ಬುಧವಾರ, ಜುಲೈ 25, 2012

ನನ್ನೂರು ನನ್ನ ಜನ


ಹುಟ್ಟೂರು ಅಂದರೇ ಅದು ನಮ್ಮದೇ ಊರು ಎಂಬ ಅಭಿಮಾನ. ಅಲ್ಲಿ ನಾವು ಹೇಗೆ ಇದ್ದರೂ ಇರಬಹುದು. ನಮಗೆ ಉಸಿರು ಕೊಟ್ಟ ಜಾಗ. ನಾವು ಬೆಳೆಯಲು ಕಾರಣವಾದ ಪರಿಸರವನ್ನು ನೀಡಿದ ಸ್ಥಳ. ಅಲ್ಲಿ ಏನೇಲ್ಲಾ ತನಗಳನ್ನು ಮಾಡಿರುತ್ತೇವೋ ಗೊತ್ತಿಲ್ಲ!

ನಮ್ಮನ್ನು ಒಂದು ಮರ್ಯಾದೆಯ ಸ್ಥಿತಿಗೆ ತಂದಿರುವ ತಾಣ ಅದು.ಅದೆ ನಮಗೆ ಕರ್ಮ ಭೂಮಿ. ಅಲ್ಲಿಂದಲೇ ನಮ್ಮ ಎಲ್ಲಾ ತಪ್ಪು ಒಪ್ಪುಗಳನ್ನು ಕಲಿತುಕೊಂಡಿರುತ್ತೇವೆ. ನಾವು ಮನುಷರು ಎಂದು ಹೇಳಿದ್ದೇ ಆ ನಮ್ಮ ಹುಟ್ಟಿದ ಭೂಮಿ.

ಜಗತ್ತಿನ ಯಾವೊಂದು ಜಾಗದಲ್ಲೂ ಸಿಗದ ನೆಮ್ಮದಿ ಸ್ವಾತಂತ್ರ್ಯ ನಮ್ಮ ಊರಿಗೆ ನಾವು ಬಂದಾಗ ಸಿಗುತ್ತದೆ. ಸುಖದ ಸುಪ್ಪತ್ತಿಗೆಯ ಮೇಲೆ ನಿತ್ಯ ಇದ್ದಾಗಲೂ ಇಲ್ಲದ ನೆಮ್ಮದಿಯ ರಾತ್ರಿಯ ನಿದ್ದೆ ಇಲ್ಲಿಯ ಒಂದು ಚಿಕ್ಕ ಹಳೆ ಚಾಪೆಯ ಮೇಲೆ ದೂರಕುತ್ತದೆ.

ಹಲವು ದಿನಗಳನ್ನು ದೂರದಲ್ಲಿ ಕಳೆದು ತನ್ನ ಊರಿಗೆ ವಾಪಾಸ್ಸಾಗುವಾಗ ಸಿಗುವ ಮನಸ್ಸಿನ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ ಬಿಡಿ. ಅದೇ ಮನುಷ್ಯನ ಸಂತೋಷದ ಉತ್ಕೃಷ್ಟ ಸಮಯ ಅನಿಸುತ್ತದೆ.

ಯಾವೊಂದು ಕಟ್ಟುಪಾಡುಗಳಿಲ್ಲದೆ ಎಲ್ಲಿ ಬೇಕೆಂದರಲ್ಲಿ ಧಾರಾಳವಾಗಿ, ನಿರಾಂತಕವಾಗಿ ಅಡ್ಡಾಡುವ ಜಾಗವೆಂದರೇ ನಮ್ಮೊರೂ ಮಾತ್ರ. ಅಲ್ಲಿ ಸಿಗುವ ಪ್ರತಿಯೊಬ್ಬರೂ ನಮ್ಮವರೇ. ಅವರಿಗೆ ನಾನು ಗೊತ್ತೂ ನನಗೆ ಅವರು ಗೊತ್ತೂ. ಯಾವೊದೇ ಸಂಕೋಚವಿಲ್ಲದೇ ಮಾಮೊಲಿ ಮನುಷ್ಯನಾಗಿ ವರ್ತಿಸುವೆವು.


ಯಾವುದೇ ಕೃತಕವಾದ ಮುಖವಾಡಗಳನ್ನು ನಮ್ಮ ಮುಖದ ಮೇಲೆ ನಾವು ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ.

ದಾರಿಯಲ್ಲಿ ಸಿಗುವ ನನ್ನೂರಿನ ಜನಗಳ ನೈಸರ್ಗಿಕವಾದ ಆ ನಗುವಿನ ಮುಂದೆ ಎಲ್ಲಾದನ್ನೂ ನಿವಾಳಿಸಿ ಹಾಕಬೇಕು.

ಅವರು ಕೇಳುವ ಕುಶಲೋಪಾಚಾರ ದೇವರೆ ನನ್ನ ಬಳಿ ಬಂದು ವಿಚಾರಿಸಿದಂತೆ!

ನಾನು ನಾನಾಗಿ ನನಗೆ ತಿಳಿದ ರೀತಿಯಲ್ಲಿ ಸಾಮಾನ್ಯನಾಗಿ ಅಡ್ಡಾಡಬಹುದು.

ಈ ರೀತಿಯ ಭಾವನೆಯನ್ನು ಪರಸ್ಥಳದಲ್ಲಿ ಕಾಣುವುದು ಅಸಾಧ್ಯ. ನಮಗೆ ಇಷ್ಟವಿಲ್ಲದಿದ್ದರೂ ಹತ್ತು ಹಲವಾರು ಮುಖವಾಡಗಳನ್ನು ಧರಿಸಿ ಬೇರೆಯವರಿಗಾಗಿ ಬದುಕನ್ನು ದೂಡಬೇಕಾದ ಸ್ಥಿತಿ.

ಅದಕ್ಕೆ ಇರಬೇಕು. ಹೊಸ ಸ್ಥಳಗಳಲ್ಲಿ ನಮ್ಮದಲ್ಲದ ಜಾಗಗಳಲ್ಲಿ ಏನೋ ಒಂದು ರೀತಿಯ ಆತಂಕದ ಕ್ಷಣಗಳು, ಭಯ ಮಿಶ್ರಿತವಾದ ನೋಟಗಳನ್ನು ಕಣ್ಣಿನಲ್ಲಿ ನಿತ್ಯ ಕಟ್ಟಿಕೊಂಡಿರಬೇಕಾಗುತ್ತದೆ. ಮನೆಯಿಂದ ಒಂದು ಹೆಜ್ಜೆ ಹೊರ ಇಡಬೇಕಾದರೂ ಹತ್ತು ಹಲವು ಬಾರಿ ಮುಂಜಾಗರುಕತೆಯಂತೆ ನನ್ನನ್ನೇ ನಾನು ಪರೀಕ್ಷಿಸಿಕೊಂಡು ಎಲ್ಲಾ ಸರಿ ಇದ್ದಂಗೆ ಇದೆ ಎಂದು ಕೊಂಡು ಬರುವುದು.

ಕೆಲವೇ ಪರಿಚಿತ ಮುಖಗಳ ಜೊತೆಯಲ್ಲಿ ಅಸಂಖ್ಯವಾದ ಅಪರಿಚತ ಜನಗಳ ನಡುವೆ ನನ್ನ ಬದುಕು ಜೀವನವನ್ನು ಸಾಗಿಸಬೇಕಾದ ಅನಿವಾರ್ಯತೆಯೇ ಈ ಪಟ್ಟಣ ಜೀವನ.

ಎಷ್ಟೊಂದು ಜನರಿದ್ದಾರೆ. ಜನರೇ ಜನರೂ ಪ್ರತಿಯೊಬ್ಬರೂ ಎಲ್ಲಾ ಜಾಗದಲ್ಲೂ ಜೊತೆಯಲ್ಲಿಯೇ ಸಾಗುತ್ತಾರೆ. ಅದರೇ ಯಾರೊಬ್ಬರೂ ನನ್ನನ್ನು "ನೀನೂ ಯಾರು?" ಎಂದು ಕ್ಯಾರೇ ಅನ್ನುವುದಿಲ್ಲ. ಎಲ್ಲರೂ ಅವರವರ ಪಾಡಿಗೆ ಅವರದೇಯಾದ ಲೋಕದಲ್ಲಿ ದೂರದಲ್ಲಿ ನಿಲ್ಲುತ್ತಾರೆ.

ನನಗೆ ಅನಿಸುತ್ತದೆ ಇದೆ ಭಾವನೆ ಅವರುಗಳಿಗೆಲ್ಲಾರಿಗೂ ನಿತ್ಯ ಆಗುತ್ತಿರಲೇ ಬೇಕು.

ನಿಜ! ಅವರು ನನ್ನಂತೆಯೇ ಮನುಷರಲ್ಲವಾ?

ಎಷ್ಟೊಂದು ವಿಪರ್ಯಾಸ ಎಲ್ಲಾ ಇದ್ದು ಏನೂ ಇಲ್ಲದ ಜೀವನ.

ನನ್ನೂರು ಅದಕ್ಕೆ ನನಗೆ ಹೆಚ್ಚು ಇಷ್ಟವಾಗುವುದು. ಪರ ಊರಿನಿಂದ ನನ್ನೂರುಕಡೆಗೆ ಮುಖ ಮಾಡಿದ ಕ್ಷಣದಿಂದ ನನ್ನ ಮನೋಲೋಕವೇ ಹಾರುವ ಹಕ್ಕಿಯಾಗಿ ಬಿಡುತ್ತದೆ. ಸರ್ವ ಸ್ವತಂತ್ರದ ಲತೆಯಾಗಿ ಎಲ್ಲೆಲ್ಲೂ ಹರಿದುಬಿಡುತ್ತದೆ. ಅತಿ ಹೆಚ್ಚು ಆನಂದಮಯವಾದ ಕ್ಷಣ ಇದಾಗಿರುತ್ತದೆ ಅನಿಸುತ್ತದೆ.

ಬಿಗಿಯಾದ ಒಂದು ವಾತವರಣದಿಂದ ತಿಳಿಯಾದ ತಣ್ಣನೆಯ ಹಚ್ಚ ಹಸಿರಿನ ಸಾಮಾನ್ಯವಾದ ನಿಶಬ್ಧವಾದ ಸುಂದರ ಸ್ವರ್ಗದಂತಹ ತಾಣಕ್ಕೆ ಹೋದ ಅನುಭವ.

ಅಲ್ಲಿ ನಾನು ಕಾಲೂರುವ ಭೂ ಮಣ್ಣಿನ ಸ್ಪರ್ಷದಿಂದ ಪ್ರಾರಂಭಿಸಿ ನಾನು ನೋಡುವ ಪ್ರತಿಯೊಂದು ನೋಟವು ನನ್ನದೆ ಅನಿಸುವ ಫಿಲಿಂಗೇ ನನ್ನ ಮನೋ ಲಹರಿಗೆ ಉತ್ತೇಜನ ನೀಡುತ್ತದೆ.

ಅದೇ ನಾ ಓಡಾಡಿದ ಕೇರಿ, ಮುರುಕಲು ಗುಡಿಸಲುಗಳು, ಹಳೆಯ ಮನೆಗಳು, ಮನೆಯ ಮುಂದೆ ಹರಿಯುವ ಕಪ್ಪನೆಯ ಚರಂಡಿ, ದಾರಿಯಲ್ಲಿ ಎದುರಾಗುವ ಅವರಿವರ ಎಮ್ಮೆ,ಎತ್ತು,ಧನ ಕರುಗಳು, ಭೀದಿ ನಾಯಿಗಳು, ಹಳ್ಳಿಯಲ್ಲಿನ ಹಣ್ಣು ಹಣ್ಣು ಮುದುಕರು,ಅಜ್ಜಿಯರುಗಳು, ಕಮ್ಮನೇ ಸಗಣಿ ಮಣ್ಣಿನ ವಾಸನೆಗಳು. ಅವರಿವರು ಆಡುವ ಸುಮ್ಮನೇ ಸಣ್ಣ ಸಣ್ಣ ಜಗಳಗಳು. ಇತ್ಯಾದಿ ಇತ್ಯಾದಿ ನಾನು ನಿಜವಾಗಿಯೋ ಈ ಲೋಕದಲ್ಲಿಯೇ ಇದ್ದೇನೆ ಎಂಬ ಅರಿವನ್ನುಂಟು ಮಾಡುತ್ತವೆ.

ರಾತ್ರಿಯೋ ಹಳ್ಳಿಗೆ ಹಳ್ಳಿಯೇ ನಿರವ ಮೌನದ ಕತ್ತಲಲ್ಲಿ ಕರಗಿ ಲೀನವಾದಂತೆ ಕಾಣಿಸುತ್ತದೆ. ಆಕಾಶವನ್ನು ದಿಟ್ಟಿಸಿದರೇ ಪ್ರತಿಯೊಂದು ನಕ್ಷತ್ರಗಳ ಮಿಳುಕು! ಅವುಗಳೆಲ್ಲಾ ನಮ್ಮ ಊರಿಗೆ ಮಾತ್ರ ಸೇರಿದವರು ಮತ್ತು ನನ್ನವರೇ ಅನಿಸುತ್ತದೆ.

ಯಾವೊಂದು ಕೃತಕವಾದ ಯಂತ್ರ ಮಂತ್ರದ ಹಾವಳಿಯಿಲ್ಲದೇ ಕೇವಲ ಊರು ನಾಯಿಗಳು,ಧನ ಕರುಗಳ ದ್ವನಿ ಮತ್ತು ನಮ್ಮ ಹಳ್ಳಿಗರ ಒಂದೇರಡು ಮಾತುಕತೆಗಳು ಅಷ್ಟೊಂದು ದೂರದಿಂದಲೂ ನನ್ನ ಕಿವಿಯ ಮೇಲೆ ಬೀಳುತ್ತಿರುತ್ತದೆ. ಅದೇ ಸಂಜೆಯ ನನ್ನ ಸವಿ ನಿದ್ದೆಗೆ ಸಿಹಿಯಾದ ಜೋಗುಳ

ಊರು ಚಿಕ್ಕದಾದರಂತೂ ಮುಗಿಯಿತು. ಸುತ್ತಾ ಹೊಲ, ಕಾಡುಗಳಿಂದ ಮುತ್ತಿಕೊಂಡು ಒಂದು ಹೊಳೆಯುವ ದ್ವಿಪವಾಗಿ ನನ್ನೂರು ಕಾಣುವುದೋ ಏನೋ!


ಮಳೆ,ಬೆಳೆಯ ಸಮಯದಲ್ಲಿ ಒಂದು ಸಲ ಹೊಚ್ಚ ಹೊಸದಾಗಿ ಇಡೀ ಊರೇ ತನ್ನನ್ನು ತಾನು ತೊಳೆದುಕೊಂಡ ಅನುಭವ. ಊರಿಗೆ ಹೊಂದಿಕೊಂಡು ಹರಿಯುವ ಹಳ್ಳವೇ ನಮ್ಮೊರ ಗಂಗಾಮಾತೆಯಾಗಿ ನಮ್ಮನ್ನೂ ಪೊರೆಯುವವಳು ಅನಿಸುತ್ತದೆ. ನಮ್ಮ ಎಲ್ಲಾ ಕೆಟ್ಟದ್ದನ್ನೂ ವರುಷಕ್ಕೆ ಒಮ್ಮೆ ಪರಿಪೂರ್ಣವಾಗಿ ತೊಳೆಯಲು ಬರುವ ದೇವತೆ ಅನಿಸುತ್ತದೆ.

ಹಬ್ಬ ಹರಿದಿನಗಳು ಕೇವಲ ನಮ್ಮ ಮನೆಯ ಹಬ್ಬವಾಗಿರುವುದಿಲ್ಲ. ಅದು ಊರು ಹಬ್ಬವಾಗಿರುತ್ತದೆ. ಅವರಿವರ ಮನೆಯಲ್ಲಿ ಮಾಡುವ ಪ್ರತಿಯೊಂದು ಸಿಹಿ ತಿಂಡಿಗಳ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ನಮ್ಮ ಮನೆಯಲ್ಲಿಯೇ ನಾವುಗಳು ಉಣ್ಣಬೇಕು ಎಂದು ಏನೂ ಇಲ್ಲಾ. ಪ್ರತಿಯೊಬ್ಬರದು ನಮ್ಮ ಮನೆಯೇ. ಆ ಮೂಲಿ ಮನೆ, ಈ ಕೊನೆ ಮನೆ, ಈ ಮಧ್ಯ ಮನೆ, ಈ ಎತ್ತರದ ಮನೆ, ಆ ದೊಡ್ಡ ಮನೆ,ಈ ಕೆಳಗಿನ ಮನೆ ಹೀಗೆ ಎಲ್ಲಾ ನನ್ನದೇ ಅನಿಸುವಂತೆ ಹೊಂದಿಕೊಂಡು ಸವಿಯುವ ರುಚಿಯಾದ ಊಟ-ನೋಟ.

ಇದೇ ಹೊಸ ಸ್ಥಳಗಳಿಗೂ ನಾನು ಹುಟ್ಟಿದ ಊರಿಗೂ ಇರುವ ಅಜಗಜಾಂತರವಾದ ವ್ಯತ್ಯಾಸ. ಇಲ್ಲಿ ನಾನು ನಾನೇ. ನಾನು ನಾನು ಮಾತ್ರ. ಕಷ್ಟಕ್ಕೂ ಸುಖಕ್ಕೂ ನಾನೇ ವಾರಸುಧಾರ. ನನಗೆ ನಾನೇ ಒಬ್ಬನೇ ಯಜಮಾನ!

ಪ್ರತಿಯೊಬ್ಬರೂ ಹುಟ್ಟಿದ ಊರಿಗೆ ಕೊಡುವ ಒಂದು ಉನ್ನತ ಸ್ಥಾನವನ್ನು ಬೇರೆ ಯಾವ ಊರು, ಸ್ಥಳಕ್ಕೆ ಕೊಡಲಾರರು.

ಅಲ್ಲಿ ಮಾತ್ರ ನಮ್ಮನ್ನು ನಾವು ಹೆಚ್ಚು ಹೆಚ್ಚು ಪರಿಪೂರ್ಣವಾಗಿ ನೋಡಿಕೊಳ್ಳಲು ಮಾತ್ರ ಸಾಧ್ಯ.

ನನಗೆ ಅನಿಸುತ್ತದೆ. ಇಂದಿನ ಈ ಯಾಂತ್ರಿಕ ಯುಗದ ಕಾರಣ ನಮ್ಮ ಅನೇಕ ಹಿರಿಯರು ತಮ್ಮ ಮಕ್ಕಳು ಮರಿಗಳ ಕೆಲಸ ಕಾರ್ಯಗಳ ನಿಮಿತ್ತಾ ತಮ್ಮ ಉಸಿರಾಗಿ ತಮ್ಮನ್ನೂ ಪೊರೆದ ಹುಟ್ಟಿದ ಊರುಗಳನ್ನು ಬಿಟ್ಟು ವಲಸೆಯೋಪಾದಿಯಲ್ಲಿ ನಗರವಾಸಿಗಳಾಗಿ ತಮ್ಮ ಮಕ್ಕಳ ಜೊತೆಯಲ್ಲಿ ತಮ್ಮ ಅಂತಿಮ ಕ್ಷಣಗಳನ್ನು ಕಳೆಯವಾಗ... ಆ ತಮ್ಮ ಬಾಲ್ಯವನ್ನು, ತಮ್ಮನ್ನು ತಿದ್ದಿ ತೀಡಿದ ಆ ತನ್ನೂರನ್ನೂ ತುಂಬಾನೆ ಮೀಸ್ ಮಾಡಿಕೊಂಡು ಕೂರಗುತ್ತಿರುವವರು ಎಂದು ನನಗೆ ಅನಿಸುತ್ತದೆ.

ಯಾಕೆಂದರೇ ಇಲ್ಲಿ ನಿತ್ಯ ಮುಂಜಾನೆ, ಸಂಜೆ ನಗರದ ಪಾರ್ಕಗಳಲ್ಲಿ ಕಾಣುವ ಈ ನನ್ನ ವಯಸ್ಸಾದ ಹಿರಿಯರ ಬಾಡಿದ ಮುಖಗಳನ್ನು ನೋಡಿದರೇ ಹಾಗೆ ಅನಿಸುತ್ತದೆ!


ನೀವು ಏನ್ ಹೇಳ್ತಿರಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ