ಬುಧವಾರ, ಜನವರಿ 11, 2012

ವೀರ ಸನ್ಯಾಸಿ ವಿವೇಕಾನಂದರು

ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ವಿದ್ಯಾರ್ಥಿ ದೆಸೆಯಲ್ಲಿ ದೇಶದ ಬಗ್ಗೆಯಾಗಲಿ, ಭಾರತದ ದೇಶದ ಬಗ್ಗೆ, ಹಿಂದೂ ಧರ್ಮದ ಬಗ್ಗೆಯಾಗಲಿ ಏನಾದರೂ ಕೂಂಚ ತಿಳಿದುಕೊಳ್ಳಬೇಕು ಎಂಬ ಅಸಕ್ತಿಪಟ್ಟರೆ ಒಂದೇ ಒಂದು ಆಯ್ಕೆ ಎಂದರೇ ಅದು ಸ್ವಾಮಿ ವಿವೇಕಾನಂದರ ಪುಸ್ತಕಗಳ ಮೊರೆ ಹೋಗುವುದು.

ಸ್ವಾಮಿ ವಿವೇಕಾನಂದರ ಬಗ್ಗೆ ಓದುವುದು ಎಂದರೇ ಅದು ನಮ್ಮ ಭಾರತ ದೇಶದ ಬಗ್ಗೆ ಓದಿದಂತೆ. ಅವರ ನುಡಿಗಳನ್ನು, ಅವರ ಅಪೂರ್ವ ಜೀವನ ಸರಣಿ, ಅವರ ಕೃತಿಗಳ ಅಧ್ಯಯನ ನಮ್ಮ ಭಾರತದ ನೈಜ ಸತ್ವವನ್ನು ಅತಿ ಹತ್ತಿರದಿಂದ ಪರಾಂಬರಿಸಿದಂತೆಯೇ ಸರಿ.

ಸ್ವಾಮಿವಿವೇಕಾನಂದರು ೧೨ ಜನವರಿ ೧೮೬೩ ಸೋಮವಾರದಂದು ಕೊಲ್ಕತ್ತಾದಲ್ಲಿ ಜನಿಸಿದರು. ೧೫೦ನೆ ಜನ್ಮದಿನವಾದ ಇಂದು ಭಾರತದ ವಿವಿದೆಡೆಯಲ್ಲಿ ಯುವಜನೋತ್ಸವವಾಗಿ ಆಚರಿಸುತ್ತಿದ್ದಾರೆ.

ನಮ್ಮ ಭಾರತದ ಹಿಂದೂ ಧರ್ಮವನ್ನು ಹೆಚ್ಚಿನ ಪರಾಮರ್ಶೆಗೆ ಒಳಪಡಿಸಿ ಅದರ ಸನಾತನತೆಯನ್ನು,ಬ್ರಾತೃತ್ವವನ್ನು, ವಿಶ್ವಶಾಂತಿಯನ್ನು ಜಗತ್ತಿಗೆ ಪ್ರಸ್ತುತಪಡಿಸಿದ ಕೀರ್ತಿ ಸ್ವಾಮಿವಿವೇಕಾನಂದರದಾಗಿದೆ.

೧೮೯೩ ರವರೆಗೂ ವಿಶ್ವದಲ್ಲಿ ಕೇವಲ ಕ್ರೀಸ್ತ ಧರ್ಮವೊಂದೇ ಎಂಬ ಭಾವನೆಯನ್ನು ಜಗತ್ತು ಹೊಂದಿತ್ತು. ಆದರೇ ಸ್ವಾಮಿವಿವೇಕಾನಂದರ ವಿಶ್ವವಾಣಿ ೧೮೯೩, ಸೆಪ್ಟಂಬರ್ ೧೧ ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ನೀಡಿದ ಉಪನ್ಯಾಸದಲ್ಲಿ, ಅಲ್ಲಿ ಸೇರಿದ್ದ ಎಲ್ಲಾ ಧರ್ಮದ ಶ್ರೇಷ್ಠ ಸಾಧುಗಳು, ಪರಿಣತರುಗಳು ಭಾರತದ ಕಡೆಗೆ ನೋಡುವಂತೆ ಮಾಡಿತು.ಎಲ್ಲಾ ಧರ್ಮಗಳ ಮೊಲ ಬೇರು ಮೊಲ ಸೆಲೆ ಭಾರತದಲ್ಲಿದೆ ಎಂಬುದನ್ನು ಕಂಡು ಬೆಕ್ಕಸ ಬೆರಗಾದರು.

ಅಲ್ಲಿಯವರೆಗೂ ಭಾರತ ಎಂದರೇ ಹಿಂದುಳಿದ ಬಡವರ, ದೀನರ, ಮೌಢ್ಯದ ಉಪಖಂಡ ಎಂದು ನೋಡುತ್ತಿದ್ದರು. ಧರ್ಮಗಳು ಎಂದರೇ ಕೇವಲ ದೇವರ ಬಗ್ಗೆ ಮಾತನಾಡುವುದು ಮಾತ್ರ ಎಂಬಂತಾಗಿತ್ತು. ಆದರೇ ಅದು ವಿಶ್ವ ಜನಗಳ ನೆಮ್ಮದಿ, ಶಾಂತಿಯ ಹರಿಕಾರ ಮತ್ತು ಸರ್ವ ಸ್ವತಂತ್ರ ಅಭಿವ್ಯಕ್ತಿಯ ಮೊಲ ಎಂಬುದನ್ನು ಅರಿಯುವಂತೆ ಮಾಡಿತು.

ಯೋಚಿಸಿ ವಿವೇಕಾನಂದರ ಬಗ್ಗೆ ಮಾತನಾಡಲು ನಮಗಂತೂ ಏನೇನೂ ಅರ್ಹತೆಯಿಲ್ಲ. ವಿವೇಕಾನಂದರದು ಪ್ರಶ್ನಾರ್ಹವಲ್ಲದ ವ್ಯಕ್ತಿತ್ವ.




ಸಾಧು, ಸನ್ಯಾಸಿ ಅಂದರೇ ನಮ್ಮ ಕಣ್ಣ ಮುಂದೆ ಬರುವ ಮೊದಲ ಚಿತ್ರವೆಂದರೇ ಅದು ಸ್ವಾಮಿವಿವೇಕಾನಂದರು.

ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿದೇವು ಅಂದರೇ ನಿಜವಾಗಿಯು ನೀವು ಸಹ ಸಾಧು ಸನ್ಯಾಸಿಯಾಗುವ ಮನಸ್ಸನ್ನು ಮಾಡಿಯೇ ಮಾಡಿರುತ್ತೀರಾ. ಒಂದು ವಿರಾಟ್ ಆದರ್ಶ ಪುರುಷರು ಇವರಾಗಿದ್ದಾರೆ.

"ಏಳಿ, ಏದ್ದೇಳಿ, ಗುರಿ ಸೇರುವವರೆಗೂ ನಿಲ್ಲದಿರಿ...!" ಅವರ ಪ್ರಸಿದ್ಧ ನುಡಿ ಎಂಥ ಜಡ ವ್ಯಕ್ತಿತ್ವವನ್ನು ಒಂದು ಕ್ಷಣದ ಮಟ್ಟಿಗೆಯಾದರೂ ರೋಮಾಂಚನವನ್ನುಂಟು ಮಾಡಿ ಏನಾದರೂ ಸಾಧಿಸುವಂತಹ ಛಲದ ಕಿಡಿಯನ್ನು ಮನದ ಮೊಲೆಯಲ್ಲಿ ಹುಟ್ಟು ಹಾಕಿಯೇ ಹಾಕುತ್ತದೆ.

ನನ್ನ ಶಾಲಾ ದಿನಗಳಲ್ಲಿ ಅವರ ಜನ್ಮದಿನಾಚರಣೆಯ ಪ್ರಯುಕ್ತ ಅವರ ಜನ್ಮ ಚರಿತ್ರೆಯ ಅಧ್ಯಯನ ಮತ್ತು ಪರೀಕ್ಷೆಯನ್ನು ನಗರದ ಎಲ್ಲಾ ಶಾಲೆಗಳಿಗಾಗಿ ಏರ್ಪಡಿಸಿದ್ದರು. ಅಂದು ಅವರ ಜೀವನ ಚರಿತ್ರೆಯ ಪುಸ್ತಕವಾದ "ವೀರ ಸನ್ಯಾಸಿ ವಿವೇಕಾನಂದರು" ಪುಸ್ತಕವನ್ನು ಓದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಲ್ಲರೂ ಅವರ ಭಾವ ಚಿತ್ರವಿರುವ ಪ್ರಮಾಣ ಪತ್ರವನ್ನು ಪಡೆದಿದ್ದ ಘಟನೆ... ಅವರ ಬಗ್ಗೆ ಇನ್ನೂ ಹೆಚ್ಚು ಹೆಚ್ಚೂ ಅರಿಯುವಂತೆ ಪ್ರೇರೆಪಿಸಿತು.

ಅವರ ಅಷ್ಟು ಕೃತಿ ಶ್ರೇಣಿಯನ್ನು ಓದುವಂತೆ ಮಾಡಿತು.

ಸಾಧು ಸಂತರು ಎಂದರೇ ಅವರು ಯಾವುದಾದರೂ ಒಂದು ದೇವರ ಬಗ್ಗೆ, ಸಾಧನೆಯ ಬಗ್ಗೆ, ಪವಾಡಗಳ ಬಗ್ಗೆ ಹೆಚ್ಚು ಹೆಚ್ಚು ಹೇಳಿಕೊಳ್ಳುತ್ತಾರೆ. ಆದರೆ ವಿವೇಕಾನಂದರು ಇದೆಲ್ಲಾಕ್ಕೂ ವಿಭಿನ್ನವಾದ ವಜ್ರದಂತಹ ದೂರ ದೃಷ್ಟಿಯನ್ನು, ಚಿಂತನೆಯನ್ನು, ದೇಶ ಪ್ರೇಮವನ್ನು ಕಾಣಬಹುದು.

ಈಶ್ವರ ಪೂಜೆಯೆಂದರೇ ಮೊದಲು ಬಡವರಾದ ನಮ್ಮ ನಮ್ಮ ಅಣ್ಣ ತಮ್ಮಂದಿರ ಸೇವೆ ಎಂದು ಹೇಳುತ್ತಾರೆ. ಅವರನ್ನು ಮೇಲು ಮಟ್ಟಕ್ಕೆ ತರುವುದೇ ದೇವರಿಗೆ ಮಾಡುವ ಶ್ರೇಷ್ಠ ಭಕ್ತಿ ಎನ್ನುತ್ತಾರೆ. ಗುಡಿ ಗುಂಡಾಂತರಗಳನ್ನೇಲ್ಲಾ ಬಿಟ್ಟು ಜನ ಸಾಮಾನ್ಯರ ನಡುವೆ ಅವರ ಸೇವೆಯನ್ನು ಮಾಡುತ್ತಾ ನಮ್ಮೆಲಾರ ಅರಿವಿಗೆ ಅವರು ನೀಡಿದ ಸಂದೇಶ ಸಾರವನ್ನು ಎಂದೇಂದಿಗೂ ಮನನ ಮಾಡಿಕೊಳ್ಳುವುದು ಸರ್ವಕಾಲಕ್ಕೂ ಪ್ರಸ್ತುತ.

ಸ್ವಾಮಿವಿವೇಕಾನಂದರ ಮೊಲಕ ಅವರ ಗುರುಗಳಾದ ರಾಮಕೃಷ್ಣ ಪರಮಹಂಸರು, ಶಾರದದೇವಿ ಇವರುಗಳ ಅಗಾಧ ವ್ಯಕ್ತಿತ್ವವನ್ನು ಅತ್ಯಂತ ಹತ್ತಿರದಿಂದ ನಮ್ಮ ನಾಡು ಕಾಣುವಂತಾಯಿತು.

ಇಂದಿನ ನಮ್ಮ ಹೈಟೆಕ್ ಸಾಧುಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾದ ವ್ಯಕ್ತಿತ್ವವನ್ನು ಕಂಡರೇ ವಿವೇಕಾನಂದರು ಜನಿಸಿದ ನಾಡಿನವರಾ ಇವರುಗಳು ಎಂಬ ಭ್ರಮ ನಿರಸನವಾಗುತ್ತದೆ.

ಎಲ್ಲಾ ಧರ್ಮಗಳನ್ನು ಪ್ರೀತಿಸಿ ಆಗ ಮಾತ್ರ ನಿಮ್ಮ ಧರ್ಮಕ್ಕೆ ಪ್ರೀತಿ ನೀಡಿದಂತೆ ಎಂದು ಸಾರಿ ಸಾರಿ ಹೇಳಿದ್ದಾರೆ.

ಇಲ್ಲಿ ಯಾವ ಧರ್ಮವು ಮೇಲು ಅಲ್ಲಾ, ಯಾವುದು ಕೀಳಲ್ಲ. ಎಲ್ಲಾ ಧರ್ಮಗಳ ಮೂಲ ಸಾರ ಒಂದೇ!

ಅವರ ಅಗಾಧ ವಿದ್ವತ್ ಪೂರ್ಣ ವೈಚಾರಿಕತೆಯಿಂದ ಹಿಂದೂ ಧರ್ಮದ ಸರ್ವ ಶ್ರೇಷ್ಠ ಗ್ರಂಥಗಳ ನೈಜ ಅರ್ಥಗಳು ಜನಸಾಮಾನ್ಯರಿಗೆ ತಿಳಿಯುವಂತಾಯಿತು. ವೇದಗಳು, ಭಗಧ್ಗೀತೆ, ಪುರಾಣಗಳು.. ಇತ್ಯಾದಿ ಎಲ್ಲಾದರ ಬಗ್ಗೆಯು ಅವರುಗಳು ನಮ್ಮಲ್ಲಿ ಅರಿವನ್ನುಂಟು ಮಾಡಿದರು. ಅವುಗಳ ಮೂಲ ಆಶಯವನ್ನು ಸರಳವಾಗಿ ತಮ್ಮ ಉಪನ್ಯಾಸಗಳ ಮೂಲಕ ತಿಳಿಯಪಸಿದರು.

ಇಂದಿಗೂ ಅವರು ಕಟ್ಟಿ ಬೆಳಸಿದ ಸಂಸ್ಥೆಯಾದ ಶ್ರೀ ರಾಮಕೃಷ್ಣ ಆಶ್ರಮ ನಮ್ಮ ಧರ್ಮದ ಬಗ್ಗೆ ಜಾಗೃತಿಯನ್ನುಂಟು ಮಾಡುವ ದೆಸೆಯಲ್ಲಿ ಅವರ ಕೃತಿಗಳನ್ನು ಅತ್ಯಂತಹ ಕಡಿಮೆ ಬೆಲೆಗೆ ಜನರಿಗೆ ಸಿಗುವಂತೆ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯ. ಭಾರತದ ಜನಗಳ ಸೇವೆಯೇ ಈಶ ಸೇವೆ ಎಂಬುದನ್ನು ದೀನ ದಲಿತರಿಗೆ, ಅಬಲರಿಗೆ ವಿವಿಧ ರೀತಿಯ ಯೋಜನೆಗಳ ಮೊಲಕ ಮೂಲಭೂತ ಸೌಕರ್ಯ ಮತ್ತು ಶಿಕ್ಷಣವನ್ನು ನೀಡುವುಲ್ಲಿ ಇಂದಿಗೂ ರಾಮಕೃಷ್ಣ ಮಿಷನ್ ಬಹು ಮುಖ್ಯ ಸಂಸ್ಥೆಯಾಗಿದೆ.

ನಾವುಗಳು ವಿವೇಕಾನಂದರು ಹೇಳಿದಂತಹ ಕೆಲವೊಂದು ಸಂದೇಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ಸಲ್ಲಿಸುವ ನಮ್ಮ ಹೃದಯ ಪೂರ್ಣ ನಮನಗಳು.

ಜೈ ಗುರುದೇವಾ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ