ಸೋಮವಾರ, ಏಪ್ರಿಲ್ 23, 2012

ಏನೇನೋ ಆಸೆ ಕನಸುಗಳ ಖಜಾನೆ..

ಒಂದಷ್ಟು ವಯಸ್ಸಿಗೆ ಬಂದಾಗ ಪ್ರತಿಯೊಬ್ಬರಿಗೂ ಆ ರೀತಿಯಲ್ಲಿ ಅನಿಸುತ್ತದೆ. ಯಾಕೆ ನಾನು ಬದುಕಿದ್ದೇನೆ? ಏನು ನನ್ನ ಜೀವನದ ಅರ್ಥ? ನಾನು ಏನೂ ಮಾಡುತ್ತಿದ್ದೇನೆ? ಇದೇ ಜೀವನವೇ? ಈ ರೀತಿಯ ಯೋಚನೆಗಳು ಮಧ್ಯ ವಯಸ್ಸಿನಲ್ಲಿ ಬರುವುದು ಸರ್ವೇ ಸಾಮಾನ್ಯ.




ನಾವುಗಳು ಹುಟ್ಟಿದಂದಿನಿಂದ ನಮ್ಮ ಮುಪ್ಪು ಕಾಲದವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಹೋರಾಟದ ಬದುಕನ್ನು ನಿರ್ವಯಿಸಿರುತ್ತೇವೆ. ಯಾವಾಗಲೂ ನಮ್ಮ ಜೀವನ ಅತ್ಯುತ್ತಮವಾಗಿರಲಿ. ಮುಂದೆ ಏನಾಗುವುದೋ? ಎಂಬ ಆತಂಕದಿಂದ ಹೆಚ್ಚು ಹೆಚ್ಚಾಗಿ ವಿರಾಮವಿಲ್ಲದೇ ದುಡಿಯುತ್ತೇವೆ. ಇದೇ ಸರಿಯಾದ ಸಮಯ ಮುಂದೆ ವಯಸ್ಸಾದಾಗ ದುಡಿಯಲಾರವು. ಈಗಲೇ ಎಷ್ಟು ಸಾಧ್ಯವೋ ಅಷ್ಟನ್ನು ಸಂಪಾಧಿಸಿಡಬೇಕು ಎಂಬ ಆಕಾಂಕ್ಷೆಯಿಂದ ನಿತ್ಯ ದುಡಿಯುತ್ತಲೆ ಇರುತ್ತೇವೆ.



ಮಕ್ಕಳಾಗಿದ್ದಾಗ ಮಕ್ಕಳ ಜೀವನವನ್ನು ಪೂರ್ತಿಯಾಗಿ ಅನುಭವಿಸಲು ಹೆತ್ತವರು ಬಿಡುವುದಿಲ್ಲ. ಆಗಲೇ ಅವರ ಪ್ರವರ ಶುರು "ಏ ಚೆನ್ನಾಗಿ ಓದು. ಟೈಂ ವೇಸ್ಟ್ ಮಾಡಬೇಡ. ಹೆಚ್ಚು ಅಂಕಗಳನ್ನು ಗಳಿಸು. ಪರೀಕ್ಷೆಗಳಿದ್ದಾವೆ". ಇತ್ಯಾದಿ ಮಾತುಗಳಿಂದ ಪಾಪ ಆ ಮಗು ತನ್ನ ಜೀವನವೆಂದರೇ.. ಓದು ಮತ್ತು ಓದು ಅಷ್ಟರಲ್ಲಿಯೇ ತೃಪ್ತಿಪಡಬೇಕಾಗುತ್ತದೆ.



ಮುಂದೇ ಹರೆಯಕ್ಕೆ ಬಂದಾಗ ಬಿಸಿ ರಕ್ತ. ಬಂಡೆಯನ್ನೆ ಕುಟ್ಟಿ ಪುಡಿ ಪುಡಿ ಮಾಡುವಂತಹ ಚೈತನ್ಯವನ್ನು ತನ್ನಲ್ಲಿಟ್ಟು ಕೊಂಡಿರುತ್ತಾನೆ. ಆದರೇ ಮತ್ತೇ ನಮ್ಮ ಹೆತ್ತವರು ಮತ್ತು ಸುತ್ತಲಿನವರ ಪ್ರವರ ಶುರು. "ಏ ಇದು ಜೀವನದಲ್ಲಿ ಮುಖ್ಯ ಘಟ್ಟ ಈ ಸಮಯದಲ್ಲಿ ನೀನು ಕಲಿಯುತ್ತಿಯೋ ಅದೇ ಮುಂದೆ ಬರುವುದು. ಜೀವನಕ್ಕೆ ಒಂದು ಟರ್ನಿಂಗ ಪಾಯಿಂಟು ಇದು. ನೀನು ಸರಿಯಾದ ದಾರಿಯಲ್ಲಿಯೇ ನಡೆ. ಅವರಿವರೊಂದಿಗೆ ಸೇರಿ ಕೇಟ್ಟು ಹೋಗಬೇಡ. ದೊಡ್ಡ ದೊಡ್ಡ ಎಕ್ಸ್ ಮ್ಸ್ ಗಳು. ಅತಿ ಎಚ್ಚರಿಕೆಯಿಂದ ಓದು ಮತ್ತು ನಡೆ". ಎನ್ನುತ್ತಾರೆ.



ಟೀನೇಜ್ ಹಾಗೆಯೇ ಸಾಗಿಬಿಡುತ್ತದೆ.



ತನ್ನ ದೇಹದಲ್ಲಿ ಏನೇನೋ ಆಗುತ್ತಿರುತ್ತದೆ. ಅದು ಪ್ರಕೃತಿ ಸಹಜ. ತಾನು ಏನಾದರೂ ಮಾಡಬೇಕು. ತಾನು ಏನಾದರೂ ಒಂದು ವಿಭಿನ್ನವಾದದ್ದನ್ನು ನಿರ್ಮಿಸಬೇಕು. ಗೆಳೆಯರನ್ನು ಸಂಪಾಧಿಸಬೇಕು. ಗೆಳತಿಯೊಂದಿಗೆ ಸುತ್ತಬೇಕು. ಅವಳೊಂದಿಗೆ ಮಾತನ್ನಾಡಬೇಕು. ಇತ್ಯಾದಿ ಇತ್ಯಾದಿ ಏನೇನೋ ಆಸೆ ಕನಸುಗಳ ಖಜಾನೆಯೆ ಮನಸ್ಸಾಗಿರುತ್ತದೆ.



ಇದೆಲ್ಲಾಕ್ಕೂ ನಮ್ಮ ದೊಡ್ಡವರಿಂದ ದೊಡ್ಡ ಕಾಮ!



"ಈ ವಯಸ್ಸಿನಲ್ಲಿ ಇವೆಲ್ಲಾ ಮಾಮೊಲು. ಮೊದಲು ನಿನ್ನ ಗುರಿ ನೀನು ಸಾಧಿಸು. ಮುಂದೆ ಇಂಥ ಸಾವಿರಾ ಹುಡುಗಿಯರು, ಸಾವಿರ ಗೆಳೆಯರನ್ನು ಗಳಿಸಬಹುದು. ಸಾವಿರ ದೇಶಗಳನ್ನು ತಿರುಗಬಹುದು. ಸಾವಿರ ಕಾರು, ಸ್ಕೋಟರ್ ರೈಡ್ ಮಾಡಬಹುದು." ಎಂಬ ಮಾತುಗಳು ತನ್ನ ಕಿವಿಯ ಮೇಲೆ ನಿತ್ಯ ಬೀಳುತ್ತಾ ಬೀಳುತ್ತಾ.. ನಾವುಗಳು ಆಗಲೇ ಯಾರೋ ನಡೆದಾಡಿದ ಅದೇ ಕಾಲು ದಾರಿಯನ್ನು ಹಿಡಿಯುತ್ತದೆ.



ಅದೇ ಅಂಕಗಳು, ಅದೇ ಕಾಲೇಜುಗಳು, ಅದೇ ಲೇಕ್ಚ್ ರ್ ಪಾಠಗಳು.



ಇದೆಲ್ಲಾವನ್ನು ದಾಟಿದ ಮೇಲೆ ಏಕದಮ್ ನಾವುಗಳು ಈ ಸಮಾಜ ಎಂಬ ನಿಕೃಷ್ಟ ವ್ಯವಸ್ಥೆಗೆ ಬಂದುಬಿಡುತ್ತೇವೆ. ಸುತ್ತ ಮುತ್ತಲಿನ ಸಮಾಜವನ್ನು ನೋಡುತ್ತೇವೆ. ಎಲ್ಲಾರೂ ಕೆಲಸ ಮಾಡುತ್ತಿರುತ್ತಾರೆ. ಮತ್ತೇ ಅದೇ ನಿದರ್ಶನಗಳು. "ನೋಡು ಆ ಪಕ್ಕದ ಮನೆಯ ಹುಡುಗನನ್ನೂ ಬೆಂಗಳೂರಿನಲ್ಲಿ ಎಂಥ ಕೆಲಸದಲ್ಲಿ ಇದ್ದಾನೆ. ಕೈ ತುಂಬ ಸಂಬಳ ಮನ್ನೆ ಅವರಪ್ಪನಿಗೆ ಕಾರು ಕೊಡಿಸಿದ್ದಾನೆ. ನೋಡು ಆ ಪಕ್ಕದ ಮನೆಯ ಹುಡುಗಿಯನ್ನು ಇನ್ನೂ ಎಷ್ಟು ಚಿಕ್ಕ ವಯಸ್ಸು. ಆಗಲೇ ಪ್ರಾನ್ಸ್, ಅಮೇರಿಕಾ ಅಂತಾ ದೇಶ ತಿರುಗುತ್ತಿದ್ದಾಳೆ. ನೀನೂ ಯಾವಾಗ ಆ ರೀತಿಯಲ್ಲಿ ದುಡಿಯುವುದು. ಗಮನ ಕೊಟ್ಟು ಒಳ್ಳೆ ಕೆಲಸ ಗಳಿಸು."



ಮತ್ತೇ ನಮ್ಮಗಳಿಗೆ ಅದೇ ಆಪ್ಲಿಕೇಶನ್, ಪರೀಕ್ಷೆ, ಇಂಟ್ಯ್ರೂ ಅಂತಾ ತಿರುಗಾಟ.



ಅಂತೂ ಕೆಲಸ ಗಳಿಸಿದೆವೋ ಅಂದ್ರೆ. ಅಲ್ಲಿಯ ವಾತವರಣಕ್ಕೆ ಹೊಂದಿಕೊಳ್ಳಬೇಕು. ಅಲ್ಲಿಯ ಕಟ್ಟುಪಾಡುಗಳಿಗೆ ನಮ್ಮನ್ನು ನಾವುಗಳು ಪೂರ್ಣವಾಗಿ ಮಾರ್ಪಡಾಗಬೇಕು. ನಮ್ಮತನವನ್ನೇ ಮರೆಯಬೇಕು. ವಾರದ ೬ ದಿನಗಳ ನಿರಂತರ ದುಡಿಮೆ. ಪರ್ಪಾರ್ಮೆನ್ಸ್, ಬಡ್ತಿ ಇತ್ಯಾದಿಗಳ ಜಂಜಾಟದಲ್ಲಿ ಸುತ್ತಲಿನವರ ಕಡೆ ಮನಸ್ಸಪೂರ್ವಕವಾಗಿ ಒಂದು ಕಿರು ನಗೆಯನ್ನು ಬೀರದವರಾಗಿರುತ್ತೇವೆ. ಇದೇ ಜೀವನ.



ಆಗಲೇ ಮನೆಯಲ್ಲಿ ಮತ್ತು ಒಂದು ಜವಬ್ದಾರಿಯನ್ನು ನಮ್ಮ ಹೆಗಲ ಮೇಲೆ ಇಡುವುದಕ್ಕೆ ಚಿಂತಿಸುತ್ತಿರುತ್ತಾರೆ. "ಇನ್ನೂ ಎಷ್ಟು ದಿನಾ ಅಂತಾ ಉಂಡಾಡಿ ಗುಂಡನಂತೆ ತಿರುಗುತ್ತಿಯಾ ಮೊದಲು ಒಂದು ಮದುವೆ ಮಾಡಿಕೋ" ಅನ್ನುತ್ತಾರೆ.



ಅಲ್ಲಿ ಇಲ್ಲಿ ತಿರುಗಿ ಕೊನೆಗೆ ನನ್ನ ಕಲ್ಪನೆಯ ದೇವತೆ ಇನ್ನೂ ಸಿಗಲಾರಳು ಎಂಬ ನಿರ್ಧಾರದಿಂದ "ಓ.ಕೆ" ಎಂಬ ಸೂಚನೆಯನ್ನು ಕೊಟ್ಟು ಒಂದು ಮದುವೆಯನ್ನು ಮನೆಯವರೆಲ್ಲಾ ಮೆಚ್ಚಿದವಳನ್ನು ಮನಸ್ಸು ಇಚ್ಛೆ ಮೆಚ್ಚಿ ಮದುವೆಯಾಗುತ್ತಾನೆ.



ಅಂತೂ ಅದರ ಸುಖವನ್ನು ಒಂದೇರ‍ಡು ವರುಷ ಪಡೆದು. ಕೈಗೆ ಒಂದು ಮಗುವನ್ನು ಪಡೆಯುತ್ತಾನೆ.



ಮತ್ತೇ ಇವನಿಗೆ ಇವನೇ ಧಾವಂತವನ್ನು ಪಟ್ಟುಕೊಳ್ಳುತ್ತಾನೆ. ನನ್ನ ಸಂಸಾರ ದೊಡ್ಡದಾಯಿತು. ನನ್ನ ದುಡಿಮೆ ಏನೇನೂ ಸಾಲದು. ಎಲ್ಲಿ ನನ್ನ ಮಗುವಿಗೆ ಒಳ್ಳೆ ಶಿಕ್ಷಣ ಕೊಡಿಸುವುದು ಈ ಸಂಬಳದಲ್ಲಿ? ಎಂದು ಕೊರಗುತ್ತಾನೆ.



ನಾನೊಂತೂ ಮುನಿಸಿಪಲ್ ಸ್ಕೋಲ್ ನಲ್ಲಿ ಓದಿದೆ. ನನ್ನ ಮಗ/ಮಗಳು ನಂಬರ್ ಒನ್ ಶಾಲೆಯಲ್ಲಿಯೇ ಓದಲಿ ಎಂಬ ದೊಡ್ಡ ಆಸೆಯನ್ನು ನೆರವೇರಿಸಲು ಮತ್ತೇ ಹೆಚ್ಚು ದುಡಿಯುವ ಮನಸ್ಸು ಮಾಡುತ್ತಾನೆ. ಅದರಲ್ಲೂ ಸಕ್ಸಸ್ ಆಗುತ್ತಾನೆ. ಇಷ್ಟೆಲ್ಲಾ ಮಾಡುವ ಹೊತ್ತಿಗೆ ತನ್ನ ಜೀವನದ ಹಾಫ್ ಸಂಚುರಿಯನ್ನು ಹಾಸುಪಾಸಿನಲ್ಲಿರುತ್ತಾನೆ.



ಒಮ್ಮೆ ಹಿಂತಿರುಗಿ ನೋಡಿದಾಗ ಇವನಿಗೆ ಶಾಕ್ ಆಗುತ್ತದೆ. ಮತ್ತು ನಾನು ಮೇಲೆ ಉದ್ದರಿಸಿದ ಮಾತುಗಳು ತನಗೆ ತಾನೇ ತನ್ನ ಬಾಯಿಯಿಂದ ಬರುತ್ತವೆ.



ಎಲ್ಲಿಯೂ ಅವನೂ ತೃಪ್ತಿ, ಸಂತೋಷವೆಂಬ, ಸಾಧನೆಗಳನ್ನು ಹಸಿರಾಗಿ ಸವಿಯದಾಗಿರುತ್ತಾನೆ.



ಕೇವಲ ಓಟ ಓಟ..!



ಇದೇ ನಮ್ಮ ಪ್ರಪಂಚದ ನೋಟ.



ಒಂದು ಕ್ಷಣವೂ ನಾವುಗಳು ಜೀವಿಸುತ್ತಿರುವ ರೀತಿಯನ್ನು ಇದು ಏಕೆ ಎಂದು ಪ್ರಶ್ನಿಸಿಕೊಂಡಿರುವುದಿಲ್ಲ. ಎಲ್ಲಾರೂ ಇರುವುದೇ ಈ ರೀತಿಯಲ್ಲಿ. ನಾವುಗಳು ಆ ರೀತಿಯಲ್ಲಿಯೇ ಬದುಕಬೇಕು. ಎಂಬ ಯೋಜಿತ ಮನಸ್ಸಿನಿಂದ ಅತ್ತಿತ್ತಾ ನೋಡದವನಾಗಿರುತ್ತಾನೆ.



ಅದೇ ಸಕ್ಸ್ ಸ್ ಅಲ್ಲವಾ?



ತಾನು ಮತ್ತು ತನ್ನವರಿಗಾಗಿ ಎಷ್ಟೊಂದು ರೀತಿಯಲ್ಲಿ ತನ್ನ ರಕ್ತವನ್ನು ಬಸಿದಿರುತ್ತಾನೆ. ಅಂದ ಮೇಲೆ ಆ ವಯಸ್ಸಿಗೆ ಸ್ವಲ್ಪ ದಣಿವು ಬಂದಿರಲೇ ಬೇಕು. ಮುಂದಿನ ದಿನಗಳು ಇನ್ನೂ ಕಟೋರ ಅನಿಸುತ್ತವೆ. ಯಾಕೆಂದರೇ ಮುಂದೆ ಹದಿಹರೆಯದ ರಕ್ತವಂತೂ ಬರಲಾರದು. ಇರುವ ಚೈತನ್ಯ ಇಮ್ಮಡಿಯಾಗಲಾರದು. ಅದು ಮತ್ತೆ ಇಳಿತದ ಹಾದಿ. ಒಂದು ರೀತಿಯಲ್ಲಿ ಆ ಕ್ಷಣಕ್ಕೆ ಚಿಕ್ಕ ಬೇಸರ ಮೂಡುವುದು. ಚಿಕ್ಕ ನಿರಾಸೆ ಮನದ ಮೂಲೆಯಲ್ಲಿ ಸುಳಿಯುವುದು ಸಾಮಾನ್ಯ.



ಎಷ್ಟೇಲ್ಲಾ ದುಡಿದಿದ್ದರೂ, ಏನೇಲ್ಲಾ ಸಂಪಾಧಿಸಿದ್ದರೂ ಈ ರೀತಿಯ ನಿರಾಶೆ ಯಾಕೆ? ಎಂಬುದು ಎಂಥವರಿಗೂ ಅರ್ಥವಾಗುವುದಿಲ್ಲ.



ಅವನಿಗೆ ಅನಿಸಬಹುದು. ಇಲ್ಲಿಯವರೆಗೆ ನಾನು ಏನೇಲ್ಲಾ ಮಾಡಿದ್ದೇನೋ ಅದು ನನಗಾಗಿ ಅಲ್ಲಾ! ಇದು ಎಲ್ಲಾ ನನ್ನವರಿಗಾಗಿ. ನನಗೆ ಬೇಕಾಗಿರುವುದೇ ಬೇರೆ!



ಆದರೇ ಈಗಾಗಲೇ ಬಹಳಷ್ಟೂ ದೂರ ಕ್ರಮಿಸಿದ್ದಾಗಿದೆ. ಮತ್ತೇ ಅದು ಸರಿಪಡಿಸಲಾರದಷ್ಟು ಕಗ್ಗಾಂಟಾಗಿದೆ ಅನಿಸುತ್ತದೆ.



ಆದಕ್ಕೆ ನಾವುಗಳು ಒಂದಷ್ಟು ಸಾವಧಾನವಾಗಿ ನಮ್ಮವರನ್ನಲ್ಲದೇ ಪರರ ಬಗ್ಗೆ ಯೋಚಿಸುವುದನ್ನು ಕಲಿಯಬೇಕು. ಪ್ರಕೃತಿಯ ಸೂಕ್ಷ್ಮಗಳನ್ನು ಅರಿಯುವ ಬುದ್ಧಿಯನ್ನು ಕಲಿಯಬೇಕು. ನಿಸರ್ಗ ಸೌಂದರ್ಯವನ್ನು ವಿಫುಲವಾಗಿ ಅಸ್ವಾದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ನಮಗೆ ಗೊತ್ತಿರದವರಿಗೆ ನಮ್ಮಿಂದ ಆದಷ್ಟು ಚಿಕ್ಕ ಚಿಕ್ಕ ಸಹಾಯವನ್ನು ಮಾಡಬೇಕು. ಹೆಚ್ಚು ಹೆಚ್ಚು ಸಮಯಗಳನ್ನು ಮನೆ ಮಂದಿಯೆಲ್ಲಾ ಕುಳಿತು ಮಾತುಕತೆಗಳಲ್ಲಿ ಕಳೆಯುವಂತಾಗಬೇಕು. ನೆರೆಹೊರೆಯೊಂದಿಗೆ ಹೊಂದಿಕೊಂಡು ಅವರ ಕಷ್ಟ ಸುಖಗಳಲ್ಲಿ ಬಾಗಿಯಾಗುವಂತಾಗಬೇಕು.



ನಾನೇನು ಹೇಳಲು ಬಯಸುತ್ತಿದ್ದೇನೆ ಅಂದರೇ. ನಾವುಗಳು ನಿರ್ವಹಿಸುತ್ತಿರುವ ಈ ರೋಟಿನ್ ಕೆಲಸಗಳು, ನಡಾವಳಿಗಳನ್ನು ಬಿಟ್ಟು ಬೇರೆಯೇ ಆದ ತುಂಬ ಹೊಸದಾದ ಕೆಲಸ ಕಾರ್ಯಗಳನ್ನು ಆಟ್ ಲೀಸ್ಟ್ ತಿಂಗಳಲ್ಲಿ ಒಂದು ಅಥವಾ ವರುಷದಲ್ಲಿ ೬ ಕೆಲಸಗಳನ್ನೋ, ಸಹಾಯಗಳನ್ನೊ, ನೋಟಗಳನ್ನೋ, ಊರುಗಳನ್ನೋ, ಪ್ರಕೃತಿಯನ್ನೋ, ಅಪರಿಚತರನ್ನೋ ಕಾಣುವಂತಾದರೇ.. ಆದೇ ಒಂದು ಚೈತನ್ಯವನ್ನು, ಜಡ್ಡುಗಟ್ಟಿರುವ ಮನಸ್ಸಿಗೆ ಶಾಂತಿಯನ್ನು ನೂರು ಪ್ರತಿಶತಃ ಕೊಡುವುದು ಎಂದು ನಿಮಗೆ ಅನಿಸುವುದಿಲ್ಲವಾ?



ಲೇಟ್ಸ್ ಟ್ರೈ!!!

ಶನಿವಾರ, ಏಪ್ರಿಲ್ 21, 2012

ಮನುಷ್ಯ ಜನ್ಮಕ್ಕೆ ತೃಪ್ತಿ..



ಏನೇನೋ ಆಸೆಯಿರುತ್ತದೆ. ಸಣ್ಣವಯಸ್ಸಿನಲ್ಲಿ ಮುಂದೆ ದೊಡ್ಡವರಾದ ಮೇಲೆ ಹೀಗೆ ಮಾಡಬೇಕು, ಹಾಗೆ ಮಾಡಬೇಕು. ಈ ರೀತಿಯ ಕನಸುಗಳನ್ನು ಕಂಡಿರುತ್ತೇವೆ. ಆದರೆ ಅವುಗಳನ್ನು ನನಸು ಮಾಡಿಕೊಳ್ಳಲು ಮುಂದುವರೆದಾಗ ಸಿಗುವ ಅಡಚಣೆಗಳು, ಕಷ್ಟಗಳು, ಅವಕಾಶಗಳು, ಸಮಯ ಇವುಗಳೆನ್ನೆಲ್ಲಾ ಆ ಸಮಯಕ್ಕೆ ಕಂಡಿರುವುದಿಲ್ಲ.

ಬರೀ ಕನಸು ಕಾಣುತ್ತೇವೆ. ಯಾರನ್ನಾದರೂ ನೋಡಿದರೆ ಅವನ ರೀತಿಯಲ್ಲಿ ಮತ್ತು ಅವನಿಗಿಂತ ಇನ್ನೂ ಚೆನ್ನಾದ ಜೀವನವನ್ನು ನಡೆಸಬೇಕು. ಅವನು ಸುತ್ತಿದ ದೇಶಕ್ಕಿಂತ ಜಾಸ್ತಿ ನಾನು ಸುತ್ತಬೇಕು. ಅವನು ಓದಿದ್ದಕ್ಕಿಂತ ಹೆಚ್ಚು ನಾನು ಓದಬೇಕು. ಅವನು ಸಂಪಾಧಿಸಿದಕ್ಕಿಂತ ಹೆಚ್ಚು ಗಳಿಸಬೇಕು ಹೀಗೆ ಬೇರೆಯವರನ್ನು ಅನುಸರಿಸುತ್ತಲೇ ನಮ್ಮ ಕನಸುಗಳ ಆಸೆ ಚಿಗುರು ಹೊಡೆಯುತ್ತದೆ.

ಏನನ್ನೂ ನೋಡದಿದ್ದರೆ ಏನೂ ಆಗುವುದಿಲ್ಲ ಅನಿಸುತ್ತದೆ. ಬೇರೆಯದರಿಂದ ಪ್ರೇರಣೆಯ ಮೊಸೆಯೆ ಈ ಕನಸು. ತನ್ನಲ್ಲಿ ಆ ಕ್ಷಣಕ್ಕೆ ಇಲ್ಲದ್ದನ್ನು ಮುಂದೆ ಪಡೆಯುಲು ಮನಸ್ಸು ಮಾಡುವುದಾಗಿದೆ.

ಕನಸು ಅಂದರೇ ಅದು ಯಾವಾಗಲೂ ತನಗೆ ಮಾತ್ರ ಸಂಬಂಧಿಸಿದ ಅತಿ ಶ್ರೇಷ್ಠವಾದ ಏನೇ ವಸ್ತು, ಸಂಗತಿ, ದಾರಿಯಾಗಿರುತ್ತದೆ.

ಅದೇ ನಿತ್ಯ ಜೀವನಕ್ಕೆ ಒಂದಷ್ಟು ಉತ್ಸಾಹವನ್ನು ಕೊಡುವುದು. ಯಂತ್ರಕ್ಕೆ ಹೇಗೆ ಇಂಧನವೋ ಆ ರೀತಿ ನಮ್ಮ ದೇಹ ಚಟುವಟಿಕೆಗೆ ಚಟಪಟಿಕೆಯ ಟಾನಿಕ್.

ಏನನ್ನಾದರೂ ಪಡೆಯಬೇಕು ಎಂದರೇ ಏನನ್ನಾದರೂ ಮಾಡಲೇ ಬೇಕು. ಇಲ್ಲವಾದರೇ ಏನೊಂದು ಕೈಗೆ ಸಿಗಲಾರದು. ಅದು ಸರಿಯಿರಲಿ ತಪ್ಪಿರಲಿ ಆ ಗುರಿಯನ್ನು ತಲುಪಬೇಕಾದರೇ ಮುಂದಡಿ ಹೆಜ್ಜೆಯನ್ನು ಇಡಲೇ ಬೇಕು.

ಕನಸು ಸವಿಯಾಗಿರುತ್ತದೆ. ಬೇರೆಯವರನ್ನು ನೋಡಿದಾಗ ಅವನಾಗೆಯೇ ಆಗಬೇಕು ಎಂಬುದನ್ನು ಅರಿತ ಮೇಲೆ ಅದಕ್ಕಾಗಿ ಹೋರಾಡುತ್ತಲೆ ಇರುತ್ತೇವೆ. ಆಸೆ ಪಟ್ಟು ಅದಕ್ಕಾಗಿ ಎಲ್ಲಾ ರೀತಿಯಿಂದ ಸರ್ವ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ.

ಯಾರೊಬ್ಬರೂ ತಮ್ಮ ಬದುಕಿನಲ್ಲಿ ಎಂದು ಡೌನ್ ಥಿಂಕ್ ಮಾಡುವುದಿಲ್ಲ. ತನ್ನ ಸಾಮರ್ಥ್ಯಕ್ಕೆ ಸಮನಾಗಿ ತನಗೆ ಎಟಕುವ ಎಲ್ಲಾ ಪಲಭರಿತ ಮಾವಿನ ಹಣ್ಣುಗಳನ್ನು  ಪಡೆದೆಪಡೆಯುತ್ತಾನೆ.


ಇದೇ ಮಾನವನ ಶ್ರೇಷ್ಠತೆಯನ್ನು ಸಾರುತ್ತದೆ. ತನಗೇ ಯಾವುದು ಬೇಕು ಎಂಬುದನ್ನು ಪ್ರತಿಯೊಂದು ಜೇವಿಯು ಕಂಡುಕೊಳ್ಳುವುದೋ.. ಅದೇ ರೀತಿಯಲ್ಲಿ ತನಗೆ ತನ್ನ ಏಳ್ಗೆಗೆ ಏನೇನೂ ಬೇಕು ಎಂಬುದನ್ನು ಮನುಷ್ಯ ಜೀವಿ ಜೀವನ ಪರ್ಯಾಂತ ನೋಡುತ್ತಲೆ ಇರುತ್ತಾನೆ.

ತನ್ನ ಪ್ರಯತ್ನದಲ್ಲಿ ಆ ಸಮಕ್ಕೆ ಸಿಕ್ಕ ಅವಕಾಶದಲ್ಲಿ ಗೆಲುವು ಕಂಡರೆ ಸಂತಸಪಟ್ಟು ಮುಂದಿನ ಹೆಚ್ಚಿನ ಶ್ರೇಷ್ಠವಾದ ನೆಲೆಯನ್ನು ದಿಟ್ಟಿಸುತ್ತಾನೆ. ವಿಫಲವಾದರೇ ಅದೇ ಅವನಿಗೆ ಅನುಭವ ಪಾಠವಾಗುತ್ತದೆ. ಮತ್ತೇ ಅದನ್ನೇ ಬೇರೊಂದು ಜಾಣ್ಮೆಯಿಂದ ಪ್ರಯತ್ನಿಸಿ ಅದರಲ್ಲಿ ಗೆಲುವನ್ನು ಪಡೆಯುತ್ತಾನೆ.

ಒಂದೇ ಭಾರಿಗೆ ತಾನು ಎಂದು ಸೋಲುವ ಮನಸ್ಸು ಮಾಡುವುದಿಲ್ಲ. ಅದಕ್ಕೆ ಕಾರಣ ಎಲ್ಲಾ ಜೀವಿಗಳಿಗಿಂತ ವಿಭಿನ್ನವಾದ ಬುದ್ಧಿವಂತಿಕೆಯನ್ನು ನೈಸರ್ಗಿಕವಾಗಿ ಪಡೆದಿರುವುದು.

ತನ್ನ ಜೀವಿತ ಅವಧಿಯಲ್ಲಿ ಉನ್ನತವಾದ ದರ್ಶನವನ್ನು ಕಂಡೂಂಡು ಮುಂದಿನ ಪೀಳಿಗೆಗೆ ಕೊಡುವ ಕೊಂಡಿಯನ್ನು ತನ್ನಲಿ ಹುದುಗಿಸಿಟ್ಟುಕೊಂಡಿದ್ದಾನೆ.

ರಾಗ, ದ್ವೇಷ, ಪ್ರೀತಿಯ ಭಾವನೆಗಳ ತೊಳಲಾಟದಲ್ಲಿ ತನ್ನ ಆಸೆಯ ಅಂಕುರವನ್ನು ಸಾಧಿಸಿಕೊಳ್ಳಲು ನಿತ್ಯ ಓಡುತ್ತಲೆ ಇರುತ್ತಾನೆ.

ಗಮನಿಸಿ ಎಂದಿಗೂ ಈ ನಮ್ಮ ಮನುಷ್ಯ ಜನ್ಮಕ್ಕೆ ತೃಪ್ತಿ ಅನ್ನುವುದೇ ಇಲ್ಲ. ಇಂದು ಈ ಎತ್ತರದ ಜಾಗಕ್ಕೆ ಬಂದಿದ್ದರೂ. ಮತ್ತೆ ಅವನಿಗೆ ಚಿಂತೆ ಇದಕ್ಕಿಂತ ಎತ್ತರದಲ್ಲಿರುವ ಆ ತುದಿಗೆ ಯಾವಾಗ ನಡೆಯುವೆನೂ ಎಂದು. ಅದೇ ಅವನನ್ನು ಅಲ್ಲಿ ನಿಲ್ಲಲಾರದನಾಗಿ ಮಾಡುತ್ತದೆ.

ಇಷ್ಟು ಸಾಕು ಎಂಬ ಮನಸ್ಸು ಆಸೆ ಬಂದ ದಿನವೆ ಅವನ ಅಂತ್ಯ ಅನಿಸುತ್ತದೆ. ಇದೇ ಜೀವಿಯ ಪ್ರಾಣ ಅನಿಸುತ್ತದೆ. ಅದು ತನ್ನ ಉಸಿರಾಗಿ ಯಾವಾಗಲೂ ಕಾಡುತ್ತದೆ. ಮತ್ತು ಕಾಡುತ್ತಲೆ ಇರುತ್ತದೆ. ಇರಲೇಬೇಕು. ಆಗಲೇ ನೆಲೆ ಮತ್ತು ಬೆಲೆ!

ಅದಕ್ಕಾಗಿಯೇ ಯಾವ ರೀತಿಯ ಕಷ್ಟ ನಷ್ಟ, ನೋವು ನಲಿವು ಬಂದರೂ ಅವನ ಮನಸ್ಸಿನಲ್ಲಿರುವ ಆ ಒಂದು ಗುರಿಯನ್ನು ಸೇರುವವರೆಗೂ ನೆಮ್ಮದಿಯೇ ಇಲ್ಲವದನಂತೆ ಬದುಕಬೇಕಾಗುತ್ತದೆ.

ಗೆಲಿವಿನ ನಲಿವು ಕ್ಷಣಿಕ ಅಂತೆ! ಹೌದು ಅಲ್ಲಿ ಬಹುಕಾಲ ನಿಲ್ಲುವುದಕ್ಕೆ ಸಾಧ್ಯವಿಲ್ಲ. ಮತ್ತೆ ಮುಂದಿನ ಗುರಿ ಮುಂದಿನ ಯೋಜನೆಯ ಹಿಂದೆ ನಡೆಯಬೇಕು. ಆಗಲೇ ಒಂದು ಸಾರ್ಥಕತೆ. ಸಕ್ಸ್ ಸ್ ಫುಲ್ ವ್ಯಕ್ತಿ ಇಂದಿನ ಸಕ್ಸ್ ಸ್ ಇಂದೇ ಮರೆಯಬೇಕು. ಹಳೆಯದನ್ನೇ ಪುನಃ ಪುನಃ ಮೆಲುಕು ಹಾಕುತ್ತಾ ಕುರಲಾರನು. ಹೊಸ ಹೊಸ ಆಸೆಯ ಹಿಡೆರಿಕೆಗೆ ಅಣಿ ಇಡಬೇಕು.

ಇದೇ ಒಂದು ನಿತ್ಯ ಕಾಯಕವಾಗಿರುತ್ತದೆ. ತಿನ್ನುವುದು ಬದುಕುವುದು ಎಲ್ಲಾ ಜೀವಿಗಳ ಕಥೆಯಾದರೇ ಈ ಮಾನವನ ಬದುಕೇ ವಿಭಿನ್ನ! ನೋಡಿ ಹೇಗೆಲ್ಲಾ ಇದ್ದ ನಮ್ಮ ಪೂರ್ವಿಕರು ಇಂದು ಈ ಮಟ್ಟಕ್ಕೆ ಇದ್ದೇವೆ ಎಂದರೇ ಆ ತುಡಿತದ ಕನಸಿನ ತಂತು ಹೇಗೆಲ್ಲಾ ಹರಿದುಕೊಂಡು ಇಂದಿನವರೆಗೂ ಬಂದಿದೆ.

ಇದು ಹೀಗೆ ಸಾಗುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುತ್ತಲೆ ಇರುತ್ತದೆ. ಇರಲೇ ಬೇಕು!

ಕನಸನ್ನು ಕಾಣಿ. ಕಸುವನ್ನು ತೆಗೆದುಕೊಂಡು ಹಿಡೇರಿಸಿಕೊಳ್ಳಿ!

ಬುಧವಾರ, ಏಪ್ರಿಲ್ 11, 2012

ಸಹನೆಗೆ ಇನ್ನೊಂದು ಹೆಸರು...?

ಇದು ಒಂದು ಘಟನೆ: ಪಾರ್ಕಲ್ಲಿ ವಯಸ್ಸಾದ ಅಜ್ಜಿ ಎಡವಿ ಬಿದ್ದರು. ಅವರೆ ತಮ್ಮಷ್ಟಕ್ಕೆ ತಾವೇ ಕಷ್ಟಪಟ್ಟು ಎದ್ದು ಕೂತರು. ಪಾರ್ಕಲ್ಲಿ ಇದ್ದ ಎಲ್ಲಾ ಹೆಂಗಸರು ಅವರ ನೆರವಿಗೆ ದಾವಿಸಿದರು.ಮುಂಗೈ ನೆಲಕ್ಕೆ ಉರಿದ್ದರಿಂದ, ಕೈಗೆ ಸ್ವಲ್ಪ ಪೆಟ್ಟಾಗಿತ್ತು. ಅಲ್ಲಿಯೇ ಹತ್ತಿರದ ಹೋಟಲ್ ನಿಂದ ನೀರು ತಂದು ಕುಡಿಸಿದರು. ಅಷ್ಟರಲ್ಲಿಯೇ ಚೇತರಿಸಿಕೊಂಡ ಅಜ್ಜಿ ತನ್ನಲ್ಲಿದ್ದ ಮೊಬೈಲ್ ನ್ನು ತೆಗೆದುಕೊಂಡು ಮನಗೆ ಪೋನು ಮಾಡಿತು.

ಸ್ವಲ್ಪ ಹೊತ್ತಿನಲ್ಲಿ ಮನೆಯಿಂದ ಪಾರ್ಕಗೆ ದಾವಿಸಿ ಬಂದಿದ್ದು ಮತ್ತೊಬ್ಬ ಹೆಂಗಸು. ಅವಳು ಆ ಅಜ್ಜಿಯ ಮಗಳೋ, ಸೊಸೆಯೋ ಇರಬೇಕು.

ಇಲ್ಲಿ ಗಮನಿಸಬೇಕಾಗಿದ್ದು. ಯಾರಾದರೂ ತಮ್ಮ ವಯಸ್ಸಾದ ಕಾಲಕ್ಕೆ ಏನಾದರೂ ನೆರವು ಅಸರೆ ಎಂಬುದನ್ನು ಪಡೆಯುವುದಾದರೆ ಅದು ಹೆಣ್ಣಿನಿಂದ ಮಾತ್ರ. ಗಂಡಿನಿಂದ ಅಲ್ಲಾ.

ಮೂರು ನಾಲ್ಕು ದಿನಗಳಿಂದ ಬೆಂಗಳೂರಿನ ದಿನಪತ್ರಿಕೆ ಮತ್ತು ಟಿ.ವಿ ವಾರ್ತೆಗಳನ್ನು ಗಮನಿಸಿದ್ದೇವೆ. ಹೆತ್ತ ಅಪ್ಪನೇ ತನ್ನ ಮಗಳನ್ನು, ಅದು ಏನೂ ಅರಿಯದ ಕಂದಮ್ಮನನ್ನು ಹಿಂಸಿಸಿ ಕೊಲ್ಲಲು ಪ್ರತ್ನಿಸಿದ್ದು. ಅವನು ಜೈಲು ಪಾಲಾದದ್ದು. ನಿನ್ನೇ ಆ ಕೂಸು ಸಾವು ಬದುಕಿನ ಹೋರಾಟದ ಮಧ್ಯೆ ನಿಂತು ಕೊನೆಗೆ ಕಣ್ಣು ಮುಚ್ಚಿದ್ದು.

ಅಲ್ಲಾ ಇನ್ನಾದರೂ ಈ ಹೆಣ್ಣು ಹೆತ್ತರೆ ಅದು ಸೆರಗಿನಲ್ಲಿನ ಕೆಂಡ ಎಂದುಕೊಂಡು ಹೆಣ್ಣು ಮಕ್ಕಳನ್ನು ದೂರ ಸರಿಸುವುದು. ಹೆಣ್ಣು ಬ್ರೊಣ ಹತ್ಯೆ ನಿರಂತರವಾಗಿ ನಡೆಸುತ್ತಿರುವುದು ನಾವುಗಳು ಎಂಥ ಅನಾಗರೀಕರು ಎಂಬುದನ್ನು ತೋರಿಸುತ್ತದೆ.ಅಲ್ಲವಾ?

ಹೆಣ್ಣು, ಹೆತ್ತವರಿಗೆ ಹೊರೆಯಲ್ಲಾ ಎಂಬುದನ್ನು ನಮ್ಮ ಜೊತೆಯಲ್ಲಿರುವ ಹತ್ತು ಹಲವು ಹೆಣ್ಣು ಮಕ್ಕಳು ಈಗಾಗಲೇ ನಿರೂಪಿಸಿದ್ದಾರೆ.

ಗಂಡು ಮಕ್ಕಳು ಮಾಡುವ ಎಲ್ಲಾ ನೈಪುಣ್ಯವಾದ,ಕಷ್ಟಕರವಾದ ಕೆಲಸಗಳನ್ನು ಮಾಡುತ್ತಿದ್ದಾಳೆ. ಪ್ರತಿಯೊಂದು ರಂಗದಲ್ಲೂ ತನ್ನದೇಯಾದ ಛಾಪನ್ನು ಹೊತ್ತಿದ್ದಾಳೆ. ಆದರೂ ಈ ರೀತಿಯಾಗಿ ಹೆಣ್ಣು ಹೆಣ್ಣೆಂದು ಹೀಗಳೆಯುವುದು ಎಷ್ಟರ ಮಟ್ಟಿಗೆ ಸರಿ.

ತನ್ನ ಹೆತ್ತ ತಾಯಿಯು ಒಂದು ಹೆಣ್ಣು ಎಂಬುದನ್ನು ಯಾಕೆ ಈ ಗಂಡು ಸಮಾಜ ಮರೆಯುತ್ತದೆ? ತನ್ನ ಜೊತೆಗಾತಿಯಾಗಿ ಇರಲು ಹೆಣ್ಣು ಬೇಕು. ತನ್ನ ಎಲ್ಲಾ ಬೇಕೂ ಬೇಡಗಳನ್ನೆಲ್ಲಾ ಪೊರೈಸಲು ಹೆಣ್ಣು ಬೇಕು. ಇಡೀ ಮನೆಯನ್ನು ತೂಗಿಸಿಕೊಂಡು ಹೋಗಲು ಹೆಣ್ಣು ಬೇಕು. ಯಾವುದೇ ಒಂದು ಕಷ್ಟವಾದ ಮತ್ತು ಕ್ಲೀಷ್ಟವಾದ ಕೆಲಸ ಮಾಡಲು ಹೆಣ್ಣು ಬೇಕು.

ಆದರೇ ಅದೇ ಹೆಣ್ಣು ಜನಿಸಿದರೇ ಬೇಡ! ಇದು ಯಾವ ನ್ಯಾಯ ಸ್ವಾಮಿ?

ಹೆಣ್ಣದಾರೆ ಹೊರೆಯೆಂಬ ಅನಿಸಿಕೆಯನ್ನು ಹುಟ್ಟು ಹಾಕಿದವರ್ಯಾರು? ಅದು ಗಂಡಸೇ ಅಲ್ಲವಾ?

ಹೆಣ್ಣಿಗೆ ಮದುವೆಯಾಗಬೇಕೆಂದರೇ ದಂಡಿಯಾಗಿ ವರದಕ್ಷೀಣೆಯನ್ನು ಪಡೆಯುವುದು ಯಾರು? ಗಂಡಸ್ಸಾದ ಇವನೇನು ಯಾವುದರಲ್ಲಿ ಹೆಣ್ಣಿಗಿಂತ ಉನ್ನತಿಯಾಗಿದ್ದಾನೆ? ಅದು ಯಾಕೆ ಹಣ, ಒಡವೆ, ಮದುವೆ ಖರ್ಚು ಇತ್ಯಾದಿಯನ್ನು ಹೆಣ್ಣು ಹೆತ್ತವರಿಂದ ಪಡೆಯುವವನು?

ಇದೇ ತೋರಿಸುವುದಿಲ್ಲವೆ ಗಂಡು ಎಷ್ಟರ ಮಟ್ಟಿಗೆ ಅಬಲ ಎಂಬುದನ್ನು.

ಇದನ್ನು ಗಮನಿಸಿದರೇ ನಮಗೆ ಗೊತ್ತಾಗುವುದಿಲ್ಲವೇ ಗಂಡು ಯಾವುದಕ್ಕೂ ಪ್ರಯೋಜನವಿಲ್ಲದವನ ರೀತಿಯಲ್ಲಿ ತನ್ನ ಜೊತೆಗಾತಿಯಾಗಿ ಬಾಳ ಸಂಗಾತಿಯಾಗಿ ಬರುವವಳು ತನ್ನ ಜೊತೆಯಲ್ಲಿ ಶ್ರಿಮಂತಿಕೆಯನ್ನು ತರಲಿ ಎಂದು ಆಶಿಸುವ ದೌರ್ಬಲ್ಯತೆ ಈ ಗಂಡಸಿಗೆ ಯಾಕೆ ಸ್ವಾಮಿ?




ಇದಕ್ಕಾಗಿ ಮದುವೆಯಾಗಿ ಬಂದಂತಹ ಹೆಣ್ಣಿಗೆ ಗಂಡನ ಮನೆಯವರ ಚಿಂತಾಜನಕವಾದ ಉಘ್ರ ಕಿರುಕುಳ. ಇದನ್ನು ಸಹಿಸಲಾರದ ಹೆಣ್ಣು ಬೆಂಕಿಗೋ, ನೆಣಿಗೋ ವಿಷಕ್ಕೋ ಶರಣು!

ಇದರಿಂದ ಎಷ್ಟೊಂದು ಹೆಣ್ಣು ಹೆತ್ತ ಸಂಸಾರಗಳು ಕಷ್ಟ ಮತ್ತು ಬಡತನದ ಸರಮಾಲೆಯಲ್ಲಿಯೇ ಮುಳುಗಿ ಹೋಗುತ್ತವೆ.

ಇದನ್ನು ನೋಡಿದ ಪ್ರತಿಯೊಂದು ಸಂಸಾರ ನಮಗೆ ಕೇವಲ ಗಂಡು ಸಂತಾನ ಮಾತ್ರ ಜನಿಸಲಿ ಎಂದು ಎಷ್ಟೊಂದು ದೇವರ ಅರಕೆ. ಅದಕ್ಕಾಗಿ ಏನೇನೋ ಪೂಜೆ ಪುರಸ್ಕಾರಗಳು.

ಇವುಗಳೆನ್ನೇಲ್ಲಾ ಮಾಡಿರುವವರು ಯಾರು ಎಂದರೇ ಅದೇ ಗಂಡು ಎಂಬ ಸಮಾಜ.

ಇದಕ್ಕೆ ಸಾಕ್ಷಿ ಎಂಬಂತೆ ಗಂಡು ಹೆಣ್ಣಿನ ಸರಾಸರಿ ೧೦೦೦ - ೯೧೪ ಕ್ಕೆ ಬಂದು ನಿಂತಿದೆ. ನೋಡಿ ಎಷ್ಟೊಂದು ಅಂತರ.

ನಾವುಗಳು ನಿತ್ಯ ಹೈಟೆಕ್, ಆಟೆಕ್, ಇಟೆಕ್ ಎಂದು ಜಪ ಮಾಡುತ್ತಿರುತ್ತೇವೆ. ಆದರ ಜೊತೆಯಲ್ಲಿಯೇ ಶಿಕ್ಷಿತ ಮತ್ತು ಅಶಿಕ್ಷಿತರ ಮಧ್ಯದಲ್ಲಿಯೇ ಇಂಥ ನೂರಾರು ಶೋಷಣೆಗಳು ಜರುಗುತ್ತಲೆ ಇರುತ್ತೇವೆ. ಅವುಗಳಿಗೆ ಕಡಿವಾಣ ಯಾವಾ ರೀತಿಯಲ್ಲಿಯು ಬೀಳಲಾರದು. ಯಾಕೆ?

ಹೆಣ್ಣು ಹೆತ್ತರೆ ಮುಂದೆ ಮದುವೆ ಮುಂಜಿಯನ್ನು ಮಾಡುವುದು ಬಾರಿ ಕಷ್ಟ ಎಂಬ ಅಭಿಪ್ರಾಯ ಬಡ ಕುಟುಂಬಗಳಲ್ಲಿ ಬಲಿಷ್ಟವಾಗಿ ಮನೆ ಮಾಡಿಬಿಟ್ಟಿದೆ. ಇದಕ್ಕೆ ಕಾರಣ ಹೆಣ್ಣಿನ ಕಡೆಯವರು ಮದುವೆಯ ಸಮಯದಲ್ಲಿ ತನ್ನಲ್ಲಿ ಇದ್ದರೂ ಇಲ್ಲದಿದ್ದರೂ ಸಾಲ ಸೂಲವನ್ನಾದರೂ ಮಾಡಿ ಗಂಡಿನ ಮನೆಗೆ ಕೊಡಲೇ ಬೇಕು ಎಂಬ ಅಲಿಖಿತ ಶಾಸನ.

ಉಳ್ಳವರು ತಮ್ಮ ಶ್ರಿಮಂತಿಕೆಯನ್ನು ತೋರುಪಡಿಸಲು ಮದುವೆಯೆಂಬುದು ಸದಾವಕಾಶ. ಮದುವೆಯ ವಿಜೃಂಭಣೆಯನ್ನು ಸುತ್ತ ಮುತ್ತಲಿನ ತನ್ನ ನೆರೆಹೊರೆಯವರು ಕೊಂಡಾಡಲಿ ಎಂಬ ಅಭಿಪ್ರಾಯದಿಂದ ಬಡವರ ಕಣ್ಣು ಕುಕ್ಕುವಂತೆ ನೆರೆವೇರಿಸುವರು.

ಬಡವರು ಇವರನ್ನು ತೋರಿಸಿ.. ಅದೇ ರೀತಿಯಲ್ಲಿ ನೀನು ಶಕ್ತಿ ಮೀರಿ ವರದಕ್ಷೀಣೆ ಮತ್ತು ಮದುವೆಯನ್ನು ಮಾಡಿಕೊಡಲೇ ಬೇಕು ಎಂಬ ಹಟ ಹಿಡಿಯುವುದು. ಈ ಎಲ್ಲಾ ಕಾರಣಗಳಿಂದಲೇ ಇಂಥ ಅಮಾನವೀಯ ರೀತಿಯಲ್ಲಿ ಹೆಣ್ಣು ಶಿಶುಗಳ ದಾರುಣ ಹತ್ಯೆಗಳು ನಿರಂತರವಾಗಿ ನಿತ್ಯ ನಡೆಯುತ್ತಲೇ ಇರುತ್ತೇವೆ.

ಇಂದಿನ ಪತ್ರಿಕೆಗಳಲ್ಲಿ ಕನಿಷ್ಟ ಒಂದಾದರೂ ವರದಕ್ಷೀಣೆಯ ಕಿರುಕುಳದ ಸಾವುಗಳ ವರದಿಯನ್ನು ಓದುತ್ತಲೇ ಇರುತ್ತೇವೆ. ವರದಿಯೇ ಅಗದೇ ನಡೆಯುವ ಘಟನೆಗಳು ಇನ್ನೆಷ್ಟೋ.

ಗಂಡ ಮತ್ತು ಹೆಂಡತಿ ಯೋಚಿಸಿ. ಇಂದು ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆಯಿಲ್ಲ. ಅವರುಗಳಿಗೆ ಸರಿಯಾದ ಶಿಕ್ಷಣವನ್ನು ನೀಡಿದರೆ ತನ್ನ ಕಾಲ ಮೇಲೆ ತಾವೇ ನಿಲ್ಲುವಂತಹ ಆತ್ಮ ಸ್ಥೈರ್ಯವನ್ನು ರೂಡಿಸಿಳ್ಳುತ್ತಿದ್ದಾರೆ.

"ಹೆಣ್ಣು ಅಬಲೆ. ಅವಳು ಚಿಕ್ಕವಳಾಗಿದ್ದಾಗ ಹೆತ್ತವರ ಅಸರೆ, ಯೌವನಕ್ಕೆ ಬಂದಾಗ ಗಂಡನ ಅಸರೆ, ಮುದುಕರಾದಾಗ ಗಂಡು ಮಗನ ಅಸರೆ" ಎಂಬ ಅಸಹಜವಾದ ಗಾದೆಯನ್ನು ಹಿಂದಿನವರು ಮಾಡಿದ್ದರು.

ಅದರೇ ಇಂದು ಎಲ್ಲರಿಗೂ ಅವಳೆ ಅಸರೆಯನ್ನು ಕೊಡುವ ಮಟ್ಟಕ್ಕೆ ಬೆಳೆದಿದ್ದಾಳೆ. ಅವಳನ್ನೇ ಹೆತ್ತವರು, ಗಂಡನೂ, ಮಗನೂ ಅವಲಂಬಿಸುವ ಮಟ್ಟಕ್ಕೆ ತಾನು ಆರ್ಥಿಕವಾಗಿ ಸಮೃದ್ಧಾವಾಗಿ ಬೆಳೆಯುತ್ತಿದ್ದಾಳೆ.

ಈ ರೀತಿಯಾಗಿ ಹೆಣ್ಣಿನ ಬೆಳವಣಿಗೆಗಳನ್ನು ನಿತ್ಯ ನೋಡುತ್ತಿದ್ದರೂ, ಹೆಣ್ಣು ಹುಟ್ಟಿದ ತಕ್ಷಣ ಹ್ಯಾಪು ಮೊರೆಯನ್ನು ಹಾಕುವುದನ್ನು ನಮ್ಮ ಎಲ್ಲಾ ತಾಯಿ ತಂದೆಯರು ಬಿಡಬೇಕು. ಅವರೂ ಯಾವುದರಲ್ಲೂ ಕಡಿಮೆಯಿಲ್ಲಾ. ಅವರ ಸಂಖ್ಯೆ ಇನ್ನೂ ಹೆಚ್ಚಾಗಲು ಬಿಡೋಣ.

ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೂ ಅಲ್ಲಿ ದೇವತೆಗಳು ನೆಲಸಿರುತ್ತಾರೆ. ಯಾವ ಕುಟುಂಬದಲ್ಲಿ ಹೆಣ್ಣಿರುತ್ತಾಳೋ ಆ ಕುಟುಂಬ ಸುಖ ಸಮೃದ್ಧಿಯಿಂದ ಕೊಡಿರುತ್ತದೆ.

ನಿಮ್ಮ ಕಡೆಗಾಲದಲ್ಲಿ ಆಸರೆಯಾಗುವವರು ಈ ಹೆಣ್ಣು ಮಾತ್ರ. ಗಂಡು ಎಂಬುದು ಕೇವಲ ಹೇಳಿಕೊಳ್ಳುವುದಕ್ಕೆ ಮಾತ್ರ.

ಹೆಣ್ಣಿನ ಮನಸ್ಸೆ ಅಂಥಹದ್ದು. ಅದಕ್ಕೆ ಹೆಣ್ಣನ್ನೂ ಭೂಮಿಗೆ ಹೋಲಿಸಿರುವುದು. ಅವಳ ಮಹತ್ವವನ್ನು ಎಲ್ಲಾರೂ ಅರಿಯಬೇಕು.

ಸಹನೆಗೆ ಇನ್ನೊಂದು ಹೆಸರು ಸ್ತ್ರೀ. ಅವಳ ಸಂತತಿಯನ್ನೇ ಹರಣ ಮಾಡುವುದು ಅಕ್ಷಮ್ಯ ಅಪರಾಧ!

ಭಾನುವಾರ, ಏಪ್ರಿಲ್ 8, 2012

ಈ ಉರಿ ಬೇಸಿಗೆಯಲ್ಲಿ

ಬೇಸಿಗೆ ಕಾಲ ಬಂದಿದೆ ಅಂದರೇ ಮಕ್ಕಳಿಗೆ ಏನೋ ಖುಷಿ. ಈ ಎರಡು ತಿಂಗಳು ಓದು, ಬರೀ ಎಂಬ ಮಾತೇ ಮನೆಯಲ್ಲಿ ಇಲ್ಲ. ಯಾರು ಹೇಳುವವರು ಕೇಳುವವರು ಇಲ್ಲ ಎಂಬ ಸಂತೋಷ. ದಿನವೀಡಿ ಆಟ ಮತ್ತು ಆಟ ಅಷ್ಟೇ.

ಒಂದು ವರುಷದ ಕಷ್ಟಪಟ್ಟು ಓದಿದ ಪಾಠಗಳನ್ನು ವಾರ್ಷಿಕ ಪರೀಕ್ಷೆ ಎಂಬ ಮಾಪನದಲ್ಲಿ ಇಟ್ಟು ಪಾಸು ಪೇಲು ಎಂಬ ಪಲಿತಾಂಶವನ್ನು ಪಡೆಯುತ್ತಾರೆ. ಮನೆಯಲ್ಲಿ ಮಕ್ಕಳಿಗೆ ಓದು, ಪಾಠ, ಮನೆ ಪಾಠ ಎಂದು ಸಕತ್ತಾಗಿ ಹಿಂಸೆಪಡಿಸಿರುತ್ತಾರೆ. ಹೆತ್ತವರಿಗೆ ತಮ್ಮ ಮಕ್ಕಳು ಮುಂದೆ ನಮ್ಮ ರೀತಿಯಲ್ಲಿ ಕಷ್ಟಪಡಬಾರದು. ಚೆನ್ನಾಗಿ ಓದಿದರೆ ಒಳ್ಳೆಯ ಕಡೆ ಕೆಲಸ ಸಿಕ್ಕಿ ತಮ್ಮ ಜೀವನದಲ್ಲಿ ಸೆಟ್ಲ್ ಆಗುತ್ತಾರೆ ಎಂಬ ಮಹದಾಸೆಯಿಂದ ಸಾಕಷ್ಟು, ಶ್ರಮ, ದುಡಿಮೆಯನ್ನು ಖರ್ಚು ಮಾಡಿ ಉತ್ತಮವಾದ ಶಾಲೆಯಲ್ಲಿಟ್ಟು ಓದಿಸುತ್ತಾರೆ.

ಮಕ್ಕಳು ಸಹ ಒಂದು ವರುಷ ಪಾಠ ಬಿಟ್ಟು ಬೇರೆಯದನ್ನು ಚಿಂತಿಸಿದರೇ ಕೇಳಿ.. ಆಗಿರುತ್ತದೆ ನಗರದ ಶೈಕ್ಷಣಿಕ ಪರಿ.

ನಮ್ಮ ಕಾಲದಲ್ಲಿ ಬಿಡಿ ಆ ರೀತಿಯ ಸೀರಿಯಸ್ ನೇಸ್ಸೆ ಇರಲಿಲ್ಲ. ಶಾಲೆಯ ಘಂಟೆ ಹೊಡೆಯುವುದನ್ನೇ ಕಾಯುತ್ತಿದ್ದೆವು. ನಿತ್ಯ ಸಂಜೆ ಆಟ ಆಟ ಮಾತ್ರ. ಪುಸ್ತಕಗಳನ್ನು ಪುನಃ ಮುಟ್ಟುತ್ತಿದ್ದದ್ದು ಬೆಳೆಗ್ಗೆ ಶಾಲೆಗೆ ಹೋಗಬೇಕಲ್ಲಪ್ಪಾ ಎಂದು ದೂಳು ಕೊಡವಿ ಚೀಲವನ್ನು ಹೆಗಲಿಗೆ ಹಾಕಿಕೊಂಡು ಹೋಗುತ್ತಿದ್ದೇವು. ಶಾಲೆಯಲ್ಲಿ ಪುನಃ ಶಿಕ್ಷಕರು ನಿನ್ನೆ ಕೊಟ್ಟ ಹೊಂ ವರ್ಕ್ ಮಾಡದೆ ನಿಂತಿದ್ದೇ ಬಂತು. ಕೈ ಬಾಸುಂಡೆ ಬರುವ ಮಟ್ಟಿಗೆ ಏಟುಗಳನ್ನು ಅಳುತ್ತಾ ಸವಿಯುತ್ತಿದ್ದೇವು.

ಇದನ್ನೇಲ್ಲಾ ಕಂಡ ನಮ್ಮ ಕಣ್ಣುಗಳು ನಗರದ ಪ್ರಾಥಮಿಕ ಮಕ್ಕಳ ಬುದ್ಧಿವಂತಿಕೆ, ಜವಾಬ್ದಾರಿಯನ್ನು ಕಂಡು ನನಗೆ ಆಶ್ಚರ್ಯವಾಗಿದೆ. ಶಾಲೆಯನ್ನು ಬಿಟ್ಟ ಬಂದನಂತರ ಯುನಿಪಾರ್ಮ್ ನ್ನು ತೆಗೆದು. ಮುಖ ತೊಳೆದುಕೊಂಡು ಶಾಲೆಯ ಪಾಠಗಳನ್ನು ಓದಲು ಕುಳಿತುಕೊಳ್ಳುವುದನ್ನು ಕಂಡು ಅಲ್ಲಾ ಈ ಮಕ್ಕಳು ಈ ಚಿಕ್ಕ ವಯಸ್ಸಿಗೆ ಇಷ್ಟರ ಮಟ್ಟಿಗೆ ಬುದ್ಧಿವಂತರಾಗಿದ್ದರಲ್ಲಾ ಶಿವನೇ ಅನಿಸುತ್ತದೆ.

ನಾವುಗಳು ಯುನಿಪರ್ಮ್ ಅದು ವಾರಕ್ಕೆ ಒಮ್ಮೆ ಮೈಯಿಂದ್ ಇಳಿಯುತ್ತಿತ್ತು. ಎಷ್ಟರ ಮಟ್ಟಿಗೆ ಅಂದರೆ ಅದನ್ನು ಇನ್ನೂ ತೊಳೆಯಲೇಬೇಕು ಎಂಬ ಸಮಯಕ್ಕೆ ನಮ್ಮಿಂದ ಇಳಿಸುತ್ತಿದ್ದೇವು. ಆಟಕ್ಕೂ ಅದೇ ಯುನಿಪಾರ್ಮ್ ಪಾಠಕ್ಕೂ ಅದೇ ಆದರೇ ಅದರ ಸ್ಥಿತಿ ಉಹಿಸಲೂ ಅಸಾಧ್ಯ.

ಮಕ್ಕಳು ಅಂದರೇ ಆಟವಾಡುವುದೇ ಜನ್ಮ ಸಿದ್ಧ ಹಕ್ಕು ಎಂಬಂತೆ ವರ್ತಿಸುತ್ತಿದ್ದ ದಿನಗಳು ಅವು. ಶಾಲೆಯೆಂದರೇ ಪರಪ್ಪನ ಅಗ್ರಾಹರದ ರೀತಿಯ ಜೈಲು ಎಂಬಂತೆ ಏನೇನೂ ಸೋಗು ಹಾಕಿಕೊಂಡು ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದೇವು.

ಇಂದಿನ ಈ ನಗರದ ಮಕ್ಕಳೂ ಏನೂ ಹುಷಾರ್ ಆಗಿ, ಎಷ್ಟೊಂದು ಖುಷಿಯಾಗಿ ಶಾಲೆಗೆ ಹೋಗುತ್ತಾರಲ್ಲಾ ಎಂದು ನನಗೆ ನಾನೇ ಅಶ್ಚರ್ಯಪಡುತ್ತೇನೆ. ಈ ಮಕ್ಕಳಿಗೆ ಇರುವ ಬುದ್ಧಿ ನಮಗೆ ಬಂದಿದ್ದು, ಮುಖದ ಮೇಲೆ ಮೀಸೆ ಬಂದ ಹೊಸತರಲ್ಲಿ. ಎಸ್. ಎಸ್.ಎಲ್.ಸಿ ಯಲ್ಲಿ ಒಮ್ಮೆ ಡುಮಕ್ಕಿ ಹೊಡೆದು ಮನೆಯಲ್ಲಿ ಅಪ್ಪ ಅಮ್ಮ ಅಟ್ಟಾಡಿಸಿಕೊಂಡು ಹೊಡೆದ ಮೇಲೆ.




ಆದರೇ ಈ ಮಕ್ಕಳಿಗೆ ಏನೊಂದು ಹೇಳುವುದೇ ಬೇಡ. ಈ ಮಕ್ಕಳು ತಮಗೆ ತಾವೇ ಅರಿವನ್ನು ರೂಡಿಸಿಕೊಂಡು ಬಿಟ್ಟಿದ್ದಾವೆ. ಚೆನ್ನಾಗಿ ಓದಬೇಕು. ಹೆಚ್ಚು ಅಂಕಗಳನ್ನು ತೆಗೆದುಕೊಂಡು ಶಾಲೆಯಲ್ಲಿ ಯಾವಾಗಲೂ ಏ ಗ್ರೇಡ್ ನಲ್ಲಿ ಇರಬೇಕು. ಆ ಗ್ರೇಡ್ ನ್ನು ನಾನು ಯಾರಿಗೂ ಬಿಟ್ಟು ಕೊಡಬಾರದು. ಚೆನ್ನಾಗಿ ಓದಬೇಕು ಎಂಬ ಅಂಶವನ್ನು ಅದು ಹೇಗೆ ತಿಳಿದುಕೊಂಡಿದ್ದಾವಲ್ಲಾ ಎಂದು ನಿಜವಾಗಿಯು ಮೆಚ್ಚುಗೆಯಾಗುತ್ತದೆ.

ನಮಗಂತೂ ಪರೀಕ್ಷೆಯ ಅಂಕಗಳ ಉಸಾಬರಿಯೇ ಗೊತ್ತಿರಲಿಲ್ಲ. ಅಂಕಗಳು ಎಂಬುದು ಪರೀಕ್ಷೆಯಲ್ಲಿ ಕೊಡುತ್ತಾರೆ. ಇಷ್ಟು ಮಾರ್ಕ್ಸ್ ಬಂದರೆ ಪಾಸು ಎಂಬುದನ್ನು ಬಿಟ್ಟರೆ. ಅದಕ್ಕಿಂತ ಜಾಸ್ತಿ ತೆಗೆದರೇನಾಗುವುದು ಎಂಬುದು ಗೊತ್ತಿರಲಿಲ್ಲ. ಅದ್ದರಿಂದ ಪಸ್ಟ್ ಕ್ಲಾಸ್, ಮೇರಿಟ್ ಎಂಬ ಶಬ್ಧಗಳೆಲ್ಲಾ ಕೇಳಿದ್ದೇ ಹತ್ತನೇ ತರಗತಿಯನ್ನು ಪಾಸು ಮಾಡಿದ ಮೇಲೆ.

ಇದು ಅಂದಿನ ನಮ್ಮ ಹಳ್ಳಿಗಾಡಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಾವು ಇದ್ದ ಸ್ಥಿತಿ.

ಇಂದಿನ ಮಕ್ಕಳು ಒಂದು ಕ್ಷಣವನ್ನು ವೇಸ್ಟ್ ಮಾಡದೇ ಯಾವಾಗಲೂ ಓದಿನ ಬಗ್ಗೆಯೇ ತಪಸ್ಸು ಮಾಡುತ್ತಿರುವುದು, ನಮ್ಮ ಇಂದಿನ ಪೀಳಿಗೆಯ ಬಗ್ಗೆ ಭರವಸೆಯ? ನೋಟವನ್ನು ನೋಡುವಂತಾಗುತ್ತದೆ. ಹಾಗೆಯೇ ಈ ಚಿಕ್ಕ ಬಾಲ್ಯದಲ್ಲಿಯೇ ಓದು ಓದು ಎಂಬ ಅಂಕಗಳ ಕಾಂಪೀಟೆಶನ್ ನಿಂದ ಇವರುಗಳು ತಮ್ಮ ಬಾಲ್ಯಾವಸ್ಥೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ ಎಂಬ ಭಯವಾಗುತ್ತದೆ.

ಈ ಚಿಕ್ಕ ವಯಸ್ಸಿಗೆ ದೊಡ್ಡವರ ರೀತಿಯ ಅರಿವು ಮತ್ತು ಯೋಚನಾ ಲಹರಿ ಈ ಪೀಳಿಗೆಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತದೋ ಅನಿಸುತ್ತದೆ.

ಗಮನಿಸಿ ರಜಾ ದಿನಗಳನ್ನು ಅಂದು ನಾವುಗಳು ಊರೂರು ಸುತ್ತುತ್ತಾ ಅಜ್ಜ, ಅಜ್ಜಿ, ದೊಡ್ಡಮ್ಮ, ಚಿಕ್ಕಮ್ಮ ಗಳ ಮನೆಯನ್ನು ಎಡತಾಕುತ್ತಾ ಹೊಸ ಹೊಸ ಅನುಭವವನ್ನು ಪಡೆಯುತ್ತಾ ಖುಷಿಯಾಗಿರುತ್ತಿದ್ದೇವು.

ಸಂಬಂಧಿಕರ ಊರುಗಳಿಗೆ ಹೋಗುವುದು ಅಲ್ಲಿಯ ಜಾತ್ರೆ, ನಾಟಕ, ಜಾನಪದ ಗೀತೆಗಳು, ಚಿನ್ನಿ ದಂಡು, ಲಗೋರಿ, ಕುಂಟಾ ಬಿಲ್ಲೆ, ಮಣೆ ಆಟ, ಚೌಕ ಭಾರ ಇತ್ಯಾದಿ ಮುಳುಗೇಳುತ್ತಿದ್ದೇವು. ಹೊಲ, ಏರಿ, ನೀರು ಮುಂತಾದ ಹೊಸ ಜಾಗಗಳಿಗೆ ಗೆಳೆಯರ ಜೊತೆಯಲ್ಲಿ ಮನಸ್ಸೊಇಚ್ಛೆ ಅಡ್ಡಾಡುತ್ತಿದ್ದೇವು. ಪ್ರಕೃತಿಯಲ್ಲಿ ಪೂರ್ಣವಾಗಿ ಲೀನವಾಗಿ ಪುಸ್ತಕಗಳನ್ನೇ ಮರೆಯುತ್ತಿದ್ದೇವು.

ಬೇಸಿಗೆಯ ಎರಡು ತಿಂಗಳುಗಳು ಎಂಬುದು ಹೀಗೆ ಬಂದು ಹಾಗೆ ಹೋದವು ಎಂಬ ರೀತಿಯಲ್ಲಿ ಶಾಲೆಯ ಮೊದಲ ದಿನ ಹ್ಯಾಪು ಮೊರೆಯಾಕಿಕೊಂಡು ಕುಳಿತು ಕೊಳ್ಳುತ್ತಿದ್ದೇವು.

ಅದರೇ ಇಂದಿನ ಮಕ್ಕಳಿಗೆ ಬೇಸಿಗೆ ರಜೆ ಮತ್ತು ಶಾಲಾ ದಿನಗಳಿಗೆ ಏನೂ ವ್ಯತ್ಯಾಸವಿಲ್ಲ ಅನಿಸುತ್ತದೆ. ಶಾಲಾ ದಿನಗಳಲ್ಲೂ ನಾಲ್ಕು ಗೋಡೆಗಳ ಮಧ್ಯೆಯಲ್ಲಿ ಇರುತ್ತಿದ್ದರು. ರಜೆಯ ದಿನಗಳಲ್ಲಿ ಹೆತ್ತವರು ತಮ್ಮ ಮಕ್ಕಳು ಇನ್ನೂ ಮುಂದುವರಿಯಲಿ ಎಂಬ ಆಕಾಂಕ್ಷೆಯಿಂದ ದುಭಾರಿ ವೆಚ್ಚದ ಸಮ್ಮರ್ ಕ್ಯಾಂಪಗೆ ಹಾಕಿ ಬಿಡುತ್ತಾರೆ. ಶಾಲೆಗೆ ಹೇಗೆ ಮುಂಜಾನೆ ಎದ್ದು ಉಟದ ಡಬ್ಬಿ, ಬ್ಯಾಗ್ ಹೆಗಲಿಗೆ ಹಾಕಿಕೊಂಡು ಮನೆಯ ಮುಂದೆ ಬರುವ ಬಸ್ಸಲ್ಲಿ ಹೋಗುತ್ತಿದ್ದರು ಅದೇ ರೀತಿಯಲ್ಲಿ ಸಮ್ಮರ್ ಕ್ಯಾಂಪ ಬಸ್ಸುಗಳಲ್ಲಿ ಒಂದು ಜಾಗಕ್ಕೆ ತಲುಪಿ ಅಲ್ಲಿ ನಾಲ್ಕು ಗೋಡೆಗಳ ಮಧ್ಯೆದಲ್ಲಿ ಅದೇ ವ್ಯಕ್ತಿತ್ವ ವಿಕಾಸನ, ಪೈಂಟಿಂಗ್, ಹಾಡು ಹೇಳುವುದು, ನೃತ್ಯ ಇತ್ಯಾದಿ ಮುಂದೆ ತಮ್ಮ ಜೇವನಕ್ಕೆ ಅನುಕೂಲವಾಗುವ ಕೋರ್ಸ್ ಗಳನ್ನು ಕಲಿಯುತ್ತಾರಲ್ಲಾ.

ನೆನಸಿಕೊಂಡರೇ ನಮ್ಮ ಅಂದಿನ ಮತ್ತು ಇಂದಿನ ಹಳ್ಳಿ ಹೈದಗಳು ಎಷ್ಟು ಹಿಂದೆ ಇದ್ದಾರೆ ಅನಿಸುತ್ತದೆ?

ಇಂದಿನ ಶಿಕ್ಷಣ ಎಂದರೇ ವ್ಯಕ್ತಿಯನ್ನು ಪರಿಪೂರ್ಣವಾಗಿ ಉನ್ನತವಾದ, ಹೆಚ್ಚು ದುಡಿಮೆಯಿರುವ ಕೆಲಸವನ್ನು ಗಿಟ್ಟಿಸಿಕೊಳ್ಳಲು ಇರುವ ಒಂದು ಕಾರ್ಯಕ್ರಮವನ್ನಾಗಿ ಮಾಡುತ್ತಿರುವಂತಿದೆ. ಹೇಗೆ ನಿಮ್ಮ ಹಣ ಮತ್ತು ಟೈಂ ನ್ನು ಇನ್ವೇಸ್ಟ್ ಮಾಡುತ್ತೀರೋ ಹಾಗೆ ಮುಂದೆ ರೀಟರ್ನಸ್ ಪಡೆಯುವ ಒಂದು ವ್ಯವಸ್ಥಿತ ಯೋಜನೆಯೇ?

ಅಂದಿನ ಶಿಕ್ಷಣ ವ್ಯವಸ್ಥೆಗೂ ಇಂದಿಗೂ ಎಷ್ಟೊಂದು ವ್ಯತ್ಯಾಸ ಅನಿಸುತ್ತದೆ. ಇಂದು ಎಲ್ಲರೂ ಓಡುತ್ತಿದ್ದಾರೆ ಅನಿಸುತ್ತದೆ. ಅಂದು ಸ್ನೇಹ - ಬಂದುತ್ವ ಮಧುರವಾಗಿರುತ್ತಿದ್ದವು.

ಇಂದು ಎಲ್ಲರೂ ಕೂಡಿ ಓದುವ ಮಕ್ಕಳ ಮಧ್ಯೆ ಆ ರೀತಿಯ ವಾತ್ಸಲ್ಯವನ್ನು ಕಾಣಬಹುದೇ? ಯಾಕೆಂದರೆ ಮನೆಯಲ್ಲಿ ಹೆತ್ತವರು 'ಏ ನೀನು ಅವನಿಗಿಂತ ಹೆಚ್ಚು ಅಂಕಗಳನು ಪಡೆಯಲೇ ಬೇಕು. ಅವನಿಗಿಂತ ಯಾವಾಗಲೂ ನೀನು ಮುಂದಿರಬೇಕು. ನೋಡು ಅವನು ಆ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡನಂತೆ. ನೋಡು ನೀನು ಏನು ಗಳಿಸಲಿಲ್ಲ.'

ಇತ್ಯಾದಿಯ ಕೇವಲ ಓಡುವ ಮಾತುಗಳನ್ನಾಡುತ್ತಿದ್ದರೆ.. ಈ ಮಗುವಾದರೂ ಏನು ಮಾಡಲು ಸಾಧ್ಯ. ಅದಕ್ಕೆ ತನ್ನವರು, ಗೆಳೆಯರು, ಸಂಬಂಧಿಕರುಗಳು, ನನ್ನವರು, ನನ್ನೂರು, ನನ್ನ ದೇಶ ಇತ್ಯಾದಿಯ ಒಂದು ಸಹಬಾಳ್ವೆಯ ಪರಿಕಲ್ಪನೆ, ಸಹಾಯ ಹಸ್ತದ ಮನಸ್ಸು ಎಲ್ಲಿಂದ ಬರಬೇಕು?

ಈ ಉರಿ ಬೇಸಿಗೆಯಲ್ಲಿ ಪ್ಲೀಸ್ ಯೋಚಿಸಿ ಶಿಕ್ಷಣ ಎಂದರೇ ಕೇವಲ ಅಂಕಗಳನ್ನು ಹೆಚ್ಚು ಮಾಡಿಕೊಳ್ಳುವುದೇ?