ಮಂಗಳವಾರ, ಫೆಬ್ರವರಿ 1, 2022

‘ವಸಂತನ’ ಆಗಮನಕ್ಕೆ ನಿಸರ್ಗದ ಸ್ವಾಗತ!

 'ಕಂಗೊಳಿಸುವ ಕೆಂಪು ಮುಂದೆ, 

ಕಂಗೆಡಿಸುವ ಮಂಜು ಹಿಂದೆ, 

ಅತ್ತಣಿಂದ ಬೇಟೆಗಾರ ಬಹನು ನಾನು ಬಲ್ಲೆ.'

 - ಅಂಬಿಕಾತನಯದತ್ತ

ಎಲ್ಲೆಲ್ಲೂ ಹಚ್ಚ ಹಸಿರು ಚಿಗುರಿನ ಸಿಂಗಾರ, ಚುಮು ಚುಮು ಬಿಸಿಲು, ಆಗೊಮ್ಮೆ ಈಗೊಮ್ಮೆ ಕೇಳಿ ಬರುವ ಕೋಗಿಲೆಯ ಸುಮಧುರ ಕೂಗು, ಈ ರೀತಿಯ ಹೊಸತನದ ರಂಗಿನ ಸ್ವಾಗತವನ್ನು ಯುಗಾದಿ ಪಡೆಯುತ್ತದೆ. ಋತುಗಳ ರಾಜನಾದ 'ವಸಂತನ' ಆಗಮನಕ್ಕೆ ನಿಸರ್ಗವೇ ತನ್ನ ಹಲವು ರೀತಿಯ ಹಳತನ್ನೆಲ್ಲಾ ಕಳಚಿಕೊಂಡು ಹೊಚ್ಚ ಹೊಸತನದೂಂದಿಗೆ ಬರಮಾಡಿಕೊಳ್ಳುತ್ತದೆ.

ಇನ್ನು ಯುಗಾದಿ ಸಾಮಾನ್ಯವಾದ ಹಬ್ಬವೇನಲ್ಲ. ಹಿಂದೂಗಳ ಎಲ್ಲಾ ಹಬ್ಬಗಳಿಗೆ 'ರಾಜ ಹಬ್ಬ' ವೇ ಸರಿ. ಇದು ಯುಗದ ಆದಿ. ಯುಗದ ಹಾದಿಗೆ ಈ ಹಬ್ಬದ ಮೂಲಕ ಶ್ರೀಕಾರ ಆಗುತ್ತದೆ. ನಮ್ಮ ಜನಕ್ಕೆ ಇದೇ ಹೊಸ ವರ್ಷಾರಂಭ ಮತ್ತು ಯುಗಾದಿಯ ದಿನವೇ ರಾಮ ರಾವಣವನ್ನು ಸೋಲಿಸಿ ಅಯೋಧ್ಯೆಗೆ ಹಿಂತಿರುಗಿ ತನ್ನ ಸಿಂಹಾಸನವನ್ನು ಅಲಂಕರಿಸಿ ಜನರ ಪ್ರೀತಿಗೆ ಭಾಜನನಾಗಿದ್ದು.

ನಮ್ಮ ಕನ್ನಡ ನಾಡಿನ ಯುಗಾದಿ ಆಚರಿಣೆ ಸಂಭ್ರಮವನ್ನು ನಾವು ಬೇರೆ ಯಾವ ಹಬ್ಬಗಳಲ್ಲೂ ಕಾಣಲಾರೆವು. ನಿಸರ್ಗವು ಯಾವ ರೀತಿಯಲ್ಲಿ ಯುಗವನ್ನು ಬರಮಾಡಿಕೊಳ್ಳುತ್ತದೆಯೋ ಅದೇ ಬಗೆಯಲ್ಲಿ ನಮ್ಮ ಜನರೂ ಸಂತಸದಿಂದ ಆಚರಿಸಲು ಸಿದ್ಧತೆಯನ್ನು ಮಾಡಿ ಕೊಳ್ಳುತ್ತಾರೆ. 

ಹಬ್ಬ ಇನ್ನೂ ತಿಂಗಳಷ್ಟು ದೂರ ಇರುವಾಗಲೇ ನಗರಗಳ ಅಂಗಡಿಗಳಲ್ಲೆಲ್ಲ, ಎಲ್ಲ ಜನಯೋಪಯೋಗಿ ವಸ್ತುಗಳ ಮೇಲೆ ರಿಯಾಯ್ತಿ ಘೋಷಣೆ. ಮೆಗಾ ಡಿಸ್ಕೌಂಟ್‌ ಸೇಲ್‌ ಫಲಕ ನೋಡಿದ ಮೇಲೆ ಜನ ಆಕರ್ಷಿತರಾಗದೇ ಇರುತ್ತಾರೆಯೇ? ಹಬ್ಬಕ್ಕೆ ಬೇಕಾದ ಎಲ್ಲ ಸರಕು-ಸರಂಜಾಮುಗಳನ್ನು ಕೊಳ್ಳುತ್ತಾರೆ. ಎಲ್ಲರೂ ತಮ್ಮ ಶಕ್ತಿ ಮೀರಿ ಈ ಹಬ್ಬವನ್ನು ಅತ್ಯುತ್ತಮವಾಗಿ ಆಚರಿಸಲು ಕಂಕಣ ಬದ್ಧರಾಗುತ್ತಾರೆ. ಈ ಭಾವನೆ ನಗರ ಮತ್ತು ನಮ್ಮ ಹಳ್ಳಿಗಳೆಂಬ ತಾರತಮ್ಯ ಇಲ್ಲದೆ ಎಲ್ಲೆಡೆಯೂ ಕಂಡುಬರುತ್ತದೆ. 

ನಮ್ಮ ಭಾರತೀಯ ಹಬ್ಬದ ಸೊಬಗನ್ನು ಕಾಣಬೇಕೆಂದರೆ ನಮ್ಮ ಹಳ್ಳಿಗಳಿಗೆ ಹೋಗಿ ನೋಡಬೇಕು. ವರ್ಷದ ಬೇಸಾಯದ ಬಿಡುವಿನ ಸಮಯದಲ್ಲಿ ಬರುವ ಯುಗಾದಿ, ರೈತನ ಮನೆ ತುಂಬ ದವಸ, ಧಾನ್ಯಗಳ ಭಂಡಾರ ತುಂಬುತ್ತದೆ. ಇದರಿಂದ ಉತ್ತೇಜಿತನಾಗುವ ರೈತ ತನು ಮನ ಧನಗಳನ್ನು ಅರ್ಪಿಸಿಕೊಂಡು, ಮನೆ ಮಂದಿಯಾಂದಿಗೆ ನಲಿಯುತ್ತಾ ಹಬ್ಬ ಆಚರಿಸುತ್ತಾನೆ.

ಹಳ್ಳಿಗಳಲ್ಲಿ ಗೃಹಿಣಿಯರು ತಮ್ಮ ಅಕ್ಕ ಪಕ್ಕದ ಮನೆಯ ಸಹಗೃಹಿಣಿಯರ ಸಹಾಯದಿಂದ, ಪ್ರತಿನಿತ್ಯ ತಮ್ಮ ತಮ್ಮ ಮನೆಗಳಲ್ಲಿ ವಿವಿಧ ರೀತಿಯ ತಿನಿಸುಗಳನ್ನು ಮಾಡಿ ಬಿಸಿಲಿನಲ್ಲಿ ಒಣಗಿಸಿ ಹಬ್ಬಕ್ಕಾಗಿ ಸಿದ್ಧಪಡಿಸಿಕೊಳ್ಳುತ್ತಾರೆ. ಹಬ್ಬದ ನೆಪದಲ್ಲಿ ಮಾಡಿದ ಈ ಪದಾರ್ಥಗಳು ಮುಂದಿನ ವರ್ಷವಿಡೀ ಉಪಯೋಗಕ್ಕೆ ಬರುತ್ತವೆ. ಯಾಕೆಂದರೆ ಇಂಥ ಬಿಡುವಿನ ಸಮಯ ಪುನಃ ಸಿಗಬೇಕೆಂದರೆ ಮುಂದಿನ ಯುಗಾದಿಯೇ ಬರಬೇಕು. 

ತಿಂಡಿ-ತೀರ್ಥಗಳ ರುಚಿ ಹಬ್ಬದಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ. ಯಾಕೆಂದರೆ ಅಲ್ಲಿ ಪ್ರೀತಿಯ ಕೈ ಎಲ್ಲ ವಸ್ತುಗಳನ್ನೂ ಸ್ಪರ್ಶಿಸಿರುತ್ತದೆ. ಆದರೆ ನಮ್ಮ ನಗರದವರಿಗೆ ಈ ರೀತಿಯ ರುಚಿ ಕೇವಲ ಪ್ಯಾಕೆಟ್‌ ಪದಾರ್ಥಗಳಿಗೆ ಸೀಮಿತವಾಗಿ ಒಂದು ರೀತಿಯ ಕೃತಕ ಮಾಧುರ್ಯವೇ ಅನಿವಾರ್ಯವಾಗಿಬಿಟ್ಟಿದೆ .

 ಮನೆಯ ಒಳ-ಹೊರಗೆಲ್ಲ ಸುಣ್ಣ ಬಣ್ಣಗಳಿಂದ ಕಂಗೊಳಿಸುವುದು ಮನಮೋಹಕ. ಮನೆಯ ಎಲ್ಲಾ ಬಾಗಿಲುಗಳಿಗೆ ಹಸಿರುತೋರಣ, ಮನೆಯ ಮುಂದೆ ರಂಗೋಲಿ. ಮಕ್ಕಳಿಗೆ ಈ ಹಬ್ಬ ಹೆಚ್ಚು ಇಷ್ಟ , ಯಾಕೆಂದರೆ ಹೊಸ ಉಡುಪುಗಳ ಜಾತ್ರೆಯೇ ಆಗುತ್ತದೆ! ಹಿರಿ-ಕಿರಿಯರೆಲ್ಲ ಒಂದಾಗಿ ಖುಷಿಪಡುತ್ತಾರೆ. ಮನೆಯಲ್ಲಿ ದೊಡ್ಡವರಿಂದ ಹಿಡಿದು ಚಿಕ್ಕವರವರೆಗೆ ಎಲ್ಲರೂ ಅಭ್ಯಂಜನ ಮಾಡಿ, ಹೊಸ ಉಡುಪನ್ನು ಧರಿಸಿ, ಪೂಜೆಗೆ ಸಿದ್ಧವಾಗುತ್ತಾರೆ.

ಆ ವೇಳೆಗೆ ಮನೆಯ ಮಹಿಳೆಯರೆಲ್ಲ ರುಚಿಯಾದ ತಿನಿಸು, ಅಡಿಗೆಗಳು ಹಾಗೂ ಬೇವು-ಬೆಲ್ಲ ಎಲ್ಲವನ್ನೂ ಸಿದ್ಧಗೊಳಿಸಿರುತ್ತಾರೆ. ಹಿರಿಯರಿಂದ ಹೊಸ ಪಂಚಾಗದ ಪಠಣ ಮತ್ತು ಅದನ್ನು ಮನೆ ಮಂದಿಯೆಲ್ಲಾ ಕೇಳುತ್ತಾರೆ. ಆ ವರ್ಷದ ಫಲಾಫಲಗಳು, ಭವಿಷ್ಯ, ಮಳೆಯ ಯೋಗ ಇತ್ಯಾದಿ ವಿವರಣೆಗಳನ್ನು ಕೇಳಿ ಧನ್ಯರಾಗುತ್ತಾರೆ. 

ಬೇಸಾಯದ ಕೇಂದ್ರ ಬಿಂದು ಎತ್ತುಗಳು. ಅವುಗಳ ಪೂಜೆಯೂ ನೆರವೇರುತ್ತದೆ. ಜೊತೆಜೊತೆಗೆ ಅಂದೇ ಹೊಲದಲ್ಲಿ ಮಣ್ಣಿನ ಪೂಜೆ ಹಾಗೂ ನೇಗಿಲು ಪೂಜೆ ಮಾಡಿ, ಸ್ವಲ್ಪ ದೂರ ಉಳುಮೆಯನ್ನೂ ಮಾಡಲಾಗುತ್ತದೆ. ಇದಕ್ಕೆ ಗ್ರಾಮೀಣ ಭಾಷೆಯಲ್ಲಿ 'ಹೊನ್ನಾರ' ಎಂದು ಕರೆಯಲಾಗುತ್ತದೆ. 

ಬೇವು-ಬೆಲ್ಲಗಳ ವಿತರಣೆಯಾಯಿತು ಎಂದರೆ ಮುಗಿಯಿತು. ಎಲ್ಲರೂ ಅಂದಿನ ಮುಖ್ಯ ಭೋಜನದ ಸವಿದು, ಊರಿನ ಮುಖ್ಯ ದೇವಸ್ಥಾನಗಳ ಜಾಗಕ್ಕೋ ಅಥವಾ ತಂಪಾದ ಮರದ ನೆರಳಿನ ಜಾಗಕ್ಕೋ ಬರುತ್ತಾರೆ. ಪರಸ್ಪರ ಕುಶಲ ವಿನಿಮಯ ಮಾಡಿಕೊಳ್ಳುತ್ತಾರೆ. ಮಕ್ಕಳು ಜೊಕಾಲಿಯಾಟ ಆಡುವ ತವಕದಲ್ಲಿ ವಿವಿಧ ಮರಗಳ ಕೊಂಬೆಗಳನ್ನು ಅರಸುತ್ತಾ ಅಕ್ಕ ಪಕ್ಕದ ಹೊಲಗಳ ಕಡೆ ಮುಖ ಮಾಡುತ್ತಾರೆ. 

ಕೆಲ ಮಧ್ಯ ವಯಸ್ಕ ತರುಣರು ತಮ್ಮ ಅದೃಷ್ಟ ಪರೀಕ್ಷೆ ಮಾಡೋಣವೇ ಎಂದು ಜೂಜಾಟಕ್ಕೆ ತೊಡಗುತ್ತಾರೆ. ಹೀಗೆ ಯುಗಾದಿಯಲ್ಲಿ ಪ್ರಾರಂಭವಾದ ಜೂಜಾಟ ಕೆಲವೊಮ್ಮೆ ತಿಂಗಳವರೆಗೆ ಮುಂದುವರಿಯುವುದು ಸಾಮಾನ್ಯ. ಕೆಲವರು ತಮ್ಮ ಹಣವನ್ನು ಕಳೆದುಕೊಂಡು ಎಚ್ಚರವಾಗುವರು ಮತ್ತು ಕೆಲವರು ಹಣ ಗಳಿಸಿ ಮುಂದಿನ ಯುಗಾದಿಯಲ್ಲಿ ಪುನಃ ಆಟ ಆಡಬೇಕೆಂದುಕೊಳ್ಳುವರು. 

ನಮ್ಮ ಹಳ್ಳಿಗಳಲ್ಲಿ ಯುಗಾದಿಯೆಂದರೆ ಎರಡು ದಿನದ ಹಬ್ಬ ಇದಿಷ್ಟು ಮೊದಲನೇ ದಿನದ ಆಚರಣೆ. ಎರಡನೇಯ ದಿನದಲ್ಲಿ ಸಾಮಾನ್ಯವಾಗಿ ಪೂಜೆ ಮತ್ತು ಸಿಹಿಯಾದ ಊಟವನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡುತ್ತಾರೆ. ಎರಡನೆಯ ದಿನ ನಮ್ಮ ಊರುಗಳಲ್ಲಿ ಸಂಜೆ ಚಂದ್ರನ ದರ್ಶನವನ್ನು ಮಾಡುವುದರ ಮೂಲಕ ಅಂದಿನ ಮುಖ್ಯ ಆಚರಣೆ ಮುಗಿಯುತ್ತದೆ. ಅಂದು ಚಂದ್ರ ದರ್ಶನವಾದ ಬಳಿಕ ಹಿರಿಯರಿಗೆಲ್ಲಾ ಚಿಕ್ಕವರಿಂದ ಕಾಲಿಗೆ ನಮಸ್ಕಾರ ಮತ್ತು ಅವರಿಂದ ಆಶೀರ್ವಾದಗಳನ್ನು ಪಡೆಯುತ್ತಾರೆ. 

ಯುಗಾದಿಯ ಮೂರನೇಯ ದಿನದ ಹಬ್ಬ ಒಂದು ರೀತಿಯಲ್ಲಿ ಕಿರಿಯರಿಗೆ ಮತ್ತು ತರುಣ ತರುಣಿಯರಿಗೆ. ಅಂದು ನೀರು ಎರಾಚಡುವುದು ನಡೆಯುತ್ತದೆ. ಇದು ಒಂದು ರೀತಿಯಲ್ಲಿ ಹೋಳಿಯ ಆಚರಣೆ.

Read more at: https://kannada.oneindia.com/festivals/ugadi/2006/290306thipperudra.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ