ಭಾನುವಾರ, ನವೆಂಬರ್ 21, 2010

ನೆನಪುಗಳ ಮಾತು ಮಧುರ..



ನೆನಪುಗಳು ಹಾಗೆಯೇ. ಯಾವ ರೀತಿಯಲ್ಲಿ ಮನದಲ್ಲಿ ಮೀಟುತ್ತವೆಯೋ ಹೇಳಲು ಬರುವುದಿಲ್ಲ. ಅವುಗಳ ಉಗಮಕ್ಕೆ ಕಾರಣೀಭೂತವಾದ ಯಾವುದಾದರೂ ಒಂದು ಮಾತು, ಘಟನೆ, ಓದಿನ ಸಾಲು,ವ್ಯಕ್ತಿಯ ಚಿತ್ರ, ಕವನದ ಸಾಲು, ನೋಡಿದ ಚಲಚಿತ್ರದ ತುಣುಕು ಯಾವುದಾದರೂ ಇರಬಹುದು. ತಾವು ಕಳೆದ ಸುಖಿಸಿದ ಸುಖಿ ದಿನಗಳನ್ನು ಅಥಾವ ದುಃಖಿ ದಿನಗಳನ್ನು ಆ ಸಂದರ್ಭದ ಸ್ಥಾಯಿಗೆ ನಮ್ಮನ್ನು ಕರೆದುಕೊಂಡು ಹೋಗಿಬಿಡುತ್ತವೆ. ಅವುಗಳಿಗೆ ಅಂಥ ತಾಕತ್ತು ಇರುತ್ತದೆ.

ಆಗಲೇ ಇರಬೇಕು ನಾವು ಓದುವ ಕಥೆ, ನೋಡುವ ಚಿತ್ರ, ಕೇಳುವ ಹಾಡು, ಮಾತನ್ನಾಡುವ ಮಾತು ನಮ್ಮ ಮನ ಮುಟ್ಟುವುದು ಮತ್ತು ಅದು ತುಂಬ ಇಷ್ಟವಾಗುವುದು. ಅದು ನಮ್ಮ ನೆನಪನ್ನು ಕೆಣಕಬೇಕು ಮತ್ತು ಆ ನೆನಪಿನ ಮೆರವಣಿಗೆಯನ್ನು ಕಾಣುವಂತೆ ಮಾಡು ಜಾದುತನವನ್ನು ಹೊಂದಿರಬೇಕು. ಆಗ ಮಾತ್ರ ಅದೊಂದು ಗಟ್ಟಿ ವಸ್ತುವಾಗಿರುತ್ತದೆ.

ನಾವು ನಮ್ಮ ಬಿಡುವಿನ ವೇಳೆ ನಮ್ಮ ಮನಸ್ಸಿನ ಬೋರ್ ಹೋಗಿಸಬೇಕು ಎಂದರೇ ಯಾವುದಾದರೂ ಸೃಜಶೀಲವಾದ ಹೊಸತನದ ಘಳಿಗೆಗಾಗಿ ಕಾತರಿಸುತ್ತೇವೆ. ಅಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವ ನಮ್ಮ ಸಂತೋಷ ಅಥವಾ ನಮ್ಮ ದುಃಖಗಳನ್ನು, ಕಳೆದು ಹೋದ ಕ್ಷಣಗಳ ಪುನರ್ ಮೆಲುಕು ಹಾಕಿಕೊಳ್ಳುವ ಕ್ಷಣಕ್ಕಾಗಿ ಕಾತರಿಸುತ್ತೇವೆ. ಅವುಗಳನ್ನು ಇಂದಿನ ಈ ಕಲಾ ಪರಿಕರಗಳಾದ ಯಾವುದಾದರೂ ಒಂದು ಮಾಧ್ಯಮದ ಮೂಲಕ ಪುನಃ ನಮ್ಮ ಇತಿಹಾಸದಲ್ಲಿ ಕಂಡ ಕ್ಷಣಗಳ ನೆನಪನ್ನು ಹೊಂದಿಸಿಕೊಂಡು ಇಂದು ನಲಿಯುತ್ತಾ ಇರುತ್ತೇವೆ.

ಇಂದು ಕಂಡ ಈ ಕ್ಷಣಗಳ ಸಂತಸವನ್ನು ಮನದ ಒಂದು ಮೂಲೆಯಲ್ಲಿ ಹಾಗೆಯೇ ಅಚ್ಚು ಮಾಡಿ ಇಟ್ಟು ಇದನ್ನು ಪುನಃ ಎಂದಾದರೂ ಒಂದು ದಿನ ಮತ್ತೊಂದು ಬಗೆಯಲ್ಲಿ ಮೆಲಕು ಹಾಕಿಕೊಳ್ಳುತ್ತಾ ಪುನಃ ಸಂತೋಷಿಸುತ್ತೇವೆ. ಈ ನಮ್ಮ ಮಾನವ ಜನ್ಮಕ್ಕೆ ಮಾತ್ರ ಇಂಥ ಒಂದು ರೀತಿಯ ಬಹು ಅಮೊಲ್ಯ ವರದಾನವನ್ನು ಆ ಭಗವಂತ ಕರುಣಿಸಿದ್ದಾನೆ ಎಂದರೇ ತಪ್ಪಾಗುವುದಿಲ್ಲ. ಇದೊಂದೇ ಮನುಷ್ಯನನ್ನು ಉಳಿದ ಎಲ್ಲಾ ಪ್ರಾಣಿಗಳ ಜಗತ್ತಿನಿಂದ ಬೇರೆ ಮಾಡಿ ಇಟ್ಟಿರುವುದು.

ಮನುಷ್ಯ ತಾನು ಬೆಳೆಯುತ್ತಾ ಬೆಳೆಯುತ್ತಾ ತನ್ನ ಜೀವನದ ಹಲವಾರು ಅಮೋಲ್ಯವಾದ ಕ್ಷಣಗಳ ಹನಿಗಳನ್ನು ತನ್ನ ಅನುಭವ ಎಂಬ ಮೂಸೆಯಲ್ಲಿ ಶೇಕರಿಸಿಕೊಂಡು ಜೀವನದ ಪ್ರಯಾಣವನ್ನು ಬೆಳೆಸುತ್ತಾನೆ. ಅಲ್ಲಿ ಅವನಿಗೆ ಸಿಗುವ ಯಾವುದೇ ಕ್ಷಣಗಳಾಗಿರಬಹುದು. ನೋವು, ನಲಿವು, ಸ್ನೇಹ, ಬಂದುತ್ವ, ಕಷ್ಟ, ಸಂತಸ, ಸಿಟ್ಟು, ಸೇಡವು, ಕರುಣೆ, ಕಲಿಯುವಿಕೆ ಇತ್ಯಾದಿ. ಹೀಗೆ ನಾನಾ ರೀತಿಯ ವಿವಿಧ ಬಗೆಯ ಜೀವನ ಪಾಠಗಳ ಸರಮಾಲೆಯ ನೆನಪಿನ ಗೊಂಚಲನ್ನೇ ತನ್ನಲ್ಲಿಟ್ಟುಕೊಂಡಿರುತ್ತಾನೆ. ಅದಕ್ಕೆ ಹೇಳುತ್ತಾರೆ.. ನೆನಪುಗಳ ಮಾತು ಮಧುರ...

ತಾನು ಕಂಡುಂಡ ಆ ಕ್ಷಣಗಳ ಖಜಾನೆಯನ್ನು ಅವನು ಯಾವಾಗಲಾದರೂ ಪುನಃ ಸಮಯ ಸಿಕ್ಕಾಗ ತೆರೆದು ನೋಡುವ ಕ್ಷಣಕ್ಕಾಗಿ ಕಾತರಿಸುತ್ತಾ ಇರುತ್ತಾನೆ. ಕಾತರಿಸುತ್ತಲೇ ಇರಬೇಕು. ಯಾಕೆಂದರೇ ಅವನು ಮನುಷ್ಯ. ಅವನಿಗೆ ಅವನು ಅನುಭವಿಸಿದ ಅನುಭವದ ಘಳಿಗೆಗಳು ಅವುಗಳು ಎಂಥವೇ ಆಗಿರಲಿ ಅವನಿಗೆ ಅವುಗಳು ಸುವರ್ಣಪುತ್ಥಳಿಗಳೇ ಸರಿ. ಅವನು ಅನುಭವಿಸಿದ ಕಟ್ಟ ಕಡೆಯ, ಕೀಳದ ಒಂದು ಚಿಕ್ಕ ಅವಮಾನವನ್ನು ಅವನು ಯಾವಾಗಲಾದರೂ ಪುನಃ ಹಿಂತಿರುಗಿ ನೋಡಬಯಸುತ್ತಾನೆ. ಅವುಗಳನ್ನು ಪುನಃ ಶೃತಿಯಂತೆ ಮೀಟುವ ಕಲಾ ಪ್ರಕಾರಗಳೇ ಮನುಷ್ಯನಿಗೆ ಮಾತ್ರವೇನೋ ಎಂದು ಇರುವ ಕಲಾ ಪ್ರಕಾರಗಳಾದ ಸಂಗೀತ, ಸಾಹಿತ್ಯ, ನೃತ್ಯ, ಚಲನಚಿತ್ರ ಮಾದ್ಯಮಗಳು.

ಈ ಮೇಲಿನ ಯಾವುದಾದರೂ ಒಂದರಲ್ಲಿ ಒಬ್ಬ ವ್ಯಕ್ತಿಗೆ ಅಸಕ್ತಿ ಇರಲೇ ಬೇಕು. ಇದ್ದೇ ಇರುತ್ತದೆ. ಯಾಕೆಂದರೇ ಮನುಷ್ಯ ತಾನು ಆರೋಗ್ಯಕರವಾಗಿ ಮುಂದೆ ಬೆಳೆಯಬೇಕೆಂದರೆ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ತನ್ನನ್ನು ತಾನು ತೋಡಗಿಸಿಕೊಂಡಿರಲೇಬೇಕು. ತನ್ನ ಬಿಡುವಿನ ವೇಳೆ ಅದರಲ್ಲಿ ತಾನು ಮುಳುಗಿ ಹೋಗಲೇಬೇಕು ಎಂದು ನಿತ್ಯ ಕಾತರಿಸುತ್ತಿರುತ್ತಾನೆ. ಯಾಕೆಂದರೇ ತಾನು ತನ್ನ ಗತ ದಿನದ ವೈಭಗಳನ್ನು ಪುನಃ ನೆನಪು ಮಾಡಿಕೊಳ್ಳಲು, ಪುನಃ ಮನದ ಪಟಲದಲ್ಲಿ ಅದರ ವೈಭವದ ಮೆರವಣಿಗೆಯನ್ನು ಕಂಡು ತನ್ನ ಅಂದಿನ ಆ ಸಮಯದ ವರ್ತನೆ, ತನ್ನ ಪಾತ್ರವನ್ನು ಪರಮಾರ್ಶೆ ಮಾಡಿಕೊಳ್ಳಲು ಇಷ್ಟಪಡುತ್ತಾನೆ.

ತಾನು ಅನುಭವಿಸುವ ಈಗಿನ ಈ ಕಲಾ ಮಾದ್ಯಮಗಳ ಪಾತ್ರಗಳಾದ ಕಥೆಯಲ್ಲಿನ ನಾಯಕ ನಾಯಕಿಯ ಜೀವನ, ಹಾಡಿನಲ್ಲಿ ಬರುವ ನಾಯಕನ ಕಷ್ಟದ ಸನ್ನಿವೇಶ, ಸಿನಿಮಾದಲ್ಲಿ ಬರುವ ಅಲ್ಲಿನ ಅತಿ ಮೆಚ್ಚುಗೆಯ ಸನ್ನಿವೇಶವನ್ನು ತಾನು ಕಂಡೂಂಡ ಕ್ಷಣಗಳ ಜೊತೆಗೆ ಹೊಲಿಸಿಕೊಂಡು ತುಂಬ ಮಹಾನಂದವನ್ನು ಆ ಕ್ಷಣದಲ್ಲಿ ಮೈಮೆರತು ತಾನು ಅಂದು ಹೀಗೆ ಮಾಡಿದ್ದೇ. ತನ್ನವಳು ನನಗೆ ಅಂದು ಇವಳಂತೆ ಮಾಡಿದ್ದಳು. ತಾನು ಅಂದು ಹಾಗೆ ಮಾಡಬಾರದಗಿತ್ತು... ಹೀಗೆ ನಾನಾ ರೀತಿಯ ಮನಸ್ಸಿನ ವ್ಯವಕಲನ ಸಂಕಲನಗಳನ್ನು ಮಾಡುತ್ತಾ ಮಾಡುತ್ತಾ.. ಮುಂದೆ ನಾನು ಹೇಗೆ ಬಾಳಬಹುದು. ಯಾವುದರಲ್ಲಿ ತಪ್ಪಾಯಿತು.. ಎನ್ನುತ್ತಾ ಅವನು ಇನ್ನೂ ಹೆಚ್ಚು ಅರ್ಥವಂತಿಕೆಯನ್ನು ನಿತ್ಯ ಜೀವನದಲ್ಲಿ ಕಾಣಲು ಪ್ರಾರಂಭಿಸುತ್ತಾನೆ.

ನಮ್ಮ ಕಲಾಕರರು ಸಹ ತಾವು ಕಂಡುಕೊಂಡ ಜೀವನದ ಸತ್ಯಗಳನ್ನೇ ತಮ್ಮ ಕಲಾಪ್ರಕಾರಗಳಲ್ಲಿ ತರುವರು. ಯಾಕೆಂದರೇ ವ್ಯಕ್ತಿ ತಾನು ಎಷ್ಟೇ ಬೆಳೆದು ನಾನು ಬೇರೆ ಎಂದು ಹೇಳಲು ಬರುವುದಿಲ್ಲ. ತಾನುಂಡ ನೋವು, ನಲಿವುಗಳನ್ನು ಕಂಡ ಪೆಟ್ಟುಗಳನ್ನೇ ತನ್ನ ಕಲ್ಪನೆಯ ಮಾದ್ಯಮದಲ್ಲಿ ವಿವಿಧ ಪಾತ್ರಗಳ ಮೂಲಕವೋ, ತಾನೇ ಒಂದು ಪ್ರತೀಕವಾಗಿ ನಿಂತೂ ಅಲ್ಲಿ ಪರಮಾರ್ಶಿಸಿ ತಾನು ಗೊತ್ತು ಮಾಡಿಕೊಂಡ ಒಂದು ನಿಲುವನ್ನೋ, ಆದರ್ಶವನ್ನೋ ಇದು ಹೀಗೆ ಇರಬೇಕಾಗಿತ್ತು ಎಂದು ನಿರೂಪಿಸುತ್ತಾನೆ. ಅದಕ್ಕೆ ಪೂರಕವಾಗುವುದು ಅವನು ತನ್ನ ಜೊತೆಯವರೊಡನೆ ತನ್ನ ಜೀವನದಲ್ಲಿನ ಗತ ಸಮಯದ ಸನ್ನಿವೇಶಗಳೇ. ಅವುಗಳನ್ನು ಬಿಟ್ಟು ಅವನು ಬೇರೆಯದನ್ನು ಬರೆಯಲು, ಹಾಡಲು, ಚಿತ್ರಿಸಲು ಮತ್ತು ಚಿಂತಿಸಲು ಎಂದೂ ಸಾಧ್ಯವಿಲ್ಲ.

ಅದ್ದರಿಂದಲೇ ಅಂಥ ಸ್ಪರ್ಷವನ್ನು ಹೊಂದಿರುವ ಯಾವುದೇ ಸಿನಿಮಾವಾಗಲಿ, ಕಥೆಯಾಗಲಿ, ಕವಿತೆಯಾಗಲಿ ತುಂಬ ಸುಲಭವಾಗಿ ನಮ್ಮನ್ನು ತುಂಬ ಕಾಡುತ್ತವೆ. ಯಾಕೆಂದರೆ ಅಲ್ಲಿ ನಾವು ಅನುಭವಿಸಿದ ನೋವಿರುತ್ತದೆ, ವಿರಹವಿರುತ್ತದೆ, ಕಷ್ಟವಿರುತ್ತದೆ, ಪ್ರೀತಿಯಿರುತ್ತದೆ ಮತ್ತು ನಮ್ಮಷ್ಟೇ ಸ್ಥಾನವನ್ನು ಮಾನವನ್ನು ಅಲ್ಲಿನ ನಾಯಕ-ನಾಯಕಿ ಹೊಂದಿರುತ್ತವೆ. ಅಂಥವುಗಳೇ ಹೆಚ್ಚು ಕಾಲ ಜನ ಮಾನಸದಲ್ಲಿ ನೆಲೆಯಾಗುವುದು.

ಅದಕ್ಕೆ ಹೇಳುವುದು ಜೀವನವೆಂಬುದು ಒಂದು ವಿಶ್ವವಿದ್ಯಾನಿಲಯ ಇಲ್ಲಿ ಕಲಿಕೆಗೆ ಎಂದು ಕೂನೆಯಿಲ್ಲ. ಮನುಷ್ಯನ ಕೂನೆ ಉಸಿರು ಇರುವವರೆಗೂ ತನ್ನ ನಿತ್ಯ ಜೀವನದಲ್ಲಿ ಇರುವ ಗೆಳೆಯರು-ಗೆಳೆತಿಯರು, ತಂದೆ - ತಾಯಂದಿರು, ಅಣ್ಣ-ಅಕ್ಕಂದಿರುಗಳು, ಹಿರಿಯರು-ಕಿರಿಯರುಗಳು, ನೆರೆಹೊರೆಯರು, ಅಪರಿಚಿತರು -ಪರಿಚಿತರು, ನನ್ನ ಭಾಷೆ - ಪರ ಭಾಷೆ ಹೀಗೆ ವಿವಿಧ ಭಾವನ ಸಂಘರ್ಷದಲ್ಲಿ ತನ್ನತನವನ್ನು ಮೇಲಾಗಿ ತನ್ನ ಮನುಷ್ಯತ್ವದ ಮೇಲ್ಮೆಯನ್ನು ಕಂಡುಕೊಳ್ಳಲು ಎಂದೂ ಸಹ ಪ್ರಯತ್ನಿಸುತ್ತಾ ಇರುತ್ತಲೇ ನಡೆಯುತ್ತಾನೆ.

ಮೇಲೆ ಹೇಳಿದ ಆ ಒಂದೊಂದು ಸಂಬಂಧದಲ್ಲಿನ ಅಂತರತ್ವ ಸ್ವಲ್ಪ ಅದಲು ಬದಲಾದರೂ ಇಡೀ ವ್ಯಕ್ತಿಯ ಜೀವನ ಅಪಾಯದ ಸನ್ನಿವೇಶಕ್ಕೆ ಬಂದು ನಿಲ್ಲುತ್ತದೆ. ಅದ್ದರಿಂದ ತಾನು ನಿತ್ಯ ನೋಡುವ ಕೇಳುವ ಉತ್ತಮ ವಿಚಾರಗಳು ತನ್ನ ಜೀವನದ ಕೆಟ್ಟ ಘಳಿಗಳಿಗೆ ಒಳ್ಳೆಯತನದ ಸ್ಪರ್ಷವನ್ನು, ಉನ್ನತ ಘಳಿಗೆಗಳಿಗೆ ಜೀವನದ ಕಠೋರ ಸತ್ಯಗಳು ಇನ್ನೂ ಗಟ್ಟಿ ಕ್ಷಣಗಳಾಗಿ ಅತ್ಯುತ್ತಮ ಹಂತಕ್ಕೆ ಕೊಂಡು ಹೋಗುತ್ತವೆ. ಇದೇ ಪ್ರಯತ್ನ ನಿರಂತರ ಇರಬೇಕು ಎಂದು ಹಾರೈಸೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ