ಬುಧವಾರ, ಆಗಸ್ಟ್ 17, 2011

ಶ್ರಾವಣದ ದಿನಗಳು ಬಂದಿವೆ



ಆಷಾಡ ಕಳೆದಿದೆ ಶ್ರಾವಣದ ದಿನಗಳು ಬಂದಿವೆ. ಕೊರೆಯುವ ಚಳಿಯ ದಿನಗಳು ಇತಿಹಾಸ ಸೇರಿವೆ. ಆಷಾಡ ಎಂದು ಒಂದು ತಿಂಗಳಿಂದ ದೂರವಾದ ತನ್ನ ನೆಚ್ಚಿನ ನಲ್ಲೆಯ ಪುನರಾಗಮನವಾಗಿದೆ. ಸಂಭ್ರಮದ ಹಬ್ಬದ ಆಚರಣೆಗಳು ಪ್ರಾರಂಭವಾಗಿವೆ. ಶುಭ ಶಕುನ, ಶುಭ ದಿನಗಳು, ಶುಭ ಆಚರಣೆ ಮೊದಲುಗೊಂಡಿವೆ.

ಪ್ರಕೃತಿ ತನ್ನ ತನವನ್ನು ಹಚ್ಚ ಹಸಿರಿನಿಂದ ಇಡಿ ಪ್ರಾಣಿ ಸಂಕುಲವನ್ನು ಹರಸಿದೆ. ಬತ್ತಿ ಹೋದ ತೊರೆ, ಹಳ್ಳ ಕೊಳ್ಳಗಳು, ಝರಿಗಳು ಮೈದುಂಬಿ ಹರಿಯಲು ಪ್ರಾರಂಭಿಸಿವೆ. ಒಂದು ರೀತಿಯಲ್ಲಿ ಸಮಷ್ಟಿಯೆ ಧನ್ಯತೆಯ ನಗುವನ್ನು ಬೀರಿದೆ.

ಸಾಕಾಗುವಷ್ಟು ಮಳೆಯನ್ನು ಕೆಲವು ಜಾಗಗಳು ಪಡೆದಿವೆ. ಕೆಲವು ಕಡೆ ಅದರಿಂದ ಅನಾಹುತಗಳು, ಅತಿವೃಷ್ಟಿಯಾಗಿ ಜನರುಗಳು ನಲುಗುತ್ತಿದ್ದಾರೆ. ಪ್ರವಾಹದಿಂದ ತುಂಬಿ ಹರಿಯುತ್ತಿರುವ ನದಿಗಳು ತಮಗೆ ತಾವೇ ಸಾಠಿ ಎಂಬ ರೀತಿಯಲ್ಲಿ ಇಕ್ಕೆಲಗಳಲ್ಲಿರುವ ಮಾನವ ವಾಸ ಸ್ಥಳಗಳನ್ನು ನುಂಗುತ್ತಾ ದುಃಸ್ವಪ್ನವಾಗಿದೆ.

ಇಂದು ಸಹ ಮುಂಜಾನೆಯಿಂದ ನಮ್ಮ ಬೆಂಗಳೂರಿನಲ್ಲಿ ಬಿಡದ ತುಂತುರು ಮಳೆ ಹಲವು ಗಂಟೆಗಳಿಂದ ಚಟಪಟ ಸದ್ದಿನಿಂದ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ಬಿಡದೆ ನಿರಂತರವಾಗಿ ಸೂರ್ಯನ ಕಣ್ಣಾಮುಚ್ಚಾಲೆಯ ಜೊತೆಯಲ್ಲಿ ಪ್ರಕೃತಿ ಗಂಭೀರವಾಗಿ ತನ್ನ ಜಾದುವನ್ನು ಜನಮನಗಳಿಗೆ ತಂಪು ನೀಡುತ್ತಿದೆ.

ಭಾರತದ ೬೫ನೇ ಸ್ವಾತಂತ್ರ್ಯ ಆಚರಣೆಯನ್ನು ಮಾಡಿದ ನಂತರದ ದಿನ ಆಗಸ್ಟ ೧೬, ಅಣ್ಣಾ ಹಜಾರೆಯವರ ಭ್ರಷ್ಟಾಚಾರ ಅಂದೋಲನದ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ದೇಶದ ಉದ್ದಗಲಕ್ಕೂ ಭಾರೀ ಪ್ರಮಾಣದಲ್ಲಿ ಹಳ್ಳಿಯ ಓಣಿ ಓಣಿಗಳಿಂದ ಪ್ರಾರಂಭಿಸಿ ದೊಡ್ಡ ದೊಡ್ಡ ನಗರಗಳ ಸಣ್ಣ ಸಣ್ಣ ಗಲ್ಲಿಗಳಿಂದ ಪ್ರತಿಯೊಬ್ಬ ಪ್ರಜೆಯು ದೇಶದ ಬಗ್ಗೆ ಯೋಚಿಸಲು ಪ್ರಾರಂಭಿಸಿ ತನ್ನ ಕೈಲಾದ ಮಟ್ಟಿಗೆ ಅಣ್ಣಾನವರಿಗೆ ಮೌನ ಬೆಂಬಲವನ್ನು ಘೋಷಿಸುತ್ತಿದ್ದಾರೆ.

ಯುವ ಜನತೆಗೆ ಈಗ ತಮ್ಮ ದೇಶಪ್ರೇಮವನ್ನು ಮೆರೆಯುವ ದಿನಗಳು ತಾನಾಗಿ ಒದಗಿಬಂದಂತಾಗಿದೆ. ಹಿಂದೆ ನಾವುಗಳು ನಮ್ಮ ಪಠ್ಯದಲ್ಲಿ ಓದಿದ ಸ್ವಾತಂತ್ರ್ಯ ಹೊರಾಟ ಮತ್ತು ಸ್ವರೂಪವನ್ನು ಇಂದು ಕಣ್ಣಿಂದ ನೋಡುವ ಅವಕಾಶ ಒದಗಿದಕ್ಕೆ ಸಂಭ್ರಮ ಪಡಬೇಕೋ ಅಥವಾ ವ್ಯಥೆ ಪಡಬೇಕು ತಿಳಿಯದಂತಾಗಿದೆ.

ನಮ್ಮ ದೇಶದ ಭವಿಷ್ಯವನ್ನು ಈ ಹಾಳು ಭ್ರಷ್ಟಾಚಾರ, ಲಂಚತನ, ಲಂಪಟತೆಯ ರಾಕ್ಷಸತನ ಎಷ್ಟೂ ನಲುಗಿಸಿದೆ ಎಂದರೇ ಪ್ರತಿಯೊಬ್ಬ ಭಾರತೀಯನ ಆಕ್ರೋಶ ಇಂದು ಬೀದಿಯಲ್ಲಿ ನೋಡುವಂತಾಗಿದೆ. ಇದಕ್ಕೆ ಕಾರಣಕರ್ತನಾದ ಹೊಸ ಆಶ ಜ್ಯೋತಿ ಅಣ್ಣಾ ಮಾತ್ರ! ಗಾಂಧಿ ಮತ್ತು ಅವರ ದೋರಣೆಯ ಪ್ರತೀಕವಾಗಿ ಅಣ್ಣಾ ನಮ್ಮ ಜನಗಳ ಕಣ್ಣಿನಲ್ಲಿ ಕಾಣಲಾರಂಬಿಸಿದ್ದಾರೆ. ಅವರಿಗೆ ಜಯ ಸಿಗಲೇ ಬೇಕು ಮತ್ತು ಸಿಕ್ಕೆ ಸಿಗುತ್ತದೆ ಎಂಬ ಸಂತಸವಿದೆ.

ಆದರೇ ಈ ವರ್ಷ ನನ್ನ ಸೀಮೆ ಬರಗಾಲವನ್ನು ಎದುರಿಸುವಂತಾಗಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯನ್ನು ಕಂಡು ನನ್ನ ಮನ ಮುಲುಗುತ್ತಿದೆ. ಯಾಕೆಂದರೇ ಅಲ್ಲಿ ಈಗಾಗಲೇ ಬರಗಾಲದ ಛಾಯೆ ದಟ್ಟವಾಗುತ್ತದೆ. ಈ ಸಮಯದಲ್ಲಿ ಬಿಡದ ಮಳೆಯಾಗಬೇಕಾಗಿತ್ತು. ಜಿಟಿ ಮಳೆಯಲ್ಲಿ ರೈತರು ತಮ್ಮ ಮೊದಲ ಬಿತ್ತನೆಯನ್ನು ಪ್ರಾರಂಭ ಮಾಡಬೇಕಾಗಿತ್ತು. ಮುಂಗಾರು ಮಳೆಯ ಆಶಾ ಭಾವನೆಯನ್ನು ಇಟ್ಟುಕೊಂಡು ಮುಂದಿನ ದಿನಗಳನ್ನು ಕಾಣುವ ಮನಗಳಿಗೆ ಕೇವಲ ನಿಲ್ಲದ ಗಾಳಿ ಮಾತ್ರವಾಗಿದೆ. ಅದು ಮೊಡವನ್ನು ತರುತ್ತಿಲ್ಲ. ಮಳೆಯನ್ನು ಸುರಿಸುತ್ತಿಲ್ಲ. ನಮ್ಮ ಬಯಲು ಸೀಮೆಯ ಜನಗಳ ಮೂಲ ಆಸರೆ ಮಳೆ ಮಾತ್ರ. ಅಲ್ಲಿ ಯಾವುದೇ ನದಿ, ಹೊಳೆ, ಕೆರೆ, ಚಾನಲ್ ಗಳೇ ಇಲ್ಲ. ಪ್ರತಿಯೊಂದು ಬೆಳೆಗೂ ಮಳೆ ಮಾತ್ರ. ಆದರೂ ನೀರಾವರಿ ಮಾಡಿಕೊಂಡರೂ ಅದು ಕೇವಲ ತೋಟಕ್ಕೆ ಮಾತ್ರ. ಚಿಕ್ಕ ಚಿಕ್ಕ ಅಡಿಕೆ, ತೆಂಗು, ಬಾಳೆ ತೋಟಗಳಿಗೆ ನೀರು ಊಣಿಸಲೇ ಸಾಕಾಗುತ್ತದೆ. ಪುನಃ ಕಾಲಿಯಾದ ಬೋರ್ ವೆಲ್ ಗಳು ಸಹ ಮಳೆಯನ್ನೇ ಆಶ್ರಯಿಸುವಂತಾಗಿರುತ್ತದೆ.

ಮಳೆಗಾಲದಲ್ಲಿ ಸ್ವಲ್ಪ ಏರುಪೇರಾದರೂ ನೀರಾವರಿಯನ್ನು ಮಾಡುತ್ತಿರುವ ರೈತಾಪಿ ಜನಗಳ ಚಿಂತೆಯನ್ನು ನೋಡುವುದು ಬೇಡಾ!

ಸ್ವಾತಂತ್ರ್ಯ ದಿನಾಚಾರಣೆಯನ್ನು ಮೊದಲ ಭಾರಿಗೆ ಜಿಲ್ಲಾ ಉಸ್ತಾವರಿ ಸಚಿವೆಯಿಂದ ಆಚರಿಸಲ್ಪಟ್ಟಿತು. ಸಚಿವೆಯು ಸಹ ಜೆಲ್ಲೆಯ ಇಂದಿನ ಮಳೆಗಾಲದ ಸ್ಥಿತಿಯನ್ನು ಕಣ್ಣಲ್ಲಿಟ್ಟುಕೊಂಡು ಜೆಲ್ಲೆಯ ಬರಗಾಲಕ್ಕೆ ಏನೇನೂ ಅನುಕೂಲವನ್ನು ಸರ್ಕಾರದಿಂದ ಮಾಡಿಕೊಡಲು ಸಾಧ್ಯವಿದೆಯೋ ಅದನ್ನು ಮಾಡಲು ನಾನು ಪ್ರಯತ್ನಿಸುವೆ ಎಂದಿದ್ದಾರೆ.

ಆದರೇ ಅವರು ಕೊಡುವ ಅನುದಾನ ಪ್ರಕೃತಿ ನೀಡುವ ಸಮೃದ್ಧ ಮಳೆಗೆ ಸರಿಸಾಟಿಯಿಲ್ಲ ಅಲ್ಲವಾ?

ಕಾಲಾಯ ತಸ್ಮಯಾ ನಮಃ!

ಕಾಲಕ್ಕೆ ತಕ್ಕಂತೆ ನಾವುಗಳು ಬದುಕಬೇಕು. ಹಿಂದೆ ಇದ್ದ ಸುಂದರ ದಿನಗಳು ಮುಂದೆ ಬರುತ್ತವೆ ಮತ್ತು ಕಾಣುತ್ತೇವೆ ಎಂಬ ನಂಬಿಕೆಯೇ ಇಲ್ಲದಂತಾಗುತ್ತಿದೆ. ಇಂದು ಪ್ರಕೃತಿಯ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಸಾಕ್ಷಿಯಾಗಿ ಮಳೆ ಬೇಳೆಯಾಗುತ್ತಿದೆ.

ಮನುಷ್ಯ ಅರಿತು ನಡೆಯುವ ಕಾಲ ಇದಾಗಿದೆ. ಹಿಂದೆ ಕಂಡಿದ್ದ ಹಳ್ಳಿಯಲ್ಲಿನ ಕಸಪಿಸ ಕೆಸರು. ಎಲ್ಲಿ ಜಾರಿಬಿದ್ದೇವೋ ಏನೋ ಎಂಬ ಜಾಗರುಕತೆಯಿಂದ ಕಾಲನ್ನು ಅದುಮಿ ನಡೆಯುತ್ತಿದ್ದದು. ಮಳೆಯಿಂದ ತೊಯ್ದು ತೊಪ್ಪೆಯಾಗುವುದನ್ನು ತಪ್ಪಿಸಲು ತಲೆ ಮೇಲೆ ಗೋಣಿ ಚಿಲದ ಕೊಪ್ಪೆಯನ್ನು ಇಟ್ಟುಕೊಂಡು ಓಡಾಡುತ್ತಿದ್ದದು. ಆದರೂ ಅಪೂರ್ಣವಾಗಿ ನೆನದು, ಬಿಸಿಯ ಕಾವನ್ನು ಕೊಟ್ಟು ಕೊಳ್ಳಲು ಒಲೆಯ ಮುಂದೆ ಕೂರಲು ಪೈಪೋಟಿ ನಡೆಸುತ್ತಿದ್ದದು.. ಎಲ್ಲಾ ಒಂದು ಸವಿ ನೆನಪು ಮಾತ್ರ. ಕಾಲ ಎಷ್ಟೊಂದು ಬದಲಾಗಿದೆ.

ಹೊಸ ಕ್ರಾಂತಿಯೇ ನಡೆದಿದೆ ಅಂತ ಅನಿಸುತ್ತಿಲ್ಲವಾ?



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ