ಸೋಮವಾರ, ಫೆಬ್ರವರಿ 17, 2025

ಡೇಟನ್ ವಿಮಾನ ಜನಕರ ಜನ್ಮ ಭೂಮಿ

ಡೇಟನ್ ಓಹಿಯೋ ರಾಜ್ಯದ ಒಂದು ಪುಟ್ಟ ನಗರ. ಜೆಮ್ ಸಿಟಿಯೆಂದೆ ಪ್ರಸಿದ್ಧವಾದ ಪಟ್ಟಣ.




ವೈಮಾನಿಕ ಜಗತ್ತಿನ ಜನಕರಾದ ರೈಟ್ ಸಹೋದರರ ತವರು ನೆಲ. ವಿಮಾನ ಹಾರಟದ ಪ್ರಯೋಗ  ಭೂಮಿಯೆಂದೇ ಇಡೀ ಜಗತ್ತಿಗೆ ತನ್ನ ಹಿರಿಮೆಯನ್ನು ಪಸರಿಸಿದ ನಗರ. ಈ ನಗರದಲ್ಲಿ ಎಲ್ಲಾ ವರ್ಗದ ಜನ ಸಾಮಾನ್ಯರು ವಾಸ ಮಾಡುತ್ತಿದ್ದಾರೆ. 


ನಾನು ಇಲ್ಲಿಗೆ ವಾಸ ಮಾಡುವ ಸಲುವಾಗಿ ಬರುವ ವೇಳೆಯಲ್ಲಿ ಇಷ್ಟೊಂದು ವಿಷಯ ವಿಶೇಷಗಳನ್ನು ಹೊಂದಿರುವ ನಗರವೆಂದು ತಿಳಿದು ವಿಸ್ಮಿತನಾಗಿದ್ದುಂಟು. ಹಾಗೆಯೇ ಈ ನಗರದಲ್ಲಿಯೇ ನನ್ನ ಕಂಪನಿ ಕೆಲಸವನ್ನು ಮಾಡಲು ಅವಕಾಶಯೋ ಸಿಕ್ಕಿದ್ದಕ್ಕೆ ನನ್ನ ಖುಷಿಯು ದುಪ್ಪಟ್ಟಾಗಿತ್ತು. 

ಹಾಗೆಯೇ ಅಮೇರಿಕಾ ಅಂದರೇ ನ್ಯೂಯಾರ್ಕ್, ಚಿಕಾಗೋ, ಸ್ಯಾನ್ ಪ್ರಾನ್ಸಿಸ್ಕೋ ಎಂದು ಮಾತನಾಡುವವರ ಮುಂದೇ ಡೇಟನ್ ಗೆ ಹೋಗುತ್ತಿದ್ದೇನೆ ಅಂದರೇ ಪುನಃ ಅಮೇರಿಕಾ ತಾನೇ ಎಂದು ಪ್ರತಿ ಪ್ರಶ್ನೆ ಮಾಡಿದ್ದವರ ಕಂಡು ಕನಿಕರವೂ ಬಂದಿತ್ತು.



ಅಮೇರಿಕವೆಂದರೇ ವಿಶಾಲವಾದ ಭೂ ಪ್ರದೇಶವನ್ನು ಹೊಂದಿರುವ ದೇಶ. ಹಾಗೆಯೇ ಅಲ್ಲಿರುವ ಒಟ್ಟು ರಾಜ್ಯಗಳ ಸಂಖ್ಯೆಯೇ ಐವತ್ತು. ಪ್ರತಿ ರಾಜ್ಯಗಳ ಗಡಿಗಳನ್ನು ಅವುಗಳಲ್ಲಿ ಹರಿಯುವ ನದಿಗಳ ಮೊಲಕ ಗಡಿಯನ್ನು ಹಾಕಿಕೊಂಡು ಬೇರೆ ಬೇರೆ ಮಾಡಿದ್ದಾರೆ. ನಾವು ಯಾವುದಾದರೂ ಒಂದು ಸಿಟಿಯಿಂದ ಇನ್ನೊಂದು ರಾಜ್ಯದ ಸಿಟಿಗೆ ಹೋಗುವಾಗ ಒಂದು ನದಿಯನ್ನು ದಾಟಿದೇವು ಅಂದರೆ ಮುಂದೆಯೇ ಹೊಸ ರಾಜ್ಯದ ಸ್ವಾಗತ ಬೋರ್ಡ್ ಗಳು ಕಾಣುವುದು ಸಾಮಾನ್ಯ.


ಹಾಗೆಯೇ ಓಹಿಯೋ ನದಿಯಿಂದ ಓಹಿಯೋ ರಾಜ್ಯದ ಹೆಸರು ಬಂದಿರುವುದಾದರೂ. ಈ ಓಹಿಯೋ ರಾಜ್ಯದಲ್ಲಿ ಅತಿ ದೊಡ್ಡ ನಗರಗಳೆಂದರೇ ರಾಜ್ಯದ ರಾಜದಾನಿಯಾದ ಕೊಲಂಬಸ್ ಮತ್ತು ಸಿನ್ಸಾನಾಟಿ. ಡೇಟನ್ ಕೊಲಂಬಸ್ ನಿಂದ ೭೦ ಮೈಲಿ ಮತ್ತು ಸಿನ್ಸನಾಟಿಯಿಂದ ೫೫ ಮೈಲಿ ದೂರದಲ್ಲಿದೆ. 


ಹಾಗೆಯೇ ವಿಶ್ವ ವೈಮಾನಿಕ ಜಗತ್ತಿಗೆ ಈ ನಗರ ಒಂದು ಐತಿಹಾಸಿಕ ಸ್ಥಳವಾಗಿದೆ. ನಮಗೆಲ್ಲಾ ಗೊತ್ತು ಇಡೀ ಜಗತ್ತನ್ನೆ ಚಿಕ್ಕದು ಮಾಡಿದ್ದು ವಿಮಾನಯಾನ. ಹಕ್ಕಿಯ ರೀತಿಯಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಾರಿಕೊಂಡು ಹೋಗಬಹುದು ಎಂಬ ಕಲ್ಪನೆಯನ್ನು ನಿಜ ಮಾಡಿದ ರೈಟ್ ಸಹೋದರರನ್ನು ಈ ಜಗತ್ತು ಎಂದಿಗೂ ಮರೆಯಲು ಸಾಧ್ಯವಿಲ್ಲ. 



ಇಲ್ಲಿರುವ ನ್ಯಾಷನಲ್ ಮ್ಯೂಸಿಯಮ್ ಅಪ್ ಏರ್ ಪೊರ್ಸ್ ನಲ್ಲಿರುವ ಅವರ ಮೊದಲ ವಿಮಾನ ರಚನೆಯನ್ನು ಕಂಡು ಅಚ್ಚರಿಯು ಆಯಿತು.  ಮನುಷ್ಯನಿಗೂ ರೆಕ್ಕೆಗಳನ್ನು ಕಟ್ಟಿ ಹಾರಬೇಕು ಎಂಬ ಕನಸನ್ನು ನನಸು ಮಾಡಿ ಇಡೀ ಜಗತ್ತನ್ನು ಒಂದು ಹಳ್ಳಿಯಾಗಿ ಮಾಡಿದ ಸಹೋದರರ ಸಂಶೋಧನೆಗೆ ಒಂದು ಸಲಾಮ್ ಹೇಳಲೇಬೇಕು ಅನಿಸುತ್ತದೆ. ಅವರನ್ನು ನಿತ್ಯ ನೆನಪು  ಮಾಡಿಕೊಳ್ಳೊಣವೆಂದುಕೊಂಡು ಬರುವ ಮ್ಯೊಸಿಯಂ ವೀಕ್ಷಕರ ಸಂಖ್ಯೆಯೇ ಹೇಳುತ್ತದೆ  ರೈಟ್ ಸಹೋದರರ ಬಗ್ಗೆ ನಮ್ಮೆಲ್ಲಾರ ಹೆಮ್ಮೆ ಎಷ್ಟರ ಮಟ್ಟಿಗೆ ಇದೆಯೆಂದು. 



ಹಾಗೆಯೇ ಡೇಟನ್ ನಗರದ ಜೀವ ನಾಡಿಯಾಗಿ ಹರಿಯುತ್ತಿರುವ ಮಿಯಾಮಿ ನದಿಯು ಶುದ್ಧ ಪರಿಶುದ್ಧ ನೀರನ್ನು ಹೊಂದಿರುವುದಲ್ಲದೆ ಇಲ್ಲಿಯ ಜನರ ಕುಡಿಯುವ ನೀರನ್ನು ಈ ನದಿಯಿಂದಲೇ ಪೂರೈಸುತ್ತಿರುವುದು ಒಂದು ವಿಶೇಷ. 




ಈ ಡೇಟನ್ ನಗರಕ್ಕೆ ಸೇರಿರುವ ಸುತ್ತುಕೊಂಡಿರುವ ಪ್ರಮುಖ ಚಿಕ್ಕ ಪಟ್ಟಣಗಳೆಂದರೇ ಕೇಟರಿಂಗ್,ಮಿಯಾಮಿಸ್ಭರ್ಗ್,ಸೆಂಟ್ರಾವಿಲ್ಲಿ,ಬೆಲ್ ಬ್ರೂಕ್. ಈ ಎಲ್ಲಾ ನಗರಳು ಸೇರಿಕೊಂಡಿರುವುದರಿಂದ ಒಮ್ಮೊಮ್ಮೆ ದೊಡ್ಡ ನಗರವೆನಿಸುತ್ತದೆ. ಆದರೇ ಇಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಂದುಕೊಂಡ ಸಮಯದಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಸರಾಗವಾಗಿ ತಲುಪಬಹುದಾಗಿದೆ ಅದು ಟ್ರಾಪಿಕ್ ಜಂಜಾಟವಿಲ್ಲದೆ. ಇದಂತೂ ಇಲ್ಲಿಯ ಜನರ ಸಂತೋಷಕ್ಕೆ ಒಂದು ಬಹುಮುಖ್ಯ ಕಾರಣವಾಗಿದೆ.


ಓಹಿಯೋ ರಾಜ್ಯದ ಹಿರಿಮೆಯೆಂದರೇ ಅತಿ ದಟ್ಟ ಹಸಿರು ಮರಗಳನ್ನು ಹೊಂದಿರುವುದು. ಹಾಗೆಯೇ ಇಲ್ಲಿಯು ಈ ನಗರದ ಸುತ್ತ ಮುತ್ತಿರುವ ಹಸಿರು ವನಗಳನ್ನು ಅವುಗಳು ಇರುವಂತೆ ಕಾಪಿಟ್ಟುಕೊಂಡು ಜನ ಸಾಮಾನ್ಯರಿಗೆ ಮೆಟ್ರೂ ಪಾರ್ಕಗಳೋಪಾದಿಯಲ್ಲಿ ಕೊಟ್ಟಿರುವುದು ಇಲ್ಲಿಯ ನಾಗರಿಕರು ತಮ್ಮ ಬಿಡುವಿನ ಸಮಯವನ್ನು ಈ ಪಾರ್ಕಗಳಲ್ಲಿ  ನಡೆದಾಡುತ್ತಾ, ಮಕ್ಕಳು ಆಟಗಳನ್ನಾಡುತ್ತ ತಮ್ಮ ಸಮಯವನ್ನು , ಬೇಸಗೆಯ ದಿನಗಳನ್ನು ಕಳೆಯಲು ಅತ್ಯುತ್ತಮವಾಗಿದೆ  ಅಂದರೇ ತಪ್ಪಿಲ್ಲ.




 ಇಲ್ಲಿಯ ಮೊಲತಃ ಅಮೆರಿಕಾದವರು ಸೌಮ್ಯ ಸ್ವಭಾವದವರು ಅಂದರೇ ತಪ್ಪಿಲ್ಲ. ಕಳೆದ ಹತ್ತು ವರುಷದ ನನ್ನ ವಾಸದಲ್ಲಿ ಎಲ್ಲಿಯೂ ಸಹ ಅಮೆರಿಕಾದ ಬೇರೆ ಬೇರೆ ಸ್ಥಳಗಳಿಂದ ಅಲ್ಲಿ ಇಲ್ಲಿ ಕೇಳುವ ಕೆಟ್ಟ ನಡವಳಿಕೆಗಳನ್ನಂತೂ ನಾನು ಇದುವರೆಗೂ ಕಂಡಿಲ್ಲ. ಹೆಚ್ಚಾಗಿ ನಿವೃತ್ತ ವಯೋ ವೃದ್ಧರ ಪ್ರೀಯ ಜಾಗವೆಂದರೇ ತಪ್ಪಿಲ್ಲ. ಯಾಕೆಂದರೇ ಇಲ್ಲಿಯ ವಾತವರಣ ಹಾಗೂ ಕಡಿಮೆ ದರದ ಸಿಟಿಯೆಂದೇ ಪ್ರಸಿದ್ಧವಾಗಿರುವುದಿರಂದಲೂ, ಆರಾಮಾಗಿ ಜೀವನ ನಡೆಸುವಂತಿರುವುದರಿಂದ, ಟ್ರಾಪಿಕ್ ಜಟಾಪಟಿ ಇಲ್ಲದಿರುವುದರಿಂದ ಶಾಂತತೆಗೆ ಹೆಸರಾದ ಪಟ್ಟಣವಾಗಿದೆ.


ನಮ್ಮ ಭಾರತೀಯರ ಸಂಖ್ಯೆಯು ಇತ್ತೀಚೆಗೆ ಹೆಚ್ಚುತ್ತಿರುವುದು ಕಾಣಿಸುತ್ತಿದೆ. ನಮ್ಮವರಿಂದಲೇ ಏನೋ ಅನಿಸುವಂತೆ ಹೊಸ ಹೊಸ ವಾಸ ಯೋಗ್ಯ ಬಡಾವಣೆಗಳು ರಚಿತವಾಗಿ ನಗರದ ವಿಸ್ತಾರ ಹಿಗ್ಗುತ್ತಿದೆ. ಒಮ್ಮೆ ಇಲ್ಲಿ ವಾಸಿಸಲೂ ಪ್ರಾರಂಭಿಸಿದರೇ ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ ಬಿಡಿ. ಅದು ಈ ನಗರವೊಂದೇ ಅಲ್ಲ ಯಾವುದೇ ನಗರವಾದರೂ ಸಹ ಮನುಷ್ಯನಿಗೆ   ಮೊದಲ ಸ್ಥಳವೇ  ಇಷ್ಟ ’ಮೊದಲ ಪ್ರೀತಿ’ ತರವಾ??


ಇಲ್ಲಿಯ ಡೇಟನ್ ಯುನಿವರ್ಸಿಟಿ ವಿಶ್ವ ಪ್ರಸಿದ್ಧವಾಗಿದೆ ಅನಿಸುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಇತ್ತೀಚೆಗೆ ಹೆಚ್ಚು ಹೆಚ್ಚು ಭಾರತೀಯ ಯುವ ಮುಖಗಳು ಎಲ್ಲೆಲ್ಲಿಯು ಕಾಣಸಿಗುತ್ತಿರುವುದು ಸಂತೋಷದ ವಿಷಯ!


ಇಲ್ಲಿಯ ಮೈಕ್ ಸೆಲ್ಸ್ ಅಲೊಗಡ್ಡೆ ಚಿಪ್ಸ್ (೧೯೧೦) ಪ್ರಸಿದ್ಧವಾದ ಚಿಪ್ಸ್ ಕಂಪನಿ. ಇದು ಅಮೆರಿಕಾದ್ಯಂತ ಮಾರಾಟವಾಗುತ್ತಿದ್ದ ಪ್ರಸಿದ್ಧ ಚಿಪ್ಸ್ ಆಗಿತ್ತು. ಆದರೇ ಕಾರಣಾಂತರಗಳಿಂದ ಕಳೆದ ವರುಷ ಮುಚ್ಚಲ್ಪಟ್ಟಿತು.


ಡೇಟನ್ ಅಂತರಾಷ್ಟ್ರಿಯ ವಿಮಾನ ನಿಲ್ಧಾಣದಿಂದ ಅಮೇರಿಕ ಮತ್ತು ಜಗತ್ತಿನ ವಿವಿಧ ಭಾಗಗಳಿಗೆ ಸುಲಭವಾದ ಸಂಪರ್ಕ ದಾರಿಗಳನ್ನು ಕಲ್ಪಿಸಿಕೊಟ್ಟಿದೆ. 


ಡೇಟನ್ ಹಿಂದು ದೇವಸ್ಥಾನವು ಎಲ್ಲಾ ಭಾರತೀಯರಿಗೆ ಪ್ರಿಯವಾದ ಭಕ್ತಿ ಸ್ಥಳವಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯ ಪಾಠಗಳನ್ನು ಇಲ್ಲಿಯೆ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಭಾರತೀಯ ಹಬ್ಬ ಹರಿದಿನಗಳನ್ನು ಭಾರತದಲ್ಲಿಯೇ ಇದ್ದು ಆಚರಿಸುವ ಮಟ್ಟಿಗೆ ಆಚರಿಸುವ ಮೊಲಕ ನಮ್ಮ ಸಂಸ್ಕೃತಿಯನ್ನು ತಮ್ಮ ತಮ್ಮ ಕುಟುಂಬಗಳಲ್ಲಿ ಕಾಪಾಡಿಕೊಳ್ಳಲು ಪ್ರೇರಕವಾಗಿದೆ. 


ವಿವಿಧ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವು ಭಾರತೀಯರ ಸಂಖ್ಯೆ ಮತ್ತು ಉತ್ಸಾಹವನ್ನು ನೋಡಿದರೇ ನಾವುಗಳು ಅಮೆರಿಕಾದಲ್ಲಿ ಇದ್ದೇವೋ ಅಥವಾ ಭಾರತದಲ್ಲಿದ್ದೇವು ಎಂದು ಅನುಮಾನವಂತೂ ಬರುತ್ತದೆ. 



ಹೀಗೆ ಎಲ್ಲಾ ರೀತಿಯ ಜನರನ್ನು ಹೊಂದಿರುವ ಜನ ಸ್ನೇಹಿ ನಗರ ಡೇಟನ್ ಎಂದರೇ ತಪ್ಪಿಲ್ಲ! ದೊಡ್ಡ ದೊಡ್ಡ ನಗರದ ಜಂಜಾಟದ ವೇಗವಿಲ್ಲದಿದ್ದರೂ ಶಾಂತಿಯ ಸುಭಿಕ್ಷೆಯ ಹಸಿರು ಬಿಡಾಗಿ ಪ್ರತಿಯೊಬ್ಬರನ್ನು ಆಕರ್ಷಿಸುವುದರಲ್ಲಿ ಸದಾ ಮುಂದಾಗಿ ದಾಪುಗಲು ಇಡುತ್ತಾ ವೇಗವಾಗಿ ಬೆಳೆಯುತ್ತಿರುವ ಪುಟ್ಟ ನಗರ.

ಗುರುವಾರ, ಜುಲೈ 25, 2024

ಹಾಟ್ ಏರ್ ಬಲೂನ್

 ಅಮೇರಿಕಾದ ಇಲ್ಲಿನ ನಗರಗಳಲ್ಲಿ ಬೇಸಿಗೆ ರಜೆಗೆ ವಿವಿಧ ರೀತಿಯ ಹತ್ತು ಹಲವಾರು ಕಾರ್ಯಕ್ರಮಗಳನ್ನು  ಆಯೋಜಿಸಿರುತ್ತಾರೆ. ಇಲ್ಲಿಯ ಬೇಸಿಗೆ 'ಸಮ್ಮರ್' ಸಂತೋಷ ನೋಡಿಯೇ  ಖುಷಿ ಪಡಬೇಕು. 

ಮಕ್ಕಳಿಗೆ ಭರಪೂರ ೨ ತಿಂಗಳು ರಜೆಯ ಮಜಾ. ಹೀಗಾಗಿ ಈ ದಿನಗಳನ್ನು ಇಲ್ಲಿಯ ಜನ ವಿಶೇಷವಾಗಿ ಉಪಯೋಸಗಿಸಿಕೊಳ್ಳುತ್ತಾರೆ. ಮಕ್ಕಳ ನೆಪದಲ್ಲಿ ಹೆತ್ತವರು ಹಿರಿಯರು ಅಲ್ಲಿ ಇಲ್ಲಿ ವಾರಾಂತ್ಯದ ಕಾರ್ಯಕ್ರಮಗಳಲ್ಲಿ ಪೂರ್ಣವಾಗಿ ಭಾಗವಯಿಸಿ  ಖುಷಿಪಡುತ್ತಾರೆ.  

ಈ ದಿನಗಳಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳು ಜನರಿಂದ ಜೀ  ಎಂದು ತುಂಬಿರುತ್ತವೆ. ಹೋಟೆಲ್, ವಿಮಾನಗಳ ದರ ಕೇಳುವುದೇ  ಬೇಡ ಅಷ್ಟು ದುಪ್ಪಟ್ಟು. 


ನಮ್ಮ ಭಾರತೀಯರು ಸಹ ತಮ್ಮ ತಮ್ಮ ಹೆತ್ತವರನ್ನು ಈ ರಜಾ  ದಿನಗಳಿಗಾಗಿ  ಭಾರತದಿಂದ ಕರೆಸಿಕೊಂಡು  ಅಮೇರಿಕವನ್ನು ಒಂದು ಸುತ್ತು ತೋರಿಸುತ್ತಾರೆ. 

ಮಕ್ಕಳಿಗೆ ಅಜ್ಜ ಅಜ್ಜಿ ಜೊತೆಯಲ್ಲಿ ತಿರುಗುವ, ಪ್ರವಾಸ ಹೋಗುವ  ಮಜವೇ ಬೇರೆ ಬಿಡಿ.

ಹೀಗೆ ಈ ವಾರಾಂತ್ಯದಲ್ಲಿ ನಾವು ಸಹ ನಮ್ಮ ಹೆತ್ತವರೊಡಗೂಡಿ ಇಲ್ಲಿಯ ಮಿಡಲ್ ಟೌನ್ ನ ಓಹಿಯೋ ಚಾಲೆಂಜ್ ಹಾಟ್ ಏರ್ ಬಲೂನ್ ಷೋ ಗೆ ಹೋಗಿದ್ದೆವು. 

ಅಲ್ಲಿ ಈ ದೊಡ್ಡ ದೊಡ್ಡ ರಂಗು ರಂಗಿನ ಬಣ್ಣದ ಬಲೂನ್ ಗಳನ್ನು ನೋಡಿ ದಿಗ್ಬ್ರಮೆಯಾಯಿತು.


ಇಷ್ಟು ದೊಡ್ಡ ದೊಡ್ಡ ಬಲೂನಗಳ ಹಾರಾಟವನ್ನು ಇದೆ ಮೊದಲು ನೋಡಿದ್ದು. 

ಹಾಟ್ ಏರ್ ಬಲೂನ್ ನನ್ನು ಹಗುರವಾದ ವಸ್ತುಗಳಿಂದ ತಯಾರಿಸಿರುತ್ತಾರೆ. ಈ ಬಲೂನ್ಗಳನ್ನು ನೈಲಾನ್ ಬಟ್ಟೆಯಲ್ಲಿ ಮಾಡಿರುತ್ತಾರೆ. ಕೆಳ ಬಾಗವನ್ನು ಬೆಂಕಿ ಪ್ರತಿರೋಧಕ ವಸ್ತುಗಳಿಂದ ತಯಾರಿಸುತ್ತಾರೆ.   ಇದು ಮುಖ್ಯವಾಗಿ ಮೂರೂ ಬಾಗಗಳಿಂದ ಕೊಡಿರುತ್ತದೆ. ಬಲೂನ್ ಹೊರ ಬಾಗ( ಬಲೂನ್), ಬರ್ನರ್ ಮತ್ತು ಪ್ರಯಾಣಿಕರು ಕುರುವ ಪುಟ್ಟಿ. 

ಚಿಕ್ಕ ದೊಡ್ಡ ಹೀಗೆ ವಿವಿಧ ಅಳತೆಯ ಬಲೂನ್ ಗಳು ಇರುತ್ತೆ. ನಾವು ನೋಡಿದ ಇಲ್ಲಿಯ ಒಂದೊಂದು ಬಲೂನ್ ಗಳು ದೊಡ್ಡ ಮನೆಯಷ್ಟು ದೊಡ್ಡದಾಗಿ ಮತ್ತು ಅತ್ಯಂತ  ಎತ್ತರ ಇದ್ದವು. ಸುಮಾರು ೨೦-೨೫ ವಿವಿಧ ಬಗೆಯ ಬಣ್ಣದ, ರೂಪದ ಬಲೂನ್ ಗಳನ್ನೂ ನೋಡಿ ಪ್ರತಿಯೊಬ್ಬರೂ ಮೂಕವಿಸ್ಮಿತಾರದರು. 



ಅವುಗಳ ಹಾರಾಟವು ಅಷ್ಟೇ ಸುಂದರವಾಗಿತ್ತು. ಸುಂದರವಾದ ಸೂರ್ಯ ಮುಳುಗುವ  ಸಮಯದ ಆ ಕೆಂಧೂಳ ಆಕಾಶಕ್ಕೆ ಬಣ್ಣ ಬಣ್ಣ ದ ಪುಟ್ಟ ಪುಟ್ಟ ಬಣ್ಣದ ದೀಪಗಳನ್ನು ಜೋಡಿಸಿಟ್ಟಂತೆ ಕಣ್ಣಿಗೆ ಕಾಣುತ್ತಿತ್ತು. 

ಈ ಪ್ರಪಂಚದಲ್ಲಿ ಮೊದಲು ಈ  ಬಿಸಿ ಗಾಳಿ  ಬಲೂನ್ ನ್ನು ತಯಾರಿಸಿ ಹಾರಿಸಿದ್ದು ಫ್ರಾನ್ಸ್ ನಲ್ಲಿ ( 1783). 

ಪೈಲಟ್ ನ ಕೈ ಛಳಕ ಇಲ್ಲಿ ಮುಖ್ಯವಾಗುತ್ತದೆ. ಅವನು ಬಲೂನ್ ಹೇಗೆ  ಮೇಲೆ,  ಹೇಗೆ ಕೆಳಗೆ ಬರಬೇಕು ಎಂಬುದನ್ನು, ಬಿಸಿ ಗಾಳಿಯನ್ನು ಯಾವಾಗ ಹೇಗೆ ಬಲೂನ್ ಗೆ ಹರಿಸಿ ಭೂಮಿಯ ಗುರುತ್ವಾಕರ್ಷಣೆಗೆ ವಿರುದ್ಧವಾಗಿ  ಹಾರಿವುದು, ದಿಕ್ಕುಗಳನ್ನೂ ಹೇಗೆ ಬದಲಿಸಬೇಕು ಎಂಬ  ಅವನ ಜಾಣ್ಮೆಗೆ ಜೈ. 

ಇದಂತೂ ವಿಸ್ಮಯವೇ ಸರಿ. ಅಲ್ಲಿ  ಸೇರಿದ್ದ ಸಾವಿರಾರು ಜನರು ಹಾಟ್  ಏರ್ ಬಲೂನ್ ಹಾರಾಟವನ್ನು ಅಚ್ಚರಿಯ ರೀತಿಯಲ್ಲಿ ಕಣ್ಣು ತುಂಬಿಕೊಳ್ಳುತ್ತಿದ್ದರು. ಮಕ್ಕಳಂತೂ ನಾವು ಯಾವಾಗ ಹೀಗೆ ಬಲೂನ್ ನಲ್ಲಿ ಮೇಲೆ ಹಾರುವುದು ಎಂದು ಯೋಸಚಿಸುತ್ತಿದ್ದರೋ ಏನೋ ! 

ಹಾರಾಟ ಮುಗಿದ ಮೇಲೆ ಎಲ್ಲಾ ಬಲೂನ್ ಗಳನ್ನು ಒಂದು ಬದಿಗೆ ಸಾಲಾಗಿ ನಿಲ್ಲಿಸಿದಾಗ ಪ್ರತಿಯೊಬ್ಬರೂ ಅವುಗಳ ಫೋಟೋ ಕ್ಲಿಕ್ಕಿಸುವುದರಲ್ಲಿ ಬ್ಯುಸಿಯೋ ಬ್ಯುಸಿ. ಯಾರೋಬ್ಬರಿಗೂ ಸಮಾದಾನವೇ ಇಲ್ಲ. ತಮ್ಮ ತಮ್ಮ ಮಕ್ಕಳನ್ನು  ಬಲೂನ್ ಮುಂದೆ ನಿಲ್ಲಿಸಿ ಬೆಸ್ಟ್ ಫೋಟೋ ತೆಗೆಯುವ ತವಕ. ಮಕ್ಕಳಿಗೆ ಇದು ಯಾವುದು ಬೇಕಾಗದೆ ಬಲೂನ್ ಕಣ್ತುಂಬಿಕೊಳ್ಳುವುದು ಮಾತ್ರವೇ ಸಮಾಧಾನ.  

ಹೀಗೆ ಆ ಸಂಜೆ ಪ್ರತಿಯೊಬ್ಬರಿಗು ರಂಗು ರಂಗಿನ ಬೇರೊಂದು ಲೋಕದಲ್ಲಿ ತೇಲಾಡಿದ ಅನುಭವ. 

ನಮ್ಮ ಹೆತ್ತವರು ಸಹ  ಈ ರೀತಿಯ  ಅತಿ ದೊಡ್ಡ ಬಲೂನ್ ಆಕಾಶದಲ್ಲಿ ಹಾರುವುದನ್ನು ಇದೆ ಮೊದಲು ಕಂಡಿದ್ದು ಅನಿಸುತ್ತದೆ. ಅವರು ಸಹ ಮನುಷ್ಯನ ಈ ಒಂದು ಚಮತ್ಕಾರನ್ನು ತೀರಾ ಹತ್ತಿರದಿಂದ ಕಂಡು ಖುಷಿಪಟ್ಟರು. 


ಅಮೇರಿಕದಲ್ಲಿ ಈ ರೀತಿಯ ಪ್ರಸಿದ್ಧ ಬಿಸಿ ಗಾಳಿ   ಬಲೂನ್ ಷೋ ಗಳನ್ನು ವಿವಿಧ ಪ್ರದೇಶಗಲ್ಲಿ ಪ್ರತಿ ವರುಷ ಬೇಸಿಗೆಯಲ್ಲಿ ಏರ್ಪಡಿಸುತ್ತಾರೆ. ಅವುಗಳೆಂದರೆ ನ್ಯೂ ಮೆಕ್ಸಿಕೋ, ನೆವಾಡಾ , ಟೆಕ್ಸಸ್, ನ್ಯೂರ್ಯಾಕ್  ನಗರಗಳ ಅತಿ ದೊಡ್ಡ ಬಲೂನ್ ಷೋ. 

ಭಾರತದಲ್ಲೂ ಪ್ರತಿ ವರುಷ ಚೆನ್ನೈ , ಫುಲಾಚಿ, ಕಾಶಿ, ಜೈಪುರ ಗೋವಾ  ಮುಂತಾದ ಬಾಗಗಳಲ್ಲಿ ದೊಡ್ಡ ರೀತಿಯಲ್ಲಿ ಈ  ಬಿಸಿ ಗಾಳಿ ಬಲೂನ್ ಹಾರಾಟಗಳನ್ನು ಅಯೋಜಿಸಿ ನಡೆಸುತ್ತಾರೆ. 

ಹಾಗೆಯೇ ಅಂದು ಸಂಜೆಯಾದ ಮೇಲೆ ನಡೆದ ವಿವಿಧ ಕಾರ್ಯಕ್ರಮಗಳು ತುಂಬಾ ಚೆನ್ನಾಗಿದ್ದವು . ಅದರಲ್ಲಿ ಮುಖ್ಯವಾದದ್ದು ಪ್ಯಾರಾಚೂಟ್ ನಲ್ಲಿ ಹಾರುವವರು   ಆಕಾಶದಲ್ಲಿ  ಪಟಾಕಿಗಳನ್ನು ಸಿಡಿಸಿದ್ದು. ನಾವುಗಳು ಭೂಮಿಯ ಮೇಲೆ ಪಟಾಕಿಗಳನ್ನು ಆಕಾಶಕ್ಕೆ ಆರಿಸುವದನ್ನ ಮಾತ್ರ   ನೋಡಿದ್ದೇವು. ಆದರೆ ಇವರುಗಳು ೪-೫ ಪ್ಯಾರಾಚೂಟ್ ನಲ್ಲಿ  ಹಾರುತ್ತ ಹಾರುತ್ತ ಭೂಮಿಗೆ ಇಳಿಯುವ ಸಮಯದಲ್ಲಿ  ತಮ್ಮಲ್ಲಿರುವ ವಿವಿಧ ಬಗೆಯ ಬಣ್ಣ ಬಣ್ಣದ ಪಟಾಕಿಗಳನ್ನು ಹಾರಿಸುತ್ತ ಹಾರಿಸುತ್ತ ಬೆಳಕಿನ ಚಿತ್ತಾರವನ್ನು ಆಕಾಶದಲ್ಲಿ ರಚಿಸುದ್ದು 'ದ್ ಬೆಸ್ಟ್ ಷೋ' ಅನಿಸಿತು. ಅದು ಎಷ್ಟು ಅಪಾಯವೆಂದರೆ ಆದರೂ ತಮ್ಮ ಕೈ ಛಳಕ ಮತ್ತು ಪರಿಶ್ರಮದ ಕಲಿಕೆಯಿಂದ ಅದ್ಭುತವಾದದ್ದನ್ನು ಭೂಮಿಯಿಂದ 10 - 14 ಸಾವಿರ ಅಡಿ ಎತ್ತರದಲ್ಲಿ ಮಾಡಿ ತೋರಿಸಿದರು. 


ಕೊನೆಗೆ ಡ್ರೋನ್ ಷೋ, ಪಟಾಕಿಗಳ ರಂಗು ರಂಗು ಬಿರುಸು ಕಿಡಿಗಳಿಂದ ಆಕಾಶದಲ್ಲಿ ಅದ್ಭುತವಾದ  ವಿವಿಧ ಬಗೆಯ  ಚಿತ್ತಾರವನ್ನು ರಚಿಸುತ್ತ ಜನಮನವನ್ನ ಆಯೋಜಕರು ಗೆದ್ದರು. 

ನೇರದ್ದಿದ್ದ ಪ್ರತಿಯೊಬ್ಬರೂ ಹರ್ಷದೊಗಾರ ಮಾಡಿ ತಮ್ಮ ವಂದನೆಗಳನ್ನು ಚಪ್ಪಾಳೆಯ ಮೂಲಕ ಪ್ರತಿಯೊಬ್ಬ ಕಾರ್ಯಕ್ರಮದ ಕಾರ್ಯಕರ್ತರಿಗೆ ಅರ್ಪಿಸಿದರು. 


ಇದಕ್ಕೂ  ಮೊದಲು ಇದ್ದ ವಿವಿಧ ಬಗೆಯ ಹಳೆ ಹೊಸ ಕಾರುಗಳ ಪ್ರದರ್ಶನ ಪ್ರತಿಯೊಬ್ಬರ ಮನಸ್ಸನ್ನ ಆಕರ್ಷಿಸಿತು. 

ಎಲ್ಲಾರಿಗೂ  ತಿಳಿದ ರೀತಿಯಲ್ಲಿ ತಿನ್ನುವುದಕ್ಕೆ ಕೊಳ್ಳುವುದಕ್ಕೂ  ಏನು ಕಡಿಮೆ ಇಲ್ಲದ ರೀತಿಯಲ್ಲಿ ನೂರಾರು ಚಿಕ್ಕ ಚಿಕ್ಕ ಫುಡ್ ಮತ್ತು  ಪನ್ ಸ್ಟಾಲುಗಳು  ಪ್ರತಿಯೋಬ್ಬರ ನಿರೀಕ್ಷೆಯನ್ನು ಸುಳ್ಳು ಮಾಡದ  ರೀತಿಯಲ್ಲಿ ಭರ್ತಿ ತುಂಬಿ ತುಳುಕುತ್ತಿದ್ದವು. ಮಕ್ಕಳು ಚಿಕ್ಕ ಚಿಕ್ಕ ಆಟಗಳನ್ನು ಆಡುತ್ತಾ ನಲಿದಾಡಿದರು.

ಅಲ್ಲಿ ಸೇರಿದ್ದ ಜನ ಸಮೂಹ ಕಂಡು ನಮ್ಮ ಹೆತ್ತವರು, ನಮ್ಮ ಭಾರತದಂತೆ ಎಲ್ಲಾರು ಒಮ್ಮೆಲೇ ಮನೆಗಳಿಗೆ  ತೆರೆಳಲು ಕಾರು ತೆಗೆ್ದರೇ ರಸ್ತೆ ಪೂರ್ತಿ ಟ್ರಾಫಿಕ್ ಜಾಮ್ ಎಂದು ಅನುಮಾನ ಪಟ್ಟಿದ್ದೆ ಬಂತು. ಆದರೆ ಇಲ್ಲಿನ ಅಚ್ಚುಕಟ್ಟು ಆಯೋಜನೆ ಒಂದು ನಿಮಿಷವೂ ಎಲ್ಲಿಯೂ ಟ್ರಾಫಿಕ್ ನಲ್ಲಿ ಸಿಲುಕಿಕೊಳ್ಳದ ರೀತಿಯಲ್ಲಿ ನಮ್ಮ ನಮ್ಮ ಕಾರೂಗಳನ್ನು ಅಲ್ಲಿನ  ಪಾರ್ಕ ಜಾಗದಿಂದ ಮುಖ್ಯ ರಸ್ತೆಗೆ ತಂದಾಗ ಹೆತ್ತವರು ವಿಸ್ಮಯದ ಕಣ್ಣು ಬಿಟ್ಟು ನನ್ನನೊಮ್ಮೆ ನೋಡಿದರು! 

ಬಹಳ ದಿನವಾದ ಮೇಲೆ ನಾವೆಲ್ಲರೂ ಒಂದು ಅತ್ಯತ್ತಮವಾದ ಕಾರ್ಯಕ್ರಮವನ್ನು ನೋಡಿದೆವು ಎಂಬ ತೃಪ್ತಿಯಾಯಿತು .  
 

ಸೋಮವಾರ, ಏಪ್ರಿಲ್ 22, 2024

ದೂರದ ದೇಶದಲ್ಲಿ ಕನ್ನಡ

ಭಾಷೆ ಎಂಬುದು ಎರಡು ಮನಸ್ಸುಗಳನ್ನು ಒಂದು ಕಡೆ ಕಟ್ಟಿಹಾಕುತ್ತದೆ. ಹಾಗೆಯೆ ನಮ್ಮ ಕನ್ನಡ ಭಾಷೆ ಈ ಅಮೇರಿಕಾದ ಡೇಟನ್ ನಗರದಲ್ಲಿ ವಿವಿಧ ಕನ್ನಡ ಕುಟುಂಬಗಳನ್ನು ಒಟ್ಟಿಗೆ ಒಂದು ಜಾಗದಲ್ಲಿ  ಸೇರುವಂತೆ ಮಾಡಿದೆ ಅಂದರೆ ಅತಿಶಯೋಕ್ತಿಯಲ್ಲ.

ಡೇಟನ್ ಸಿರಿಗನ್ನಡ ಸ್ಥಾಪಿತವಾಗಿ ಇಲ್ಲಿಯ ಎಲ್ಲಾ ಅಮೇರಿಕ ಕನ್ನಡಿಗರನ್ನು ಒಂದೇ ಸೂರಿನಲ್ಲಿ ತಂದಿದೆ. 



ಈ ಸಂಘವು ವರುಶದಲ್ಲಿ ಹಲವಾರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿ ಕೊಂಡು ವರ್ಷವಿಡಿ ಕನ್ನಡಿಗರನ್ನು ಒಟ್ಟಿಗೆ ಪರಸ್ಪರ ಭೇಟಿ ಮಾಡಲು ಅನುವು ಮಾಡಿಕೊಟ್ಟಿದೆ ಅಂದ್ರೆ ತಪ್ಪಿಲ್ಲ. 

ಇಲ್ಲ ಅಂದ್ರೆ ಗೊತ್ತಲ್ಲ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸ ಕಾರ್ಯಗಳ ಮೊಲಕ ಈ ಬ್ಯುಸಿ ಲೈಫ್ ನಲ್ಲಿ ಮುಳುಗೇಳುತ್ತಿರುತ್ತಾರೆ. ಈ ರೀತಿಯ ಯಾ0ತ್ರಿಕ ಬದುಕಿನಿಂದ ಪ್ರತಿಯೊಬ್ಬ ಕನ್ನಡಿಗರನ್ನು ಹೊರತರುವಲ್ಲಿ ಈ ಕನ್ನಡ ಕೂಟವು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. 

ರಾಜ್ಯೋತ್ಸವ, ಯುಗಾದಿ, ಸ0ಕ್ರಾಂತಿ ಹೀಗೆ ಮುಖ್ಯ ಹಬ್ಬಗಳನ್ನು ಇಲ್ಲಿಯ  ಕನ್ನಡಿಗರೆಲ್ಲ ಒಟ್ಟಿಗೆ ಸೇರಿ ಒಂದೆಡೆ ಕಲೆತು ಬೆರೆತು ದೊಡ್ಡವರಿಂದ ಇಡಿದು ಚಿಕ್ಕ ಮಕ್ಕಳವರೆಗೆ ಕುಣಿದು, ಹಾಡಿ, ನಲಿದು, ತಾವೇ ತಮ್ಮ ಕೈಯಾರೆ ತಯಾರಿಸಿದ ತಿನಿಸುಗಳನ್ನು ಸವಿಯುತ್ತ ಕನ್ನಡದ ನೆಲದ ನೆನಪನ್ನು ಪುನರ್ ಮೆಲಕು  ಹಾಕಿಕೊಂಡು ಆಚರಿಸುತ್ತಾರೆ. 

ಇಲ್ಲಿಯೇ ಹುಟ್ಟಿ  ಬೆಳೆದ  ಮಕ್ಕಳಿಗೆ  ಕನ್ನಡದ ಮಣ್ಣಿನ ವಾಸನೆಯನ್ನು ಗ್ರಹಿಸುವ ಅವಕಾಶ. ಹೀಗೆ ನಮ್ಮ ರಾಜ್ಯದಿಂದ ದೊರವಿದ್ದರು ನಮ್ಮ ಮಾತೃ ಭಾಷೆಯಲ್ಲಿ  ಅದು  ಈ ಇಂಗ್ಲಿಷ್ ಮಯ ವಾತಾವರಣದಲ್ಲಿ ಎಲ್ಲರನ್ನು ಅತ್ಮೀಯವಾಗಿ ಮಾತನಾಡಿಸುವುದು ಸಂತೋಷವಾಗುತ್ತದೆ.  

ದೂರದ ದೇಶದಲ್ಲಿದ್ದಾಗ ಹತ್ತಿರವಿರುವರೇ ನೆಂಟರಲ್ಲವೇ? 

ಹೌದು ಆ  ಮೂಲಕ  ನಮ್ಮ ಈ  ಸಂಘದ ಕಾರ್ಯಕರ್ತರು  ಯಾವುದೇ ಒಂದು ಕಾರ್ಯಕ್ರಮ ಶುರುವಾಗುವ ಒಂದು ತಿಂಗಳು ಮುನ್ನ ಒಂದೊಂದು ಮನೆಯಲ್ಲಿ ಅಥವಾ ಪಾರ್ಕ್ ಗಳಲ್ಲಿ ಪೂರ್ವಬಾವಿ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ನಡೆಸುತ್ತಾರೆ. ಅದಕ್ಕೆ ತಮ್ಮ ತಮ್ಮ ಮಕ್ಕಳನ್ನು ಹೆತ್ತವರು ಕರೆದುಕೊಂಡು  ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. 

ಪ್ರತಿ ಬಾರಿಯೂ ಪ್ರತಿಯೊಬ್ಬರು ಸರದಿ ಪ್ರಕಾರ ತಮ್ಮ ಮನೆಯಲ್ಲಿ ತಯಾರಿಸಿದ ತಿನಿಸುಗಳನ್ನ ಮಕ್ಕಳಿಗಾಗಿ ತರುವುದು. ಅದೂ ಕೂಡ ದೊಡ್ಡವರ  ಬಾಯಿ ರುಚಿಗೆ ಸಿಗುವುದು. ಅದರ ಬಗ್ಗೆ ಪುನ: ಏನೇನೋ ಮಾತು! ಇದನ್ನೆಲ್ಲ ನೋಡುವುದಕ್ಕೆ  ಎಷ್ಟು ಸಂತೋಷವಾಗುತ್ತದೆ.  

ಇದನ್ನೆಲ್ಲ ನೋಡಿದಾಗ ನನಗೆ ಹಳ್ಳಿಯಲ್ಲಿ ನನ್ನ ಅಮ್ಮ ಏನಾದ್ರು   ಹೊಸ ರುಚಿ ಮಾಡಿದಾಗ ಅಕ್ಕ ಪಕ್ಕದ ಮನೆಯವರಿಗೆ ಕೊಡುತ್ತಿದ್ದ ದಿನಗಳು  ನೆನಪಾಗುತ್ತದೆ. 

ಈ ರೀತಿಯಲ್ಲಿ  ನಾವೆಲ್ಲಾ ಒಂದೇ ಎಂಬ ಬಾವನೆಯಲ್ಲಿ ಜರುಗಿದ ಮೊನ್ನೆಯ ಯುಗಾದಿ  ಕಾರ್ಯಕ್ರಮವು ೪೨ ಕ್ಕೂ ಹೆಚ್ಚು ಕನ್ನಡ ಕುಟುಂಬಗಳನ್ನು  ಒಂದು ಕಡೆ ಸೇರಿಸಿ, ಅರ್ಧ ದಿನ ಪೂರ್ತಿ ವಿವಿಧ ವಿಭಿನ್ನವಾಗಿ ಮಕ್ಕಳ , ಹಿರಿಯರ ಹಾಡು, ಕುಣಿತ, ಮಾತು, ಕತೆ, ವಿವಿಧ ಬಗೆ ಬಗೆಯ ಸಿಹಿ ತಿನಿಸುಗಳು ಮತ್ತು  ಭರ್ಜರಿ ಹೋಳಿಗೆ ಊಟ ಸವಿದದ್ದನ್ನು ನೋಡಿದರೆ ನಾವು ನಿಜವಾಗಿಯೂ ಅಮೆರಿಕದಲ್ಲಿ ಇದ್ದವೊ ಅಥವಾ ಕನ್ನಡದ ಬೆ೦ಗಳೂರಲ್ಲಿ ಇದ್ದೇವೊ ಎಂಬ ರೋಮಾಂಚನವಾಯಿತು. 



ಇಲ್ಲಿಯ ಸಂಘದ ಕಾರ್ಯಕರ್ತರ ಸಂಭ್ರಮ ಮನ ತುಂಬಿ ಬಂದಿತು. ಹಾಗೆಯೇ ಕನ್ನಡಿಗರ ಸವಿ ವಿನಯ ಸಿಹಿ ಹೃದಯದ ಲವಲವಿಕೆ  ಪುನ: ಪುನ: ಮೇರು ನಟ ರಾಜಣ್ಣ ನ ವ್ಯಕ್ತಿತ್ವವೇ ಕಣ್ಮು0ದೇ ಬಂದಿತು. 

ಈ ರೀತಿಯ ಕನ್ನಡ ಸಂಘಗಳು ಹೊರ ದೇಶದ ವಿವಿಧ ಬಾಗಗಳಲ್ಲಿ ಇವೆ ಮತ್ತು ಅವುಗಳು ಇದೆ  ರೀತಿಯಲ್ಲಿ ಕನ್ನಡ ಜನರನ್ನು ಒಟ್ಟಿಗೆ ಸೇರಿಸಿ ಕನ್ನಡ ವಾತಾವರಣವನ್ನು ಸೃಷ್ಟಿಸಿ ಕನ್ನಡ ಮನಗಳನ್ನು ತೃಪ್ತಿಗೊಳಿಸುವಲ್ಲಿ ಮತ್ತು ಕನ್ನಡತನವನ್ನು ಉಳಿಸಿ ಬೆಳಸಲು ಅವಿರತ ಕಾಣಿಕೆ ಕೊಡುತ್ತಿರುವುದು ಶ್ಲಾಘನೀಯ!!

ಸೋಮವಾರ, ಫೆಬ್ರವರಿ 12, 2024

ನಿಮ್ಮ ಬಗ್ಗೆ ಹೇಳಿ

ಯಾರಾದಾರು ನಿಮ್ಮ ಬಗ್ಗೆ ಹೇಳಿ ಅಂದರೆ, ಏನು ಹೇಳುವುದು ಎಂದು ಚಿಂತೆ ಮಾಡಬೇಕಾಗುತ್ತೆ.

 ಅವರಿಗೆ ನಾವು ಹೇಳುವುದು ಸರಿ ಅನಿಸುತ್ತಾ ಅಥವಾ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನಗು ಬರುತ್ತಾ! 

ಆದರೆ ಸಂದರ್ಶನದ ಸಮಯದಲ್ಲಿ ಹೇಳುವದು ಅನಿವಾರ್ಯ ಮತ್ತು ಕೇಳುವುದು ಕೇಳಿದರವರಿಗೂ ಅನಿವಾರ್ಯ! 

ಹಾಗೆಯೇ ಅವರ ಬಗ್ಗೆ ನಮಗೆ ಗೊತ್ತಾಗುವುದು. 

ನಾನು ಇಲ್ಲಿ ಹುಟ್ಟಿ, ಇಲ್ಲಿ ಓದಿ,  ಇಲ್ಲಿ ಈಗ  ಈ ಕೆಲಸ ಮಾಡುತ್ತಿದ್ದೇನೆ. 

ಕೇಳಿದವರಿಗೆ ಒಹ್ ಹೀಗೆಲ್ಲಾ  ಜೀವನದಲ್ಲಿ ಈ ಹುಡುಗ ಬಸವಾಳಿದಿದ್ದಾನೆ ಇಲ್ಲಿವರಿಗೆ ಎಂದು ಕೇಳಿಸಿಕೊಂಡವರು ಒಂದಿಷ್ಟು ಕನಿಕರ ಪಡಬಡಹುದು. 

ಹಾಗೆಯೇ ಒಹ್ ನನಗಿಂತ ಹೀಗೆ ಹೀಗೆ ಏನೇನೋ ಮಾಡಿದ್ದಾನೇ ಎಂದು ಅಚ್ಚರಿ ಪಡಬಹುದು.

 ಆದರೂ ಒಮ್ಮೊಮ್ಮೆ ನಮ್ಮ ಬಗ್ಗೆ ನಾವೇ ಏನ್ ಕೊಚ್ಚಿಕೊಳ್ಳುವುದು ಅನಿಸುತ್ತದೆ. 

 ಅದರೂ ಇಂದಿನ ದಿನಮಾನದಲ್ಲಿ ನಮ್ಮ ಮಾರ್ಕೆಟಿಂಗ್ ನಾವೇ ಮಾಡಬೇಕು. ಅದಕ್ಕೆ ಹೆಚ್ಚು ಬೆಲೆ.

 ಎಲೆ ಮರೆಯ ಕಾಯಿಯಂತೆ ಇದ್ದರೆ ಯಾರೊಬ್ಬರೂ ಮೂಸಿ ಸಹ ನೋಡುವುದಿಲ್ಲ. 

ಎಲ್ಲಾ ಪ್ರಚಾರ ದಿನದಲ್ಲಿ ಬದುಕುವ ಬವಣೆ. 

ಎಲ್ಲಿಯಾದರೂ ಕೆಲಸ ಬೇಕೆಂದರೆ ನಿನ್ನ ರೆಸ್ಯೋಮ್ ಚೆನ್ನಾಗಿರಬೇಕು. ಇಲ್ಲ ಅಂದರೆ ನಿಮಗೆ ಒಂದು ಕಾಲು ಸಹ ಬರುವುದಿಲ್ಲ. ಕಾಲ್ ಇಲ್ಲ ಅಂದ್ರೆ ಇಂಟರ್ವ್ಯೂ ಇಲ್ಲ. ಅದು ಇಲ್ಲ ಅಂದರೆ ಕೆಲಸನು ಇಲ್ಲ.

ಇಂದು A I  ಜಮಾನಾ! ಆರ್ಟಿಪಿಸಿಯಲ್ ಇಂಟಲಿಜೆನ್ಸ್ ಮೊಲಕ ಮನುಷ್ಯರು ರಚಿಸಿದ ಕೃತಿಗಳನ್ನು ಪರೀಕ್ಷಿಸುತ್ತಾರೆ. ಅದಕ್ಕೇನು ಗೊತ್ತು  ನಮ್ಮ ಕಷ್ಟ ಸುಖ ? ಆದರೆ ಮನುಷ್ಯರನ್ನ ನಂಬುವುದಕ್ಕಿಂತ ಮಿಷಿನ್ ನಂಬುವ ದಿನಗಳಲ್ಲಿ ನಾವು ಇದ್ದೇವೆ.  ಮನುಷ್ಯನೇ ಕಂಡು ಹಿಡಿದ ಯಂತ್ರ ಮನುಷ್ಯನ್ನನ್ನೇ ಪರೀಕ್ಷಿಸುತ್ತದೆ. ಇಲ್ಲಿಗೆ ಬಂದು ನಿಂತಿದ್ದೇವೆ. 

ಇಲ್ಲಿಗೆ ಬಂದಿದೆ ನಮ್ಮ ಜೀವನ. ಬರಿ ಓದಿದರೆ ಏನು ಸಾಲದು. 

ಓದು ಮುಗಿದ ಮೇಲೆಯೇ ಜೀವನ ಅಂದರೆ ಏನು ಎಂದು ತಿಳಿವಿಯುವುದು. 

ಇನ್ನು ಹೆಚ್ಚು ಬದುಕು ಅಂದರೆ ಏನು ಎಂದು ತಿಳಿಯಲು ಬೆಂಗಳೂರಿಗೆ ಬಂದು ನಾಲ್ಕು ಕಡೆ ತಿರುಗಾಡಿ ಕೆಲಸ ಹುಡುಕಿದಾಗ ನಮ್ಮ ತಿಳುವಳಿಕೆ, ನಾವು ಏನು ಓದಿದೀವಿ ಎನ್ನುವುದು ಗೊತ್ತಾಗುತ್ತೆ. 

ಬರಿ ಓದಿನ ಅಂಕಗಳು ಏನು ಉಪಯೋಗವಿಲ್ಲ ಎನ್ನುವುದು ಒಂದೇ ದಿನದಲ್ಲಿ ತಿಳಿಯುತ್ತದೆ. 

ಮತ್ತೆ ನಮ್ಮನ್ನು ನಾವು ಹೇಗೆ ಪ್ರೇಸಂಟ ಮಾಡಿಕೊಳ್ಳಬೇಕು ಎನ್ನುವುದನ್ನ ಕಲಿಯಲು ಪುನಃ ಯಾವುದಾರೂ ಕ್ರ್ಯಾಶ್ ಕೋರ್ಸಗೆ ಸೇರಬೇಕು. ಅಲ್ಲಿ ಅದು ಇದು ಬೇರೆ ಭಾಷೆಯಲ್ಲಿ ಪುನಃ ನುರಿಯಬೇಕು.

ನಂಗೆ ರವಿಬೆಳೆಗೆರೆ ಕೊಡುತ್ತಿದ್ದ ವರುಷದ ಅಫಿಡವಿಟ್ ಅಥವಾ ಅವರು ಅವರ ಪುಸ್ತಕಗಳಲ್ಲಿ ತಮ್ಮ ಬಗ್ಗೆ ಹೇಳಿಕೊಳ್ಳುತ್ತಿದ್ದ  ಒಂದು ಪುಟದ ಸಾಲುಗಳು ತುಂಬಾ ಚೆನ್ನಾಗೇ ಕಾಣಿಸುತ್ತಿತ್ತು. ಹುಟ್ಟಿನಿಂದ ಪ್ರಾರಂಬಿಸಿ ಹೆಂಡತಿ,  ಮಕ್ಕಳು, ಮನೆ, ದುಡಿಮೆ, ಕಾರು, ಬಟ್ಟೆ ,ಪುಸ್ತಕಗಳಿಂದ ಹಿಡಿದು ಇತ್ತೀಚೆಗೆ ಕೊಂಡ ಕೆಜಿ ಬಂಗಾರ ಬೆಳ್ಳಿಯವರಿಗೆ  ಏನೆಲ್ಲಾ ಹೆಚ್ಚಾಗಿದೆ ಮತ್ತು ಕಡಿಮೆಯಾಗಿದೆ ಎಂಬುದನ್ನು  ಹೇಳಿಕೊಳ್ಳುತ್ತಿದ್ದರು. 

ಬದುಕಿದರೇ ಹೀಗ್ ದಿಲ್ ದಾರ್ ಮನುಷ್ಯನಾಗಿ ಬಾಳಬೇಕು ಎಂಬಂತೆ ಸಾಮಾನ್ಯ ಮನುಷ್ಯನಿಗೂ  ಉತ್ತೇಜನ ಕೊಡುವ  ರೀತಿಯ ಬರಹವಾಗಿತ್ತು ಅದು ಅವರ ಬಗ್ಗೆ ಅವರು ಹೇಳಿದ್ದ ಅಫಿಡವಿಟ್! 

 ನನಗೆ ಒಮ್ಮೊಮ್ಮೆ ಅನಿಸುತ್ತದೆ. ಅದು ಯಾಕೆ ಕಾಲೇಜು, ಶಾಲೆಗಳಲ್ಲಿ ಪಾಠಗಳ ಜೊತೆಯಲ್ಲಿ ಈ ಪಾಠಗಳನ್ನು ಯಾರೊಬ್ಬ ಗುರುವು  ನಮಗೆ ಹೇಳಿಕೊಡವುದಿಲ್ಲ. 

ಹಾಗೆಯೇ ಹಳ್ಳಿ ಮೊಲೆಯಲ್ಲಿ ಓದುವ ಬದಲು ಬೆಂಗಳೂರಲ್ಲಿ ಓದಿದವರ ಲಕ್ಕು ಚೆನ್ನ ಅನಿಸುತ್ತದೆ. 

ಬೆಂಗಳೂರಲ್ಲಿ ಇದ್ದಾರೆ ಅರ್ಧ ಲೈಫ್ ಪಾಠಗಳನ್ನು ಬೆಂಗಳೂರು ಗಾಳಿ ನಮಗೆ ತಿಳಿಸಿಕೊಟ್ಟುಬಿಡುತ್ತದೆ.

ಹೇಗೆ ಬದುಕಬೇಕು. ಯಾರನ್ನು ಹೇಗೆ ನಂಬಬೇಕು, ಹೀಗೆ ಜೀವನದ ಸತ್ಯಗಳನ್ನು ಯಾವ ವಿಶ್ವವಿದ್ಯಾನಿಲಯಗಳು ಹೇಳಿಕೊಡದದ್ದನ್ನು ಬೆಂಗಳೂರು ಒಂದು ದಿನದಲ್ಲಿ ಸುಲಭವಾಗಿ ಕಲಿಸಿಬಿಡುತ್ತದೆ. 

ಹಣಕ್ಕೆ ಇರುವ ಬೆಲೇ ಏನು ಎನ್ನುವುದನ್ನು ಕಾಲಿ ಜೇಬಿನಿಂದ್ ಒಂದು ಗಂಟೆ  ಈ ಮಹಾನಗರದ ದಾರಿಯಲ್ಲಿ ಸಾಗಿದರೆ ತಿಳಿಯುತ್ತದೆ. 

ಹೀಗೆ ಬದುಕು ನಾವು ನಮ್ಮ ಪಾಡಿಗೆ ಇದ್ದಾರೆ ನಾವು ಎಲ್ಲಿ ಇರುತ್ತೇವೊ ಅಲ್ಲಿಯೇ ಇರಬೇಕಾಗುತ್ತದೆ.

ಯಾರು ತನ್ನನ್ನ ತಾನು ಪ್ರೀತಿಸಿ ನಂಬಿ ತನ್ನ(ನ್ನು ತಾನು) ಚೆನ್ನಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವವನು ಅವನು ಈ ಪ್ರಪಂಚದಲ್ಲಿ ಗೆಲ್ಲುವನು.  

ಇನ್ನು ಯಾಕೆ ತಡ ನಿಮ್ಮ ಬಗ್ಗೆ ನೀವೇ ಹೇಳಿ!  

ಗುರುವಾರ, ನವೆಂಬರ್ 30, 2023

ಜೈ ಕನ್ನಡ! ಜೈ ಕರ್ನಾಟಕ!

ಕನ್ನಡ ರಾಜ್ಯೋತ್ಸವ! ಇದು ಕೇವಲ ನಗರಗಳಲ್ಲಿ ಅದೂ ಬೆಂಗಳೂರಲ್ಲಿ ಇರುವವರಿಗೆ ಮಾತ್ರ?

 ಕನ್ನಡ ಎನ್ನುವ  ಒಂದು ಭಾಷೆ ಇದೆ ಎಂಬುದನ್ನು ನೆನಪಿಸುವ ಹಬ್ಬವಾಗಿ ಮಾತ್ರ ಕಾಣುತ್ತಿದೆ ಎಂದೆನಿಸುತ್ತಿದೆ.

ಆದರೆ ಕನ್ನಡ ಭಾಷೆಯನ್ನು ನಿಚ್ಚಳವಾಗಿ ಮತ್ತು ತಮಗೆ ಗೊತ್ತಿಲ್ಲದ ರೀತಿಯಲ್ಲಿ ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಬಳಸುತ್ತಿರುವ ಮುಗ್ಧ ಕನ್ನಡಿಗರು ಎಂದರೇ ಅದು ಹಳ್ಳಿಯಲ್ಲಿರುವವರು, ಚಿಕ್ಕ ಪಟ್ಟಣಗಳಲ್ಲಿರುವವರು ಮಾತ್ರ . 

ಆದರೇ ಈ ರೀತಿಯ ಜರೋರತೆ ಬೆಂಗಳೂರಿನಲ್ಲಿರುವ ಅಥವಾ ನಾವು  ಮುಂದುವರೆದಿರುವ ಮುಂದುವರಿಯುತ್ತಿವೆ ಎಂದು ಗುರುತಿಸಿಕೊಂಡ ಮಹಾ ನಗರದ ಮಂದಿಗೆ ಇಲ್ಲ ಬಿಡಿ. ಇಲ್ಲಿ ಕನ್ನಡ ಭಾಷೆಗೆ ಏನೂ ಬೆಲೆ ಇಲ್ಲ ಎಂಬ ಕಠಿಣ ತಿಳುವಳಿಕೆಯಲ್ಲಿ ಮುಳುಗೇಳುತ್ತಿದ್ದಾರೆ.

ಯಾಕೆಂದರೇ ಇಲ್ಲಿರುವವರು ನವ ತರುಣ ತರುಣಿಯರು. 

ಹಳ್ಳಿಗಳಲ್ಲಿ , ಚಿಕ್ಕ ಪುಟ್ಟ ಪಟ್ಟಣಗಳಲ್ಲಿರುವವರು ಈ ಯುವ ಸಮುದಾಯವನ್ನು ಹೆತ್ತ ಹೆತ್ತವರು. ಹಾಗೆಯೇ ಹೆಚ್ಚು ಹೆಚ್ಚು ಓದಿರದ ಮಂದಿ ಮಾತ್ರ. ಇವರುಗಳು ಹೆಮ್ಮೆಯಿಂದ ಮತ್ತು   ಪ್ರೀತಿಯಿಂದ ಕನ್ನಡವೇ ಉಸಿರಾಗಿಸಿಕೊಂಡು ಬಾಳುತ್ತಿದ್ದಾರೆ. ಅವರುಗಳಿಗೆ ಕನ್ನಡ ಉಳಿಸಿ, ಬಳಸಿ ಮತ್ತು   ಬೆಳಸಿ ಎಂಬ ಘೋಷಣೆಯ ಬಗ್ಗೆ ಯಾವ ಅರಿವು ಬೇಕಾಗಿಲ್ಲ.

ಆದರೇ ನಮ್ಮ ಕರ್ನಾಟಕದ ಸ್ಥಿತಿ ಮಾತ್ರ ಅಂದಿನಿಂದ ಇಂದಿನವರೆಗೂ ಸುಧಾರಿಸಿರುವುದು ನಾ ಕಾಣೆ! 

ನಮ್ಮ ಮುಖ್ಯಮಂತ್ರಿಗಳು ಮೊನ್ನೆಯ ಕನ್ನಡ ರಾಜ್ಯೋತ್ಸವದ ಭಾಷಣದಲ್ಲಿ ಇದೇ ವಿಚಾರವನ್ನು ತಲೆ ಬಿಸಿ ಮಾಡಿಕೊಂಡು ನೆರೆದ ಸಭಿಕರಲ್ಲಿ ಹಂಚಿಕೊಳ್ಳುತ್ತಿದ್ದರು. ಬೆಂಗಳೂರು ಕನ್ನಡಿಗರು ಬೇರೆ ರಾಜ್ಯದಿಂದ ಬಂದವರ   ಭಾಷೆಯಲ್ಲಿಯೇ ಮಾತನಾಡಿದರೇ ಅವರು ತಾನೇ  ಯಾಕೆ ಕನ್ನಡ ಕಲಿಯುವ ಅವಶ್ಯಕತೆಯಾದರೂ  ಬಂದಿತು? ಅದು ಬಿಟ್ಟು  ನಾವು ಹೆಮ್ಮೆಯಿಂದ ಕನ್ನಡದಲ್ಲಿಯೇ ಅವರೊಂದಿಗೆ ಮಾತನಾಡಿದರೆ ಅವರು ಸಹ ಕನ್ನಡ ಕಲಿಯುವಲ್ಲಿ ನಮ್ಮೊಂದಿಗೆ ಕೈ ಜೋಡಿಸುವವರು ಎಂದೇಳುತ್ತಿದ್ದರು.


ಅವರಿಗೂ ಗೊತ್ತಾಗಿರಬೇಕು. ಈಗಂತೂ ವಿದಾಸೌದದಲ್ಲೂ ಸಹ ಕನ್ನಡ ಕೊಂಚ ಕೊಂಚ ಕಾಣೆಯಾಗುತ್ತಿದೆ ಎಂದು . ಹಾಗೆಯೇ ಈ ಸಂದರ್ಭದಲ್ಲಿ ಅವರು ಒಂದು ಆಜ್ಞೆಯನ್ನು   ಹೊರಡಿಸಿದರೂ ’ಸರ್ಕಾರಿ ಪತ್ರ ವ್ಯವಹಾರವೆಲ್ಲಾ ಕನ್ನಡದಲ್ಲಿಯೇ ಇರಲಿ’ ಎಂದು.



ಹೌದು ಹೀಗೆ ಈ ರೀತಿಯ  ಕನ್ನಡದ ಅಳಿವು ಉಳಿವಿನ ಮಾತುಗಳು ಕೇವಲ ಪ್ರತಿ ನವಂಬರ್ ಮಾಸಕ್ಕೆ ಮಾತ್ರ ಸೀಮಿತವಾಗಿ ಡಿಸೆಂಬರ್ ಹೊತ್ತಿಗೆ ತಣ್ಣಗೆ ಮಲಗಿ ಮೊಲೆಗೆ ಸೇರುತ್ತಿರುವುದು ನಮ್ಮ ಕರ್ನಾಟಕದ  ಜನರ ದೌರ್ಭಾಗ್ಯ ! 


ಯಾಕೇ ಈ ರೀತಿಯ ಒಂದೇ ಒಂದು ಕೂಗು ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಇಲ್ಲವೆಂದು ತುಂಬ ಅಚ್ಚರಿಯಾಗುತ್ತದೆ.  ಯಾಕೆಂದರೇ ಕನ್ನಡವು ಮುಂದುವರಿದ ನಮ್ಮ ನಗರಗಳಲ್ಲಿ ಅದಿಕೃತ ಭಾಷೆಯಾಗಿ ಚಾಲ್ತಿಯಲ್ಲಿ ಇಲ್ಲ. ನಮಗ್ಯಾರಿಗೂ ಕನ್ನಡ ಕಲಿಯಲೇ ಬೇಕೆಂಬ ಒತ್ತಡವಿಲ್ಲ.


ಕನ್ನಡ ನೆಲದಲ್ಲಿ ಹುಟ್ಟಿರುವ ನಮ್ಮ ಕನ್ನಡಿಗರಿಗೆ  ಕನ್ನಡ ಮಾತನ್ನಾಡಿದರೇ ದುಡಿಮೆಯ ಹೊಟ್ಟೆ ತುಂಬಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಅತಿ ಚಿಕ್ಕ ಕೆಲಸಕ್ಕೂ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷಾ ಪಾಂಡ್ಯತೆ ಬೇಕಾಗಿದೆ ಎಂದು ಹೇಳುವವರೇ ಹೆಚ್ಚಾಗಿದ್ದರೆ. 


ಇಂದು ಭಾಷೇ  ಮಮತೆಗಿಂತ ಹೊಟ್ಟೆಯ ಪಾಡೇ ದೊಡ್ಡದು ಎಂಬ ಭಯ!


ಇದರ ಬಗ್ಗೆ ನಮ್ಮ ಸರ್ಕಾರಗಲ್ಲಿರುವ ಮಹಾನ್ ಬೃಹಸ್ಪತಿಗಳು ಕಣ್ಣು ತೆರೆದು  ಸಹ ನೋಡುವುದಿಲ್ಲ. ಬರೀ ಕನ್ನಡ ದಿನದಂದೂ ಮಾತ್ರ ಕನ್ನಡ ಉಳಿಸೋಣ ಬಳಸೋಣವೆಂದು ವೀರಾವೇಷದ ಮಾತುಗಳನ್ನು ಆಡಿ ವರ್ಷವಿಡಿ ಮೌನವಹಿಸಿಬಿಡುತ್ತಾರೆ. 


ಹೀಗೆ ಸ್ನೇಹಿತರ ವರ್ಗದಲ್ಲಿ ಯಾರೋ ಹೇಳುತ್ತಿದ್ದರು.. ಅದು ಯಾವುದೋ ಒಂದು ಬೆಂಗಳೂರಿನ ವಸತಿ ಸಮುಚ್ಛಾಯದಲ್ಲಿ ೩೨೮ ಮನೆಗಳಿವೆಯಂತೆ.  ಅಲ್ಲಿ ಇರುವ ಕನ್ನಡದ ಕುಟುಂಬಗಳು ಕೇವಲ ೩೮ ಅಂತೆ. ಇಲ್ಲಿಗೆ ಬಂದು ನಿಂತಿದೆ ನಮ್ಮ  ಕನ್ನಡ ರಾಜಧಾನಿಯ ಸ್ಥಿತಿ. ಯೋಚಿಸಿ ಭಾಷೆ ಎಷ್ಟು ಮುಖ್ಯ ಎಂಬುದು. ಕನ್ನಡಿಗರು ಸಹ ಕನ್ನಡದ ಬಗ್ಗೆ ಮೂಗು ಮುರಿದರೆ ಬೇರೆ ಯಾರು ತಾನೇ ನಮ್ಮ ಭಾಷೆಯನ್ನು ಮಾತನಾಡುವರು?  ಬೆಂಗಳೂರಲ್ಲಿ ಕನ್ನಡ ಕಲಿಯಲೇ ಬೇಕು ಎಂಬ ಜರೂರತೆ ಇಲ್ಲ!


ಯಾಕೇ ಹೀಗೆ ಎಂದು ಯಾರು ಸಹ ಪ್ರಶ್ನಿನಿಸಲಾರರು.  ಯಾಕೆಂದರೇ ಯಾವ ಭಾಷೆ  ಹೆಚ್ಚು ಕೆಲಸಗಳನ್ನು , ಉದ್ಯೋಗಗಳನ್ನು, ಸಂಬಳವನ್ನು ಕೊಡುವುದು ’ಹೊಟ್ಟೆ’ಯನ್ನು ತುಂಬಿಸುವುದೋ ಆ ಭಾಷೆಯೇ ಇರಲಿ ಎಂಬ ಜಾಣ ನಿರ್ಧಾರಕ್ಕೆ ಬಂದಂತಿದೆ. 


ಜೈ ಕನ್ನಡ! ಜೈ ಕರ್ನಾಟಕ!

ಶುಕ್ರವಾರ, ಫೆಬ್ರವರಿ 17, 2023

ಲಹರಿ

 ನಾವು ಓದಿದೆವೆಂದರೇ ಕೆಲಸ ಮಾಡಲೇಬೇಕಾ? ಅಯ್ಯೋ ಅಷ್ಟೊಂದು ಓದಿ ಕೊನೆಗೂ ಮದುವೆ,ಮಕ್ಕಳು,ಅತ್ತೆ, ಮೂಸರೇ ತೊಳೆಯುತ್ತಾ ಕೂತೂ ಬಿಟ್ಟೆ. 

ಅದು ಏನೂ ನಿನ್ನ ಅಪ್ಪ ನನ್ನ ಮಗಳಂತೇ ಯಾರೂ ಓದಿಲ್ಲವೆಂದು ಕೊಚ್ಚಿಕೊಂಡಿದ್ದು! ಹೀಗೆ ನೂರಾರು ಸುತ್ತಲಿನ ಬಾಯಿ ಮಾತು ಕೇಳಿ ಕೇಳಿ ರೋಸಿ ಹೋಗಿತ್ತು. 

ನಾನೂ ಅಷ್ಟು ಸ್ವಾಭಿಮಾನಿ. ನಾನು ಎಂದೂ ಹೆಣ್ಣು ಎಂದುಕೊಂಡು ಬೆಳೆದ ಮಗಳೇ ಅಲ್ಲ! ಅಪ್ಪ ಅನ್ನುವಂತೆ ನಾನೇ ನಮ್ಮ ಮನೆಗೆ ಗಂಡು ಮಗುವೆನ್ನುವಂತೆ ಬೆಳೆದವಳು. 

ಓದನ್ನು ಮಾತ್ರ ಅಚ್ಚುಕಟ್ಟಾಗಿ ಓದಿ ಬಿಡಬೇಕು ಎಂಬಂತೆ ಎಷ್ಟೇ ದೊಡ್ಡ ಓದು ಆದರೂ ಸಲೀಸಾಗಿ ಪಾಸು ಮಾಡುತ್ತಿದ್ದೆ. ಶಾಲೆಯಲ್ಲೂ ಅಷ್ಟೇ ಪ್ರತಿಯೊಬ್ಬ ಶಿಕ್ಷಕರುಗಳಿಗೂ ನಾನೇ ಬೇಕಾಗಿತ್ತು. ಓದು ಅಲ್ಲದೇ ಶಾಲೆಯಲ್ಲಿ ಕಾಲೇಜಿನಲ್ಲಿ ಯಾವುದೇ ಪಠ್ಯೇತರ ಚಟುವಟಿಕೆಗಳಿಗೆ ಅವಳೇ ಸರಿ ಎನ್ನುವ ಮಟ್ಟಿಗೆ ನಾನೇ ಪ್ರೀತಿ ಪಾತ್ರಳಾಗಿದ್ದೆ. 

ಹಾಗೇಯೇ ಬೇರೆ ಹುಡುಗ ಹುಡುಗಿಯರಿಗೆ ನನ್ನ ಏಳ್ಗೆಯನ್ನು ನೋಡಿ ಹೊಟ್ಟೆ ಉರಿ ಬಂದಿತ್ತೋ ಅಥವಾ ಅವರ ಹೆತ್ತವರು ನನ್ನನೇ ಉದಾಹರಣೆಯಾಗಿ ಕೊಟ್ಟು ಕೊಟ್ಟು ಅವರ ಹೊಟ್ಟೆ ಉರಿಸಿ ಮುನಿಸಿಕೊಳ್ಳುವಂತೆ ಮಾಡಿರಲೇಬೇಕು. 

ಇದೊಂದು ರೋಗವೇ ಸರಿ! ನಮ್ಮ ಹೆತ್ತವರೇ ಅಲ್ಲಾ ಪ್ರತಿಯೊಂದು ಮನೆಯಲ್ಲೂ ಬೇರೆಯವರೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಿ ನೋಡುವುದು. ನೋಡು ಅವರ ಮಗ ಹೇಗೆ ದುಡಿಯುತ್ತಿದ್ದಾನೇ. ನೋಡು ಅವರ ಸೊಸೆ ಎಷ್ಟೊಂದು ಕೆಲಸ ಮಾಡುತ್ತಿದ್ದಾಳೆ. ಹೀಗೆ ಹಾಗೇ ಬರೀ ಬೇರೆಯವರನ್ನು ನೋಡಿ ನಮ್ಮ ನಮ್ಮ ಶಕ್ತಿಯನ್ನು ಪರೀಕ್ಷೆ ಮಾಡಿಕೊಳ್ಳುವುದೇ ಆಯಿತು ಅನಿಸುತ್ತದೆ. 

ನನಗೂ ಈ ರೀತಿಯ ಹೆತ್ತವರ ಕಾಟ ಮುಗಿಯಿತು ಅನ್ನುವ ಹೊತ್ತಿಗೆ ಮದುವೆ ಮಾಡಿ ಕೈ ತೊಳೆದು ಕೊಂಡು ಬಿಟ್ಟರು ಅನಿಸುತ್ತದೆ. ಅದು ಯಾರು ಅಲಿಖಿತ ಶಾಸನ ಮಾಡಿದ್ದರೋ ಗೊತ್ತಿಲ್ಲ. ಓದುವುದು ಮುಗಿಯಿತು ಅಂದರೇ ಹುಡುಗಿಯರಿಗೆ ಬೇಗ ಮೂಗುದಾರ ಹಾಕಿ ಅನ್ನುತ್ತಾರೆ. 

ನಮ್ಮ ಮಗಳು ಇದೀಗ ತಾನೇ ಇಷ್ಟೊಂದು ಓದಿದ್ದಾಳೆ, ಸ್ವಲ್ಪ ಸಮಯ ಆರಾಮಾಗಿ ಅಲ್ಲಿ ಇಲ್ಲಿ ಕೆಲಸ ಹುಡುಕಿ ದುಡಿಯಲಿ ಎನ್ನುವ ಮಾತೇ ಇಲ್ಲ. ಏಯ್ ನೀನು ಏನು ದುಡಿದು ನಮ್ಮನ್ನು ಉದ್ಧಾರ ಮಾಡಬೇಕಾಗಿಲ್ಲ. ನಾವು ಗಟ್ಟಿಯಾಗಿ ಇರುವಾಗಲೇ ನೀನೊಂದು ಮನೆಗೆ ಮಹಾಲಕ್ಷ್ಮಿಯಾಗಿ ಹೋಗಿ ಬಿಟ್ಟರೇ ಅಷ್ಟು ಸಾಕು ಎನ್ನುವ ಚಿಂತೆ ಹೆಣ್ಣು ಹೆತ್ತ ಎಲ್ಲಾ ತಂದೆ ತಾಯಿಯಂದಿರದು. 

ನಾವೆಷ್ಟೇ ಓದಿ, ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ನಮ್ಮನ್ನು ಇದೇ ಸಮಾಜ ಕೇವಲ ಒಂದು ಹೆಣ್ಣು ಎನ್ನುವ ರೀತಿಯಲ್ಲಿಯೇ ನಮ್ಮ ನಮ್ಮ ಹೆತ್ತವರುಗಳು ಸಹ ಕಾಣುತ್ತಾರೆ. ಅದು ಏನೂ ಆ ಭಯ  ನನಗೆ ಇನ್ನೂ ಗೊತ್ತಾಗಿಲ್ಲ. 

ಇತಿಹಾಸ ಪುರಾಣಗಳಿಂದಲೂ ಮಹಿಳೆಯರ ಪರಾಕ್ರಮ ಸಾಧನೆಗಳು  ಕಣ್ಣ ಮುಂದೆ ಇದ್ದರೂ ಅವುಗಳನ್ನೆಲ್ಲಾ ಕೇವಲ ಕಥೆಯಾಗಿ ಮಾತ್ರ ನೋಡುತ್ತಾರೆ. ಪುನಃ ಪುನಃ ತನ್ನ ಕರಳು ಬಳ್ಳಿಯನ್ನು ಇನ್ನೂ ಹೆಚ್ಚು ನಾಜೂಕಾಗಿ ಕಾಪಾಡುತ್ತೇವೆ ಎನ್ನುವ ರೀತಿಯಲ್ಲಿ ಮದುವೆ ಎಂಬ ಖೆಡ್ಡಾಕ್ಕೆ ದೂಡುತ್ತಾರೆ. 


ಹೆಣ್ಣು ಎಂದರೇ ಅವಳು ಬೇರೆಯವರ ಮನೆಯ ಸೊತ್ತು ಎಂದೇ ನೋಡುತ್ತಾರೆ. ಅವಳ ಜವಬ್ದಾರಿಯನ್ನು ಇನ್ನೂ ಏನಿದ್ದರೂ ಅವಳ ಗಂಡ ಅತ್ತೆ ಮಾವ ನೋಡಿಕೊಳ್ಳಲಿ ಎಂಬ ಭಾವನೇ ಏಕೋ ಗೊತ್ತಿಲ್ಲ! 

ಗೊತ್ತಾ ನಮ್ಮ ಜವಾಬ್ದಾರಿ ಬೇರೆಯವರು ಹೊರುವುದಕ್ಕಿಂತ ನಾವೇ ಬೇರೆಯವರ ಜವಾಬ್ದಾರಿಯನ್ನು ಹೊತ್ತುಕೊಂಡು ಇಡೀ ಮನೆಯನ್ನೇ ತೂಗಿಸಿಕೊಂಡು ಸಾಗಬೇಕಾಗಿರುತ್ತದೆ. ಆದರೂ ನಮ್ಮ ಅಪ್ಪ ಅಮ್ಮನಿಗೆ ಅಮ್ಮ ಹೇಗೆ ತಮ್ಮ ಮನೆಯನ್ನು ನಿಭಾಯಿಸುವವಳು ಎಂಬುದನ್ನು ತಮ್ಮ ತಮ್ಮ ಹೆಣ್ಣು ಮಕ್ಕಳ  ಮದುವೆ ಮಾಡುವ ವೇಳೆ ಪೂರ್ತಿ ಮರೆತು ಬಿಟ್ಟಿರುತ್ತಾರೆ. ಇದೇಯೇ  ಸಮಜಾಯಿಷಿ? ಏನು ಹೇಳುವುದು ಹೆತ್ತ ಕರುಳುಗಳಿಗೆ!!

ಭಾನುವಾರ, ನವೆಂಬರ್ 6, 2022

ಕನ್ನಡ

ಕನ್ನಡ ಏನು ಚೆನ್ನ ನುಡಿಯಲು ಈ ಸವಿ ನುಡಿ 

ನಮ್ಮ ಭಾಷೆ ನಮ್ಮ ಕನ್ನಡ ನುಡಿಯೇ ನಮಗೆ ಹೆಮ್ಮೆ

ಎಲ್ಲಿಯೇ ಇರಲಿ ಹೇಗೆ ಇರಲಿ ನಮ್ಮ ಭಾಷೆ ನಮ್ಮದು  

ಕನ್ನಡವೊಂದಿರಲು ಭಾವನೆಗೆ ಬೇರೆ ಏನು ಬೇಕು 

ತಾಯಿ  ಭಕುತಿಗೆ  ಕನ್ನಡವೊಂದೇ ಸಾಕು 

ನಮ್ಮನ್ನೆಲ್ಲ  ಬೆಸೆದ ಬಂಧವೇ  ಈ ಸಿರಿ ಕನ್ನಡ ನುಡಿ 

ಯಾರು ಬೇಕಾದರೂ ಕಲಿಯಬಹುದು ಈ ಕನ್ನಡ

ಸುಲಲಿತ  ಸುಲಭ ಸುಕೋಮಲ  ಸುಲಿದ ಬಾಳೆ ಹಣ್ಣೇ ಸರಿ 

ಎಷ್ಟು ಚೆನ್ನ ಕನ್ನಡ ನುಡಿಯ ದ್ವನಿಯ  ಗಾಯನ 

ಕನ್ನಡ ಕೇಳಿದೊಡನೆ ನಲಿವುದು ತನು ಮನ

ಅಮ್ಮನಂತಹ ಮುದ್ದು ಪಡೆದ  ನಾವೇ  ಧನ್ಯರು

ತಾನು  ಬೆಳೆದು ನಮ್ಮ ಬೆಳೆಸುವ  ನಮ್ಮ ಭಾಷೆ ಕನ್ನಡ

ಕೋಟಿ ಮನಗಳ ಬೆಸೆಯುವ ನುಡಿಯನ್ನು  ಯಾರು ಯಾಕೆ  ಮರೆಯವರು

ನಿತ್ಯ  ನುಡಿಯ  ಪಸಲು ಬೆಳೆದ ಕನ್ನಡ ಕಟ್ಟಾಳುಗಳೇ ನಮ್ಮ ಹೆಮ್ಮೆ 

ಸ್ನೇಹ ಪ್ರೀತಿ ಬಾಳ್ವೆ ಕಲಿಸಿದ ಮಡಿಲು ಶ್ರೀಗಂಧದ ಬೀಡು

ಎಷ್ಟು ಮಹನೀಯರ  ಹೆತ್ತು  ಮೆರೆಸಿದವಳು ನಮ್ಮಮ್ಮ ಕನ್ನಡತಿ 

ಭಾರತೀಯ ಶ್ರೇಷ್ಠ ಕುವರಿ ಈ  ಕನ್ನಡ ಭುವನೇಶ್ವರಿ

ಯಾರು ಏನೇ ಹೇಳಿದರು ತಾಯಿ ನುಡಿಯೇ ಶ್ರೇಷ್ಠ ಎಂದಿಗೂ 

ಜೈ ಜೈ ಅನ್ನೋಣ ಈ  ಸುದಿನದ  ನಾಡ ಹಬ್ಬಕ್ಕೆ

ಜೈ ಕರ್ನಾಟಕ!