ಭಾನುವಾರ, ಏಪ್ರಿಲ್ 11, 2021

ಚೈತ್ರ ಮಾಸ

 ಕಾಲ ಎಲ್ಲವನ್ನೂ ಬದಲಾಯಿಸುವುದು ಎನ್ನುವುದಕ್ಕೆ ಈ ವಸಂತ ಋತುವೇ ಸಾಕ್ಷಿ. ವಸಂತ ಕಾಲವೆಂದರೇ ಕೇಳ ಬೇಕೇ?  ನಿಸರ್ಗದ ಪ್ರತಿ ಗಿಡ ಮರಗಳು ತಮ್ಮ ತಮ್ಮ ಹಸಿರು ಹಣ್ಣೆಲೆಗಳನ್ನುದುರಿಸಿಕೊಂಡು ಚಿಗುರು ಎಲೆಗಳನ್ನು ಮೈತುಂಬಿಕೊಳ್ಳುವ ದಿನಗಳು.


ಎಲೆಗಳು ಚಿಗುರುವುದಕ್ಕೂ ಮೊದಲು ಪ್ರತಿ ಗಿಡ ಮರಗಳು ಮೈತುಂಬ ಹೊವಿನ ಮೊಗ್ಗುಗಳನ್ನು ತುಂಬಿಕೊಂಡಿರುವುವು. 


ಇಲ್ಲಿ ಅಮೇರಿಕಾದಲ್ಲಿನ ಪರಿಸರವೇ ವಿಚಿತ್ರ ಮತ್ತು ವಿಸ್ಮಯ! ವಿಂಟರ್ ದಿನಗಳಲ್ಲಿ ಎಲ್ಲಾ ಗಿಡ ಮರಗಳು ಎಲೆಗಳಿಲ್ಲದ ಕೇವಲ ಎಲುಬುಗಳನ್ನು ಮೈವೊತ್ತಂತೆ ತಮ್ಮ ರೆಂಬೆ ಕೊಂಬೆಗಳೊಂದಿಗೆ  ತಣ್ಣನೆಯ ಮಂಜಿಗೆ, ಚಳಿಗಾಳಿಗೆ ಎದೆವೊಡ್ಡಿ ನಿಂತು ಜಯಶಾಲಿಗಳಾದಂತೆ ಸ್ಪ್ರಿಂಗ್ ದಿನಗಳಿಗೆ ಕಾದಿರುವುವು.  


ಇದೀಗ ಇಲ್ಲಿಯು ವಸಂತ ಕಾಲ ಶುರುವಾಗುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಪ್ರತಿ ಮರ ಬಳ್ಳಿಗಳು ಬಗೆ ಬಗೆಯ ಮೊಗ್ಗುಗಳನ್ನು ಹೊವು ಮತ್ತು ಚಿಗುರುಗಳನ್ನು ಹೊಮ್ಮಿಸಿಕೊಳ್ಳುತ್ತಾ ನಾವುಗಳು ಸಹ ಹೊಸ ಜೀವನಕ್ಕೆ ತಯಾರಾಗಿದ್ದೇವೆ ಎಂಬಂತೆ ಕಣ್ ಮನಗಳಿಗೆ ಹಬ್ಬವನ್ನೂಣಿಸುತ್ತಿವೆ. 


ಇಲ್ಲಿನ ಪ್ರತಿ ರಸ್ತೆಯ ಬದಿಯ ಮತ್ತು ಚಿಕ್ಕ ಪುಟ್ಟ ಪಾರ್ಕಗಳಲ್ಲಿನ ಪುಟ್ಟ ಮತ್ತು ದೊಡ್ಡ ಮರಗಳು ಮೈದುಂಬಿಕೊಂಡಿರುವ ಬಿಳಿ ಹೊಗಳನ್ನು ಪೂರ್ತಿಯಾಗಿ ನೋಡಿದರೇ.. ಮದುವಣಗಿತ್ತಿಯ ಸ್ವಾಗತಕ್ಕೆ ಹತ್ತು ಹಲವು ಮುತ್ತೈದೆಯರು ಮೈತುಂಬ ಹೊಚ್ಚ ಹೊಸ ಬಿಳಿ ರೇಶ್ಮೆಯ ಸೀರೆಯನ್ನು ಮೈತುಂಬ ಉಟ್ಟುಕೊಂಡು ಸಡಗರದಿಂದ ಕಾಯುತ್ತಿರುವಂತೆ ಭಾಸವಾಗುತ್ತಿದೆ. 


ಹತ್ತು ಹಲವು ಬಗೆಯ ಭಿನ್ನ ಭಿನ್ನ ರೀತಿಯ ಬಣ್ಣಗಳು. ಬಗೆ ಬಗೆಯ ವೈವಿಧ್ಯಮಯವಾದ ಸಸ್ಯ ವರ್ಗಗಳು ತಮ್ಮ ಪ್ರಬೇಧದ ಗುಣಕ್ಕೆ ತಕ್ಕಂತೆ ಬಿಳಿ, ಹರಿಸಿಣ, ಕೆಂಪು, ನೆರಲೆ ಬಣ್ಣಗಳ ಹೊವುಗಳನ್ನು ನಳನಳಿಸಿಕೊಂಡು ಸಿಂಗಾರ ಮಾಡಿಕೊಂಡು ಹೊಳೆಯುತ್ತಿವೆ. 


ಕಳೆದ ಕೆಲವು ದಿನಗಳಿಂದ ಹೊಗಳ ಮೊಳೆತ ಕಂಡರೇ ಸ್ವರ್ಗವೇ ಭುವಿಗೆ ಬಂದಂತಹ ಅನುಭವ.


ಪ್ರತಿ ಸಸ್ಯ ಸಂಕೂಲವು ಆರೋಗ್ಯಕರವಾಗಿ ದಷ್ಟಪುಷ್ಟವಾಗಿ ನಳನಳಿಸುತ್ತಿವೆ. 


ಇಂದೋ ಮುಂಜಾನೆಯಿಂದ ತುಂತುರು ಮಳೆ ಹನಿ.  ಇದು ವಂಸಂತೋತ್ಸವ. ಇಡೀ ಭೂಮಿಯನ್ನೇ ಸಾರಿಸಿ ಹೂರೆಸಿ ನೀರು ಸಿಂಪಡಿಸಿ ಸಂಭ್ರಮದ ದಿನಕ್ಕೆ ಸಜ್ಜು ಮಾಡಿದಂತಹ ಮಣ್ಣಿನ ವಾಸನೆ. 


ಹಾಗೆಯೇ ಬಾನೇ ಭೂಮಿಯ ಶೃಂಗಾರವನ್ನು ಕಂಡು ಕರಗಿ ಕರಗಿ ಜೇನು ಹನಿದಂತೆ ಆಗೊಮ್ಮೆ ಹೀಗೊಮ್ಮೆ ಮಳೆ ಹನಿಯ ಮಂತ್ರ ಸ್ಪರ್ಶ! ಮರ ಗಿಡಗಳು ಬಳ್ಳಿಗಳ ಎಲೆಗಳು, ಹೊವಿನ ಮೇಲಿನ ನೀರಿನ ಹನಿಯನ್ನು ಭಾನೇ ಕೈಯಾರೆ ಜೇನಿನ ಹನಿಯನ್ನು ಹನಿಸಿದಂತಹ ಚಿತ್ರಣ!


ಯಾಕೋ ಏನೋ ಮುಂಜಾನೆಯಿಂದ ಸೂರ್ಯನ ಕಿರಣಗಳು ಧರೆಯ ವೈಭೋಗವನ್ನು ಕಂಡು ನಾಚಿ ನೀರಾದಂತಹ ಅನುಭವ! ಧರೆಯ ಹಸಿರು, ಬಿಳಿ, ಕೆಂಪು, ಹರಿಸಿಣ ಬಣ್ಣಗಳ ರಂಗಿನ ವೈಯಾರಕ್ಕೆ ಬೆಕ್ಕಸ ಬೆರಗಾಗಿ ತಾನು ಹೇಗೆ ತಾನೇ ನಿನ್ನನ್ನು ಕಣ್ಣ ತುಂಬಿಕೊಳ್ಳಲಿ ಎಂದು ಮೊಡದ ಮರೆಯಲ್ಲಿ ಕಣ್ಣ ಮುಚ್ಚಾಲೆಯಲ್ಲಿ  ದಿನಕರನು ಮುಳುಗಿರುವಂತೆ ಅನಿಸುತ್ತಿದೆ. 


ಹಾಗೊಮ್ಮೆ ಹೀಗೊಮ್ಮೆ ಕದ್ದು ಮುಚ್ಚಿ ಕಣ್ಣು ತುಂಬಿಕೊಳ್ಳುತ್ತಿರುವ ನವ ತರುಣನ ರೀತಿಯಲ್ಲಿ ಬೆಳ್ಳಿಯ ಸೂರ್ಯನ ಕಿರಣಗಳ ಬಿಂಬ ಮಳಯ ತುಂತುರು ಜೊತೆಯಲ್ಲಿ ಕಾಣಿಸುತ್ತಿದೆ. 


ಇನ್ನೇನೂ ನಾನು ಈಗ ಹೋಗಲೇ ಬೇಕು ಭೂಮಿಯ ಇನ್ನೊಂದು ಭಾಗಕ್ಕೆ ಎಂದುಕೊಂಡು ಆಗಿದ್ದಾಗಲಿ ಈ ಸುಂದರಮಯವಾದ ನೋಟವನ್ನು ಹೀರಿಕೊಳ್ಳೊಣ ಎನ್ನುವಂತೆ ರವಿಯ ಕಿರಣಗಳ ಚಿತ್ತಾರ  ಈ ಸಿಹಿ ಸಂಜೆಯಲ್ಲಿ.


ಮಳೆ ನಿಂತ ಮೊಡದ ನಡುವಿನ  ಕಿರಣಗಳ ಸಪ್ಪಳ. ಇದೇ ಸವಿ ಸಮಯವೆಂಬಂತೆ ನಬೋಮಂಡಲದಲ್ಲಿ ಸಪ್ತ ವರ್ಣಗಳ ಕಾಮನಬಿಲ್ಲು ಮೂಡಿ ಧರಣಿ ಮಂಡಲದ ವಸಂತಾಗಮನದ ಉತ್ಸವಕ್ಕೆ ಹೊಸ ಚಿತ್ತಾರವನ್ನು ಬಿಡಿಸಿದಂತಹ ಅನುಭವ.


ಮಕ್ಕಳು ಮರಿಗಳು ಮನೆಯಿಂದ ಹೊರಬಂದು ಈ ಸುಂದರ ಸಂಜೆಯ ವರ್ಣಮಯ ದೃಶ್ಯವನ್ನು ಸಿಹಿ ಸಿಹಿಯಾಗಿ ಕಣ್ಣು ತುಂಬಿಕೊಳ್ಳುತ್ತಾ ನಿಂತಿದ್ದೇ ಬಂತು.


ಈ ಹಬ್ಬದೊಕುಳಿಯನ್ನು ಕಂಡು ಪ್ರತಿ ಮನಸ್ಸುಗಳು ಹೊಸ ವರುಷದ ಸ್ವಾಗತಕ್ಕೆ ಸಜ್ಜಾದಂತೆ ಕಂಡುಬಂತು. ಅದಕ್ಕೆ ಇರಬೇಕು ಯುಗಾದಿ ಈ ವಸಂತ ಕಾಲ ಚೈತ್ರ ಮಾಸದಲ್ಲಿಯೇ ಪ್ರತಿ ಭಾರಿ ಬರುವುದು.  ಆಶ್ಚರ್ಯವಲ್ಲವೇ? 


ಇದೇ ನಿಜವಾದ ವರುಷ ಮತ್ತು ಹರುಷ! ಪ್ರಕೃತಿಯೇ ನವ ಜನುಮ ಪಡೆದಂತೆ ಮತ್ತು ನಡೆದಂತೆ.



ಶುಭಾಶಯಗಳು ಹೊಸ ದಿನಗಳಿಗೆ!


ಗುರುವಾರ, ಡಿಸೆಂಬರ್ 31, 2020

ಹೊಸ ವರುಷಕ್ಕೆ ಹೊಸ ರಂಗಿನ ಚಿಂತನೆ

 ಹೊಸ ವರುಷದ ಹೊಸ್ತಿಲಿನಲ್ಲಿ ನಿಂತಿರುವಾಗ ಹಳೆಯ ವರುಷ ಹೇಗಿತ್ತು ಎಂದು ಹಿಂತಿರುಗಿ ನೋಡಿದರೇ ಕೊಂಚಾ ಬೇಜಾರು, ಸ್ವಲ್ಪವೆ ಖುಷಿ, ಸಾಕಷ್ಟು ದುಃಖ ದುಗುಡದ ಮಹಾನ್ ಬೋರು ದಿನಗಳನ್ನು ಕಳೆದೆವು ಅನಿಸುತ್ತದೆ. ಹತ್ತಿರವಿದ್ದರೂ ದೂರವಿದ್ದಂತಹ ಮಹಾನ್ ಜೈಲು ದಿನಗಳೇ ಸರಿ.. ಉಫ್!!!


ಈ ೨೦೨೦ ಯಾವ ವರುಷದಂತೆಯೂ  ಹಿಂದಿನ ವರ್ಷಗಳಂತಿರಲಿಲ್ಲ. ಇದು ಸಂಪೂರ್ಣ ವಿಭಿನ್ನವಾದ ವರುಷವೇ ಸರಿ. ಇಡೀ ಮನುಕುಲದ ಜೀವನ ಶೈಲಿಯನ್ನೆ ಬದಲಾಯಿಸಿದ ಸಂವತ್ಸರ.


ಕೇವಲ ರೋಗ ರೋಗ... ಕರೋನಾವೆಂದು ತಲೆಕೇಡಿಸಿಕೊಂಡು ಕೂರುವ ಮಟ್ಟಿಗೆ! ನಮ್ಮೆಲ್ಲಾರ ಜೀವನ ಅಯೋಮಯವಾಗಿಸಿದ ಭಯಾನಕವಾದ ವರುಷ. 


ಯಾರೊಬ್ಬರ ಕಲ್ಪನೆಗೂ ನಿಲುಕದ ರೀತಿಯಲ್ಲಿ ತಮ್ಮಲ್ಲಾದ ಬದುಕಿನ ಚಿತ್ರಣವನ್ನು ಕೇವಲ ಮನೆಯಲ್ಲಿಯೇ ತಿರುಗ ಮುರುಗ ನೋಡಿಕೊಂಡು ಕಳೆಯುವಂತೆ ಮಾಡಿಬಿಟ್ಟಿತು.


ಮುದ್ದು ಮುದ್ದು ಮಕ್ಕಳಿಂದ ಹಣ್ಣು ಹಣ್ಣು ಮುದುಕರವರೆಗೂ ಪ್ರತಿಯೊಬ್ಬರೂ ಹೀಗೂ ತಮ್ಮ ಜೀವನವನ್ನು ಒಂದು ದಿನ  ಯಾಕೆ? ವರುಷಗಳಟ್ಟಲೆ ಕಳೆಯಬಹುದು ಎಂಬುದನ್ನು ತಿಳಿಸಿಕೊಟ್ಟಿತು. 


ಎಷ್ಟೋ ವರುಷಕ್ಕೆ ಹಿಮ್ಮುಕವಾಗಿ ಚಲಿಸಿದಂತಹ ಅನುಭವವನ್ನು ಕೊಟ್ಟಿತು. 


ಏನಿದ್ದರೂ ಏನೂ ಪ್ರಯೋಜನವಿಲ್ಲವೆನಿಸಿದ್ದಂತೂ ನಿಜ!!


ಶಾಲಾ ಕಛೇರಿಗಳು, ಮದುವೆ ಸಮಾರಂಭಗಳು, ಸಂಚಾರ ವಾಹಾನಗಳು,ರೈಲು, ವಿಮಾನಗಳು ಎಲ್ಲಾವನ್ನು , ಎಲ್ಲಾ ದೇಶಗಳನ್ನು ಜಬರದಸ್ತ ಬಂದ ಮಾಡಿ ನೀವಾಯಿತು ನಿಮ್ಮ ಸಂಸಾರವಾಯಿತು ಎಂಬಂತೆ ಆದಷ್ಟು ಕಡಿಮೆ ಜನರಿದ್ದರೇ ಸೇಫ್! ಮನೆಯೇ ಸುರಕ್ಷತೆಯೆಂಬ ಪಾಠವನ್ನು ಕಲಿಸಿದ ವೈರಸ್ ವರುಷ.


ಎಂಥೆಂತಹ ಬ್ಯುಸಿನೇಸ್ ಸಾಮ್ರಾಜ್ಯಗಳಿಗೆ ದುಃಸಪ್ನವಾದ ವರುಷ. ಆರ್ಥಿಕತೆಯ ಏಳ್ಗೆಯ ಬಗ್ಗೆ ಜಗತ್ತಿನ ಪ್ರತಿಯೊಂದು  ದೇಶದ ಸರ್ಕಾರಗಳು ಚಿಂತಾಜನಕವಾಗಿ ಯೋಚಿಸುವಂತೆ ಮಾಡಿದ ವರುಷ.


ಈ ವರುಷದವರೆಗೂ ಜಗತ್ತಿನಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಸಾವಿರ ಪರಿಹಾರ ಕಂಡುಹಿಡಿಯುವ ವಿದ್ವಾಂಸಪಡೆಗೆ ತಲೆನೋವಾದ ವರುಷ. 


ಆರೋಗ್ಯವೊಂದೇ ಸರ್ವತ್ರ ಸಾಧನ ಎಂಬುದನ್ನು ಕಠೋರವಾಗಿ ತಿಳಿಸಿಕೊಟ್ಟ ವರುಷ.


ಒಂದಷ್ಟು ಜನಕ್ಕೆ ಶುರುವಿನಲ್ಲಿ ಖುಷಿಯಾಗಿ ಮನೆಯಲ್ಲಿರಬಹುದು, ಚಿಕ್ಕ ಬ್ರೇಕ್ ಆದ ಮೇಲೆ ಈ ಲಾಕ್ ಡೌನ್ ಕಳೆಯುತ್ತದೆ ಅನಿಸಿತ್ತು. ಆದರೇ ಒಂದು ದಿನ, ವಾರ, ತಿಂಗಳುಗಳು ಕಳೆದ ಮೇಲೆ ಬೋರ್ ಅನಿಸತೊಡಗಿತು. 


ಮನೆಯಿಂದಲೇ ಎಲ್ಲಾ ನಡೆಸಲುಸಾಧ್ಯವಿಲ್ಲ ಅಲ್ಲವಾ? 


ಸಾಪ್ಟವೇರ್- ಆನ್ ಲೈನ್ ಎಂಬುದು ಸುಲಭ ಮತ್ತು ಅದೇ ಒಂದು ಕಾರ್ಯ ಕ್ಷೇತ್ರ ಹೇಗೋ ನಡೆಯುತ್ತಿದೆ. ಆದರೇ ಬೇರೆ ಬೇರೆ ಉದ್ಯೋಗಳಿಗೆ ಭಾರಿ ಆಘಾತವನ್ನುಂಟು ಮಾಡಿದ್ದಂತೂ ನಿಜ. ನಿರುದ್ಯೋಗವನ್ನು ಹೆಚ್ಚಿಸಿ ಜನರನ್ನು ದಿಕ್ಕರಿಸಿದ ವರುಷ ವೈರಸ್ ಜನನದ ಈ ಕಾಲ.


ಇಷ್ಟಾದರೂ ೨೦೨೧ ಭವಿಷ್ಯದ ಸುಂದರ ವರುಷವಾಗಿರುವುದು ಎಂಬುದನ್ನು ಮರೆಸುವಂತೆ ಈಗ ಅದೇ ವೈರಸ್ ಹೊಸ ರೂಪದಲ್ಲಿ ಈ ವರುಷದ ಕೊನೆ ತಿಂಗಳಿನಲ್ಲಿ ಇದೀಗ ಕಾಣಿಸಿಕೊಳ್ಳುತ್ತಿರುವುದು ಪ್ರತಿಯೊಬ್ಬರನ್ನು ವ್ಯಾಕ್ಸಿನ್ ಬರುತ್ತಿರುವ ಈ ಸಮಯದಲ್ಲೂ ಮತ್ತೆ ಬೆವರುವಂತೆ ಮಾಡಿದೆ.


ಪ್ರತಿಯೊಬ್ಬರ ವೈಕ್ತಿಕ ಜೀವನಗಳು ಬಹಳ ಬೀಕರವೆನಿಸತೊಡಗಿದೆ. ಈ ಒಂದು ಕಾಯಿಲೆ ಬೇರೆ ರೋಗಗಳಿಗೆ ದಾರಿ ಮಾಡಿಕೊಟ್ಟಂತೆ ಅನಿಸುತ್ತಿದೆ. ಈ ಭಯದ ವಾತವರಣ ಅದು ಹೇಗೆ ಸರಿಯಾಗುವುದೋ? ಬಂದಿರುವ ಈ ಲಸಿಕೆಗಳು ಈ ರೋಗದ ವರುಷಕ್ಕೆ ಮುಂದಿನ ವರುಷದಲ್ಲಿ ರಾಮಬಾಣವಾಗುವುದೊ ಇಲ್ಲವೋ ಎಂಬುದನ್ನು ಆ ದೇವರೇ ವರ ರೊಪದಲ್ಲಿ ಕೊಡಬೇಕಾಗಿರುವುದು.


ಆದರೂ ಬದುಕಿನಲ್ಲಿ ಯಾವುದೂ ಮುಖ್ಯ ಮತ್ತು ಅಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿಯುವಂತೆ ಮಾಡಿದ ಕೀರ್ತಿ ಕರೋನಾಕ್ಕೆ ಸಲ್ಲಬೇಕು. ಆದರೂ ಯಾವುದು ಸತ್ಯ ಯಾವುದು ನಿತ್ಯ ಎಂಬುದನ್ನು ಮರೆತು ಬದುಕುವುದಲ್ಲವಲ್ಲಾ?


ಹೊಸ ವರುಷಕ್ಕೆ ಹೊಸ ರಂಗಿನ ಚಿಂತನೆ ನಿತ್ಯವಿರಲಿ!!!



ಗುರುವಾರ, ನವೆಂಬರ್ 26, 2020

2020 - Kid Dairy

 ಮೊದ ಮೊದಲು ಶಾಲೆಗಳಿಗೆ ಕೇವಲ ಕೆಲವೇ ದಿನಗಳವರೆಗೆ ರಜಾವಿರಬೇಕು ಅನಿಸಿತ್ತು. ರಜೆ ಇದ್ದರೇ ಮಕ್ಕಳಾದ ನಮಗೆ ಖುಷಿಯೇ ಸರಿ.  


ಆದರೂ ಅಮೆರಿಕಾದಲ್ಲಿ ಶಾಲೆಗಳಿಗೆ ಹೋಗುವ ಸಂತಸವೇ ಬೇರೆ. ನನ್ನಂತ ಯಾವೊಂದು ಚಿಕ್ಕ ಚಿಕ್ಕ ಮಕ್ಕಳು ಸ್ಕೂಲಿಗೆ ಹೋಗವ ಮಜಾವನ್ನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಅದೂ ಇದೇ ಜೀವನದಲ್ಲಿ ಪ್ರಥಮ ಬಾರಿಗೆ ಶಾಲಾ ಬಸ್ ನಲ್ಲಿ ಹೋಗುವುದು, ಹೊಸ ಶಾಲೆಯಲ್ಲಿನ ವಾತಾವರಣ ನಮ್ಮ ಮಗು ಮನಸ್ಸುಗಳಿಗೆ ವಿಸ್ಮಯವನ್ನೇ ಉಂಟು ಮಾಡಿತ್ತು. 


ನಿಮಗೆ ಗೊತ್ತಾ ಶಾಲೆ ಶುರುವಾದ ದಿನದಿಂದ ಈ ಉದ್ದನೆಯ ಆಕಸ್ಮಿಕ ರಜೆಯನ್ನು ಕೊಡುವವರೆಗೂ ನಾನೆಂದೂ ಒಂದು ದಿನವೂ ರಜೆ ಯನ್ನು ತೆಗೆದುಕೊಂಡಿರಲಿಲ್ಲ!


ಮುಂಜಾನೆಯಲ್ಲಿ ಶಾಲೆಗೆ ಹೋಗಬೇಕೆಂದು ಬೇಗ ಎದ್ದೇಳುವುದು, ಸ್ನಾನ ಮಾಡುವುದು, ಬ್ರೇಕ್ ಪಾಸ್ಟ ಎಂದು ದೋಸೆಯನ್ನು ತಿಂದು, ರೇಡಿಯಾಗಿ ನಮ್ಮ ಅಕ್ಕಪಕ್ಕದ ಸ್ನೇಹಿತರೊಡಗೂಡಿ ಬಸ್ ಬರುವುದಕ್ಕೆ ಮುಂಚೆ ಬಸ್ ಸ್ಟಾಪ್ ಗೆ ಹೋಗುವುದು. ಇರುವ ಇಷ್ಟು ಸಮಯದಲ್ಲಿ ಮಾಡುತ್ತಿದ್ದ ನಮ್ಮ ತರಲೆಗಳಿಗೆ ಹೆತ್ತವರು ಶಾಕ್ ಆಗುತ್ತಿದ್ದರು. 


ಅದು ಹೇಗೆ ಈ ಮಕ್ಕಳು ಬಸ್ ನಲ್ಲಿ ಮತ್ತು ಶಾಲೆಯಲ್ಲಿ ನಡೆದುಕೊಳ್ಳುತ್ತಾರೋ ಎಂದು ತಲೆ ಕೆರೆದುಕೊಂಡು ನಮ್ಮನ್ನು ಬಸ್ ಹತ್ತಿಸಿ ಮನೆಗೆ ಬರುತ್ತಿದ್ದರು. ಆ ಮಜವೇ ಈಗ ಇಲ್ಲ. ಬೇಗ ಏಳುವುದು ಬೇಕಾಗಿಲ್ಲ. ಬೇಗ ಬೇಗ ಸ್ನಾನ ಮಾಡಿ , ತಿಂಡಿ ತಿನ್ನುವ ಜರೂರತೆ ಇಲ್ಲದ ಮಕ್ಕಳ ಬದುಕಾಗಿದೆ. 


ಉಫ್ ತರಾವೇರಿ ಒಂದು ವರುಷವಾಯಿತು. ಶುರುವಲ್ಲಿ ಸಮ್ ರ್ ಬ್ರೇಕ್ ಮುಗಿದ ಮೇಲೆ ಮತ್ತೆ ಶಾಲೆಗಳು ಶುರುವಾಗಬಹುದು ಎಂದು ಅನಿಸಿತ್ತು. ಆದರೇ ಈ ಕಾಯಿಲೆ ಎಲ್ಲದಕ್ಕೂ ಗೋಲಿಯನ್ನು ಹೊಡೆದುಬಿಟ್ಟಿದೆ. ಕರೊನಾ ಕರೋನಾ ಎಲ್ಲಿಯು ಈ ಒಂದು ಶಬ್ಧ ಬಿಟ್ಟರೆ ಬೇರೆ ಮಾತಿಲ್ಲ. ತಲೆ ಕೆಟ್ಟು ಹೋಗುವಷ್ಟು ಈ ಶಬ್ಧ ಆಕ್ಸ್ ಪರ್ಡ್ ಡಿಕ್ಷನರಿ ಸೇರಿಬಿಟ್ಟಿರಬೇಕು.


ನಮ್ಮಂತೆಯೇ ನಮ್ಮ ಅಪ್ಪನಿಗೂ ಧೀರ್ಘವಾದ ಮನೆಯಿಂದಲೇ ಕೆಲಸ ಮಾಡಿ ಎಂದು ಹೇಳಿದ್ದಾರೆ. ಅವರು ಸಹ ಬೆಳಿಗ್ಗೆ ಬೆಳಿಗ್ಗೆ ಎದ್ದು ಕೆಲಸ ಶುರುಮಾಡುತ್ತಾರೆ. ಅವರುಗಳ ಕೆಲಸ ದೇವರಿಗೆ ಪ್ರೀತಿ. ಹಗಲು ರಾತ್ರಿ ಕೆಲಸ ಮತ್ತು ಕೆಲಸ. ಅದು ಏನೂ ಕಂಪ್ಯೂಟರನಲ್ಲಿ ಕುಟ್ಟುತ್ತಾರೋ ಗೊತ್ತಿಲ್ಲ. 


ಶುರುವಲ್ಲಿ ಶಾಲೆಯಿಂದ ಸ್ವಲ್ಪ ಓದುವುದಕ್ಕೆ ಕೊಡುತ್ತಿದ್ದರು. ಅದನ್ನು ನಮ್ಮ ಅಮ್ಮ ಸ್ವಲ್ಪ ಓದಿಸಿ ಪೂರ್ತಿ ಆಟವಾಡುವುದಕ್ಕೆ ಬಿಟ್ಟು ಬಿಡುತ್ತಿದ್ದರು. ಖುಷಿಯಿಂದ ಮನೆಯಲ್ಲಿಯೇ ಎಲ್ಲಾ ಜೀವನ. ಅದೇ ಬೇಜಾರು ವಿಷಯ. ಹೊರಗೆ ಯಾರೂ ಗುಂಪು ಗೂಡಿ ಹೋಗುವಾಗಿಲ್ಲ. ಪಾರ್ಕ್ ಇಲ್ಲ. ಗೇಮ್ ಇಲ್ಲ. ಸ್ನೇಹಿತರಂತೂ ಇಲ್ಲವೇ ಇಲ್ಲ. ಯಾಕೇ ಬೇಕು ಈ ರಜಾ ಅನಿಸಲೂ ಜಾಸ್ತಿ ದಿನಗಳೇನು ಬೇಕಾಗಲಿಲ್ಲ. 


ಶಾಲೆಯವರೂ ಏನೂ ಮಾಡದಂತಾಗಿ ಕರೋನಕ್ಕೆ ಹೆದರಿದಂತೆ ಕಾಣಿಸುತ್ತದೆ. ನಿಮ್ಮ ಕಿಂಡರ್ ಗಾರ್ಡ್ ನ್ ಶೈಕ್ಷಣಿಕ ವರುಷ ಪೂರ್ತಿಯಾಗಿದೆ ಮತ್ತು ನಿಮ್ಮನು  ತೆರ್ಗಡೆ ಮಾಡಿ ಒಂದನೇ ತರಗತಿ ಕಳಿಸಿದ್ದೇವೆ. ಮುಂದಿನ ಶೈಕ್ಷಣಿಕ ವರುಷದಲ್ಲಿ ಮತ್ತೆ ಸಿಗೋಣವೆಂದು ಒಂದು ಮೈಲ್ ಕಳಿಸಿ ಹ್ಯಾಪು ಮೊರೆ ಮಾಡಿಕೊಂಡು ಊಶ್ ಎಂದಿರಬೇಕು. ಪುನಃ ನನ್ನ ನೆಚ್ಚಿನ ಟೀಚರ್ಸ್ ಗಳನ್ನು ನೋಡುವ ಅವಕಾಶವೇ ಇಲ್ಲದಂತಾಯಿತು.


ಯಾವಾಗ ಈ ಕರೋನಾ ಶಬ್ಧ ಕಣ್ ಮರೆಯಾಗುವುದು ಎಂದು ಕಾದಿದ್ದೇ ಬಂದಿದ್ದು. ಸಮ್ಮರ್ ರಜೆಯೊತ್ತಿಗೆ ಏನಾದರೂ ಆಗಿ ಶಾಲೆ ಶುರುವಾಗುವುದು ಅನಿಸಿದ್ದು ಸುಳ್ಳಾಯಿತು. 


ನನ್ನ ಜೀವನದ ಮೊದಲನೇ ತರಗತಿಗೆ ಶಾಲೆಗೆ ನಲಿಯುತ ಕುಣಿಯುತ ಬಸ್ ನಲ್ಲಿ ಹೋಗುವ ಅದೃಷ್ಟ ಪುನಃ ಇಲ್ಲವಾಯಿತು. ಎಲ್ಲಾ ಶಾಲೆಗಳು ಪೂರ್ತಿ ಆನ್ ಲೈನ್ ಎಂದು ಆಗಸ್ಟನಲ್ಲಿ ಪ್ರಾರಂಭಿಸಿದರು.  ತಾಯಿಯೇ ಮೊದಲ ಗುರು ಎಂಬಂತೆ ನಮ್ಮ ಅಮ್ಮನೇ ನನ್ನ ಗುರುಗಳು. ಅವಳೇ ಎಲ್ಲಾ ಸಬ್ಜಕ್ಟಗಳನ್ನು ಹೇಳಿ ಕೊಡುವ ಆಲ್ ರೌಂಡರ್ ಮೇಡಮ್.


ಈ ಒಂದು ಚಿಕ್ಕ ವೈರ್ ಸ್ ಬಗ್ಗೆ ಟಿ.ವಿ ಯಲ್ಲಿ ಕೇಳಿ ಕೇಳಿ ಸಾಕಾಗಿದೆ. ನಮ್ಮ ಪೂರ್ತಿ ಜೀವನ ಶೈಲಿಯೇ ಬದಲಾಗಿದೆ. ಎಲ್ಲಿಯೂ ಹೊರಗಡೆ ಹೋಗದೇ ಆಟವಾಡದ ಪೂರ್ತಿ ಒಂದು ವರುಷ ನೆನಸಿಕೊಂಡರೇ ಇಂದಿನ ಮಕ್ಕಳೇ  ಮುಂದಿನ ಪ್ರಜೆಗಳು ಎಂದು ಹೇಳುವ ಕೋಟ್ ಬದಲಿಸಬೇಕು. ನಾವುಗಳು ಹೀಗಾಗಲೇ ಕಿರಿ ವಯಸ್ಸಿನಿಂದ ಹಿರಿ ವಯಸ್ಸಿಗೆ ಬಂದಂತಾಗಿದ್ದೇವೆ.  


ನಾನಯಿತು ನನ್ನ ಪುಟ್ಟ ಪುಟ್ಟ ಆಟದ ಸಾಮನುಗಳು, ಟಾಯ್ಸ್ ಗಳಲ್ಲಿ ನಿತ್ಯ ಆಟವಾಡುವುದು. ನನ್ನ ಮಮ್ಮಿ ಪಪ್ಪರ ಜೊತೆಯಲ್ಲಿ ನಿತ್ಯ ಕಾಲ ಕಳೆಯುವುದಾಗಿದೆ. ಸಿಕ್ಕಾಗ ಓದುವುದು, ಬೇಜಾರಾದಾಗ ಆಟವಾಡುವುದು, ಟಿವಿ ನೋಡುವುದು ಹೀಗೆ ನಿತ್ಯ ಜೀವನ.


ಯಾರೊಬ್ಬರೂ ಖುಷಿಯಾಗಿ ಈ ದಿನಗಳನ್ನು ನೆನೆಯುವುದಿಲ್ಲವೆನಿಸುತ್ತದೆ. ಹೌದು ಅನುಮಾನವಿಲ್ಲದೆ ಹೊರಗೆ ಹೋಗಿ ಅಡ್ಡಾಡುವ ದಿನಗಳನ್ನು ಕಿತ್ತುಕೊಂಡ ವೈರಸ್ಗೆ ನನ್ನ ದಿಕ್ಕಾರವಿರಲಿ.


ಮನುಷ್ಯ ಸಂಘ ಜೀವಿ ಎಂದು ಎಲ್ಲೊ ಓದಿದ ಸಾಲು.. ಆದರೇ ಅದನ್ನೇ ಸುಳ್ಳು ಮಾಡುವಂತೆ ಈ ಒಂದು ವರುಷ ನೀನಾಯಿತು ನಿನ್ನ ಮನೆಯವರಾಯಿತು ಎಂದು ಮನೆಯಲ್ಲಿಯೇ ಉಳಿಯುವಂತಾಗಿದ್ದು ದುಃಖಕರ ಸಂಘತಿ. 


ಎಲ್ಲಿಯು ಟೂರ್ ಇಲ್ಲದ, ಯಾರ ಜೊತೆಯಲ್ಲಿಯು ಖುಷಿಯ ಕ್ಷಣಗಳನ್ನು , ಪಾರ್ಟಿಗಳನ್ನು, ಹಬ್ಬ ಹರಿ ದಿನಗಳನ್ನು, ದೇವರು ದೇವಸ್ಥಾನಗಳನ್ನು ನೋಡದೇ ಈ ವರುಷವನ್ನು ಕಳೆದಿದ್ದು ಬೇಜಾರು ವಿಷಯ.


ನಾಲ್ಕು ಗೋಡೆಯಲ್ಲಿ ಹೇಗೆ ಜೀವನವನ್ನು ಕಳೆಯಬಹುದು? ಅದು ಖುಷಿಯಾಗಿ ಹಿರಿ ತಲೆಗಳಂತೆ ಎನ್ನುವುದನ್ನು ಚೆನ್ನಾಗಿಯೇ ಈ ರೋಗ ಇಡೀ ಜಗತ್ತಿಗೆ ಕಲಿಸಿಕೊಟ್ಟಿದೆ. ಜೈಲ್ ಜೀವನಕ್ಕೂ ನಮ್ಮ ಜೀವನಕ್ಕೂ ಯಾವುದೇ ವ್ಯತ್ಯಾಸವಂತು ಕಾಣುತ್ತಿಲ್ಲ.  


ದೊಡ್ಡ ದೋಡ್ಡ ಡಾಕ್ಟರ್ ಗಳಿಗೆ ಚಿಕಿತ್ಸೆ ಕಂಡು ಹಿಡಿಯಲು ಕಷ್ಟವಾಗಿರುವ ಈ ವೈರಸ್ಸೇ ೨೦೨೦ ರ ಬೇಸ್ಟ್ ಥಿಂಗ್ ಆಗಿದೆ. ಕೋವಿಡ್ ೧೯ ನ್ನು ಯಾರು ಕಟ್ಟಿ ನಿಲ್ಲಿಸಲಾರದ ಮಟ್ಟಿಗೆ ಪುನಃ ೨೦೨೧ ಗೆ ಹೋಗುತ್ತಿರುವುದು ಬೇಜಾರು ಆಗುತ್ತಿದೆ. 


ಸುಖ ಸುಮ್ಮನೇ ಜಗತ್ತಿನಲ್ಲಿ ಎಷ್ಟೊಂದು ಮಂದಿ ಈ ರೋಗಕ್ಕೆ ಗೊತ್ತಿಲ್ಲದ ರೀತಿಯಲ್ಲಿ ತುತ್ತಾಗುತ್ತಿರುವುದು ಭಯವನ್ನುಂಟು ಮಾಡುತ್ತಿದೆ. 


ಪುನಃ ಎಲ್ಲಾ ಗೆಳೆಯರೊಂದಿಗೆ ಮಕ್ಕಳು ಮಕ್ಕಳಾಗಿ ಬಯಲಲ್ಲಿ ಆಡುತ್ತಾ, ಕುಣಿಯುತ್ತಾ ಬೆಳೆಯುವ ದಿನಗಳ ಬೇಗ ಬೇಗ ಬರಲಿ ಎಂದು ಕೇಳುವುದು ನಿರಂತರವಾಗಿದೆ.  ನಮ್ಮ ಜೀವನದ ಈ ಒಂದು ವರುಷದ ಬಾಲ್ಯ ಜೀವನವನ್ನು ಯಾರು ಮರಳಿ ನಮಗೆ ಕೊಡಲಾರರು. ಆದರೂ ಈ ಕೆಟ್ಟ ರೋಗದಿಂದ ಬಚವಾಗಿ ಬದುಕಿದರೇ ಅದೇ ಭಾಗ್ಯ ಎನ್ನುವಂತಾಗಿದೆ. 


ಮಾಸ್ಕ್ ಒಂದೇ ರಾಮ ಭಾಣವಾಗಿದ್ದರೂ ನಮ್ಮಂತಹ ಚಿಕ್ಕ ವಯಸ್ಸಿನವರು ಮತ್ತು ವಯಸ್ಸಾದವರೂ ಯಾವಗಲೂ ಮಾಸ್ಕ್ ಧರಿಸಿ ವೈರಸ್ ನಿಂದ ಬಚವಾಗುವುದು ಕಷ್ಟವೇ.

ಬುಧವಾರ, ಏಪ್ರಿಲ್ 29, 2020

ಮುದ್ದು ಮುದ್ದು ಮನಸ್ಸು

ಮಕ್ಕಳ ಮನಸ್ಸು ಮುದ್ದು ಮುದ್ದು ಮೃದು. ಅವುಗಳ ಕುತೂಹಲವನ್ನು ಯಾರು ವಯಸ್ಸಾದರೂ ಇಟ್ಟುಕೊಂಡಿರುತ್ತಾರೊ ಅವರುಗಳೆ ಪ್ರತಿ ಕ್ಷಣವನ್ನು ಸುಖವಾಗಿ ಕಳೆಯಬಲ್ಲವರಾಗಿರುತ್ತಾರೆ.

ಗಮನಿಸಿ ಮಕ್ಕಳಿಗಿರುವ ಈ ಗುಣ ಎಂಥವರನ್ನು ಅಚ್ಚರಿಯನ್ನುಂಟು ಮಾಡುತ್ತಾದೆ.

ಇಷ್ಟೊಂದು ಪರೀಕ್ಷಿಸುವ ಪರಿಯನ್ನು ಗಮನಿಸಿದರೇ ಇವನು ನಿಜವಾಗಿಯು ಮುಂದೆ ದೊಡ್ಡ ವಿದ್ವಾಂಸನಾಗುತ್ತಾನೆ ಎಂದು ಹೆತ್ತವರು ಮನಸ್ಸಿನಲ್ಲಿಯೇ ಗುಣಕಾರವನ್ನು ಮಾಡಿಕೊಂಡಿರುತ್ತಾರೆ.

ಹೌದು ಎಲ್ಲಾ ಮಕ್ಕಳು ಚಿಕ್ಕವರಾಗಿರುವಾಗ ತುಂಬ ಚುರುಕೇ. ಆ ಚುರುಕು ಪ್ರಕೃತಿದತ್ತವಾಗಿಯೇ ಅವರಿಗೆ ಬಂದಿರುತ್ತದೆ. ಅದನ್ನು ಅವರುಗಳು ಅವರಲ್ಲಿ ಕಾಪಾಡಿಕೊಂಡು ಹೆಚ್ಚು ಹೆಚ್ಚು ಬೆಳೆಯುವಂತೆ ಹೆತ್ತವರು ಮತ್ತು ಸುತ್ತಲಿನ ಪರಿಸರ ಪೋಷಿಸಬೇಕು.

ನೋಡಿ ನೀವು ಏನಾದರೂ ವಸ್ತುವನ್ನು ಕೈಯಲ್ಲಿ ಇಟ್ಟುಕೊಂಡಿದ್ದರೆ, ತಕ್ಷಣ ನಿಮ್ಮ ಚಿಕ್ಕ ಮಗ ಅಥವಾ ಮಗಳು ಬಂದು ತನ್ನ ಕೈಗೆ ತಗೆದುಕೊಳ್ಳುತ್ತದೆ. ನೀವುಗಳು ಏನಾದರೂ ಪುಸ್ತಕನ್ನು ತೆಗೆದು ಓದಲು ಶುರು ಮಾಡಿದರೇ ಅದೇ ಮಗು ತಕ್ಷಣ ಬಂದು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ತನ್ನ ಕೈಗೆ ತೆಗೆದುಕೊಳ್ಳಲು ಶುರು ಮಾಡುತ್ತದೆ.

ನೀವು ಏನಾದರೂ ಮಾಡಿ ಚಿಕ್ಕ ಮಕ್ಕಳಿಗೆ ತಾನು ಅದನ್ನೇ ಮಾಡಬೇಕು ಎಂಬ ಕುತೂಹಲ. ಅದೇ ಮಕ್ಕಳು  ತಾವುಗಳು ಏನೂ ಅನ್ನುವುದನ್ನು ನಾವು ತಿಳಿಯುವಂತೆ ಮಾಡುತ್ತವೆ.

ಚಿನ್ನಾರಿಗಳಿಗೆ ದಣಿವೇ ಇಲ್ಲದ ಹೊಸತನವನ್ನು ಕಾಣುವ, ತಾವುಗಳು ಏನಾದರೂ ಹೊಸತನದ ಆಟ ಪಾಠವನ್ನು ಕಾಣುವ ಕನಸು.


ಅದೇ ಮಕ್ಕಳ ಬದುಕು. ನಿತ್ಯ ಏನಾದರೊಂದನ್ನು ಕಲಿಯುವುದೇ ಆಗಿರುತ್ತದೆ. ಹಾಗೆಯೇ ಪ್ರತಿ ಮಗುವು ಎಲ್ಲಾವನ್ನು ಕಲಿತು ತಾನೇ ಕಲಿಯಾಗುವುದು.


ನಾವುಗಳು   ಏನನ್ನು ಹೇಳಿ ಕೊಡುವ ಅಗತ್ಯವಿಲ್ಲ! ಮಕ್ಕಳೇ ನಮಗೆ ಜೀವನದಲ್ಲಿ ಹೇಗೆಲ್ಲಾ ನಿತ್ಯ ನಿರಂತರ ಕಲಿಯಬೇಕು ಎಂಬುದನ್ನು  ತಮ್ಮ ಮೊಲಕ ಹೇಳಿ ಕೊಡುತ್ತಾರೆ.

ನೋಡಿ ಮಕ್ಕಳು ತಮ್ಮ ಒಂದನೇಯ ವಯಸ್ಸಿನಿಂದ ಹೇಗೆಲ್ಲಾ ಕಲಿಯುತ್ತಾ ಕಲಿಸುತ್ತಾ ಹೆತ್ತವರನ್ನು ಸಂತೋಷದಲ್ಲಿ ಮುಳುಗೇಳಿಸಿರುತ್ತಾರೆ.

ಹೊಸ ಹೊಸ ಆಟಿಕೆಗಳನ್ನು ಆರಿಸುವುದು, ಅದರ ಜೊತೆಯಲ್ಲಿ ಆಟವಾಡುವುದು. ಇನ್ನೊಂದು ದಿನ ಏನಾದರೂ ಹೊಸ ಗೊಂಬೆಯನ್ನು ತಂದರೇ ಹಳೆಯದನ್ನು ಆ ಸಮಯಕ್ಕೆ ಒಗೆದು ಹೊಸದರ ಜೊತೆಯಲ್ಲಿಯೇ ಹಗಲು ರಾತ್ರಿ ಕಳೆಯುವುದು.

ಇದು ವಯಸ್ಸು ಬೇಳೆದಂತೆ ಕುತೂಹಲದ ಮನಸ್ಸನ್ನು ಹೆಚ್ಚು ಮಾಡಿಕೊಂಡು ವೇಗವಾಗಿಯೇ ಮಾತು, ಓದುವುದು ಹೀಗೆ ಪ್ರತಿಯೊಂದನ್ನು ಕಲಿಯುತ್ತಾರೆ.

ಮಾತು ಕಲಿಯುವುದೇ ಒಂದು ವಿಸ್ಮಯ!  ದಾ, ಡಾ ಎಂದು ಒಂದಕ್ಷರ ಮಾತನಾಡುವ  ಮಗ /ಮಗಳು ಇವನೇ/ಳೇ ಎನಿಸುತ್ತದೆ. ಚಿಕ್ಕ ಚಿಕ್ಕ ಕಥೆ ಪುಸ್ತಕವನ್ನು ಓದುವುದನ್ನು ನೊಡಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ.

ಓದುವುದನ್ನು ನೋಡುವುದೇ ಇನ್ನೊಂದು ಸುಂದರ ಸುಖ.

ಒಂದು ಸಾಲು ಓದುವುದು ಅದಕ್ಕೆ ಹೊಂದುವ, ಗೊತ್ತಿರುವ, ನೆನಪಿರುವ  ವಿಷಯ ಹೇಳುವುದು ಅಥವಾ ಪ್ರಶ್ನೇ ಮಾಡುವುದು.

ಒಮ್ಮೊಮ್ಮೆ ಹೆತ್ತವರಿಗೆ ಸಾಕು ಸಾಕಾಗುತ್ತದೆ. ಎಷ್ಟು ಅಂಥಾ ಹೇಳಿದ್ದೇ ಹೇಳಿದ ಉತ್ತರಗಳನ್ನು ಕೊನೆಯಿರದ ಪ್ರಶ್ನೆಗಳಿಗೆ ಉತ್ತರಿಸುವುದು.  ಅವುಗಳೋ ಪುನಃ ಪುನಃ ಅದೇ ಪ್ರಶ್ನೆಗಳನ್ನು ಕೇಳುವುದು.

ಮಕ್ಕಳಿಗೆ ಎಲ್ಲಾ ಸಂಗತಿಗಳು ಸಂತೋಷದ ಆಟ.

ಅದಕ್ಕೆ ಇರಬೇಕು ಪ್ರತಿ ಮಗುವು ಎಂದಿಗೂ ದಣಿವಾಗಿದೆ ಎಂದು ಬಾಯಿ ಮಾತಿಗೂ ಹೇಳುವುದಿಲ್ಲ.

ಆ ಕ್ಷಣದಲ್ಲಿ ಬದುಕುವ ಜೀವಿ ಎಂದರೇ ಮಗು. ಇರುವ ಕ್ಷಣವನ್ನು ಸುಂದರವಾಗಿ ಪರಿಪೂರ್ಣವಾಗಿ ಅನುಭವಿಸುತ್ತದೆ.

ಪ್ರತಿಯೊಂದನ್ನು ಮನನ ಮಾಡಿಕೊಂಡು ಅರ್ಥೈಸಿಕೊಂಡು ಮನದಲ್ಲಿಯೇ ಇಟ್ಟುಕೊಳ್ಳುತ್ತದೆ.

ಏನಂದರೂ ಏನನ್ನೂ ಮರೆಯುವುದಿಲ್ಲ.

ಅದಕ್ಕೇ ಇರಬೇಕು ಒಂದೊಂದು ಮಕ್ಕಳು ಮನೆಯ ಮಾತು, ಹೊರ ಪ್ರಪಂಚದ ಭಾಷೆ, ಶಾಲಾ ಭಾಷೆ ಹೀಗೆ ಎರಡು ಮೂರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತವೆ.

ಮಕ್ಕಳ ಆಟ ಪಾಠ ರಾತ್ರಿಯಾದರೂ, ಮಲಗಿದರೂ ಮುಗಿಯುವುದಿಲ್ಲ.

ಕನಸಿನಲ್ಲೂ ಆಗಾಗ್ಗೆ ನಗುವುದು, ಅಳುವುದು, ಮುನಿಸುವುದು ಜಾರಿಯಲ್ಲಿರುತ್ತದೆ.


ಇದನ್ನು ಗಮನಿಸಿದರೇ ನಿತ್ಯ ೨೪ ಗಂಟೆ ದಣಿವಿರದ ತಣಿವ ಗುಣವೇ ಅವುಗಳ ಮುಗ್ಧ ಕಣ್ಣುಗಳ ಹೊಳಪಿನ ಸುಂದರ ಮುಖವೇ ಪ್ರಪುಲ ಸೂರ್ಯನ ಬೆಳಕು ಪ್ರತಿಯೊಂದೂ ಮನೆ ಮನಕ್ಕೂ.

ಹಾಗೆಯೇ ಅವುಗಳ ಕಲಿಯುವ ಕಲಿತು ಮರೆಯುವ ಗುಣವನ್ನು ಪ್ರತಿಯೊಬ್ಬರೂ ಎಷ್ಟೇ ದೊಡ್ಡವರಾದರೂ ಮರೆಯಬಾರದು.

ಅದೇ ಅಲ್ಲವಾ ಜೀವನ.

ಪ್ರತಿ ಕ್ಷಣದಲ್ಲೂ ಏನಾದರೂ ಕಂಡುಕೊಂಡು ಸಂತೋಷಿಸುವುದೇ ಜೀವನ.

ಅದೇ ಮಕ್ಕಳು ನಮಗೆ ಯಾವಾಗಲೂ ಹೇಳಿಕೊಡುವ ಜೀವನ ಪಾಠ.

ಸೋಮವಾರ, ಜೂನ್ 10, 2019

ಬರೀ ಆಟ ಮತ್ತು ಆಟ. ಸುಸ್ತಾಗಲ್ಲ!

ಓಹ್! ಸಂಜೆ ಕುಮಾನ್ ಮುಗಿಸಿದ ಮೇಲೆ ಆಟ ಆಡಲು ಹೋಗಬಹುದು.

ಜನನಿ, ಸಂಪ್ರೀತ್ ಮತ್ತು ಬೇರೆ ಗೆಳೆಯರ ಜೊತೆಯಲ್ಲಿ ಸೈಕಲ್ ರೇಸ್ ಮಾಡಬಹುದು. ಯಲ್ಲೊ ಪಾರ್ಕ್ ನಲ್ಲಿ ಮಸ್ತಿ ಮಾಡಬಹುದು.. ಹೀಗೆ ಕುಮಾನ್ ಕ್ಲಾಸ್ ನಲ್ಲಿ ಕುಳಿತಿದ್ದಾಗಲೂ ಯೋಚನೆ ಮಾಡುತ್ತಿದ್ದೆ.

ಇಲ್ಲಿಯೋ ಮುಂಜಾನೆಯಿಂದ ಸಂಜೆಯವರೆಗೂ ಅದೇ ನಾಲ್ಕು ಗೋಡೆಗಳ ಮದ್ಯದಲ್ಲಿ ಕುಳಿತ ಈ ಪುಟ್ಟ ಮನಸ್ಸಿಗೆ ಆಗುವ ತ್ರಾಣವನ್ನು ನನ್ನ ಮಮ್ಮಿ ಡ್ಯಾಡಿ ಗಮನಿಸಿಯೇ ಇಲ್ಲ ಅನಿಸುತ್ತದೆ.

ಅವರುಗಳು ಸಹ ಏನು ಮಾಡುತ್ತಾರೆ? ಇಲ್ಲಿಯ ಬದುಕೇ ಹೀಗೆ ಎನ್ನುವುದು ನನಗೆ ಹೇಗೆ ತಿಳಿಯುವುದು?

ನನಗೆ ಗೊತ್ತಿರುವುದು ಒಂದೇ - ಬೆಳೆಗ್ಗೆಯಿಂದ ಸಂಜೆಯವರಿಗೂ ಮನೆಯಲ್ಲಿರುವ ವಿಧವಿಧವಾದ ಆಟದ ಸಾಮನುಗಳ ಜೊತೆಯಲ್ಲಿ ಸಮಯ ಕಳೆಯುವುದು.

ಅವರುಗಳೇ ನನ್ನ ಚಿಕ್ಕ ಗೆಳೆಯರು.

ಸಂಜೆಯ ಗೋದೂಳಿಯ ಸಮಯದಲ್ಲಿ ಆಪೀಸ್ ನಿಂದ ಬರುವ ಡ್ಯಾಡಿಗಾಗಿ ಕಾಯುವುದು. ಯಾಕೆಂದರೇ ಅವರ ಬಳಿಯಿರುವ mobile ನಲ್ಲಿರುವ ಯೂಟ್ಯೂಬ್ ಕಾರ್ಟೊನ್ ಗಳನ್ನು ನೋಡುವುದೇ ನನಗೆ ಬ್ರೇಕ್!

ಟಿ.ವಿಯಲ್ಲಿ ಬರುವ ಮಕ್ಕಳ ಕಿರು ಚಿತ್ರಗಳನ್ನು ನೋಡಬೇಕು ಎಂದು ಅಮ್ಮ ಅಪ್ಪನಿಗೆ ಯಾವಾಗಲೂ ದಂಬಾಲು ಬೀಳುವುದು.  ಅವರುಗಳೋ ಅವರು T.V ನೋಡಲು ನಾನು ಬಿಡುವುದಿಲ್ಲವೆಂದು, ಬೈದುಕೊಂಡು ಮೊಬೈಲ್ ಕೊಟ್ಟೆ ಕೊಡುತ್ತಾರೆ.

ಅದೇ ನನಗೆ ಸಿಕ್ರೇಟ್ ಖುಷಿ ವಿಷಯ.

ಹೆತ್ತವರು ಅವರ ಅವರ ಜಗತ್ತಿನಲ್ಲಿಯೇ ಲೀನವಾಗಿರುತ್ತರೆ.

ಡ್ಯಾಡಿ ಸಮಯ ಸಿಕ್ಕಾಗಲೆಲ್ಲಾ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಪ್ರೀ ಇದ್ದಾಗ ಟಿ.ವಿ, ಪುಸ್ತಕ. ಸಿಟ್ಟಾದಾಗಲೆಲ್ಲಾ ನನ್ನ ತರಲೆಗಳಿಗೆ ಬೈಯುತ್ತಾರೆ. ನಾನು ಅವರ ಮಾತುಗಳನ್ನು ಕೇಳುವುದಿಲ್ಲ.  ನಾನು ಬಾಯ್ ಮಾಡುತ್ತಿನಿ, ಕೊಗಾಡುತ್ತಿನಿ.  ನನ್ನ ಪುಟ್ಟ ಪುಟ್ಟ ದೊಡ್ಡ ಮಾತುಗಳಿಗೆ ಬಾಯಿ ತುಂಬ ನಗುತ್ತಾರೆ.

ಆದರೆ ನನಗೆ ಅವರ ಜೊತೆಯಲ್ಲಿ ಯಾವಾಗಲೂ ಆಟ ಆಡಬೇಕು. ನನ್ನ ಮಾತನ್ನಾ ಅವರುಗಳು ಕೇಳಬೇಕು. ನಾನು ಆಟ ಆಡುವುದನ್ನಾ ಅವರುಗಳು ಗಮನಿಸಬೇಕು. ನನ್ನ ಹತ್ತಿರವೇ ಅವರುಗಳು ಯಾವಾಗಲೂ ಇರಬೇಕು ಎಂಬುದು ಪೂರ್ಣ ಆಸೆ.

ಆದರೇ ಅವರ ವ್ಯವಹಾರ ನನಗೆ ಅರ್ಥವಾಗುವುದಿಲ್ಲ!


ಅಮ್ಮನೋ ಕಿಚನ್ ನಲ್ಲಿ ಅಡುಗೆ ಮಾಡುವುದು, ಕುಕ್ಕರ್ ಕೂಗಿಸುವುದು, ತೊಳೆಯುವುದು ಬಳಿಯುವುದರಲ್ಲಿಯೇ ಧ್ಯಾನಸ್ಥ! ನನಗೆ ಊಟ ಪಾಠ ಮಾಡಿಸುವುದರಲ್ಲಿಯೇ ಕಾಯಕ ಕೈಲಾಸವನ್ನುಕಾಣುವುದನ್ನು ಕಾಣುತ್ತೀನಿ.

ಅಮ್ಮ ಅಂದರೇ ಯಾರಿಗೇ ಇಷ್ಟವಿರುವುದಿಲ್ಲ? ನನ್ನ ಮುದ್ದಿನ ಪುಟಾಣಿ ಅಮ್ಮ! ಮುದ್ದಿನ ಹೀರೋ! ನನ್ನ ಅಮ್ಮ ಅಮ್ಮನೇ ಎಲ್ಲಾ! ಆದರೂ ಅವಳೇ ಹೆಚ್ಚು ಸಮಯ ನನ್ನ ಜೊತೆಯಲ್ಲಿ ಕಳೆಯುವುದು. ರಜಾದ ಮಜಾದಲ್ಲಿ ಪೂರ್ಣ ಪಾಲ್ಗೊಳ್ಳೂವಳು. 

ಅಮ್ಮನೂ ಒಮ್ಮೊಮ್ಮೆ ನನ್ನ ಮೇಲೆ ರೇಗುವಳು. ನನ್ನ ತುಂಟಾ ತರಲೆಗಳಿಗೆ ಸಿಟ್ಟಾಗುವಳು. ಆದರೇ ಅದು ಕೇವಲ ಕೆಲವೇ ಕ್ಷಣಗಳು ಮಾತ್ರ.


ಹ್ಯಾಂಗ್ರೀ .!

ಪೈವ್ ಮೀನಿಟ್ ಮಮ್ಮಿ!

ನನ್ನ ಮುನಿಸು, ಅಳು ಸಹ ಕೆಲವೇ ಕ್ಷಣಗಳು ಮಾತ್ರ. ನಾನು ಅತ್ತರೂ, ಕರೆದರೂ, ಅವರು ಸಿಟ್ಟಾದರೂ ಅದನ್ನೇಲ್ಲಾ ಮರೆತು ನನ್ನ ಮುದ್ದಿನ ಅಪ್ಪ ಅಮ್ಮರ ಬಳಿಗೆ ಓಡುವೆ.

ಯಾಕೆಂದರೇ ಅವರೇ ನನ್ನ ಎರಡು ಕಣ್ಣುಗಳು.

ಗೆಳೆಯರೆಂದರೇ ಗೆಳೆಯರೇ. ನನಗೆ ಜನನಿ ಇಷ್ಟ.

ಆದರೆ ಅವರೆಲ್ಲಾ ಅವರ ಮನೆಯಲ್ಲಿಯೇ ಆಟ ಆಡುತ್ತಿರುತ್ತಾರೆ. ಅವರೆಲ್ಲಾ ಸಿಗುವುದು  ಪಾರ್ಕನಲ್ಲಿ ಮಾತ್ರ. ನೋಡಲು ಮಾತನಾಡಲು, ಬೇರೆ ಮುಖ, ಬೇರೆ ಹುಡುಗರು ಸಿಗುವುದು ಹೊರಗಿನ ಹತ್ತಿರದ ಪಾರ್ಕನಲ್ಲಿ.

ಅದಕ್ಕೆ ನಾನು ತುಂಬ ಖುಷಿಯಿಂದ ಪಾರ್ಕಗೇ ಹೋಗಲು ಯೋಜನೆಯನ್ನು ರೂಪಿಸುತ್ತಿರುತ್ತೇನೆ.

ಯಾಕೆಂದರೇ ಇಲ್ಲಿಯ ವೇದರ್ ಹುಚ್ಚಾಟ ನನಗೆ ಅಲ್ಲಾ ಯಾರಿಗೂ ತಿಳಿಯದು. ಯಾವಾಗಲೂ ಸಂಜೇ ಮಳೆಗಾಳಿ ಬಂದು ಅಮೊಲ್ಯವಾದ ನನ್ನ ಆಟದ ಸಮಯಗಳನ್ನು ಹಾಳು ಮಾಡಿದೆ.


ರೈನ್ ರೈನ್ ಗೋ ಆವೇ..

ಜಿಜ್ಜಿಯಲ್ಲಿ ಕೇಳುವ ಒಂದೇ ಕೋರಿಕೆಯೆಂದರೇ.. ಇವತ್ತು ಹವಮಾನ ತುಂಬ ಚೆನ್ನಾಗಿರಲಿ. ಸಮ್ಮರ್ ಆಲಿಡೇ ಸಮೃದ್ಧವಾಗಿರಲಿ.

ಆದರೇ ಆ ಜಿಜ್ಜೀಯು ನನ್ನ ಮಾತನ್ನಾ ಕೇಳುವುದಿಲ್ಲ ಅನಿಸುತ್ತೇ. ಒಮ್ಮೊಮ್ಮೆ  ಕಾರ್ಮೊಡ ಕವಿದು ಮಳೆ ಬಂದರೆ, ನಾನು ನನ್ನ ಹ್ಯಾಪು ಮೊರೆ ಮಾಡಿಕೊಂಡು ಮನೆಯಲ್ಲಿಯೇ ಆಟವಾಡುತ್ತಿರುತ್ತೇನೆ.

ಯಾಕೆಂದರೇ ಮಳೆ ಗಾಳಿಯ ರಂಪಾಟದ ನೇಚರ್ ಮುಂದೆ ನನ್ನ ಆರ್ಭಟ ಕಮ್ಮಿಯೇ!

ಮಕ್ಕಳಿಗೆ ಇನ್ನು ಏನೂ ಬೇಕು? ಬರೀ ಆಟ ಮತ್ತು ಆಟ. ಸುಸ್ತಾಗಲ್ಲ! ಆಟವಾಡಲು ಗೆಳೆಯರು. ಆಟವಾಡಲು ಗೊಂಬೆಗಳು.

ಅವುಗಳೇ ನಮಗೆ ಸಾಮ್ರಾಜ್ಯ.

ಅವುಗಳೇ ನಮಗೆ ಬಂಗಾರ!

ಅಪ್ಪ ಅಮ್ಮಂದಿರಿಗೆ ಮಕ್ಕಳು ತಮ್ಮ ಕಣ್ಣ ಮುಂದೆಯೇ ಇದ್ದರೇ ಸಾಕು. ಅವರಿಗೂ ಏನೋ ಏನೋ ಭಯ ಅನಿಸುತ್ತದೆ. ಎಲ್ಲಿ ಬೀಳುತ್ತಾರೋ, ಎಲ್ಲಿ ಏಳುತ್ತಾರೋ, ಎಲ್ಲಿ ಏನ್ ಗಾಯಗಳನ್ನು ಮಾಡಿಕೊಂಡುಬಿಡುತ್ತಾರೋ ಎಂಬ ಚಿಂತೆ.

ಇದು ಯಾವುದು ಬೇಡವೆಂದು ಎಲ್ಲಿಗಾದರೂ ಕರೆದುಕೊಂಡು ಹೋಗಬೇಕೆಂದರೇ ಹಿಂದೆ ಮುಂದೆ ನೋಡುತ್ತಾರೆ. 

ಆದರೇ ನಮಗೆ ನಮ್ಮ ಗಲಾಟೆ, ಆಟ, ಓಟ, ಪಾಠಗಳೇ ಇಷ್ಟ.

ಯಾಕೆಂದರೇ ನಾವುಗಳು ಬಾಲ್ಯದ ಕಲಿಗಳು, ನಾವುಗಳು ನಾನು ಬೆಳೆಯುತ್ತಿದ್ದೆನೆ. ನನ್ನ ಆಕಾಂಕ್ಷೆಯೇ ನಮ್ಮ ಬೆಳವಣಿಗೆ ಅಲ್ಲವಾ ಮಮ್ಮಿ- ಡ್ಯಾಡಿ?

ಬರಲಾ ಬಾಯ್ ಬಾಯ್ ಪಾರ್ಕಗೆ ಆಟ ಆಡಕ್ಕೆ ಹೋಗಲು ಲೇಟ್ ಆಯ್ತು..


ಸಿ .. ಯು ಲೇಟರ್ ಇನ್ ನೈಟ್!

ಬುಧವಾರ, ಸೆಪ್ಟೆಂಬರ್ 12, 2018

ಹಬ್ಬದ ಶುಭಾಶಯಗಳು

ಹಬ್ಬವೆಂದರೇ ನಮ್ಮ ಜಂಜಾಟದ ಬದುಕಿಗೆ ಒಂದು ಸಣ್ಣ ಬ್ರೇಕ್ ಕೊಟ್ಟು ಮನೆ ಮಂದಿಯೊಂದಿಗೆ ಸಂತೋಷದಿಂದ ಕೂಡಿ ಕಳೆಯುವ ಒಂದು ದಿನ. 

ನಮ್ಮ ದೇಶದ ಸಂಸ್ಕೃತಿ ಹಿರಿಮೆಯೆಂದರೇ ಪ್ರತಿ ಮಾಸದಲ್ಲೂ ಒಂದಲ್ಲ ಒಂದು ಹಬ್ಬವಿರುತ್ತದೆ. ಹಬ್ಬವೆಂದರೇ ಕೇಳಬೇಕೆ.. ? ಸಿಹಿ ತಿಂಡಿ, ಹೊಸ ಬಟ್ಟೆ, ಹೊಸ ಸಂತೋಷ ಮತ್ತು ಹೊಸ ಭರವಸೆಯ ನೋಟ.

ಮನಸ್ಸಿಗೆ ಖುಷಿಯನ್ನು ಕೊಡುವ ಹಬ್ಬಗಳ ಆಚರಣೆಯೇ ಚೆಂದ.  ಒಂದೊಂದು ಹಬ್ಬಕ್ಕೂ ಒಂದೊಂದು ಪುರಾಣ ಕಥೆ ಕಾರಣಗಳುಂಟು.

ನಾನಾ ಬಗೆಯ ಹಬ್ಬಗಳನ್ನು ಆಚರಿಸಲು ಮನೆಮಂದಿಯೆಲ್ಲಾ ಕಾತುರತೆಯಿಂದ ಕಾಯುತ್ತಿರುತ್ತಾರೆ. ಆ ಕೆಲಸ ಈ ಕೆಲಸಗಳೆಂದು ಮನೆಯವರೆಲ್ಲಾ ಎಲ್ಲೇಲ್ಲೊ ಹೋಗಿದ್ದರೇ ಮನೆಯಲ್ಲಿರುವ ಹೆತ್ತವರು ತನ್ನ ಮಗ ಮಗಳು ನಾಳೆಯ ಹಬ್ಬಕ್ಕೆ ಬರುತ್ತಾರೆ, ಬರುವರು ಎಂದು ಕಾಯುತ್ತಾರೆ.

ಅವರಿಗೆ ಅದರಲ್ಲಿಯೇ ಸಂತೋಷ.

ದೂರದ ಜೀವಗಳಿಗೆ ಹಬ್ಬಕ್ಕಾಗಿ ಊರಿಗೆ ಹೋಗುವ ತವಕ . ಒಂದು ರಜೆಯ ಜೊತೆಗೆ ಇನ್ನೊಂದೆರಡು ದಿನಗಳ ರಜೆಯನ್ನು ಗುಜರಾಯಿಸಿ ಹೋದರಾಯ್ತು ಎನ್ನುವ ಸಂಭ್ರಮ.

ಯಾರಿಗೆ ರಜಾ ದಿನಗಳು ಬೇಡಾ ಹೇಳಿ?

ಪ್ರತಿಯೊಂದು ಹಬ್ಬಕ್ಕೂ ಒಂದೊಂದು ವಿಶಿಷ್ಟ ಪದ್ಧತಿ. ಪ್ರತಿಯೊಂದು ಹಬ್ಬವೂ ವಿಭಿನ್ನ. ಈ ಹಬ್ಬಕ್ಕೆ ಈ ಅಡುಗೆಯನ್ನೇ ಮಾಡಬೇಕು. ಒಂದೊಂದು ದೇವರಿಗೂ ಒಂದೊಂದು ಹಬ್ಬವಿದೆ ನಮ್ಮ ಊರುಗಳಲ್ಲಿ. ಒಂದೊಂದು ದೇವರಿಗೂ ಒಂದೊಂದು ಬಗೆಯ ಭಕ್ಷ್ಯ ಬೋಜನಗಳ ನೇವೈದ್ಯವಿಡಬೇಕು.

ಯಾವುದೇ ಹಬ್ಬಕ್ಕೆ ಸಿದ್ಧವಾಗುವುದನ್ನು ನಮ್ಮ ಊರುಗಳಲ್ಲಿ ನೋಡಬೇಕು. ಆ ರೀತಿಯಲ್ಲಿ ಹಬ್ಬಕ್ಕಾಗಿ ಸಜ್ಜಾಗುವ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಬೇಕು ಅನಿಸುತ್ತದೆ. ಇಡೀ ಊರೇ ಹೊಸತನವನ್ನೊದ್ದು ಕೂತಿರುತ್ತದೆ. ಪ್ರತಿ ಮನೆಯು ಸುಣ್ಣ ಬಣ್ಣ ಬಳಿದುಕೊಂಡು, ಹಸಿರು ತೋರಣಗಳನ್ನು ತೊಟ್ಟುಕೊಂಡು, ಮನೆಯ ಹಜಾರ ಹಸಿ ಸಗಣಿಯಿಂದ ಸಾರಿಸಿ, ರಂಗೋಲಿ ಚಿತ್ತಾರವನ್ನು ಬರೆದುಕೊಂಡು ನವ ವಧುವಿನಂತೆ ಸ್ವಾಗತಿಸುರುತ್ತಿದೆ.

ವಾವ್.. ! ನೆನಸಿಕೊಂಡರೇ ಮೈ ಜುಂ ಎನಿಸುತ್ತದೆ. ಅಯ್ಯೊ ಇಂಥಾ ಹಬ್ಬದಲ್ಲಿ ಯಾವಾಗ ಬಾಗಿಯಾಗೋಣ ಅನಿಸುತ್ತಿದೆ. 

ನಮ್ಮ ಈ ಹಬ್ಬಗಳೆಂದರೇ ಚಿಲಿಪಿಲಿ ಮಕ್ಕಳ ಹಬ್ಬವೇ ಸರಿ. ನಾನಾ ಬಗೆಯ ಹಬ್ಬಗಳಿರುವುದೇ ಮಕ್ಕಳ ಸಂತೋಷಕ್ಕಾಗಿ.  ಚಿಕ್ಕ ಚಿಕ್ಕ ಮಕ್ಕಳುಗಳು ಹಬ್ಬಗಳಿಗಾಗಿ ಕಾಯುವುದನ್ನು ಕಾಣಬಹುದು.

ಯಾವಾಗ ಈ ಹಬ್ಬ ಬರುವುದು? ಈ ಹಬ್ಬಕ್ಕೆ ನನಗೆ ಇದು ಕೊಡಿಸಬೇಕು. ಈ ಹಬ್ಬಕ್ಕೆ ನನಗೆ ಈ ಉಡುಪು ಖರೀದಿಸಬೇಕು. ಅಮ್ಮಾ ಈ ಹಬ್ಬಕ್ಕೆ ಆ ಸಿಹಿ ತಿನಿಸು ಮಾಡು.. ಹೀಗೆ ಮಕ್ಕಳುಗಳು ನಾನಾ ಬೇಡಿಕೆಗಳನ್ನು  ತನ್ನ ಹೆತ್ತವರ ಮುಂದೆ ತಿಂಗಳುಗಳು ಅಥವಾ ವಾರಗಳ ಮುಂಚೆ ಇಡುವುದನ್ನು ಕೇಳುವುದೇ ಚೆಂದ.

ಹಬ್ಬವೆಂದರೇ ಎಲ್ಲಾ ಓಕೆ! ಸಾಲಾ ಮಾಡಿಯಾದರೂ ತುಪ್ಪ ತಿನ್ನಬೇಕು ಎನ್ನುವ ರೀತಿಯಲ್ಲಿ ಮನೆಯ ಮಂದಿಯೆಲ್ಲ ಅವರವರ ಹಿತಿಮಿತಿಗೆ ಅನುಸಾರವಾಗಿ ಸಂಭ್ರಮದೊಂದಿಗೆ ತಯಾರಿಗೊಳ್ಳುತ್ತಾರೆ.

ಹಿಂದಿನ ನಮ್ಮ ಹಿರಿ ತಲೆಗಳು ದಿನಾಂಕ ತಿಂಗಳುಗಳ ಲೆಕ್ಕವನ್ನು ಮಾಡುತ್ತಿರಲಿಲ್ಲ. ಹಬ್ಬಗಳ ನ್ನೇ  ತಮ್ಮ ದಿನ ಮಾನಗಳನ್ನು ಗುರುತಿಸಲು ಬಳಸಿಕೊಳ್ಳುತ್ತಿದ್ದದು ದಿಟ. ಈ ಹಬ್ಬದ ಮುಂದೆ ತಾನೇ ನೀನು ಹುಟ್ಟಿದ್ದು. ಆ ಹಬ್ಬ ಆದ ಮೇಲೆ ತಾನೆ ನೀನಗೆ ಕೆಲಸ ಸಿಕ್ಕಿದ್ದು. ಆ ಹಬ್ಬದ ದಿನ ತಾನೇ ನಾನು ನೀನಗೆ ಸಾಲ ಕೊಟ್ಟಿದ್ದು. ಹೀಗೆ ಎಲ್ಲಾ ಹಬ್ಬದ ರೇಪರೇನ್ಸ್ ಮೇಲೆ ಗೊತ್ತು ಮಾಡಿಕ್ಕೊಳ್ಳುತ್ತಿದ್ದರು. ಇದರಿಂದ ಗೊತ್ತಾಗುತ್ತದೆ ನಮ್ಮ ಹಬ್ಬಗಳ ಮಹತ್ವ ಎಷ್ಟು ಎಂಬುದು.

ಹೀಗೆಲ್ಲಾ ತಯಾರಿಯ ಮಧ್ಯೆ  ಆಚರಿಸುತ್ತಿದ್ದ ಹಬ್ಬಗಳು ಈಗ ಅತಿ ವಿರಳ. ಇಂದು ನಗರದ ಛಾಯೆ ಹಳ್ಳಿಗಳಿಗೂ ಚಾಚಿದೇಯೇನೋ ಗೊತ್ತಿಲ್ಲ. ಈ ಹಿಂದೆ ಇದ್ದ ಸಂಭ್ರಮ ಕಡಿಮೆಯಾಗಿದ್ದರೂ ಪ್ರತಿ ಮನೆಯಲ್ಲೂ ಇನ್ನೂ ಆ ಸಂತೋಷದ ಕ್ಷಣಗಳು ಮರೆಯಾಗಿಲ್ಲ ಮತ್ತು ಅದು ಎಂದಿಗೂ ಮರೆಯಾಗುವುದಿಲ್ಲ. ಎಲ್ಲಾರೂ ಈ ವೇಗದ ಜೀವನದಲ್ಲಿ ಬದುಕುತ್ತಿದ್ದರೂ ಇರುವ ಇಂಥ ಚಿಕ್ಕ ಚಿಕ್ಕ ಸಂತೋಷದ ಕ್ಷಣಗಳು ನಮ್ಮ ಬದುಕಿಗೆ ಟಾನಿಕ್ ಇದ್ದಂತೆ.

ನಗರದ ಬದುಕು ನಮ್ಮ ನಮ್ಮ ನಲಿವಿನ ಕ್ಷಣಗಳನ್ನು ಸ್ವಲ್ಪ ಸ್ವಲ್ಪ ಕಿತ್ತುಕೊಳ್ಳುತ್ತಿದೆಯೇನೋ ಅನಿಸುತ್ತಿದೆ. ಏನೇ ಮಾಡಿದರೂ ಅದು ತನಗೆ ತನ್ನವರಿಗೆ ಮಾತ್ರ ಅನಿಸುವಂತಿದೆ. ಹಳ್ಳಿಯವರ ಬದುಕಿನ ಜೀವಂತಿಕೆಯ ಮುಂದೆ ನಮ್ಮಗಳ ದೌಲತ್ತು ಯಾವ ಉನ್ನತಿಯನ್ನು ಗಳಿಸುತ್ತಿಲ್ಲ ಅಲ್ಲವಾ?

ಹಬ್ಬಗಳನ್ನು ಸಹ ನಮ್ಮ ಬಿಡುವು ಇದ್ದಾಗ ಮಾಡಿಕೊಂಡರಾಯ್ತು ಎನ್ನುವಂತಾಗಿದೆ. ಕೆಲವೊಮ್ಮೆ ಈ ಹಬ್ಬಗಳನ್ನು ವಿಕೇಂಡ್ ಗೆ ಮುಂದೂಡಿಕೊಂಡು ನಮ್ಮ ಪ್ರೀ ಸಮಯಕ್ಕೆ ತಕ್ಕಂತೆ ಕಾದಿದ್ದುಕೊಂಡು  ಅನುಸರಿಸಿಕೊಂಡು ಸಂಭ್ರಮಿಸುವಷ್ಟರ ಮಟ್ಟಿಗೆ ಸಮಯವಿಲ್ಲವರವಾಗಿದ್ದೇವೆ.

ಸಮೊಹದ ಸಂತೋಷ ಗೌಣವಾಗುತ್ತಿದೆ. ಕೇವಲ ತಾನಾಯಿತು ತನ್ನ ಸಂಸಾರವಾಯಿತು ಅನಿಸುವ ಮಟ್ಟಿಗೆ ಸ್ವಾರ್ಥಿಗಳಾಗುತ್ತಿದ್ದೇವೆನೋ ಗೊತ್ತಿಲ್ಲ. ಯಾವುದಕ್ಕೂ ಸಮಯವಿಲ್ಲದವರಂತೆ ಎಲ್ಲಾವನ್ನು ವೇಗದ ಬದುಕಿಗೆ ಹೊಂದುವಂತೆ ಮಾರ್ಪಾಡು ಮಾಡಿಕೊಳ್ಳುತ್ತಿದ್ದೇವೆ.  ಸಂತೋಷವನ್ನು ಅಳೆದು ತೂಗಿ ಸಂಭ್ರಮಿಸುವಂತಹ ದಿನಮಾನಗಳಲ್ಲಿ ನಾವೆಲ್ಲಾ ಬದುಕುತ್ತಿರುವುದು ದಿಗ್ಬ್ರಮೆಯನ್ನುಂಟು ಮಾಡುತ್ತಿದೆ.

ಆದರೂ ಹಬ್ಬಗಳನ್ನು ನಮಗೆ ಬೇಕಾದ ಸಮಯದಲ್ಲಿ ಮಾಡಿಕೊಳ್ಳುವ ಮಟ್ಟಿಗೆ ನಾವುಗಳೆ ನಿರ್ಧರಿಸಿಕೊಳ್ಳುತ್ತಿರುವುದು ವಿಪರ್ಯಾಸ. ಇಡೀ ದೇಶವೆ ಸಂಭ್ರಮಿಸುತ್ತಿರುವಾಗ ನಾವಂದಿಷ್ಟು ಮಂದಿ ಕೆಲಸ, ಅದು ಇದು ಎಂದುಕೊಂಡು ವಿಕೇಂಡ್ ಗೆ ಮುಂದುಡಿಕೊಂಡು ದುಡಿಯುವುದು!

ಇದನ್ನು ಸ್ವಲ್ಪ ಬದಲಾಯಿಸಿಕೊಳ್ಳೊಣ. ನಮ್ಮಗಳ ಈ ಚಿಕ್ಕ ಚಿಕ್ಕ ಸಿಹಿ ಕ್ಷಣಗಳೇ ನಮ್ಮ ನಮ್ಮ ಜೀವ ಜೀವಂತಿಕೆಗೆ ಸಾಕ್ಷಿ. ಮುಂದಿನ ಪೀಳಿಗೆಗೆ ಕೇವಲ ಬದುಕು ಅಂದರೇ ದುಡಿಮೆ ಮಾತ್ರ ಎಂಬುದು ಎಂದು  ಮಾದರಿಯಾಗಬಾರದು. ದುಡಿಮೆಗೂ ಮೀರಿದ್ದು ಬೇರೆ ಇನ್ನೂ ಏನೇನೋ ಇದೆ ಅದನ್ನು ಅನುಭವಿಸಿ ಕೂಡಿ ಅನುಕ್ಷಣವೂ ಅರ್ಥಪೂರ್ಣವಾಗಿ ಪ್ರಕೃತಿಯೊಂದಿಗೆ ಸಹಜವಾಗಿ ಬದುಕುವ ಬದುಕುವಂತೆ ಪ್ರಯತ್ನಿಸೋಣವಾ..

ಹಬ್ಬದ ಶುಭಾಶಯಗಳು!!

ಶನಿವಾರ, ಜುಲೈ 7, 2018

ಕಳೆದ ದಿನ ನಿತ್ಯ ತರುಣ

ಜೀವನ ಈಗಾಗಲೇ ಅರ್ಧ ಮೈಲಿಗೆ ಹತ್ತು ವರುಷ ಮಾತ್ರ ಬಾಕಿಯಾಗಿ ನಿಂತಂತಿದೆ.  ಹುಟ್ಟಿದಂದಿನಿಂದ ಈ ವಯೋಮಾನಕ್ಕೆ ಬಂದಿರುವ ಬದುಕಿನ ಕಳೆದ ದಿನಗಳನ್ನು ನೆನಪಿಸಿಕೊಂಡರೇ ಮೈ ಜುಂ ಅನಿಸುತ್ತದೆ.

ನಮಗೆ ನಾವುಗಳು ಎಂದಿಗೂ ನಿತ್ಯ ತರುಣರೇ. ಆದರೇ ನಮಗೆ ಗೊತ್ತೆ ಆಗದ ರೀತಿಯಲ್ಲಿ ಮದ್ಯ ವಯಸ್ಕರಾಗಿದ್ದೇವೆ. ಇಂದು ಬಾಲ್ಯದ ನೆನಪೇ ಮರೆತಂತೆ ಅನಿಸುತ್ತಿದೆ. ಈಗ ನಮಗೆ ಬಾಲ್ಯವೆಂದರೇ ನಮ್ಮ ಮುಂದಿರುವ ನಮ್ಮ ಮುದ್ದು ಮಕ್ಕಳ ಆಟವಾಗಿದೆ.

ಓದು ಅಭ್ಯಾಸ, ಕಾಲೇಜು, ಕೆಲಸವೆಂದುಕೊಂಡು ಬ್ಯುಸಿ ಲೈಫ್ ನಲ್ಲಿ ನಡೆದು ಬಂದ ದಾರಿಯ ಗುರುತನ್ನು ಗುರುತಿಸಲು ಸಮಯವಿಲ್ಲದಂತಾಗಿದೆ.

ಒಬ್ಬ ಮನುಷ್ಯನ ಜೀವನವೆಂದರೇನು ಎಂದರೇ ಅದು ನಮ್ಮ ಕೈಗೆ ನಿಲುಕದ ಅತ್ಯದ್ಬುತ ಸಿನಿಮಾವೇ ಸರಿ. ಸಿನಿಮಾ ಎಂದರೇ ಎರಡು ಮುಕ್ಕಾಲು ಗಂಟೆಯಲ್ಲಿ ಎಲ್ಲಾವನ್ನು ತೋರಿಸಿ ದಿ ಎಂಡ್ ಇರುತ್ತದೆ. ಅದರೇ ನಿಜ ಜೀವನಕ್ಕೆ ಹಾಗೆ ಕೊನೆಯನ್ನು  ಎಂದು ಕೊಡಲು ಸಾಧ್ಯವಾಗದು.

ನೋವು ನಲಿವು, ಸಂತೋಷ ದುಃಖ, ಸ್ನೇಹ ಸಂಬಂಧ, ಸಿರಿತನ ಬಡತನ ಇತ್ಯಾದಿಯ ಕಲಸುಮೆಲೋಗರದ ರಂಗು ರಂಗಿನ ಕೋಲಾಜ್ ಈ ಬದುಕು.

ಚಿಕ್ಕಂದಿನಿಂದಲ್ಲಿ ಅಂದುಕೊಂಡದ್ದನ್ನು ಸಾಧಿಸುವ ಉಮೇದು. ತಾರುಣ್ಯದಲ್ಲಿ ಆಕಾಶಕ್ಕೆ ಮೆಟ್ಟಿಲು ಹಾಕುವ ಉಮ್ಮಸ್ಸು.

ಬದುಕು ಬದುಕಲೇಬೇಕೆಂಬ ಪಾಠವನ್ನು ಯಾವ ಕಾಲೇಜಿನ ಬೋಧನೆಯು ತಿಳಿಸಿಕೊಟ್ಟಿರುವುದಿಲ್ಲ.

ಸಮಯ, ಅವಕಾಶ, ಸಂದರ್ಭಗಳು ನಮ್ಮನ್ನು ಆ ಹಳಿಯ ಮೇಲೆ ತಿಳಿದೋ ತಿಳಿಯದೇಯೋ ಆಯಾ ಸಮಯಕ್ಕೆ ತಕ್ಕನಾಗಿ ಅನುಸರಿಸಿಕೊಂಡು ಹೋಗುವಂತೆ ಮಾಡಿಬಿಟ್ಟಿರುತ್ತದೆ.

ಆ ಸಮಯಕ್ಕೆ ಸರಿಯಾಗಿ ನಾವು ಕಂಡ ಕನಸು, ನನಸು.. ಬಣ್ಣ ಬಣ್ಣದ ನೆನಪುಗಳು.. ವಿಧವಿಧವಾದ ನಿರ್ಧಾರಗಳು ಎಲ್ಲಾ ಗಣ್ಯ ಅನಿಸಿಬಿಟ್ಟು ಜೀವನಕ್ಕೆ ಮುಖ್ಯವಾದದ್ದನ್ನು ಆರಿಸಿಕೊಂಡು ಮುಂದುವರಿಯುತ್ತೇವೆ.

ಅದು ಯಾವುದೇ ಸರಿ. ಸಮಯಕ್ಕೆ ಸರಿಯಾಗಿ ನಾವುಗಳು ನಮ್ಮ ಬದುಕಿಗೆ ಬೇಕಾದ ಅತಿ ಅವಶ್ಯಕವೆನಿಸುವ ನಿರ್ಧಾರಗಳನ್ನು ಪ್ರತಿ ಕಾಲಘಟ್ಟದಲ್ಲು ಅನುಸರಿಸಿಕೊಂಡು ಹೋಗಿರುತ್ತೇವೆ.

ಅದೇ ಜೀವನ!

ಈ ಮದ್ಯ ವಯಸ್ಸಿನ ಈ ಸಮಯದಲ್ಲಿ ಹಿಂತಿರುಗಿ ನೋಡಿದರೇ.. ಅಭ್ಭಾ ಅನಿಸುತ್ತದೆ! ಇದು ನಾನೇನಾ ಎಂದು ಅಚ್ಚರಿಯಾಗುತ್ತದೆ. ಹಾಗೆಯೇ ತುಸು ನಗುವು ಬರುತ್ತದೆ. ಏನೇಲ್ಲಾ ಮನಸ್ಸಿನ ಕುಲುಮೆಯಲ್ಲಿ ತರಾವೇರಿ ಗೊತ್ತೂ ಗುರಿ ಮಾಡಿಕೊಂಡಿದ್ದು. ತಲೆ ತುಂಬ ನೂರು ಕನಸುಗಳ ಜಾತ್ರೆ ಮಾಡಿಕೊಂಡಿದ್ದು. ಹೃದಯದ ಗೂಡಿನಲ್ಲಿ ಹತ್ತು ಪ್ರೀತಿಯ ಕಹಾನಿಗಳನ್ನು ಕ್ರೂಡಿಕರಿಸಿಕೊಂಡಿದ್ದು.

ಅಭ್ಭಾ ಇಂದು ಎಲ್ಲಾ ಪೂರ್ತಿ ಪೂರಾ ಶಾಂತ. ವ್ಯಕ್ತಿ ಅಷ್ಟರ ಮಟ್ಟಿಗೆ ಮಾಗಿದ್ದಾನೇಯೇ?

ಜೀವನದ ಹಾದಿಯಲ್ಲಿ ಸಂಕಲನ ವ್ಯವಕಲನ ಸರಿಯಾಗಿಯೇ ನಡೆದಿರುತ್ತದೆ. ಹಾಗಂತ ಬದುಕು ಕೇವಲ ಗಣಿತವಲ್ಲ ಅಥವಾ ಜೀವನ ಲೆಕ್ಕಚಾರವಲ್ಲ! ನಮ್ಮ ನಿಲುಕಿಗೆ ನಿಲುಕಿದ ದಕ್ಕಿಸಿಕೊಂಡ ಬದುಕು ಮಾತ್ರ ನಮ್ಮದಾಗಿರುತ್ತದೆ.

ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಹಣ್ಣಾಗಿದ್ದಾರೇ ಅನಿಸುತ್ತದೆ. ಅದು ನಮ್ಮ ನಮ್ಮಲ್ಲಿ ಇಂದು ಕಣ್ಣಿಗೆ ಗೊಚರಿಸುತ್ತಿದೆ. ಈಗ ನಾನು ನನಗೆ ಅನಿಸುವ ಮಾತೇ ಇಲ್ಲ. ಯಾಕೆಂದರೇ ನಾನು ನಾವಾಗಿದ್ದೇವೆ. ನಾನೊಬ್ಬನೇ ಅಲ್ಲ. ನಾನು ನನ್ನ ಸಂಸಾರ, ನನ್ನ ಮಗು, ನನ್ನ ಸಂಗಾತಿ ಹೀಗೆ ಬಹುತನದಲ್ಲಿ ನಮ್ಮ ಬದುಕು ಬಂದು ನಿಂತಿದೆ.

ನಾನು ಅನುಭವಿಸಿದ ಹಳೆಯ ದಿನಗಳು ನನ್ನ ಮುದ್ದಿನ ಮಗನ / ಮಗಳ ನಗುವಿನಲ್ಲಿ ಪುನಃ ಇನ್ನೊಮ್ಮೆ ಬಾಲ್ಯದ, ತಾರುಣ್ಯದ ದಿನಗಳಿಗೆ ಜಾರುವ ಮನಸ್ಸು ಮಾಡಿಕೊಂಡಿದೆ.

ನಾವು ಮಾಡಿದ ತಪ್ಪು ಒಪ್ಪುಗಳನ್ನ ನನ್ನದೇ ಕುಡಿಯು ಮಾಡುವುದನ್ನು ನೋಡುತ್ತಾ ಮನಸ್ಸು ಮುದವಾಗುತ್ತಿದೆ. ಇದೆ ಬದುಕಿನ ಜಟಕಾ ಬಂಡಿ ಅನಿಸುತ್ತದೆ. ಅದು ಎಂದೂ ಮತ್ತು ಎಲ್ಲಿಯು ನಿಲ್ಲುವುದಿಲ್ಲ.  ನಿತ್ಯ ಸಾಗುತ್ತಲೇ ಇರಬೇಕು, ಹಾಗೆಯೇ ಬದಲಾಗುತ್ತಿರಬೇಕು. ಅದೇ ಜಗದ ನಿಯಮ.

ವ್ಯಕ್ತಿ ತಾನು ಬೆಳೆಯುತ್ತಾ ತನ್ನ ಸುತ್ತಲಿನ ಸಮಾಜದಲ್ಲಿ ಪ್ರತಿಯೊಂದು ಬದುಕಿನ ಕಾಲಗಟ್ಟದಲ್ಲಿ ತನ್ನನ್ನು ಸಮಾಜದೊಂದಿಗೆ ಗುರುತಿಸಿಕೊಂಡು ಮುಂದುವರೆಯುತ್ತಿರುತ್ತಾನೆ.  ತನ್ನ ಜೀವನದ ಮೇಲೆ ಸುತ್ತಲಿನ ಸಮಾಜ, ರಾಜಕೀಯ, ಆರ್ಥಿಕ ಹೀಗೆ ಪ್ರತಿಯೊಂದು ಪ್ರಭಾವ ಬೀರುತ್ತಿರುತ್ತವೆ. ನಾನು ನಾವು ನಮಗೆ ಮಾತ್ರ ಸ್ವಂತ ಅನಿಸುವುದಿಲ್ಲ.  ನಾವು ನಮ್ಮ ಜೊತೆಯಲ್ಲಿರುವವರೊಂದಿಗೆ ಅದು ನಮಗೆ ಗೊತ್ತಿರುವವರು, ನಮ್ಮ ಸಂಬಂಧಿಕರು, ಬಂದು ಬಾಂದವರು ಹೀಗೆ ಸುತ್ತಲಿನವರೊಂದಿಗೆ ಎಷ್ಟು ಸಂತೋಷದಿಂದ ಕಳೆದಿದ್ದೇವೆ ಅನ್ನುವುದರ ಮೇಲೆ ನಮ್ಮ ಬದುಕಿನ ಆಕರ್ಷಕತೆ ನಿಂತಿದೆ.

ಬದುಕು ಎಂದು ನಿಂತ ನೀರಲ್ಲಾ! ಅದು ಸ್ವಚ್ಛಂದವಾಗಿ ಸುಲಭವಾಗಿ ಹರಿಯುವ ತೊರೆಯಾಗಿರಬೇಕು. ಹಾಗೆ ಬದುಕುವ ಅವಕಾಶ, ಆಸೆಗಳು ಪ್ರತಿಯೊಬ್ಬರಿಗೂ ಇರುತ್ತದೆ.

ಅವರವರ ಇತಿಮಿತಿಯಲ್ಲಿ ಅವರವರ ಶಕ್ತಿಯನುಸಾರ ಜೀವನದಲ್ಲಿ ಪ್ರತಿಯೊಬ್ಬರೂ ಅಂದುಕೊಂಡ ಗುರಿಗಳನ್ನು ಹಿಡೇರಿಸಿಕೊಂಡಿರುತ್ತಾರೆ.

ಬದುಕು ಎಂದು ನಿಲ್ಲದ ಕನಸಿನ ಆಗರವೇ ಸರಿ. ಎಂದು ಕನಸು ನಿಲ್ಲುವುದೋ ಅಂದೇ ಬದುಕಿಗೆ ಪುಲ್ ಸ್ಟಾಪ್! ನಾವುಗಳೆಲ್ಲಾ ಕನಸಿನ ಬೆನ್ನು ಹತ್ತಿ ಓಡುತ್ತಿರುವ ಕುದುರೆಗಳೇ ಸರಿ.

ಬದುಕಿನ ನಾನಾ ವಯಸ್ಸಿನಲ್ಲಿ ನಾನಾ ರೀತಿಯ ಗುರಿ ಸಾಧನೆಗಳು ನಮ್ಮ ಕಣ್ಣ ಮುಂದಿರುತ್ತವೆ. ಅವುಗಳನ್ನು ಹೇಗೆಲ್ಲಾ ಸಾಧಿಸಬೇಕೆಂಬುದು ನಮ್ಮ ನಮ್ಮ ಬುದ್ಧಿ ಮತ್ತು ಜಾಣ್ಮೆಗೆ ಕಾಣಿಸುತ್ತಿರುತ್ತದೆ.  ಹಾಗೆಯೇ ಅಂದುಕೊಂಡಿದ್ದನ್ನೇಲ್ಲಾ ಸಾಧಿಸುವೆವು ಕೊಡ. ಸಾಧನೆಯ ಮಾಪನ ನಮ್ಮ ನಮ್ಮಲ್ಲಿಯೇ ಇರುತ್ತದೆ. ಆದರಂತೆ ನಮ್ಮ ಖುಷಿ ಮತ್ತು ದುಃಖದ ಮರ್ಮ ನಿರ್ಧಾರವಾಗುತ್ತದೆ.  ಆದರೇ ಸಾಧಿಸಿದ ಪಲಿತಾಂಶದ ಪರಾಮರ್ಶೆಯ ಮಾಪಕ ನಾವುಗಳಾಗಿದ್ದರೇ ಮಾತ್ರ ಸಾಕು.

ನಾವು ನಮಗೆ ಮಾತ್ರ ಬದುಕಿದರೇ ಚೆಂದ! ಯಾಕೆಂದರೇ ನಮ್ಮ ಬದುಕು ನಮ್ಮ ಕೈಯಲ್ಲಿದೆ. ಯಾರು ಯಾರ ಬದುಕನ್ನು ಎಂದಿಗೂ ಕಟ್ಟಲಾರರು ಅಥವಾ ಕೆಡವಲಾರರು.

ನಮ್ಮ ಸೋಲೇ ನಮಗೆ ಪಾಠ. ಅದು ನಮ್ಮ ಗಟ್ಟಿ ಅನುಭವದ ಬುತ್ತಿಯೇ ಸರಿ. ಅದು ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುದರಲ್ಲಿ ಯಾವ ಸಂಶಯವಿಲ್ಲ.

ಬದುಕಿನ ಅರ್ಧ ಮೈಲು ಸಾಗಿಸಿದ ಸಂತಸ ಒಂದು ಕಡೆಯಾದರೇ.. ದಿನ ದಿನ ಮುದುಕರಾಗುತ್ತಿದ್ದೇವೆ ಎಂಬ ಭಯವು ಇರಬೇಕಾ ಎಂಬ ಪ್ರಶ್ನೇ ಮತ್ತೊಂದು ಕಡೆ. ಆದರೇ ಕಳೆದ ಜೀವನವನ್ನು ಮತ್ತೊಮ್ಮೆ ಬೇಕು ಎಂದು ಕೇಳಲಾಗುವುದಿಲ್ಲ. ಕೇಳಿದರೇ ಸಿಗಬೇಕಲ್ಲಾ? ಕಾಲದ ಚಕ್ರದಲ್ಲಿ ಹಿಮ್ಮುಕ ಚಲನೆಯಿಲ್ಲ.

ಗೊತ್ತಿಲ್ಲದ ಮುಂದಿನ ಭವಿಷ್ಯತ್ ಕಾಣುವ ನೋಟವೇ ಚೆನ್ನಾ.. ಮುಂದಿನ ದಿನಗಳ ಗುರಿಗಳು ಇದ್ದೇ ಇರುತ್ತದೆ.. ನಡೆಯುವ ಚೈತನ್ಯ ಮೈಗೂಡಿಸಿಕೊಂಡರೇ ಸಾಕಲ್ಲವಾ? ವಯಸ್ಸಿಗೆ ಗೋಲಿ ಮಾರೋ, ಬದುಕಿನ ಹರುಷಕ್ಕೆ ಜೈ ಅನ್ನೋಣವೆ?