ಬುಧವಾರ, ನವೆಂಬರ್ 24, 2010

ಗುಲ್ ಮೋಹರ್ ಮರದ ನೆರಳಲ್ಲಿ ನೀನು

ಹೇ ಪ್ರಿಯ ಲತೆ,

ನನಗೆ ನೀ ಇಷ್ಟೊಂದು ವೇದನೆಯನ್ನು ಕೊಡುತ್ತೀಯ ಎಂದು ನಾನು ನನ್ನ ಕನಸು ಮನಸ್ಸಿನಲ್ಲೂ ನೆನಸಿರಲಿಲ್ಲ. ಕೇವಲ ನಿನ್ನ ಒಂದು ಮಾತಿಗಾಗಿ, ಕೇವಲ ನಿನ್ನ ಒಂದು ಎಸ್.ಎಂ.ಎಸ್ ಗಾಗಿ, ಕೇವಲ ನಿನ್ನ ಒಂದು ಮಿಸ್ ಕಾಲಿಗೆ ಕಾದ ಕ್ಷಣಗಳನ್ನು ನೆನಸಿಕೊಂಡರೆ ನನ್ನಲ್ಲಿ ನಾನೇ ಇಲ್ಲ ಎನಿಸುತ್ತದೆ. ಆಗೊಂತೂ ನಿನ್ನ ಬಗ್ಗೆ ತುಂಬ ಸ್ವಾರ್ಥಿ ಅನಿಸುತ್ತದೆ. ನಿನಗೆ ನನ್ನ ಬಗ್ಗೆ ಕಾಳಜಿ ಮತ್ತು ಅಷ್ಟೇ ಪ್ರೀತಿ ಇದೆ ಎಂಬುದು ಗೊತ್ತು ಆದರೂ ಯಾಕೆ ನೀನು ನನ್ನನ್ನು ಇಷ್ಟೊಂದು ಸತಾಯಿಸುವೆ ಎಂಬುದು ತಿಳಿಯದಾಗಿದೆ.


ಕಾಲೇಜಿಗೆ ಯಾಕಾದರೂ ರಜೆಯನ್ನು ಕೊಡುವರೂ ತಿಳಿಯದಾಗಿದೆ. ಹೌದಲ್ಲವಾ! ಅದು ನನ್ನ ಮತ್ತು ನಿನ್ನ ಕೈಯಲ್ಲಿ ಇಲ್ಲಾ. ಆ ನನ್ನ ನಿನ್ನ ಗಂಭಿರ ಮುಖದ ಪ್ರಿನ್ಸಿ ಕೈಯಲ್ಲಿ ಮಾತ್ರ ಇದೆ. ಅದಕ್ಕೇನೂ ಗೊತ್ತು ನನ್ನ ನಿನ್ನಂತ ಈ ಅಸಂಖ್ಯಾತ ಜೊಡಿ ಜೀವಗಳ ವಿರಹ ವೇದನೆಯ ಶಾಪ ಮುದಿ ಗೂಬೆಗೆ ತಾಕುವುದು ಎಂಬುದು.


ಈ ಒಂದು ತಿಂಗಳು ಒಂದು ಯುಗವನ್ನೇ ಕಳೆದಂತಾಗಿದೆ.


ನೀ ಇರುವ ಆ ಕುಗ್ರಾಮದಲ್ಲಿ ನನ್ನ ನಿನ್ನ ಬೆಸೆಯುವ ಜಂಗಮವಾಣಿಯ ತರಂಗಗಳು ಲಭ್ಯವಿಲ್ಲವಲ್ಲಾ! ಯಾವಾಗ ಪ್ರಯತ್ನಿಸಿದರೂ ವ್ಯಾಪ್ತಿ ಪ್ರದೇಶದಿಂದ ಹೊರಗೆ ಎಂಬ ಆ ತಾಟಕಿಯ ದ್ವನಿ. ಅಲ್ಲಿ ನಿನ್ನ ದ್ವನಿಗಾಗಿ ಕಾತುರತೆಯಿಂದ ಕಾದ ಕ್ಷಣಗಳಲ್ಲಿ ಅವಳ ಯಾಂತ್ರಿಕ ಮಾತು. ಆಗ ನನ್ನ ನಿನ್ನ ಬೆಸೆಯುವ ಒಂದು ಸಂಪರ್ಕವು ಉಪಯೋಗಕ್ಕೆ ಇಲ್ಲ ಎಂಬುದು ಮನಸ್ಸಿಗೆ ಬಂದಾಗ.. ಆಗಲೇ ಬೆಯುತ್ತಿರುವ ಮನವನ್ನು ಕುದಿಯುವ ಎಣ್ಣೆಯಲ್ಲಿ ಹಾಕಿದಂತ ನಿರಾಶೆ. ನಾನಾಗ ಬೆಂಕಿ ಬೆಂಕಿ..


ಯಾರೋ ಹಿರಿಯರು ಹೇಳಿದ್ದಾರೆ.. ದೂರ ಇದ್ದಷ್ಟೂ ಪ್ರೀತಿ ಹೆಚ್ಚಾಗುತ್ತದೆ ಅಂಥ.. ನನಗೂಂತು ತಿಳಿಯದು ದೂರ ಇದ್ದಷ್ಟು ನಾನು ನಾನಾಗಿಲ್ಲ. ನಿನ್ನದೇ ದ್ಯಾನ.. ನಿನ್ನದೇ ಆ ಮುಗ್ಧ ಮುಖ..


ನನ್ನ ಮನೆಯಲ್ಲಿ ಎಲ್ಲಾರಿಗೂ ಏನೋ ಒಂದು ಅನುಮಾನ. ಯಾಕೇ ಇವನು ಹೀಗೆ ರಜಾವನ್ನು ಮಜಾ ಮಾಡುವುದ ಬಿಟ್ಟು ಕೇವಲ ನಾಲ್ಕು ಗೋಡೆಯಲ್ಲಿ ಕಾಲ ಕಳೆಯುತ್ತಿರುವನಲ್ಲಾ ಎಂದು.


ನಿನ್ನ ಬಗ್ಗೆ ಇರುವ ಈಗಿನ ಒಂದೇ ಆಸೆ.. ನಿನ್ನ ನೋಡ ಬೇಕು ಮತ್ತು ನಿನ್ನ ಆ ಮುಂಗರುಳನ್ನು ಒಮ್ಮೆ ಅಂದು ನಾನು ಹಾಗೇ ಸುಮ್ಮನೇ ಸ್ಪರ್ಷಿಸಿದ ರೀತಿಯಲ್ಲಿ ಮೆಲ್ಲಗೆ ಹಿಂದಕ್ಕೆ ತೀಡಬೇಕು ಎಂದು. ನಿನ್ನ ಆ ಎರಡು ಎಳೆ ಕೇಶ ಮುಂದಕ್ಕೆ ಬಂದಾಗ ನೀನು ಸಾಕ್ಷತ್ ಅಪ್ಸರೆಯೇ ಸರಿ. ಆ ಸಮಯದಲ್ಲಿ ನಿನ್ನ ಕೈ ಗೊತ್ತಿಲ್ಲದ ರೀತಿಯಲ್ಲಿ ಹೋಗಿ ಅವುಗಳನ್ನು ನಿನ್ನ ಕಿವಿಯ ಹಿಂದಕ್ಕೆ ಸೇರಿಸುವಾಗ ಮನೋಲ್ಲಾಸವಾಗುತ್ತದೆ. ಹೇ ದೇವ ಎಂಥ ಸಮಯದಲ್ಲಿ ಈ ಸೌಂದರ್ಯದ ಪುತ್ಥಳಿಯನ್ನು ಸೃಷ್ಟಿಸಿದೇ ಎಂದು ನನಲ್ಲಿ ನಾನೇ ಕೇಳಿಕೊಳ್ಳೂತ್ತೇನೆ.


ನಿನ್ನನ್ನು ನಾನು ಯಾಕೇ ಇಷ್ಟಪಡುತ್ತೇನೆ ಎಂದು ಕೇಳಿಕೊಂಡರೆ ಸಾವಿರ ಕಾರಣಗಳನ್ನು ತೋರಿಸಬಹುದು. ನನ್ನ ಗೆಳೆಯರುಗಳು ಕೇಳುತ್ತಾರೆ... ಏ! ಬಿಡೋ ಅವಳ ಹಿಂದೆ ಯಾಕೇ ಬಿದ್ದಿಯಾ! ಅವಳಿಗಿಂಥ ಚೆನ್ನಾಗಿರುವವರು ಕಾಲೇಜು ತುಂಬ ಇದ್ದಾರೆ ಎನ್ನುತ್ತಾರೆ. ಆದರೆ ಅವರುಗಳಿಗೇನೂ ಗೊತ್ತು ಪ್ರೀತಿ ಹಾಗೆಲ್ಲಾ ಹೇಳಿ ಕೇಳಿ ವ್ಯವಹಾರಿಕವಾಗಿ ಹುಟ್ಟುವುದಿಲ್ಲ ಎಂಬುದು.


ನೀನೇ ಒಮ್ಮೆ ಹೇಳಿದ್ದೇ. ನನಗೆ ಹಲವರು ಹೀಗಾಗಲೇ ನನ್ನ ಪ್ರೇಮ ಭಿಕ್ಷೆಯನ್ನು ಕೇಳಿದ್ದರೂ.. ಮತ್ತು ಅವರೆಲ್ಲಾ ಯಾಕೆ ನನ್ನನ್ನು ಅಷ್ಟೊಂದು ಇಷ್ಟಪಡುತ್ತಾರೆ ಎಂಬುದನ್ನು. ನನಗೂ ತಿಳಿಯದು. ಅಷ್ಟೆಲ್ಲಾ ಮಂದಿಯ ಮಧ್ಯದಿಂದ ನನ್ನನ್ನೇ ಮಾತ್ರ ಹೇಗೆ ಪ್ರೀತಿಸಿದೆ. ಆ ಮೊದಲ ದಿನ..ಆ ಮೊದಲ ನೋಟ.. ಆ ಮೊದಲ ಮಾತು.. ಹೇಗೆ ಕ್ಷಣ ಮಾತ್ರದಲ್ಲಿಯೇ ಘಟಿಸಿತು ಅಲ್ಲವಾ? ಅದಕ್ಕೆ ಕಾಲಾಯ ತಸ್ಮಯಾ ನಮಃ!


ಆದಕ್ಕೆ ಹೇಳಬೇಕು. ಪ್ರೀತಿಯಾಗಲೀ.. ಒಳ್ಳೆಯದಾಗಲೀ..ಕೆಟ್ಟದಾಗಲೀ.. ಯಾರೂಬ್ಬರ ಅರಿವಿಗೂ ಬಾರದ ರೀತಿಯಲ್ಲಿ ತನ್ನ ಜಾದುವನ್ನು ಎಲ್ಲಿ ಎಲ್ಲಿ ಇಡಬೇಕು ಅಲ್ಲಿ ಕರಾರುವಕ್ಕಾಗಿ ಸ್ಥಾಪಿಸುತ್ತದೆ.


ನಾನು ಅಂದುಕೊಂಡಿದ್ದೇ ನಿನ್ನ ಹಾಗೆಯೇ ತೀರ ಸರಳತೆಯ ಹಳ್ಳಿಗಾಡಿನ.. ಸ್ಪಲ್ಪ ಮಾಡ್ರನ್ ಇದ್ದು.. ಸ್ಪಲ್ಪ ಓದಿದ್ದೂ.. ಪ್ರೀತಿಸುವವರನ್ನು ತಾನು ಪ್ರೀತಿಸುವಂತಿರುವ ಆ ನನ್ನ ಕನಸಿನ ರಾಣಿ ಯಾರಿರಬಹುದು ಎಂದು.
ನನಗೆ ಅನಿಸುತ್ತದೆ. ಅದೇಗೆ ಒಂದು ದಿನ ತಂದೆ ತಾಯಿಗಳು ಒಪ್ಪಿ ನಮ್ಮ ಒಪ್ಪಿಗೆಯನ್ನು ಒಂದೇ ಕ್ಷಣದಲ್ಲಿ ಕೇಳಿ ಎರಡು ಮನೆಯವರು ಓ.ಕೆ ಎಂದಾಕ್ಷಣದಿಂದ ಒತ್ತಾಯವಾಗಿ ಪರಸ್ಪರ ಪ್ರೀತಿಸಲೇಬೇಕು ಎಂದು ಪ್ರಾರಂಭಿಸುವ ಮದುವೆಯೆಂಬ ಕಟ್ಟಳೆ ಎಷ್ಟೊಂದು ಅಭಾಸ ಅಲ್ಲವಾ!


ಅದಕ್ಕೇ ಇರಬೇಕು ನಾನು ನನ್ನ ಯೌವನದ ದಿನಗಳಿಂದ ಅಂಥ ಮನೋಲತೆಗಾಗಿ ಶೋಧಿಸುತ್ತಿದ್ದಾಗ ನೀ ನನ್ನ ಹೃದಯ ಸಿಂಹಾಸನದ ಹತ್ತಿರವೇ ಹಾದು ಹೋದಾಗ.. ಇವಳೇ ಇರಬೇಕು. ಮಗಾ! ಬಿಡಬೇಡಾ ಟ್ರೈ ಮಾಡು ಅನಿಸಿದ್ದು. ಅದುವರೆಗೂ ಯಾರೂ ನಿನ್ನಷ್ಟು ನನ್ನನ್ನು ಇಂಪ್ರೇಸ್ ಮಾಡಿರಲಿಲ್ಲ.


ಹಾಗೆಯೇ ಸುಮ್ಮನೇ ನೋಡಿದರೇ ಹೇ ಇವಳು ಏನು ತಮಾಷೆಯಾ ಜಾಲಿ ಹುಡುಗಿ ಅಲ್ಲವಾ ಅನಿಸುತ್ತದೆ. ಅಂದು ಮೊದಲ ದಿನ ನಮ್ಮ ಕಾಲೇಜಿನ ಆ ಗುಲ್ ಮೋಹರ್ ಮರದ ನೆರಳಲ್ಲಿ ನೀನು ಆ ನಿನ್ನ ಗೆಳತಿಯರಾದ ಸೇವಂತಿ ಮತ್ತು ಸುಮತಿ ಜೊತೆ ನಿಂತಿದ್ದಾಗ ಇದು ಯಾರಪ್ಪ ಸೆಂಟರ್ ಆಪ್ ಆಟ್ರ್ಯಾಕ್ಷನ್ ಅನಿಸಿತ್ತು. ಮತ್ತು ಆ ನಿನ್ನ ತಿಳಿ ನೇರಳೆಯ ನೆರಗೆಯ ಲಂಗದಲ್ಲಿ ತುಂಬ ಸುಂದರವಾಗಿ ನಮ್ಮ ಸಂಸ್ಕೃತಿಯ ಹುಡುಗಿಯ ರೀತಿಯಲ್ಲಿ ತೀರ ಸರಳವಾಗಿ ಕಾಣಿಸಿದ್ದೇ. ನಿನಗೆ ಆ ಡ್ರೆಸ್ಸಿಂಗ್ ಸೆನ್ಸ್ ಯಾರಿಂದ ಬಂದಿದೆಯೋ ತಿಳಿಯದು. ಬಹುಶಃ ನಿಮ್ಮ ಅಮ್ಮನಿಂದ.. ಅಥವಾ ನಿಮ್ಮ ಅಕ್ಕನಿಂದ ಇರಬಹುದು... ಯಾಕೆಂದರೆ ನನಗೆ ತಿಳಿದಂತೆ ಹುಡುಗಿಯರು.. ಆದಷ್ಟು ತನ್ನ ಹತ್ತಿರದವರ ರೀತಿಯಲ್ಲಿ ಇರಬೇಕು ಎಂದು ಆಸೆ ಪಡುತ್ತಾರೆ.


ಅಂದು ನಾನು ನೀನು ಇಬ್ಬರೂ ತಮ್ಮ ತಮ್ಮ ಭಾವನೆಯನ್ನು ಹೇಳಿಕೊಂಡ ನಂತರ. ನೀನು ನಿನ್ನ ಓದಿನ ಬಗ್ಗೆ. ನಿನ್ನ ಮುಂದಿನ ಜೀವನದ ಬಗ್ಗೆ. ನನ್ನ ಬಗ್ಗೆ ನಾನು ಏನು ಮಾಡಬೇಕು. ಯಾವ ಓದನ್ನು ಮುಂದೆ ಓದಬೇಕು. ಅಲ್ಲಿಯವರೆಗೂ ಹೇಗೆ ನಾವುಗಳು ನಮ್ಮ ಪ್ರೇಮದ ದಿನಗಳನ್ನು ಕಳೆಯಬೇಕು ಇತ್ಯಾದಿ ಇತ್ಯಾದಿ... ವಿವರಗಳನ್ನು ಅದು ಹೇಗೆ ಆ ಕ್ಷಣದಲ್ಲಿ ನಿರ್ಧಿಷ್ಟವಾಗಿ ಯೋಚಿಸಿದೇ.. ಅಂದೇ ಗೊತ್ತಾಗಿದ್ದು. ಹುಡುಗಿ ತುಂಬ ಬುದ್ಧಿವಂತೆ! ಆ ವಯಸ್ಸಿನ ಹುಡುಗಿಯರು ಸುಮ್ಮನೇ ಚೆಲ್ಲು ಚೆಲ್ಲಾಗಿ ವರ್ತಿಸುತ್ತಾರೆ.


ಬದುಕಿನ ಬಗ್ಗೆ ಯಾವುದೇ ನಿರ್ಧಿಷ್ಟವಾದ ಗುರಿಯಿಲ್ಲದೇ ಲವ್, ಪಾರ್ಕ, ಬಾಯ್ ಪ್ರೇಂಡ್ಸ್ ಎಂದು ಸುಖಾ ಸುಮ್ಮನೇ ಸಮಯವನ್ನು ಕಾಲಹರಣ ಮಾಡುವುದೇ ಸುಖಿ ಜೀವನ ಎನ್ನುವ ಸ್ನೇಹಿತರ ಮಧ್ಯೆ ನೀನು ವಿಭಿನ್ನ ಅನಿಸಿತು. ಆಗ ನನಗೆ ಸ್ಪಲ್ಪ ಧೈರ್ಯವು ಬಂದಿತು.


ಯಾಕೆಂದರೇ ಲವ್ ಎಂದರೇ ಹಾಗೆ ಹೀಗೆ ಎಂದು ಅಲ್ಲಿ ಇಲ್ಲಿ ಓದಿದ್ದು, ಎಸ್. ಎಂ. ಎಸ್ ಗಳಲ್ಲಿ ಹುಡುಗನ ಜೀವನದಲ್ಲಿ ಹುಡುಗಿ ಬಂದರೇ ಅವನ ಜೀವನ ಅಂದೇ ಮುಕ್ತಾಯ.. ಇತ್ಯಾದಿ ಇತ್ಯಾದಿ ಲವ್ ಡಿಸ್ ಪಾಯಿಂಟ್ ಗಳನ್ನೇ ಗಮನಿಸುತ್ತಿದ್ದವನಿಗೆ ಆ ನಿನ್ನ ಭವಿಷ್ಯದ ಬಗೆಗಿನ ದೃಷ್ಟಿ ಕೋನ ಒಳ್ಳೆಯವಳನ್ನೇ ಆರಿಸಿದ್ದಿಯ ಗುರು ಬಿಡು ಅನಿಸಿತ್ತು.


ಅಲ್ಲವಾ! ಇಷ್ಟೊಂದು ವಿವರವಾದ ಮನದ ಭಾವನೆಗಳನ್ನು ಪತ್ರದ ಮುಖೇನವಲ್ಲದೇ ಇನ್ಯಾವುದರಲ್ಲೂ ಹರಿಯ ಬಿಡಲೂ ಸಾಧ್ಯವಿಲ್ಲ.


ನೋಡು ಈ ನಮ್ಮ ಯಾಂತ್ರಿಕ ವಸ್ತುಗಳಾದ ಪ್ರೀತಿಯ ಮೊಬೈಲ್ ಗಳು ಒಮ್ಮೂಮ್ಮೆ ಉಪಯೋಗಕ್ಕೆ ಬಾರದವಾಗುತ್ತವೆ. ಪುನಃ ನಮ್ಮ ಹಿರಿಯರು ತಮ್ಮ ಪ್ರೇಮ ಸಂದೇಶವನ್ನು ತಲುಪಿಸಲು ಉಪಯೋಗಿಸುತ್ತಿದ್ದ ಈ ಪತ್ರಗಳೇ ಗಟ್ಟಿ. ಇನ್ನೂ ಮೂರು ದಿನಗಳು ಕಳೆದರೇ ನೀನು ನನ್ನ ಸೇರಬಹುದು. ಆ ಕ್ಷಣಕ್ಕಾಗಿ ಕಾಯುತ್ತಿರುವೇ. ಈ ನನ್ನ ಮನ ತಲ್ಲಣದ ಪತ್ರ ಕಂಡು ಗಾಬರಿಯೇನೂ ಬೇಡ. ಯಾಕೆಂದರೇ ಕಳೆದ ಎರಡೂ ವಾರದಿಂದ ಪ್ರತಿ ರಾತ್ರಿ ಬೆಳಂದಿಗಳ ಹುಣ್ಣಿಮೆ ಚಂದ್ರಾನೋಪಾದಿಯಲ್ಲಿ ಬೆಳದಿಂಗಳ ಬಾಲೆಯಾಗಿ ನನ್ನ ಮನದ ವಿವಿಧ ನರ್ತನಕ್ಕೆ ಸಾಥ್ ಕೊಡುತ್ತಿದ್ದಿಯ. ಈ ರೀತಿಯ ಅವಕಾಶ ಮತ್ಯಾರಿಗೇ ಸಿಗುತ್ತದೆ ಅಲ್ಲವಾ! ಗೊತ್ತಿಲ್ಲ ನಿನಗೂ ಇದೇ ರೀತಿಯ ಫೀಲಿಂಗ್ ಇರುವುದಾ! ಬಂದಾಗ ಅದೇ ಮಾತನ್ನಾಡೋಣ.


ನಿನಗಾಗಿ ಕಾಯುತ್ತಿರುವ ನಿನ್ನ ಪ್ರೀತಿಯ ಚಿರಂತನ್!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ