ಭಾನುವಾರ, ಜುಲೈ 8, 2012

ಎಷ್ಟು ಕಷ್ಟವೋ ಹೊಂದಾಣಿಕೆ


ಹೊಂದಾಣಿಕೆಯೇ ಬದುಕು ಎಂಬುವುದನ್ನು ನಾವೆಲ್ಲಾ ಯಾಕೆ ಮನನ ಮಾಡಿಕೊಳ್ಳುವುದಿಲ್ಲವೋ?

ಮನುಷ್ಯ ಸಂಘ ಜೀವಿ. ಒಂಟಿಯಾಗಿ ಬದುಕುವುದು ದುಸ್ತರ.

ನೀನೇ ನೀನು ಏಕಾಂಗಿಯಾಗಿ ಯಾರ ಹಂಗು ಮತ್ತು ಸಂಬಂಧವಿಲ್ಲದೆ ಬದುಕುವುದು ಎಷ್ಟು ಕಷ್ಟ ಎಂಬುದು ಬೇರೆಯಾಗಿ ಏಕಾಂಗಿಯಾಗಿ ಹೋಗಿ ತಮ್ಮ ತಮ್ಮ ಬದುಕು ಕಟ್ಟಿಕೊಂಡವರಿಗೆ ಮಾತ್ರ ಗೊತ್ತು.

ನಾವುಗಳು ನಾವೆಯಾಗಿ ದುತ್ತನೆ ಈ ಭೂಮಿಗೆ ಬೀಳುವುದಿಲ್ಲ!

ಕುಟುಂಬ ವ್ಯವಸ್ಥೆಯಲ್ಲಿ ಹೆತ್ತವರು, ಸಾಕಿದವರು ಮುಂತಾದ ಹಲವು ಜೀವಿಗಳ ಪೋಷಣೆಯ ಪ್ರತಿ ಫಲವೇ ಈ ನಮ್ಮ ಯೋಚನೆಯನ್ನು ಮಾಡುವ ದೇಹ ಮತ್ತು ಮನಸ್ಸು.

ಯೋಚಿಸಿ ಹುಟ್ಟಿದ ತಕ್ಷಣ ಎಲ್ಲೋ ಒಂದು ಕಡೆ ಒಂಟಿಯಾಗಿ ನಮ್ಮನ್ನು ಬಿಟ್ಟಿದ್ದರೇ ಈಗ ಇರುವ ಈ ನಮ್ಮ ಸ್ಥಿತಿ ಆರೋಗ್ಯಕರವಾಗಿರುತ್ತಿತ್ತೇ?

ಸಾಧ್ಯವಿಲ್ಲ ಅಲ್ಲವಾ?

ಈ ರೀತಿಯಾಗಿ ಬದುಕು ಇರಬೇಕಾದರೇ ನಾವುಗಳು ಏಕೆ ಪ್ರತಿಯೊಂದು ಸಮಯದಲ್ಲೂ ಅಯ್ಯೋ ಯಾರೋ ನನ್ನ ಸ್ವತಂತ್ರ ಹರಣ ಮಾಡಿಬಿಟ್ಟರೂ.. ಅಯ್ಯೋ ಯಾರೋ ನನ್ನ ಭಾವನೆಗೆ ಬೆಲೆಯನ್ನೇ ಕೊಡಲಿಲ್ಲಾ.. ಅಯ್ಯೋ ಯಾವಾಗಲೂ ಎಲ್ಲಾರ ಜೊತೆಯಲ್ಲೂ ಅನುಸರಿಸಿಕೊಂಡೇ ಈ ನನ್ನ ಜೀವನವನ್ನು ಕಳೆದುಕೊಂಡು ಬಿಟ್ಟೆ.. ಎಂಬ ಈ ಕೂರಗು ದ್ವನಿಗಳು ಏಕೆ?

ಯಾಕೆ "ಎಲ್ಲಾರ ಜೊತೆಯಲ್ಲಿ ಕೊಡಿ ಬಾಳಿದರೇ ಅದೇ ಸ್ವರ್ಗ ಸುಖ!" ಎಂದು ಅಂದುಕೊಳ್ಳುವುದಿಲ್ಲ. ಪ್ರತಿಯೊಂದನ್ನೂ ಋಣಾತ್ಮಕವಾಗಿ ಮನಸ್ಸಿಗೆ ತೆಗೆದುಕೊಂಡು ನೋಯಿವುದೂ ಏಕೆ?

ಚಿಂತಿಸಿ ಹುಟ್ಟಿದ ದಿನದಿಂದ ಒಬ್ಬರಲ್ಲಾ ಒಬ್ಬರ ಜೊತೆಯಲ್ಲಿ ನಮ್ಮ ಈ ಪಯಣವನ್ನು ಕೊಡಿಕೊಂಡು ಸಾಗಿಸುತ್ತಿದ್ದೇವೆ. ಹೆತ್ತವರು, ಅಣ್ಣ, ತಂಗಿ, ಶಾಲೆಯಲ್ಲಿ ಗೆಳೆಯರು, ಕಾಲೇಜಿನಲ್ಲಿ ಗೆಳತಿಯರು, ಕೆಲಸ ಮಾಡುವ ಜಾಗದಲ್ಲಿ ಉದ್ಯೋಗಿ ಸ್ನೇಹಿತರು. ಪ್ರತಿಯೊಂದು ಕ್ಷಣವು ಇನ್ನೊಬ್ಬರ ಜೊತೆಯಲ್ಲಿಯೇ ಸರಿಯಾದ ಹೆಜ್ಜೆಯನ್ನು ಹಾಕುವ ಪಾಡಾಗಿದೆ.

ಹೀಗೆ ಇರುವಾಗ, ಪುನಃ ಇಲ್ಲಾ ಈ ರೀತಿಯ ನನ್ನ ಮನೋಸ್ಥಿತಿಯಿಂದ ನಾನು ಏನನ್ನು ಸಾಧಿಸಲೂ ಸಾಧ್ಯವಾಗಲಿಲ್ಲ. ಬರೀ ಅವರು ಇವರಿಗಾಗಿ ಕಾಂಪ್ರಮೈಸ್ ಆಗುವುದೇ ನನ್ನ ಜೀವನವಾಯಿತು. ಎಂದು ಮನಸ್ಸಿನಲ್ಲಿ ಅಂದುಕೊಳ್ಳುವುದು ಎಷ್ಟು ಸರಿ?

ಪ್ರತಿಯೊಬ್ಬರಿಗೂ ತನ್ನ ಮನದ ದುಃಖ-ಸುಖದ ಭಾವನೆ, ಅನಿಸಿಕೆಗಳನ್ನು ವ್ಯಕ್ತಪಡಿಸಲು ತನ್ನ ಜೀವವಲ್ಲದೇ ಇನ್ನೊಂದು (ಸ)ಜೀವದ ಅವಶ್ಯಕತೆಯಿದೆ.

ಇಲ್ಲವಾದರೇ ಉಫ್ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಷ್ಟೊಂದು ಮನಸ್ಸಿನ ತುಮುಲಗಳನ್ನು ನಮ್ಮ ನಮ್ಮಲ್ಲಿಯೇ ಇಟ್ಟುಕೊಂಡು ಯಾವ ಅಣು ಬಾಂಬಿಗಿಂತಲೂ ಮಿಗಿಲಾದ ಅತಿ ದೊಡ್ಡ ಒತ್ತಡದ ಬಾಂಬ್ ಈ ನಮ್ಮ ಮಿದುಳು ಆಗುತ್ತಿತ್ತೇನೋ.

ಈ ರೀತಿಯ ಒಂದು ಯೋಚನೆ ಚಿಕ್ಕವರದಾಗಿದ್ದಾಗ ಬರುತ್ತಿರಲಿಲ್ಲ. ಒಂದಷ್ಟು ವಿವೇಕವನ್ನು ಕಲಿತ ಮೇಲೆ, ಪ್ರತಿಯೊಬ್ಬರ ಬಗ್ಗೆ ಪರಾಮರ್ಶೆ ಮಾಡುವ ಚೈತನ್ಯ ಬಂದ ಮೇಲೆ, ನಮ್ಮ ಮನಸ್ಸು ವಾರದ ಸಂತೆಯಾಗಿಬಿಟ್ಟಿದೆ. ಎಲ್ಲದನ್ನೂ,ಎಲ್ಲರನ್ನೂ ನೂರಾರು ದಿಕ್ಕಿನಲ್ಲಿ ಪರೀಕ್ಷೆ ಮಾಡಿ ಮಾಡಿ ಬರೀ ಗೊಂದಲಗಳ ಗೂಡು ಮಾಡಿಕೊಂಡು ಸಂತೋಷ ಎಂಬುದು ಇಲ್ಲೇ ಇಲ್ಲಾ ಬಿಡಿ! ಎಲ್ಲಾದರೂ ದೂರ ಒಂಟಿಯಾಗಿ ಬಾಳಬೇಕು. ಏನೂ ಬರೀ ಜೀವನದಲ್ಲಿ ಬೇರೆಯವರಿಗಾಗಿಯೇ ಬದುಕುವಂತಾಯಿತು.

ಅಪ್ಪ, ಅಮ್ಮ, ಗಂಡ, ಹೆಂಡತಿ, ಸ್ನೇಹಿತರು, ಮಕ್ಕಳು, ಆಫೀಸ್ ನವರು, ನೆರೆಹೊರೆಯವರು.. ಯಾರು ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ ಬಿಡಿ. ಅಂತ ಅನಿಸುವುದಕ್ಕೆ ಪ್ರಾರಂಭಿಸುತ್ತಿವಲ್ಲಾ ಯಾಕೆ?

ಇರುವುದನ್ನು ಬಿಟ್ಟು ಇಲ್ಲದೇ ಇರುವುದನ್ನು ಕಾಣುವುದೇ ಬದುಕಾ?

ಪ್ರತಿಯೊಂದು ಒಂದಷ್ಟು ದಿನಗಳಾದ ಮೇಲೆ ಬೋರ್ ಅಂತ ಅನಿಸಿಬಿಡುತ್ತಲ್ಲಾ?

ನಮಗೆಲ್ಲಾರಿಗೂ ಗೊತ್ತೂ ಒಂಟಿತನವು ಒಂದು ದಿನ ಮಹಾ ಜುಗುಪ್ಸೆಯಾಗಿ ಕಾಡುತ್ತದೆ. ಆದರೆ ಅದನ್ನು ಇಂದು ಯಾರೂ ಯೋಚಿಸುತ್ತಾರೆ? ಇರುವ ಈ ನಮ್ಮತನವನ್ನು ಕಳಚಿಕೊಳ್ಳುವುದೇ ನಮ್ಮ ಹೋರಾಟವಾಗಿರುತ್ತದೆ.ಕಾಣದ ಕಡಲಿಗೆ ಹಂಬಲಿಸುವುದೇ ನಮ್ಮ ಮನಸ್ಸಾಗಿರುತ್ತದೆ.

ಹೊಸಬರುಗಳು ಯಾರಾದರೂ ನಮ್ಮ ಬದುಕಿಗೆ ಪಾದಾರ್ಪಣೆ ಮಾಡಿದರೇ ಮುಗಿದೇ ಹೋಯಿತು. ಏನಂದರೂ ಅವರನ್ನು ನಾವುಗಳು ನಮ್ಮವರನ್ನಾಗಿ ಕಾಣಲಾರೆವು. ಕೊನೆಯತನಕ ಅವರು ಪರಕೀಯರೇ ಎಂಬ ರೀತಿಯಲ್ಲಿ ಕಾಣುತ್ತೇವೆ. ಇದು ಪ್ರತಿಯೊಬ್ಬರು ಪರಸ್ಪರವಾಗಿ ಕಾಣುವ ಮನೋಸ್ಥಿತಿ.

ನಾನು ಯಾಕೆ ಅವನಿಗಾಗಿ/ಅವಳಿಗಾಗಿ ಬದಲಾಗಬೇಕು. ನಾನು ಏಕೆ ತಗ್ಗಿ ಬಗ್ಗಿ ನಡೆಯಬೇಕು. ನಾನು ಇರುವುದೇ ಹೀಗೆ. ಅವನೇ/ಳೇ ಬದಲಾಗಲಿ. ಎಂಬ ದೋರಣೆಯನ್ನು ಪ್ರತಿಯೊಬ್ಬರೂ ಘರ್ಷಣೆಯ ರೂಪದಲ್ಲಿ ನಿತ್ಯ ನಮ್ಮ ಹತ್ತಿರದವರೊಂದಿಗೆ ನಮ್ಮ ಮನಸ್ಸಿನಲ್ಲಿಯೇ ಪ್ರತಿಭಟಿಸುತ್ತಿರುತ್ತೇವೆ. ಎದುರು ಬದುರು ಬಂದಾಗ ಮಾತ್ರ ಕೃತಕ ನಗೆ,ಮಾತು,ಅನುಕಂಪ ಪ್ರತಿಯೊಂದನ್ನು ಕೊಡುವ ನಾವು ಮನಸ್ಸಿನಲ್ಲಿಯೆ ಪರಸ್ಪರ ಕತ್ತಿ ಮಸೆಯುತ್ತಿರುತ್ತೇವೆ!

ಇದು ಯಾರಾದರೂ ಇರಬಹುದು. ನಮ್ಮ ನಮ್ಮ ಬದುಕಿಗೆ ಬಂದಂತಹ ಸ್ನೇಹಿತರು,ಸಂಗಾತಿ,ಅತ್ತೆ,ಸೂಸೆ ಹೀಗೆ ಹೊಸದಾಗಿ ಸೇರಿಕೊಂಡ ಎಲ್ಲಾರನ್ನು ಪರಸ್ಪರ ಕಾಣುವುದು ಅದೇ ಪವರ್ ಫುಲ್ ಅಟ್ಯಾಕ್ ಮೂಡ್ ನಲ್ಲಿ.

ಇದು ಬದಲಾಗುವುದೇ ಇಲ್ಲವಾ?

ಆಗದೇ ಏನೂ ಇದಕ್ಕೆ ಒಂದು ಸುಂದರ ಅನುಸರಿಸಿಕೊಂಡು ಹೋಗುವ ಮನೋಸ್ಥಿತಿ ಪ್ರತಿಯೊಬ್ಬರಲ್ಲೂ ಹುಟ್ಟಬೇಕು. ನಮ್ಮನ್ನು ನಾವುಗಳು ಕಡೆಗಣಿಸಿಕೊಳ್ಳದೇ ಜೊತೆಯಲ್ಲಿರುವವರ ಬಗ್ಗೆ ಗೌರವವನ್ನು, ಅವರ ಅಭಿರುಚಿಗಳು, ವರ್ತನೆಯನ್ನು ನಮ್ಮ ನೆರದಲ್ಲಿ ನೋಡುವ ಬದಲು ಅವರ ಸ್ಥಳದಲ್ಲಿ ನಿಂತು ನೋಡುವುದನ್ನು ಕಲಿಯಬೇಕು.

ನಮ್ಮದೇ ದೇಹದ ನಮ್ಮ ಕೈ ಕಾಲುಗಳ ಬೆರಳುಗಳೇ ಅಸಮಾನವಾಗಿರುವಾಗ. ನಾನು ಇದ್ದ ರೀತಿಯಲ್ಲಿಯೇ, ನಾನು ಚಿಂತಿಸುವ ರೀತಿಯಲ್ಲಿ, ನಾನು ಮಾಡುವ ರೀತಿಯಲ್ಲಿ ಬೇರೆಯವರು ಎಂದೆಂದಿಗೂ ಇರಲಿ ಎಂದುಕೊಳ್ಳುವುದು ಶತ ಮೂರ್ಖತನ!

ಈ ರೀತಿಯ ಮನೋದೋರಣೆಯನ್ನು ಬಿಟ್ಟು ಪ್ರೀತಿಯಿಂದ ಆ ಜೀವವು ನನ್ನ ರೀತಿಯಲ್ಲಿಯೇ ವೈವಿಧ್ಯಮಯಾಗಿರುವುದು. ಎಂದುಕೊಂಡರೇ ಎಷ್ಟೋ ನಿತ್ಯ ಕೌಟಂಬಿಕ ಜಗಳಗಳು, ವಿರೋಧಭಾಸಗಳು ಇಲ್ಲದೇ ನೆಮ್ಮದಿಯ ಸುಖ ತಾಣಗಳಾಗುವುದರಲ್ಲಿ ನಿಸಂಶಯವಿಲ್ಲ.

ಏನಂತೀರಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ