ಭಾನುವಾರ, ಜನವರಿ 16, 2022

ಮನಸ್ಸು ಮಳೆ

 ಮಳೆಯು ಬಂತು

ತೊಯ್ಯಲು ಹೊಯ್ಯಲು

ಮನ ಮನೆ  ಉಲ್ಲಾಸದಲ್ಲಿದೆ

ಹೋಗೋಣ ಬಾರ ಕುಣಿದು ಕುಪ್ಪಳಿಸಲು

ಆಡೋಣ ಬಾರ ಕೂಡಿ ಬಾಳಿ 

ಮಳೆಯು ಬಂತು

ತುಂತುರು ತಂಪೆರೆದಿದೆ ಧರೆಗೆ

ಮನ ಮೂಲೆ ಮೂಲೆಯಲ್ಲಿ ಹೊಸ ಕನಸು

ರಸ ನಿಮಿಷಗಳ ಗಳಿಗೆ ಗಳಿಗೆಯಲ್ಲಿ

ಕಳೆಯೋಣ ಬಾರಾ ದುಗುಡ ದುಮ್ಮಾನಗಳನು

ಬಾ ಗೆಳೆಯ ಬಾ ಹೊಸ ದಾರಿಗೆ ಸಾಗೋಣ​

ಮಳೆಯೊಂದಿಗೆ ನಲಿಯೋಣ ಮನಬಿಚ್ಚಿ

ಮಂಜು ಚಳಿ ಗಾಳಿ

 ಮೌನದ ಸಮಾಧಿಯಲ್ಲಿ

ಶಾಂತ ತಟಸ್ಥವಾದ ಭಾವ​

ಭಕ್ತಿಯುಕ್ತ ಸ್ತೋತ್ರ ಸೂಕ್ತಿ

ಕನಸುಗಳ ಕಲ್ಪನಾ ಲೋಕ​

ಆಹ್ಲಾದದ ಆಸರೆಯಲ್ಲಿ

ಹೊಚ್ಚ ಹೊಸ ಮಂಜು

ಬಿಚ್ಚಿ ಹರಡಿದ ಬಿಳುಪು

ತೆಲು ತೆರೆ ತೆರೆಯಾಸರೆ

ಗಿಡ ಮರ ರೆಂಬೆಯೆತ್ತಿ ನೋಟ​

ಸೊಯ್ಯನೆ ಸುಯ್ಯನೆ ಹಿಮ ಗಾಳಿ

ತಣ್ಣನೆಯ ಕೊರೆಯುವ ಹಿಮ ಹನಿ

ಬಾಳು ಬರುವ ಭಾವ ಬಗೆಯಲಿ

ಪೂರ್ತಿ ನಿಶಬ್ಧ​! ಮೌನ ಮಾತಾಡಿದೆ

ಹಾಗೊಮ್ಮೆ ಹೀಗೊಮ್ಮೆ ವಾಹನ ಸದ್ದು

ಬೆಳಕಿನ ಪ್ರತಿಫಲನ ಅದೇ ವಾಹನಗಳಿಂದ​

ಹೊಳೆಯುತ್ತಿದೆ ಹಾಲು ಹಾಸಿದ ಹಾದಿ

ಇದು ನಿರಂತರ ಪ್ರತಿ ಸಂತ್ಸರದಲ್ಲೂ


ಗುರುವಾರ, ಡಿಸೆಂಬರ್ 30, 2021

ಹೊಸ ವರುಷದ ಹೊಸತನಕ್ಕೆ

ಕಳೆದ 2020 ವರುಷದಂತೆ ಈ ವರ್ಷವು ನಮ್ಮನ್ನೆಲ್ಲ ಕೊರೋನ ರೋಗ ಮತ್ತು ಅದರ ಭಯದಲ್ಲಿಯೇ ಕಳೆಯುವಂತೆ ಮಾಡಿಬಿಟ್ಟಿದೆ. 

ವರುಷದ ಪ್ರಾರಂಭದ ದಿನಗಳಲ್ಲಿ ವ್ಯಾಕ್ಸಿನ್ ಬಂತು ಇನ್ನು ಏನು ಎಲ್ಲಾ ಮಾಮೊಲಿ ಸ್ಥಿಗೆ ಮರಳಿದೆವು ಅಂದರೇ ಡೆಲ್ಟಾ ಅಂಥ ಎಲ್ಲಾ ಜನರನ್ನು ಚಿಂತೆಗಿಡು ಮಾಡಿತು. 

ಏಯ್ ಇನ್ನೂ ಎಲ್ಲಾ ಮುಗಿಯಿತು, ವರುಷದ ಕೊನೆಗೆ ಹೊಸ ವರುಷದಿಂದ ಆರಾಮಾಗಿ ಜೀವಿಸಬಹುದು ಅಂದರೇ ಒಮಿಕ್ರಾನ್ ನಾ ಬಂದೆ ಎಂದಿತು.

ಇದೀಗ​ ಈ ಕೊರೋನಗೆ ಕೊನೆಯಿಲ್ಲರಪ್ಪಾ ಎಂದು ಪುನಃ ಪ್ರತಿಯೊಬ್ಬರೂ ಯೋಚಿಸುವಂತೆ ಮಾಡಿ ಮುಂದಿನ ಹೊಸ ವರುಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೆವೆ.


ವರುಷ ಎಂದರೇ ಮುನ್ನೂರೈವತೈದು ದಿನಗಳು. ಒಂದೊಂದು ದಿನವು ಒಂದೇ ರೀತಿಯಲ್ಲಿರುವುದಿಲ್ಲ​.

ಹೊಸ ದಿನ ಹೊಸತನ​. ಹೊಸ ಭರವಸೆಯ ಬೆಳಕು. ಅದಕ್ಕೆ ನಾಳೆಯೆಂದರೇ ಏನೋ ಖುಷಿ. ಗೊತ್ತಿಲ್ಲದೇ ಬರುವ ಸಮಯದ ನೂತನತೆಗೆ ಮನಸ್ಸು ಮರುಗಿ ಕರಗಿ ನರ್ತಿಸುತ್ತದೆ. 

ಹೊಸ ವರುಷವೆಂದರೇ ಕೇಳಬೇಕೇ ಒಂದಲ್ಲಾ ಎರಡಲ್ಲ ಇಡೀ ದಿನಗಳ ಕಟ್ಟೆ ಕೈಯಲ್ಲಿರುತ್ತದೆ. ಅದಕ್ಕೆ ಪ್ರತಿಯೊಬ್ಬರೂ ಹೊಸ ವರುಷದ ಶುಭಾಶಯಗಳು, ಆಚರಣೆಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ.


ಆದರೂ ಈ 2021 ಪ್ರತಿ ವರುಷದಂತೆ ಸ್ವಲ್ಪ ಹೆಚ್ಚಿಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಖುಷಿ ಮತ್ತು ಕಹಿ ಅನುಭವಗಳನ್ನು ಕೊಟ್ಟಿದೆ. 

ಹಾಗೆಯೇ ಒಂದು ವರುಷದ  ನೆನಪಿನ ಬುತ್ತಿಯನ್ನೇ ಮುಂದಿನ ದಿನಗಳ  ಏಳ್ಗೆ ಮತ್ತು ಸದ್ಬಳಿಕೆಗೆ ಅನುಭವಂತಿಕೆಯನ್ನೇ ನೀಡಿದೆ. 


ಒಡನಾಡಿದ ಗೆಳೆಯರು. ತಿಳಿದ ವಿಷಯ​. ಅರಿತ ವಿದ್ಯೆ. ಕೈ ಕೊಟ್ಟ ಕಹಿ ನೆನಪು. ತಾನು ಬೆರೊಬ್ಬರಿಗೆ ಸಹಾಯ ಹಸ್ತ ನೀಡಿದ ನೆನಪು. ನಲಿದ ಸಮಯ. ಸವಿದ ರುಚಿ ಹೀಗೆ ನಾನ ಮುಖಗಳ ಸುಂದರ ಸ್ವಪ್ನ ಲೋಕವನ್ನು ಎತ್ತಿಕೊಟ್ಟಿದೆ.  ಅದಕ್ಕೆ ಅದು ಕಳೆದ ವರುಷ ಮತ್ತು ಹಳೆ ವರ್ಷ​.


ಕರೋನ ಇಲ್ಲದ ಸಮಯ ಬೇಕೇ ಬೇಕು ಎನ್ನುವ ಹಂಬಲವನ್ನು ಪ್ರತಿಯೊಬ್ಬರ ಮನದಲ್ಲಿ ಬಿತ್ತಿರುವುದಂತೂ ಸತ್ಯ​.  

ನಾವೆಲ್ಲಾ ಈ ಒಂದು ಬ್ರಂಹಾಂಡ ರೋಗದ ಬಗ್ಗೆ ಇಟ್ಟುಕೊಂಡಿರುವ ಕಲ್ಪನೆ, ಜೀವನದಲ್ಲಿ ಯಾವುದು ಅತಿ ಪ್ರಾಮುಖ್ಯ ಎಂಬುದನ್ನು ಪ್ರತಿಯೊಬ್ಬರಿಗೂ ಸುಲಭವಾಗಿ ಗೊತ್ತಾಗಿದೆ. 

ಯಾವುದು ಮುಖ್ಯ ಅಮುಖ್ಯ ಎಂಬುದನ್ನು ಈ ಒಂದುವರೆ ವರುಷದಲ್ಲಿ ಮಕ್ಕಳಿಂದ ವೃದ್ಧರವರಿಗೂ ಗೊತ್ತು ಮಾಡಿಕೊಟ್ಟಿದೆ. 


ನಾವುಗಳು ಏನೇ ಮುಂದುವರೆದರೂ ಮುಂದಿನ ದಿನಗಳಲ್ಲಿ ಸುಲಭವಾಗಿ ಕಳೆದ ಒಂದುವರೇ ವರುಷದ ಹಿಂದೆ ಇದ್ದಂತೆ ಸ್ವಂತಂತ್ರವಾಗಿ ಯಾವುದೇ ಯೋಚನೆಯಿಲ್ಲದೆ ಎಲ್ಲರೋಡನೆ ಬೇರೆಯುವ ಸಮಯ ಹಿಂದಿರುಗುವುದಿಲ್ಲವೇನೋ ಅನಿಸಿಬಿಟ್ಟಿದೆ. 


ಹಾಗೆಯೇ ಮನುಷ್ಯ ಸೋಷಿಯಲ್ ಆನಿಮಲ್ ಎಂಬ ಮಾತಿಗೆ ವಿರುದ್ಧವಾಗಿ ಎಲ್ಲಾರೊಂದಿಗೆ ಬೇರೆತು ಬದುಕುವ​ ಬದುಕಿಗಿ ಅಲ್ಪವಿರಾಮವನ್ನಿಟ್ಟ ಈ ಕೋವಿಡ್ ಎಂಬ ಚಿಕ್ಕ ವೈರಸ್ ಎಂದು ನಿಶಕ್ತವಾಗುವುದೋ ಕಾಲವೇ ಉತ್ತರಿಸಬೇಕು.


ಆದರೂ ಬದುಕು ನಿಂತ ನೀರಲ್ಲಾ. ಕತ್ತಲಿನಿಂದ ಬೆಳಕು ಬರಲೇಬೇಕು. ಹಳೆ ಕ್ಯಾಲೆಂಡರ್ ಹೋಗಿ ಹೊಸ ದಿನದರ್ಶಿಕೆಯನ್ನು ಪ್ರತಿ ಗೋಡೆಯು ಕಾಣಬೇಕು. ಅದೇ ಭರವಸೆ. 

ಮನೆಯಲ್ಲಿಯೇ ಕುಳಿತು ದೊಡ್ಡವರಂತೆ ಓದುತ್ತಿರುವ ಮಕ್ಕಳು ಮುಂದಿನ ವರುಷದಲ್ಲಿಯಾದರೂ ಶಾಲೆಗಳಿಗೆ ಹೋಗಿ ಈ ಹಿಂದೆ ಕಲಿಯುತ್ತಿದ್ದಂತೆ ಕಲಿಯಬೇಕು. 

ಗೆಳೆಯರೊಡಗೂಡಿ ಸ್ವಚ್ಚಂದವಾಗಿ ಕೂಡಿ ಕುಣಿದಾಡುತ ಪಾಠ ಕಲಿಯಬೇಕು. ಅದೇ ನೈಸರ್ಗಿಕ​. 



ಭರವಸೆಯ ಬದುಕು ಪ್ರತಿಯೊಬ್ಬರಿಗೂ ೨೦೨೨ ರಲ್ಲಿ ಮತ್ತೇ ಸಿಗಲಿ ಮತ್ತು ಸಿಗುತ್ತದೆ ಎನ್ನೊಣ​. 

ಮುಂದೆ ಈ ಮ್ಯುಟೆಟ್ ವೈರ ಸ್ ನಿಲ್ಲುವುದು. ಎಲ್ಲಾ ವ್ಯಾಕ್ಸಿನ್ ಚೆನ್ನಾಗಿ ಕೆಲಸ ಮಾಡುವುದು. ವೈದ್ಯರ ಅವಿಷ್ಕಾರಕ್ಕೆ ಮನ್ನಣೆ ಸಿಗುವುದು ಎನ್ನೋಣ​. 


ನಾವು ನಮ್ಮ ನಿಸರ್ಗದಂತೆ ನಾವಾಗಿ ಬದುಕಿ ನಿಸರ್ಗದತ್ತಾ ಚೇತನತೆಯನ್ನು ಸಂಪಾಧಿಸುವ ಕೌಶಲ್ಯತೆ ಎಲ್ಲರಗೂ ಈ ಹೊಸ ವರುಷ ನೀಡಲಿ ​. 


ಹೊಸ ವರುಷದ ಹೊಸತನಕ್ಕೆ ಆದರದ ಶುಭಾಶಯಗಳು!!

ಶುಕ್ರವಾರ, ನವೆಂಬರ್ 12, 2021

ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ. ನವಂಬರ್ ೧೪. ಮಕ್ಕಳ ನೆಚ್ಚಿನ ಚಾ ಚಾ ನೆಹರುವರ ಹುಟ್ಟಿದ ದಿನ​. ಪ್ರತಿ ವರುಷವು ಎಲ್ಲಾ ಶಾಲೆಗಳಲ್ಲೂ ನೆಹರುವರ ಪೋಟೋ ಇಟ್ಟು, ಹೊವಿನ ಹಾರ ಹಾಕಿ ಪೊಜೆ ಮಾಡಿ ಚಾಕಲೆಟ್ ಕೊಡುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. 


ಹಾಗೆಯೇ ಮಕ್ಕಳಿಗೆ ಶಾಲಾ ಶಿಕ್ಷಕ ವೃಂದ ನೆಹರುವರ ಬಾಲ್ಯ ಮತ್ತು ಮಕ್ಕಳನ್ನು ಕಂಡರೇ ಅವರಿಗೆಷ್ಟು ಇಷ್ಟ​, ಅವರು ಹೇಗೆ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದರು, ಅವರೂ ಮತ್ತು ಇಂದಿರಾಗಾಂಧಿಯೊಂದಿಗಿನ ಜೀವನ  ಕಥೆಇತ್ಯಾದಿ ಇತ್ಯಾದಿ ಮಾತುಗಳು ಈಗ ನೆನಪಿಗೆ ಬರುತ್ತದೆ. 


ಹಾಗೆಯೇ ನೆಹರೂ ಅವರ ಪೋಟೋದಲ್ಲಿ ಅವರ ಕಪ್ಪು ಕೋಟಿನ​ ಜೇಬಿನಲ್ಲಿನ ಕೆಂಪು ಗುಲಾಬಿ. ಕೆಂಪು ಗುಲಾಬಿ ಅಂದರೇ ಮಕ್ಕಳ ನಗುವೇನೋ ಅನಿಸುತ್ತದೆ. ಆ ಹೊವನ್ನು ಯಾವುದೋ ಚಿಕ್ಕ ಮಗು ಅವರ ಜೇಬಿಗೆ ಸಿಗಿಸಿರುವಂತೆ ಬಾಸವಾಗುತ್ತಿತ್ತು.  


ಇಂದು ಹೀಗೆಯೇ ಮಕ್ಕಳ ದಿನಾಚರಣೆಯನ್ನು ಎಲ್ಲಾ ಶಾಲೆಗಳಲ್ಲೂ ಆಚರಿಸುತ್ತಿದ್ದಾರೆ. 


ಮಕ್ಕಳ ದಿನಾಚಾರಣೆ ಮಕ್ಕಳಿಗೆ ಏಕೆ ಖುಷಿ ಕೊಡುವುದಿಲ್ಲ ನೀವೇ ಹೇಳಿ. ನಮಗಾಗಿಯೇ ಈ ರೀತಿಯಲ್ಲಿ ಒಂದು ದಿನವಿದೆ  ಎಂದರೇ.. ಮಕ್ಕಳು ಎಂದರೇ ಅವರೇ ಮುಂದಿನ ಪ್ರಜೆಗಳು, ದೇಶದ ಆಸ್ತಿ. 

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಶಾಲಾಂಗಣದಲ್ಲಿರುವಷ್ಟು ದಿನ ಪ್ರತಿ ಮಗುವು ಪ್ರತಿ ಶಾಲೆಯ ಜವಬ್ದಾರಿಯೇ ಸರಿ. ಅವರ ಎಲ್ಲಾ ಅಭಿವೃದ್ಧಿಯ ಬೀಜಗಳನ್ನು ಬಿತ್ತುವ ಕ್ಷೇತ್ರವೇ ಎಂದರೇ ತಪ್ಪಿಲ್ಲ​. 


ಮಕ್ಕಳ ದಿನಾಚರಣೆ ಕೇವಲ ನೆಹರೂವರ ಪೋಟೋ ಇಟ್ಟು ಅವರ ಬಗ್ಗೆ ಗುಣಗಾಣ ಮಾಡಿ ಮಾರನೇಯ ದಿನ ಮರೆಯುವುದಲ್ಲ​. 

ಮತ್ತೇ ಮುಂದಿನ ವರುಷವೂ ನವಂಬರ್ ತಿಂಗಳ ೧೪ ರಂದು ಮತ್ತೊಂದು ದಿನಾಚರಣೆ ಆಚರಿಸುವುದಕ್ಕೆ ಮಾತ್ರ ಸೀಮಿತಗೊಳಿಸಬಾರದು. 


ನೆಹರೂವರ ಜನ್ಮ​ ದಿನವನ್ನೇ ಯಾಕೆ ಮಕ್ಕಳ ದಿನವೆಂದು ಘೋಷಿಸಿದರೂ ಎಂಬುದನ್ನು ನಾವು ತಿಳಿಯಬೇಕು. ನಿಮಗೂ ಗೊತ್ತೂ ನೆಹರುವರಿಗೆ ಮಕ್ಕಳೆಂದರೇ ಎಷ್ಟು ಪ್ರೀತಿಯೆಂದು. ಹಾಗೆಯೇ ನೆಹರು ಅವರು ಹೇಗೆ ತಮ್ಮ ಮಗಳನ್ನು ಬೆಳೆಸಿದರೂ ಎಂಬುದನ್ನು.  ತಮ್ಮ ಮಗಳನ್ನು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ಸ್ಥಾನಕ್ಕೆ ತರುವವರಿಗಿನ ಅವರ​ ಹೋರಾಟ ಮತ್ತೊಂದು ರೀತಿಯದು. ಅವರು ಅವರ ಮಗಳ ಶಿಕ್ಷಣದ ಬಗ್ಗೆ ಅವರಲ್ಲಿದ್ದ ದೃಷ್ಟಿ ಕೋನಕ್ಕೆ ಸಾಕ್ಷಿಯೆಂದರೇ ಅವರು ಜೈಲಿನಿಂದ  ಬಾಲ್ಯವಸ್ಥೆಯಲ್ಲಿದ್ದ ಪ್ರೀಯ ಇಂದಿರಾಗೆ ಬರೆದ ಸಾಲು ಸಾಲು ಪತ್ರಗಳು. ಆ ಅಷ್ಟೂ ಪತ್ರಗಳು ಈಗ ನಮಗೆ ಪುಸ್ತಕ ರೂಪದಲ್ಲಿ ಸಿಕ್ಕಿರುವುದು ಅದೃಷ್ಟ. 

ಹಾಗೆಯೇ ಈ ಪುಸ್ತಕಗಳು  ಪ್ರತಿಯೊಬ್ಬ​ ತಂದೆಯು ಹೇಗೆ ಮಗುವಿನ ವಿದ್ಯಾಭ್ಯಾಸಕ್ಕೆ ಹೇಗೆಲ್ಲಾ ಒತ್ತೂ ಕೊಡಬೇಕು ಎಂಬುದನ್ನು ಮನನ ಮಾಡುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಮಕ್ಕಳ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಮಾಜ ಮತ್ತು ಸರ್ಕಾರ ಯಾವ ರೀತಿಯಲ್ಲಿ ಕ್ಷ ಕಿರಣವನ್ನು ಹೊಂದಿರಬೇಕೆಂಬುದು.


ಇಂದಿನ ಭಾರತದಲ್ಲಿ ಶಿಕ್ಷಣವೆಂದರೇ ಅದು ಉಳ್ಳವರ ಮತ್ತು ಶಕ್ತಿವಂತರ ಸ್ವತ್ತೇನೋ ಎನ್ನುವ ಮಟ್ಟಿಗೆ ಉಧ್ಯಮವಾಗಿ ಮಾರ್ಪಟ್ಟಿದೆ. ಉನ್ನತ ಶಿಕ್ಷಣವೆಂದರೇ ಹೆಚ್ಚು ಹಣವಿರಬೇಕು. ಅದಕ್ಕಾಗಿ ಮದ್ಯಮ ವರ್ಗದ ತಂದೆ ತಾಯಿಂದರೂಗಳು ಹೆಚ್ಚು ಕಷ್ಟ ಪಟ್ಟು ದುಡಿಯಬೇಕು. ಹಾಗೆಯೇ  ಸಾಕಷ್ಟು ಜನರುಗಳು ಉನ್ನತ ಶಿಕ್ಷಣ ಬೇಕೆಂದು ನಗರಗಳತ್ತಾ ಮುಖ ಮಾಡಿಬಿಟ್ಟಿದ್ದಾರೆ. ಅಂದರೇ ಹಳ್ಳಿಯಲ್ಲಿ ಓದುವ ಮಕ್ಕಳಿಗೆ ಶಿಕ್ಷಣವಿಲ್ಲವೇ ಎಂದು ಗಾಬರಿಯಾಗಬೇಡಿ. 

ಇಂದು ಉನ್ನತ / ಉತ್ತಮ​ ಅಭ್ಯಾಸವೆಂದರೇ ಖಾಸಗಿ ಶಾಲೆಗಳಿಂದಲೇ ಎನ್ನುವ  ವಾತವರಣ ಎಲ್ಲಾ ಕಡೆ ನಿರ್ಮಾಣವಾಗುತ್ತಿರುವುದು ವಿಪರ್ಯಾಸ​. 


ಅದಕ್ಕೆ ಸಾಕ್ಷಿ ಎನ್ನುವಂತೆ ಸರ್ಕಾರಿ ಶಾಲೆಗಳಲ್ಲಿ, ಶಿಕ್ಷಣ ಸಂಸ್ಥೆ, ಕಛೇರಿಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಮಕ್ಕಳುಗಳು ಇದೆ ಖಾಸಗಿ ಕಾನ್ವೆಂಟ್ ಗಳಲ್ಲಿ ಓದಿಸುತ್ತಿರುವುದು. ಸರ್ಕಾರದ ಶಾಲೆಗಳು ಉಪಯೋಗಕ್ಕೆ ಬಾರದವೂ ಎಂಬುದನ್ನು ಅಲ್ಲಿರುವವರು ನಮಗೆ ಗೊತ್ತೂ ಎಂದು ಇಡೀ ಸಮಾಜಕ್ಕೆ ಪರೋಕ್ಷವಾಗಿ ನಿರೂಪಿಸುತ್ತಿರುವುದು.ಇನ್ನೂ ಇಲ್ಲಿನ ಕಾನ್ವೆಂಟ್ ಪ್ರೀಯ​ ಮಂದಿ ಅದು ಯಾವ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅನುಮಾನವಾಗುತ್ತದೆ. 


ಮಕ್ಕಳ ದಿನಾಚರಣೆಯ ನೆಪದಲ್ಲಾದರೂ ಸರ್ಕಾರ ಮತ್ತು ಸಮಾಜ ಮಕ್ಕಳ ಬೆಳವಣಿಗೆಗೆ ಅನುಕೂಲವಾದ ಉನ್ನತ ವಾತವರಣ ನಿರ್ಮಾಣಕ್ಕೆ ಕೈ ಹಾಕಬೇಕು. ವರುಷ ವರುಷವು ಒಂದೊಂದು ಚಿಂತನೆಯ ಮೊಲಕ ಚಿಕ್ಕ ಚಿಕ್ಕ ಕೂರತೆಗಳನ್ನು ನೀಗಿಸಬೇಕು. ಆ ಆ ಶಾಲೆಯ ಮಟ್ಟಿಗೆ ಉತ್ತಮ​ ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಒಂದೊಂದು ಮಗುವಿನ ಸಾಧನೆಯನ್ನು ನಮ್ಮ ಮೊದಲ ಮಹಿಳಾ ಪ್ರಧಾನ ಮಂತ್ರಿಯ ಸಾಧನಾ ಪಥದದಲ್ಲಿ ತಮ್ಮ​ ತಮ್ಮ​ ಮಕ್ಕಳ ಅಭಿವೃದ್ಧಿಯ ಕನಸನ್ನು ಎಲ್ಲಾ ಮಧ್ಯಮ ವರ್ಗದ ಹೆತ್ತವರು ನನಸು ಮಾಡಿಕೊಳ್ಳಬಹುದು. 


ಈ ಕರೋನಾ ಮಗದೊಮ್ಮೆ  ಹೆತ್ತವರೇ ನಮ್ಮ ಗುರುಗಳು ಎಂಬುದನ್ನು ನಿರೂಪಿಸಿದೆ. ಮನೆಯೇ ಮೊದಲ ಶಾಲೆ, ತಾಯಿಯೇ ಮೊದಲ ಗುರು ಎಂಬುದನ್ನು ಕೇವಲ​ ಗಾದೆ ಮಾತಾಲ್ಲ ಎನ್ನುವುದು ಕಳೆದ ಒಂದುವರೆ ವರುಷದಲ್ಲಿ ಪುನಃ ಸಾಭಿತು ಮಾಡಿದ್ದಾರೆ. 


ಮಕ್ಕಳು ತಮ್ಮ ಹಿರಿಯರಿಗಿಂತ ತಾವೇನೂ ಕಮ್ಮಿಯಿಲ್ಲ ಎಂಬುದನ್ನು ತಮ್ಮ ಓದು, ತಿಳುವಳಿಕೆಯ ಮೊಲಕ ತಮ್ಮ ಹೆತ್ತವರಿಗೆ ತೋರಿಸಿಕೊಟ್ಟಿದ್ದಾರೆ. ಅವರ ಈ ಆನ್ ಲೈನ್ ಭರಾಟೆ ಕಂಡು ಎಂಥವರೂ ಮಂತ್ರ ಮುಗ್ಧರಾಗಿರುವುದು ಸುಳ್ಳಲ್ಲ​. 

ಇಂಥ ಒಂದು ದಿನ ಬರುತ್ತದೆ ಎಂಬುದನ್ನು ಯಾರೊಬ್ಬರೂ ನೆನಸಿರಲಿಲ್ಲ​.  


ಇಂಟರ್ ನೇಟ್, ಮೊಬೈಲ್ ಯಾವುದು ಶಾಲಾಂಗಣದಲ್ಲಿ ನಿಷೇಧವೆಂದು ಕಪ್ಪು ಪಟ್ಟಿ ಕಟ್ಟಿದ್ದರೋ ಈಗ ಅದೇ ಅತಿ ಸುಲಭ ಮಾರ್ಗ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಎನಿಸುವ ಮಟ್ಟಿಗೆ ಜಗತ್ತಿಗೆಲ್ಲಾ ಚಿರಾಪರಿಚಿತವಾಗಿದೆ. 


ಮಕ್ಕಳ ದಿನಾಚರಣೆಯೆಂದರೇ ಮಕ್ಕಳ ಆಶೋತ್ತರ, ಮಗುವಿನ​ ಮನಸ್ಸಿನ ಕನಸಿಗೆ ಬಣ್ಣ ಬಳಿಯುವ ಹಿರಿ ಕೈಗಳಾಗಲಿ ಹಿರಿಯರು. 


ಓದೆ ಮಕ್ಕಳ ಬೆಳವಣಿಗೆಗೆ ಮಾರ್ಗ. ಅವರ ವ್ಯಕ್ತಿತ್ವದ ಬೆಳವಣಿಗೆಗೆ ಆಟೋ ಪಾಠಗಳ ಸಮ್ಮಿಶ್ರಣ ನಿರಂತರವಿರಲಿ ಮುಂದೆಂದು ನಾವು ಆಶಿಸೋಣವೇ.

ಸೋಮವಾರ, ಅಕ್ಟೋಬರ್ 25, 2021

ಒಂದು ಚಿತ್ರ vs ಸಾವಿರ ಸಾಲುಗಳು

 ಸಾವಿರ ಸಾಲುಗಳು ಹೇಳುವುದನ್ನು ಒಂದು ಚಿತ್ರ ಮಾತ್ರ ಹೇಳುವುದು.


ಪ್ರತಿಯೊಂದನ್ನು ಯಾರಾದರೂ ಕಲಿಸಿದರೇ ಕಲಿಯುವುದು ಮಕ್ಕಳ ಪ್ರಾಥಮಿಕ​ ಅಭ್ಯಾಸ​. ಆದರೇ ಈ ಮಗು ಯಾರು ಕಲಿಸದೇ ಇಷ್ಟೊಂದು ಚೆಂದವಾಗಿ ಚಿತ್ರಗಳನ್ನು ರಚಿಸುವುದನ್ನು ಕಂಡು ಅಚ್ಚರಿಯಾಗುತ್ತದೆ. 


ಏನನ್ನಾದರೂ ನೋಡಿದರೇ ಅದನ್ನು ಹಾಗೆಯೇ ಯಾವುದೇ ಚಿತ್ತು ಕಾಟು ಇಲ್ಲದೇ ಬರೆಯುವುದು. ಗೆರೆಗಳನ್ನು ತನ್ನ ಇಚ್ಚೆಯ ರೀತಿಯಲ್ಲಿ ಪುಟ ಪೂರ್ಣ ಚಿತ್ರಿಸುವುದು ನೈಸರ್ಗಿಕವಾಗಿ ಬಂದ ಕಲೆ, ಪ್ರತಿಭೆಯೇ ಅನಿಸುತ್ತದೆ.


ಚಿಕ್ಕ ಮಕ್ಕಳು ಯಾವಾಗಲೂ ಚಿತ್ರ ಬರೆಯುವುದರಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಅವರಿಗೆ ಅದು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವ ಒಂದು ವಿಧಾನವಾಗಿರುತ್ತದೆ. 


ಆದರೇ ಅದೇ ದೊಡ್ಡವರಾಗುತ್ತಾ ಚಿತ್ರ ಬರೆಯುವ ಕಲೆಯನ್ನು ಮೂಲೆಗುಂಪು ಮಾಡಿಬಿಡುತ್ತಾರೆ. 


ಅದಕ್ಕೆ ಕಾರಣ ಪುನಃ ಅವರ ಶಿಕ್ಷಣವೇ.ತಮ್ಮ ಓದುವ ಬರೆಯುವ ಬ್ಯಸಿ ಲೈಪ್. ಕಲೆಗಾಗಿ ಮೀಸಲಾದ ಯಾವ ಸಮಯವು ಇಲ್ಲದ ಕಾರಣ ತಮ್ಮಲ್ಲಿರುವ ಕಲೆಯನ್ನು ಪೂರ್ಣವಾಗಿ ಮರೆತು ಬಿಡುತ್ತಾರೆ. 


ಚಿಕ್ಕ ವಯಸ್ಸಿನಲ್ಲಿಯೇ ಗುರುತಿಸಿ ಅದಕ್ಕೆ ತಕ್ಕನಾದ ಶಿಕ್ಷಣವನ್ನು ಕೊಡಿಸಿದರೇ ಅವರು ಇನ್ನೂ ಉತ್ತಮವಾಗಿ ತನ್ನ​ ಮೊದಲ  ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ. 


ಆದರೇ ಈ ನಮ್ಮ ಮಗುವಿಗೆ ನಾವು ಯಾರೂ  ಚಿತ್ರ ಬರೆಯುವುದನ್ನು ಎಂದು ಹೇಳಿ ಕೊಟ್ಟಿಲ್ಲ​. 


ಆದರೇ ಅವನು ಮೊದ ಮೊದಲು ಟಿ. ವಿ ಯಲಿ ನೋಡಿದ ಪ್ರಾಣಿಗಳಾದ ಹುಲಿ, ಸಿಂಹ, ಹಸು ಇತ್ಯಾದಿ ಚಿತ್ರಗಳನ್ನು ಬರೆಯುವುದರಲ್ಲಿ ಖುಷಿಯಿಂದ ನಿತ್ಯ ತೊಡಗುತ್ತಿದ್ದ​.  

ದಿನದಲ್ಲಿ ಒಂದೇರಡು ಭಾರಿಯಾದರೂ ಅದೇ ಹೀಗಾಗಲೇ ಚಿತ್ರಿಸಿದ​ ಪ್ರಾಣಿಗಳ ಚಿತ್ರವನ್ನು ವಿವಿಧ ಭಂಗಿಗಳಲ್ಲಿ ಬರೆಯುವುದನ್ನು ಕಾಣಬಹುದು.


ಅವನಿಗೆ ಡೈನೊಸಾರ್ ಗಳನ್ನು ವಿವಿಧ ರೀತಿಯಲ್ಲಿ ಚಿತ್ರಿಸಿ ಬಣ್ಣ ಹಾಕುವುದರಲ್ಲಿ ಏನೋ ಮಹಾ ಸಂತೋಷ​. ತಾನು ಯಾವುದೇ ಚಿತ್ರ​ ಬರೆಯುವಾಗಲೂ ಯಾವೊಂದು ಗೆರೆಯನ್ನು ಹಳಿಸುವುದಾಗಲಿ, ಪುನರ್ ರಚಿಸುವುದಾಗಲಿ ಇಲ್ಲ​. ಎಲ್ಲಾ ಚಿತ್ರಗಳನ್ನು ಅತ್ಯಂಥ ನಾಜೂಕಾಗಿ ಬರೆದು ಬಣ್ಣ ತುಂಬಿಸಿಬಿಡುತ್ತಾನೆ. ತನ್ನ ಮನಕ್ಕೆ ಬಂದ ಯಾವುದೇ ಚಿತ್ರವನ್ನು ಎಲ್ಲಾ ಸೂಕ್ಷ್ಮತೆಗಳೊಂದಿಗೆ ಯಾವುದೇ ಒಂದು ಹಾಳೆಯಲ್ಲಿ  ಪೂರ್ಣವಾಗಿ  ವರ್ಣಮಯವಾಗಿಸುವುದನ್ನು  ನೋಡುವುದೇ ಸೌಂದರ್ಯ​! 

ಇದೀಷ್ಟನ್ನು ಕೆಲವೇ ನಿಮಿಷಗಳಲ್ಲಿ ಮುಗಿಸುವುದನ್ನು ನೋಡಿದರೇ ನಮಗೆ (ಹಬ್ಬ​) ಅಬ್ಬಾವೆನಿಸುತ್ತದೆ. 



ಪುಸ್ತಕದಲ್ಲಿ ನೋಡಿದ ಯಾವುದೇ ಚಿಕ್ಕ ಚಿತ್ರವನ್ನು ದೊಡ್ಡ ಕ್ಯಾನ್ ವಾಸ್ ನಲ್ಲಿ ದೊಡ್ಡದಾಗಿ ಬರೆದು ಬಣ್ಣ ತುಂಬಿಸುವ ಈ ತಿಕ್ಷ್ಣ ಕಲೆ ಕಂಡರೇ ಇದೊಂದು  ವರದಾನವೇ ಸರಿ.


ನಮಗೇನಾದರೂ ಬರೆಯಬೇಕೆಂದರೇ ಎಷ್ಟೊ ಭಾರಿ ಬರೆದು ಹಳಿಸಿ ಬರೆದು ಮತ್ತೆ ಹಳಿಸಿ ಬರೆಯುತ್ತೇವೆ. ಆದರೇ ಈ ಮಗುವಿಗೆ ಅದು ನೀರು ಕುಡಿದಷ್ಟು ಸುಲಭ​. ಅವನಿಗೆ ಇಷ್ಟವಾದರೆ ಮಾತ್ರ ಸಾಕು. ಅದು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಈ ಮಂತ್ರ ದೊಡ್ಡವರಾದ ನಮಗೆ ಗೊತ್ತಿಲ್ಲ​. ನಾವು ಬೇರೆಯವರ​ನ್ನು ಮಾತ್ರ​ ಮೆಚ್ಚಿಸಲು ಹೆಚ್ಚುಶ್ರಮಿಸುತ್ತೇವೆ. ಅದಕ್ಕೆ ನಮಗೆ ಅತಿ ದೊಡ್ಡ ಶ್ರಮ ಅನಿಸುತ್ತದೆ. 


ನಮಗೆ ಚಿತ್ರ ಅಂದರೇ ಅದು ಇದು. ಚಿತ್ರ ಈ ಬಗೆಯದ್ದು ಆ ಬಗೆಯದ್ದು ಎಂಬ ವರ್ಗಿಕರಣದಲ್ಲಿ ಕೂರುತ್ತೇವೆ. ಆದರೇ ಈ ಮಗುವಿಗೆ ತನ್ನ ಖುಷಿಯ ತನ್ನಿಚ್ಚೆಯ ಚಿತ್ರ ಮಾತ್ರ ಅಷ್ಟೆ. ತನಗೆ ಪ್ರೀಯವಾದದ್ದನ್ನು  ಹಾಳೆಯ ತುಂಬ ಬರೆದು ನಲಿಯಬೇಕು ಎನ್ನುವುದು ಮಾತ್ರ ಗೊತ್ತು. 


ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋದರೇ. ಇನ್ನೂ ಹೆಚ್ಚಿನ ರೀತಿಯಲ್ಲಿ ಅಭ್ಯಾಸವನ್ನು ಮಾಡಿದರೇ ಇನ್ನೂ ತುಂಬ ಚೆನ್ನಾಗಿರುತ್ತದೆ. 


ಆದರೇ ಈ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ.. ಅದು ಈ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇದನ್ನು ಮುಂದುವರಿಸಿಕೊಂಡು ಪೋಷಿಸುವ ವ್ಯವಸ್ಥೆ ನಮ್ಮಂತಹ ಹೆತ್ತವರಿಗೆಲ್ಲಾ ಅದು ಹೇಗೆ ಸುಲಭವಾಗಿ ಸಿಗುತ್ತೋ ಗೊತ್ತಿಲ್ಲ​. 


ಹೀಗೆ ಹಲವು ಬಗೆಯ​ ಬೈ ಬರ್ತ್ ಪ್ರತಿಭೆಗಳನ್ನು ಮಕ್ಕಳಲ್ಲೂ ಚಿಕ್ಕವರಿದ್ದಾಗಲೇ ಗುರುತಿಸಿ ನೀರೆರೆದಾಗ ಮಾತ್ರ ಪರಿಪೂರ್ಣವಾಗಿ ಮಕ್ಕಳು ಆದರಲ್ಲಿಯೇ ದಿ ಬೆಸ್ಟ್ ಅನಿಕೊಳ್ಳುತ್ತಾರೆ. 


ಆದರೇ ನಾವುಗಳು ಅದೇ ಹಳೆಯ​ ಮಾಡೆಲ್ ರೀತಿಯಲ್ಲಿ ಶಿಕ್ಷಣ, ಅಂಕ, ಸಿಲಬಸ್ ಎಂದುಕೊಂಡು ಪುಸ್ತಕ ಪಾಂಡಿತ್ಯಗಾರರನ್ನಾಗಿ ಮಾತ್ರ​ ಮಾಡಿ ನೆಮ್ಮದಿಯನ್ನು ನಮ್ಮ ಮಕ್ಕಳಿಂದ​ ಕಾಣುತ್ತೇವೆ. 


ಈ ರೀತಿಯ ಮನುಷ್ಯ ರೂಡಿತ​ ಕಲೆಗಳನ್ನು ನಾವು ಕಂಡು ಕಾಣದವರ ರೀತಿಯಲ್ಲಿ ಕಡೆಗಣಿಸುವುದರಲ್ಲಿ ಮುಂದಾಗುತ್ತಿರುವುದು ವಿಪರ್ಯಾಸವೇ ಸರಿ​!

ಗುರುವಾರ, ಸೆಪ್ಟೆಂಬರ್ 16, 2021

ಮೂಗು ಮುರಿಯುವ ವಿಚಾರವಲ್ಲ

ಮನಸ್ಸಿನಲ್ಲಿ ಏನೋ ಅಂದುಕೊಂಡಾಗಲೇ ಯಾರೋ ಒಂದು ಸೀನು ಸೀನಿದಾಗ ಹಾಗೆಯೇ ಅವರ ಕಡೆ ಎದುರಿರುವವರು ನೋಡುವುದನ್ನು ನಾವು ನೋಡಬಹುದು. 

ಸೀನು ಬಂದಾಗ ಶಬ್ಧವು ಜೋರಾಗಿಯೇ ಇರುತ್ತದೆ.  ಅದಕ್ಕೆ ಎಲ್ಲಾರ ಗಮನ ಸೀನುವವರ ಕಡೆಗೆ ಹೋಗುವುದು. 

ಅವರು ಸಾವರಿಸಿ ಸಾರಿ! ಎನ್ನುವುದು ಸರ್ವೆ ಸಾಧಾರಣ​. 

ಮೂಗು ಇರುವವರೆಗೂ ನೆಗಡಿಗೆ ಕೊನೆ ಇಲ್ಲ​. ಒಬ್ಬೊಬ್ಬರಂತೂ ಒಂದು ಸೀನಿಗೆ ಕೊನೆಯಿಲ್ಲ​. ಒಂದೇ ಭಾರಿ ಸರಿ ಸುಮಾರು ಹತ್ತರವರೆಗೂ ಸೀನಿ ಸೀನಿ ಸುಸ್ತಾಗುವುದನ್ನು ನೋಡಿದರೇ ಕನಿಕರವೇ ಬರುತ್ತದೆ. 

ಉಪ್ ಅದನ್ನು ಸಾವರಿಸಿಕೊಂಡು, ಮುಗು ಬಾಯಿ ವರೆಸಿಕೊಂಡಾಗ ಅವರ ಕಷ್ಟ ಅವರೇ ಅನುಭವಿಸಬೇಕು.


ಮೂಗು ನಮ್ಮ ದೇಹದಲ್ಲಿಯೇ ಅತಿ ಸೂಕ್ಷ್ಮವಾದ ವಾಸನೆಯನ್ನು ಗ್ರಹಿಸುವ ಪಂಚೇದ್ರಿಯದಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ. 

ಮೂಗು ಮುಖಕ್ಕೆ ಒಂದು ಸೌಂದರ್ಯವನ್ನು ಕೊಡುವುದರಲ್ಲೂ ಅಗ್ರ ಸ್ಥಾನವನ್ನು ಪಡೆದಿದೆ.

 ಹಾಗೆಯೇ ಮೂಗಿನ ಉಪದ್ರವವನ್ನು ಸಹಿಸಿಕೊಳ್ಳಲೇಬೇಕು. ಎಷ್ಟು ಉಪಯೋಗಕಾರಿಯೋ ಅಷ್ಟೇ ಕಸಿವಿಸಿಯನ್ನುಂಟು ಮುಖದಲ್ಲಿಯೇ ಮಾಡಿ ಎಲ್ಲರೂ ನಮ್ಮ ಕಡೆ ನೋಡುವಂತೆ ಮಾಡುವುದರಲ್ಲಿಯು ಮೂಗು ಮುಂದು. 


ನೆಗಡಿ ಬಂದರಂತೂ ಮುಗಿಯಿತು. ಎಷ್ಟು ಭಾರಿ ಹಿಂಡಬೇಕು. ಎಷ್ಟೋ ಭಾರಿ ಸೀನಬೇಕು. ಮೂಗು ಕಟ್ಟಿದರಂತೂ ಬೇಡಪ್ಪಾ ಬೇಡಾ! 

ಹೇ ಇದು ಏನೂ ಚಿಕ್ಕ ನೆಗಡಿ ಎಂದರೂ.. ಒಂದು ವಾರಕ್ಕೂ ಅಧಿಕ ದಿನಗಳು  ವ್ಯಕ್ತಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತದೆ. 

ಮುಖದಲ್ಲಿಯ ಮುಖ್ಯ ಅಂಗವಲ್ಲವೇ. ಕೆಂಪು ಮೂಗು ಎಲ್ಲರನ್ನು ಪುನಃ ಗಮನ ಸೆಳೆಯುವಂತೆ ಮಾಡುತ್ತದೆ.

ಸೀನಿದರೂ, ಸುಮ್ಮನಿದ್ದರೂ ಮೂಗಿನ ಕಸಿವಿಸಿ ಬೇಡಪ್ಪಾ ಬೇಡಾ. ಅದರೂ, ನೆಗಡಿ ಎಂದು ಮೂಗು ಕೊಯ್ಯಲೂ ಸಾಧ್ಯವಿಲ್ಲವಲ್ಲವಾ! 


ಸೂರ್ ಸೂರ್ ಅಂದರೂ ಅಕ್ಕಪಕ್ಕದವರೂ ಭಯದಿಂದ ನೋಡುವಂತೆ ಮಾಡಿದ್ದು ಈಗಿನ ಈ ಕರೋನಾ. ಸೀನಿದರಂತೂ ಮುಗಿಯಿತು.. ೧೪ ದಿನ ಕ್ವಾರಂಟೈನ್ ಗ್ಯಾರಂಟಿ. ಯಾರೊಬ್ಬರೂ ನಿನ್ನ ತಂಟೆಗೆ ಬರದೇ ಏನೋ ದೊಡ್ಡ ಕ್ರೈಮ್ ಮಾಡಿದ ರೀತಿಯಲ್ಲಿ ಅನುಮಾನದಿಂದ ಆ ಮೊಗನ್ನೇ ನೋಡುವ ದಿನ ಮಾನದಲ್ಲಿ ನಾವುಗಳು ಇಂದು ಇದ್ದೇವೆ. 


ಆದರೂ ಮೂಗಿನ ಸೌಂದರ್ಯ ವರ್ಣಿಸಿದ ಕವಿಗಳೇ ಇಲ್ಲವನಿಸುತ್ತದೆ. ಮೂಗು ಹೆಣ್ಣಿಗೆ ಸೌಂದರ್ಯವನ್ನು ಇನ್ನೂ ಹೆಚ್ಚು ಕೊಡುತ್ತದೆ. ಹಾಗೆಯೇ ಮೂಗಿನ ಸೌಂದರ್ಯವನ್ನು ಹೆಚ್ಚಿಸುವ ಪ್ಲಾಸ್ಟಿಕ್ ಸರ್ಜರಿಯ ಲೀಸ್ಟ್ ಗಳು ವೈದ್ಯಕೀಯ ರಂಗದಲ್ಲಿ ಅದು ಎಷ್ಟು ಇದ್ದಾವೆಯೋ.  

ಅಷ್ಟರ ಮಟ್ಟಿಗೆ ಏನೇ ಸೀನು, ಸಿಂಬಳ​, ನೆಗಡಿ ಹತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನು ಮೈತುಂಬಿಕೊಂಡಿದ್ದರೂ ಅದರ ಒಲಮೆ ಮತ್ತು ನಲುಮೆಯನ್ನು ಕಡೆಗಣಿಸುವಂತಿಲ್ಲ ಅಂದರೇ ನೀವು ಮೂಗು ಮುರಿಯಬೇಡಿ. 


ಮುಗುತಿ ಮೂಗಿಗೆ ಅಂಧವೇ ಅಂಧವೆಂದೂ ಜಗಜ್ಜಾಯಿರಾಗಿದ್ದು ನಮ್ಮ ಭಾರತದಲ್ಲಿಯೇ.. ಅದು ವಿಶ್ವ ಪ್ರಸಿದ್ಧಿ ಮಾಡಿದ್ದು ನಮ್ಮ ಟೆನಿಸ್ ಆಟಗಾರ್ತಿಯೆಂದರೇ.. ತಿಳಿಯಿರಿ ನಮ್ಮ ಭಾರತದಲ್ಲಿಯೇ ಅತಿ ಹೆಚ್ಚು ರೀತಿಯ ಮುಗುತಿಗಳು ಈಗಲೂ ಮೂಗಿನ ಅಲಂಕಾರಕ್ಕಾಗಿ ಮಾರ್ಕೆಟ್ ನಲ್ಲಿ ನಿತ್ಯ ಹೊಸ ಹೊಸ ಡಿಸೈನ್ ನಲ್ಲಿ ಮಾರಾಟಾವಾಗುತ್ತಿವೆ. 


ಆದರೇ ನಾನು ಹೇಳಲು ಹೋರಟ್ಟಿದ್ದು ಮೂಗಿನ ಬಗ್ಗೆ ಅಲ್ಲಾ. ಆದರೂ ಮೂಗೇ ಸೀನಿಗೆ ಮೂಲ​. ಆದ್ದರಿಂದ ಮೂಗಿನ ಬಗ್ಗೆ ಹೇಳಲೇಬೇಕು. 

ಆದರೂ ಸೀನಿದರೇ ಏನೂ ಸಮಸ್ಯೆ ಅನ್ನಬಹುದು. ಹೌದು ಸೀನಿಗೂ ಮೌಲ್ಯವಿದೆ ಅನ್ನುವುದು. 


ಒಂಟಿ ಸೀನು ಒಳ್ಳೆಯದಲ್ಲ​. ಜೋಡಿ ಸೀನು ಬಂದರೇ ಪಕ್ಕಾ ಅದೃಷ್ಟ. ಹೀಗೆ ನಂಬುವವರನ್ನು ನಾನು ನೋಡಿದ್ದೇನೆ.


ನಮ್ಮ ಊರಿನಲ್ಲಿ ನಮ್ಮ ಅಜ್ಜಿ ಸಣ್ಣವಳಾಗಿದ್ದಾಗಿನ ಕಥೆ ಇದು. ಆ ಒಂದು ವರುಷ ಅತಿ ಹೆಚ್ಚು ಮಳೆಯಾಗಿ ಚೆನ್ನಾಗಿ ಬೆಳೆ ಬೆಳೆದಿದ್ದರಂತೆ. ಹಾಗೆಯೇ ಮೆಣಸಿಕಾಯಿಗಳನ್ನು ಅತಿ ಹೆಚ್ಚಾಗಿ ಊರಿನಲ್ಲಿ ಮತ್ತು ಅಜ್ಜಿಯವರ ಸಂಬಂಧಿಕರ​ ಮನೆಗಳ​ಲೆಲ್ಲಾ ಬೆಳೆದಿದ್ದರಂತೆ. ಆ ವರ್ಷವೇ ಇಷ್ಟೊಂದೂ ಮೊಟೆ ಮೊಟೆ ಕೆಂಪು ಮೆಣಸಿನ ಕಾಯಿಗಳು ಚೀಲ ತುಂಬಿದ್ದಾರಂತೆ. ಆದರೇ ಮಾರ್ಕೆಟ್ ನಲ್ಲಿ ಯಾರು ಕೇಳುವವರೇ ಇಲ್ಲಾ. ಬೆಲೆಯಂತೂ ಪಾತಾಳಕ್ಕೆ ಇಳಿದಿದೆ. ಏನೂ ಮಾಡಲೂ ಆಗದೇ ಎಲ್ಲಾರೂ ತಲೆ ಮೇಲೆ ಕೈ ಹೊತ್ತು ಕೊತುಕೊಂಡ ಸಮಯ​. ನಮ್ಮ ಅಜ್ಜಿಯ ವಯಸ್ಸು ೮-೯ ಅನಿಸುತ್ತದೆ. ಹಾಗೆಯೇ ಆಟವಾಡುತ್ತಾ ಅಲ್ಲಿ ಇಲ್ಲಿ ಮನೆಯಲ್ಲಿದ್ದಾಗ ಎಲ್ಲಾರ ಸಮ್ಮುಖದಲ್ಲಿ ಒಂದೇ ಒಂದು ಸೀನಿದರಂತೆ. ಕೇಳಬೇಕೆ ಮಾರನೇಯ ದಿನವೇ ಮೆಣಸಿನ ಕಾಯಿಯ ಬೆಲೆ ಯಾರು ಊಹಿಸದ ರೀತಿಯಲ್ಲಿ ಒಳ್ಳೆಯ ರೇಟ್ ಗೆ ಮಾರಾಟವಾಗುವಂತಾಯಿತಂತೆ.  ಊರಿನ ಎಲ್ಲಾ ಮನೆಯವರೂ ಮಾರಿ ಸುಮಾರಾಗಿ ಹಣ ಸಂಪಾಧಿಸಿದರಂತೆ. ಅವರ ದೊಡ್ಡಪ್ಪ​ ನಮ್ಮಜ್ಜಿಗೆ ಹೊಸ ಲಂಗ ಜಾಕೇಟ್ ತಂದು ಕೊಟ್ಟಿದ್ದರೂ ಎಂದು ನಮ್ಮಾಜ್ಜಿಯೇ ನಮಗೆ ಹೇಳಿದ್ದರೂ. 


ಅಂದಿನಿಂದಲೂ ಯಾರಾದರೂ ಏನಾದರೂ ಮುಖ್ಯವಾದ ಶುಭಾ ವಿಚಾರಗಳನ್ನು ಮಾತನ್ನಾಡುವಾಗ ನಮ್ಮ ಅಜ್ಜಿ ಒಂದು ಸೀನಿದರೇ ಮುಗಿಯಿತು. ದೇವರೇ ಅಸ್ತು ಅಂದಂತೆ. ಅಂದುಕೊಂಡ ಕೆಲಸ ಸುಸುತ್ರವಾಗಿ ನೆರವೆರುವುದು ಅನ್ನುವ ಮಟ್ಟಿಗೆ.  

ನಾನು ನೋಡಿದಂತೆ ಒಂದು ಸೀನು ಸೀನಿಯೂ ಒಳ್ಳೆಯದಾಗವುದು ಎಂದು ಗೊತ್ತಾಗಿದ್ದು ಅಂದೇ.  


ಆದರೇ ಒಬ್ಬೂಬ್ಬರ ಒಂಟಿ ಸೀನು ಭಯಂಕರ ಅನಾಹುತ ಮಾಡಿರುವುದನ್ನು ಕಂಡೂಂಡವರ ಅನುಭವ ಭೀಕರವಾಗಿರುವುದರಿಂದಲೋ ಏನೋ. ಯಾರದರೂ ಒಂಟಿ ಸೀನಿದ ಕ್ಷಣ ಎಲ್ಲಾರೂ ಒಂದು ರೀತಿಯಲ್ಲಿ ನೋಡುವುದನ್ನು ಈಗಲೂ ನಮ್ಮ ಹಳ್ಳಿಗಳ ಕಡೆ ನೋಡಬಹುದು. 


ಆದರೂ ಸೀನೂ ಏನೂ ನೋಡುಕಂಡು ಬರುತ್ತಾ. ಅದು ಯಾವಾಗ ಬರುತ್ತೋ ಯಾರಿಗೆ ಗೊತ್ತೂ?


ಇದು ಕಾಕತಾಳಿಯವೋ ಅಥವಾ ನಿಜವೋ ಗೊತ್ತಿಲ್ಲ​. ಎರಡು ಸೀನುಗಳು ಪಾಸಿಟಿವ್ ವೈಭಂತೂ ಮನೆಗಳಲ್ಲಿ ಮನಗಳಲ್ಲಿ ಕೊಟ್ಟಿರುತ್ತದೆ. ಆ ನಂಬಿಕೆಯಲ್ಲಿಯೇ ಮಾಡುವ ಕೆಲಸಗಳು ಸಕ್ಸ್ ಸ್ ಆಗಿದ್ದರೂ ಆಗಿರಬಹುದು. 


ಬಹುತೇಕರೂ ಇದನ್ನೂ ಇನ್ನೂ ಇಂದಿಗೂ ಅವರವರ ಮಟ್ಟಿಗೆ ನಂಬುತ್ತಾರೆ. ಒಬ್ಬಬ್ಬೊರ ಸೀನಿಗೆ ಕಿಮ್ಮತ್ತು ಇರುವುದಿಲ್ಲ​. ಬಿಡದೇ ಎರಡಕ್ಕಿಂತ ಹೆಚ್ಚು ಸೀನಿದರೇ ಯಾರೂ ಕೇಳುತ್ತಾರೆ. ಆದರೂ ಒಂಟಿ ಸೀನು ಭಾರಿ ಡೆಂಜರ್ ಅನ್ನುವ ಮಟ್ಟಿಗೆ ಭಯದಿಂದ ಮಾಡುವ ಕೆಲಸಗಳನ್ನು ಮಿಸ್ಟೆಕ್ ಮಾಡಿ ವಿಫಲ ಮಾಡಿಕೊಂಡು ಸೀನಿದವರನ್ನು ಕೆಟ್ಟದಾಗಿ ನೋಡಬಾರದು. ಅದು ಏನೂ ಅವರೂ ಹೇಳಿ ಕೇಳಿಕೊಂಡು ಸೀನಿರುತ್ತಾರಾ ನೀವೇ ಹೇಳಿ.


ಈ ನಂಬಿಕೆ ಸರಿಯೋ ತಪ್ಪೊ.. ನಮ್ಮಜ್ಜಿ ಇರುವವರೆಗೂ ನಮ್ಮ ಮನೆಯಲ್ಲಿ ಒಂಟಿ ಸೀನಿದರೂ ತುಂಬ ಖುಷಿಯಿಂದ ಸ್ವಾಗತಿಸುತ್ತಾ ಪಾಸಿಟಿವ್ ಮೈಂಡ್ ಸೆಟ್ ನಿಂದ ಮುನ್ನುಗ್ಗುತ್ತಿದ್ದೇವು.  ನನಗೂ ಅನಿಸುತ್ತೇ. ಇದು ಕೇವಲ ಮನದ ನಂಬಿಕೆ. ಯಾವ ಕೆಲಸವೇ ಆಗಲಿ ಮನಸ್ಸಿನಿಂದ ಪ್ರೀತಿ ಪಟ್ಟು ಮಾಡಿದರೇ ಒಂಟಿ ಸೀನೇ ಆಗಲಿ ಜೋಡಿ ಸೀನೇ ಆಗಲಿ ಏನೂ ಮಾಡಲಾರವು.


ಆದರೂ ಸೀನಿದ ತಕ್ಷಣ ಮುಖ ನೋಡುವವರನ್ನು ನಿಲ್ಲಿಸಲೂ ಸಾಧ್ಯವಿಲ್ಲ​. ಅಮೆರಿಕಾದಲ್ಲಿಯೇ ಪರವಾಗಿಲ್ಲ ಸೀನಿದ ತಕ್ಷಣ ಜೊತೆಯಲ್ಲಿರುವವರು ಗಾಡ್ ಬ್ಲೇಸ್ ಯು ಅನ್ನುತ್ತಾರೆ. 

ಇದು ಅದು ಎಲ್ಲಾ ನಂಬಿಕೆ ಅನ್ನಿಸುವುದಿಲ್ಲವಾ?


ಶುಕ್ರವಾರ, ಆಗಸ್ಟ್ 27, 2021

ತೌಡು ವಿಚಾರಗಳು online ನಲ್ಲಿ

ಇಂದಿನ ಪೀಳಿಗೆಗೆ ತಮ್ಮ ಅಭಿಪ್ರಾಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಈಗ​ ಹತ್ತು ಹಲವು ದಾರಿಗಳು ದಾರಾಳವಾಗಿ ಸಿಗುತ್ತಿವೆ. 


ಕೆಲವೇ ಸೆಕೆಂಡಗಳಲ್ಲಿ ಯಾವುದೋ ಮೊಲೆಯಿಂದ ಪ್ರಪಂಚದ ಪ್ರತಿಯೊಂದು ಜಾಗದಲ್ಲೂ ಮನೆ ಮಾತಾಗಿ ಪ್ರಸಿದ್ಧರಾಗಿಬಿಡುವ ಪರಿಸ್ಥಿತಿಯಿದೆ. 


ಇದಕ್ಕೆಲ್ಲಾ ಪ್ರತಿಯೊಬ್ಬರೂ ಈ ಇಂಟರ್ ನೇಟ್ -ಅಂತರ ಜಾಲಕ್ಕೆ ಥ್ಯಾಂಕ್ಸ್ ಹೇಳಬೇಕು.  


ಕಳೆದ ಕೆಲವು ವರುಷಗಳಲ್ಲಿ ಅಂತರ ಜಾಲ ವಹಿವಾಟು ಯಾರೂ ಉಹಿಸಲು ಸಾದ್ಯವಿಲ್ಲದಷ್ಟು ವೇಗವಾಗಿ  ಪ್ರತಿಯೊಬ್ಬರನ್ನೂ ಮೋಡಿ ಮಾಡಿ ಸೆಳೆದಿದೆ. 


ಮಕ್ಕಳಿಂದ ಇಡೀದು ಎಲ್ಲಾ ವಯೋಮಾನದವರನ್ನು ಸೂಜಿಗಲ್ಲಿನಂತೆ ತನ್ನ ತೆಕ್ಕೆಗೆ ಸೆಳೆದಿದೆ ಅಂದರೇ ತಪ್ಪಿಲ್ಲ​. 


ಹಿಂದೆಯೆಲ್ಲಾ ತಮ್ಮ ಮಾತು, ಅನಿಸಿಕೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು ಅಂದರೇ ಒಂದು ನೀನೆ ಹೋಗಿ ಪ್ರತಿಯೊಬ್ಬರಿಗೂ ತಿಳಿಸಬೇಕಾಗಿತ್ತು. ಹಾಗೆಯೇ ಯಾವುದಾದರೂ ಪತ್ರಿಕೆ, ರೇಡಿಯೋ, ಟಿ.ವಿ ಗೆ ನಡೆದು ನಿನ್ನ ಅಭಿಪ್ರಾಯಗಳನ್ನು ಹೆಚ್ಚಿನ ಮಂದಿಗೆ ತಿಳಿಸಲು ಅಲ್ಲಿರುವವರ ಸಹಾಯ ಕೇಳಬೇಕಾಗಿತ್ತು. 


ಅದು ಸಹ ಅಷ್ಟು ಸುಲಭವಿರಲಿಲ್ಲ ಬಿಡಿ. ನೀನು ಹೇಳುವ ವಿಷಯ ಎಷ್ಟು ಪರಿಣಾಮಕಾರಿ ಮತ್ತು ಅದು ಸಾರ್ವಜನಿಕರಿಗೆ ಉಪಯೋಗವಿದಿಯೋ ಇಲ್ಲವೊ ಎಂಬುದನ್ನು ಅಲ್ಲಿರುವ ಸಂಸ್ಥೆಯವರು ನಿರ್ಧರಿಸಿ ಅವರ ಮಾಧ್ಯಮದಲ್ಲಿ ಪ್ರಕಟಿಸುತ್ತಿದ್ದರು. 


ಹೀಗೆಲ್ಲಾ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಯೊಂದು ಅಭಿವ್ಯಕ್ತಿಗಳು ಸಾಣೆ ಹಿಡಿದು ಸಾರ್ವಜನಿಕರನ್ನು ತಲುಪುತ್ತಿದ್ದವು. 


ಹಾಗೆಯೇ ಪ್ರತಿಯೊಬ್ಬನೂ ತಾನೇ ದೊಡ್ಡವನು ಎಂದು ತನ್ನದೇ ಕೊನೆಯೆಂದು ಏನನ್ನೂ ಪ್ರಲಾಪಿಸಲು ಸಾಧ್ಯವಿರಲಿಲ್ಲ​.  ಅಷ್ಟೊಂದು ಸುಲಭವಾಗಿ ಇಡಿ ಸಮೋಹವನ್ನು ತಲುಪಲು  ಸಾಕಾಗುತ್ತಿರಲಿಲ್ಲ​.


ದೊಡ್ಡ ದೊಡ್ಡ ವಿಧ್ವಾಂಸರು, ಸಾಹಿತಿಗಳು, ಲೇಖಕರು ಯಾರೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಿಂದೆ ಸುಲಭವಾಗಿ ಜನರನ್ನು ತಲುಪಲು ಮೇಲೆ ಹೇಳಿದ ಆ ಮಾಧ್ಯಮಗಳೆ ಮೊಲವಾಗಿತ್ತು. 


ಆ ಮಾಧ್ಯಮಗಳು ಸಹ ಕೇವಲ ಯಾರೆಂದರೇ ಯಾರೆಲ್ಲಾ ಮಾತನಾಡುವವರನ್ನು, ನೆನ್ನೆ ಮೊನ್ನೆ ಬಂದ ಯಾರನ್ನೊ, ನಿನ್ನೆ/ಇಂದು ಹುಟ್ಟಿದ ಪ್ರತಿಭೆಗಳನ್ನು  ಅವನ ಮಹಿಮೆಯನ್ನು ಅಷ್ಟೊಂದು ಸುಲಭವಾಗಿ ಪ್ರಚಾರವಾಗಲು ಬಿಡುತ್ತಿರಲಿಲ್ಲ​.  ಪ್ರತಿಯೊಂದನ್ನು ಪರೀಕ್ಷಿಸಿ ವಿಮರ್ಶಿಸಿ ಸಮಾಜ ಮುಖಿ ಸಮಾಜ ಸ್ನೇಹಿ ವಿಚಾರಗಳನ್ನು, ಬರಹಗಳನ್ನು, ಭಾಷಣಗಳನ್ನು ಮಾತ್ರ​ ಪ್ರಸರಿಸುತ್ತಿದ್ದರು.


ಹೀಗೆ ಇದ್ದ ಬಿಗಿ ಪರಿಸ್ಥಿತಿ  ಕ್ರಮೇಣ ಆನ್ ಲೈನ್ ಇಂಟರ್ ನೇಟ್ ಯುಗದಲ್ಲಿ ಯಾಕೇ ಅನಿಸಿಬಿಟ್ಟಿತು. ಕಟ್ಟು ನಿಟ್ಟಿನ ಸಾಂಪ್ರದಾಹಿಕ ಸಮೋಹ ಮಾಧ್ಯಮಗಳ​ ದೋರಣೆಯನ್ನೇ ಜೋಕ್ ಮಾಡುವಂತೆ ಯಾರು ಬೇಕಾದರೂ ಯಾವಾಗ ಬೇಕಾದರೂ ಏನೂ ಬೇಕಾದರೂ ಎಲ್ಲಿಯಾದರೂ ಕೊಗಿ ನಿನ್ನ​ಮನೆಯಿಂದಲೇ, ಮೂಲೆಯಿಂದಲೇ ಇಡೀ ಪ್ರಪಂಚದ ಕಟ್ಟ ಕಡೆಯ ಪ್ರದೇಶದಲ್ಲಿರುವ ಕಟ್ಟಕಡೆಯ ಪ್ರಜೆಯನ್ನು ತಲುಪಬಹುದು.


ಉಫ್! ಯಾರು ಬೇಕಾದರೂ ಏನೂ ಬೇಕಾದರೂ ಬರೆಯಬಹುದು ಆನ್ ಲೈನ್ ಲ್ಲಿ ಪಬ್ಲಿಷ್ ಮಾಡಬಹುದು. ಯಾವ ವಿಮರ್ಶಕನೂ ಇಲ್ಲ, ಯಾರು ಇಲ್ಲ​. ನಿನಗೆ ನೀನೆ ಸಂಪಾದಕ & ಪ್ರಕಾಶಕ​. ಇದಕ್ಕೆ ಬ್ಲಾಗ್, ವಿಕಿ ಪೀಡಿಯಗಳಂತಹ ವೇಬ್ ಪೇಜ್ ಗಳ ಕೊಡುಗೆ ಅಪಾರ​.


ಇನ್ನೂ ವಿಡಿಯೋ,ಪೋಟೋ. ನೀನು  ಟಿ. ವಿ ಯಲ್ಲಿ ಬರಬೇಕೆಂದರೇ ಈ ಹಿಂದೆ ನೀನೊಬ್ಬ ಪ್ರಸಿದ್ಧವಾಗುವಂತಹ ದೊಡ್ಡ ಕೆಲಸ ಮಾಡಿ ಸಮಾಜದಲ್ಲಿ ಒಳ್ಳೆಯವನು ಅನಿಸಿಕೊಂಡಿರಬೇಕಾಗಿತ್ತು. ಅಥವಾ ಅತಿ ದೊಡ್ಡ ಕೆಟ್ಟ ಕೆಲಸ ಮಾಡಿ ಸಮಾಜದಲ್ಲಿ ಕುಖ್ಯಾತಿ ಹೊಂದಿರಬೇಕಾಗಿತ್ತು. 

ಆದರೇ ಇಂದು ಯು ಟ್ಯೂಬ್, ಪೇಸ್ ಬುಕ್, ಟಿಕ್  ಟಾಕ್ ನಂತಹ ಮಾಧ್ಯಮಗಳಿಂದ    ಈ ಎಲ್ಲಾ ಕಟ್ಟಳೆಗಳೇ ಬೇಕಿಲ್ಲ.  ಯಾರಾದರೂ ಒಂದೇ ಕ್ಲಿಕ್ ನಲ್ಲಿ ಲೈವ್ ಬರಬಹುದು. ನೀನೇ ನಿನ್ನದ್ದೇ ಸ್ವಂತಹ ಚಾನಲ್ ಮಾಡಿಕೊಂಡು ಬೇಕಾದಂತೆ ವಿಡಿಯೋ ಮಾಡಿ ಜಗತ್ತಿನ ಎಲ್ಲಾ ಜನರನ್ನು ಸೆಳೆಯಬಹುದು. 


ರೇಡಿಯೋ ಡಿಬೇಟ್ ಕೇಳಿದ್ದಿರಿ ಈ ಹಿಂದೆ. ಅದನ್ನು ಮೀರಿಸುವಂತಹ ಹೊಸ ಆಪ್ ಕಳೆದ ವರುಷ ಆನ್ ಲೈನ್ ಮಾರ್ಕೆಟ್ ಬಂದಿದೆ. ಕ್ಲಬ್ ಔಸ್ ಪ್ರತಿಯೊಬ್ಬರೂ ತಮ್ಮದೇ ಒಂದೊಂದು ರೇಡಿಯೋ ಕೇಳುವ ಸ್ಟೇಷನ್ ಮಾಡಿಕೊಂಡು ಮಾತನಾಡಬಹುದು. ಇದೇ ಈಗ ಹೊಸ​ ಟ್ರೇಂಡ್. 


ಆನ್ ಲೈನ್ ಯುಗದಿಂದ ಹೊಸ ಹೊಸ ಹೊಳವುಗಳು ಈ ಸಮಾಜಕ್ಕೆ ಸಿಕ್ಕಿದೆ. ಆದರೇ ಇವುಗಳ ಸದುಪಯೋಗಕ್ಕಿಂತ  ಸಾಕಾಷ್ಟು ಅನಾಹುತಗಳೇ ಸಮಾಜಕ್ಕೆ ಮತ್ತು ಜನರಿಗೆ ಸಿಗುತ್ತಿರುವುದು. 

ಜಳ್ಳು ಜಳ್ಳು ಮನಸ್ಸಿನವರಿಂದ ಸಮಾಜದ ಸ್ವಾಸ್ಥ್ಯವನ್ನೆ ಕೆಡಿಸುವಂತಹ ಪ್ರಚೋದಕಾರಿ ವಿಷಯಗಳ ಪ್ರಸರಣೆ ಪೇಸ್ ಬುಕ್, ಯು ಟ್ಯೂಬ್ , ವಾಟ್ಸ್ ಪ್, ಕ್ಲಬ್ ಹೌಸ್ ಗಳಿಂದಾಗುತ್ತಿದೆ.  ಯಾಕೆಂದರೇ ಈ ಎಲ್ಲಾ ಮಾಧ್ಯಮಗಳನ್ನು ಯಾರು ಬೇಕಾದರೂ ಹೇಗೆ ಬೇಕಾದರೂ  ಇಡಿ ಸಮೋಹವನ್ನು ಸೇರಲು ಬಳಸಬಹುದು.  

ಮುಗ್ಧ ಜನಗಳು ಇಲ್ಲಿ ಹೇಳುತ್ತಿರುವುದೇ ಸತ್ಯವೇನೋ ಎನ್ನುವ ಮಟ್ಟಿಗೆ ಗಂಟಲು ಕಿರುಚಿಕೊಳ್ಳುವ ಪಳ್ಳು ವಿಧ್ವಾಂಸರುಗಳಿಂದ ಸಮಾಜಕ್ಕೆ ಹೆಚ್ಚು ಅಪಾಯಕಾರಿಯೇ ಸರಿ. 

ಅದು ಎಷ್ಟೊಂದು ವಿಚಾರಗಳು  (ತೌಡು) ಬೇಡವೆಂದರೂ ಪ್ರತಿಯೊಂದು ಮನಸ್ಸುಗಳನ್ನು ವೇಗವಾಗಿ ತಲುಪುತ್ತಿದ್ದಾವೆಂದರೇ... ಈ ಯುಗ ವಿಷಯಗಳ ಇನ್ಪರಮೇಶನ್ ಯುಗವೆಂದರೇ ತಪ್ಪಿಲ್ಲ​.  

ಸುಳ್ಳನ್ನೇ ಸುದ್ಧಿ ಮಾಡಿ, ಅದರಿಂದ​ ಅನಾಹುತಗಳಾಗಿ, ಮುಗ್ಧ​ಜೀವಗಳು ಕೂನೆಯಾದಾಗ, ಇಲ್ಲ ಅದು ಕಣ್ಣು ತಪ್ಪಿನಿಂದಾದ​ ತಪ್ಪು ಎಂದು ಸಾವರಿಸಿಕೊಳ್ಳುವಲ್ಲಿ ಇದಕ್ಕೆ ಮೂಗುದಾರ ಹಾಕುವುವರು ಯಾರು ಅನಿಸುತ್ತೇ.
 
ಇಷ್ಟು ಸುಲಭದಲ್ಲಿ ಸಿಗುತ್ತಿರುವ ಈ ಅನುಕೂಲ ಅಷ್ಟೇ ಅನಾಹುತಕಾರಿ ಮತ್ತು ನಶ್ವರ ಅನಿಸುತ್ತಿದೆ.

ಹಾಗೆಯೇ ಪ್ರತಿಯೊಬ್ಬರೂ ತಮಗೆ ತಾವೇ ಪ್ರಶ್ನಿಸಿ ಪರಮರ್ಶಿಸಿಕೊಂಡು ಈ ಆನ್ ಲೈನ್ ಸೊಶಿಯಲ್ ಮೀಡಿಯ ಬಳಸುವುದು ಹಿತ ಮಿತ ಅನಿಸುತ್ತದೆ. 

ನಿಮ್ಮ ಬುದ್ಧಿ ನಿಮ್ಮ ನಿಮ್ಮ ಮೊಬೈಲ್ ಸ್ಕ್ರಿನ್ ನಲ್ಲಿ ಅನಿಸುವಂತೆ. ಒಂದೇ ಒಂದು ಕ್ಲಿಕ್ ಮಾಡುವ ಮುನ್ನಾ ನೂರು ಬಾರಿ ಯೋಚಿಸಿ ಚಿಂತಿಸಿ ಸಮಾಜಕ್ಕೆ ನೂರರಷ್ಟು ಉಪಯೋಗವಾಗುವ ವಿಡಿಯೋ, ಬರಹ​, ಮಾತನ್ನಾಡಿ ಎನ್ನೊಣವೇ?