ಮಂಗಳವಾರ, ಫೆಬ್ರವರಿ 1, 2022

ಕನ್ನಡ ಪತ್ರಿಕೋದ್ಯಮದಲ್ಲಿ ಅಂಕಣ ಸಾಹಿತ್ಯ

  ನಿತ್ಯ ಓದುಗರು ಹೆಚ್ಚು ಇಷ್ಟಪಡುವುದು ಪತ್ರಿಕೆ, ವಾರಪತ್ರಿಕೆ ಮತ್ತು ಮಾಸಿಕಗಳಲ್ಲಿನ ‘ಅಂಕಣಗಳನ್ನು’. ಪ್ರತಿದಿನ, ಪ್ರತಿವಾರ ಕಾತುರತೆಯಿಂದ ಓದುಗರನ್ನು ನಿರೀಕ್ಷೆಯಲ್ಲಿಯೇ ಇರಿಸುವಂತೆ ಮಾಡುವ ಚಮತ್ಕಾರ ಅಂಕಣಗಳಿಗೆ ಇದೆ. ಹಾಟ್‌ ಸುದ್ಧಿ, ಮುಖಪುಟ ಲೇಖನಗಳನ್ನು ಓದುಗ ನಿರೀಕ್ಷೆ ಮಾಡುವುದು ಕಷ್ಟ. ಆದರೆ ತಾನು ಮೆಚ್ಚಿದ ಅಂಕಣಕಾರನ ಅಂಕಣವನ್ನು ಕಾದಿದ್ದು ಮತ್ತು ತಾನು ಗೆಸ್‌ ಮಾಡಿದ ವಿಷಯದ ಮೇಲೆ ಬೆಳಕು ಚೆಲ್ಲಿದ್ದರೆ ಹೆಚ್ಚು ಖುಷಿಪಟ್ಟು ಓದುತ್ತಾನೆ.


ಈ ರೀತಿಯ ಆಕರ್ಷಕ ಅಂಕಣಗಳನ್ನು ಓದುಗರಿಗೆ ಕೊಡುವುದರ ಮೂಲಕ ತನ್ನ ಪ್ರಸಾರ ಸಂಖ್ಯೆಯನ್ನು ಬಹುಬೇಗ ಹೆಚ್ಚಿಸಿಕೊಂಡ ಕನ್ನಡ ಪತ್ರಿಕೆಗಳ ಉದಾಹರಣೆ ಸಾಕಷ್ಟಿವೆ. ದಿನಪತ್ರಿಕೆಗಳಲ್ಲಿ ಇತ್ತೀಚಿನ ಕನ್ನಡದ ನಂಬರ್‌ ಒನ್‌ ಪತ್ರಿಕೆಯಾದ ವಿಜಯಕರ್ನಾಟಕ, ಪ್ರತಿದಿನವೂ ತನ್ನ ಸಂಪಾದಕೀಯ ಪುಟದಲ್ಲಿ ಒಬ್ಬ ಲೇಖಕನ ಅಂಕಣವನ್ನು ಬರೆಸುತ್ತಿದೆ. ನನಗೆ ತಿಳಿದಂತೆ ಈ ಪತ್ರಿಕೆಯ ಹೆಚ್ಚಿನ ಅಭಿಮಾನಿಗಳ ಆಕರ್ಷಣೆ ಈ ಅಂಕಣಗಳೆ ಸರಿ.


ಹಾಗಾದರೆ, ಏನಿದು ಅಂಕಣಬರಹ? ನಮ್ಮ ದಿನ ನಿತ್ಯದ ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಂಗತಿಯನ್ನು ಪ್ರಸ್ತುತ ಸಮಯಕ್ಕೆ ಹೊಂದುವಂತೆ ಪತ್ರಿಕೆಯ ಅಂಕಣದಲ್ಲಿ ಸಮರ್ಪಕವಾಗಿ ವಿಶ್ಲೇಷಿಸುವುದು ಅಥವಾ ವಿವೇಚಿಸುವುದು. ಇಲ್ಲಿ ವಿಷಯಗಳ ವೈವಿಧ್ಯತೆಯಲ್ಲಿ ಲೇಖಕನ ಅಗಾಧ ಜ್ಞಾನ ಪ್ರತಿಭೆ ವ್ಯಕ್ತವಾಗುತ್ತದೆ. ಅಂಕಣದಲ್ಲಿನ ವಿಷಯದ ಇತರೆ ಆಯಾಮಗಳು, ಸಾಮಾನ್ಯ ಓದುಗನಿಗೆ ಸುಲಭ ಭಾಷೆಯಲ್ಲಿ ಅರ್ಥವಾಗುತ್ತವೆ. ಅವನನ್ನು ಚಿಂತನೆಗೀಡು ಮಾಡುವಲ್ಲಿ ಅಂಕಣಗಳು ಫಲಕಾರಿ.


-ನಮ್ಮ ಕರ್ನಾಟಕದಲ್ಲಿ ಯಾವಾಗ ಈ ರೀತಿಯ ಸಾಹಿತ್ಯ ಪ್ರಕಾರ ಪ್ರಾರಂಭವಾಯಿತು ಎಂದರೆ, ಕನ್ನಡದ ಪ್ರಥಮ ಪತ್ರಿಕೆಯಾದ ‘ಮಂಗಳೂರು ಸಮಾಚಾರ’ದಲ್ಲಿ 1 ಜುಲೈ 1843ರಂದು. ಇದರ ಸಂಪಾದಕರು ರೆವಡೆಂಟ್‌ ಹರ್ಮಾನ್‌ ಮೊಗ್ಲಿಂಗ್‌.


ಇವರು ‘ನೈತಿಕ ವಿಚಾರಗಳು’ ಎಂಬ ಅಂಕಣವನ್ನು ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸುತ್ತಿದ್ದರು. ಅದರೆ, ಇದು ಕಾಲಾಂತರದಲ್ಲಿ ನಿಂತಿತು.


ಆನಂತರ ನಾವು ಪ್ರಮುಖ ಅಂಕಣ ಬರಹ ಎಂದು ಗುರುತಿಸುವುಂತಾಗಿದ್ದು ಸಿದ್ದವನಹಳ್ಳಿ ಕೃಷ್ಣಶರ್ಮರ ಅಂಕಣಗಳಾದ ಮಾತಿನ ಮಂಟಪ, ಚಿಂತನ-ಮಂಥನ ಇವುಗಳನ್ನು. ಇವು ಅಂದಿನ ಪ್ರಸ್ತುತ ವಿಷಯಕ್ಕೆ ಸಂಬಂಧಪಟ್ಟಿದ್ದರೂ ಸಾಹಿತ್ಯಕ ಮೌಲ್ಯಗಳನ್ನು ಹೆಚ್ಚು ಹೊಂದಿ ಜನಮಾನಸದಲ್ಲಿ ಉಳಿದಿದ್ದು ಇಂದಿಗೂ ಮೆಲುಕು ಹಾಕುವಂತ ಬರಹಗಳಾಗಿವೆ.


ಪತ್ರಿಕೆಗಳ ಸುದ್ದಿಗಳು ಸಾಹಿತ್ಯ ಪ್ರಕಾರವಾಗಲು ಸಾಧ್ಯವಿಲ್ಲ. ಆದರೆ ಅಂಕಣ ಬರಹಗಳು ಸಾಹಿತ್ಯ ಪ್ರಕಾರಗಳಲ್ಲೊಂದು ಎಂದು ಗುರುತಿಸಲು ಕಾರಣವಾಗಿದ್ದು ಅವುಗಳಲ್ಲಿರುವ ಸರ್ವಕಾಲಿಕ ಸಾಹಿತ್ಯ ಮಂಡಣೆ ಮತ್ತು ಆಯ್ಕೆ ಮಾಡಿಕೊಂಡ ವಿಷಯಗಳನ್ನು ಓದುಗರಿಗೆ ಮುಟ್ಟಿಸುವ ಪರಿಯಿಂದ ಮತ್ತು ಅಂಕಣ ಬರಹಗಾರನ ಸಾಹಿತ್ಯ ಅನುಭವ ಸಾಮರ್ಥ್ಯದಿಂದ. 


ಓದುಗರು ಕೇವಲ ಸುದ್ದಿಗಳನ್ನು ಓದುವುದರಿಂದ, ಪ್ರಯೋಜನವಿಲ್ಲ. ಸುದ್ದಿ ಬಗೆಗೆ ತನ್ನ ವಿಚಾರ ಚಿಂತನ ಮಾಡುವುದು ಸಾಧ್ಯವಾಗದಿರಬಹುದು. ಆದರೆ, ಅಂದಿನ ಸಮಯದಲ್ಲಿ ಸವಿಸ್ತಾರವಾಗಿ ಅಂಕಣಗಳಲ್ಲಿ ಮಂಡಿಸುವ ಅಂಕಣಗಾರನ ಸಾಲುಗಳು, ಲೇಖಕನ ಜೊತೆ ಜೊತೆ ತನ್ನ ಚಿಂತನೆಯ ಯಂತ್ರವನ್ನು ಚಾಲು ಮಾಡಲು ಸಹಾಯವಾಗುತ್ತದೆ.


ನಮ್ಮ ಕನ್ನಡ ಭಾಷೆಯಲ್ಲಿ ಈ ಪರಿಯ ಒಂದು ಸಾಹಿತ್ಯದ ಪ್ರಕಾರ ವಿಫುಲವಾಗಿ ಬೆಳೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ಸಾಹಿತ್ಯ ದಿಗ್ಗಜರುಗಳು ಪತ್ರಿಕೆಗಳಲ್ಲಿ ನಿಯಮಿತವಾಗಿ ತಮ್ಮ ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ. ಈ ಪ್ರಕಾರಕ್ಕೆ ಕಿರೀಟ ಪ್ರಾಯಾವಾದ ಸೇವೆ ಸಲ್ಲಿಸಿದವರಲ್ಲಿ- ತರಾಸು (ತೋಚಿದ್ದು -ಗೀಚಿದ್ದು, ವಾಹಿನಿ ವಾರಪತ್ರಿಕೆ), ನಿರಂಜನ (ಬೇವು-ಬೆಲ್ಲ, ರಾಜಧಾನಿಯಿಂದ, ಐದುನಿಮಿಷ), ಟಿ.ಎಸ್‌. ರಾಮಚಂದ್ರರಾವ್‌(ಛೂಬಾಣ- ಪ್ರಜಾವಾಣಿ), ರಾವ್‌ ಬಹದ್ದೂರ್‌(ದೇಭನ ಉವಾಚ), ಲಾಂಗೋಚಾರ್ಯರು(ಓದುಗರೊಡನೆ ಹರಟೆ), ಹರಿದಾಸ ಭಟ್ಟರು(ಲೋಕಭಿರಾಮ-ಉದಯವಾಣಿ), ಶ್ರೀರಂಗರು(ವಿಶ್ವ ಕುತೂಹಲ ಕಣ್ಣುಗಳು), ಜಿ.ಪಿ. ರಾಜರತ್ನಂ ಮುಂತಾದ ಹಿರಿಯ ಸಾಹಿತಿಗಳು ತಾವು ಪತ್ರಕರ್ತರಲ್ಲದಿದ್ದರೂ ಪತ್ರಿಕೆಯೊಡನೆ ನಿಕಟ ಸಂಪರ್ಕವನ್ನಿಟ್ಟುಕೊಂಡು, ನಿಯಮಿತವಾಗಿ ಓದುಗರೊಂದಿಗೆ ತಮ್ಮ ಅನುಭವಗಳನ್ನು ಮತ್ತು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಕನ್ನಡದಲ್ಲಿ ಅಂಕಣ ಬರಹ ಸ್ವಾತಂತ್ರ್ಯೋತ್ತರದ್ದು.


ಹಾಗೆಯೇ, ಇತ್ತೀಚಿನ ದಶಕಗಳಲ್ಲಿ ಹಾ. ಮಾ.ನಾಯಕ, ಎಚ್ಚೆಸ್ಕೆ, ಎಲ್‌.ಎಸ್‌.ಶೇಷಗಿರಿರಾವ್‌, ಕೆ.ಟಿ.ಪಾಂಡುರಂಗಿ, ಪೂರ್ಣಚಂದ್ರ ತೇಜಸ್ವಿ, ಕೀರ್ತಿನಾಥ ಕುರ್ತುಕೋಟಿಯವರುಗಳು ಅಂಕಣಗಳು ಸಹ ಪ್ರಭಾವಿ ಮಾಧ್ಯಮ ಎಂಬುದನ್ನು ನಿರೂಪಿಸಿದರು. 

ಇದಕ್ಕೆ ಸಾಕ್ಷಿ ಹಾಮಾನಾ ಅವರ ಪ್ರಜಾವಾಣಿಯಲ್ಲಿ ಬರೆದ ಅಂಕಣ -ಸಂಪ್ರತಿ. ಈ ‘ಸಂಪ್ರತಿ’ ಅಂಕಣ ಬರಹಗಳು ಪುಸ್ತಕ ರೂಪ ತಾಳಿದ್ದು ನಂತರದ ಸಮಾಚಾರ. ಈ ಪುಸ್ತಕ 1989-90ಸಾಲಿನಲ್ಲಿ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದು, ಈ ಪ್ರಶಸ್ತಿ ಭಾರತೀಯ ಭಾಷೆಯಲ್ಲಿಯೇ ಪ್ರಥಮವಾಗಿ ಈ ಹೊಸ ಪ್ರಕಾರಕ್ಕೆ ಬಂದು ಇದರ ಪ್ರಸ್ತುತೆಯ ಜವಾಬ್ದಾರಿಯನ್ನು ಹೆಚ್ಚಿಸಿತು. 


ಸಂಪ್ರತಿ ಅಂದಿನ ಸಮಯದಲ್ಲಿ ಒಂದು ಗೊತ್ತಿಲ್ಲದ ಮಿಡಿತವನ್ನು ಹಾಮಾನಾ ಮತ್ತು ಓದುಗರ ನಡುವೆ ಸೃಷ್ಟಿ ಮಾಡಿತ್ತು. ಇದು ಈ ಅಂಕಣದ ಜನಪ್ರಿಯತೆಗೆ ಕನ್ನಡಿ. ನನಗೆ ತಿಳಿದಂತೆ ನಾನೇ ಓದಿರುವ ಹಾಮಾನಾ ಅವರ ‘ಸ್ವಗತ’ ಅಂಕಣ(ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು)ದ ವಿಷಯ ಆಯ್ಕೆ ಸಂಕ್ಷಿಪ್ತತೆ ಮತ್ತು ವಿಶ್ಲೇಷಣೆಯಿಂದ ಅತಿ ಹೆಚ್ಚು ಓದುಗರನ್ನು ತಲುಪಿತ್ತು. ಹಾಗೆಯೇ ಇವರ ಇನ್ನೊಂದು ಅಂಕಣ ‘ಸಾಹಿತ್ಯ ಸಲ್ಲಾಪ’ -ಕನ್ನಡ ಪ್ರಭದಲ್ಲಿ ಸಾಹಿತ್ಯದ ದೃಷ್ಟಿಯಿಂದ ಮಹತ್ವವನ್ನು ಪಡೆದಿತ್ತು.

ಅಂಕಣ ಬರಹಕ್ಕೆ ಸಂಬಂಧಿಸಿದಂತೆ ಕೆಲವು ಅಪರೂಪ ಪ್ರಥಮಗಳು ಸಹ ಇವೆ. ಸುದೀರ್ಘವಾಗಿ ಪ್ರತಿದಿನ ಅಂಕಣ ಬರೆದಿದ್ದು ಒಂದು ದಾಖಲೆ. ಏಪ್ರಿಲ್‌ 11,1977ರಿಂದ ಟಿ.ಎಸ್‌.ಆರ್‌ ರವರ ನಿಧನದೊಂದಿಗೆ ಅವರ ಛೂಬಾಣ ನಿರಂತರವಾಗಿ ಸಾಗಿತ್ತು. ಅದರ ಆಳ, ಹರಿತವೂ ಅವರ ಹಿಂದೆಯೇ ಹೋಯಿತು. ಕ್ರೀಡಾರಂಗದ ಮೇಲೆ ಬೆಳಕು ಚೆಲ್ಲುವ ಮೊದಲ ಅಂಕಣ ಬರೆದದ್ದು ಸೂರಿ. ಅವರ ಕ್ರೀಡಾಂತರಂಗ ಅಂಕಣ ಕ್ರೀಡಾಪ್ರೇಮಿಗಳಿಗೆ ಇಷ್ಟವಾಗಿತ್ತು. ಆ ಕಾಲದಲ್ಲಿ ಪ್ರಜಾಮತವನ್ನು ಹಾಮಾನಾ ಅವರ ಅಂಕಣಕ್ಕಾಗಿಯೇ ನೋಡುತ್ತಿದ್ದರು. 


ಇಂದು ಸಹ ಹಲವರು ಲೇಖಕರು ಪತ್ರಿಕೆಗಳಲ್ಲಿ ನಿಯಮಿತವಾಗಿ ಆಕರ್ಷಕ ಅಂಕಣ ಬರಹಗಳನ್ನು ಬರೆಯತ್ತಿದ್ದಾರೆ ಅವುಗಳಲ್ಲಿ ವಿಶ್ವೇಶ್ವರ ಭಟ್ಟರ -ನೂರೆಂಟು ಮಾತು, ರವಿಬೆಳೆಗೆರೆಯ -ಬಾಟಂ ಐಟಂ, ಜಾನಕಿಯವರ -ತೆರೆದ ಬಾಗಿಲು, ಕುಲದೀಪ ಅಯ್ಯರ್‌ರ -ಅಂತರಂಗ, ಪ್ರತಾಪ ಸಿಂಹರ -ಬೆತ್ತಲೆ ಜಗತ್ತು, ನಾಗತಿಹಳ್ಳಿ ಚಂದ್ರಶೇಖರ, ಚಂದ್ರಶೇಖರ ಆಲೂರು ಮತ್ತು ಇನ್ನೂ ಮುಂತಾದವರ ಬರಹಗಳು ಪ್ರಸ್ತುತ ಸಮಯದಲ್ಲಿ ಮನೆ ಮಾತಾಗಿವೆ.


ಅಂಕಣ ಸಾಹಿತ್ಯಕ್ಕೆ ಹೊಸ ಸೇರ್ಪಡೆ : ಕನ್ನಡ ಸಾಹಿತ್ಯಕ್ಕೆ ಇತ್ತೀಚೆಗೆ ಅಪರೂಪದ ಹೊಸ ಅಂಕಣ ಬರಹಗಳು ಪುಸ್ತಕ ರೂಪದಲ್ಲಿ ಸೇರ್ಪಡೆಯಾಯಿತು. ಅದು ಯಾವುದೆಂದರೆ -ವಿಚಿತ್ರಾನ್ನ. ವಿಶ್ವಕನ್ನಡಿಗರ ಮನೆಮಾತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಟ್ಸ್‌ ಕನ್ನಡ ಡಾಟ್‌ ಕಾಂ ನಲ್ಲಿ ಸತತ ಮೂರು ವರ್ಷಗಳಿಂದ ನಿರಂತರವಾಗಿ ಪ್ರತಿ ಮಂಗಳವಾರ ಶ್ರೀವತ್ಸ ಜೋಷಿಯವರ ವಿಚಿತ್ರಾನ್ನ ಪ್ರಕಟವಾಗುತ್ತದೆ. ಇದು ಒಂದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಮೈಲುಗಲ್ಲೇ ಸರಿ. ಇದು ಇಂಟರ್‌ನೆಟ್‌ನಲ್ಲಿ ಮೂಡಿಬಂದ ಮೊದಲ ಕನ್ನಡ ಅಂಕಣ ಬರಹಗಳ ಪುಸ್ತಕ. ಇದರ ಮಹತ್ವ ಮತ್ತು ವಿಷಯ ವೈವಿಧ್ಯತೆಯ ಪರಿಯನ್ನು ಓದಿಯೇ ಸವಿಯಬೇಕು. 

ಪ್ರತಿ ಲೇಖನವು ನವಿರಾದ ಹಾಸ್ಯದ ಮೂಲಕ ಅತಿ ಸಾಮಾನ್ಯ ಸಂಗತಿಗಳನ್ನು ತಮ್ಮ ವಿಷಯ ವಿಶ್ಲೇಷಣೆಯ ಸಾಮರ್ಥ್ಯದಿಂದ, ಪ್ರತಿ ಲೇಖನಕ್ಕೂ ಅವರು ಕೊಡುವ ತಲೆ ಬರಹ ಮತ್ತು ಅವರು ಮಾಡುವ ಪದಗಳ ಪಂಚ್‌ ಓದುಗರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುತ್ತವೆ. ಇದರ ಮೂಲಕವೇ ಹಲವಾರು ವಿಷಯಗಳು ನಮ್ಮೆಲ್ಲರ ಅರಿವಿಗೆ ಬಂದಿರುವುದು ಅವರ ವಿಷಯ ಆಯ್ಕೆಯ ನೈಪುಣ್ಯಕ್ಕೆ ಸಾಕ್ಷಿ. ಅಂಕಣಕಾರರು ತಾವೇ ಹೇಳಿಕೊಂಡಂತೆ ವಿಚಿತ್ರಾನ್ನ ಅಂಕಣ ಚಿತ್ರಾನ್ನ ಇರುವವರೆಗೂ ಇರುತ್ತದೆ, ಇದು ನೂರಕ್ಕೆ ನೂರು ಸತ್ಯ. 

ಇಂದಿನ ಇಂಟರ್‌ನೆಟ್‌ ಲೋಕದಲ್ಲಿ ಕನ್ನಡತನವೇನು ಕಡಿಮೆಯಿಲ್ಲ ಎಂಬುದನ್ನು ನಿತ್ಯ ಹಲವಾರು ಸುದ್ಧಿಗಳೊಂದಿಗೆ, ವಿಶಿಷ್ಟ ಅಂಕಣಗಳೊಂದಿಗೆ ದಟ್ಸ್‌ ಕನ್ನಡ ಸಾಬೀತುಪಡಿಸಿದೆ. ಆರಕ್ಕೂ ಹೆಚ್ಚು ಅಂಕಣಕಾರರಿಂದ ಅತ್ಯುತ್ತಮ ಲೇಖನಗಳನ್ನು ವಿಶ್ವ ಕನ್ನಡ ಓದುಗರಿಗೆ ಅದು ಉಣಬಡಿಸುತ್ತಿದ್ದಾರೆ. ಪ್ರಮುಖ ಇ-ಅಂಕಣಕಾರರೆಂದರೆ ಜಾಲತರಂಗದ ಡಾ. ಎಂ.ಎಸ್‌. ನಟರಾಜ್‌, ತುಳಸಿವನದ ಕೆ. ತ್ರಿವೇಣಿ ಶ್ರೀನಿವಾಸರಾವ್‌ ಮತ್ತಿತರರು. ಉತ್ಕೃಷ್ಟ ಲೇಖಕರ ಅನುಭವ ಬುತ್ತಿಯ ಸವಿಯನ್ನು ನಿಯಮಿತವಾಗಿ ಓದುಗರು ಸವಿಯುತ್ತಿದ್ದಾರೆ.


ನಮ್ಮ ಕನ್ನಡ ನಾಡಿನ ಸಾಹಿತ್ಯದ ಬೆಳವಣಿಗೆಯಲ್ಲಿ ಅಂಕಣಬರಹಗಳು ಓದುಗರ ಜೊತೆಗೆ, ಓದುಗರ ಸಲಹೆಗಳೊಡನೆ ಮತ್ತು ಓದುಗರ ಅಭಿರುಚಿಯನ್ನು ಗ್ರಹಿಸಿ ಅಂದಿನ ಸಮಾಜ ಮತ್ತು ಸಂದರ್ಭಕ್ಕನುಸಾರವಾಗಿ ಜಾಗೃತಿ ಮತ್ತು ಕಾಳಜಿಯನ್ನು ಂಟು ಮಾಡುತ್ತಿವೆ. ಇದು ಎಂದೂ ನಿಲ್ಲದ ಹೊಸತನ, ಸಾಹಿತ್ಯದ ಸೃಜನಶೀಲ ಆವಿಷ್ಕಾರ!

Read more at: https://kannada.oneindia.com/literature/articles/2006/120106trudra.html


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ