ಭಾನುವಾರ, ಜೂನ್ 5, 2011

ಸ್ವಾತಂತ್ರ್ಯ ಪೂರ್ವದಲ್ಲಿನ ಹೋರಾಟಗಾರರನ್ನು ನೆನಪಿಸಿದ ಘಟನೆ

ನಾವುಗಳೂ ಸಾವಿರಾರು ಮಾತುಗಳನ್ನು ಕಳೆದ ೬೦ ವರ್ಷಗಳಿಂದ ಅಲ್ಲಿ ಇಲ್ಲಿ ಸಿಕ್ಕಿದ ಕಡೆಯೆಲ್ಲಾ ಮಾತನ್ನಾಡುತ್ತಲೇ ಇದ್ದೇವೆ. ಅದೇ ನಮ್ಮ ರಾಜಕೀಯ ನಾಯಕರುಗಳು, ರಾಜಕೀಯ ವ್ಯವಸ್ಥೆ, ಸರ್ಕಾರ, ಸರ್ಕಾರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಇತ್ಯಾದಿ ಇತ್ಯಾದಿಗಳ ಬಗ್ಗೆ ಸಿಕ್ಕಿದವರ ಜೊತೆಯಲ್ಲೆಲ್ಲಾ ನಮ್ಮ ಮನಸ್ಸಿನಲ್ಲಿನ ಒಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಇದ್ದೇವೆ.

ಆದರೇ ಅದು ಆ ಸಮಯಕ್ಕೆ ಮಾತ್ರ ಸೀಮಿತವಾದ ಒಂದು ಕ್ಷಣದ ಒಂದು ಸಿಟ್ಟಿನ ರೂಪಿನಲ್ಲಿ ಬಾಯಿಂದ ಬಂದು ಪುನಃ ನಾವುಗಳೇ ಈ ಒಂದು ವ್ಯವಸ್ಥೆಗೆ ಹೊಂದಿಕೊಂಡು ಬಿಟ್ಟಿದ್ದೇವೇನೋ ಎಂಬಂತೆ ಏನು ಆಗದ ರೀತಿಯಲ್ಲಿ ನಮ್ಮ ನಮ್ಮ ಜೀವನದ ಜಂಜಾಟದಲ್ಲಿ ಕಳೆದು ಹೋಗಿಬಿಟ್ಟಿರುತ್ತೇವೆ.

ಅದು ಸತ್ಯ ನಮಗೆ ನಮ್ಮದೇಯಾದ ಹತ್ತು ಹಲವು ಕೆಲಸಗಳು ಇರುತ್ತೇವೆ. ನಾವುಗಳು ನಮ್ಮ ದೇಶ, ನಮ್ಮ ವ್ಯವಸ್ಥೆಯ ಬಗ್ಗೆ ಚಿಂತಿಸುವುದಕ್ಕಿಂತ ನಾನು ನನ್ನ ಸ್ಥಿತಿಯ ಬಗ್ಗೆ ಚಿಂತಿಸುವುದೇ ಅಧಿಕ.

ಯಾವುದಾದರೊಂದು ಸಾಮಾಜಿಕ ಅನಿಷ್ಟವನ್ನು ನಾವು ಕಂಡಾಗ ನಮಗೆ ಆ ಕ್ಷಣಕ್ಕೆ ಬೇಸರವಾಗುತ್ತದೆ ಮತ್ತು ನಮ್ಮ ವ್ಯವಸ್ಥೆಯ ಬಗ್ಗೆ ನಮ್ಮ ಮನ ಕುದಿಯುತ್ತದೆ. ಮತ್ತು ಆದರ ವಿರುದ್ಧ ಯಾವ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕು ಎಂಬುದು ಗೊತ್ತಾಗುವುದಿಲ್ಲ.

ಚಿಕ್ಕದಾದ ಹೋರಾಟವನ್ನು ನಮ್ಮ ಮಟ್ಟಕ್ಕೆ ನಾವುಗಳು ಮಾಡಿರುತ್ತೇವೆ. ಯಾವುದೇ ಒಂದು ನೇರವಾದ ಮನಸ್ಸು, ಅದು ಸರಿಯಿಲ್ಲ ಎಂದು ಅನಿಸಿದರೇ ಸುಮ್ಮನೇ ಕೂರುವಂತೆ ಆಗುವುದಿಲ್ಲ. ಅದೇ ಅಲ್ಲವಾ ನಮ್ಮ ಸಂಸ್ಕೃತಿಯ ಜೀವಂತ ನೈತಿಕತೆಯ ಸ್ಪರ್ಷ!

ನಮ್ಮನ್ನು ಸ್ವಾತಂತ್ರ್ಯ ದಿನದಿಂದಲೂ ಕಾಡುತ್ತಿರುವ ಬಹು ದೊಡ್ಡ ಸಾಮಾಜಿಕ ಪೀಡುಗೆಂದರೇ ಭ್ರಷ್ಟಾಚಾರ - ಲಂಚ - ರುಷುವಾತ್. ಇದೊಂದು ಎಂದಿಗೂ ನಿಲ್ಲದ ನಿತ್ಯ ಜಾರಿಯಲ್ಲಿರುವ ಒಂದು ಅಘೋಷಿತ ಪದ್ದತಿಯಾಗಿದೆ. ಯಾವುದೇ ಒಂದು ಕೆಲಸ ಕಾರ್ಯಗಳನ್ನು ಸರ್ಕಾರದಿಂದ ಪಡೆಯಬೇಕೆಂದರೇ ಸಾಮಾನ್ಯ ಜನಗಳು ಸಮ್ ಥಿಂಗ್ ಕೊಡಲೇಬೇಕು.

ಯಾವುದೇ ಯೋಜನೆಗಳು ಜಾರಿಯಾಗಬೇಕೆಂದರೇ, ತಲುಪುವಂತಾಗಬೇಕೆಂದರೇ ದೊಡ್ಡ ಮಟ್ಟದಲ್ಲಿ ಆ ಯೋಜನೆಯು ಸಾಗುವ ಎಲ್ಲಾ ಅಧಿಕಾರಿ ವರ್ಗಗಳು ಸಾವಾಕಾಶವಾಗಿ ಮೇಯುತ್ತಾರೆ. ಕೊನೆಗೆ ಅದು ಜನ ಸಾಮಾನ್ಯರಿಗೆ ತಲುಪುವುದೇ ಇಲ್ಲವೇನೋ ಎಂಬ ಮಟ್ಟದಲ್ಲಿ ಭ್ರಷ್ಟಾಚಾರದ ಪರಿ ನಡೆದೆ ಬಿಟ್ಟಿರುತ್ತದೆ.

ಲಂಚ - ಹಣ ನಡೆಯುತ್ತಿರುವ ಜಾಗವೇ ಇಲ್ಲವೇನೋ ಅದು "ಸಾವಿಲ್ಲದ ಮನೆಯ ಸಾಸುವೆಯನ್ನು ತರುವಂತೆ" ಬುದ್ಧ ಹೇಳಿದ ಕಥೆಯಾಗುತ್ತದೆ!

ಇದು ನಮ್ಮ ನಮ್ಮಲ್ಲಿ ಮೈ ಪರಚಿಕೊಳ್ಳುವ ಸ್ಥಿತಿ. ಇದು ನಮ್ಮ ನಿಮ್ಮಂತಹ ಸಾಮಾನ್ಯ ಪ್ರಜೆಯು ಪಡುವ ಯಾತನೆ. ಏನೊಂದು ಮಾಡದ ಸ್ಥಿತಿ. ಯಾಕೋ ಏನೋ ನಮ್ಮ ವ್ಯವಸ್ಥೆಗೆ ಶಾಶ್ವಾತ ಅಂಗವಿಕಲತೆಯೇ ತಟ್ಟಿ ಬಿಟ್ಟಿದೆಯೇನೋ! ಇದಕ್ಕೆ ಚಿಕಿತ್ಸೆ ನೀಡುವ ಒಬ್ಬೇ ಒಬ್ಬ ನಾಯಕನು ಯಾರು ಎಲ್ಲಿ ಇದ್ದಾನೆ? ಎಂದು ದಾರಿಯನ್ನು ನೋಡಿ ನೋಡಿ ಸಾಕಾಗಿತ್ತು.

ಹಿಂದೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಾರಿ ತೋರಿಸುವ ನೂರಾರು ನಾಯಕರುಗಳು ಹುಲುಸಾಗಿ ಇದ್ದರು. ಅವರು ಹೇಳಿದರೆಂದರೇ ಒಂದು ವರ್ಗವೇ ಯಾವುದೇ ವಯೋಮಾನದವರಾದರೋ ಅವರ ಒಂದು ಕರೆಗಾಗಿಯೇ ಅವರ ಜೋತೆಯಲ್ಲಿ ಹೋರಾಡಲು ಸಿದ್ಧರಾಗುತ್ತಿದ್ದರು. ಇದೇ ಅಲ್ಲವಾ ಅಂಗ್ಲರಲ್ಲಿ ನಡುಕವನ್ನು ಹುಟ್ಟುವಂತೆ ಮಾಡಿದ್ದು. ನಿಜವಾಗಿಯೋ ಸಿಂಹಸ್ವಪ್ನರಾಗಿದ್ದ ಯುವ ನೇತರಾರು ಒಬ್ಬರಾ? ಇಬ್ಬರಾ? .. ಅದೆಲ್ಲಾ ಇತಿಹಾಸ ಬಿಡಿ.

ಅಂತೋ ಇಂತೋ ನಿನ್ನೇಯ ಬಾಬಾ ರಾಮದೇವರವರ ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣವನ್ನು ವಾಪಸ್ಸು ತರುವಂತೆ ಸರ್ಕಾರವನ್ನು ಒತ್ತಾಯಿಸಿ ನಡೆಸಿದ ಉಪವಾಸ ಸತ್ಯಾಗ್ರಹ.. ಅಲ್ಲಿ ಸೇರಿದ್ದ ಅಸಾಂಖ್ಯಾತ ಭಾರತೀಯರ ಉತ್ಸಾಹ.. ಬಾಬಾರವರ ದೇಶಪ್ರೇಮದ ಮಾತುಗಳು.. ಸರ್ಕಾರದ ನಡಾವಳಿ.. ಹಾಗೆಯೇ ಮಧ್ಯ ರಾತ್ರಿ ನಮ್ಮ ಭಾರತೀಯ ಪೋಲಿಸರುಗಳು ಬಾಬಾ ಮತ್ತು ನಿರಶನಕ್ಕೆ ಬಂದಿದ್ದ ಸಾವಿರಾರು ಮಹಿಳೆಯರು, ವೃದ್ಧರು, ಯುವಕರು, ಮಕ್ಕಳು, ಮರಿಗಳ ಮೇಲೆ ನಡೆಸಿದ ದಾಳಿಯನ್ನು ನೋಡಿದಾಗ ನಿಜವಾಗಿಯೋ ಇದು ನಮ್ಮ ಸ್ವಾತಂತ್ರ್ಯವನ್ನು ಹೊಂದಿರುವ ಪ್ರಜಾಪ್ರಭುತ್ವವನ್ನು ಹೊಂದಿರುವ ಭವ್ಯ ಗಣರಾಜ್ಯ ಭಾರತವಾ ಅಥವಾ ನಾವುಗಳು ಇನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಇರುವುವೇನೋ ಎಂದು ಅನುಮಾನ ಉಂಟಾಯಿತು.

ನಮ್ಮದೇ ಸರ್ಕಾರದ ನಮ್ಮವರೆಯಾದ ನಮ್ಮ ಪೋಲಿಸ್ ಅಧಿಕಾರಿಗಳು ನಿದ್ದೆಯಲ್ಲಿದ್ದ ನಮ್ಮದೇ ಜನಗಳನ್ನು ಒತ್ತಾಯ ಪೂರಕವಾಗಿ ಓಡಿಸಿದ್ದು. ಸ್ವಾತಂತ್ರ್ಯ ಪೂರ್ವ ಭಾರತದ ಬ್ರಿಟಿಷ್ ಸರ್ಕಾರದ ಅಧಿಕಾರಿಗಳ ವರ್ತನೆಯನ್ನು ನೆನಪಿಸಿತು. ನಿಜವಾಗಿಯೋ ಮನಸ್ಸೆಲ್ಲಾ ಕಸಿವಿಸಿಯಾಯಿತು. ಇಲ್ಲಿಯ ನಮ್ಮ ವ್ಯವಸ್ಥೆಯ ಬಗ್ಗೆ ಯಾವುದೇ ಭರವಸೆಯೇ ಇಲ್ಲವೇನೋ ಎಂಬಂತಾಯಿತು.

ಒಂದು ವ್ಯವಸ್ಥೆಯನ್ನು ಬದಲಾಯಿಸಲು ಎಷ್ಟು ಕಷ್ಟ ಎಂಬುದು ನಿನ್ನೇ ನಿರೂಪಿತವಾಯಿತು. ನಮ್ಮ ದೇಶಕ್ಕಾಗಿ ತಮ್ಮ ಜೀವವನ್ನೇ ಪಣವಿಟ್ಟು ೨೦೦ ವರ್ಷಗಳ ಕಾಲ ಬ್ರಿಟಿಷ್ ರನ್ನು ನಮ್ಮ ದೇಶದಿಂದ ಹೊರ ದಬ್ಬಲು ಎಷ್ಟು ಕಷ್ಟಪಟ್ಟಿರಬಹುದು ಎಂಬುದು ನಿನ್ನೇಯ ಘಟನೆ ಮನದಟ್ಟು ಮಾಡಿತು. ನಮ್ಮದೇ ಜನಗಳು ಶಾಂತವಾಗಿ ಹೋರಾಡುತ್ತಿದ್ದ ತಮ್ಮದೇ ಜನಗಳ ಮೇಲೆ ದೌರ್ಜನ್ಯವನ್ನು ಮಾಡಿದ್ದಂತೋ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯೇ ಸರಿ.



ನಾವುಗಳು ನಮ್ಮ ಸ್ಥಿತಿಯನ್ನು ಯಾವ ರೀತಿಯಲ್ಲಿ ಬದಲಾಯಿಸಬೇಕು ಎಂಬುದು ತುಂಬ ಕಷ್ಟವಾದ ವಿಷಯವೇ ಸರಿ. ಬದಲಾವಣೆಯನ್ನು ಯಾವ ಮಟ್ಟದಲ್ಲಿ ಎಲ್ಲಿ ತರಬೇಕು ಎಂಬುದು ದೇಶದ ಬಗ್ಗೆ ಕಾಳಜಿ ಇರುವವರು ಇನ್ನೂ ಜಾಗರುಕತೆಯಿಂದ ಯೋಚಿಸಿ ಹೆಜ್ಜೆಯನ್ನು ಇಡುವ ಕಾಲವಾಗಿದೆ ಇಂದಿನ ನಮ್ಮ ಈ ಪರಿಸ್ಥಿತಿ.

ಏನಾದರೂ ಚಳುವಳಿಯನ್ನು ಮಾಡಲು ಮುಂದೆ ಬರುವ ದೇಶ ಪ್ರೇಮಿಗಳಿಗೆ, ದೇಶದ ವ್ಯವಸ್ಥೆಯನ್ನು ಕಂಡು ಆಕ್ರೋಶಗೊಂಡು ತಮ್ಮ ಮಾತನ್ನು ಆಡದ ಸ್ಥಿತಿ ನಿರ್ಮಿತವಾಗುತ್ತಿದೆಯೇನೋ ಎನಿಸುತ್ತದೆ. ಒಂದು ಮಾತನ್ನಾಡಿದರೂ ಕಷ್ಟ. ಒಬ್ಬರ ಜೊತೆಯಲ್ಲಿ ನಿಂತರು ಕಷ್ಟ ಅನ್ನುವಂತಾಗುತ್ತದೆ. ಎಲ್ಲದಕ್ಕೂ ರಾಜಕೀಯ ದುರ್ಗಂಧವನ್ನು, ಧರ್ಮದ ಅಂಟನ್ನು, ಜಾತಿಯ ಕಲೆಯನ್ನು ಮೆತ್ತುವ ಕಾರ್ಯಗಳನ್ನು ಪ್ರಭಾವಿ ವ್ಯಕ್ತಿಗಳು ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ.

ತಮ್ಮ ಅಧಿಕಾರವನ್ನು ಯಾವ ರೀತಿಯಲ್ಲಿ ತಮಗೆ ಅನುಕೂಲಕರವಾಗಿ ಬಳಸಿಕೊಂಡು ಯಾವ ರೀತಿಯಲ್ಲಿ ಸಾಮಾನ್ಯರ ಹೋರಾಟವನ್ನು ಅದ್ದು ಬಸ್ತಿನಲ್ಲಿ ಇಡಬೇಕು ಆ ರೀತಿಯಲ್ಲಿ ಇಡುತ್ತಾರೆ.

ಮತ ನೀಡುವ ಪ್ರಭುವೇ ತನ್ನ ಶಕ್ತಿಯನ್ನು ಯೋಚಿಸುವಂತಾಗಿದೆ. ಇದು ಎಲ್ಲಿಯವರೆಗೆ? ಎಷ್ಟು ದಿನ?

ನನಗೆ ಎನಿಸುತ್ತಿದೆ ಬದಲಾವಣೆಯ ಹರಿಕಾರರ ಆಗಮನದ ಹೊಸ ಕಿರಣ ಹೆಚ್ಚು ಉಜ್ವಲವಾಗಿ ಇಂದು ಕಾಣಿಸುತ್ತಿದೆ. ಅವರುಗಳಿಗೆ ಸರಿಯಾದ ವೇದಿಕೆ ಬೇಕಾಗಿದೆ. ಅದು ಇಂದು ಹೆಚ್ಚು ಹೆಚ್ಚು ರೀತಿಯಲ್ಲಿ ಸಿಗುತ್ತಿದೆ. ಯಾಕೆಂದರೇ ಈ ರೀತಿಯಲ್ಲಿ ಅಣ್ಣ ಹಜಾರೆ, ಬಾಬಾ ರವರಿಗೆ ಸಾಮಾನ್ಯ ಜನಗಳಿಂದ ಸಿಗುತ್ತಿರುವ ಬೆಂಬಲವೇ ಸಾಕ್ಷಿ. ಸಾಮಾನ್ಯ ಭಾರತೀಯನ ಮನಸ್ಸು ಯಾವುದಕ್ಕಾಗಿ ಇಂದು ಕಾಯುತ್ತಿದೆ ಮತ್ತು ಏನನ್ನು ಬಯುಸುತ್ತಿದೆ ಎಂಬುದು.

ಇದು ಹೀಗೆ ಮುಂದುವರಿಯಲಿ ಮತ್ತು ಗಾಂಧಿ ಕಂಡ ರಾಮ ರಾಜ್ಯದ ಕನಸು ಕೆಲವೇ ದಿನಗಳಲ್ಲಿ ನನಸಾಗಲಿ ಎಂದು ಆಶೀಸುವುದು ಸಾಮಾನ್ಯ ಭಾರತೀಯನ ಮನಸ್ಸು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ