ಬುಧವಾರ, ಡಿಸೆಂಬರ್ 14, 2011

ಕಷ್ಟಗಳನ್ನು ಹೀರಿಕೊಂಡು ಬದುಕುವ ಚೈತನ್ಯ

ಪೇಸ್ ಬುಕ್ ನಲ್ಲಿ ನಾನು ಒಂದು ಸುಂದರವಾದ ಸಂದೇಶವನ್ನು ಓದಿದೆ "ಯಶಸ್ಸು ತಲೆಗೆ ಏರಬಾರದು, ಸೋಲನ್ನು ಹೃದಯಕ್ಕೆ ತೆಗೆದುಕೊಳ್ಳಬಾರದು".

ಹೌದು ನಮಗೆ ಗೊತ್ತಿಲ್ಲದೆ ಏನಾದರೊಂದು ನೋವು, ಅವಮಾನ, ಸೋಲು, ದುಃಖ, ಪ್ರೀತಿಪಟ್ಟದ್ದನ್ನು/ಪಟ್ಟವರನ್ನು ಕಳೆದುಕೊಳ್ಳುವುದು ನಮ್ಮ ಮನಸ್ಸನ್ನು ತುಂಬ ಚಿಕ್ಕದಾಗಿ ಮಾಡಿ ಬರಿಸಲಾರದ ನೋವನ್ನುಂಟು ಮಾಡುತ್ತದೆ. ಇದು ಸರ್ವೇಸಾಮಾನ್ಯವಾದ ಸಂಗತಿಯಾಗಿದೆ.

ಮನುಷ್ಯನಿಗೆ ಮಾತ್ರ ಈ ರೀತಿಯ ಭಾವನೆಗಳಾಗುತ್ತವೆ ಅನಿಸುತ್ತದೆ. ಪ್ರಾಣಿಗಳಿಗೂ ಸಹ ಈ ರೀತಿಯ ಅನುಭವವುಂಟಾಗುತ್ತಿರುತ್ತದೆ, ಆದರೇ ಅವುಗಳು ಎಲ್ಲಿ ವ್ಯಕ್ತಪಡಿಸಬೇಕು. ಕಣ್ಣಿನಲ್ಲಿ ಒಂದು ಹನಿ ನೀರು ಒರಸಬಹುದೇನೋ ಅದು ಪ್ರಾಣಿಗಳ ಪ್ರಪಂಚ. ಆದರೆ ನಿಜವಾಗಿಯೋ ಅವುಗಳಿಗೂ ಈ ನೋವಿನ ಅನುಭವ ಆಗೇ ಆಗಿರುತ್ತದೆ.

ನಮಗೆ ಬಾಲ್ಯದಿಂದ ಒಂದು ಕಲ್ಪನೆಯಿರುತ್ತದೆ. ಯಾವೊಂದು ಕಷ್ಟದ ಬದುಕು ಬೇಡದ ಮನಸ್ಸು. ಕಷ್ಟ ಅಂದರೇ ಮಾರು ದೂರ ಓಡಿ ಹೋಗುವ ಮನಸ್ಸು. ಸುಖ ಎಂದರೇ ಕೇಳುವುದೇ ಬೇಡ ಮನತುಂಬ ಸಂಭ್ರಮವೇ ಸಂಭ್ರಮ ಅದೇ ಬದುಕು.

ನಮ್ಮ ಹೆತ್ತವರು ಸಹ ಅದೇ ರೀತಿಯಲ್ಲಿ ತಮ್ಮ ಮಕ್ಕಳನ್ನು ಬೆಳಸಿ ಪೋಷಿಸುತ್ತಾರೆ. ತಾವು ಅನುಭವಿಸಿದ ಯಾವುದೇ ಕಷ್ಟ ಕಾರ್ಪಣ್ಯಗಳು ತನ್ನ ಮಗ/ಮಗಳು ಎಂದು ಅನುಭವಿಸುವುದು ಬೇಡ ಎಂದು. ಆದಷ್ಟು ಹೆಚ್ಚು ಸುಖವಾಗಿ ಬೆಳಸುವ ಆಕಾಂಕ್ಷೆ. ಅದು ಹೆತ್ತವರ ಕರುಳಿನ ಪ್ರೀತಿಯ ಕನವರಿಕೆ.

ಹಸಿವಿನ ಅನುಭವವಾದರೇ ತಾನೇ ಅನ್ನದ ರುಚಿ ಗೊತ್ತಾಗುವುದು.ಕಷ್ಟಪಟ್ಟರೇ ತಾನೇ ಸುಖದ ಮಹತ್ವ ಗೊತ್ತಾಗುವುದು.

ಆದರ ಅನುಭವವಕ್ಕೆ ಅಸ್ಪದ ಕೊಡದ ರೀತಿಯಲ್ಲಿ ನಮ್ಮ ಹೆತ್ತವರು ನಮ್ಮನ್ನು ಸಾಕುತ್ತಾರೆ. ಬರೀ ಸುಖದ ಕತೆಗಳನ್ನು ಹೇಳುತ್ತಾರೆ. ನೀನು ಹಾಗೇ ಓದಿದರೇ ಹೀಗೆ ಇರಬಹುದು.. ಅವನಂತೆ ನೀವು ಹಣ ಸಂಪಾದಿಸಬಹುದು.. ಅವನಂತೆ ಮಜಾ ಉಡಾಯಿಸಬಹುದು.... ಇದೆ ನಿತ್ಯ ಕತೆ.

ಕಷ್ಟಪಟ್ಟು ಜೀವನದಲ್ಲಿ ನರಳುವವರ ಮತ್ತು ಅದನ್ನು ದಾಟಿ ಉನ್ನತವಾದ ಸಾಧನೆಯನ್ನು ಮಾಡಿರುವವರ ಕಥೆಗಳನ್ನು ಕಿವಿಗೂ ಸಹ ಹಾಕಲು ಮನಸ್ಸು ಮಾಡುವುದಿಲ್ಲ.

ಒಂದು ಸುಂದರ ಆಶಾ ಗೋಪುರದಲ್ಲಿ ಇಂದಿನ ಪೀಳಿಗೆಯನ್ನು ಇಟ್ಟುಬಿಡುತ್ತಾರೆ ಅನಿಸುತ್ತದೆ. ಯಾವುದಕ್ಕೂ ಕೂರತೆಯಿಲ್ಲದ ಜೀವನ. ವಿದ್ಯಾರ್ಥಿ ಜೀವನ ಎಂದರೇ ಅಕ್ಷರಶಃ ಚಿನ್ನದ ಜೀವನವಾಗಿ ಪರಿವರ್ತಿಸಿರುತ್ತಾರೆ. ಮಗುವಿಗೆ ಕಷ್ಟ ಎಂದರೇ ಅದರ ಹೋಂ ವರ್ಕ್, ಪರೀಕ್ಷೆ, ನೋಟ್ಸ್ ಬರೆಯುವುದು, ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವುದು.. ಇತ್ಯಾದಿ ಮಾತ್ರ. ಇದನ್ನು ಬಿಟ್ಟು ಬೇರೆ ಬದುಕು ಇಲ್ಲವೆಂಬಂತೆ ಮಾಡಿಬಿಡುತ್ತೇವೆನೋ ಅಲ್ಲವಾ?

ನಾವುಗಳು ಆ ವಯಸ್ಸಿನಲ್ಲಿ ಯಾವುದನ್ನು ಮನಸ್ಸಿಗೆ ಹಚ್ಚಿಕೊಳ್ಳದಂತಹ ಬದುಕು. ಏನಕ್ಕೂ ಕೊರತೆಯಿಲ್ಲದಂತಹದು.. ಇದೇ ನಮ್ಮ ಜೀವನ ಅನಿಸುತ್ತದೆ. ಆದರೇ ಇನ್ನೂಂದು ಮಗ್ಗುಲಿನ ನಮ್ಮ ಜೊತೆಯಲ್ಲಿಯೇ ಇರುವ ನಿಕೃಷ್ಟವಾದ ಪ್ರಪಂಚವನ್ನು ಕಾಣದವಾಗಿರುತ್ತೇವೆ.




ನಮ್ಮ ಎಲ್ಲಾ ಶಿಕ್ಷಣದ ಬದುಕನ್ನು ಪೂರ್ತಿ ಮಾಡಿ ದುಡಿಮೆಯ ರಂಗಕ್ಕೆ ಬಂದಾಗ ನೋಡಿ, ಒಂದು ಅರ್ಧ ನಿಜವಾದ ಜೀವನವನ್ನು ಮನುಷ್ಯ ನೋಡಲು ಶುರುಮಾಡುತ್ತಾನೆ. ಅಲ್ಲಿಯು ಸಹ ಅವನಿಗೆ ಅವನ ಹಿಂದಿನ ಹೆತ್ತವರು ಕೊಟ್ಟಂತಹ ಸೇಫ್ ಜೋನ್ ಪರಿಧಿಗೆ ಹೋಗಲು ಯಾವಾಗಲೂ ತವಕಿಸುತ್ತಾನೆ. ಅದೇ ಮನುಷ್ಯನ ಮನಸ್ಸು ಮತ್ತು ಹೃದಯ ಅಲ್ಲವಾ.. ತಾನು ಕಲಿತ ಮತ್ತು ಅನುಭವಿಸಿದ ೨೦ ವರ್ಷದ ಸುಖದ ಯಾವುದೇ ಅಪಮಾನ, ನೋವು, ಸೋಲುಗಳ ಕನಸು ಸಹ ಇಲ್ಲದ ಜೀವನ ಗಾಥೆಯೇ ಪುನಃ ಪುನಃ ನೆನಪಾಗುತ್ತಿರುತ್ತದೆ.

ಒಂದು ಚಿಕ್ಕ ಸೋಲು ನಮ್ಮನ್ನು ದಿಗ್ಬ್ರಮೆಗೆ ದೂಡುತ್ತದೆ. ಯಾರೊಬ್ಬರ ಒಂದು ಮಾತು ನಮ್ಮನ್ನು ನಿಷ್ಠುರನ್ನಾಗಿ ಮಾಡುತ್ತದೆ. ನಮ್ಮ ಅಹಂಗೆ ಪೆಟ್ಟು ಕೊಡುತ್ತದೆ. ಆಗಲೇ ಏನೇನೂ ಯೋಚನೆಗಳು ಮನದ ಮೊಲೆಯಿಂದ ಪ್ರದರ್ಶನಗೊಳ್ಳುತ್ತವೆ.

ಐಯಮ್ ರೀಯಲೀ ಡಿಸ್ಟರ್ಬ್ಡ್!

ಟೋಟಲಿ ಡಿಪ್ರೇಸ್ಡ್!

ಪುಲ್ ಪರ್ಸ್ ನಲ್ ಪ್ರಾಬ್ಲಮ್!

ಹೀಗೆ ನಮ್ಮ ಬಾಯಿಂದ ನಿತ್ಯ ಬರಲು ಶುರುವಾಗುತ್ತವೆ... ಇದಕ್ಕೆಲ್ಲಾ ಕಾರಣ ಗೊತ್ತಿರುವ ವಿಚಾರವೇ..

ಮನುಷ್ಯ ಯಾವಾಗಲೂ ಯಶಸ್ಸಿನಲ್ಲಿಯೇ ತೇಲುತ್ತಿರುವಾಗ ನೋವಿನ,ಸೋಲಿನ ಜಳವನ್ನು ಹೇಗೆ ತಡೆದುಕೊಳ್ಳಬೇಕು ಎಂಬುದೇ ಗೊತ್ತಾಗದಂತಾಗಿರುತ್ತದೆ. ಅದರೇ ಅದೇ ನಿಜವಾದ ಜೀವನ ಅಲ್ಲಿ ನಮ್ಮ ಜೊತೆ ನಮ್ಮ ಹೆತ್ತವರುಗಳು ಇರುವುದಿಲ್ಲ.. ಆ ಸುಖವದ ಮನೆಯ ಬೆಚ್ಚನೆಯ ಅಸರೆಯಿರುವುದಿಲ್ಲ.

ಹೊರಗಡೆಯ ಈ ಕೆಟ್ಟ ಪ್ರಪಂಚದಲ್ಲಿ ನಾವುಗಳು ಸಹ ಸತ್ಯಸಂಧರಾಗಿ ಬದುಕಬಹುದೇ ಎಂಬ ಒಂದು ದೊಡ್ಡ ಪ್ರಶ್ನೇ ದುತ್ತನೆ ನಿಂತುಬಿಡುತ್ತದೆ. ಇದು ಯಾಕೆ ನನಗೆ ಮಾತ್ರ ಎಂಬ ನಿರಾಸೆಯ ಕೂಗು ಮನದಲ್ಲಿ ಮೂಡುತ್ತದೆ.

ಆದರೇ ಇದು ಪ್ರತಿಯೊಬ್ಬರಿಗೂ ಬರುವಂತಹ ಸಾಮಾನ್ಯ ಅಡ್ಡಿ ಅಡಚಣೆಗಳು. ಕೇಲವರು ತುಂಬ ಸಲಿಸಾಗಿ ಅವುಗಳನ್ನು ದಾಟುತ್ತಾರೆ. ಗೊತ್ತಿಲ್ಲದವರು ಅದರಲ್ಲಿಯೇ ನರಳುತ್ತಾ ತಮ್ಮ ಅದೃಷ್ಟ, ಅಸರೆಗಾಗಿ ಒಂದು ದಿಕ್ಕಿಗೆ ದೃಷ್ಟಿ ಹರಿಸುತ್ತಾರೆ.

ನೋಡಿ ನಮ್ಮ ಈ ನಗರದಲ್ಲಿ ಯಾವುದೇ ಪತ್ರಿಕೆಯ ಎರಡನೇಯ ಮತ್ತು ಮೂರನೇಯ ಪುಟವನ್ನು ತಿರುವಿದರೇ.. ಎಷ್ಟೋ ಯುವ ಜೀವಗಳು ನಿತ್ಯ ಆತ್ಮಹತ್ಯೆಗೆ ತುತ್ತಾದ.. ನಿತ್ಯ ಅಸ್ವಭಾವಿಕವಾದ ಅವಘಡಗಳು. ಈ ಮುಂದುವರಿದ ಎಲ್ಲಾ ರೀತಿಯ ಸೌಕರ್ಯವಿರುವ ಹೈಟೆಕ್ ಪಟ್ಟಣದ ಈ ನಿತ್ಯ ಸ್ಮಶಾನ ವಾರ್ತೆಗಳು ಯಾಕೆ.. ?

ನನಗೆ ಅನಿಸುತ್ತದೆ ನಾವುಗಳು ಕಲಿಯುವ ಬಾಲ್ಯದ ದಿನಗಳ ಶಿಕ್ಷಣ ವ್ಯವಸ್ಥೆಯಲ್ಲಿ ಇವುಗಳ ಬಗ್ಗೆ ನಿಜವಾದ ಜೀವನದ ಪಾಠಗಳನ್ನು ತಿಳಿಪಡಿಸುವ ಅವಶ್ಯಕತೆ ಇಂದು ಹೆಚ್ಚಾಗಿದೆ ಅನಿಸುತ್ತದೆ. ಪ್ರತಿಯೊಬ್ಬರನ್ನು ವ್ಯಕ್ತಿತ್ವವನ್ನು ದಿಟ್ಟವಾಗಿ ದೃಢವಾಗಿ ಬೆಳಸುವಂತಹ ಪಾಠ ಬೇಕಾಗಿದೆ. ಪ್ರತಿಯೊಂದು ಚಿಕ್ಕ ಚಿಕ್ಕ ನೋವು, ಅವಮಾನಗಳನ್ನು ಸೈರಿಸಿ ಮನುಷ್ಯನ ಮನಸ್ಸನ್ನು ಗಟ್ಟಿ ಮಾಡುವ ನೀತಿ ಪಾಠಗಳು ನಮಗೆ ಬೇಕಾಗಿದೆ ಅನಿಸುತ್ತದೆ.

"ಸೋಲು ಗೆಲುವಿಗೆ ಸೋಪಾನ" ಎಂಬ ಗಾದೆಯ ಮಾತನ್ನು ಪ್ರತಿಯೊಬ್ಬರು ನಂಬುವಂತಹ ಸಮಾಜವನ್ನು ಕಟ್ಟುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ. ಬರೀ ಹಣವೊಂದನ್ನೇ ಸಂಪಾದಿಸುವುದೇ ಜೀವನವಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿಯಬೇಕಾಗಿದೆ.

ಮನುಷ್ಯ ಭಾವನಾತ್ಮಕ ಜೀವಿ.. ಅದಕ್ಕೆ ಹಣ, ವಸ್ತುಗಳ ಸೌಕರ್ಯಕ್ಕಿಂತಹ ವ್ಯಕ್ತಿ ವ್ಯಕ್ತಿ ಸಂಬಂಧಗಳ ಸಹ ಬಾಳ್ವೆ ಮತ್ತು ಅಸರೆಯ ಸುಂದರ ಕೈ ಬೇಕು.. ಆಗ ಆ ಮನಗಳ ಬಾಳ್ವೆ, ಬದುಕು ಕಷ್ಟಗಳನ್ನು ಹೀರಿಕೊಂಡು ಬದುಕುವ ಚೈತನ್ಯ ಪ್ರತಿಯೊಬ್ಬರದಾಗುತ್ತದೆ..

ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ