ಬುಧವಾರ, ಮೇ 16, 2012

ಕಲ್ಪನೆಗೂ ನಿಲುಕದ..

ಪ್ರಕೃತಿಯ ಮುಂದೆ ಎಲ್ಲರೂ ಸಣ್ಣವರೇ.


ಒಂದು ಸುತ್ತು ಭಾರೀ ಮಳೆ ಬಂದು ಇಳೆಯನ್ನು ತಂಪು ಮಾಡಿದೆ.


ಉಸ್ಸಪ್ಪಾ!ಎಂದು ಬಿರು ಬೇಸಿಗೆಯಲ್ಲಿ ಬೆಂದ ಮನಗಳಿಗೆ ತಂಪನ್ನು ಸಿಂಪಡಿಸಿದೆ. ಬರಗಾಲ ಬರಗಾಲ ಎಂದು ಪರಿತಪಿಸುತ್ತಿದ್ದ ರೈತಾಪಿ ಮಂದಿಗೆ ಒಂದಿಷ್ಟು ಭರವಸೆಯನ್ನು ಆಸೆಯನ್ನು ಮೂಡಿಸಿದೆ.


ಯಾವ ಯಾವ ಕಾಲಕ್ಕೆ ಏನೇನೂ ಜರುಗಬೇಕು ಅದನ್ನು ಪ್ರಕೃತಿ ಎಷ್ಟೊಂದು ಕರಾರುವಕ್ಕಾಗಿ ಜರುಗಿಸುತ್ತದೆ. ವಿಶ್ವವೇ ಒಂದು ವಿಸ್ಮಯ. ಅದರ ಮುಂದೆ ನಾವುಗಳು ಕಣ ಮಾತ್ರ.


ಎಷ್ಟೊಂದು ನಕ್ಷತ್ರಗಳು, ಗ್ರಹಗಳು! ಅವುಗಳನ್ನು ಹಿಡಿದಿಟ್ಟಿರುವ ಆ ಬಂಧನ! ನಮ್ಮ ಗ್ರಹ ಭೂಮಿ ಸೂರ್ಯ ಎಂಬ ಒಂದು ನಕ್ಷತ್ರದ ಸುತ್ತಲೇ ತಿರುಗುವುದು. ಈ ಚಲನೆಯೆ ಹಗಲು ಇರುಳನ್ನು ಕೊಡುವುದು. ಸೂರ್ಯ ಮುಳುಗಿ ಹೋದ ಅಂತಾ ನಮಗೆ ಅನಿಸುವುದು. ಅದರೇ ಅವನು ನಿಜವಾಗಿಯೂ ಮುಳುಗಿ ಹೋಗುವುದಿಲ್ಲ. ಕೇವಲ ನಮ್ಮ ಭೂಮಿಯ ಒಂದು ಭಾಗಕ್ಕೆ ಮರೆಯಾಗಿರುತ್ತದೆ. ಭೂಮಿಯ ಇನ್ನೊಂದು ಭಾಗದಲ್ಲಿ ಅವನು ಬೆಳಕನ್ನು ನೀಡುತ್ತಿರುತ್ತಾನೆ.


ಈ ಭೂಮಿಯ ಮೇಲೋ ಕಲ್ಪನೆಗೂ ನಿಲುಕದ ಹಳ್ಳ,ಕೊಳ್ಳ,ನದಿ,ಸಾಗರ, ಎತ್ತರದ ಪರ್ವತಗಳು, ದಟ್ಟ ಕಾಡು, ನೀರೇ ಇಲ್ಲದ ಮರುಭೂಮಿ, ಯಾವಾಗಲೂ ಶೀತವಿರುವ ಶೀತವಲಯ, ಯಾವಾಗಲೂ ಮಳೆ ಬರುವ ಜಾಗಗಳು, ಕಲ್ಲು, ಮಣ್ಣು ಇತ್ಯಾದಿ ತರಾವೇರಿ ನೈಸರ್ಗಿಕ ತಾಣಗಳು. ವೈವಿಧ್ಯಮಯವಾದ ಪ್ರಾಣಿಗಳು, ಸಸ್ಯ ಸಂಕುಲ, ಕ್ರಿಮಿ, ಕೀಟಗಳು, ಸಾಗರದಲ್ಲಿರುವ ಬೃಹತ್ ಆದ ಜೀವ ಸಂಕುಲ!


ನಮ್ಮ ಭೂಮಿಗೆ ಒಂದು ಉಪಗ್ರಹ ಚಂದ್ರ. ಅದು ರಾತ್ರಿಯ ವೇಳೆ ಬೆಳ್ಳಿಯ ತಟ್ಟೆಯೋಪಾದಿಯಲ್ಲಿ ಹೊಳೆಯುವನು. ಚಂದ್ರ ನಾವುಗಳು ಎಷ್ಟು ದೂರ ಹೋದರು, ಯಾವುದೇ ಜಾಗಕ್ಕೆ ಹೋದರೂ ನಾವುಗಳು ಒಂಟಿಯಲ್ಲಾ ಎಂಬ ರೀತಿಯಲ್ಲಿ ನಮ್ಮ ಸಂಗಾತಿಯಾಗಿ ನಮ್ಮನ್ನೇ ಹಿಂಬಾಲಿಸುವವನು. ಇರುಳ ಸಮಯದಲ್ಲಿ ಅವನನ್ನು ನೋಡಿದರೇ ಮನಸ್ಸಿಗೆ ಏನೋ ಒಂದು ತೃಪ್ತಿ ಮತ್ತು ತಂಪು.


ಹೀಗೆ ಈ ಒಂದು ವಿಸ್ಮಯವಾದ ವಿಶ್ವ ಜಾದುವನ್ನು ಮಾಡಿರುವುವನಾದರೂ ಯಾರೂ? ಎಂದು ಪ್ರತಿಯೊಬ್ಬರಿಗೂ ಬಿಡಿಸಿಲಾರದ ಪ್ರಶ್ನೆಯಾಗಿರುತ್ತದೆ. ನಮ್ಮ ನಮ್ಮ ಅರಿವಿಗೆ ನಿಲುಕುವ ಮಟ್ಟಕ್ಕೆ ಅಲ್ಲಿ ಇಲ್ಲಿ ಓದಿ, ಕೇಳಿ ಒಂದಿಷ್ಟು ಙ್ಞಾನವನ್ನು ಪಡೆದು ಇದು ಹೀಗೆ ಹಾಗೆ ಎಂದು ಅದರ ಬಗ್ಗೆ ಮಾತನ್ನಾಡುತ್ತಿರುತ್ತೇವೆ.


ನಮ್ಮ ನಮ್ಮ ಪ್ರಾಥಮಿಕ ಪಾಠ ಶಾಲಾ ಪಠ್ಯದಲ್ಲಿ ಅದರ ಬಗ್ಗೆ ಸಂಕ್ಷಿಪ್ತವಾಗಿ ಅಭ್ಯಾಸಿಸಿರುತ್ತೇವೆ. ಆದರೂ ಅದರ ಬೆರಗು ಇನ್ನೂ ಕಳೆದು ಕೊಂಡಿರುವುದಿಲ್ಲ.


ನಿತ್ಯ ನಮ್ಮ ಹಿರಿಯ ಕಿರಿಯ ವಿಙ್ಞಾನಿಗಳು ಸಂಶೋಧನೆಗಳನ್ನು ನಡೆಸುತ್ತಲೆ ಇರುತ್ತಾರೆ. ಹೊಸ ಹೊಸ ಅವಿಷ್ಕಾರಗಳನ್ನು, ಹೊಸ ಹೊಸ ವಿಷಯಗಳನ್ನು ಈ ವಿಶ್ವದ ಬಗ್ಗೆ ತಿಳಿಯಪಡಿಸುತ್ತಲೇ ಇರುತ್ತಾರೆ.


ಈ ಜಗತ್ತಿನಲ್ಲಿ ನಿತ್ಯ ಸಾವಿರಾರು ಅಚ್ಚರಿಯ ನೈಸರ್ಗಿಕ ಘಟನೆಗಳು, ಅನುಭವಗಳು ಘಟಿಸುತ್ತಲೆ ಇರುತ್ತವೆ. ಅವುಗಳ ಮನನ ಮಾಡಿಕೊಳ್ಳುವ ಶಕ್ತಿ ಇರುವಷ್ಟು ನಮಗೆ ದಕ್ಕುತ್ತದೆ. ಮಿಕ್ಕಿದ್ದು ಕೇವಲ ಪ್ರಶ್ನೆಗಳಾಗಿ ಉಳಿಯುತ್ತವೆ.


ನಾವು ಏನೇ ಮುಂದುವರಿದಿದ್ದರೂ ಈ ಭೂಮಿ ಮೇಲೆ ಇರುವ ಒಂದೇ ಒಂದು ಚಿಕ್ಕ ನೈಸರ್ಗಿಕವಾದ ವಸ್ತು ವಿಶೇಷವನ್ನು ನಮ್ಮಿಂದ ಸೃಷ್ಟಿ ಮಾಡಲು ಸಾಧ್ಯವಿಲ್ಲಾ ಬಿಡಿ.


ನಮ್ಮನ್ನೆಲ್ಲಾ ಮೀರಿದ ಒಂದು ಶಕ್ತಿ ಇರಲೇ ಬೇಕು ಅದೇ ಅದನ್ನು ನಿಯಂತ್ರಿಸುತ್ತಿರುತ್ತದೆ. ಅಲ್ಲವಾ?


ಅದನ್ನೇ ಒಬ್ಬೊಬ್ಬರೂ ಒಂದು ರೀತಿಯಲ್ಲಿ ಹೇಳಿಕೊಂಡು ಕೊನೆಗೆ ಅದೇ "ದೇವರು" ಅಂದುಕೊಳ್ಳುತ್ತಾರೆ.


ಹಿಂದಿನಿಂದಲೂ ನಾವುಗಳು ಪ್ರಕೃತಿಯನ್ನೇ ಪ್ರಕೃತಿಮಾತೆ/ದೇವರು ಎಂದು ಪೂಜಿಸಿಕೊಂಡು ಬರುತ್ತಿರುವ ಮರ್ಮ ಇದೇ ಅನಿಸುತ್ತದೆ. ಪ್ರಕೃತಿಯ ಮುಂದೆ ಯಾರೊಬ್ಬರೂ ಏನೂ ಅಲ್ಲಾ! ನಾಸ್ತಿಕನೂ ಸಹ ಇದನ್ನೂ ಒಪ್ಪಿಕೊಳ್ಳಲೇ ಬೇಕು.


ನಾವುಗಳು ನಮ್ಮ ನಮ್ಮ ಅಹಂ ನಲ್ಲಿ ಕೆಲವೊಂದು ಭಾರಿ ಇರುತ್ತೇವೆ. ಆ ಕ್ಷಣದಲ್ಲಿ ಪ್ರಕೃತಿಯ ಬಗ್ಗೆ ಒಂದು ಕ್ಷಣ ಯೋಚಿಸಿದರೇ ನಾವೆಷ್ಟರವರು ಎಂಬುದು ಗೊತ್ತಾಗುತ್ತದೆ.


ನಮಗೆಲ್ಲಾ ಇದು ಒಂದು ವರ! ಈ ಪರಿಸರದಲ್ಲಿ ಇರುವಂತಹ ಸಂಪತ್ತು, ಅನುಕೂಲ, ಸುಂದರ ದೃಶ್ಯ, ಮನಸೂರೆ ಮಾಡುವ ನೈಸರ್ಗಿಕ ತಾಣಗಳು ನಮ್ಮ ಜೊತೆಯಲ್ಲಿ ಇರುವುದು ನಮ್ಮೆಲ್ಲಾರ ಅದೃಷ್ಟ.


ಇದನ್ನು ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಕೊಡುವುದು ನಮ್ಮೆಲ್ಲಾರ ಕರ್ತವ್ಯವಾಗಬೇಕು. ಕೇವಲ ನಮ್ಮ ಮಾನವ ಕುಲಕ್ಕೆ ಮಾತ್ರವಲ್ಲ. ಈ ಭೂಮಿಯ ಮೇಲೆ ಇರುವ ಕೋಟ್ಯಾಂತರ ಅಣುರೇಣು ಜೀವಸಂಕುಲದ ಸ್ವತ್ತು ಇದಾಗಿದೆ.


ಸ್ವಾರ್ಥ ಮನೋಭಾವವನ್ನು ಬಿಟ್ಟು ಇದರ ಉಳಿವಿಗಾಗಿ ಶ್ರಮಿಸುವುದು ನಾವುಗಳು ನಮಗೆ ಮಾಡಿಕೊಳ್ಳುವ ರಕ್ಷಣೆಯೇ ಸರಿ!


ಎಂಥ ಜಂಜಾಟದಲ್ಲೂ ನಮ್ಮ ಮನವನ್ನು ಸಮಧಾನ ಮಾಡಲೂ ಸಾಧ್ಯವಿರುವುದು ಪ್ರಕೃತಿಗೆ ಮಾತ್ರ! ಇದರ ಮಹತ್ವವನ್ನು ಪ್ರತಿಯೊಬ್ಬರೂ ಯೋಚಿಸುವ ಕಾಲ ಇದಾಗಿದೆ ಎಂದು ಅನಿಸುವುದಿಲ್ಲವೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ