ಭಾನುವಾರ, ಜನವರಿ 3, 2016

ಹೊಸ ವರುಷ ಮೆಲಕು

೩೬೫ ದಿನಗಳು ಕಳೆದವು ಅಂದರೇ, ಒಂದು ಸಂವತ್ಸರ ಮುಗಿದಂತೆ. ೧೨ ತಿಂಗಳು ಕಳೆದು ಪುನಃ ಹೊಸ ದಿನಗಳ ಲೆಕ್ಕ ಪ್ರಾರಂಭವಾದಂತೆ. ಹೊಸ ವರುಷ ಪುನಃ ನವೀನವಾದ ೩೬೫ ದಿನಗಳನ್ನು ನಮ್ಮ ಬದುಕಿಗೆ ಬರಲಿರುವ ದಿನಗಳಾಗಿ ಕೊಟ್ಟಿದೆ.

ಇದು ಲೆಕ್ಕದ ಮಾತು.

ಅದೇ ಹಗಲು ರಾತ್ರಿ. ಸೂರ್ಯ ಸುತ್ತುವುದು. ಕತ್ತಲಾಗುವುದು. ಈ ಬದುಕು ಏನೂ ಬದಲಾಗದು. ನಾವು ಜೀವಿಸುವ ಬದುಕು ಬದಲಾಗದು. ಅದೇ ಕೆಲಸ ಅದೇ ದುಡಿತ. ಅದೇ ಖುಷಿ ಅದೇ ದುಃಖ.

ಕ್ಯಾಲೆಂಡರ್ ಬದಲಾದಂತೆ ನಮ್ಮ ಬದುಕು ಬದಲಾಗಲಾರದು!

ದಿನಗಳನ್ನು ಯಾರ ಕೈಯಿಂದಲು ಹಿಡಿದಿಡಲು ಸಾಧ್ಯವಿಲ್ಲ! ಕಾಲನ ಚಕ್ರಕ್ಕೆ ಸಿಕ್ಕಂತೆ ಅದು ತನ್ನ ಪಾಡಿಗೆ ತಾನು ಹಳೆದಾಗುತ್ತಾ ಹಳೆದಾಗುತ್ತ ನಿತ್ಯವು ಒಂದೊಂದು ದಿನವು ಹಳೆದಾಗುತ್ತಿರುತ್ತದೆ.

ಆಗಲೇ ಹೊಸ ವರುಷದ ನಾಲ್ಕು ದಿನಗಳು ಹಳೆ ದಿನಗಳಾಗಿವೆ! ಏನೂ ಮಾಡಿದರೂ ಏನನ್ನು ಮಾಡದಿದ್ದರೂ ದಿನಗಳು ಓಡುತ್ತಲೆ ಇರುತ್ತವೆ.

ಒಂದು ವರುಷ ಎನ್ನುವುದು ಪ್ರತಿಯೊಂದು ಜೀವಿಗೂ ದೊಡ್ಡ ಮೊತ್ತದ ಮೈಲಿಗಲ್ಲೇ ಸರಿ!

ಒಂದು ವರುಷದಲ್ಲಿ ಕಂಡ ಖುಷಿ, ನೋವು, ನಲಿವು, ಸೋಲು-ಗೆಲವು, ಲಾಭ - ನಷ್ಟ ಇತ್ಯಾದಿ, ಒಂದೊಂದು ರೀತಿಯಲ್ಲಿ ಒಂದೊಂದು ಇತಿಹಾಸವನ್ನು ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಹೆಜ್ಜೆಯಾಗಿರುತ್ತದೆ.

೩೬೫ ದಿನಗಳ ಪ್ರತಿ ನಿಮಿಷವು ಒಂದಲ್ಲಾ ಒಂದು ರೀತಿಯಲ್ಲಿ ಬಹು ಮುಖ್ಯವಾಗಿರುತ್ತದೆ. ಎಲ್ಲಾರ ಬಾಳಲ್ಲಿ ಅದರ ಛಾಪನ್ನು ಅದು ಒತ್ತೇ ಒತ್ತಿರುತ್ತದೆ.

ಒಂದೊಂದು ಘಟನೆಗಳು ಒಂದೊಂದು ರೀತಿಯಲ್ಲಿ ಮನಸ್ಸೆಂಬ ಮೆಮೊರಿಯಲ್ಲಿ ಅಚ್ಚಾಗಿರುತ್ತದೆ.

ಕೆಲವನ್ನು ಮರೆತರೂ, ಇನ್ನೂ ಕೆಲವು ಏನಂದರೂ ಮಾಸಿರುವುದಿಲ್ಲ. ಅವುಗಳು ಕಾಡುವುವು ಬೇಡುವುವು ನಮ್ಮ ಮನಸ್ಸನ್ನು. ಒಂದಷ್ಟು ಮರೆಯೋಣ ಎಂದರೂ ಮರೆಯಲಾಗುವುದಿಲ್ಲ. ನೆನಸಿಕೊಂಡರೇ ಜೀವವೇ ಒದ್ದೆಯಾಗುತ್ತದೆ ಮತ್ತು ತುಂಬ ನೋವಾಗುತ್ತದೆ. ಒಂದಷ್ಟು ಹೇಗೆ ಮರೆತೆವು ಎಂದು ನೆನಪು ಮಾಡಿಕೊಳ್ಳಲು ಸಾಧ್ಯವಿಲ್ಲ, ಆ ರೀತಿಯಲ್ಲಿ ಪೂರ್ತಿ ಡಿಲಿಟ್ ಆಗಿರುತ್ತದೆ.

ಇವೆಲ್ಲಾ ಕಳೆದ ವರುಷದ ಕೊಡುಗೆಗಳು ಬಿಟ್ಟು ಬಿಡದೆ ನಮ್ಮ ನಮ್ಮ ಬಾಳ ಬಳುವಳಿಗಳು.

ಸಂಬಂಧ, ನೆರೆ ಹೊರೆ, ಜೊತೆಗಾರರು ಇತ್ಯಾದಿ ಸಮಸ್ತ ಹೊಸ ಹೊಸ ಜೀವಗಳನ್ನು ನಮ್ಮೊಡನೆ ನಾವು ಗಳಿಸುತ್ತೇವೆ.

ಅದೇ ರೀತಿಯಲ್ಲಿ ಕಳೆದ ಒಂದು ವರುಷದಲ್ಲಿ ತೀರಾ ಹತ್ತಿರ ಇರುವವರನ್ನು ದೂರ ಮಾಡಿಕೊಂಡಿರುತ್ತೇವೆ. ಒಂದಷ್ಟು ಮಂದಿಯನ್ನು ಪೂರ್ತಿಯಾಗಿ ಕಳೆದು ಕೊಂಡಿದ್ದರೆ, ಇನ್ನೊಷ್ಟು ಮಂದಿಯನ್ನು ತಾತ್ಕಾಲಿಕವಾಗಿ ದೂರ ಮಾಡಿಕೊಂಡಿರುತ್ತೆವೆ.

ಅದು ಇದು ನಮ್ಮ ಕೈಯಲ್ಲಿ ಇರುವುದಿಲ್ಲ ಬಿಡಿ. ಆ ಮೇಲಿನವನು ಆಡಿಸಿದಂತೆ ನಾವುಗಳು ನಾಲ್ಕು ದಿನ ಪಾತ್ರ ಮಾತ್ರ ಮಾಡುವವರು. ಎಂದು ಕೊಂಚವೇ ಕೊಂಚ ನಮ್ಮ ನಮ್ಮ ಮನಸ್ಸಿಗೆ ನಾವೇ ಸಮಧಾನ ಮಾಡಿಕೊಳ್ಳುತ್ತೇವೆ.

ಯಾಕೆಂದರೇ ಈ ಬದುಕು ಯಾರನ್ನು ಯಾರಿಗಾಗಿಯೂ ಯಾವಾಗಲೂ ಕಾಯುವುದಿಲ್ಲ. ಅಷ್ಟೊಂದು ಕಠೋರ ಅನಿಸುತ್ತದೆ!

ಕಾಲವೇ?

ನಿತ್ಯ ನಾವುಗಳೆಲ್ಲಾ ನಮ್ಮ ನಮ್ಮ ಬದುಕಿನ ಅಂತ್ಯಕ್ಕೆ ವರುಷ ವರುಷವೂ ಹತ್ತಿರವಾಗುತ್ತಿದ್ದೇವೆ, ಎಂದು ಒಮ್ಮೊಮ್ಮೆ ಅನಿಸಿದರೂ ಅದು ಸತ್ಯವಲ್ಲಾ ಎಂಬ ರೀತಿಯಲ್ಲಿ ಸಂಭ್ರಮದ ಬದುಕನ್ನು ಕಟ್ಟಿಕೊಂಡು ಬದುಕುತ್ತೇವೆಲ್ಲಾ, ಅದೇ ನಮ್ಮನ್ನು ಇನ್ನು ಜೀವಂತವಾಗಿಟ್ಟಿರುವುದು.

ಮನುಷ್ಯನಿಗೆ ವಿವೇಕ ಬಂದಾಗಿನಿಂದ ಈ ರೀತಿಯ ತೊಯ್ದಾಟ ಮನದ ಮೊಸೆಯಲ್ಲಿ ನಡೆಯುತ್ತಲೇ ಇರುತ್ತದೆ. ಆದರೂ ಅದನ್ನು ಅರಿಯುವ ತಿಳುವಳಿಕೆ ಸೂಕ್ಷ್ಮ ಬರುವುದು ತುಂಬ ದುಬಾರಿಯೆನಿಸುತ್ತದೆ. ಇದನ್ನೇಲ್ಲಾ ಯೋಚಿಸುವಷ್ಟು ಪುರುಸತ್ತು ಯಾರೊಬ್ಬರಿಗೂ ಇರುವುದಿಲ್ಲ. ಯಾಕೆಂದರೇ ಒಂದು ವರುಷಕ್ಕೆ ಇರುವುದು ಅದೇ ೩೬೫ ದಿನಗಳೂ ಮಾತ್ರ.

ಕಾಲಾಯ ತಸ್ಮಾಯಾ: ನಮಾ:!

ಪ್ರಕೃತಿಯು ಕಾಲಕ್ಕೆ ತಕ್ಕಂತೆ ತನ್ನ ಮ್ಯಾಜಿಕ್ ತೋರಿಸುತ್ತಲೇ ಇರುತ್ತದೆ. ಬದಲಾವಣೆ ಜಗದ ನಿಯಮ ಎನ್ನುವುದನ್ನು ದಿನಂಪ್ರತಿ ನಿತ್ಯ ನೋಡುತ್ತಲೇ ಇರುತ್ತೇವೆ. ನಾವುಗಳು ನೋಡಿ ಕಲಿಯಬೇಕು. ಅದನ್ನು ಮೀರಿ ಯಾರು ಇಲ್ಲವೆನ್ನುವುದನ್ನು ಈಗಾಗಲೇ ಪ್ರತಿಯೊಬ್ಬರೂ ಅರಿತಿದ್ದಾರೆ.

ಇರುವಷ್ಟು ದಿನ ಸಂತೋಷದಿಂದ ಇರುವುದನ್ನು ಮತ್ತು ನಮ್ಮ ಜೊತೆಯಲ್ಲಿರುವರೊಡನೆ ಸಹ ಬಾಳ್ವೆಯ ಜೀವನವನ್ನು ಸಾಗಿಸುವುದು ಮಾತ್ರ ನಮ್ಮ ಮಂತ್ರವಾಗಬೇಕು. ಯಾರೊಬ್ಬರೂ ಏನನ್ನು ತಾನು ಅಳಿಯುವ ಸಮಯದಲ್ಲಿ ಹೊತ್ತು ಹೋಗಲಾರರು! ಈ ಸತ್ಯವನ್ನು ಯಾವಗಲೂ ನೆನಪಿಸಿಕೊಂಡರೇ ನಾವುಗಳೂ ಇನ್ನೂ ಉತ್ತಮವಾಗಿ ಹೇಗೆಲ್ಲಾ ಬಾಳಬಹುದು ಎಂಬುದು ಗೊತ್ತಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ