ್ನೂ ನಿತ್ಯ ಉಪಯೋಗಿಸಬೇಕು. ಆ ರೀತಿಯ ಒಂದು ತಂತ್ರ ಎಲ್ಲಾ ಕಾಸ್ಮಟಿಕ್ ಉತ್ಪಾದಕರ ಮಂತ್ರ.


ಇರುವ ನೈಸರ್ಗಿಕವಾದ ಸೌಂದರ್ಯವನ್ನು ಸ್ವಾಭಾವಿಕವಾಗಿ ಕಾಣಲು ಬಿಡಿ. ಅದೇ ಶಾಶ್ವತವಾದದ್ದು .


ನಮ್ಮ ನಿಮ್ಮ ಮುಂದೆ ನೂರಾರು ನಿದರ್ಶನಗಳಿವೆ. ವಯಸ್ಸು ಎಂಬ ಕಾಲನಿಗೆ ತಕ್ಕಂತೆ ನಮ್ಮ ದೇಹ ಮನಸ್ಸು ನಡೆಯುತ್ತದೆ. ದೇಹವಂತೂ ಹದಿಹರೆಯದವಾರಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದರೇ ಎಷ್ಟೇ ವಯಸ್ಸಾದರೂ ನಮ್ಮ ಮನಸ್ಸನ್ನೂ ಇನ್ನೂ ಚಿಕ್ಕ ಮಕ್ಕಳಂತೆ ಯೋಚಿಸುತ್ತಾ.. ಚಿಂತಿಸುತ್ತಾ.. ಚಿರಯೌವನದ ಚಿರಂಜೀವಿಯಾಗಿ ಕಾಪಾಡಿಕೊಳ್ಳಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ